ಪ್ರವಾದಿ ಮುಹಮ್ಮದ್ರು(ಸ) ತಮ್ಮ ಕಾಲದ ಯಹೂದಿ-ಕ್ರೈಸ್ತ ಪಂಡಿತರೊಂದಿಗೆ ಕಲಿತ ವಿಚಾರಗಳನ್ನು ತನ್ನ ಸ್ವಂತ ಭಾಷೆಯಲ್ಲಿ ತನ್ನದೇ ಶೈಲಿಯಲ್ಲಿ ಪ್ರಕಟಿಸಿದ್ದಾರೆ. ಗತಸಮುದಾಯಕ್ಕೆ ಸಂಬಂಧಿಸಿ ಕುರ್ಆನ್ ಮತ್ತು ಬೈಬಲ್ನ ವಿವರಣೆಗಳು ಒಂದೇ ರೀತಿಯಾಗಲು ಇದೇ ಕಾರಣ. ಒಂದಕ್ಕಿಂತ ಹೆಚ್ಚು ಇಂಗ್ಲಿಷ್ ಪುಸ್ತಕಗಳಲ್ಲಿ ಇಂತಹ ವಿಮರ್ಶೆಗಳು ಕಂಡು ಬಂತು. ಇದಕ್ಕೇನು ಕಾರಣ ಹೇಳುವಿರಿ.?
ಇಸ್ಲಾಮನ್ನು ಶತ್ರುವಿನಂತೆ ದ್ವೇಷಿಸುವ ಪಾಶ್ಚಾತ್ಯ ಬರಹಗಾರರು ಹುಟ್ಟು ಹಾಕಿದ ಸುಳ್ಳಾರೋಪವಿದು. ಈ ಆರೋಪದಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲವೆಂದು ಬೈಬಲ್ ಮತ್ತು ಕುರ್ಆನ್ ಓದುವ ಯಾರಿಗೂ ತಿಳಿಯಲು ಸಾಧ್ಯವಿದೆ. ಮಾನವ ಕೋಟಿಗೆ ದೇವನು ನಿಶ್ಚಯಿಸಿದ ಜೀವನ ವ್ಯವಸ್ಥೆಯನ್ನು ತಿಳಿಸಿಕೊಡಲು ಪ್ರವಾದಿಗಳನ್ನು ನೇಮಿಸಲಾಗಿತ್ತು. ಆದ್ದರಿಂದ ಅವರುಗಳಿಂದ ಅರ್ಪಿತವಾದ ದೈವಿಕ ಸನ್ಮಾರ್ಗದಲ್ಲಿ ಸಾಮ್ಯತೆ ಗೋಚರಿಸುವುದು ಸ್ವಾಭಾವಿಕವಾಗಿದೆ. ಸಂದೇಶವಾಹಕರನ್ನು ಬೇರೆ ಬೇರೆ ಕಾಲಗಳಲ್ಲಿ ಕಳಿಸಿದ ಉದ್ದೇಶವೇ ಪೂರ್ವಿಕರ ಮಾರ್ಗದಿಂದ ಅವರ ಅನುಯಾಯಿಗಳು ದೂರ ಸರಿದ ಕಾರಣವಾಗಿತ್ತು.
ಮುಹಮ್ಮದ್(ಸ) ನಿಯೋಗದ ಸಂದರ್ಭದಲ್ಲಿ ಯೇಸು ಅಥವಾ ಮೋಶಸ್ ಸಂದೇಶಗಳು ಹಾಗೂ ಭೋದನೆಗಳು ನೈಜ ರೀತಿಯಲ್ಲಿ ಲಭ್ಯವಿರಲಿಲ್ಲ, ಯಹೂದಿ-ಕ್ರೈಸ್ತ ಸಮುದಾಯಗಳು ಅವುಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿದ್ದವು. ಆದ್ದರಿಂದ ಪ್ರವಾದಿಗಳ ನೈಜ ಬೋಧನೆಗಳು ಸಣ್ಣ ಪ್ರಮಾಣದಲ್ಲಿ ಬೈಬಲ್ನಲ್ಲಿವೆ. ಅವುಗಳೊಂದಿಗೆ ಪ್ರವಾದಿಯವರ(ಸ) ಬೋಧನೆಗಳಿಗೂ ಸಾಮ್ಯತೆ ಇರುವುದು ಸ್ವಾಭಾವಿಕ. ನಿಜವಾಗಿ ಸಂಭವಿಸಿರುವುದು ಕೂಡಾ ಅದೇ. ಕುರ್ಆನ್ ಮತ್ತು ಬೈಬಲ್ನಲ್ಲಿ ಕಂಡುಬರುವ ಸಾಮ್ಯತೆಗೂ ಇದೇ ಕಾರಣ.
