Home / ಲೇಖನಗಳು / ಶಾಂತಿಗಾಗಿ ಸಂಘರ್ಷ : ಪವಿತ್ರ ಕುರ್ ಆನ್ ಧೋರಣೆ (ಪವಿತ್ರ ಕುರ್ ಆನ್ ನ ಯುದ್ಧ ಸಂಬಂಧಿ ವಚನಗಳ ಹಿನ್ನೆಲೆಯಲ್ಲಿ)

ಶಾಂತಿಗಾಗಿ ಸಂಘರ್ಷ : ಪವಿತ್ರ ಕುರ್ ಆನ್ ಧೋರಣೆ (ಪವಿತ್ರ ಕುರ್ ಆನ್ ನ ಯುದ್ಧ ಸಂಬಂಧಿ ವಚನಗಳ ಹಿನ್ನೆಲೆಯಲ್ಲಿ)

 – ಅಬ್ದುಸ್ಸಲಾಮ್ ಪುತ್ತಿಗೆ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಕ್ರೀನ್ ಶಾಟ್ ವ್ಯಾಪಕವಾಗಿ ಹರಿದಾಡುತ್ತಿದೆ. 

ಅನೇಕರು ಗೌರವಿಸುವ ಗ್ರಂಥಗಳ ಬಗ್ಗೆ ಅನೇಕರಿಗೆ ಆಕ್ಷೇಪಗಳಿರುತ್ತವೆ. ಗ್ರಂಥ ಯಾವುದೇ ಇರಲಿ. ಗಂಭೀರವಾಗಿ ಅಧ್ಯಯನ ಮಾಡಿ ಪ್ರಾಮಾಣಿಕವಾಗಿ ಆಕ್ಷೇಪಗಳನ್ನು ದಾಖಲಿಸುವುದು ಮತ್ತು ಆ ಕುರಿತು ಚರ್ಚೆ, ಸಂವಾದಗಳನ್ನು ದಾಖಲಿಸುವುದು ಸ್ವಾಗತಾರ್ಹ. ಏಕೆಂದರೆ ಇಂತಹ ಚಟುವಟಿಕೆಗಳು ಗೌರವಾನ್ವಿತ ಗ್ರಂಥಗಳನ್ನು ನಿಗೂಢತೆಯ ಲೋಕದಿಂದ ಹೊರಗೆಳೆದು ತರುತ್ತವೆ. ಆ ವರೆಗೆ ಅವುಗಳನ್ನು ಓದಿಲ್ಲದವರು ಓದುವುದಕ್ಕೆ ಮತ್ತು ಅರಿತಿಲ್ಲದವರು ಅರಿಯುವುದಕ್ಕೆ ಕಾರಣವಾಗುತ್ತದೆ. ಪ್ರಶಂಸೆಯಾಗಲಿ ವಿಮರ್ಶೆಯಾಗಲಿ ಅಜ್ಞಾನದ ಫಲಿತಾಂಶವಾಗಿರದೆ ಅರಿವು ಮತ್ತು ಅಧ್ಯಯನದ ಫಲಶ್ರುತಿಯಾಗಿದ್ದರೆ, ಅಂತಹ ಪ್ರಶಂಸೆ ಮತ್ತು ವಿಮರ್ಶೆಗಳೆರಡೂ ಹೆಚ್ಚು ಪ್ರೌಢ ಹಾಗೂ ಗಹನವಾದ ಅಧ್ಯಯನ ಮತ್ತು ಸಂಶೋಧನೆಗಳಿಗೆ ಹೇತುವಾಗುತ್ತದೆ.

ಉದಾಹರಣೆಗೆ ಭಗವದ್ಗೀತೆಯನ್ನೇ ತೆಗೆದುಕೊಳ್ಳಿ. ಅದನ್ನು ನಂಬುವವರಲ್ಲಿ ಕೂಡಾ ಅದನ್ನು ಸರಿಯಾಗಿ ತಿಳಿದಿರುವವರ ಸಂಖ್ಯೆ ತೀರಾ ಸೀಮಿತವಾಗಿರುತ್ತದೆ. ಹೆಚ್ಚಿನವರಿಗೆ ಭಗವದ್ಗೀತೆಯ ಪ್ರಥಮ ಪರಿಚಯವಾಗುವುದು, ಹಲವೆಡೆ ಕಂಡು ಬರುವ ಗೀತೋಪದೇಶದ ಅಲಂಕೃತ ಚಿತ್ರಗಳ ಮೂಲಕ. ಗೀತೋಪದೇಶ ನಡೆದ ಕಾಲದಲ್ಲಿ ಕ್ಯಾಮರಾಗಳು ಇರಲಿಲ್ಲವಾದ್ದರಿಂದ ಜನರಿಗೆ ಆ ದೃಶ್ಯವನ್ನು ತಮ್ಮ ಮನದಲ್ಲಿ ಮೂಡಿಸಿಕೊಳ್ಳಲು ಕಲಾವಿದರು ನೆರವಾಗುತ್ತಾರೆ. ಒಂದೇ ಸನ್ನಿವೇಶವನ್ನು ಚಿತ್ರಿಸುವಾಗ ಬೇರೆ ಬೇರೆ ಕಾಲ ಮತ್ತು ಪ್ರದೇಶಗಳ ಕಲಾವಿದರು ಸಹಜವಾಗಿಯೇ, ತಮ್ಮದೇ ಆದ ಕಾಲ್ಪನಿಕ ಹಾಗೂ ಕಲಾತ್ಮಕ ಅಭಿರುಚಿ ಹಾಗೂ ಸೃಜನಶೀಲತೆಗನುಸಾರ ವಿಶಿಷ್ಟ ರೀತಿಯಲ್ಲಿ ಚಿತ್ರಿಸುತ್ತಾರೆ. ಆದರೆ ಕೆಲವು ಅಂಶಗಳು ಗೀತೋಪದೇಶದ ಎಲ್ಲ ಚಿತ್ರಗಳಲ್ಲೂ ಬಹುತೇಕ ಸಮಾನವಾಗಿರುತ್ತವೆ. ಒಂದು ಯುದ್ಧ ರಂಗದಲ್ಲಿ ಎರಡು ದೊಡ್ಡ ಶಸ್ತ್ರಸಜ್ಜಿತ ಸೇನೆಗಳು ಮುಖಾಮುಖಿಯಾಗಿ ನಿಂತಿವೆ. ಪ್ರಸ್ತುತ ಎರಡು ಮಾನವ ಸೇನೆಗಳ ನಡುವೆ ದೇವನೊಬ್ಬ ನಿಂತು ಒಬ್ಬ ಯೋಧನಿಗೆ ಏನನ್ನೋ ಉಪದೇಶಿಸುತ್ತಿದ್ದಾನೆ. ಆತ ಏನನ್ನು ಉಪದೇಶಿಸುತ್ತಾನೆ ಎಂಬ ಕುರಿತು ಚಿತ್ರವನ್ನು ನೋಡುವವರ ಊಹೆಯು ಅವರವರ ಅರಿವು ಮತ್ತು ಒಲವುಗಳನ್ನು ಅವಲಂಬಿಸಿರುತ್ತದೆ. ಮಾನವರ ನಡುವೆ ಜಗಳ ಪುರಾಣ ಕಾಲದಲ್ಲಿ ಹಾಗೂ ಇತಿಹಾಸದುದ್ದಕ್ಕೂ ನಡೆದಿದೆ. ಪುರಾಣ ಮತ್ತು ಇತಿಹಾಸದಲ್ಲಿ ಬೇರೆ ಹಲವೆಲ್ಲಾ ಘಟನೆಗಳು ನಡೆದಿದ್ದರೂ ಬರೆಯುವವರಲ್ಲಿ ಮತ್ತು ದಾಖಲಿಸುವವರಲ್ಲಿ ಹೆಚ್ಚಿನವರು ಯುದ್ಧಗಳನ್ನೇ ಪ್ರಧಾನ ವಸ್ತುವಾಗಿಸಿ ಬರೆದಿದ್ದಾರೆ. ಆದ್ದರಿಂದ ಜನರಿಗೆ ಯುದ್ಧ ಅಷ್ಟೇನೂ ಅಸಾಮಾನ್ಯವಲ್ಲ. ಆದರೆ ಗೀತೋಪದೇಶದ ಚಿತ್ರದಲ್ಲಿ, ಯುದ್ಧ ಸನ್ನದ್ಧ ಮಾನವರ ನಡುವೆ ದೇವರನ್ನು ಕಂಡವನು, ಬಹುಶಃ ಆ ದೇವರು ಯುದ್ಧವನ್ನು ನಿಲ್ಲಿಸಲು ಅಥವಾ ನಿವಾರಿಸಲು ಉಪದೇಶ ನೀಡುತ್ತಿರಬಹುದು ಎಂದು ಊಹಿಸುವುದು ಸಹಜ. ಸಮಸ್ಯೆ ಏನಿದ್ದರೂ ಮಾತುಕತೆಯಿಂದ ಬಗೆಹರಿಸೋಣ, ರಕ್ತಪಾತ ಬೇಡವೇ ಬೇಡ ಎಂಬುದು ಆ ಸನ್ನಿವೇಶದ ಉಪದೇಶ ಎಂದು ಯಾರಾದರೂ ಮುಗ್ಧವಾಗಿ ಊಹಿಸಿದರೆ ಅಚ್ಚರಿಯೂ ಇಲ್ಲ.

ಆದರೆ ಗೀತೋಪದೇಶದ ಹಿನ್ನೆಲೆ ಹಾಗೂ ಭಗವದ್ಗೀತೆಯ ಆಶಯದ ಕುರಿತು ಪ್ರಾಥಮಿಕ ಜ್ಞಾನವಾದರೂ ಉಳ್ಳವರಿಗೆ ಈ ಬಗೆಯಲ್ಲಿ ಊಹಿಸುವವರ ಪೆದ್ದುತನ ಕಂಡು ನಗು ಉಕ್ಕುತ್ತದೆ. ಶ್ರೀಕೃಷ್ಣನು ಗೀತೋಪದೇಶದ ಮೂಲಕ ಅರ್ಜುನನನ್ನ ಯುದ್ಧಕ್ಕೆ ಸಜ್ಜುಗೊಳಿಸಿದ್ದೇ ಹೊರತು ಅವನಿಗೆ ಸಾಂತ್ವನ ಹೇಳಿದ್ದಲ್ಲ ಎಂದು ಅವರು ಸಮಜಾಯಿಸಲು ಶ್ರಮಿಸುತ್ತಾರೆ.

ಪ್ರಖ್ಯಾತ ಇಸ್ಕಾನ್ (ISKCON) ಸಂಸ್ಥೆಯವರು ಭಗವದ್ಗೀತೆಯ ಕುರಿತು ತಮ್ಮ ತಿಳುವಳಿಕೆಯನ್ನು ಜಗತ್ತಿನವರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ 1968 ರಲ್ಲಿ ‘The Bhagavad-Gītā As It Is’ (ಭಗವದ್ಗೀತೆ – ಇದ್ದಕ್ಕಿದ್ದಂತೆ) ಎಂಬ ಹೆಸರಲ್ಲಿ, ಆಂಗ್ಲ ಭಾಷೆಯಲ್ಲಿ ಅದರ ತರ್ಜುಮೆ ಮತ್ತು ಸರಳ ಭಾಷ್ಯವನ್ನು ಪ್ರಕಟಿಸಿದ್ದರು. ಇಸ್ಕಾನ್ ಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ರಚಿಸಿದ ಈ ಕೃತಿ ವ್ಯಾಪಕ ಜನಪ್ರಿಯತೆ ಪಡೆಯಿತು. ಈಗಾಗಲೇ ಅದು ಸುಮಾರು 60 ಭಾಷೆಗಳಲ್ಲಿ ಪ್ರಕಟವಾಗಿದೆ.

2011 ರಲ್ಲಿ ರಶ್ಯಾದ ಟಾಮ್ಸ್ಕ್ (Tomsk) ಪ್ರಾಂತ್ಯದ ನ್ಯಾಯಾಲಯದಲ್ಲಿ ಈ ಕೃತಿಯ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಒಂದು ಮೊಕದ್ದಮೆ ಹೂಡಲಾಗಿತ್ತು. ಟಾಮ್ಸ್ಕ್ ಸ್ಟೇಟ್ ಯೂನಿವರ್ಸಿಟಿಯ ಕೆಲವು ವಿದ್ವಾಂಸರು ತಮ್ಮ ಅಧ್ಯಯನದ ಆಧಾರದಲ್ಲಿ, ಪ್ರಭುಪಾದ ಅವರ ಭಾಷ್ಯವು ಮತೀಯ ತೀವ್ರವಾದವನ್ನು ಮತ್ತು ಅಸಹಿಷ್ಣುತೆಯನ್ನು ಪ್ರೋತ್ಸಾಹಿಸುತ್ತದೆ ಎಂದು ವಾದಿಸಿದ್ದರು. ಅವರ ವಾದಗಳನ್ನೇ ಬುನಾದಿಯಾಗಿಸಿ ಅರ್ಜಿದಾರರು ಪ್ರಸ್ತುತ ಗ್ರಂಥವನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದರು. ಈ ಅರ್ಜಿಯ ವಿಚಾರಣೆ ಆರಂಭವಾದೊಡನೆ ಭಾರತದಲ್ಲಿ ಹಲವೆಡೆ ಅದರ ವಿರುದ್ಧ ಪ್ರತಿಭಟನೆ ನಡೆಯಿತು. ಭಾರತ ಸರಕಾರ ಕೂಡ ಈ ಕುರಿತು ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿತು. ಪ್ರಸ್ತುತ ಅರ್ಜಿಯನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಭಾರತ ಸರಕಾರವು ರಶ್ಯಾದ ರಾಜತಾಂತ್ರಿಕರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನೂ ನಡೆಸಿತು. ಆ ವರ್ಷ ಡಿಸೆಂಬರ್ ನಲ್ಲಿ ನ್ಯಾಯಾಧೀಶರು ಪ್ರಸ್ತುತ ಅರ್ಜಿಯನ್ನು ವಜಾಗೊಳಿಸಿದರು. ಈ ತೀರ್ಪನ್ನು ಪ್ರಶ್ನಿಸಿ 2012 ಜನವರಿಯಲ್ಲಿ ಇನ್ನೊಂದು ಅರ್ಜಿ ಸಲ್ಲಿಸಲಾಯಿತು. ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಆ ಅರ್ಜಿಯನ್ನು ಕೂಡಾ ವಜಾಗೊಳಿಸಲಾಯಿತು. ಈ ರೀತಿ ಒಂದು ಧಾರ್ಮಿಕ ಗ್ರಂಥದ ಮೇಲೆ ನಿಷೇಧ ಹೇರುವ ಶ್ರಮವನ್ನು, ಆ ಗ್ರಂಥದ ಅನುಯಾಯಿಗಳು ಮಾತ್ರವಲ್ಲ, ಭಗವದ್ಗೀತೆಯ ವಿಷಯದಲ್ಲಿ ತೀವ್ರ ಸ್ವರೂಪದ ತಾತ್ವಿಕ ಭಿನ್ನಾಭಿಪ್ರಾಯವಿರುವ ವಿವಿಧ ಧಾರ್ಮಿಕ, ಎಡಪಂಥೀಯ ಹಾಗೂ ವಿಚಾರವಾದಿ ವಲಯಗಳ ಸಹಿತ ಹೆಚ್ಚಿನವರೆಲ್ಲಾ ವಿರೋಧಿಸಿದ್ದರು.

ತೀರಾ ಇತ್ತೀಚಿಗೆ ಫಿನ್ ಲಾಂಡ್ ನಲ್ಲಿ ಒಂದು ಮೊಕದ್ದಮೆ ನಡೆಯಿತು. ಅಲ್ಲಿನ ಓರ್ವ ಹಿರಿಯ ಸಂಸದೆ ಪೈವಿ ರಸಾನೆನ್, ತಮ್ಮ ಒಂದು ಟ್ವೀಟ್ ಸಂದೇಶದಲ್ಲಿ ಸಲಿಂಗ ಕಾಮವನ್ನು ಖಂಡಿಸುತ್ತಾ ಆ ಕುರಿತು ಬೈಬಲ್ ನ ವಚನಗಳನ್ನು ಉದ್ಧರಿಸಿದ್ದರು. ಅದಕ್ಕಾಗಿ ಅವರ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು. 2022 ಮಾರ್ಚ್ ಕೊನೆಯ ದಿನ ಪ್ರಕಟವಾದ ತೀರ್ಪಿನಲ್ಲಿ, ಬೈಬಲ್ ಗ್ರಂಥವನ್ನು ನಂಬುವವರಿಗೆ ಅದರ ಉಪದೇಶಗಳನ್ನು ಪ್ರಸ್ತಾಪಿಸುವ ಅಧಿಕಾರ ಇದೆ ಎಂದು ಸ್ಪಷ್ಟಪಡಿಸಿ, ಪ್ರಸ್ತುತ ಸಂಸದೆಯನ್ನು ನಿರ್ದೋಷಿ ಎಂದು ಘೋಷಿಸಲಾಯಿತು.

1985 ರಲ್ಲಿ ಕೊಲ್ಕತ್ತಾ ಹೈಕೋರ್ಟ್ ನಲ್ಲಿ ಒಂದು ರಿಟ್ ಅರ್ಜಿ ಸಲ್ಲಿಸಿ, ಕುರ್ ಆನ್ ನಲ್ಲಿ ಹಿಂಸೆಯನ್ನು ಪ್ರಚೋದಿಸುವ ಹಲವು ವಚನಗಳು ಇರುವುದರಿಂದ ಆ ಗ್ರಂಥವನ್ನೇ ನಿಷೇಧಿಸಬೇಕೆಂದು ಮನವಿ ಮಾದಲಾಗಿತ್ತು. ಕೋರ್ಟು ಪ್ರಸ್ತುತ ಅರ್ಜಿಯನ್ನು ತಿರಸ್ಕರಿಸಿತ್ತು. ಮುಂದೆ ಕೋರ್ಟಿನ ತೀರ್ಪನ್ನು ಮರುಪರೀಲಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿಯನ್ನು ಕೂಡ ತಿರಸ್ಕರಿಸಲಾಗಿತ್ತು.

ಕಳೆದ ವರ್ಷ (2021) ಸಯ್ಯದ್ ವಸೀಮ್ ರಜ್ವಿ ಎಂಬ ಒಬ್ಬ ವ್ಯಕ್ತಿ (ಮುಂದೆ ಆತ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಎಂದು ತನ್ನ ಹೆಸರನ್ನು ಬದಲಿಸಿಕೊಂಡರು) ಸುಪ್ರೀಮ್ ಕೋರ್ಟ್ ನಲ್ಲಿ ಒಂದು ಅರ್ಜಿ ಸಲ್ಲಿಸಿ, ಕುರ್ ಆನ್ ನಲ್ಲಿರುವ 26 ನಿರ್ದಿಷ್ಟ ವಾಕ್ಯಗಳನ್ನು ಕಿತ್ತು ಹಾಕಬೇಕೆಂದು ಮನವಿ ಮಾಡಿದರು. ಜಸ್ಟಿಸ್ ಆರ್. ಎಫ್ ನಾರಿಮನ್ ನೇತೃತ್ವದ ಪೀಠವು ಆತನ ಅರ್ಜಿಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಅದನ್ನು ತೀರಾ ಅವಿವೇಕದ ಅರ್ಜಿ ಎಂದು ಕರೆದು, ಆತನ ಮೇಲೆ 50 ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಿತು.

