@ ಚಾರ್ಲ್ಸ್ ಡಿಸೋಜ
ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು, ಸುಳ್ಯ
“ಹೊಲಿಗೆ ಚೆನ್ನಾಗಿದ್ದರೆ ಉಡುಪು ಸುಂದರ ವ್ಯಕ್ತಿತ್ವ ಚೆನ್ನಾಗಿದ್ದರೆ ಜೀವನ ಸುಂದರ.”
“ನಾವು ಬಹಿರಂಗದಲ್ಲಿ ಗೆದ್ದವರಂತೆ ಇದ್ದೇವೆ, ಅಂತರಂಗದಲ್ಲಿ ಸೋತಿದ್ದೇವೆ. ಗಾಳಿಯನ್ನು ಶುದ್ಧಗೊಳಿಸಲು ಹೆಣಗುತ್ತೇವೆ. ಆದರೆ ಆತ್ಮ ಮಲಿನಗೊಂಡದ್ದು ಗೋಚರವಾಗುವುದಿಲ್ಲ. ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ. ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ.”
ವ್ಯಕ್ತಿತ್ವ: ವ್ಯಕ್ತಿತ್ವ ಎಂದರೇನು? ಎಂಬ ಪ್ರಶ್ನೆಗೆ ನಿಖರವಾದ ಒಂದೇ ವ್ಯಾಖ್ಯಾನ ಸಮಂಜಸವಲ್ಲ. ಕೇಂಬ್ರಿಡ್ಜ್ ಅಂತಾರಾಷ್ಟ್ರೀಯ ಇಂಗ್ಲಿಷ್ ನಿಘಂಟಿನ ಪ್ರಕಾರ, “ನೀವು ಎಂತಹ ವ್ಯಕ್ತಿಯಾಗಿರುವಿರೋ ಅದು ನಿಮ್ಮ ವ್ಯಕ್ತಿತ್ವ.” ಲಾಂಗ್ಮನ್ ಇಂಗ್ಲಿಷ್ ನಿಘಂಟು ಪ್ರಕಾರ, “ವ್ಯಕ್ತಿಯ ಪೂರ್ಣ ಸ್ವಭಾವ ಅಥವಾ ಚಾರಿತ್ರ್ಯವೇ ಅವನ ವ್ಯಕ್ತಿತ್ವ.” ಗಿಲ್ಫರ್ಡರ ಪ್ರಕಾರ, “ವ್ಯಕ್ತಿಯ ವ್ಯಕ್ತಿತ್ವ ಅಂದರೆ ಅವನಲ್ಲಿರುವ ಲಕ್ಷಣಗಳ ಸಂಘಟಿತ ಸ್ವರೂಪ.” ಮಾರ್ಟಿನ್ ಪ್ರಿನ್ಸ್ರ ಪ್ರಕಾರ, “ವ್ಯಕ್ತಿಯೋರ್ವನು ಅನುಭವದಿಂದ ಗಳಿಸಿದ ಧೋರಣೆ ಮತ್ತು ವಿನ್ಯಾಸಗಳ ಹಾಗೂ ಅವನ ಆಂತರಿಕ ಪ್ರೇರಣೆ, ಧೋರಣೆ, ಆಸೆ ಮತ್ತು ಪ್ರವೃತ್ತಿಗಳ ಸಂಗ್ರಹದ ಮೊತ್ತವೇ ವ್ಯಕ್ತಿತ್ವ.” “ಹೂವಿಗೆ ಸುವಾಸನೆ ಎಷ್ಟು ಪ್ರಮುಖವೋ ವ್ಯಕ್ತಿಗೆ ವ್ಯಕ್ತಿತ್ವ ಅಷ್ಟೇ ಪ್ರಮುಖವಾದುದು.” ಹಾಗಾದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಸ್ವರೂಪ ನಿರ್ಧರಿಸುವ ಅಂಶಗಳು ಯಾವುವು? ವಾಕ್ ಸಾಮರ್ಥ್ಯವೇ, ಗಾಂಭೀರ್ಯದ ಮುಖ ಚರ್ಯೆಯೇ? ಸ್ಥಾನಮಾ ನವೇ? ಅಂಗಾಂಗವೇ? ಉಡುಗೆ-ತೊಡುಗೆಗಳೇ? ಆಡಂಬರವೇ? ಚೆಲುವು-ಒಲವುಗಳೇ? ಸಂಪತ್ತೇ? ಸೃಜನ ಶೀಲತೆಯೇ? ಕೌಟುಂಬಿಕ ಹಿನ್ನೆಲೆಯೇ? ಶೌರ್ಯವೇ? ಧ್ವನಿ ಮಾಧುರ್ಯವೇ? ಶೀಲ ಗೌರವವೇ? ಶೈಕ್ಷಣಿಕ ಅರ್ಹತೆಯೇ? ವ್ಯಕ್ತಿತ್ವ ಎನ್ನುವುದು ಅಳತೆ, ತೂಕಕ್ಕೆ ಸಿಗದ ವಸ್ತು. ರೈಮಂಡ್ ಬರ್ನಾಡ್ ಕೆಟಲ್ರ ಪ್ರಕಾರ, “ಓರ್ವ ವ್ಯಕ್ತಿ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಯಾವ ರೀತಿಯ ವರ್ತನೆಯನ್ನು ತೋರಿಸುತ್ತಾರೆ ಎಂಬುದನ್ನು ಊಹಿಸಿಕೊಳ್ಳಲು ನೆರವಿಗೆ ಬರುವ ಅಂಶಗಳೇ ವ್ಯಕ್ತಿತ್ವ.”