ಧರ್ಮದ ಮೂಲಭೂತ ಸಿದ್ಧಾಂತವಾದ ದೇವವಿಶ್ವಾಸದಲ್ಲೇ ಯಹೂದಿ-ಕ್ರೈಸ್ತ ದೃಷ್ಟಿಕೋನ ಮತ್ತು ಪ್ರವಾದಿ ಮುಹಮ್ಮದ(ಸುರ ಬೋಧನೆಗಳಲ್ಲಿ ಬಹಳ ವ್ಯತ್ಯಾಸ ಕಂಡು ಬರುತ್ತದೆ. ಪ್ರವಾದಿಯವರು ಏಕದೇವ ಸಿದ್ಧಾಂತವನ್ನು ಪರಿಚಯಿಸಿಕೊಟ್ಟರು. ಆದರೆ ಯಹೂದಿ ಮತ್ತು ಕ್ರೈಸ್ತರಲ್ಲಿ ಅವರ ದೇವವಿಶ್ವಾಸದಲ್ಲಿ ನ್ಯೂನ್ಯತೆಯಿದೆ. ಪ್ರವಾದಿವರ್ಯರು ಅದನ್ನು ಅಂಗೀಕರಿಸಲಿಲ್ಲ. ಮಾತ್ರವಲ್ಲ ಅದರ ಮೂಲಕ ಅವತೀರ್ಣಗೊಂಡ ಕುರ್ಆನ್ ಅದನ್ನು ತೀವ್ರವಾಗಿ ವಿರೋಧಿಸಿತು. ‘ಉಝೈರ್’ ದೇವಪುತ್ರನೆಂದು ಯಹೂದಿಯರು ಹೇಳುತ್ತಾರೆ. ಮಸೀಹ್ (ಈಸಾ) ದೇವಪುತ್ರನೆಂದು ಕ್ರೈಸ್ತರು ಹೇಳುತ್ತಾರೆ. ಅವರು ತಮಗಿಂತ ಹಿಂದೆ ಸತ್ಯನಿಷೇಧಿಗಳಾಗಿದ್ದವರನ್ನು ಅನುಕರಿಸುತ್ತಾ ತಮ್ಮ ಬಾಯಿಗಳಿಂದ ಹೊರಡಿಸುವ ಅಸಂಬದ್ಧ ಮಾತುಗಳಿವು. ಅವರ ಮೇಲೆ ದೇವನ ಪ್ರಹಾರವಿದೆ. (ಕುರ್ಆನ್ 9:30)
ಅಲ್ಲಾಹನು ಯಾರನ್ನಾದರೂ ತನ್ನ ಪುತ್ರರನ್ನಾಗಿಸಿದ್ದಾನೆಂದು ಹೇಳುವವರನ್ನು ಎಚ್ಚರಿಸಲಿಕ್ಕಾಗಿ ಈ ಗ್ರಂಥ ಅವತೀರ್ಣವಾಗಿದೆ. ಅವರಿಗೆ ಇದರ ಕುರಿತು ಜ್ಞಾನವೇನೂ ಇಲ್ಲ. ಅವರ ಬಾಯಿಯಿಂದ ಹೊರಡುವ ಈ ಮಾತು ಬಹಳ ಘೋರವಾದದು. ಅವರು ಕೇವಲ ಹುಸಿಯನ್ನಾಡುತ್ತಿದ್ದಾರೆ. (ಪವಿತ್ರ ಕುರ್ಆನ್ 18:4-5)
‘ಅಲ್ಲಾಹನು ಮೂವರಲ್ಲೊಬ್ಬನೆಂದು ಹೇಳಿದವರು ನಿಶ್ಚಯವಾಗಿಯೂ ‘ಸತ್ಯ ನಿಷೇಧ’ ಕೈಗೊಂಡರು. ವಾಸ್ತವದಲ್ಲಿ ಏಕದೇವನಲ್ಲದೆ ಅನ್ಯ ದೇವರಿಲ್ಲ ಇಂತಹ ಮಾತುಗಳಿಂದ ದೂರವಿರದಿದ್ದರೆ, ಇವರ ಪೈಕಿ ಸತ್ಯನಿಷೇಧ ನೀತಿಯನ್ನು ಅನುಸರಿಸುವವರಿಗೆ ವೇದನಾಯುಕ್ತ ಯಾತನೆ ನೀಡಲಾಗುವುದು. ಇವರು ಇನ್ನು ಅಲ್ಲಾಹನೊಡನೆ ಪಶ್ಚಾತ್ತಾಪಪಟ್ಟು ಅವನೊಡನೆ ಕ್ಷಮಾಯಾಚನೆ ಮಾಡಲಾರರೇ? ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.’ (ಪವಿತ್ರ ಕುರ್ ಆನ್ 5:73-74)
ಇಂದಿನ ಯಹೂದಿ ಹಾಗೂ ಕ್ರೈಸ್ತರಂತೆ ಅಂದಿನ ಯಹೂದಿ, ಕ್ರೈಸ್ತರೂ ಏಸುಕ್ರಿಸ್ತರನ್ನು ಶಿಲುಬೆಗೇರಿಸಿದರೆಂಬುದರ ಮೇಲೆ ವಿಶ್ವಾಸವಿರಿಸಿದ್ದಾರೆ. ಆದರೆ ಕುರ್ ಆನ್ ಅದನ್ನು ತೀವ್ರವಾಗಿ ನಿರಾಕರಿಸುತ್ತದೆ. ಯಹೂದಿಗಳು ಹೇಳಿದರು: ‘ನಾವು ಅಲ್ಲಾಹನ ಸಂದೇಶವಾಹಕರಾದ ಮರ್ಯಮರ ಪುತ್ರ ಈಸಾ ಮಸೀಹರನ್ನು ವಧಿಸಿದೆವೆಂದು ಅವರು ಹೇಳಿದರು. ವಸ್ತುತಃ ಅವರು ಈಸಾರನ್ನು ವಧಿಸಲೂ ಇಲ್ಲ, ಶಿಲುಬೆಗೇರಿಸಲೂ ಇಲ್ಲ. ನಿಜವಾಗಿ ಆ ಪ್ರಕರಣವು ಅವರಿಗೆ ಅಸ್ಪಷ್ಟಗೊಳಿಸಲ್ಪಟ್ಟಿತು, ಈ ವಿಷಯದಲ್ಲಿ ಭಿನ್ನಾಭಿಪ್ರಾಯ ತೋರಿದವರು ವಾಸ್ತವದಲ್ಲಿ ಸಂಶಯಗ್ರಸ್ಥರಾಗಿರುತ್ತಾರೆ. ಅವರಿಗೆ ಈ ಪ್ರಕರಣದ ಅರಿವೇನೂ ಇಲ್ಲ. ಕೇವಲ ಗುಮಾನಿಯನ್ನೇ ಅನುಸರಿಸಲಾಗುತ್ತಿದೆ. ಅವರು ಮಸೀಹರನ್ನು ಖಂಡಿತವಾಗಿಯೂ ವಧಿಸಲಿಲ್ಲ.’ (ಪವಿತ್ರ ಕುರ್ಆನ್ 4:157)
ದೇವತ್ವ ಹಾಗೂ ಸಂದೇಶವಾಹಕರ ಕುರಿತು ಬೈಬಲ್ನಲ್ಲಿ ಹಲವು ಅಸಂಬದ್ಧ ಹಾಗೂ ಸಂಕೀರ್ಣವಾದ ಪ್ರಸ್ತಾಪಗಳಿವೆ. ಅವೆಲ್ಲಾ ಕುರ್ಆನಿನಲ್ಲಿಲ್ಲ, ಮಾತ್ರವಲ್ಲ ಅವುಗಳ ಕುರಿತು ಈ ಸತ್ಯಸಂಧವಾದ, ವಸ್ತುನಿಷ್ಠ ವಿವರಗಳನ್ನು ಕುರ್ಆನ್ ನೀಡುತ್ತದೆ. ಬೈಬಲಿನಿಂದ ಕೆಲವು ಸೂಕ್ತಗಳನ್ನು ಇಲ್ಲಿ ಸೂಚಿಸುತ್ತೇನೆ.