ಹೀಗೆ, ಧರ್ಮಗ್ರಂಥಗಳ ವಿರುದ್ಧ ಅಭಿಯಾನ ಅಲ್ಲಲ್ಲಿ ಬೇರೆ ಬೇರೆ ರೂಪಗಳಲ್ಲಿ ನಡೆಯುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಿಶೇಷವಾಗಿ ಕುರ್ ಆನ್ ಗ್ರಂಥದ ವಿರುದ್ಧ ವ್ಯಾಪಕ ಅಪಪ್ರಚಾರ ಆರಂಭವಾಗಿದೆ. ಸತ್ಯವನ್ನು ದ್ವೇಷಿಸುವವರು ಮತ್ತು ಸತ್ಯವು ಬೆಳಕಿಗೆ ಬಂದರೆ ತಮಗೆ ಉಳಿಗಾಲವಿಲ್ಲ ಎಂಬುದನ್ನು ಮನಗಂಡವರು ಇದೀಗ ಸುಳ್ಳಿನ ಲೋಕದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಂತಹ ಮಂದಿ ಪವಿತ್ರ ಕುರ್ ಆನ್ ಗ್ರಂಥ ಮತ್ತು ಪ್ರವಾದಿ ಮುಹಮ್ಮದ್ (ಸ) ರ ಜೀವನದ ಕುರಿತು ಕೆಲವು ಸುಳ್ಳುಗಳನ್ನು ಪ್ರಚಾರ ಮಾಡಿದ್ದಾರೆ, ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಸತ್ಯಪ್ರೇಮಿಗಳ ನೆರವಿಗಾಗಿ ಇಲ್ಲಿ ಕೆಲವು ಖಚಿತ ವಾಸ್ತವಗಳನ್ನು ಮುಂದಿಡಲಾಗಿದೆ:

ಪ್ರವಾದಿ ಮುಹಮ್ಮದ್ (ಸ) ರ ಕುರಿತು ಅವರೊಬ್ಬ ಯುದ್ಧಕೋರರಾಗಿದ್ದರು ಮತ್ತು ಅವರ ಬದುಕೆಲ್ಲಾ ಯುದ್ಧಗಳಲ್ಲೇ ಕಳೆಯಿತು ಎಂಬಂತೆ ಚಿತ್ರಿಸುವ ಪ್ರಯತ್ನ ಕೆಲವು ವಲಯಗಳಲ್ಲಿ ವ್ಯಾಪಕವಾಗಿ ನಡೆದಿದೆ. ಅವರು ಕ್ರಿ.ಶ 570 ರಲ್ಲಿ ಜನಿಸಿ 632 ರಲ್ಲಿ ನಿಧನರಾದರು. ಅವರ ಬದುಕಿನ ಕೊನೆಯ 23 ವರ್ಷಗಳ ಅವಧಿಯಲ್ಲಿ ದಿವ್ಯ ಮಾರ್ಗದರ್ಶನವು ಪವಿತ್ರ ಕುರ್ ಆನ್ ನ ವಚನಗಳ ರೂಪದಲ್ಲಿ ಅನಾವರಣಗೊಂಡವು. ಪ್ರಸ್ತುತ 23 ವರ್ಷಗಳ ಅವಧಿಯಲ್ಲಿ ಪ್ರವಾದಿವರ್ಯರ ಅನುಯಾಯಿಗಳು ಮತ್ತು ಅವರ ವಿರೋಧಿಗಳ ನಡುವೆ ಹಲವು ಘರ್ಷಣೆಗಳು ನಡೆದವು. ಈ ಕುರಿತು ಸಂಶೋಧನೆಗಳನ್ನು ನಡೆಸಿದವರು ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಪ್ರಸ್ತುತ ಅವಧಿಯಲ್ಲಿ ಸುಮಾರು 80 ರಷ್ಟು ಸೈನಿಕ ಕಾರ್ಯಾಚರಣೆಗಳು ನಡೆದಿದ್ದವು. ಆ ಪೈಕಿ 20 ಕಾರ್ಯಾಚರಣೆಗಳಲ್ಲಿ ನಿಜವಾದ ಸಶಸ್ತ್ರ ಘರ್ಷಣೆಗಳು ನಡೆದಿದ್ದವು. ಈ ಎಲ್ಲ ಸಂಘರ್ಷಗಳಲ್ಲಿ ಆಹುತಿಯಾದ ಮಾನವ ಜೀವಗಳ ಸಂಖ್ಯೆ 1018. ಅವರಲ್ಲಿ 259 ಮಂದಿ ಮುಸ್ಲಿಮ್ ಯೋಧರು ಮತ್ತು 759 ಮಂದಿ ವಿರೋಧಿ ಪಾಳಯದ ಯೋಧರು.

ಮಾನವೀಯ ಸಂಬಂಧಗಳ ಕುರಿತಾಗಿ ಇಸ್ಲಾಮ್ ಧರ್ಮವು ತಾಳಿರುವ ನಿಲುವು ಬಹಳ ವಿಶಾಲ ಸ್ವರೂಪದ್ದಾಗಿದೆ. ಈ ವಿಷಯದಲ್ಲಿ ಅದು, ಎಲ್ಲ ಕಾಲ ಮತ್ತು ದೇಶಗಳ ಪಾಲಿಗೆ ಅನುಕರಣೀಯವಾದ ಒಂದು ಸವಿಸ್ತಾರ ನೀತಿ ಸಂಹಿತೆಯನ್ನು ಮುಂದಿಡುತ್ತದೆ. ನ್ಯಾಯ ಪಾಲನೆ ಮತ್ತು ಶಾಂತಿ ಸ್ಥಾಪನೆಗೆ ಅಪಾರ ಮಹತ್ವ ನೀಡುವ ಇಸ್ಲಾಮ್ ಧರ್ಮವು ಆ ಉದ್ದೇಶಕ್ಕಾಗಿ ಮಾತ್ರ ಯುದ್ಧವನ್ನು ಅನುಮತಿಸಿದೆ. ಖಂಡಿತವಾಗಿಯೂ ಯುದ್ಧ ಎಂಬುದು ಇಸ್ಲಾಮ್ ಧರ್ಮದ ಸಮಗ್ರ ಧೋರಣೆಯ ಭಾಗವಾಗಿ ಅನುಮತಿಸಲಾಗಿರುವ ಒಂದು ಸಣ್ಣ ಉಪಕ್ರಮವೇ ಹೊರತು ಅದರ ಪ್ರಧಾನ ಧೋರಣೆಯಂತೂ ಖಂಡಿತ ಅಲ್ಲ. ನಿಜವಾಗಿ ಮಾನವರ ನಡುವೆ ಯುದ್ಧ ಮತ್ತು ಘರ್ಷಣೆಗಳು ನಡೆಯುವುದನ್ನು ನಿವಾರಿಸುವುದು ಮತ್ತು ಮಾನವ ಸಮಾಜದಲ್ಲಿ ಎಲ್ಲ ಬಗೆಯ ಭಿನ್ನತೆಗಳ ಹೊರತಾಗಿಯೂ ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ವಾತಾವರಣವನ್ನು ಸ್ಥಾಪಿತವಾಗಿಡುವುದೇ ಇಸ್ಲಾಮಿನ ತತ್ವ ಸಿದ್ಧಾಂತಗಳ ಪ್ರಮುಖ ಆಶಯವಾಗಿದೆ. ಇಷ್ಟಿದ್ದೂ ಕೆಲವು ವಲಯಗಳು ಇಸ್ಲಾಮ್ ಧರ್ಮ ಹಿಂಸೆಯನ್ನು ಪ್ರೋತ್ಸಾಹಿಸುವ ಧರ್ಮ ಎಂಬ ಅಪ್ಪಟ ಸುಳ್ಳನ್ನು ಸೃಷ್ಟಿಸಿ ಪ್ರಚಾರ ಮಾಡುವ ಶ್ರಮದಲ್ಲಿ ನಿರತವಾಗಿರುವುದು ಒಂದು ದುರಂತವೇ ಸರಿ.

ಇತ್ತೀಚಿಗೆ ಕೆಲವರು ಪವಿತ್ರ ಕುರ್ ಆನ್ ಗ್ರಂಥವನ್ನು ಗುರಿಯಾಗಿಟ್ಟು ಅಪಪ್ರಚಾರದ ವ್ಯಾಪಕ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಅವರು ಕುರ್ ಆನ್ ಹಿಂಸೆಯನ್ನು ಪ್ರತಿಪಾದಿಸುವ ಗ್ರಂಥ ಎಂದು ಸಾಬೀತು ಪಡಿಸುವ ತಮ್ಮ ಹತಾಶ ಶ್ರಮದ ಭಾಗವಾಗಿ ಭಾರೀ ಹುಡುಕಾಟ ನಡೆಸಿದ್ದಾರೆ. ಪ್ರಾಮಾಣಿಕತೆ, ವಸ್ತು ನಿಷ್ಠೆ ಇತ್ಯಾದಿಯನ್ನೆಲ್ಲ ತುಂಬಾ ದೂರವಿಟ್ಟು, ಕೇವಲ ತಪ್ಪು ಹುಡುಕುವ ದುರುದ್ದೇಶದಿಂದಲೇ ಭೂತ ಕನ್ನಡಿ, ಸೂಕ್ಷ್ಮ ದರ್ಶಕ ಇತ್ಯಾದಿ ಹಿಡಿದು, ತಮ್ಮದೇ ನೆಚ್ಚಿನ ಬಣ್ಣದ ಕನ್ನಡಕ ಧರಿಸಿಕೊಂಡು ಅವರು ಕುರ್ ಆನ್ ಅನ್ನು ಧಾರಾಳ ಜಾಲಾಡಿದ್ದಾರೆ. ಇಷ್ಟಾಗಿಯೂ ತಮಗೆ ಬೇಕಾದ ಹಿಂಸೆಯ ವಚನಗಳು ಸಿಗದೇ ಇದ್ದಾಗ ಶಾಂತಿ ಮತ್ತು ನ್ಯಾಯ ಪ್ರತಿಪಾದಿಸುವ ವಚನೆಗಳನ್ನೇ ಹೆಕ್ಕಿ, ತಿರುಚಿ, ವಿಕೃತಗೊಳಿಸಿ ತಮ್ಮ ಇಷ್ಟಾನುಸಾರ ಅವುಗಳನ್ನು ವ್ಯಾಖ್ಯಾನಿಸಿ ನಗೆಪಾಟಲಿಗೆ ಈಡಾಗಿದ್ದಾರೆ.

ಜಾಗತಿಕ ಭೂಪಟದ ಪೂರ್ವ ಭಾಗದಲ್ಲಿ ಈ ತರದ ಕಸರತ್ತು ಆರಂಭವಾದದ್ದು ಹೆಚ್ಚೆಂದರೆ ಒಂದು ಶತಮಾನದ ಹಿಂದೆ. ಅತ್ತ ಪಶ್ಚಿಮದಲ್ಲಿ ಹಲವು ಶತಮಾನಗಳ ಹಿಂದೆಯೇ ಈ ಕುರಿತು ಗಹನವಾದ ಗಂಭೀರ ಸಂಶೋಧನೆಗಳೆಲ್ಲ ನಡೆದು ಮುಗಿದಿವೆ. ಹಲವು ಸಂಶೋಧಕರು ಈ ತಮ್ಮ ಸಂಶೋಧನೆ ಮುಗಿಯುವಷ್ಟರಲ್ಲಿ ಕುರ್ ಆನಿನ ಕಟ್ಟಾ ಅಭಿಮಾನಗಳಾಗಿ ಮಾರ್ಪಟ್ಟು, ಅದು ಜಗತ್ತಿನ ಬೇರಾವುದೇ ಗ್ರಂಥಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಸಾರ್ವತ್ರಿಕ ಶಾಂತಿ ಮತ್ತು ನ್ಯಾಯವನ್ನು ಪ್ರತಿಪಾದಿಸುವ ಗ್ರಂಥವೆಂದು ವಾದಿಸಿದ್ದೂ ಇದೆ. ಇನ್ನು, ಕುರ್ ಆನ್ ಮೇಲೆ ಸುಳ್ಳಾರೋಪ ಹೊರಿಸಲೇಬೇಕೆಂಬ ದೃಢ ನಿರ್ಧಾರ ಮಾಡಿ ಹುಡುಕಲು ಹೊರಟವರಿಗೂ ಅದರಲ್ಲಿನ ಆರು ಸಾವಿರದ ಇನ್ನೂರಕ್ಕೂ ಮಿಕ್ಕಿದ ವಚನಗಳ ಪೈಕಿ, ಹಿಂಸಾತ್ಮಕ, ಹಿಂಸೆ ಪ್ರಚೋದಕ, ಹಿಂಸೆ ಸಮರ್ಥಕ ಎಂದೆಲ್ಲಾ ಹೆಸರಿಸಲು ಸಿಕ್ಕಿದ್ದು ಹೆಚ್ಚೆಂದರೆ 50 ವಚನಗಳು ಮಾತ್ರ. ಈ ರೀತಿ ಪರ್ವತ ಅಗೆದು ಚಿಕ್ಕಾಸು ಕೂಡಾ ದಕ್ಕದಾಗ ಕೆಲವರು ಹತಾಶರಾಗಿ ಹಿಂಸೆಯೊಂದಿಗೆ ಯಾವ ಸಂಬಂಧವೂ ಇಲ್ಲದ ವಚನಗಳನ್ನೂ ತಮ್ಮ ಕುರುಡು ಪಟ್ಟಿಗೆ ಸೇರಿಸಿ ಪಟ್ಟಿಯನ್ನು ದೀರ್ಘಗೊಳಿಸುತ್ತಾ ಸಾಗಿದ್ದೂ ಇದೆ. ಅಂತಹ ಇಲಾಸ್ಟಿಕ್ ಪಟ್ಟಿಗಳನ್ನು ನಾವು ನೋಡಿದರೆ ಅಲ್ಲೂ ಹೆಚ್ಚೆಂದರೆ ನೂರು ವಚನಗಳು ಕಾಣಲು ಸಿಗುತ್ತವೆ.

ಜಗತ್ತಿನ ಎಲ್ಲ ಸಮಾಜಗಳಲ್ಲೂ ಸಾಮಾನ್ಯ ಸನ್ನಿವೇಶಗಳಿಗಾಗಿ ಒಂದಷ್ಟು ನಿಯಮಗಳಿರುತ್ತವೆ. ಆ ನಿಯಮಗಳೇ ಸಾಮಾಜಿಕ ವ್ಯವಸ್ಥೆಯ ತಳಹದಿಗಳಾಗಿರುತ್ತವೆ. ಆದರೆ ಅದೇ ವೇಳೆ, ಎಲ್ಲ ಸಮಾಜಗಳಲ್ಲೂ ಅಸಾಮಾನ್ಯ ಪರಿಸ್ಥಿತಿಗಳನ್ನು ಮತ್ತು ಸನ್ನಿವೇಶಗಳನ್ನು ನಿಭಾಯಿಸುವುದಕ್ಕಾಗಿ ಬೇರೆಯೇ ಕೆಲವು ವಿಶೇಷ ನಿಯಮಗಳಿರುತ್ತವೆ. ತೀರಾ ಅನಿವಾರ್ಯವಾದಾಗ ಆ ನಿಯಮಗಳನ್ನು ಬಳಸಲಾಗುತ್ತದೆ.

ಯಾವುದೇ ಸಮಾಜದಲ್ಲಿ ಎಲ್ಲರೂ ಕಳ್ಳರಾಗಿರುವುದಿಲ್ಲ. ಕೇವಲ ಕೆಲವರು ಮಾತ್ರ ಕೆಲವೊಮ್ಮೆ ಕಳ್ಳತನಕ್ಕೆ ಇಳಿಯುತ್ತಾರೆ. ಅದೇ ರೀತಿ ಕೆಲವರು ಕೆಲವೊಮ್ಮೆ ವಂಚನೆ, ಕೊಳ್ಳೆ, ದರೋಡೆ, ಅತ್ಯಾಚಾರ ಮಾತ್ರವಲ್ಲ, ಕೊಲೆಯಂತಹ ಅಪರಾಧಗಳನ್ನೂ ಮಾಡುತ್ತಾರೆ. ಕೆಲವರಂತೂ ಇಂತಹ ಅಪರಾಧಗಳನ್ನು ಪದೇ ಪದೇ ಮಾಡುತ್ತಾರೆ. ಇಂತಹ ಪ್ರಕರಣಗಳು ನಡೆದಾಗಲೆಲ್ಲಾ ಕೇವಲ ಕ್ಷಮೆ, ಔದಾರ್ಯದಂತಹ ಸಾಮಾನ್ಯ ನಿಯಮಗಳನ್ನು ಮಾತ್ರ ಬಳಸಿದರೆ ಸಾಕೆಂದುಕೊಂಡು, ಅಪರಾಧಿಗಳನ್ನು ದಂಡಿಸುವುದಕ್ಕಾಗಿರುವ ವಿಶೇಷ ನಿಯಮಗಳನ್ನು ಬಳಸದೆ ಬಿಟ್ಟರೆ ಯಾವುದೇ ಸಮಾಜದ ಗತಿ ಏನಾದೀತು?

ತಾವು ಅಹಿಂಸೆಯ ಪರಮೋಚ್ಚ ಪ್ರಕಾರವನ್ನು ನಂಬಿ ಆಚರಿಸುವವರು ಎಂದು ಹೇಳಿಕೊಳ್ಳುವವರೇ ಅತ್ಯಧಿಕ ಸಂಖ್ಯೆಯಲ್ಲಿರುವ ಮತ್ತು ಅವರದೇ ಆಡಳಿತ ಇರುವ ಸಮಾಜಗಳಲ್ಲೂ ದಂಡ ಸಂಹಿತೆಗಳಿರುತ್ತವೆ. ಅಲ್ಲೂ ಪೊಲೀಸ್ ಠಾಣೆಗಳಿರುತ್ತವೆ. ಸಶಸ್ತ್ರ ಆಂತರಿಕ ಭದ್ರತಾ ಪಡೆಗಳಿರುತ್ತವೆ. ಜೈಲುಗಳು ಇರುತ್ತವೆ. ಅಪರಾಧಿಗಳನ್ನು ನಿಯಂತ್ರಿಸುವುದಕ್ಕಾಗಿ ಮತ್ತು ಅವರನ್ನು ದಂಡಿಸುವುದಕ್ಕಾಗಿ ಪ್ರತ್ಯೇಕ ಇಲಾಖೆಗಳು ಮತ್ತು ಸವಿಸ್ತಾರವಾದ ಕಾನೂನು ಸಂಹಿತೆಗಳೆಲ್ಲಾ ಇರುತ್ತವೆ. ಗಡಿಯಾಚೆಯಿಂದ ಬರಬಹುದಾದ ಅಪಾಯಗಳನ್ನು ಎದುರಿಸಲು ಭೂ ಸೇನೆ, ನೌಕಾ ಪಡೆ, ವಾಯುಪಡೆ ಇತ್ಯಾದಿಗಳಿರುತ್ತವೆ. “ಒಂದು ಕೆನ್ನೆಗೆ ಹೊಡೆದವನಿಗೆ ಇನ್ನೊಂದು ಕೆನ್ನೆ ತೋರಿಸಬೇಕು” ಎಂಬ ಆದರ್ಶ ನೀತಿ ವ್ಯಕ್ತಿಗತ ಸನ್ನಿವೇಶಗಳಲ್ಲಿ ಖಂಡಿತ ಫಲಪ್ರದವಾಗುತ್ತದೆ. ಆದರೆ ಯಾರಾದರೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ತರಗಳಲ್ಲಿ ಈ ನೀತಿಯನ್ನು ನೆಚ್ಚಿಕೊಂಡರೆ ಅದು ತೀರಾ ಉತ್ಪ್ರೇಕ್ಷಿತ ಮತ್ತು ಅಪ್ರಾಯೋಗಿಕ ಆದರ್ಶವಾದ ಎನಿಸಿಕೊಳ್ಳುತ್ತದೆ. ಆದ್ದರಿಂದಲೇ ಅಂತಹ ತತ್ವವನ್ನು ಜಗತ್ತಿಗೆಲ್ಲಾ ಬೋಧಿಸುವವರು ಕೂಡಾ ತಮ್ಮ ಮನೆಯಲ್ಲಿ ಒಮ್ಮೆ ಕಳ್ಳತನ ಮಾಡಿದವನನ್ನು ಮತ್ತೆ ಬಂದು ಕಳ್ಳತನ ಮಾಡೆಂದು ಆಮಂತ್ರಿಸುವುದಿಲ್ಲ. ಒಮ್ಮೆ ಅತ್ಯಾಚಾರ ಮಾಡಿದವನಿಗೆ, ಇನ್ನೊಮ್ಮೆ ಮಾಡೆಂದು ಮನವಿ ಮಾಡುವುದಿಲ್ಲ. ಹಲ್ಲೆ, ಕೊಳ್ಳೆ, ಹತ್ಯೆಗಳ ಪಾಲಿಗೆ ಯಾವ ಸ್ವಸ್ಥ ಸಮಾಜವೂ ಸಹಿಷ್ಣುವಾಗಿರುವುದಿಲ್ಲ.