“ಒಬ್ಬ ವ್ಯಕ್ತಿಯ ಬಾಹ್ಯ ಹಾಗೂ ಆಂತರಿಕ ಗುಣಗಳ ಒಟ್ಟು ಮೊತ್ತವೇ ವ್ಯಕ್ತಿತ್ವ.” ಔದ್ಯೋಗಿಕ ಆಯ್ಕೆಗೆ, ಸೈನಿಕರ ಆಯ್ಕೆಗೆ, ಕ್ರೀಡೆಗೆ ಆಯ್ಕೆ ಮಾಡುವಾಗ ವ್ಯಕ್ತಿತ್ವದ ಅಳತೆ ಆವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಮನಃಶಾಸ್ತ್ರಜ್ಞರು ವ್ಯಕ್ತಿ ನಿಷ್ಟ ವಿಧಾನ ಹಾಗೂ ಪ್ರಕ್ಷೇಪಣಾ ತಂತ್ರಗಳೆಂಬ ಮೂರು ವಿಧಾನಗಳನ್ನು ಸೂಚಿಸುತ್ತಾರೆ. ಹೃದಯವಂತಿಕೆ, ವಿಚಾರಶಕ್ತಿ ಮತ್ತು ಕಾರ್ಯತತ್ಪರತೆ ಈ ಮೂರು ಗುಣಗಳು ಒಂದೇ ಸಮನಾಗಿ ಯಾರಲ್ಲಿ ಪಕ್ವತೆಯನ್ನು ಹೊಂದಿದೆಯೋ ಅಂತಹ ವ್ಯಕ್ತಿಯನ್ನು ನೋಡಲು ನಾವು ಬಯಸುತ್ತೇವೆ. ಇಂತಹ ಸದ್ಗುಣಗಳನ್ನು ತಮ್ಮದಾಗಿಸಿಕೊಂಡು ಮನುಕುಲದ ಉದ್ಧಾರಕ್ಕಾಗಿ ಜೀವ ತಳೆದು ಬದುಕನ್ನು ಮಾನವ ಕಲ್ಯಾಣಕ್ಕಾಗಿ, ರಕ್ಷಣೆಗಾಗಿ ತ್ಯಾಗ ಮಾಡಿದ ಪ್ರವಾದಿಗಳು, ಪೂಜ್ಯರು, ಆರಾಧಕರು ಹೇಗೆ ನಾವು ವರ್ಣಿಸಿಕೊಳ್ಳುತ್ತೇವೆಯೋ ಅವರ ಸಂಖ್ಯೆ ಮಾತ್ರ ಬೆರಳೆಣಿಕೆ. ಉದಾ. ಪ್ರವಾದಿ ಮುಹಮ್ಮದ್(ಸ), ಯೇಸು ಕ್ರಿಸ್ತ, ಭಗವಾನ್ ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ, ಬಸವಣ್ಣ ಇತ್ಯಾದಿ ಮಹಾನ್ ಪುರುಷರು. ಇವರುಗಳನ್ನು ಆಯಾ ಧರ್ಮಕ್ಕನುಸಾರವಾಗಿ ನಾಯಕರು, ಜಗತ್ಗುರು, ಸರ್ವಶಕ್ತರು, ಮಾರ್ಗದರ್ಶಕರು, ಪರಮ ಶ್ರೇಷ್ಠರು, ಶಾಂತಿದಾತರು ಹೀಗೆ ವಿವಿಧ ರೀತಿಯ ನಾಮಾಂಕಿತಗಳಿಂದ ವರ್ಣಿಸಿ ಪೂಜಿಸುವರು, ಸ್ಮರಿಸುವರು, ಆರಾಧಿಸುವರು. ಇಸ್ಲಾಮ್ ಧರ್ಮದ ಧಾರ್ಮಿಕರು ಪ್ರವಾದಿ ಮುಹಮ್ಮದ್(ಸ)ರವರನ್ನು ಜಗತ್ತು ಕಂಡ ಅತೀ ದೊಡ್ಡ ಸಾಮಾಜಿಕ ನಿರ್ಮಾಪಕ (Social Engineer) ಎಂದು ಬಣ್ಣಿಸುತ್ತದೆ.