“ಯಹೋವ ದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ ಆ ಸ್ತ್ರೀ ಪುರುಷರು ಆತನ ಸಪ್ಪಳವನ್ನು ಕೇಳಿ ಆತನಿಗೆ ಕಾಣಿಸಬಾರದೆಂದು ತೋಟದ ಮರಗಳ ಹಿಂದೆ ಅಡಗಿಕೊಂಡರು.” (ಅದಿಕಾಂಡ 3:8-9)
“ಯಹೋವನು ಈ ಮನುಷ್ಯನು ಒಳಿತು-ಕೆಡುಕುಗಳ ಭೇದವರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ, ಇದರಿಂದ ಇವನು ಕೈಚಾಚಿ ಜೀವ ವೃಕ್ಷದ ಫಲವನ್ನು ಸಹ ತೆಗೆದು ತಿಂದು ಶಾಶ್ವತವಾಗಿ ಬದುಕುವಂತಾಗಬಾರದು ಅಂದುಕೊಂಡನು.’ (ಆದಿಕಾಂಡ 3:22)
ಇಸ್ಲಾಮಿನ ದೇವವಿಶ್ವಾಸಕ್ಕೆ ಇದು ತೀರಾ ವಿರುದ್ಧವಾಗಿದೆ. ದೇವಸಂದೇಶವಾಹಕರ ಕುರಿತು ಬೈಬಲ್ನಲ್ಲಿರುವ ವಿಷಯಗಳು ನಂಬಲಸಾಧ್ಯ, ಅತ್ಯಂತ ಅವಹೇಳನಕಾರಿಯಾಗಿ ಆರೋಪಿಯಾಗಿ ಅವರನ್ನು ಚಿತ್ರೀಕರಿಸಲಾಗಿದೆ. ನೋಹರ ಕುರಿತು ಹೇಳಲಾಗುತ್ತದೆ: ನೋಹನು ದ್ರಾಕ್ಷಾರಸವನ್ನು ಕುಡಿದು ಅಮಲೇರಿದ್ದರಿಂದ ಗುಡಾರದಲ್ಲಿ ಬೆತ್ತಲೆಯಾಗಿ ಬಿದಿದ್ದನು. ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವುದನ್ನು ಕಂಡು ಹೊರಗಿದ್ದ ಅಣ್ಣ ತಮ್ಮಂದಿರಾದ ಶೇಮ್ ಯಾಫತ್ರಿಗೆ ತಿಳಿಸಿದನು. ಇವರಿಬ್ಬರು ಕಂಬಳಿಯನ್ನು ತೆಗೆದುಕೊಂಡು ತಮ್ಮಿಬ್ಬರ ಬೆನ್ನಿನ ಮೇಲೆ ಹಾಕಿಕೊಂಡು ಹಿಂದಿಂದಕ್ಕೆ ನಡೆದು ತಂದೆಗೆ ಹೊದಿಸಿ ಅವನ ಮಾನವನ್ನು ಕಾಪಾಡಿದರು. ಅವರು ಹಿಮ್ಮುಖರಾಗಿದ್ದರಿಂದ ತಂದೆಯೂ ಬೆತ್ತಲೆಯಾಗಿರುವುದನ್ನು ನೋಡಲಿಲ್ಲ. ನೋಹನು ಅಮಲಿಳಿದದ್ದು ಕಿರಿ ಮಗನು ಮಾಡಿದ್ದನ್ನು ತಿಳಿದು ಕಾನಾನನು ಶಾಪಗ್ರಸ್ತನಾಗಲಿ, ಅವನು ತನ್ನ ಅಣ್ಣತಮ್ಮಂದಿರಿಗೆ ದಾಸನು ದಾಸನಾಗಲಿ ಅಂದನು. ( ಅಧಿಕಾಂಡ 9:21-26)
ಮದ್ಯಪಾನದ ಲಹರಿಯಿಂದ ನಗ್ನನಾಗಿ, ಯಾವುದೇ ತಪ್ಪೆಸಗದ ಕಿರಿಮಗನನ್ನು ಶಪಿಸಿದ ನೋಹ, ಕುರ್ಆನ್ ಪರಿಚಯಿಸುವ ಪರಿಶುದ್ಧ ವ್ಯಕ್ತಿತ್ವದ ನೂಹ(ಅ)ರಿಗೆ ವಿರುದ್ಧವಾಗಿದೆ.
ಪ್ರವಾದಿ ಅಬ್ರಹಾಮರ ಕುರಿತು ಬೈಬಲ್ ಹೇಳುತ್ತದೆ: ತೀವ್ರ ಬರಗಾಲ ಎದುರಾದಾಗ ಅಬ್ರಹಾಂ ಈಜಿಪ್ಟ್ ಗೆ ಹೊರಟು ಹೋದನು. ಈಜಿಪ್ಟಿನ ಹತ್ತಿರಕ್ಕೆ ಬಂದಾಗ, ತನ್ನ ಹೆಂಡತಿಯಾದ ಸಾರಾಳಿಗೆ ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ: ಈ ದೇಶದವರು ನಿನ್ನನ್ನು ಕಂಡು ಈಕೆಯು ಇವನ ಹೆಂಡತಿ ಎಂದು ನನ್ನನ್ನು ಕೊಂದು ನಿನ್ನನ್ನು ಉಳಿಸುವರು. ಆದ ಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು, ಹೀಗೆ ಹೇಳಿದರೆ ನಿನ್ನಿಂದ ನನಗೆ ಒಳಿತಾಗುವುದು. ನಿನ್ನ ದೆಸೆಯಿಂದ ನಾನು ಸಾಯದೆ ಬದುಕುವೆನು ಎಂದು ಹೇಳಿದನು. ಅಬ್ರಹಾಂನು ಈಜಿಪ್ಟ್ ಗೆ ಬಂದಾಗ ಅಬ್ರಹಾಮನ ಸಂಗಡವಿದ್ದ ಸ್ತ್ರೀಯನ್ನು ನೋಡಿ ಆಕೆಯ ಸೌಂದರ್ಯವನ್ನು ಫರೋಹನ ಪ್ರಧಾನರು ಫರೋಹನ ಮುಂದೆ ಹೊಗಳಿದರು. ಫರೋಹನು ಆ ಸ್ತ್ರೀಯನ್ನು ಅರಮನೆಗೆ ಕರೆತರಿಸಿ ಆಕೆಯ ನಿಮಿತ್ತ ಅಬ್ರಹಾಮನಿಗೆ ಉಪಕಾರ ಮಾಡಿದನು. ಆಗ ಅಬ್ರಹಾಮನಿಗೆ ಕುರಿ ದನಗಳು ಗಂಡು ಹೆಣ್ಣು ಕತ್ತೆಗಳು, ದಾಸ ದಾಸಿಯರೂ ಒಂಟೆಗಳು ದೊರೆತವು. (ಆದಿಕಾಂಡ 12:10-16)
ತನ್ನ ಪತ್ನಿಯನ್ನು ರಾಜನಿಗೆ ಒಪ್ಪಿಸಿ, ಉಡುಗೊರೆಗಳನ್ನು ಸ್ವೀಕರಿಸಿದ ಅತ್ಯಂತ ನೀಚ ವ್ಯಕ್ತಿಯಾದ ಬೈಬಲ್ನ ಅಬ್ರಹಾಂನನ್ನು ಕುರ್ಆನ್ ಪರಿಚಯಿಸಿದ ಸಚ್ಚಾರಿತ್ರ್ಯ, ಆದರ್ಶದ ವಾಹಕರಾದ, ತ್ಯಾಗೋಜ್ವಲ ಜೀವನದ ಮೇರು ವ್ಯಕ್ತಿತ್ವದ ಪ್ರವಾದಿ ಇಬ್ರಾಹೀಮ್ ರಿಗೆ ಹೋಲಿಸಲು ಖಂಡಿತ ಸಾಧ್ಯವಿಲ್ಲ.
ಪ್ರವಾದಿ ಲೂತ್(ಅ) ರ ಕುರಿತು ಬೈಬಲ್ ಹೇಳುತ್ತದೆ: ಲೂತನು ಚೋಗರಿನಲ್ಲಿರುವುದಕ್ಕೆ ಅಂಜಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬೆಟ್ಟವನ್ನು ಹತ್ತಿ ಅಲ್ಲಿ ವಾಸ ಮಾಡಿದನು. ಅವನೂ ಅವನ ಇಬ್ಬರು ಹೆಣ್ಣು ಮಕ್ಕಳೂ ಒಂದು ಗವಿಯಲ್ಲಿ ವಾಸಿಸಿದರು. ಹೀಗಿರುವಲ್ಲಿ ಹಿರೀಮಗಳು ತನ್ನ ತಂಗಿಗೆ -ನಮ್ಮ ತಂದೆ ಮುದುಕನಷ್ಟೆ. ಸರ್ವಲೋಕದ ಪದ್ಧತಿಯ ಮೇರೆಗೆ ನಮ್ಮನ್ನು ಮದುವೆ ಮಾಡಿಕೊಳ್ಳಲು ಪುರುಷರು ಎಲ್ಲಿಯೂ ಇಲ್ಲ, ನಾವು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ಅವನ ಸಂಗಡ ಮಲಗಿಕೊಂಡು ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ ಎಂದು ಹೇಳಿದಳು. ಆ ರಾತ್ರಿ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದಾಗ ಹಿರೀಮಗಳು ಅವನ ಸಂಗಡ ಮಲಗಿಕೊಂಡಳು; ಯಾವಾಗ ಮಲಗಿಕೊಂಡಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ. ಮೂರನೇ ದಿನ ಹಿರಿಯವಳು ಕಿರಿಯವಳಿಗೆ-ನಿನ್ನೆ ರಾತ್ರಿ ನಾನು ಅಪ್ಪನೊಂದಿಗೆ ಮಲಗಿಕೊಂಡೆನು. ಈ ರಾತ್ರಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸೋಣ, ಆ ಮೇಲೆ ನೀನು ಅವನ ಸಂಗಡ ಮಲಗಿಕೋ. ಹೀಗೆ ನಮ್ಮ ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ ಎಂದು ಹೇಳಿದಳು. ಆ ರಾತ್ರಿಯೂ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ಮೇಲೆ ಕಿರೀಮಗಳು ಅವನ ಸಂಗಡ ಮಲಗಿಕೊಂಡಳು. ಅವಳು ಯಾವಾಗ ಮಲಗಿದಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ. ಹೀಗೆ ಲೂತನ ಇಬ್ಬರು ಹೆಣ್ಮಕ್ಕಳು ತಂದೆಯಿಂದ ಬಸುರಾದರು. ಹಿರಿಯವಳು ಗಂಡು ಮಗುವನ್ನು ಹೆತ್ತು ಅದಕ್ಕೆ ‘ಮೋವಾಬ್’ ಎಂದು ಹೆಸರಿಟ್ಟಳು. ಇಂದಿನಿವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲ ಪುರುಷ, ಕಿರಿಯ ಮಗಳು ಗಂಡು ಮಗುವನ್ನು ಹೆತ್ತು ಅದಕ್ಕೆ ‘ಬೆನಮ್ಮಿ’ ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲ ಪುರುಷನು’ (ಆದಿಕಾಂಡ 19:38) ಅತ್ಯಂತ ಲಜ್ಜೆಗೇಡಿತನದ, ನೀಚತನದ ವೃತ್ತಿಯಲ್ಲಿ ತೊಡಗಿದ್ದರೆಂದು ಬೈಬಲ್ ಪರಿಚಯ ಪಡಿಸುವ ಲೂತ್ ಮತ್ತು ಪರಿಶುದ್ಧ ಹಾಗೂ ಲೈಂಗಿಕ ಸದಾಚಾರಕ್ಕೆ ಉನ್ನತ ಮಾದರಿಯಾಗಿ ಕುರ್ಆನ್ ಪರಿಚಯಿಸುವ ಲೂತ್ ಒಂದೇ ಆಗಲು ಸಾಧ್ಯವಿಲ್ಲ.
ಅರಾಜಕತೆಯ ವಾಹಕರಾದ ಕಾಮಾಂಧರು ಪೋಣಿಸಿದ ಕಟ್ಟುಕತೆಗಳನ್ನು ಪರಿಶುದ್ಧರಾದ ಪ್ರವಾದಿಗಳ ಮೇಲೆ ಬೈಬಲ್ ಆರೋಪಿಸುತ್ತದೆ. ಇಂತಹ ಎಲ್ಲಾ ಅಪಭ್ರಂಶಗಳಿಂದ ಪವಿತ್ರ ಕುರ್ ಆನ್ ಮುಕ್ತವಾಗಿದೆ.