ಇಸ್ಲಾಮ್ ಧರ್ಮದಲ್ಲೂ ಅಷ್ಟೇ. ಇಲ್ಲಿರುವ ಸಾಮಾನ್ಯ ನಿಯಮಗಳನ್ನು ಮತ್ತು ನಿತ್ಯ ಜೀವನದಲ್ಲಿ ಪಾಲಿಸುವುದಕ್ಕೆ ಇಸ್ಲಾಮ್ ಧರ್ಮವು ನೀಡುವ ಸಂಹಿತೆಯನ್ನು ನೋಡಿದರೆ ಅದರಲ್ಲಿ ಸಾದ್ಯಂತ ಪ್ರೀತಿ, ವಿಶ್ವಾಸ, ಭ್ರಾತೃತ್ವ, ಬಂಧುತ್ವ, ಕರುಣೆ, ವಾತ್ಸಲ್ಯ, ಸಹನೆ, ಸಂಯಮ, ಕ್ಷಮೆ, ಔದಾರ್ಯ, ಸೇವೆ, ಉಪಕಾರ ಮುಂತಾದ ಮೌಲ್ಯಗಳೇ ತುಂಬಿ ತುಳುಕುತ್ತಿವೆ. ಆದರೆ ಅದೇ ವೇಳೆ, ಸಾಮಾನ್ಯ ನಿಯಮಗಳನ್ನು ಉಲ್ಲಂಘಿಸಿ ಅಪರಾಧ ಕೃತ್ಯಗಳನ್ನು ಎಸಗುವವರನ್ನು ಹದ್ದು ಬಸ್ತಿನಲ್ಲಿ ಇಡುವುದಕ್ಕಾಗಿ ವಿಶೇಷ ನಿಯಮಗಳೂ ಇವೆ. ಕೆಲವರು ಪ್ರಸ್ತುತ ವಿಶೇಷ ನಿಯಮಗಳನ್ನೇ ಹೆಕ್ಕಿ ಅವು ಮುಸ್ಲಿಮ್ ಸಮಾಜದಲ್ಲಿರುವ ದಿನನಿತ್ಯದ ಸಾಮಾನ್ಯ ನಿಯಮಗಳೆಂದು ಸುಳ್ಳು ಹೇಳಿ ಮುಸ್ಲಿಮರ ಧರ್ಮ, ಧರ್ಮಗ್ರಂಥ ಇತ್ಯಾದಿ ಎಲ್ಲ ವಿಷಯಗಳ ಕುರಿತು ಜನರಲ್ಲಿ ತೀರಾ ಪ್ರತಿಕೂಲ ಅಭಿಪ್ರಾಯವನ್ನು ಮೂಡಿಸಲು ಶ್ರಮಿಸುತ್ತಾರೆ.

ಲೋಕದ ಎಲ್ಲ ದೇಶಗಳಲ್ಲೂ ಪ್ರತಿ ದಿನವೇನೂ ಯುದ್ಧಗಳು ನಡೆಯುವುದಿಲ್ಲ. ಎಲ್ಲ ದೇಶಗಳು ತಮ್ಮ ನೆರೆಯ ದೇಶಗಳನ್ನು ಶತ್ರು ದೇಶಗಳೆಂದು ಪರಿಗಣಿಸುವುದಿಲ್ಲ. ಆದರೂ ಜಗತ್ತಿನ ಹೆಚ್ಚಿನೆಲ್ಲಾ ದೇಶಗಳ ಬಳಿ ತಮ್ಮದೇ ಆದ ಬೇಹುಗಾರಿಕಾ ವ್ಯವಸ್ಥೆ, ಶಸ್ತ್ರ ಸಜ್ಜಿತ ಸೇನೆಗಳು, ಗಡಿಭದ್ರತಾ ಪಡೆಗಳು, ಶಸ್ತ್ರಾಸ್ತ್ರಗಳ ದಾಸ್ತಾನು ಇತ್ಯಾದಿಯೆಲ್ಲಾ ಇರುತ್ತವೆ. ಯೋಧರನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ, ಸಮರ ಸಜ್ಜಿತರಾಗಿಡುವುದಕ್ಕೆ ಬೇಕಾದ ಕವಾಯತ್ತು, ಅಭ್ಯಾಸ ಇತಾದಿಗಳೆಲ್ಲ ನಿತ್ಯ ನಡೆಯುತ್ತಿರುತ್ತವೆ. ಇದು ನಿನ್ನೆ ಮೊನ್ನೆಯ ಬೆಳವೆಣಿಗೆಯೇನೂ ಅಲ್ಲ. ನಮಗೆ ಪರಿಚಯವಿರುವ ಮಾನವ ಇತಿಹಾಸದ ಉದ್ದಕ್ಕೂ ಇದುವೇ ನಡೆದಿದೆ.

ಕುರ್ ಆನ್ ವಚನಗಳನ್ನು ವಿರೂಪಗೊಳಿಸಿ ವಂಚಿಸುವ ಕೆಲವು ಪ್ರಮುಖ ಹಗರಣಗಳು:

ರೋಗ ಗ್ರಸ್ತ ಮನೋಭಾವದಿಂದ ನರಳುತ್ತಿರುವ ಕೆಲವು ಸತ್ಯ ವಿರೋಧಿಗಳ ಸ್ವಭಾವವನ್ನು ಕುರ್ ಆನ್ ನಲ್ಲಿ ಒಂದೆಡೆ, ಈ ರೀತಿ ಚಿತ್ರಿಸಲಾಗಿದೆ:
“ಅವನೇ (ಸೃಷ್ಟಿಕರ್ತನೇ) ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ….. …. ” (3:7)

ಸತ್ಯವನ್ನು ಯಥಾವತ್ತಾಗಿ ಎದುರಿಸುವ ಧೈರ್ಯವಿಲ್ಲದವರು ಸಾಮಾನ್ಯವಾಗಿ ಒಂದು ನೀಚ ಕುತಂತ್ರಕ್ಕೆ ಶರಣಾಗುತ್ತಾರೆ. ಅವರು ಸತ್ಯವನ್ನು ಭಾಗಶಃ ತೋರಿಸಿ ಭಾಗಶಃ ಮರೆಮಾಚುತ್ತಾರೆ, ಸತ್ಯವನ್ನು ತಿರುಚಿ ಬಿಡುತ್ತಾರೆ ಅಥವಾ ಸತ್ಯವನ್ನು ವಿರೂಪಗೊಳಿಸಿ ಅದುವೇ ಸತ್ಯವೆಂದು ಜನರನ್ನು ವಂಚಿಸುತ್ತಾರೆ. ಕುರ್ ಆನ್ ವಿರೋಧಿಗಳು ನಮ್ಮ ದೇಶದಲ್ಲಿ ಮಾತ್ರವಲ್ಲ ಪಶ್ಚಿಮ ಸಮೇತ ಜಗತ್ತಿನ ಹಲವಾರು ದೇಶಗಳಲ್ಲಿ ಇಂತಹ ಶ್ರಮ ಮಾಡಿದ್ದಾರೆ. ಕುರ್ ಆನ್ ನ ವಚನಗಳನ್ನು ಯಥಾವತ್ತಾಗಿ, ಅವುಗಳ ಸನ್ನಿವೇಶ ಸಮೇತ ಜನರ ಮುಂದಿಟ್ಟರೆ ಜನರು ಕುರ್ ಆನ್ ನೆಡೆಗೆ ಆಕರ್ಷಿತರಾಗುತ್ತಾರೆಂಬ ಭಯದಿಂದ ನರಳುವ ಈ ಮಂದಿ, ಏನಾದರೂ ಮಾಡಿ ಕುರ್ ಆನ್ ಗ್ರಂಥ ಮತ್ತು ಅದರ ಅನುಯಾಯಿಗಳ ವಿರುದ್ಧ ಜನಾಭಿಪ್ರಾಯ ರೂಪಿಸಬೇಕೆಂಬ ಉದ್ದೇಶದಿಂದ ಶುದ್ಧ ವಂಚನೆಗೆ ಇಳಿದು ಬಿಡುತ್ತಾರೆ. ಅವರು ಕುರ್ ಆನ್ ನ ಕೆಲವು ವಚನಗಳನ್ನು ಹೆಕ್ಕಿ ಅವುಗಳ ನಿರ್ಣಾಯಕ ಭಾಗಗಳಿಂದ ಅಥವಾ ಬಹಳ ನಿರ್ಣಾಯಕವಾದ ಅವುಗಳ ಹಿನ್ನೆಲೆಯ ವಚನಗಳಿಂದ ಅವುಗಳನ್ನು ಪ್ರತ್ಯೇಕಿಸಿ, ತೀರಾ ತದ್ವಿರುದ್ಧ ಅರ್ಥ ಮೂಡಿಸುವ ರೀತಿಯಲ್ಲಿ ಆ ವಚನಗಳನ್ನು ವಿರೂಪಗೊಳಿಸಿ ಜನರ ಮುಂದಿಡುತ್ತಾರೆ. ಮುಸ್ಲಿಮರು ಮತ್ತು ಕ್ರೈಸ್ತ, ಹಿಂದೂ, ಯಹೂದಿ, ಬೌದ್ಧ ಮುಂತಾದ ವಿವಿಧ ಸಮುದಾಯಗಳ ನಡುವೆ ವೈಷಮ್ಯ ಮೂಡಿಸ ಬಯಸುವವರು, ಈ ರೀತಿ ತಾವು ವಿರೂಪಗೊಳಿಸಿದ ಕುರ್ ಆನ್ ವಚನಗಳನ್ನು ಜನರ ಮುಂದಿಟ್ಟು, ಕುರ್ ಆನ್ ಅಶಾಂತಿ ಮತ್ತು ರಕ್ತಪಾತವನ್ನು ಪ್ರೋತ್ಸಾಹಿಸುತ್ತದೆ ಎಂಬುದಕ್ಕೆ ಕುರ್ ಆನ್ ವಚನಗಳೇ ಪುರಾವೆಗಳೆಂದು ವಾದಿಸುತ್ತಾರೆ. ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ:

ಹಗರಣ 1. ಎರಡನೇ ಅಧ್ಯಾಯದ ಎರಡು ವಚನಗಳು

A. “… ನೀವು ಅವರನ್ನು ಕಂಡಲ್ಲಿ ಕೊಲ್ಲಿರಿ…” 2:191
B. “… ನೀವು ಅವರ ವಿರುದ್ಧ ಯುದ್ಧ ಮಾಡಿರಿ…” 2: 193

ಇವು ಕುರ್ ಆನ್ ನ ಎರಡನೇ ಅಧ್ಯಾಯದ ಕೇವಲ ಎರಡು ಆಂಶಿಕ ತುಣುಕುಗಳು. ಯಾರಾದರೂ ಕೇವಲ ಇಷ್ಟನ್ನೇ ಉದ್ಧರಿಸಿ, ಇದು ಕುರ್ ಆನ್ ನ ಧೋರಣೆ ಎಂದು ವಾದಿಸಿದಾಗ ಅದನ್ನು ಕೇಳಿ ನಂಬುವವರಲ್ಲಿ ಒಂದು ಅಭಿಪ್ರಾಯ ಮೂಡುತ್ತದೆ. ಅದೇವೇಳೆ, ಯಾರೋ ಹೇಳಿದ್ದನ್ನು ಮೂರ್ಖರಂತೆ ಕಣ್ಣು ಮುಚ್ಚಿ ನಂಬುವ ಬದಲು ಆ ವಚನದ ಪೂರ್ವಾಪರಗಳನ್ನು ನೋಡಿ ಆ ಕುರಿತು ತುಸು ಮಾಹಿತಿ ಸಂಗ್ರಹಿಸಿದಾಗ ಮೂಡುವ ಅಭಿಪ್ರಾಯವು ತೀರಾ ಭಿನ್ನವಾಗಿರುತ್ತದೆ.
“ಯುದ್ಧದ ಕುರಿತಂತೆ ಪವಿತ್ರ ಕುರ್ ಆನ್ ನ ಧೋರಣೆ ಏನು? ಸ್ಪಷ್ಟ ಉತ್ತರ ಒದಗಿಸುವ 5 ವಚನಗಳು (2:190-194)” ಎಂಬ ಶೀರ್ಷಿಕೆಯಡಿಯಲ್ಲಿ ಇದೇ ಲೇಖನದ ಮುಂದೆ ಬರಲಿರುವ ಅಧ್ಯಾಯದಲ್ಲಿ ಈ ವಚನದ ಪ್ರಸ್ತಾಪ ಬರಲಿದೆ. ಅಲ್ಲಿ ಈ ವಚನದ ಜೊತೆ ತಕ್ಕಮಟ್ಟಿಗೆ ಅದರ ಹಿನ್ನೆಲೆಯನ್ನೂ ತಿಳಿಸಲಾಗಿದೆ. ನಿಜವಾಗಿ ಈ ವಚನದ ನೈಜ ತಾತ್ಪರ್ಯ ಅರ್ಥವಾಗಬೇಕಿದ್ದರೆ ಮೊದಲು ಅದರ ಐತಿಹಾಸಿಕ ಹಿನ್ನೆಲೆಯನ್ನು ಅರಿಯಬೇಕಾಗುತ್ತದೆ. ಆದರೆ ಐತಿಹಾಸಿಕ ಹಿನ್ನೆಲೆಯ ಗೊಡವೆಗೆ ಹೋಗದೆ ಕೇವಲ ಕುರ್ ಆನ್ ನಲ್ಲೇ, ಈ ವಚನದ ಹಿಂದೆ, ಮುಂದೆ ಏನಿದೆ ಎಂಬುದನ್ನು ನೋಡಿದರೂ ತಕ್ಕ ಮಟ್ಟಿಗೆ ಇದರ ತಾತ್ಪರ್ಯ ನಿರ್ಧರಿಸಲು ಸಾಧ್ಯವಾಗುತ್ತದೆ.

ಉದಾ: ಇದು 2ನೇ ಅಧ್ಯಾಯದ 193ನೇ ವಚನವಾಗಿದ್ದರೆ ಅದೇ ಅಧ್ಯಾಯದ 190 ನೇ ವಚನದಲ್ಲಿ “ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲ” ಎಂದು ಹೇಳಲಾಗಿದೆ. (2:190)

ಮತ್ತೆ 191 ನೇ ವಚನದಲ್ಲಿ “….. ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ, ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ…… ” (2:191) ಎಂಬ ನಿರ್ಬಂಧವಿದೆ.

ಮುಂದುವರಿದು 192ನೇ ವಚನದಲ್ಲಿ “ಒಂದು ವೇಳೆ ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ” ಎನ್ನುವ ಮೂಲಕ, ಅನಿವಾರ್ಯ ಸನ್ನಿವೇಶದಲ್ಲಿ ಯುದ್ಧ ಆರಂಭವಾದರೂ, ಶತ್ರು ಪಾಳಯವು ಯುದ್ಧ ವಿರಾಮ ಘೋಷಿಸಿದರೆ ನೀವೂ ಯುದ್ಧ ನಿಲ್ಲಿಸಬೇಕು ಎಂಬ ಸ್ಪಷ್ಟ ಸೂಚನೆ ಇದೆ.

ಸಾಕ್ಷಾತ್ ಈ 193ನೇ ವಚನದಲ್ಲೂ ಕೇವಲ “… ನೀವು ಅವರ ವಿರುದ್ಧ ಯುದ್ಧ ಮಾಡಿರಿ…” ಎಂಬ ಒಂದು ಮಾತು ಮಾತ್ರ ಇರುವುದಲ್ಲ. “… ಇನ್ನು, ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ…” ಎಂಬ ಮಾತುಗಳೂ ಇದೇ ವಚನದ ಭಾಗಗಳಾಗಿವೆ. ಸಾಲದ್ದಕ್ಕೆ ಇದರ ಮುಂದಿನ, ಅಂದರೆ 194ನೇ ವಚನದಲ್ಲಿ ಮತ್ತೆ, “… … ನಿಮ್ಮ ಮೇಲೆ ಅತಿಕ್ರಮ ಎಸಗಿದವರ ಮೇಲೆ ನೀವು, (ಹೆಚ್ಚೆಂದರೆ) ಅವರು ನಿಮ್ಮ ಮೇಲೆ ಎಸಗಿದಷ್ಟೇ ಪ್ರತಿಕ್ರಮವನ್ನೆಸಗಿರಿ ಮತ್ತು ಅಲ್ಲಾಹನಿಗೆ ಅಂಜಿರಿ” ಎಂಬ ಎಚ್ಚರಿಕೆ ಇದೆ.

ಇಷ್ಟನ್ನು ಅರಿತುಕೊಂಡ ಬಳಿಕ ಯಾರಾದರೂ”… ನೀವು ಅವರ ವಿರುದ್ಧ ಯುದ್ಧ ಮಾಡಿರಿ…” (2: 193) ಎಂಬ ಉದ್ಧರಣೆಯನ್ನು ಓದಿದರೆ ಅವರ ಅಭಿಪ್ರಾಯ ಮೊದಲಿನಂತಿದ್ದೀತೇ ? ಅವರಿಗೆ ಇದು ಆಕ್ಷೇಪಾರ್ಹವೆಂದು ತೋರೀತೇ ?

ಹಗರಣ 2. ಐದನೇ ಅಧ್ಯಾಯ

“ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೆ ಏರಿಸಬೇಕು ಅಥವಾ ಅವರ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ : ಬಲಗೈ ಮತ್ತು ಎಡಗಾಲು ಅಥವಾ ಎಡಗೈ ಮತ್ತು ಬಲಗಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು….” 5:33

ಇದು ಕುರ್ ಆನ್ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವರು ಬಳಸುವ ಇನ್ನೊಂದು ಮೋಸದ ಅಸ್ತ್ರ. ಅವರು ಕೇವಲ ಇಷ್ಟೇ ಪದಗಳನ್ನು ಜನರ ಮುಂದಿಟ್ಟು ಕುರ್ ಆನ್ ಎಲ್ಲ ಅನ್ಯ ಮತೀಯರನ್ನು ಕೊಲ್ಲಲು ಮುಸ್ಲಿಮರಿಗೆ ಆದೇಶಿಸುತ್ತದೆಂಬ ಘೋರ ಸುಳ್ಳನ್ನು ಪ್ರಸಾರ ಮಾಡಲು ಶ್ರಮಿಸುತ್ತಾರೆ. ನಿಜವಾಗಿ ಇದು ಪವಿತ್ರ ಕುರ್ ಆನ್ ನ 5ನೇ ಅಧ್ಯಾಯದ ಒಂದು ಪುಟ್ಟ ಭಾಗ ಮಾತ್ರ. ಆದರೆ ಆತುರ ಜೀವಿಗಳು ಇಷ್ಟನ್ನೇ ಓದಿ, ಸಾವಿರಾರು ವಚನಗಳನ್ನು ಒಳಗೊಂಡ ಒಂದು ಬೃಹತ್ ಗ್ರಂಥದ ಬಗ್ಗೆ ಹಲವು ಅಪಾಯಕಾರಿ ಕುರುಡು ತೀರ್ಮಾನಗಳನ್ನು ಕೈಗೊಂಡು ಬಿಡುತ್ತಾರೆ. ಸತ್ಯವನ್ನು ಅರಿಯಬೇಕು ಎಂಬ ಪ್ರಾಮಾಣಿಕ ಆಸಕ್ತಿ ಉಳ್ಳವರು ಮಾತ್ರ ಇದರ ಪೂರ್ವಾಪರಗಳನ್ನು ನೋಡಲು ಹೊರಡುತ್ತಾರೆ. ಆಗ ಅವರ ಮುಂದೆ ಬೇರೆಯೇ ಲೋಕವೊಂದು ತೆರೆದುಕೊಳ್ಳುತ್ತದೆ. ಈ ಅಧ್ಯಾಯದ 27 ರಿಂದ 34ರ ವರೆಗಿನ ವಚನಗಳು ಗಮನಾರ್ಹವಾಗಿವೆ:

“ನೀವು ಅವರಿಗೆ ಆದಮರ ಇಬ್ಬರು ಪುತ್ರರ ನೈಜ ಘಟನೆಯನ್ನು ತಿಳಿಸಿರಿ. ಅವರಿಬ್ಬರೂ ಬಲಿದಾನ ನೀಡಿದಾಗ, ಅವರ ಪೈಕಿ ಒಬ್ಬನ ಬಲಿದಾನವು ಸ್ವೀಕೃತವಾಯಿತು ಮತ್ತು ಇನ್ನೊಬ್ಬನದು ಸ್ವೀಕೃತವಾಗಲಿಲ್ಲ. ಅವನು ‘‘ನಾನು ಖಂಡಿತ ನಿನ್ನನ್ನು ವಧಿಸುತ್ತೇನೆ’’ ಎಂದನು. ಆಗ ಅವನು (ಮೊದಲನೆಯವನು) ಉತ್ತರಿಸಿದನು; ‘‘ಅಲ್ಲಾಹನಂತು, (ಯಾವುದನ್ನೂ) ಧರ್ಮನಿಷ್ಠರಿಂದ ಮಾತ್ರ ಸ್ವೀಕರಿಸುತ್ತಾನೆ.’’ (5:27) ‘‘ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ’’ (5:28). ‘‘ಖಂಡಿತವಾಗಿಯೂ ನೀನೀಗ ನನ್ನ ಪಾಪಗಳನ್ನೂ ನಿನ್ನ ಪಾಪಗಳನ್ನೂ ಹೊತ್ತು ನರಕವಾಸಿಗಳ ಸಾಲಿಗೆ ಸೇರಬೇಕೆಂದು ನಾನು ಬಯಸುತ್ತೇನೆ. ಅಕ್ರಮಿಗಳಿಗೆ ಇರುವುದು ಅದೇ ಪ್ರತಿಫಲ.’’ (5:29) ಕೊನೆಗೆ ಅವನ ಚಿತ್ತವು ತನ್ನ ಸಹೋದರನ ಹತ್ಯೆಗೆ ಅವನನ್ನು ಸಿದ್ಧಗೊಳಿಸಿತು. ಅವನು ತನ್ನ ಸಹೋದರನನ್ನು ಕೊಂದು ಬಿಟ್ಟನು ಮತ್ತು ಎಲ್ಲವನ್ನೂ ಕಳೆದುಕೊಂಡವರ ಸಾಲಿಗೆ ಸೇರಿದನು.” (5:30). “ಆ ಬಳಿಕ ಅಲ್ಲಾಹನು (ಅವನೆಡೆಗೆ) ಒಂದು ಕಾಗೆಯನ್ನು ಕಳುಹಿಸಿದನು. ತನ್ನ ಸಹೋದರನ ಶವವನ್ನು ಹೇಗೆ ಅಡಗಿಸಬೇಕೆಂದು ಆತನಿಗೆ ತೋರಿಸಲು ಅದು ನೆಲವನ್ನು ಕೊರೆಯುತ್ತಿತ್ತು . ಆಗ ಅವನು ಹೇಳಿದನು; “ಅಯ್ಯೋ ನನ್ನ ಅವಸ್ಥೆ! ನನ್ನ ಸಹೋದರನ ಶವವನ್ನು ಅಡಗಿಸುವ ವಿಷಯದಲ್ಲಿ ಈ ಕಾಗೆಯಂತಾಗಲಿಕ್ಕೂ ನನ್ನಿಂದಾಗಲಿಲ್ಲ.’’ ಹೀಗೆ ಅವನು, ಪಶ್ಚಾತ್ತಾಪ ಪಡುವವರ ಸಾಲಿಗೆ ಸೇರಿದನು.” (5:31). “ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು – ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ. ಮುಂದೆ ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ನಮ್ಮ ಅನೇಕ ದೂತರು ಬಂದರು. ಇಷ್ಟಾಗಿಯೂ ಅವರಲ್ಲಿ ಹೆಚ್ಚಿನವರು ಭೂಮಿಯಲ್ಲಿ ಅತಿರೇಕ ಎಸಗುವವರಾಗಿದ್ದಾರೆ.” (5:32). “ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು ಅಥವಾ ಅವರ ಕೈಗಳನ್ನು ಹಾಗೂ ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ: ಬಲಗೈ ಮತ್ತು ಎಡಕಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಇನ್ನು ಪರಲೋಕದಲ್ಲಂತೂ ಅವರಿಗಾಗಿ ಭಾರೀ ಹಿಂಸೆ ಕಾದಿದೆ.” (5:33). ನಿಮ್ಮ ನಿಯಂತ್ರಣಕ್ಕೆ ಬರುವ ಮುನ್ನವೇ ಪಶ್ಚಾತ್ತಾಪ ಪಟ್ಟವರು ಇದಕ್ಕೆ ಹೊರತಾಗಿದ್ದಾರೆ. ನಿಮಗೆ ತಿಳಿದಿರಲಿ! ಅಲ್ಲಾಹನು ತುಂಬಾ ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.” (5:34).

ಸಂಪೂರ್ಣ ಕುರ್ ಆನ್ ಅನ್ನು ಓದದೆ ಕೇವಲ, ಕುರ್ ಆನ್ ನ ಮೇಲ್ಕಾಣಿಸಿದ 8 ವಚನಗಳನ್ನಾದರೂ ಯಾರಾದರೂ ಗಮನವಿಟ್ಟು ಓದಿದರೆ ಅವರು ಈ ವಿಷಯದಲ್ಲಿ ದಾರಿ ತಪ್ಪುವ ಸಾಧ್ಯತೆ ಕಡಿಮೆಯಾಗುತ್ತದೆ. ಇಲ್ಲಿರುವ 5ನೇ ಅಧ್ಯಾಯದ 8 ವಚನಗಳ ಪೈಕಿ 27 ರಿಂದ 31ರ ವರೆಗಿನ ವಚನಗಳಲ್ಲಿ ಒಬ್ಬ ಸಜ್ಜನ ಹಾಗೂ ಒಬ್ಬ ದುಷ್ಟನ ನಡುವೆ ನಡೆದ ಜಗಳವನ್ನು ಪ್ರಸ್ತಾಪಿಸಿ, ಅವರಿಬ್ಬರ ಧೋರಣೆಗಳು ಎಷ್ಟು ಭಿನ್ನವಾಗಿದ್ದವು ಎಂಬುದನ್ನು ತೋರಿಸಿ, ಸಜ್ಜನನ ನಡವಳಿಕೆಯನ್ನು ಅನುಕರಣೀಯ ಆದರ್ಶದ ರೂಪದಲ್ಲಿ ಮುಂದಿಡಲಾಗಿದೆ. ಇಲ್ಲಿ ಕೊಲೆಗಾರನನ್ನು ಖಳನಾಯಕನ ರೂಪದಲ್ಲೂ ಕೊಲೆಯಾದ ವ್ಯಕ್ತಿಯನ್ನು ಅನುಕರಣೀಯ ಮಾದರಿಯ ರೂಪದಲ್ಲೂ ಚಿತ್ರಿಸಲಾಗಿದೆ. ಇಲ್ಲಿ ಒಬ್ಬ ದುಷ್ಟವ್ಯಕ್ತಿಯು ಅಸೂಯೆಯಿಂದ ಪ್ರೇರಿತನಾಗಿ ಒಬ್ಬ ಸಜ್ಜನನನ್ನು ಕೊಲ್ಲಲು ಕೈ ಎತ್ತುತ್ತಾನೆ (5:27). ಆಗ ಆ ಸಜ್ಜನ ವ್ಯಕ್ತಿಯು ಪ್ರತಿ ಹಿಂಸೆಗೆ ಇಳಿಯುವ ಬದಲು ‘‘ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ’’ ಎನ್ನುತ್ತಾನೆ (5:28).

ಮುಂದೆ ಜಾತಿ, ಜನಾಂಗ, ದೇಶ, ವರ್ಣ ಇತ್ಯಾದಿ ಯಾವ ಭೇದವೂ ಇಲ್ಲದೆ ಪ್ರತಿಯೊಂದು ಮಾನವ ಜೀವದ ಮಹತ್ವವನ್ನು ಸಾರುತ್ತಾ, “…. .. ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು – ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ. ಮುಂದೆ ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ನಮ್ಮ ಅನೇಕ ದೂತರು ಬಂದರು. ಇಷ್ಟಾಗಿಯೂ ಅವರಲ್ಲಿ ಹೆಚ್ಚಿನವರು ಭೂಮಿಯಲ್ಲಿ ಅತಿರೇಕ ಎಸಗುವವರಾಗಿದ್ದಾರೆ.” ಎಂದು ಘೋಷಿಸಲಾಗಿದೆ (5:32).

ಯಾವ ತಾರತಮ್ಯವೂ ಇಲ್ಲದೆ ಪ್ರತಿಯೊಬ್ಬ ಮಾನವ ಜೀವವನ್ನು ಮತ್ತು ಜೀವ ರಕ್ಷಣೆಯನ್ನು ಈ ಮಟ್ಟದಲ್ಲಿ ವೈಭವೀಕರಿಸುವ ಮತ್ತು ಒಬ್ಬ ಮಾನವ ಜೀವಿಯ ಹತ್ಯೆಯನ್ನು ಇಷ್ಟೊಂದು ಉಗ್ರವಾಗಿ ಖಂಡಿಸುವ ವಚನವೊಂದು ಬಹುಶಃ ಜಗತ್ತಿನ ಬೇರಾವ ಗ್ರಂಥದಲ್ಲೂ ಕಾಣಲು ಸಿಗದು.

ಇನ್ನು ಸಾಕ್ಷಾತ್ 33ನೇ ವಚನವನ್ನೇ ನೋಡುವುದಾದರೆ, ಸತ್ಯದ ಶತ್ರುಗಳು ಆ ವಚನವನ್ನು ಪೂರ್ಣವಾಗಿ ಉದ್ಧರಿಸುವ ಧೈರ್ಯವನ್ನೇ ತೋರುವುದಿಲ್ಲ. “ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೆ ಏರಿಸಬೇಕು” ಎಂಬುದು ಆ ವಚನದ ಮಧ್ಯಭಾಗವೇ ಹೊರತು, ಮೇಲ್ನೋಟಕ್ಕೆ ಕಾಣುವಂತೆ ಆ ವಚನದ ಆರಂಭದ ಭಾಗವೇನಲ್ಲ. ವಚನದ ಪೂರ್ಣ ರೂಪವು ಹೀಗಿದೆ:

“ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು ಅಥವಾ ಅವರ ಕೈಗಳನ್ನು ಹಾಗೂ ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ: ಬಲಗೈ ಮತ್ತು ಎಡಕಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು.* ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಇನ್ನು ಪರಲೋಕದಲ್ಲಂತೂ ಅವರಿಗಾಗಿ ಭಾರೀ ಹಿಂಸೆ ಕಾದಿದೆ.” (5:33)

ಇಲ್ಲಿ ಮತ್ತೆ, ಹಿನ್ನೆಲೆ, ಸನ್ನಿವೇಶ ಇತ್ಯಾದಿ ಯಾವುದನ್ನೂ ಜಾಲಾಡದೆ ಕೇವಲ ಈ ಒಂದು ವಚನವನ್ನೇ ಪೂರ್ತಿಯಾಗಿ ಓದಿದರೂ, ಗಮನಾರ್ಹವಾದ ಹಲವು ಸುಪ್ತ ಮಾಹಿತಿಗಳು ಅನಾವರಣ ಗೊಳ್ಳುತ್ತವೆ. ಇಲ್ಲಿ “ಅವರನ್ನು ಕೊಲ್ಲಬೇಕು” ಎಂದಿರುವುದು ಯುದ್ಧ ನಿರತ ಶತ್ರುಗಳ ಬಗ್ಗೆಯೇ ಹೊರತು ಅನ್ಯ ಮತೀಯರ ಬಗ್ಗೆ ಅಲ್ಲ.

“ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು….. ” ಎಂಬ ಪದಗಳಿಂದ ವ್ಯಕ್ತವಾಗುವಂತೆ, ಅಲ್ಲಾಹ್ ಮತ್ತವನ ದೂತರನ್ನು ನಂಬದವರಿಗಾಗಲಿ ಅವರ ವಿರೋಧಿಗಳಿಗಾಗಲಿ ಇದು ಅನ್ವಯಿಸುವುದಿಲ್ಲ. ಇದು ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವುದಕ್ಕಾಗಿ ಹೆಣಗಾಡುವವರಿಗೆ ಮಾತ್ರ ಅನ್ವಯಿಸುವ ಆದೇಶವಾಗಿದೆ. ಈ ಅಪರಾಧಗಳನ್ನು ಎಸಗಿದವರು ಕೂಡಾ ಬಂಧಿತರಾಗುವ ಮುನ್ನ ತಮ್ಮ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಟ್ಟರೆ ಆಗಲೂ ಪ್ರಸ್ತುತ ಆದೇಶವು ಅವರಿಗೆ ಅನ್ವಯವಾಗುವುದಿಲ್ಲ ಎಂದು ಮುಂದಿನ ವಚನದಲ್ಲಿ (5:34) ತಿಳಿಸಲಾಗಿದೆ. ಮಾತ್ರವಲ್ಲ, ಅದೇ ವಚನದಲ್ಲಿ, ಅಲ್ಲಾಹನು ಕ್ಷಮಾಶೀಲನೆಂಬುದನ್ನು ನೆನಪಿಸುವ ಮೂಲಕ ಪಶ್ಚಾತ್ತಾಪ ಪಡುವ ತಪ್ಪಿತಸ್ಥರನ್ನು ಕ್ಷಮಿಸಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಹಿಂಸೆಯನ್ನು ಪ್ರಚೋದಿಸುವುದೇ ಕುರ್ ಆನ್ ನ ಉದ್ದೇಶವಾಗಿದ್ದರೆ, ಅದು ಈ ರೀತಿ ಮಾನವ ಜೀವವನ್ನು ವೈಭವೀಕರಿಸುತ್ತಿತ್ತೇ? ತನ್ನ ವಿರುದ್ಧ ಹಿಂಸೆಗಿಳಿದ, ಮಾತ್ರವಲ್ಲ ತನ್ನನ್ನು ಕೊಲ್ಲಲು ಹೊರಟವನ ಮುಂದೆ ಅಹಿಂಸೆಯ ಧೋರಣೆ ತಾಳಿದ ವ್ಯಕ್ತಿಯನ್ನು ಆದರ್ಶ ವ್ಯಕ್ತಿಯಾಗಿ ಪರಿಚಯಿಸುತ್ತಿತ್ತೇ?

ಹಗರಣ 3. ಒಂಭತ್ತನೇ ಅಧ್ಯಾಯ

” …. ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ, ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ….” (9:5)

ಇದು ಕುರ್ ಆನ್ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿರುವವರು ಅತ್ಯಧಿಕವಾಗಿ ದುರುಪಯೋಗ ಪಡಿಸುವ ವಚನಗಳಲ್ಲೊಂದು. ಇದು ಒಂದು ಸಂಪೂರ್ಣ ವಚನವೂ ಅಲ್ಲ. ಕುರ್ ಆನ್ ನ 9ನೇ ಅಧ್ಯಾಯದ 5ನೇ ವಚನದ ಒಂದು ಭಾಗ ಮಾತ್ರ. ಇದರ ಇಂಗಿತ ಮತ್ತು ತಾತ್ಪರ್ಯವನ್ನು ಪೂರ್ಣವಾಗಿ ಗ್ರಹಿಸಲು ಈ ವಚನಗಳ ಐತಿಹಾಸಿಕ ಹಿನ್ನೆಲೆಯನ್ನು ಮತ್ತು ಸ್ವತಃ ಕುರ್ ಆನ್ ನಲ್ಲಿರುವ ಸಾಂಧರ್ಭಿಕ ಹಿನ್ನೆಲೆಯನ್ನು ಅರಿತಿರಬೇಕಾಗುತ್ತದೆ. ಇದೇ ಅಧ್ಯಾಯದ 1ರಿಂದ14ರ ವರೆಗಿನ ವಚನಗಳು ಆ ನಿಟ್ಟಿನಲ್ಲಿ ತುಂಬಾ ನಿರ್ಣಾಯಕವಾಗಿವೆ. ನಾವೀಗ ಈ ಒಂದು ವಚನವನ್ನೇ ಪೂರ್ಣವಾಗಿ, ಮಾತ್ರವಲ್ಲ, ಅದರ ಹಿಂದಿನ ಮತ್ತು ಮುಂದಿನ ಒಂದೊಂದು ವಚನದ ಜೊತೆ ಸೇರಿಸಿ ಓದೋಣ:

“ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ. ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಠರನ್ನು ಪ್ರೀತಿಸುತ್ತಾನೆ.” (9:4)

“(ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ.* ತರುವಾಯ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸುವವರಾದರೆ ಮತ್ತು ಝಕಾತ್‌ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.” (9:5)

“ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ . ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು.” (9:6)

ಇದರ ಐತಿಹಾಸಿಕ ಹಿನ್ನೆಲೆಯನ್ನು ನೋಡುವುದಾದರೆ, ಇದು ನಿಜವಾಗಿ, ಪ್ರವಾದಿ ಮುಹಮ್ಮದ್ (ಸ)ರ ಬದುಕಿನ ಕೊನೆಯ ವರ್ಷದಲ್ಲಿ, ಅವರಿಗೆ ಅಲ್ಲಾಹನ ಕಡೆಯಿಂದ ಇಳಿಸಿಕೊಡಲಾದ ಕೊನೆಯ ಕೆಲವು ದಿವ್ಯ ವಚನಗಳ ಭಾಗವಾಗಿದೆ ಮತ್ತು ಇದು ಒಂದು ನಿರ್ದಿಷ್ಟವಾದ ವಿಷಮ ಹಾಗೂ ಪ್ರತಿಕೂಲ ಸನ್ನಿವೇಶಕ್ಕೆ ಮಾತ್ರ ಸಂಬಂಧಿಸಿದ ಸೀಮಿತ ಆದೇಶವಾಗಿದೆ. ಆದ್ದರಿಂದಲೇ, ಇದು ಯಾರಿಗೆಲ್ಲ ಅನ್ವಯವಾಗುವುದಿಲ್ಲ ಎಂಬುದನ್ನು 4ನೇ ವಚನದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ:
“ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ….. …” (9:4)

“ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು…. … ” ಎಂಬ ಪದಗಳು, ಇದು ಒಂದು ನಿರ್ದಿಷ್ಟ ಕಾಲಕ್ಕೆ ಅಥವಾ ಆ ನಿರ್ದಿಷ್ಟ ವರ್ಷಕ್ಕೆ ಮತ್ತು ನಿರ್ದಿಷ್ಟವಾದ ಪಕ್ಷಗಳಿಗೆ ಮಾತ್ರ ಸಂಬಂಧಿಸಿದ ಆದೇಶವೆಂಬುದನ್ನು ಸ್ಪಷ್ಟಪಡಿಸುತ್ತವೆ.

ನಿಜವಾಗಿ, ಈ ಆದೇಶದ ಹಿಂದೆ ಬಹಳ ಮಹತ್ವದ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಆ ಹಿನ್ನೆಲೆಯನ್ನು ಅರಿಯದೆ ಅಥವಾ ಅದನ್ನು ಕಡೆಗಣಿಸಿ ಈ ವಚನಗಳನ್ನು ಓದುವವರು ಹಲವು ಎಡವಟ್ಟುಗಳಿಗೆ ತುತ್ತಾಗುವುದು ಖಚಿತ. ಈ ಅಧ್ಯಾಯದ ಪ್ರಸ್ತುತ 5 ನೇ ವಚನ ಮಾತ್ರವಲ್ಲ, 28, 29, 80 ಮತ್ತು 113 ನೇ ವಚನಗಳ ತಾತ್ಪರ್ಯ ನಿರ್ಧರಿಸುವುದಕ್ಕೂ ಅವುಗಳ ಐತಿಹಾಸಿಕ ಮತ್ತು ಸಾಂದರ್ಭಿಕ ಹಿನ್ನೆಲೆಯನ್ನು ಅರಿಯಬೇಕಾದುದು ಅನಿವಾರ್ಯವಾಗಿದೆ.

ಕುರ್ ಆನ್ ಪ್ರತಿಪಾದಿಸುವ ಪ್ರಧಾನ ಧೋರಣೆ

ನಿತ್ಯ ಜೀವನಕ್ಕೆ ಸಂಬಂಧಿಸಿದಂತೆ, ಸಮಾಜದಲ್ಲಿ ಎಲ್ಲರಿಗೂ ಅನ್ವಯಿಸುವ, ಎಲ್ಲರ ಹಿತ ಕಾಪಾಡುವ ಕೆಲವು ವಿಶಾಲ ನಂಬಿಕೆ ಮತ್ತು ಉದಾತ್ತ ನಿಯಮಗಳನ್ನು ಇಸ್ಲಾಮ್ ಧರ್ಮವು ಮಾನವ ಸಮಾಜದ ಮುಂದಿಡುತ್ತದೆ. ಅದರ ಕೆಲವು ಮಾದರಿಗಳನ್ನು ಪವಿತ್ರ ಕುರ್ ಆನ್ ನಲ್ಲಿ ಕಾಣಬಹುದು.