ಇತಿಹಾಸದ ದಿಕ್ಕನ್ನು ಬದಲಾಯಿಸಿದವರಲ್ಲಿ ಪ್ರವಾದಿ ಮುಹಮ್ಮದ್(ಸ)ರ ಪಾತ್ರವೂ ಅತ್ಯಂತ ಪ್ರಮುಖವಾಗಿದೆ. ಮಾನವ ಕುಲವನ್ನು ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ, ಹಳೆಯ ರೂಢಿ ಸಂಪ್ರದಾಯಗಳಿಂದ ಸರಿಯಾದ ಮಾರ್ಗದೆಡೆಗೆ, ಹಿರಿಯರ ಅಂಧಾನುಕರಣೆಯಿಂದ ಬುದ್ಧಿ ಹಾಗೂ ವಿಚಾರಗಳ ಕಡೆಗೆ ತಿರುಗಿಸಿದ ಕೀರ್ತಿ ಈ ಮಹಾನ್ ವ್ಯಕ್ತಿಗೆ ಸಲ್ಲುತ್ತದೆ. ಇತಿಹಾಸದಲ್ಲಿ ವಿಚಾರವಾದಿ ಮತ್ತು ಸಂಪ್ರದಾಯವಾದಿ ಮಾರ್ಗಗಳು ಪ್ರತ್ಯೇಕಗೊಳ್ಳುವಂತಹ ಕವಲುದಾರಿಯಲ್ಲಿ ಇದ್ದೇವೆ. ಪ್ರವಾದಿ ಮುಹಮ್ಮದ್ (ಸ)ರವರ ಶಿಕ್ಷಣ, ಮಾನವನಿಗೆ ಬುದ್ಧಿ ವಿವೇಕದ ಬೆಳಕನ್ನು ನೀಡಿತು ಮತ್ತು ಮಾನವನ ಸಂಶೋಧನಾತ್ಮಕ ಪ್ರತಿಭೆಗಳನ್ನು ಜಾಗೃತಗೊಳಿಸಿತು.
ಓರ್ವ ಸಮಾಜ ಸುಧಾರಕನ ಮುಂದೆ ಸಾಮಾನ್ಯವಾಗಿ ಎರಡು ಆಯ್ಕೆಗಳಿರುತ್ತವೆ. ಒಂದು ಉಗ್ರವಾದವಾದರೆ ಮತ್ತೊಂದು ಸೌಮ್ಯವಾದ. ಓರ್ವ ಸಮಾಜ ಸುಧಾರಕನೆಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದ್(ಸ)ರ ಮುಂದೆಯೂ ಈ ಎರಡು ಆಯ್ಕೆಗಳಿದ್ದುವು. ಅವರ ನಿಲುವಿಗೆ ಸಮಾಜದಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಪರಿಗಣಿಸಿದರೆ, ಅವರು ಉಗ್ರವಾದವನ್ನು ನೆಚ್ಚಿಕೊಳ್ಳಬೇಕಿತ್ತು. ತಾಯಿಫ್ನಲ್ಲಿ ಮಾಡಲಾದ ಹಲ್ಲೆ, ಅವರ ಮೇಲೆ ದಿಗ್ಬಂಧನ ವಿಧಿಸಿ 3 ತಿಂಗಳುಗಳ ಕಾಲ ಹಸಿವೆಯಿಂದಿರಿಸಿದ್ದು, ಸಾರ್ವಜನಿಕವಾಗಿ ವಿವಿಧ ರೀತಿಯಲ್ಲಿ ಅವಮಾನ, ಹಲ್ಲೆ, ನಿಂದನೆಗೆ ಗುರಿಪಡಿಸಿದ್ದು, ತನ್ನ ಬೆಂಬಲಿಗರನ್ನು ಕಟು ಕ್ರೌರ್ಯಕ್ಕೆ ಒಳಪಡಿಸುತ್ತಿದ್ದುದು, ಹುಟ್ಟೂರು ಮಕ್ಕಾದಿಂದಲೇ ವಲಸೆ ಹೋಗುವಂತೆ ನಿರ್ಬಂಧಿಸಿದ್ದು, ಹೀಗೆ ಓರ್ವ ಸಮಾಜ ಸುಧಾರಕನಾಗಿ ಅವರು ಮಕ್ಕಾದಲ್ಲಿ 13 ವರ್ಷಗಳ ಕಾಲ ಅನುಭವಿಸಿದ ಚಿತ್ರ ಹಿಂಸೆಯು ‘ಉಗ್ರವಾದವೇ ಪರಿಹಾರ’ ಎಂದು ತೀರ್ಮಾನಿಸುವುದಕ್ಕೆ ಎಲ್ಲ ರೀತಿಯಲ್ಲೂ ಪುರಾವೆ ಇತ್ತು. ಆದರೆ ಮುಹಮ್ಮದ್(ಸ) ಉಗ್ರವಾದವನ್ನು ತನ್ನ ಉದ್ದೇಶ ಸಾಧನೆಗಾಗಿ ಆಯ್ಕೆ ಮಾಡಿಕೊಳ್ಳಲೇ ಇಲ್ಲ.