ಪ್ರವಾದಿತ್ವದ ನೈಜ ಹಕ್ಕುದಾರರಾಗಿದ್ದ ಏಸುವಿನಿಂದ ತಿಂಡಿ ಹಾಗೂ ಹೆಸರು ಬೇಳೆ ಪಾಯಸವನ್ನು ನೀಡಿ ಯಾಕೋಬ್ ಅದನ್ನು ಪಡೆದುಕೊಂಡರೆಂದು ಬೈಬಲ್ ಹೇಳುತ್ತದೆ. ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರುವಾಗ ಏಸಾವನು ಕಾಡಿನಿಂದ ದಣಿದು ಬಂದು ಅವನಿಗೆ -ನಾನು ಬಹು ದಣಿದು ಬಂದಿದ್ದೇನೆ. ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನಲು ಕೊಡಪ್ಪಾ ಎಂದು ಕೇಳಿದರು. ಯಾಕೋಬನು ಅವನಿಗೆ ನೀನು ಚೊಚ್ಚಲು ತನದ ಹಕ್ಕನ್ನು ನನಗೆ ಮಾರಿಬಿಡು ಅನ್ನಲು ಏಸಾವನು ಆಗಲಿ, ನನ್ನಂಥ ಸಾಯುವವನಿಗೆ ಚೊಚ್ಚಲುತನದಿಂದ ಪ್ರಯೋಜನವೇನು ಅಂದನು. ಯಾಕೋಬನು ಮೊದಲು ಪ್ರಮಾಣ ಮಾಡು ಅಂದಾಗ ಏಸಾವನು ಪ್ರಮಾಣ ಮಾಡಿ “ಅವನಿಗೆ ತನ್ನ ಚೊಚ್ಚಲತನದ ಹಕ್ಕನ್ನು ಕೊಟ್ಟುಬಿಟ್ಟನು. ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಗುಗ್ಗುರಿಯನ್ನೂ ಕೊಟ್ಟನು.” ( ಆದಿಕಾಂಡ 25:29-34)
ಸ್ವಂತ ಅಣ್ಣನು ಹಸಿವಿನಿಂದಿರುವಾಗ ಅದರ ದುರ್ಲಾಭ ಪಡೆದು, ಆತನ ಚೊಚ್ಚಲುತನದ ಹಕ್ಕನ್ನು ಕಸಿದುಕೊಂಡ ಕ್ರೂರಿಯಂತೆ ಬೈಬಲ್ ಯಾಕೋಬ್ರನ್ನು ಚಿತ್ರಿಸುತ್ತದೆ. ಆದರೆ ಕುರ್ ಆನ್ನ ದೃಷ್ಟಿಯಲ್ಲಿ ಯಾಕೂಬ್ ಕ್ಷಮಾಶಾಲಿಯೂ, ಗೌರವಾರ್ಹನೂ ಪವಿತ್ರನೂ ಆಗಿದ್ದಾರೆ ಬೈಬಲ್ನ ವಿವರಣೆಯಂತೆ ಯಾಕೋಬರ ತಂದೆ ಇಸ್ಹಾಕ್ ಸುಳ್ಳುಗಾರರಾಗಿದ್ದಾರೆ ಸುಳ್ಳುಗಾರರಾಗಿದ್ದಾರೆ. ಇಸ್ಹಾಕ್ ಗೆರಾರಿನಲ್ಲಿ ವಾಸವಾಗಿದ್ದಾಗ ಆ ಸ್ಥಳದ ಜನರು ಅವನ ಹೆಂಡತಿಯನ್ನು ನೋಡಿ ಆಕೆಯ ವಿಷಯದಲ್ಲಿ ವಿಚಾರಿಸಿದಾಗ ಅವನು ರಬೆಕ್ಕಳು ಸುಂದರಿಯಾಗಿರುವುದರಿಂದ ಈ ಸ್ಥಳದ ಜನರು ಈಕೆಯ ನಿಮಿತ್ತ ನನ್ನನ್ನು ಕೊಂದಾರು ಅಂದುಕೊಂಡು ಆಕೆಯನ್ನು ತನ್ನ ಹೆಂಡತಿ ಎಂದು ಹೇಳುವದಕ್ಕೆ ಭಯಪಟ್ಟು ತಂಗಿಯಾಗಬೇಕು ಎಂದು ಹೇಳಿದನು. (ಆದಿಕಾಂಡ 26:6-7)
ಮೋಸ ಹಾಗೂ ವಂಚನೆಯಿಂದ ಯಾಕೂಬ್ ತನ್ನ ತಂದೆಯ ಅನುಗ್ರಹವನ್ನು ಪಡೆದರು ಹಾಗೂ ಹಿರಿಯ ಸಹೋದರ ಏಸಾವನ ಹಕ್ಕನ್ನು ಅನ್ಯಾಯವಾಗಿ ಕಸಿದುಕೊಂಡರು.( ಆದಿಕಾಂಡ:1-38)