ಉದಾ :
“… .. ಅಲ್ಲಾಹನು ವಿಧ್ವಂಸವನ್ನು ಮೆಚ್ಚುವುದಿಲ್ಲ.” (2:205)

” ನೀವು (ಮುಸ್ಲಿಮರು) ಸಂಪೂರ್ಣ ಮಾನವ ಸಮಾಜದ ಹಿತಕ್ಕಾಗಿ ನಿಯೋಜಿಸಲಾಗಿರುವ ಅತ್ಯುತ್ತಮ ಸಮುದಾಯದವರು… … ” (3:110)

“ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀ ಯಿಂದ ಸೃಷ್ಟಿಸಿರುವೆವು. ತರುವಾಯ ನೀವು ಪರಸ್ಪರ ]

ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು . ನಿಮ್ಮ ಪೈಕಿ ಅತ್ಯಧಿಕ ಧರ್ಮ ನಿಷ್ಠನಾಗಿರುವವನೇ ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು….. … ” (49:13)

” ಮಾನವರೇ, ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದ ನಿಮ್ಮ ಒಡೆಯನಿಗೆ ನಿಷ್ಠರಾಗಿರಿ. ಅವನು ಅದೇ ಜೀವದಿಂದ ಅದರ ಜೊತೆಯನ್ನೂ ಸೃಷ್ಟಿಸಿದನು ಮತ್ತು ಅವರಿಬ್ಬರ ಮೂಲಕ ಅನೇಕಾರು ಪುರುಷರನ್ನೂ ಸ್ತ್ರೀಯರನ್ನೂ (ಲೋಕದಲ್ಲಿ) ಹಬ್ಬಿದನು. ಯಾವ ಅಲ್ಲಾಹನ ಹೆಸರಲ್ಲಿ ನೀವು ಹಕ್ಕುಗಳನ್ನು ಕೇಳುತ್ತೀರೋ ಅವನಿಗೆ ಸದಾ ಅಂಜಿರಿ ಮತ್ತು ಬಾಂಧವ್ಯಗಳನ್ನು ಕಾಪಾಡಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಮೇಲೆ ಕಣ್ಣಿಟ್ಟಿರುತ್ತಾನೆ.” (4:1)

“…. … ಸಂಧಾನವೇ ಉತ್ತಮ. ಮನಸ್ಸುಗಳಲ್ಲಿ ಸ್ವಾರ್ಥವಿರುವುದು ಸ್ವಾಭಾವಿಕ. ಆದರೂ ನೀವು ಸೌಜನ್ಯ ತೋರಿದರೆ ಹಾಗೂ ಧರ್ಮನಿಷ್ಠರಾಗಿದ್ದರೆ (ನಿಮಗೆ ತಿಳಿದಿರಲಿ) – ಅಲ್ಲಾಹನಂತೂ ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ”. (4:128)

“ವಿಶ್ವಾಸಿಗಳೇ, ನೀವು ಕಟ್ಟು ನಿಟ್ಟಾಗಿ ಸದಾ ನ್ಯಾಯವನ್ನು ಪಾಲಿಸುವವರಾಗಿರಿ ಹಾಗೂ ಅಲ್ಲಾಹನಿಗಾಗಿ (ಸತ್ಯದ ಪರ) ಸಾಕ್ಷಿ ಹೇಳುವವರಾಗಿರಿ – ಅದು ಸ್ವತಃ ನಿಮ್ಮ ವಿರುದ್ಧ, ಅಥವಾ ನಿಮ್ಮ ತಂದೆ ತಾಯಿಯ ಅಥವಾ ನಿಕಟ ಬಂಧುಗಳ ವಿರುದ್ಧವಾಗಿದ್ದರೂ ಸರಿಯೇ….. ನೀವೆಂದೂ ನಿಮ್ಮ ಚಿತ್ತಾಕಾಂಕ್ಷೆಗಳನ್ನು ಅನುಸರಿಸಿ ನ್ಯಾಯಪಾಲನೆಯಲ್ಲಿ ತಪ್ಪಬೇಡಿ.” (4:135)

“ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷಿ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡಾ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ”. (5:8)

“…. ನಾವು ಆದಮ್ ರ ಸಂತತಿಯನ್ನು (ಎಲ್ಲ ಮಾನವರನ್ನು) ಗೌರವಾನ್ವಿತಗೊಳಿಸಿರುವೆವು………” (17:70)

“ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು – ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ…. “. (5:32)

“ಖಂಡಿತವಾಗಿಯೂ ಅಲ್ಲಾಹನು ನಿಮಗೆ, ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ ಬಂಧುಗಳಿಗೆ (ಅವರ ಹಕ್ಕನ್ನು) ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ ವಿದ್ರೋಹದಿಂದಲೂ ತಡೆಯುತ್ತಾನೆ…..”. (16:90)

“ಧರ್ಮದಲ್ಲಿ ಬಲವಂತವಿಲ್ಲ. ಖಂಡಿತವಾಗಿಯೂ ಸರಿದಾರಿಯು ತಪ್ಪು ದಾರಿಗಳಿಂದ ಪ್ರತ್ಯೇಕವಾಗಿದೆ. (2:256)

“ನಿಮ್ಮ ಒಡೆಯನು ಬಯಸಿದ್ದರೆ, ಭೂಮಿಯಲ್ಲಿರುವ ಎಲ್ಲರೂ ಜೊತೆಯಾಗಿ (ಸತ್ಯ ಧರ್ಮವನ್ನು) ನಂಬುವವರಾಗಿ ಬಿಡುತ್ತಿದ್ದರು. (ಅವನೇ ಹಾಗೆ ಮಾಡಿಲ್ಲದಿರುವಾಗ) ಜನರೆಲ್ಲಾ ನಂಬುವವರಾಗಿ ಬಿಡುವ ತನಕ ನೀವೇನು ಅವರನ್ನು ನಿರ್ಬಂಧಿಸುವಿರಾ?” (10:99)

”ನೀವು ಹೇಳಿ ಬಿಡಿ: ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ. (ಇದನ್ನು) ಇಷ್ಟವುಳ್ಳವನು ನಂಬಲಿ, ಮತ್ತು ಧಿಕ್ಕರಿಸ ಬಯಸುವವನು ಧಿಕ್ಕರಿಸಲಿ ….” (18:29)

“ಅಲ್ಲಾಹನು ನಿಷಿದ್ಧ ಗೊಳಿಸಿರುವ (ಕೊಲ್ಲಬಾರದೆಂದು ವಿಧಿಸಿರುವ) ಯಾವುದೇ ಜೀವವನ್ನು ನೀವು ಅಕ್ರಮವಾಗಿ ಕೊಲ್ಲಬೇಡಿ.” (17: 33, 6:151)

”…. … ಅಜ್ಞಾನಿಗಳು ತಮ್ಮೊಡನೆ ಮಾತಿಗಿಳಿದರೆ ಅವರು (ಧರ್ಮನಿಷ್ಠ ಮುಸ್ಲಿಮರು), ‘ಸಲಾಮ್’ ಎಂದಷ್ಟೇ ಹೇಳುತ್ತಾರೆ” (25:63)

“ಅವರು (ಜನರನ್ನು) ಕ್ಷಮಿಸಬೇಕು ಮತ್ತು (ಇತರರ ತಪ್ಪುಗಳನ್ನು) ಕಡೆಗಣಿಸಬೇಕು. ನೀವೇನು, ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ಅಪೇಕ್ಷಿಸುವುದಿಲ್ಲವೇ? ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ”. (24:22)

“…. ….. ಅಲ್ಲಾಹನು ನಿನಗೆ ಹಿತವನ್ನು ಮಾಡಿರುವಂತೆ ನೀನು (ಜನರಿಗೆ) ಹಿತವನ್ನು ಮಾಡು. ನೀನು ಭೂಮಿಯಲ್ಲಿ ಅಶಾಂತಿಯನ್ನು ಹರಡದಿರು. ಅಶಾಂತಿ ಹರಡುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ.” (28:77)

“ಒಳಿತು ಮತ್ತು ಕೆಡುಕು ಸಮಾನವಲ್ಲ. ನೀವು ಕೆಡುಕನ್ನು ಒಳಿತಿನಿಂದ ಎದುರಿಸಿರಿ – ಆಗ ನಿಮ್ಮ ವಿರುದ್ಧ ಹಗೆತನ ಉಳ್ಳವನೂ ನಿಮ್ಮ ಆಪ್ತ ಮಿತ್ರನಾಗಿ ಬಿಡುವನು. ಸಹನ ಶೀಲರ ಹೊರತು ಇತರರಿಗೆ ಇದು (ಈ ಸಾಮರ್ಥ್ಯ) ಪ್ರಾಪ್ತವಾಗುವುದಿಲ್ಲ. ಮತ್ತು ಮಹಾ ಸೌಭಾಗ್ಯವಂತರ ಹೊರತು ಇತರರಿಗೆ ಇದು ಪ್ರಾಪ್ತವಾಗುವುದಿಲ್ಲ.” (41: 34,35)

”ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹನು ಪ್ರೀತಿಸುತ್ತಾನೆ.” (60:8)

ಕುರ್ ಆನ್ ನಲ್ಲಿ ಅಲ್ಲಾಹನ ಕುರಿತು ”ಅವನು ಕರುಣೆಯನ್ನು ತನ್ನ ಪಾಲಿಗೆ ಕಡ್ಡಾಯಗೊಳಿಸಿರುವನು” ಎನ್ನಲಾಗಿದೆ. (6:54)

ಹಾಗೆಯೇ ಪ್ರವಾದಿ ಮುಹಮ್ಮದ್ (ಸ) ರ ಕುರಿತು ಕುರ್ ಆನ್ ನಲ್ಲಿ, ”ನಾವು ನಿಮ್ಮನ್ನು ಸರ್ವಲೋಕಗಳ ಪಾಲಿಗೆ ಕರುಣೆಯಾಗಿ ಕಳುಹಿಸಿರುವೆವು” ಎಂದು ಹೇಳಲಾಗಿದೆ. (21: 107)

ಈ ರೀತಿ ಎಲ್ಲರ ಜೀವವನ್ನು ಗೌರವಿಸುವ, ಎಲ್ಲರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುವ, ಸಾರ್ವತ್ರಿಕ ಶಾಂತಿಯನ್ನು ಪ್ರತಿಪಾದಿಸುವ, ಸದಾ ಎಲ್ಲರ ಜೊತೆ ನ್ಯಾಯಪಾಲನೆಗೆ ಆಗ್ರಹಿಸುವ ಮತ್ತು ಎಲ್ಲ ಸ್ತರಗಳಲ್ಲೂ ಅತ್ಯುನ್ನತ ನೈತಿಕ ಮೌಲ್ಯಗಳನ್ನು ವಿಧಿಸುವ ಮತ್ತು ಸಹನೆ, ಸಂಯಮ, ಸಾಂತ್ವನ, ಸಹತಾಪಗಳೇ ತುಂಬಿರುವ ಸೌಮ್ಯ ವಚನಗಳೇ ಕುರ್ ಆನ್ ನಲ್ಲಿ ಉದ್ದಕ್ಕೂ ಕಾಣಲು ಸಿಗುತ್ತವೆ. ಅದೇ ವೇಳೆ, ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ, ಆತ್ಮ ರಕ್ಷಣೆಗಾಗಿ ಅಥವಾ ಅಪರಾಧಿಗಳನ್ನು ದಂಡಿಸುವುದಕ್ಕಾಗಿ ಅಥವಾ ನ್ಯಾಯಪಾಲನೆ ಮತ್ತು ಶಾಂತಿ ಸ್ಥಾಪನೆಗಾಗಿ ಅಥವಾ ಅನ್ಯಾಯ ಮತ್ತು ದೌರ್ಜನ್ಯಕ್ಕೆ ತುತ್ತಾಗಿರುವ ಅಮಾಯಕರನ್ನು ರಕ್ಷಿಸುವುದಕ್ಕಾಗಿ ಸೈನಿಕ ಕಾರ್ಯಾಚರಣೆ ಮತ್ತು ಯುದ್ಧವೂ ಸೇರಿದಂತೆ ವಿವಿಧ ದಂಡನಾತ್ಮಕ ಕ್ರಮಗಳನ್ನು ಅನುಮತಿಸುವ ಹಾಗೂ ವಿಧಿಸುವ ಕೆಲವು ವಚನಗಳೂ ಕುರ್ ಆನ್ ನಲ್ಲಿವೆ. ಅಂತಹ ವಚನಗಳನ್ನು ಅವುಗಳ ಸಾಂದರ್ಭಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿಂದ ಸಂಪೂರ್ಣ ಬೇರ್ಪಡಿಸಿ, ಅಥವಾ, ಒಂದೇ ವಚನದ ಪದಗಳನ್ನು ಅವುಗಳ ಪೂರ್ವಾಪರಗಳಿಂದ ಪ್ರತ್ಯೇಕಿಸಿ, ಮುಗ್ಧ ಜನರ ಮುಂದಿಟ್ಟಾಗ ಅವು ಹಲವು ಅಪಾರ್ಥಗಳಿಗೆ ಕಾರಣವಾಗುತ್ತವೆ.

ಸ್ವಾರಸ್ಯದ ಸಂಗತಿ ಏನೆಂದರೆ ಈ ದುಷ್ಟ ಕೆಲಸವನ್ನು ಎರಡು ಬಗೆಯ ಜನರು ಮಾಡುತ್ತಾರೆ.

1. ಕುರುಡಾಗಿ ಇಸ್ಲಾಮ್ ಧರ್ಮವನ್ನು ಮತ್ತು ಮುಸ್ಲಿಮ್ ಸಮಾಜವನ್ನು ಸ್ವತಃ ದ್ವೇಷಿಸುತ್ತ, ಇತರರಲ್ಲೂ ದ್ವೇಷವನ್ನು ಬಿತ್ತುವ ಕಾರ್ಯದಲ್ಲಿ ನಿರತರಾಗಿರುವ ಬಹಿರಂಗ ಶತ್ರುಗಳು.

2. ತಾವು ಇಸ್ಲಾಮ್ ಧರ್ಮದ ಅನುಯಾಯಿಗಳು ಹಾಗೂ ಮುಸ್ಲಿಮ್ ಸಮಾಜದ ಸದಸ್ಯರು ಹಾಗೂ ಹಿತರಕ್ಷಕರು ಎಂದು ಹೇಳಿಕೊಳ್ಳುತ್ತಾ, ಧರ್ಮ ರಕ್ಷಣೆಗೆ ಹಿಂಸೆಯೊಂದೇ ದಾರಿ ಎಂಬ ವಿನಾಶಕಾರಿ ನಂಬಿಕೆಯನ್ನಿಟ್ಟುಕೊಂಡು ತಮ್ಮ ಭಯೋತ್ಪಾದಕ ಹಾಗೂ ವಿಧ್ವಂಸಕ ಚಟುವಟಿಕೆಗಳ ಸಮರ್ಥನೆಗೆ ಕುರ್ ಆನ್ ಅನ್ನು ಅಸ್ತ್ರವಾಗಿ ಬಳಸುವವರು.

ಮೇಲ್ನೋಟಕ್ಕೆ ಇವೆರಡು ತೀರಾ ಭಿನ್ನ ಹಾಗೂ ಪರಸ್ಪರ ವಿರೋಧಿ ಗುಂಪುಗಳು ಎಂಬಂತೆ ಕಂಡರೂ, ವಾಸ್ತವದಲ್ಲಿ ಸ್ವರೂಪ ಮತ್ತು ಪರಿಣಾಮದ ದೃಷ್ಟಿಯಿಂದ, ಅವರಿಬ್ಬರೂ ಮಾಡುತ್ತಿರುವ ಕೆಲಸ ಒಂದೇ ಬಗೆಯದ್ದಾಗಿದೆ.

ಯುದ್ಧದ ಕುರಿತು ಪವಿತ್ರ ಕುರ್ ಆನ್ ನ ಧೋರಣೆ ಏನು?

ಸ್ಪಷ್ಟ ಉತ್ತರ ಒದಗಿಸುವ 5 ವಚನಗಳು (2:190-194) :
ಪವಿತ್ರ ಕುರ್ ಆನ್ ನ 2ನೇ ಅಧ್ಯಾಯದ 190 ರಿಂದ 194 ರ ವರೆಗಿನ 5 ವಾಕ್ಯಗಳನ್ನೊಮ್ಮೆ ಜೊತೆಯಾಗಿ ಓದಿ ನೋಡಿ:

“ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲ”. (2:190)

“ಮತ್ತು ಅಂಥವರನ್ನು (ನಿಮ್ಮ ವಿರುದ್ಧ ಯುದ್ಧ ಸಾರಿದವರನ್ನು) ನೀವು ಕಂಡಲ್ಲಿ ವಧಿಸಿರಿ ಮತ್ತು ಅವರು ಎಲ್ಲಿಂದ ನಿಮ್ಮನ್ನು ಹೊರದಬ್ಬಿರುವರೋ ಅಲ್ಲಿಂದ ನೀವು ಅವರನ್ನು ಹೊರದಬ್ಬಿರಿ. ಅಶಾಂತಿಯು ಕೊಲೆಗಿಂತ ಕೆಟ್ಟದಾಗಿದೆ. ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ – ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ. ಅಲ್ಲಿ ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದರೆ, ನೀವು ಅವರನ್ನು ವಧಿಸಿರಿ. ಇದುವೇ ಸತ್ಯವನ್ನು ಧಿಕ್ಕರಿಸಿದವರಿಗಿರುವ ಪ್ರತಿಫಲ.” (2:191)

“ಒಂದು ವೇಳೆ ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.” (2:192)

“ಯಾವುದೇ ಅಶಾಂತಿ ಇಲ್ಲವಾಗಿ ಬಿಡುವ ತನಕ ಹಾಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಿರಿ. ಇನ್ನು, ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ.” (2:193)

“ಪವಿತ್ರ ತಿಂಗಳುಗಳಿಗೆ ಪವಿತ್ರ ತಿಂಗಳುಗಳೇ ಪರಿಹಾರ. ಹಾಗೆಯೇ, ಎಲ್ಲ ಪಾವಿತ್ರ್ಯಗಳು ‘ಕಿಸಾಸ್’ನ (ಪ್ರತಿಕ್ರಮದ) ನಿಯಮಗಳಿಗೆ ಅಧೀನವಾಗಿವೆ. ನಿಮ್ಮ ಮೇಲೆ ಅತಿಕ್ರಮವೆಸಗಿದವರ ಮೇಲೆ ನೀವು, (ಹೆಚ್ಚೆಂದರೆ) ಅವರು ನಿಮ್ಮ ಮೇಲೆ ಎಸಗಿದಷ್ಟೇ ಪ್ರತಿಕ್ರಮವನ್ನೆಸಗಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಧರ್ಮ ನಿಷ್ಠರ ಜೊತೆಗಿದ್ದಾನೆಂಬುದು ನಿಮಗೆ ತಿಳಿದಿರಲಿ.” (2:194)

ಈ ಮೇಲೆ ಪ್ರಸ್ತಾಪಿಸಲಾಗಿರುವ ಕುರ್ ಆನಿನ 2ನೇ ಅಧ್ಯಾಯದ 190 ರಿಂದ 194 ರ ವರೆಗಿನ 5 ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಪ್ರಸ್ತುತ 5 ವಚನಗಳ ಮತ್ತು ಅವುಗಳ ಒಳಗಿರುವ ಪದಗಳ ಹಿನ್ನೆಲೆ, ಸಂದರ್ಭ, ಸನ್ನಿವೇಶ ಇತ್ಯಾದಿ ಯಾವುದನ್ನೂ ಗಣನೆಗೆ ತೆಗೆದು ಕೊಳ್ಳದೆ ಕೇವಲ ಪದಗಳ ಜೊತೆ ಚೆಲ್ಲಾಟವಾಡಲು ಹೊರಟರೆ ಹಲವು ಹಾಸ್ಯಾಸ್ಪದ ಎಡವಟ್ಟುಗಳು ಸಂಭವಿಸಬಹುದು.

ಉದಾಹರಣೆಗೆ, ಪ್ರಸ್ತುತ 5 ವಚನಗಳಲ್ಲಿ ‘ಯುದ್ಧ ಮಾಡಿರಿ’ ಎಂಬ ಆದೇಶ ಮೂರು ಕಡೆ ಇದೆ. ಹಾಗೆಯೇ ‘ಅವರನ್ನು ಹೊರದಬ್ಬಿರಿ’, ‘ವಧಿಸಿರಿ’ ಮತ್ತು ‘ಪ್ರತಿಕ್ರಮವನ್ನೆಸಗಿರಿ’ ಎಂಬ ಆದೇಶಗಳೂ ಇವೆ. ಯರಾದರೂ ಕೇವಲ ಇಂತಹ ಪದಗಳನ್ನು ಮಾತ್ರ ಬಳಸಿ, ಕುರ್ ಆನ್ ಒಂದು ಹಿಂಸಾತ್ಮಕ ಗ್ರಂಥ ಎಂದು ವಾದಿಸಬಹುದು. ಹಾಗೆಯೇ ಇದಕ್ಕೆಲ್ಲ ತೀರಾ ತದ್ವಿರುದ್ಧವಾಗಿ, ಇದೇ ವಚನಗಳಲ್ಲಿ “…..ಅಶಾಂತಿಯು ಕೊಲೆಗಿಂತ ಕೆಟ್ಟದು. ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ – ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ…..” ಎಂಬ ಮಾತುಗಳು ಕೂಡಾ ಇವೆ. ಕೆಲವರು ಕೇವಲ ಈ ಮಾತುಗಳನ್ನು ಮಾತ್ರ ಪ್ರಸ್ತಾಪಿಸಿ, ಇಸ್ಲಾಮ್ ಧರ್ಮದಲ್ಲಿ ಯುದ್ಧ, ಆಕ್ರಮಣ ಇತ್ಯಾದಿ ಚಟುವಟಿಕೆಗಳಿಗೆ ಅವಕಾಶವೇ ಇಲ್ಲ ಎಂದು ಕೂಡಾ ವಾದಿಸಬಹುದು.

ಇದೇನೂ ಕೇವಲ ಕಾಲ್ಪನಿಕ ಸನ್ನಿವೇಶವಲ್ಲ. ಅದೆಷ್ಟೋ ಮಂದಿ ನಿಜಕ್ಕೂ ಪ್ರಸ್ತುತ 2ನೇ ಅಧ್ಯಾಯದ 190ನೇ ವಚನದಲ್ಲಿನ “ಯುದ್ಧ ಮಾಡಿರಿ” ಎಂಬ ಎರಡು ಪದಗಳನ್ನು ಮಾತ್ರ ಜನರ ಮುಂದಿಟ್ಟು, ಕುರ್ ಆನ್ ಯುದ್ಧ, ಆಕ್ರಮಣ ಮತ್ತು ರಕ್ತಪಾತವನ್ನು ಪ್ರೋತ್ಸಾಹಿಸುವ ಗ್ರಂಥವೆಂಬ ಅಭಿಪ್ರಾಯವನ್ನು ಸಮಾಜದಲ್ಲಿ ಮೂಡಿಸಲು ಶ್ರಮಿಸಿದ್ದಾರೆ. ಇಂಥವರ ವಾದ ಕೇಳಿ ಯಾರಾದರೂ ಕುರ್ ಆನ್ ಅನ್ನು ತೆರೆದು, ಅದೇ ವಾಕ್ಯವನ್ನು ಪೂರ್ಣವಾಗಿ ಓದಿದರೆ ಅವರ ಮುಂದೆ ತೀರಾ ತದ್ವಿರುದ್ಧ ಚಿತ್ರವೊಂದು ಮೂಡುತ್ತದೆ.

ಉದಾ : ಇಲ್ಲಿ ಎಲ್ಲರ ವಿರುದ್ಧ ಯುದ್ಧ ಮಾಡಿರೆಂದು ಹೇಳಲಾಗಿಲ್ಲ. ಯಾರು ನಿಮ್ಮ ವಿರುದ್ಧ ಯುದ್ಧ ಮಾಡುತ್ತಾರೋ ಅವರ ವಿರುದ್ಧ ನೀವು ಯುದ್ಧ ಮಾಡಿರಿ ಎಂದು ಮಾತ್ರ ಆದೇಶಿಸಲಾಗಿದೆ. ಇದು ಜಗತ್ತಿನಲ್ಲಿ ಯಾರೂ ಆಕ್ಷೇಪಿಸಲು ಸಾಧ್ಯವಿಲ್ಲದ ನಿಯಮ. ಈ ಒಂದೇ ವಾಕ್ಯದಲ್ಲಿ ಇನ್ನೂ ಕೆಲವು ಅಂಶಗಳು ಗಮನಾರ್ಹವಾಗಿವೆ. ಕೇವಲ ಯುದ್ಧ ಮಾಡಿರೆಂದು ಹೇಳುವ ಬದಲು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಎಂದು ಹೇಳಲಾಗಿದೆ. ಅಲ್ಲಾಹನ ಮಾರ್ಗದಲ್ಲಿ ನಡೆಸಲಾಗುವ ಯಾವುದೇ ಚಟುವಟಿಕೆಯಲ್ಲಿ ಸ್ವಾರ್ಥ, ಸ್ವೇಚ್ಛಾಚಾರ, ದ್ವೇಷ, ಅಸೂಯೆ ಇತ್ಯಾದಿ ವಿಕಾರಗಳಿಗೆ ಆಸ್ಪದವಿರುವುದಿಲ್ಲ. ಅದು ನ್ಯಾಯ ಪ್ರಾಪ್ತಿಗಾಗಿರುವ ನ್ಯಾಯೋಚಿತ ಚಟುವಟಿಕೆ ಮಾತ್ರವಾಗಿ ಇರಬೇಕಾಗುತ್ತದೆ. ಆದ್ದರಿಂದ ಇದೇ ವಾಕ್ಯದ ಭಾಗವಾಗಿ, ಪ್ರತಿಕ್ರಮದ ಹೆಸರಲ್ಲಿ ಅತಿಕ್ರಮ ಸಲ್ಲದು ಎಂಬ ಸ್ಪಷ್ಟ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲಾಹನ ಮಾರ್ಗದ ಚಟುವಟಿಕೆ ಅಂದ ಮೇಲೆ ಅದು ಅಲ್ಲಾಹನನ್ನು ಮೆಚ್ಚಿಸುವ ಚಟುವಟಿಕೆಯಾಗಿರಬೇಕು. ಅತಿಕ್ರಮ, ಅತಿರೇಕಗಳು ಅಲ್ಲಾಹನು ಮೆಚ್ಚುವ ಕ್ರಿಯೆಗಳಲ್ಲ. ಅವು ಅಲ್ಲಾಹನ ದೃಷ್ಟಿಯಲ್ಲಿ ಶಿಕ್ಷಾರ್ಹ ಕ್ರಿಯೆಗಳಾಗಿವೆ. ಆದ್ದರಿಂದ, ಯುದ್ಧದ ಸನ್ನಿವೇಶದಲ್ಲೂ ನಿರ್ದಿಷ್ಟ ಮಿತಿ ಮೇರೆಗಳನ್ನು ಪಾಲಿಸಲೇಬೇಕೆಂದು ನೆನಪಿಸುವುದು ಈ ಎಚ್ಚರಿಕೆಯ ಉದ್ದೇಶವಾಗಿದೆ.

ಮುಂದಿನ (191 ನೇ) ವಚನವು ಮತ್ತೆ ಯುದ್ಧದ ಕುರಿತಂತೆ ಇಸ್ಲಾಮ್ ಧರ್ಮವು ತಾಳಿರುವ ಬಹಳ ಎಚ್ಚರಿಕೆಯ ಹಾಗೂ ಜವಾಬ್ದಾರಿಯುತವಾದ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ. ಇಲ್ಲಿರುವ “ಅಂಥವರನ್ನು ನೀವು ಕಂಡಲ್ಲಿ ವಧಿಸಿರಿ” ಎಂಬ ಆದೇಶವನ್ನು ಹಲವರು ಬಹಳ ವ್ಯಾಪಕವಾಗಿ ದುರುಪಯೋಗ ಪಡಿಸಿದ್ದಾರೆ. ನಿಜವಾಗಿ ಇದು ಕೂಡಾ ಒಂದು ನಿರ್ದಿಷ್ಟ ಕಾಲ, ಒಂದು ನಿರ್ದಿಷ್ಟ ಪ್ರದೇಶ ಮತ್ತು ನಿರ್ದಿಷ್ಟ ಸನ್ನಿವೇಶಕ್ಕೆ ಸಂಬಂಧಿಸಿದ ಆದೇಶವಾಗಿದೆ. ಮೂಲತಃ ಪ್ರವಾದಿ ಮುಹಮ್ಮದ್ (ಸ) ಅವರ ಕಾಲದ ಮುಸ್ಲಿಮ್ ಸಮಾಜ ಮತ್ತು ಅವರ ಸರಕಾರದ ವಿರುದ್ಧ ಯುದ್ಧ ಸಾರಿದ್ದ ಶತ್ರುಗಳ ಕುರಿತಂತೆ ನಿರ್ದಿಷ್ಟವಾಗಿ ಈ ಆದೇಶವನ್ನು ಹೊರಡಿಸಲಾಗಿತ್ತು.

ಇದೇ ವಚನದಲ್ಲಿ ಮುಂದುವರಿದು, “…..ಅವರು ಎಲ್ಲಿಂದ ನಿಮ್ಮನ್ನು ಹೊರದಬ್ಬಿರುವರೋ ಅಲ್ಲಿಂದ ನೀವು ಅವರನ್ನು ಹೊರದಬ್ಬಿರಿ…” -ಎಂಬ ಮಾತನ್ನು ಹೇಳಲಾಗಿದೆ. ಯುದ್ಧದ ಆದೇಶದಂತೆ ಗಡಿಪಾರು ಆದೇಶ ಕೂಡ ಯುದ್ಧಾಪರಾಧಿಗಳ ವಿರುದ್ಧ ಮಾತ್ರ ಅನ್ವಯಿಸುತ್ತದೆಯೇ ಹೊರತು ಮುಗ್ಧ ಜನಸಾಮಾನ್ಯರಿಗೆ ಅನ್ವಯಿಸುವುದಿಲ್ಲ ಎಂಬುದಕ್ಕೆ ಅದು ಪುರಾವೆಯಾಗಿದೆ.

“ಅಶಾಂತಿಯು ಕೊಲೆಗಿಂತ ಕೆಟ್ಟದಾಗಿದೆ” ಎಂಬ ವಚನದಲ್ಲಿ, ಯುದ್ಧವು ಸ್ವತಃ ಒಂದು ಸತ್ಕಾರ್ಯವೇನೂ ಅಲ್ಲ, ಆದರೆ ಶಾಂತಿ ಸ್ಥಾಪನೆಗಾಗಿ ಅನಿವಾರ್ಯವಾದಾಗ ಮಾತ್ರ ಯುದ್ಧಕ್ಕೆ ಸಮ್ಮತಿ ನೀಡಲಾಗಿದೆ ಎಂಬ ಸೂಚನೆ ಎದ್ದು ಕಾಣುತ್ತದೆ.

“ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ – ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ – ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ. ಅಲ್ಲಿ ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದರೆ, ನೀವು ಅವರನ್ನು ವಧಿಸಿರಿ….. ” (2:191) ಎಂಬ ಆದೇಶವು ಮತ್ತೆ, ಆಕ್ರಮಣಶೀಲ ಧೋರಣೆಯಿಂದ ದೂರ ಉಳಿದು, ಯುದ್ಧವನ್ನು ನಿವಾರಿಸುವ ಗರಿಷ್ಟ ಶ್ರಮ ನಡೆಸಿ, ಆ ಬಳಿಕ, ತೀರಾ ಅನಿವಾರ್ಯವಾದಾಗ ಮಾತ್ರ ಆಕ್ರಮಣ ಮಾಡಿರೆಂದು ಸಾರಿ ಹೇಳುತ್ತದೆ.

ಮುಂದೆ, 192ನೇ ವಚನದಲ್ಲಿ “ಒಂದು ವೇಳೆ ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.” (2:192) ಎಂದು ಹೇಳಲಾಗಿದೆ. ಅಂದರೆ ಇಲ್ಲಿ ಮತ್ತೆ ಶಾಂತಿಗೆ ಪ್ರಾಶಸ್ತ್ಯ ನೀಡಲಾಗಿದೆ. ಶತ್ರು ಪಾಳಯವು ಯುದ್ಧ ವಿರಾಮ ಬಯಸಿದರೆ ನೀವು ಯುದ್ಧವನ್ನು ಮುಂದುವರಿಸಲು ಪಟ್ಟು ಹಿಡಿಯಬೇಡಿ ಎಂಬ ಸ್ಪಷ್ಟ ಸೂಚನೆ ಇದೆ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿರುವಾಗ, ಅಲ್ಲಾಹನ ಮಾರ್ಗದಲ್ಲಿ ಹೋರಾಡಲು ಹೊರಟಿರುವ ನೀವು ಕ್ರೂರರೂ ಕಠಿಣ ಹೃದಯಿಗಳೂ ಆಗಿರಲು ಸಾಧ್ಯವಿಲ್ಲ. ಶತ್ರು ಪಾಳಯವು ಶಾಂತಿಗೆ ಮುಂದಾದರೆ ನೀವೂ ಶಾಂತಿಗೆ ಪ್ರಾಶಸ್ತ್ಯ ನೀಡಿರೆಂಬುದು ಇದರ ವ್ಯಕ್ತ ಇಂಗಿತವಾಗಿದೆ.

ಕೊನೆಗೆ, 193 ಮತ್ತು 194 ನೇ ವಚನಗಳಲ್ಲೂ ಇದೇ ಧಾಟಿಯಲ್ಲಿ ಬಹುತೇಕ ಇದೇ ಆಶಯವನ್ನು ಪ್ರಕಟಿಸಲಾಗಿದೆ. ಯುದ್ಧದ ಉದ್ದೇಶ ಶಾಂತಿಯೇ ಹೊರತು ವಸ್ತುತಃ ಯುದ್ಧವೇ ಉದ್ದೇಶವಲ್ಲ. ಅನ್ಯಾಯಕ್ಕೆ ತಡೆಯೊಡ್ಡಿ, ಅನ್ಯಾಯದಲ್ಲಿ ನಿರತರಾಗಿರುವವರಿಗೆ ನ್ಯಾಯೋಚಿತ ದಂಡನೆ ನೀಡುವುದಕ್ಕಿಂತ ಹೆಚ್ಚಿನ ಅಧಿಕಾರ ನಿಮಗಿಲ್ಲ, ಹಾಗೆಯೇ, ಎದುರಾಳಿಯು ಶಾಂತಿಗಾಗಿ ಕೈಚಾಚಿದರೆ ಮತ್ತೆ ನಿಮಗೆ ಆಕ್ರಮಣದ ಹಕ್ಕಿಲ್ಲ ಎಂಬುದನ್ನು ಈ ಮೂಲಕ ಮನವರಿಕೆ ಮಾಡಿಸಲಾಗಿದೆ.

ಕುರ್ ಆನ್ ನಲ್ಲಾಗಲಿ ಪ್ರವಾದಿವಚನಗಳಲ್ಲಾಗಲಿ ನೀಡಲಾಗಿರುವ ಯುದ್ಧಕ್ಕೆ ಸಂಬಂಧಿಸಿದ ಆದೇಶಗಳನ್ನು ಓದುವಾಗ ಎದ್ದು ಕಾಣುವ ಬಹಳ ಮಹತ್ವದ ಇನ್ನೊಂದು ಅಂಶವೇನೆಂದರೆ, ಅಲ್ಲೆಲ್ಲಾ ‘ಯುದ್ಧ ಮಾಡಿರಿ’ ಎಂಬ ಆದೇಶವು ಹಲವು ಷರತ್ತು ಗಳಿಗೆ ಬದ್ಧವಾಗಿರುತ್ತದೆ. ಹಾಗೆಯೇ ಅದು ಒಂದು ಅಧಿಕೃತ ಸರಕಾರಕ್ಕೆ ನೀಡಲಾದ ಆದೇಶವಾಗಿದೆಯೇ ಹೊರತು ಕೇವಲ ಯಾರಾದರೊಬ್ಬ ವ್ಯಕ್ತಿಗೆ, ಕೆಲವು ವ್ಯಕ್ತಿಗಳಿಗೆ ಅಥವಾ ಒಂದು ಕುಟುಂಬ, ಕುಲ, ಜನಾಂಗ ಅಥವಾ ಯಾವುದಾದರೂ ಸಂಘಟನೆಗೆ ನೀಡಿದ ಆದೇಶವಾಗಿರುವುದಿಲ್ಲ.

ಯುದ್ಧದ ಉದ್ದೇಶ ಹತ್ಯೆ ಮತ್ತು ರಕ್ತಪಾತವಲ್ಲ, ಮತಾಂತರವೂ ಅಲ್ಲ.