ವ್ಯಭಿಚಾರಕ್ಕೆ ಅನುಮತಿಯನ್ನು ಕೇಳಿದ ಓರ್ವ ಗ್ರಾಮೀಣ ವ್ಯಕ್ತಿಯನ್ನು ತಿದ್ದಿದ್ದು, “ಆ ವ್ಯಭಿಚಾರ ನಿನ್ನ ಮಗಳೊಂದಿಗಾದರೆ ಹೇಗೆ?” ಎಂಬ ತೀಕ್ಷ್ಣ ಪ್ರಶ್ನೆಯೊಂದಿಗೆ. ಆ ಪ್ರಶ್ನೆ ಆ ವ್ಯಕ್ತಿಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಆತ ತನ್ನ ಆಲೋಚನಾ ವಿಧಾನವನ್ನೇ ಬದಲಿಸಿದ. ಮದ್ಯಪಾನವನ್ನು ಬದುಕಿನ ಅವಿಭಾಜ್ಯ ಅಂಗವೆಂದು ನಂಬಿಕೊಂಡು ಬಂದಿದ್ದ ಸಮಾಜವನ್ನು ‘ಹಲಾಲ್-ಹರಾಮ್’ ಎಂದು ಕಡ್ಡಿ ಮುರಿದಂತೆ ತಿಳಿಸದೇ ಅದನ್ನು ಸಹನೆಯಿಂದ ಅಧ್ಯಯನಕ್ಕೆ ಒಳಪಡಿಸಿದರು. “ಕುಡಿತದ ಅಮಲಿನಲ್ಲಿರುವಾಗ ನಮಾಝ್ ಮಾಡಬಾರದು” ಎಂಬ ಸೌಮ್ಯ ಎಚ್ಚರಿಕೆಯನ್ನು ನೀಡಿ ಅದರ ಒಳಿತು-ಕೆಡುಕುಗಳು ಸಮಾಜದಲ್ಲಿ ಚರ್ಚಿತವಾಗುವಂತೆ ನೋಡಿಕೊಂಡರು. ಅವರು ಎರಡನೆಯದನ್ನು ಅಂದರೆ, ‘ಸೌಮ್ಯವಾದ’ವನ್ನೇ ಆಯ್ದುಕೊಂಡರು. ಬಾಹ್ಯನೋಟಕ್ಕೆ ಹಿನ್ನಡೆಯಂತೆ ಕಾಣುವ ಒಪ್ಪಂದಕ್ಕೂ ಮುಂದಾದರು. ಒಪ್ಪಂದ ಪತ್ರದಲ್ಲಿ ಪ್ರವಾದಿ ಮುಹಮ್ಮದ್ ಎಂದು ನಮೂದಿಸುವುದಕ್ಕೆ ವಿರೋಧಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ‘ಅಬ್ದುಲ್ಲಾರ ಮಗ ಮುಹಮ್ಮದ್’ ಎಂದು ಬರೆಯಿಸಿ ಉಗ್ರ ನಿಲುವಿನಿಂದ ದೂರ ನಿಂತರು. ವಿರೋಧಿಗಳು ಯುದ್ಧವೊಂದನ್ನು ಅನಿವಾರ್ಯಗೊಳಿಸಿದಾಗಲೂ ಸೆರೆಸಿಕ್ಕ ಕೈದಿಗಳನ್ನು ತನ್ನ ಸಮಾಜದ ಅಕ್ಷರ ಗುರುಗಳಾಗಿ ಗೌರವಿಸಿದರು. ಬಹುಶಃ, ಪ್ರವಾದಿ ಮುಹಮ್ಮದ್ರ ಬದುಕಿನ ಉದ್ದಕ್ಕೂ ಓರ್ವ ಮಾದರಿ ಸಮಾಜ ಸುಧಾರಕರಾಗಿ ಬಿಂಬಿಸಲ್ಪಡುತ್ತಾರೆ. ಸಮಾಜಕ್ಕೆ ಅವರು ವೈಚಾರಿಕತೆಯ ರುಚಿಯನ್ನು ತೋರಿಸಿದರು. ಸ್ವಯಂ ಆಲೋಚನೆಗೆ ಪ್ರೇರಣೆ ಇತ್ತರು. ಪ್ರತಿಯೊಂದನ್ನೂ ವಿಮರ್ಶಿಸಿದರು. ಮಾತ್ರವಲ್ಲ, ಏನನ್ನು ಬೋಧಿಸುತ್ತಿದ್ದರೋ ಅದರಂತೆ ಬದುಕಿದರು. ಆಧುನಿಕ ನಿರ್ವಹಣಾ ವಿಜ್ಞಾನವು (Management Science) ನಾಯಕತ್ವ ಗುಣದ ಕೆಲವೊಂದು ಮೂಲಭೂತ ತತ್ವಗಳನ್ನು ಮುಂದಿಡುತ್ತಿದೆ. ಈ ಗುಣಗಳಲ್ಲಿ ಪ್ರವಾದಿ ಮುಹಮ್ಮದ್(ಸ)ರು ಮಾದರಿಯೋಗ್ಯರಾಗಿದ್ದರು. ಸಂಘರ್ಷದ ಸರ್ವ ಹಾದಿ ಗಳನ್ನು ರಚನಾತ್ಮಕ ಹಾದಿಯತ್ತ ತಿರುಗಿಸಿ ಬಿಡುವ ‘Conflict Resolution Theory’ ವಿಚಾರವನ್ನು ಅಳವಡಿಸಿಕೊಂಡಿದ್ದರು. ಅವರ ಎಲ್ಲ ಕೆಲಸ ಕಾರ್ಯಗಳು ವ್ಯಕ್ತಿತ್ವ ನಿರ್ಮಾಣದ ಗುರಿಯನ್ನು ಹೊಂದಿಕೊಂಡೇ ಇತ್ತು.