ಬೈಬಲ್ನ ವಿವರಣೆಯಂತೆ ಯಾಕೂಬ್ ಪತ್ನಿಯ ತಂದೆ ಲಾಬಾನ್ ಬಹಳ ಅಸೂಯೆಗಾರನೂ, ಪತ್ನಿ ರಫೆಲ್ ವಿಗ್ರಹಾರಾಧಕಿಯೂ ಆಗಿದ್ದರು. (ಆದಿಕಾಂಡ 29:25-30, 31:17-23) ಪ್ರವಾದಿ ಯಾಕೋಬರ ಪುತ್ರಿ ವ್ಯಭಿಚಾರಕ್ಕೊಳಗಾದಳೆಂದು, ಯಹೂದಾ ಮಗನ ಪತ್ನಿಯೊಂದಿಗೆ ವ್ಯಭಿಚಾರ ನಡೆಸಿದನೆಂದು ಬೈಬಲ್ ಹೇಳುತ್ತದೆ. (ಆದಿಕಾಂಡ 38:13-30)
ದೇವಸಂದಶವಾಹಕರಾದ ದಾವಿದ್ ತನ್ನ ದೇಶದ ಸೈನಿಕ ಊರಿಯನ ಪತ್ನಿ ಬತ್ ಶೇಬಳನ್ನು ವ್ಯಭಿಚರಿಸಿದ್ದಾರೆಂದೂ, ಅವಳನ್ನು ಪತ್ನಿಯಾಗಿಸಲು ಊರಿಯನನ್ನು ಯುದ್ಧರಂಗಕ್ಕೆ ಕಳಿಸಿ ಕೊಲ್ಲಿಸಿದ್ದೆಂದೂ ಬೈಬಲ್ ಹೇಳುತ್ತದೆ. (ಶಾಮುವೇಲ್ 11:1-16) ಪ್ರವಾದಿಯಾದ ಸೋಲಮನ್ ದೇವಾಜ್ಞೆಯನ್ನು ಧಿಕ್ಕರಿಸಿ ನಿಷೇಧಿಸಲಾದವರನ್ನು ವಿವಾಹ ಮಾಡಿಕೊಂಡರೆಂದು ಬೈಬಲ್ನಲ್ಲಿ ಕಾಣಬಹುದು. (ಅರಸುಗಳು 11:1-14)
ಗತಪ್ರವಾದಿಗಳ ಕಾಲಾನಂತರ ಅವರ ಅನುಯಾಯಿಗಳು ಪ್ರವಾದಿಗಳ ಬೋಧನೆಗಳಿಂದ ವ್ಯತಿಚಲಿಸಿ, ಪೈಶಾಚಿಕ ದುರ್ಬೋಧನೆಗಳಿಂದ ಆಕರ್ಷಿತರಾಗಿ, ತಮ್ಮ ಅಧಾರ್ಮಿಕತೆಯನ್ನು ಅನೈತಿಕತೆಯನ್ನು ಪ್ರವಾದಿಗಳ ಮೇಲೆ ಆರೋಪಿಸಿ ಅದನ್ನು ವೇದಗ್ರಂಥಗಳಲ್ಲಿ ಸೇರಿಸಿ ಬಿಟ್ಟರು. ಹೀಗೆ ಅಪಭ್ರಂಶಗೊಂಡ ಗತ ವೇದಗ್ರಂಥಗಳ ಮುಂದವರಿದ ಭಾಗವೆಂದು ಪವಿತ್ರ ಕುರ್ ಆನ್ ಕುರಿತು ಸ್ವಲ್ಪವಾದರೂ ಅರಿವಿರುವವರು ಆರೋಪಿಸಲಾರರು. ದೇವ ಸಂದೇಶವಾಹಕರ ಕುರಿತು ಪ್ರಚರಿಸಲಾದ ಕಟ್ಟುಕತೆಗಳನ್ನು ತಿದ್ದಿ ಅವರ ನೈಜತೆಯನ್ನು ಕುರ್ ಆನ್ ಅನಾವರಣಗೊಳಿಸುತ್ತದೆ.
ಆದ್ದರಿಂದಲೇ ಬೈಬಲ್ ಹಲವು ಪ್ರವಾದಿಗಳನ್ನು ವಂಚಕರು, ಮೂರ್ಖರು, ಅನೈತಿಕತೆಯ ವಾಹಕರು, ಕ್ರೂರಿಗಳು, ಸುಳ್ಳುಗಾರರೆಂದು ಆರೋಪಿಸುವಾಗ ಪವಿತ್ರ ಕುರ್ ಆನಿನ ಪ್ರಕಾರ ಅವರು ಯಾವುದೇ ಕಾಲಕ್ಕೂ ಮಾದರಿಯೋಗ್ಯವಾದ ಸದ್ಗುಣ ಸಂಪನ್ನರಾದ ಮಹಾನ್ ವ್ಯಕ್ತಿಗಳಾಗಿದ್ದಾರೆಂದೂ, ಅವರು ಸದಾಕಾಲವೂ ಮಾನವಕುಲದ ಮಾರ್ಗದರ್ಶಕರೆಂದೂ ಬಿಂಬಿಸುತ್ತದೆ.
“ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”
IslamKannada News Portal