ಬದ್ರ್ ಯುದ್ಧವು ಪ್ರವಾದಿ ಮುಹಮ್ಮದ್ (ಸ) ರ ಬದುಕಿನ ಪ್ರಥಮ ದೊಡ್ಡ ಯುದ್ಧವಾಗಿತ್ತು. ಸಂಖ್ಯೆಯಲ್ಲಿ ಶತ್ರು ಪಡೆಯು ಮುಸ್ಲಿಮರ ಸೇನೆಗಿಂತ ಕನಿಷ್ಠ ಮೂರು ಪಟ್ಟು ಬಲಿಷ್ಠವಾಗಿತ್ತು. ಆಯುಧ ಮತ್ತಿತರ ಸಾಧನಗಳ ವಿಷಯದಲ್ಲೂ ಶತ್ರು ಪಡೆಯು ಸರ್ವ ಸಜ್ಜಿತವಾಗಿತ್ತು. ಆದರೂ ಯುದ್ಧದಲ್ಲಿ ಮುಸ್ಲಿಮರಿಗೆ ವಿಜಯ ಪ್ರಾಪ್ತವಾಯಿತು. ಮುಸ್ಲಿಮ್ ಸೇನೆಯ 14 ಮಂದಿ ಮತ್ತು ವಿರೋಧಿ ಸೇನೆಯ 70 ಮಂದಿ ಯುದ್ಧದಲ್ಲಿ ಹತರಾದರು. ಶತ್ರು ಪಾಳಯದ 70 ಮಂದಿ ಬಂಧಿತರಾದರು. ಉಳಿದವರು ಪರಾರಿಯಾದರು. ಪ್ರಸ್ತುತ ಬಂಧಿತ ಕೈದಿಗಳ ಜೊತೆ ಹೇಗೆ ವ್ಯವಹರಿಸಬೇಕೆಂಬ ಕುರಿತು ಚರ್ಚೆ, ಸಮಾಲೋಚನೆಗಳು ನಡೆದವು. ಅವರೆಲ್ಲಾ ಮುಸ್ಲಿಮರನ್ನು ವಧಿಸಬೇಕೆಂಬ ಉದ್ದೇಶದಿಂದಲೇ ಯುದ್ಧಕ್ಕೆ ಬಂದವರು. ಆದ್ದರಿಂದ ಅವರನ್ನೆಲ್ಲ ವಧಿಸಿ ಬಿಡಬೇಕು ಎಂಬುದು ಹಲವರ ಅಭಿಮತವಾಗಿತ್ತು. ಯುದ್ಧ ಕೈದಿಗಳನ್ನು ಕೊಂದು ಬಿಡುವುದು ಅಥವಾ ಅವರನ್ನು ಅತ್ಯಂತ ಅಮಾನುಷ ಬಗೆಯ ಚಿತ್ರಹಿಂಸೆಗೆ ಗುರಿಪಡಿಸುವುದು ಅಥವಾ ಅವರನ್ನು ಶಾಶ್ವತವಾಗಿ ಗುಲಾಮರಾಗಿಸಿ ಬಿಡುವುದು – ಇವೆಷ್ಟೇ ಆ ಸಮಾಜದಲ್ಲಿ ಪರಿಚಿತವಾಗಿದ್ದ ಸಂಪ್ರದಾಯಗಳಾಗಿದ್ದವು. ಆದರೆ ಪ್ರವಾದಿ (ಸ) ಹಾಗೇನೂ ಮಾಡಲಿಲ್ಲ. ಅವರು, ಪರಿಹಾರ ಧನ ಪಾವತಿಸಿ ಬಿಡುಗಡೆ ಪಡೆಯುವ ಅಧಿಕಾರವನ್ನು ಕೈದಿಗಳಿಗೆ ನೀಡಿದರು. ಯಾರು ಎಷ್ಟು ಪರಿಹಾರ ಧನ ಪಾವತಿಸಬೇಕೆಂಬುದನ್ನು ಅವರವರ ಆರ್ಥಿಕ ಸಾಮರ್ಥ್ಯದ ಆಧಾರದಲ್ಲಿ ನಿರ್ಧರಿಸಲಾಯಿತು. ಕೆಲವು ಕೈದಿಗಳು ಪರಿಹಾರ ಧನವನ್ನು ತಕ್ಷಣ ಪಾವತಿಸಿ ಬಿಡುಗಡೆ ಪಡೆದರು. ಮಕ್ಕಾದ ಕೆಲವು ಶತ್ರು ಸೈನಿಕರ ಪರವಾಗಿ ಮದೀನಾದಲ್ಲಿದ್ದ ಅವರ ಮುಸ್ಲಿಮ್ ಬಂಧುಗಳು ಪರಿಹಾರ ಪಾವತಿಸಿದರು. ಕೆಲವರ ಪರವಾಗಿ ಪರಿಹಾರ ಧನವನ್ನು ಮಕ್ಕಾದಲ್ಲಿದ್ದವರು ಕಳಿಸಿಕೊಟ್ಟರು. ಹೀಗೆ ಸಂಗ್ರಹವಾದ ಪರಿಹಾರ ಧನವನ್ನು ಮುಸ್ಲಿಮ್ ಯೋಧರಿಗೆ ವಿತರಿಸಲಾಯಿತು. ಆ ಸಂದರ್ಭದಲ್ಲಿ ಪರಿಹಾರ ಧನ ಪಾವತಿಸುವ ಸಾಮರ್ಥ್ಯ ಇಲ್ಲದಿದ್ದ ಕೆಲವು ಯುದ್ಧ ಕೈದಿಗಳಿದ್ದರು. ಅವರಿಗೆ ಪ್ರವಾದಿವರ್ಯರು (ಸ) ವಿಧಿಸಿದ ‘ಶಿಕ್ಷೆ’ಯು ಜಗತ್ತಿಗೆಲ್ಲಾ ಸಾರ್ವಕಾಲಿಕ ಮಾದರಿಯಾಗುವಂತಿತ್ತು. ಕೈದಿಗಳಾಗಿದ್ದ ಮಕ್ಕಾದ ಯೋಧರ ಪೈಕಿ ಪ್ರತಿಯೊಬ್ಬ ಅಕ್ಷರಸ್ತ ಕೈದಿಯು ಮದೀನದಲ್ಲಿದ್ದ ನಿರಕ್ಷರಸ್ತರ ಪೈಕಿ ಹತ್ತು ಮಂದಿಗೆ ಓದು ಬರಹ ಕಲಿಸಿದರೆ ಅದನ್ನೇ ಪರಿಹಾರವಾಗಿ ಪರಿಗಣಿಸಿ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪ್ರವಾದಿ (ಸ) ಘೋಷಿಸಿದರು. ಮುಂದಿನ ಕೆಲವು ದಿನಗಳಲ್ಲಿ ಆ ಕೈದಿಗಳು ಪ್ರಸ್ತುತ ಷರತ್ತನ್ನು ಈಡೇರಿಸಿ ಬಂಧ ಮುಕ್ತರಾದರು.

ಬದ್ರ್ ಯುದ್ಧದ ಕೈದಿಗಳೊಂದಿಗೆ ಪ್ರವಾದಿ (ಸ) ನಡೆದುಕೊಂಡ ರೀತಿಯು, ಇಸ್ಲಾಮ್ ಧರ್ಮವು ಶಾಂತಿಯನ್ನು ಬಯಸುತ್ತದೆಯೇ ಹೊರತು ರಕ್ತಪಾತವನ್ನಲ್ಲ ಎಂಬುದಕ್ಕೆ ಬಹಳ ಸ್ಪಷ್ಟ ಪುರಾವೆಯಾಗಿದೆ. ವಿರೋಧಿಗಳ ಸರ್ವನಾಶವೇ ಉದ್ದೇಶವಾಗಿದ್ದರೆ ಮುಸ್ಲಿಮರು, ತಮ್ಮ ವಶದಲ್ಲಿದ್ದ ಆ ಬಂಧಿಗಳನ್ನೆಲ್ಲ ನಿಜಕ್ಕೂ ವಧಿಸಬಹುದಿತ್ತು. ಆ ಕಾಲದಲ್ಲಿದ್ದ ನಿಯಮಗಳ ಪ್ರಕಾರ ಆ ರೀತಿ ಕೈದಿಗಳನ್ನು ವಧಿಸುವುದು ಅಪರಾಧವೂ ಆಗಿರಲಿಲ್ಲ. ಆದರೆ ಮುಸ್ಲಿಮರು ಅವರನ್ನು ವಧಿಸಲಿಲ್ಲ, ಮಾತ್ರವಲ್ಲ, ಅವರನ್ನು ಕಾರಾಗೃಹಗಳಲ್ಲಿ ಕಟ್ಟಿಡಲಿಲ್ಲ, ಅವರಿಗೆ ಯಾವುದೇ ರೀತಿಯ ಚಿತ್ರ ಹಿಂಸೆ ನೀಡಲಿಲ್ಲ. ಅವರನ್ನು ಅಪಮಾನಿಸಲೂ ಇಲ್ಲ. ಕೈದಿಗಳ ಕುರಿತಂತೆ ಅಂತಿಮ ತೀರ್ಮಾನ ಪ್ರಕಟಿಸುವ ತನಕ ಅವರನ್ನು ಸಣ್ಣ ತಂಡಗಳಾಗಿ ವಿಂಗಡಿಸಿ ಒಂದೊಂದು ತಂಡದ ಉಸ್ತುವಾರಿಯನ್ನು ಮತ್ತು ಅವರ ಊಟೋಪಚಾರದ ಹೊಣೆಗಾರಿಕೆಯನ್ನು ಮದೀನಾದ ಮುಸ್ಲಿಮರಲ್ಲಿನ ನಿರ್ದಿಷ್ಟ ವ್ಯಕ್ತಿ ಅಥವಾ ಕುಟುಂಬಗಳಿಗೆ ವಹಿಸಿಕೊಡಲಾಯಿತು.

ಪ್ರಸ್ತುತ ಕೈದಿಗಳಿಗೆ ಸ್ವತಃ ಪ್ರವಾದಿ (ಸ) ಮತ್ತು ಅವರ ಕೆಲವು ಅನುಯಾಯಿಗಳು ಇಸ್ಲಾಮ್ ಧರ್ಮ, ಏಕದೇವತ್ವ, ದಿವ್ಯ ಮಾರ್ಗದರ್ಶನ, ಪರಲೋಕ ವಿಶ್ವಾಸ, ಸಚ್ಚಾರಿತ್ರ್ಯ ಇತ್ಯಾದಿ ವಿಷಯಗಳ ಕುರಿತು ಉಪದೇಶ ನೀಡುತ್ತಿದ್ದರು. ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಮೇಲೆ ಕಿಂಚಿತ್ತೂ ಒತ್ತಡ ಹೇರಲಿಲ್ಲ. ಬಲಪ್ರಯೋಗ ಮಾಡಲಿಲ್ಲ. ಅವರ ಈ ಧೋರಣೆಗೆ, ಪವಿತ್ರ ಕುರ್ ಆನ್ ನಲ್ಲಿ ಸಾರಲಾಗಿರುವ ”ಧರ್ಮದ ವಿಷಯದಲ್ಲಿ ಬಲವಂತವಿಲ್ಲ” (2:256) ಎಂಬ ವಿಶ್ವಮಾನ್ಯ ನಿಯಮವು ಕಾರಣವಾಗಿತ್ತು. ಧರ್ಮವನ್ನು ಜನರು ಸ್ವತಃ ತಮ್ಮ ಸ್ವತಂತ್ರ ಇಚ್ಛೆಯನುಸಾರ ಸ್ವೀಕರಿಸಬೇಕೇ ಹೊರತು ಬಲವಂತವಾಗಿ ಅದನ್ನು ಯಾರೂ ಯಾರ ಮೇಲೂ ಹೇರುವಂತಿಲ್ಲ.

” (ದೂತರೇ), ನೀವು ಹೇಳಿಬಿಡಿ, ಇದು ನಿಮ್ಮ ಒಡೆಯನ ಕಡೆಯಿಂದ ಬಂದ ಸತ್ಯ. (ಇದನ್ನು) ಇಷ್ಟವುಳ್ಳವನು ನಂಬಲಿ ಮತ್ತು ಧಿಕ್ಕರಿಸಬಯಸುವವನು ಧಿಕ್ಕರಿಸಲಿ.” (18:29)

ಅಲ್ಲದೆ ಕುರ್ ಆನ್ ನಲ್ಲಿ ವಿಶೇಷವಾಗಿ ಯುದ್ಧ ಕೈದಿಗಳ ಕುರಿತಾಗಿಯೇ ಮಾರ್ಗದರ್ಶನವಿದೆ.

ಉದಾ:
“ದೂತರೇ, ನಿಮ್ಮ ಕೈಯಲ್ಲಿ ಕೈದಿಗಳಾಗಿರುವವರೊಡನೆ ಹೇಳಿರಿ: ನಿಮ್ಮ ಮನಸ್ಸುಗಳಲ್ಲಿ ಒಳಿತೇನಾದರೂ ಇರುವುದನ್ನು ಅಲ್ಲಾಹನು ಗುರುತಿಸಿದರೆ, ನಿಮ್ಮಿಂದ ಏನನ್ನು ಪಡೆಯಲಾಗಿದೆಯೋ ಅದಕ್ಕಿಂತ ಉತ್ತಮವಾದುದನ್ನು ಅವನು ನಿಮಗೆ ನೀಡುವನು ಮತ್ತು ಅವನು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ” (8:70)

ಇಲ್ಲಿ ಅಲ್ಲಾಹನ ಕ್ಷಮೆ ಮತ್ತು ಕರುಣೆಯನ್ನು ನೆನಪಿಸಿರುವುದರ ಉದ್ದೇಶವೇ, ನೀವೂ, ನಿಮ್ಮ ನಿಯಂತ್ರಣದಲ್ಲಿರುವ ಕೈದಿಗಳ ವಿಷಯದಲ್ಲಿ ಕ್ಷಮೆ ಮತ್ತು ಕರುಣೆಯ ನಿಲುವನ್ನು ತಾಳಿರೆಂದು ಸೂಚಿಸುವುದಾಗಿದೆ.

ಅಂದು ಮುಸ್ಲಿಮರ ವಶದಲ್ಲಿದ್ದ ಕೈದಿಗಳ ಪೈಕಿ ಸುಹೈಲ್ ಇಬ್ನು ಅಮ್ರ್ ಎಂಬೊಬ್ಬ ಕುಖ್ಯಾತ ಭಾಷಣಗಾರನಿದ್ದನು. ಅವನು ಪ್ರವಾದಿಯನ್ನು, ಮುಸ್ಲಿಮರನ್ನು ಮತ್ತು ಅವರ ನಂಬಿಕೆಗಳನ್ನೆಲ್ಲ ನಿಂದಿಸಿ ಅಪಮಾನಿಸಿ ಅವರ ವಿರುದ್ಧ ಬೆಂಕಿ ಉಗುಳುವ ಪ್ರಚೋದಕ ಭಾಷಣಗಳನ್ನು ಮಾಡುವುದರಲ್ಲಿ ಪ್ರವೀಣನಾಗಿದ್ದನು. ಆತನ ಪ್ರಸ್ತುತ ಹಿನ್ನೆಲೆಯ ಕಾರಣ ಹಲವು ಮುಸ್ಲಿಮರಿಗೆ ಅವನ ವಿರುದ್ಧ ತುಂಬಾ ಆಕ್ರೋಶವಿತ್ತು. ಕೈದಿಗಳನ್ನು ಹಿಂಸಿಸುವುದಕ್ಕೆ ಇಸ್ಲಾಮ್ ಧರ್ಮದಲ್ಲಿ ಅವಕಾಶವಿಲ್ಲದಿದ್ದರೂ, ಕನಿಷ್ಠ ಆ ವ್ಯಕ್ತಿಯ ಮಾತುಗಾರಿಕೆಯ ತೀಕ್ಷ್ಣತೆಯನ್ನು ಕುಗ್ಗಿಸಲು ಅವನ ಮುಂದಿನ ಹಲ್ಲುಗಳನ್ನು ಕೀಳಬೇಕು ಎಂದು ಹಲವರು ಆಗ್ರಹಿಸಿದರು. ಆದರೆ ಅಂತಹ ಯಾವುದೇ ಕೃತ್ಯ ನಡೆಸುವುದಕ್ಕೆ ಪ್ರವಾದಿವರ್ಯರು (ಸ) ಅನುಮತಿ ನೀಡಲಿಲ್ಲ.

ಪ್ರಸ್ತುತ ಯುದ್ಧ ಕೈದಿಗಳ ಪೈಕಿ ಪ್ರತಿಯೊಬ್ಬರೂ ಮುಸಲ್ಮಾನರನ್ನೆಲ್ಲ ಸದೆಬಡಿದು ಇಸ್ಲಾಮ್ ಧರ್ಮವನ್ನು ಶಾಶ್ವತವಾಗಿ ಅಳಿಸಿಬಿಡಬೇಕೆಂಬ ಘೋಷಿತ ಉದ್ದೇಶದಿಂದಲೇ ಶಸ್ತ್ರ ಸಜ್ಜಿತರಾಗಿ ಸರ್ವ ಸಿದ್ಧತೆಯೊಂದಿಗೆ ಯುದ್ಧ ರಂಗಕ್ಕೆ ಬಂದವರಾಗಿದ್ದರು. ಅಂತಹ ವ್ಯಕ್ತ ಶತ್ರುಗಳನ್ನು ಇಷ್ಟೊಂದು ಘನತೆ ಮತ್ತು ಸೌಜನ್ಯ ದೊಂದಿಗೆ ನಡೆಸಿಕೊಂಡ ಧರ್ಮವು ಅನ್ಯಸಮುದಾಯಗಳ ಜನಸಾಮಾನ್ಯರೊಂದಿಗೆ ಯಾವ ಬಗೆಯ ವ್ಯವಹಾರವನ್ನು ಪ್ರೋತ್ಸಾಹಿಸುತ್ತದೆಂಬುದನ್ನು ಯಾರಾದರೂ ಸುಲಭವಾಗಿ ಊಹಿಸಬಹುದು.

ಪ್ರವಾದಿಯ ಪುತ್ರಿ ಝೈ ನಬ್ ಆಗಿನ್ನೂ ಮಕ್ಕಾದಲ್ಲಿದ್ದರು. ಅವರ ಪತಿ ಅಬುಲ್ ಆಸ್ ಮುಸ್ಲಿಮರ ವಿರುದ್ಧ ದಂಡೆತ್ತಿ ಬಂದಿದ್ದ ವಿರೋಧಿ ಸೇನೆಯ ಯೋಧರಾಗಿದ್ದರು. ಅವರ ಪಡೆ ಯುದ್ಧದಲ್ಲಿ ಸೋತಾಗ ಇತರ ಅನೇಕರ ಜೊತೆ ಅವರೂ ಯುದ್ಧ ಕೈದಿಯಾಗಿ ಮುಸ್ಲಿಮರ ಬಂಧಿಯಾಗಿದ್ದರು. ಅವರ ಬಿಡುಗಡೆಗಾಗಿ ಅವರ ಪತ್ನಿ, ಪ್ರವಾದಿ ಪುತ್ರಿ ಝೈ ನಬ್ ಮಕ್ಕಾದಿಂದ ಒಂದು ದುಬಾರಿ ಕಂಠ ಹಾರವನ್ನು ಪರಿಹಾರ ಧನವಾಗಿ ಕಳಿಸಿಕೊಟ್ಟರು. ಅದನ್ನು ಸ್ವೀಕರಿಸಿ ಅಬುಲ್ ಆಸ್ ರನ್ನು ಬಿಡುಗಡೆಗೊಳಿಸಲಾಯಿತು. ನಿಜವಾಗಿ ಆ ಹಾರವು ಝೈನಬ್ ರ ವಿವಾಹದ ವೇಳೆ ಆಕೆಯ ತಾಯಿ ಹಾಗೂ ಪ್ರವಾದಿ ಪತ್ನಿ ಖದೀಜಾ (ರ) ಆಕೆಗೆ ಉಡುಗೊರೆಯಾಗಿ ನೀಡಿದ್ದ ಹಾರವಾಗಿತ್ತು. ಈ ವಿಷಯವು ಪ್ರವಾದಿಯ ಅನುಯಾಯಿಗಳಿಗೆ ತಿಳಿದಾಗ, ಹಾರವು ಯಾರ ಪಾಲಿಗೆ ಬಂದಿತ್ತೋ ಅವರು ಅದನ್ನು ಪ್ರವಾದಿಗೆ ನೀಡಿದರು. ಈ ರೀತಿ ತಮ್ಮ ಕೈಸೇರಿದ ಹಾರವನ್ನು ಪ್ರವಾದಿ (ಸ), ತಮ್ಮ ಅಳಿಯ ಅಬುಲ್ ಆಸ್ ರಿಗೆ ನೀಡಿ ಅದನ್ನು ಝೈ ನಬ್ ರಿಗೆ ಮರಳಿಸಲು ಹೇಳಿದರು.

ಕೆಲವು ಗಮನಾರ್ಹ ಐತಿಹಾಸಿಕ ಸತ್ಯಗಳು:

ಪ್ರವಾದಿ ಮುಹಮ್ಮದ್ (ಸ) ಮಕ್ಕಾದಲ್ಲಿ ಸತ್ಯ ಪ್ರಸಾರದ ಮತ್ತು ಕುರ್ ಆನ್ ನ ವಚನಗಳನ್ನು ಜನರಿಗೆ ಪರಿಚಯಿಸುವ ಚಟುವಟಿಕೆಯನ್ನು ಆರಂಭಿಸಿದಾಗಲೇ ಅವರ ವಿರುದ್ಧ ಪ್ರತಿರೋಧ ಆರಂಭವಾಗಿತ್ತು. ಕೇವಲ ಕೆಲವರು ಮಾತ್ರ ಪ್ರವಾದಿಯ ಅನುಯಾಯಿಗಳಾಗಿ ಮಾರ್ಪಟ್ಟರು. ಅನುಯಾಯಿಗಳ ಸಂಖ್ಯೆ ಕ್ರಮೇಣ ಏರುತ್ತಾ ಹೋಯಿತಾದರೂ, ಏರಿಕೆಯ ಗತಿ ಬಹಳ ನಿಧಾನವಾಗಿತ್ತು. ಅತ್ತ, ದಿನದಳೆದಂತೆ ವಿರೋಧದ ಪ್ರಮಾಣ ಮತ್ತು ಸ್ವರೂಪ ಮಾತ್ರ ಬಹಳಷ್ಟು ವಿಸ್ತರಿಸುತ್ತಾ, ತೀವ್ರವಾಗುತ್ತಾ ಸಾಗಿತ್ತು. ಪ್ರವಾದಿ ಮತ್ತವರ ಅನುಯಾಯಿಗಳನ್ನು ಕಂಡ ಕಂಡಲ್ಲಿ ನಿಂದಿಸುವ, ಗೇಲಿ ಮಾಡುವ ಮತ್ತು ಅವರ ಮೇಲೆ ಶಾರೀರಿಕ ಹಲ್ಲೆ ನಡೆಸುವ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟವು. ಪ್ರವಾದಿವರ್ಯರ(ಸ) ಅದೆಷ್ಟೋ ಅನುಯಾಯಿ ಪುರುಷರನ್ನು ಮತ್ತು ಸ್ತ್ರೀಯರನ್ನು ಅಮಾನುಷ ಹಿಂಸೆಗೆ ಗುರಿಪಡಿಸಲಾಯಿತು. ಯಾಸಿರ್ (ರ) ಎಂಬ ಪ್ರವಾದಿಯ ಸಂಗಾತಿಯನ್ನು ಮತ್ತು ಯಾಸಿರ್ ರ ಪತ್ನಿ ಸುಮಯ್ಯಾ (ರ) ರನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಯಿತು. ಕೊನೆಗೆ ಪ್ರವಾದಿವರ್ಯರ ಹತ್ಯೆಗೂ ಷಡ್ಯಂತ್ರವೊಂದು ನಡೆಯಿತು.