ಬದ್ರ್ ಯುದ್ಧದಲ್ಲಿ ಎಪ್ಪತ್ತರಷ್ಟು ಸಂಖ್ಯೆಯ ಶತ್ರು ಸೈನ್ಯದ ಸದಸ್ಯರನ್ನು ಮುಸ್ಲಿಮರು ಬಂಧಿಸಿದರು. ಹತ್ತು ಮಕ್ಕ ಳಿಗೆ ಅಕ್ಷರ ಅಭ್ಯಾಸವನ್ನು ನೀಡಿದರೆ ಬಂಧಮುಕ್ತಗೊಳಿಸುವ ಬಗ್ಗೆ ಶತ್ರು ಸೈನ್ಯಕ್ಕೆ ಪ್ರವಾದಿ ಮುಹಮ್ಮದ್(ಸ)ರವರು ಭರವಸೆಯನ್ನು ನೀಡಿದರು. ಹೀಗೆ ಇಸ್ಲಾಮೀ ಚರಿತ್ರೆಯ ಪ್ರಥಮ ಪಾಠಶಾಲೆಯ ವಿದ್ಯಾರ್ಥಿಗಳೆಲ್ಲರೂ ಮುಸ್ಲಿಮರು. ಅಧ್ಯಾ ಪಕರೆಲ್ಲರೂ ಶತ್ರು ಪಕ್ಷದವರು. ಪ್ರವಾದಿಯವರು(ಸ) ಯಾವುದೇ ಭರವಸೆಯಿಲ್ಲದ ಒಂದು ವಾತಾವರಣದಿಂದ ಭರವಸೆಯನ್ನು ಹೊಂದಲು ಇರುವ ಒಂದು ಪ್ರಾಯೋಗಿಕ ರೂಪವನ್ನು ಪರಿಚಯಿಸಿ ಕೊಟ್ಟರು. “ನಿಮ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತ ಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ” ಎಂದು ಪ್ರವಾದಿಯವರಿಗೆ ಪವಿತ್ರ ಕುರ್ಆನ್ ಆದೇಶಿಸುತ್ತಿದೆ. (41:34)
ಸಂಹಾರದ ಶಕ್ತಿಗಿಂತ ಶಾಂತಿಯ ಶಕ್ತಿಯು ಮೇಲು ಎಂದು ಮಕ್ಕಾ ವಿಜಯದ ಸಂದರ್ಭದಲ್ಲಿ ಪ್ರವಾದಿಯ ನಡೆಯು ತೋರಿಸಿಕೊಟ್ಟಿದೆ. ಪ್ರವಾದಿಯವರು(ಸ) ಪ್ರವಾದಿತ್ವ ಲಭಿಸುವುದಕ್ಕಿಂತಲೂ ಮುಂಚೆಯೂ ಜನರೊಂದಿಗೆ ಇದ್ದರು. ಬಾಲ್ಯದಲ್ಲಿ ಆಡುಗಳನ್ನು ಮೇಯಿಸಿದರು. ಕಅಬಾವನ್ನು ದುರಸ್ತಿಗೊಳಿಸಲಿಕ್ಕಾಗಿ ಅವರು ಇತರರೊಂದಿಗೆ ಕಲ್ಲು ಹೊತ್ತರು. ಮನೆ-ಮನೆಗೆ ಭೇಟಿ ನೀಡಿದರು. ಜನಸೇವೆಗೈದರು. ದೊಡ್ಡವರಾಗುತ್ತಾ ಪ್ರವಾದಿಯವರು(ಸ) ಪ್ರಜಾಪರ ಜೀವನದ ವಕ್ತಾರರಾಗಿ ಬದಲಾದರು. ಪ್ರಮುಖ ಕೃಷಿಕ ಎಂಬ ಖ್ಯಾತಿ ಪಡೆದರು. ಕಅಬಾದ ಪುನರ್ ನಿರ್ಮಾಣದ ವೇಳೆ ಕಲ್ಲನ್ನು ಪ್ರತಿಷ್ಠಾಪಿಸುವ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯವನ್ನು ಪ್ರವಾದಿಯವರು(ಸ) ಪರಿಹರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಂತಹ ವ್ಯಕ್ತಿತ್ವ ನಮ್ಮದಾಗಬೇಕು ಎಂಬುದು ಜನರ ಅಭಿಪ್ರಾಯವಾಯಿತು. ಗೋತ್ರಗಳ ಮುಖಂಡರ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳು ಯುದ್ಧ ನಡೆಯುವಷ್ಟರ ಮಟ್ಟಿಗೆ ತಲುಪಿದಾಗ ಪ್ರವಾದಿಯವರು(ಸ) ಒಂದು ಹೊದಿಕೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿದರು. ಅಂದರೆ ಸಮಸ್ಯೆಯನ್ನು ಅವರು ಪ್ರಜಾಪ್ರಭುತ್ವ ರೀತಿಯಲ್ಲಿ ಪರಿಹರಿಸಿದರು. ವ್ಯಕ್ತಿತ್ವ ನಿರ್ಮಿಸಲು ಶ್ರಮಿಸಿದರು. “ನೆರೆಯವನು ಹಸಿದಿರುವಾಗ ಸ್ವತಃ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂದು ಬಹಿರಂಗವಾಗಿ ಘೋಷಿಸಿದರು. ಯಾರಾದರೂ ಹಸಿದಿರುವುದಾಗಿ ತಿಳಿದು ಬಂದರೆ ಪ್ರವಾದಿಯವರು(ಸ) ಅವರ ಹಸಿವನ್ನು ತಣಿಸುತ್ತಿದ್ದರು. ಯಹೂದಿ ಬಡ್ಡಿ ಮಾರುಕಟ್ಟೆಯನ್ನು ಅಳಿಸಿ ಪ್ರವಾದಿಯವರು(ಸ) ಪ್ರಜಾಪರವಾದ ಮಾರುಕಟ್ಟೆಯನ್ನು ಅಲ್ಲಿ ಸ್ಥಾಪಿಸಿದರು. ಯಹೂದಿ ಮಾರುಕಟ್ಟೆಯು ಬಡ್ಡಿಯಲ್ಲೂ ವಂಚನೆಯಲ್ಲೂ ಮುಳುಗಿತ್ತು. ಬದಲಿ ಮಾರುಕಟ್ಟೆಯ ಮೂಲಕ ಪ್ರವಾದಿಯವರು(ಸ) ಹೊಸ ವಿನಿಮಯ ಪದ್ಧತಿಯನ್ನು ಜಾರಿಗೆ ತಂದರು. ಇದು ಬಡ್ಡಿ, ವಂಚನೆ, ಕಳ್ಳಸಾಗಾಣಿಕೆ, ಅಕ್ರಮ ದಾಸ್ತಾನು ಮುಂತಾದುವುಗಳಿಂದ ಮುಕ್ತವಾಗಿತ್ತು. ‘ವಂಚಿಸುವವನು ನಮ್ಮವನಲ್ಲ’ ಇದು ಪ್ರವಾದಿಯವರ(ಸ) ಉಪದೇಶವಾಗಿತ್ತು.
ಅತ್ಯಾಚಾರಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯರ ಮಾನ ರಕ್ಷಣೆಗಾಗಿ ಪರ್ದಾ ಪದ್ಧತಿ ಜಾರಿಗೊಳಿಸಿದ ಪ್ರವಾದಿ(ಸ) ಇಂದಿಗೂ ಆದರ್ಶವಾದಿ. ಮನುಷ್ಯರನ್ನು ಕೊಲ್ಲುವುದು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಮನುಷ್ಯನನ್ನು ಕೊಂದರೆ ಮನುಕುಲವನ್ನೇ ನಾಶ ಮಾಡಿದಂತೆ ಎಂದ ಪ್ರವಾದಿ ಇಂದಿಗೂ ವ್ಯಕ್ತಿತ್ವ ನಿರ್ಮಾಪಕ. ವರದಕ್ಷಿಣೆಯ ಪಿಡುಗು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ‘ಮಹರ್’ ನೀಡಿ ವಧುವನ್ನು ವರಿಸಿರಿ ಎಂದ ಪ್ರವಾದಿ ಇಂದಿಗೂ ವ್ಯಕ್ತಿತ್ವ ನಿರ್ಮಾಪಕ. ದಿನ ಬೆಳಗಾದರೆ ನೆರೆಯವರೊಂದಿಗೆ ಕಲಹ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ನೆರೆಯವರೊಂದಿಗೆ ಸೌಜನ್ಯದಿಂದ ವರ್ತಿಸದಿದ್ದರೆ ನೀನು (ಮುಸ್ಲಿಮ್) ಮಾನವನಲ್ಲ ಎಂದು ಎಚ್ಚರಿಸಿದ ಪ್ರವಾದಿ ಇಂದಿಗೂ ವ್ಯಕ್ತಿತ್ವ ನಿರ್ಮಾಪಕ. ದಾರಿಗೆಟ್ಟವರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಏಕೈಕ ಗುರಿ ಪ್ರವಾದಿ(ಸ) ರವರದ್ದಾಗಿರುತ್ತದೆ.
ಸತ್ಯಾಸತ್ಯತೆಯ ಅರಿವಿಲ್ಲದ ಮಾನವನ ಬಾಳಿನಲ್ಲಿ ಅಸತ್ಯವನ್ನು ಹೋಗಲಾಡಿಸಿ, ಸತ್ಯದ ವಾಹಕರನ್ನಾಗಿ ಮಾರ್ಪಡಿಸಿ ಸಾಮಾಜಿಕ, ವ್ಯಾವಹಾರಿಕ, ಆರ್ಥಿಕ, ಲೌಕಿಕ, ರಾಜಕೀಯ ಎಲ್ಲಾ ರಂಗಗಳಲ್ಲಿ ಪರಿಪೂರ್ಣತೆಯನ್ನು ಹೊಂದಿ ಮಾನವರಲ್ಲಿ ವ್ಯಕ್ತಿತ್ವವನ್ನು ರೂಪಿಸುವ ಏಕೈಕ ಗುರಿ ಅವರದ್ದಾಗಿತ್ತು. ಅದನ್ನೇ ಕುರ್ಆನ್, “ವಾಸ್ತವದಲ್ಲಿ ಅಲ್ಲಾಹ್ ಸತ್ಯವಿಶ್ವಾಸಿಗಳ ನಡುವೆ ಅವರೊಳಗಿಂದಲೇ ಅವರಿಗೆ ಅಲ್ಲಾಹನ ಸೂಕ್ತಗಳನ್ನು ಓದಿ ಹೇಳುವ, ಅವರ ಜೀವನವನ್ನು ಸಂಸ್ಕರಿಸುವ, ಅವರಿಗೆ ಗ್ರಂಥ ಮತ್ತು ವಿವೇಕದ ಶಿಕ್ಷಣ ನೀಡುವ ಓರ್ವ ಸಂದೇಶವಾಹಕರನ್ನು ನಿಯೋಜಿಸಿ ಅವರ ಮೇಲೆ ಬಹುದೊಡ್ಡ ಉಪಕಾರ ಮಾಡಿದ್ದೇನೆ. ವಸ್ತುತಃ ಅವರು ಈ ಮುಂಚೆ ವ್ಯಕ್ತವಾದ ಮಾರ್ಗಭ್ರಷ್ಟತೆಯಲ್ಲಿ ಬಿದ್ದಿದ್ದರು” (3:164) ಎಂದು ಎಚ್ಚರಿಸುತ್ತದೆ.
40 ವರ್ಷಗಳವರೆಗೆ ಯಾವುದೇ ಶಾಲೆಯಲ್ಲಾಗಲಿ, ಮದ್ರಸದಲ್ಲಾಗಲಿ ವಿದ್ಯೆ ಕಲಿಯದ ಈ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಯಾರೂ ನುಡಿಯದಿದ್ದ ಮುಂದೆ ಯಾರೂ ನುಡಿಯಲಾರದ ಚಾತುರ್ಯ ಹಾಗೂ ಸೂಕ್ಷ್ಮ ಮಾತುಗಳನ್ನು ಜನರ ಮುಂದಿಡುತ್ತಾರೆ. ಈ ಸಮಾಜ ಸೇವಕ ಇಡೀ ಜನಾಂಗದ ನಾಗರಿಕತೆ, ಆಚಾರ-ವಿಚಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಸ್ಕೃತಿಯನ್ನು ಬದಲಿಸಿ ಅವರ ಅಸಭ್ಯತೆಯನ್ನು ಉನ್ನತ ಮಟ್ಟದ ಸಭ್ಯತೆಯಲ್ಲಿ, ಅದರ ಪಶುತ್ವವನ್ನು ಉನ್ನತ ಮಟ್ಟದ ಸಂಸ್ಕೃತಿಯಲ್ಲಿ, ಅವರ ಅವಿವೇಕತೆ ಹಾಗೂ ಹೇಯ ನಡತೆಯನ್ನು ಸೌಜನ್ಯ, ಪ್ರೀತಿ ಹಾಗೂ ಉನ್ನತ ಮಟ್ಟದ ನಡತೆಯಲ್ಲಿ ಪರಿವರ್ತಿಸಿ ಅವರನ್ನು ಉನ್ನತ ಮಟ್ಟದ ನಾಗರಿಕರನ್ನಾಗಿ ಮಾಡಿದರು. ಹೆಣ್ಣು ಮಕ್ಕಳನ್ನು ಜೀವಂತ ಹೂಳುತ್ತಿದ್ದ ಕಠೋರ ಹೃದಯಿಗಳನ್ನು ಪರಿವರ್ತಿಸಿ ‘ತಾಯಿಯ ಪಾದದಡಿ ಸ್ವರ್ಗವಿದೆ’ ಎಂಬ ಉದಾತ್ತ ಭಾವನೆಯತ್ತ ತಿರುಗಿಸಿ ಹೆಣ್ಣಿನ ಸ್ಥಾನಮಾನಗಳನ್ನು ಉನ್ನತಿಗೊಳಿಸಿದರು. ಗುಲಾಮ ಪದ್ಧತಿಯನ್ನು ತೊಲಗಿಸಿ ಎಲ್ಲರೂ ಸಮಾನರು, ಯಾರೂ ಮೇಲು-ಕೀಳು ಎಂಬುದಿಲ್ಲ ಎಂಬ ಘೋಷಣೆಯಿಂದ ಗುಲಾಮಗಿರಿಯಿಂದ ಮುಕ್ತಿ ದೊರಕಿಸಿದ ಮಹೋನ್ನತ ವ್ಯಕ್ತಿಯಾದರು.
ಜಾಗತಿಕ ರಂಗದಲ್ಲಿ ಗತಿಸಿದ ಎಲ್ಲ ನಾಯಕರುಗಳನ್ನು ಹೋಲಿಸಿದಾಗ ಅವರು ಒಂದೊಂದು ವರ್ಚಸ್ಸನ್ನು ಮಾತ್ರ ಹೊಂದಿರುತ್ತಾರೆ. ಆದರೆ ಪ್ರತಿಯೊಂದು ರಂಗದಲ್ಲಿ ಪರಿಪೂರ್ಣ ಜ್ಞಾನ ಹೊಂದಿರುವ ಏಕೈಕ ಪ್ರವಾದಿ, ಪ್ರವಾದಿ(ಸ)ರವರು ಗೋಚರಿಸುತ್ತಾರೆ. ಏಕಕಾಲದಲ್ಲಿ ಅವರು ರಾಜಕೀಯ ಧುರೀಣರೂ ಸೈನಿಕ ದಂಡನಾಯಕರೂ ಕಾನೂನಿನ ನಿರ್ಮಾ ಪಕರೂ ನೈತಿಕತೆಯ ಗುರುವೂ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ನಿರ್ಮಾಪಕರೂ ಸಮಾಜ ಸುಧಾರಕರೂ ಅಬಲೆಯರ, ಗುಲಾಮರ ವಿಮೋಚಕರೂ ಆಗಿ ಮಾನವನಲ್ಲಿ ವ್ಯಕ್ತಿತ್ವ ನಿರ್ಮಿಸಿದ ಏಕೈಕ ಪ್ರವಾದಿ, ಪ್ರವಾದಿ ಮುಹಮ್ಮದ್(ಸ)ರವರು. ಅವರ ಕೊಡುಗೆ ಅಪಾರ, ಭಕ್ತ ಜನಾಂಗವು ಅವರಿಗೆ ಚಿರಋಣಿಯಾಗಿದೆ.
“ಕಷ್ಟಕ್ಕೆ ಆಗದ ಮಕ್ಕಳು, ಬಡತನ ಹಂಚಿಕೊಳ್ಳದ ಪ್ರೀತಿ, ತಮಾಷೆ ಸಹಿಸದ ಸ್ನೇಹ, ಬೆಳವಣಿಗೆ ಬಯಸದ ಬಂಧುಗಳು, ಗೆದ್ದರೆ ಅಸೂಯೆ ಪಡುವ ವೈರಿಗಳು ಇದ್ದರೆಷ್ಟು, ಹೋದರೆಷ್ಟು?”
ಸರ್ವ ಕ್ಷೇತ್ರದಲ್ಲೂ ಪರಿಪೂರ್ಣತೆಯ ಅತ್ಯುನ್ನತ ಮಾದರಿಯಾದ ಏಕೈಕ ವ್ಯಕ್ತಿತ್ವ ಅವರದು. ಈ ಕಾರಣಕ್ಕಾಗಿಯೇ ಎಲ್ಲ ರಂಗಗಳಲ್ಲೂ ಆ ಮಹಾ ವ್ಯಕ್ತಿತ್ವವನ್ನು ಮಾದರಿಯಾಗಿ ಸುವಂತೆ ಕಡ್ಡಾಯಗೊಳಿಸಲಾಗಿದೆ. ಅವರ ನಮಾಝ್ ನಮ್ಮ ನಮಾಝ್ ಆಗಬೇಕು. ಅವರ ಉಪವಾಸ ವ್ರತ ನಮ್ಮದಾಗಬೇಕು. ಅವರ ಹಜ್ಜ್, ಅವರ ಝಕಾತ್, ಅವರ ಕುಟುಂಬ, ಅವರ ಚಾರಿತ್ರ್ಯ, ಅವರ ಗುಣನಡತೆ, ಒಟ್ಟಾರೆ ಅವರ ವ್ಯಕ್ತಿತ್ವ ನಮ್ಮದಾಗಬೇಕು.
IslamKannada News Portal