ಪ್ರವಾದಿತ್ವದ ಬಳಿಕ, ಅಂದರೆ, ಪ್ರವಾದಿ ಮುಹಮ್ಮದ್ (ಸ) ತಾವು ದೇವದೂತರೆಂದು ಘೋಷಿಸಿ ಸತ್ಯಧರ್ಮದ ಪ್ರತಿಪಾದನೆ ಆರಂಭಿಸಿದ ಬಳಿಕದ 7ನೇ ವರ್ಷ ಮುಹರ್ರಮ್ ತಿಂಗಳಲ್ಲಿ ಮುಸ್ಲಿಮರು ಮತ್ತವರ ಬೆಂಬಲಿಗರ ಪಾಲಿಗೆ ಭಾರೀ ಪರೀಕ್ಷೆಯೊಂದು ಎದುರಾಯಿತು. ಮಕ್ಕಾದ ವಿವಿಧ ಜನಾಂಗ ಮತ್ತು ಗೋತ್ರಗಳಿಗೆ ಸೇರಿದ್ದ ಎಲ್ಲ ಮುಸ್ಲಿಮ್ ವಿರೋಧಿ ವ್ಯಕ್ತಿಗಳು ಮತ್ತು ಗುಂಪುಗಳು ಒಂದು ಸಂಯುಕ್ತ ತಂಡವಾಗಿ ಮಾರ್ಪಟ್ಟರು. ಅವರ ನಿಯೋಗವು ಪ್ರವಾದಿಯ ಚಿಕ್ಕಪ್ಪ ಹಾಗೂ ಅವರ ಪೋಷಕರಾಗಿದ್ದ ಅಬೂ ತಾಲಿಬ್ ರ ಬಳಿಗೆ ಹೋಯಿತು. “ನೀವು ಮುಹಮ್ಮದ್ (ಸ)ರಿಗೆ ನೀಡಿರುವ ರಕ್ಷಣೆಯನ್ನು ಹಿಂದೆಗೆದುಕೊಂಡು ಅವರನ್ನು ನಮ್ಮ ವಶಕ್ಕೆ ಬಿಟ್ಟುಕೊಡಬೇಕು” ಎಂಬ ಬೇಡಿಕೆಯನ್ನು ಮುಂದಿಟ್ಟರು. ಹಾಗೆ ಮಾಡದಿದ್ದರೆ ನಿಮ್ಮನ್ನು ಬಹಿಷ್ಕರಿಸಲಾಗುವುದು ಎಂಬ ಬೆದರಿಕೆಯನ್ನೂ ಒಡ್ಡಿದರು. ಆದರೆ ಅಬೂ ತಾಲಿಬ್ ಯಾವ ಬೆದರಿಕೆಗೂ ಜಗ್ಗಲಿಲ್ಲ. ಅವರು ಮುಸ್ಲಿಮರಾಗಿರಲಿಲ್ಲ. ಆದರೆ ಪ್ರವಾದಿಯನ್ನು ಅಪಾರ ಪ್ರೀತಿಸುತ್ತಿದ್ದರು. ಯಾವ ಕಾರಣಕ್ಕೂ ಅವರನ್ನು ತಾನು ಬಿಟ್ಟು ಕೊಡುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಸಾರಿ ಬಿಟ್ಟರು.

ಇದಕ್ಕುತ್ತರವಾಗಿ ಎಲ್ಲ ವಿರೋಧಿ ಗುಂಪುಗಳ ನಾಯಕರು ಜೊತೆಗೂಡಿ, ಪ್ರವಾದಿ ಮತ್ತು ಅವರ ಅನುಯಾಯಿಗಳು ಹಾಗೂ ಬೆಂಬಲಿಗರ ಮೇಲೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹೇರುವ ನಿರ್ಧಾರ ಕೈಗೊಂಡರು. ಅವರು ಒಂದು ಜಂಟಿ ಬಹಿಷ್ಕಾರ ಪತ್ರವನ್ನು ಬರೆದು ಅದರಲ್ಲಿ ಎಲ್ಲ ಗೋತ್ರಗಳ ನಾಯಕರ ಸಹಿ ನಮೂದಿಸಿ ಪವಿತ್ರ ಕಾಬಾದ ಗೋಡೆಯಲ್ಲಿ ತೂಗು ಹಾಕಿದರು. ಆ ಮೂಲಕ ತಮ್ಮ ಬಹಿಷ್ಕಾರದ ನಿರ್ಧಾರಕ್ಕೆ ಧಾರ್ಮಿಕ ರೂಪ ಕೊಡುವುದು ಅವರ ಉದ್ದೇಶವಾಗಿತ್ತು. ಯಾವುದೇ ವ್ಯಕ್ತಿ ಬನೂ ಹಾಶಿಮ್ ಮತ್ತು ಬನೂ ಅಬೂ ತಾಲಿಬ್ ಗೋತ್ರಕ್ಕೆ ಸೇರಿದವರ ಜೊತೆ ಯಾವುದೇ ವ್ಯವಹಾರ ಮಾಡಬಾರದು, ಯಾರೂ ಅವರಿಗೆ ಏನನ್ನೂ ಮಾರಬಾರದು, ಅವರಿಂದ ಏನನ್ನೂ ಖರೀದಿಸಬಾರದು, ಅವರ ಗೋತ್ರಕ್ಕೆ ಸೇರಿದವರ ಜೊತೆ ವಿವಾಹವಾಗಬಾರದು, ತಿನ್ನುವ ಅಥವಾ ಕುಡಿಯುವ ಯಾವುದೇ ವಸ್ತು ಅವರಿಗೆ ತಲುಪದಂತೆ ನೋಡಿಕೊಳ್ಳಬೇಕು, ಅವರು ಮುಹಮ್ಮದ್ ರನ್ನು ಸಂಪೂರ್ಣ ಕೈಬಿಟ್ಟು ಅವರನ್ನು ನಮ್ಮ ವಶಕ್ಕೆ ಒಪ್ಪಿಸುವ ತನಕ ಯಾರೂ ಅವರ ಜೊತೆಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು – ಎಂದು ಆ ಬಹಿಷ್ಕಾರ ಪತ್ರದಲ್ಲಿ ಬರೆಯಲಾಗಿತ್ತು.

ಬಹಿಷ್ಕಾರವು ಪ್ರವಾದಿ ಮುಹಮ್ಮದ್ (ಸ), ಮತ್ತವರ ಕುಟುಂಬದವರಿಗೆ ಹಾಗೂ ಅವರ ಅನುಯಾಯಿ ಮುಸ್ಲಿಮರಿಗೆ ಮಾತ್ರವಲ್ಲ, ಅವರಿಗೆ ಬೆಂಬಲ ನೀಡಿದ, ಮುಸ್ಲಿಮರಲ್ಲದ ಬಂಧುಗಳಿಗೂ ಅನ್ವಯಿಸಿತ್ತು. ಪ್ರಸ್ತುತ ಅವಧಿಯಲ್ಲಿ ಪ್ರವಾದಿ (ಸ), ಅವರ ಅನುಯಾಯಿಗಳು ಮತ್ತು ಅವರ ಗೋತ್ರದವರನ್ನು ಮಕ್ಕಾದ ಒಂದು ಕಣಿವೆ ಪ್ರದೇಶದಲ್ಲಿ ಸಂಪೂರ್ಣ ದಿಗ್ಬಂಧನದ ಸ್ಥಿತಿಯಲ್ಲಿಡಲಾಗಿತ್ತು. ಅವರಿಗೆ ಅನ್ನಾಹಾರ ಮತ್ತು ಔಷಧಿ ಕೂಡಾ ತಲುಪದಂತೆ ತಡೆಯಲಾಗಿತ್ತು. ಅದೆಷ್ಟೋ ದಿನಗಳ ಕಾಲ ಬಹಿಷ್ಕೃತರು ಹೊಟ್ಟೆಗಿಲ್ಲದೆ ನರಳಬೇಕಾಯಿತು. ವಿಶೇಷವಾಗಿ ಮುಸ್ಲಿಮ್ ಮಹಿಳೆಯರು ಮತ್ತು ಮಕ್ಕಳು ತುಂಬಾ ಪಾಡು ಪಡಬೇಕಾಯಿತು. ಅವರೆಲ್ಲ, ಯಾರಾದರೂ ಹಿತೈಷಿಗಳು ಗುಟ್ಟಾಗಿ ತಲುಪಿಸುತ್ತಿದ್ದ ಸಾಮಗ್ರಿಗಳನ್ನೇ ಅವಲಂಬಿಸಿದ್ದರು. ಈ ಬಗೆಯ ಬಹಿಷ್ಕಾರದಿಂದ ಪ್ರವಾದಿ ಮತ್ತವರ ಅನುಯಾಯಿಗಳು ಮತ್ತು ಬೆಂಬಲಿಗರು ಒಂದೆರಡು ತಿಂಗಳಲ್ಲೇ ಸೋಲೊಪ್ಪಿ ಶರಣಾಗಿ ಬಿಡುತ್ತಾರೆ ಎಂಬುದು ಶತ್ರುಗಳ ನಿರೀಕ್ಷೆಯಾಗಿತ್ತು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಪ್ರವಾದಿವರ್ಯರು (ಸ) ಮತ್ತವರ ಅನುಯಾಯಿಗಳು ಸತ್ಯ ಪ್ರಸಾರದ ಕಾರ್ಯವನ್ನು ಮುಂದುವರಿಸಿದರು. ಬಹಿಷ್ಕಾರದ ಮಧ್ಯೆಯೂ ಅವರು ಜನರನ್ನು ಸಂಪರ್ಕಿಸಿ ಅವರಿಗೆ ಸತ್ಯ ಸಂದೇಶ ತಲುಪಿಸುವ ಶ್ರಮದಲ್ಲಿ ನಿರತರಾಗಿದ್ದರು. ವಿಶೇಷವಾಗಿ ಹೊರ ಊರುಗಳಿಂದ ಬರುತ್ತಿದ್ದ ಹಜ್ ಯಾತ್ರಿಕರಿಗೆ ಮತ್ತು ವರ್ತಕರಿಗೆ ಅವರು ಇಸ್ಲಾಮ್ ಧರ್ಮವನ್ನು ಪರಿಚಯಿಸುತ್ತಿದ್ದರು. ಈ ಬಹಿಷ್ಕಾರ ಮುಂದಿನ ಮೂರು ವರ್ಷಗಳ ಕಾಲ ಜಾರಿಯಲ್ಲಿತ್ತು. ಆದರೆ ಈ ಬಗೆಯ ಬಹಿಷ್ಕಾರದ ಬಗ್ಗೆ ಮಕ್ಕಾದಲ್ಲಿ ಹಲವರಿಗೆ ಇದ್ದ ಅಪರಾಧಿ ಮನೋಭಾವ ಮತ್ತು ಬಹಿಷ್ಕೃತರ ಬಗ್ಗೆ ಹಲವರಲ್ಲಿದ್ದ ಅನುಕಂಪದಿಂದಾಗಿ ಕ್ರಮೇಣ ಬಹಿಷ್ಕಾರದ ತೀವ್ರತೆ ಕುಗ್ಗುತ್ತಾ ಹೋಯಿತು. ಅತ್ತ ಕಾಬಾದ ಗೋಡೆಗೆ ಲಗತ್ತಿಸಲಾಗಿದ್ದ ಬಹಿಷ್ಕಾರ ಪತ್ರದ ಬಹುಭಾಗವನ್ನು ಗೆದ್ದಲು ತಿಂದು ಬಿಟ್ಟಿತು. ಹೀಗೆ ಬಹಿಷ್ಕಾರ ಕೊನೆಗೊಂಡಿತು. ಆದರೆ ತೀವ್ರ ಸ್ವರೂಪದ ಇತರ ದೌರ್ಜನ್ಯಗಳು ಅವ್ಯಾಹತವಾಗಿ ಮುಂದುವರಿದಿದ್ದವು.

ಈ ಮಧ್ಯೆ ಮಕ್ಕಾದವರ ಕುರುಡು ವಿರೋಧ ಮತ್ತು ಅಮಾನುಷ ಹಿಂಸೆಗಳನ್ನು ತಾಳಲಾಗದೆ ಕೆಲವು ಮುಸ್ಲಿಮರು ಅಬಿಸೀನಿಯ ಎಂಬ ಆಫ್ರಿಕನ್ ದೇಶವೊಂದಕ್ಕೆ (ಈಗಿನ ಇಥಿಯೋಪಿಯಾದ ಉತ್ತರ ಭಾಗ) ವಲಸೆ ಹೋಗಿ ಅಲ್ಲಿ ಆಶ್ರಯ ಪಡೆದರು. ಮೊದಲ ಹಂತದಲ್ಲಿ 11 ಮಂದಿ ಮುಸ್ಲಿಮ್ ಪುರುಷರು 4 ಮಹಿಳೆಯರ ತಂಡ ಮತ್ತು ಮುಂದಿನ ಹಂತದಲ್ಲಿ 83ಮಂದಿ ಪುರುಷರು ಮತ್ತು 18 ಮಹಿಳೆಯರ ತಂಡವು ಅಬಿಸೀನಿಯಾ ತಲುಪಿತ್ತು. ಪ್ರಸ್ತುತ ವಲಸಿಗರಲ್ಲಿ ಪ್ರವಾದಿಯ (ಸ) ಪುತ್ರಿ ರುಖಯ್ಯಾ(ರ) ಕೂಡಾ ಒಬ್ಬರಾಗಿದ್ದರು. ಮಕ್ಕಾದ ವಿರೋಧಿಗಳು, ಅಲ್ಲೂ ಅವರ ಬೆನ್ನು ಬಿಡಲಿಲ್ಲ. ಅವರು ಅಬಿಸ್ಸೀನಿಯಾದ ಕ್ರೈಸ್ತ ದೊರೆಯ ಬಳಿಗೆ ತಮ್ಮ ಪ್ರತಿನಿಧಿಗಳನ್ನು ಕಳಿಸಿ, ಆತನಿಗೆ, ಮುಸ್ಲಿಮ್ ವಲಸಿಗರ ವಿರುದ್ಧ ಸುಳ್ಳಾರೋಪಗಳ ಒಂದು ದೊಡ್ಡ ಪಟ್ಟಿಯನ್ನೇ ಸಲ್ಲಿಸಿ ಮುಸ್ಲಿಮರನ್ನು ಮರಳಿ ಮಕ್ಕಾಗೆ ಕಳಿಸಬೇಕೆಂದು ಮನವಿ ಮಾಡಿದ್ದರು. ಸಾಲದ್ದಕ್ಕೆ, ಮುಸ್ಲಿಮರು ಏಸುಕ್ರಿಸ್ತ ಮತ್ತು ಕ್ರೈಸ್ತ ಧರ್ಮದ ವಿರೋಧಿಗಳೆಂದು ಆತನ ಬಳಿ ದೂರಿಕೊಂಡಿದ್ದರು. ಆದರೆ ಈ ಕುರಿತು ಮುಸ್ಲಿಮರಿಂದ ಸ್ಪಷ್ಟೀಕರಣ ಪಡೆದ ದೊರೆ, ಮುಸ್ಲಿಮರ ಹೇಳಿಕೆಯಿಂದ ಸಂಪೂರ್ಣ ತೃಪ್ತನಾಗಿ, ಅವರಿಗೆ ಆಶ್ರಯ ಮುಂದುವರಿಸುವುದಾಗಿ ಘೋಷಿಸಿದನು.

ಮುಸ್ಲಿಮರ ವಿರುದ್ಧ ಇಷ್ಟೆಲ್ಲಾ ಅನ್ಯಾಯ, ಹಿಂಸೆಗಳು ನಡೆದಿದ್ದರೂ ಮುಸ್ಲಿಮರಿಗೆ, ತಮ್ಮ ಶತ್ರುಗಳ ಮೇಲೆ ಕೈ ಎತ್ತುವ ಹಕ್ಕನ್ನು ನೀಡಲಾಗಲಿಲ್ಲ. ಈ ಅವಧಿಯುದ್ದಕ್ಕೂ “ಕುಫ್ಫೂ ಐದಿಯಕುಮ್” (ನಿಮ್ಮ ಕೈಗಳನ್ನು ತಡೆದಿಟ್ಟುಕೊಳ್ಳಿರಿ – 4:77) ಎಂಬುದೇ ಕುರ್ ಆನ್ ನ ಮೂಲಕ ಮುಸ್ಲಿಮರಿಗೆ ನೀಡಲಾಗಿದ್ದ ಆದೇಶವಾಗಿತ್ತು. ಎಷ್ಟೇ ಹಿಂಸೆ, ಅಪಮಾನಗಳನ್ನು ಎದುರಿಸಬೇಕಾಗಿ ಬಂದರೂ ವ್ಯಕ್ತಿಗತವಾಗಿಯಾಗಲಿ, ಸಂಘಟಿತವಾಗಿಯಾಗಲಿ ಆತ್ಮ ರಕ್ಷಣೆಗಾಗಿ ಕೂಡಾ ಶತ್ರುಗಳ ವಿರುದ್ಧ ಕೈ ಎತ್ತುವುದನ್ನು ಅವರ ಪಾಲಿಗೆ ಕಟ್ಟು ನಿಟ್ಟಾಗಿ ನಿಷೇಧಿಸಲಾಗಿತ್ತು.

ಸತತ 13 ವರ್ಷಗಳ ಕಾಲ ಮಕ್ಕಾದಲ್ಲಿ ಎಲ್ಲ ಬಗೆಯ ಚಿತ್ರ ಹಿಂಸೆಗಳನ್ನು ಸಹಿಸಿದ ಬಳಿಕ ಪ್ರವಾದಿ (ಸ) ಮಕ್ಕ ದಿಂದ ಸುಮಾರು 450 ಕಿ.ಮೀ ದೂರದ ಮದೀನಾ ಪಟ್ಟಣಕ್ಕೆ ವಲಸೆ ಹೋದರು. ಅವರು ಮದೀನಾದಲ್ಲಿದ್ದಾಗ, ಪ್ರಥಮ ಬಾರಿಗೆ ಯುದ್ಧವನ್ನು ಅನುಮತಿಸುವ ಎರಡು ಕುರ್ ಆನ್ ವಚನಗಳು ಅನಾವರಣಗೊಂಡವು ;

“ಯಾರ ವಿರುದ್ಧ ಯುದ್ಧ ಹೂಡಲಾಗಿತ್ತೋ ಅವರಿಗೆ (ಯುದ್ಧ ಹೂಡುವ) ಅನುಮತಿ ನೀಡಲಾಗಿದೆ – ಏಕೆಂದರೆ ಅವರ ಮೇಲೆ ಅಕ್ರಮ ನಡೆದಿದೆ. ಅವರಿಗೆ ನೆರವಾಗಲು ಅಲ್ಲಾಹನು ಖಂಡಿತ ಶಕ್ತನಾಗಿದ್ದಾನೆ.” (22:39)

“ಯಾರ ವಿರುದ್ಧ ಯುದ್ಧ ಹೂಡಲಾಗಿತ್ತೋ ಅವರು” – ಹಾಗೆಂದರೆ ಯಾರೆಂಬುದನ್ನು ಮುಂದಿನ ವಚನವು ಸ್ಪಷ್ಟ ಪಡಿಸುತ್ತದೆ:
“ಅವರು ”ಅಲ್ಲಾಹನೇ ನಮ್ಮೊಡೆಯ” ಎಂದು ಹೇಳಿದ ಕಾರಣಕ್ಕಾಗಿ, ಅನ್ಯಾಯವಾಗಿ ಅವರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಒಂದು ವೇಳೆ ಅಲ್ಲಾಹನು ಕೆಲವು ಜನರ ಮೂಲಕ ಮತ್ತೆ ಕೆಲವರನ್ನು ತೊಲಗಿಸದೆ ಇದ್ದಿದ್ದರೆ (ವಿರಕ್ತರ) ಆಶ್ರಮಗಳನ್ನು, (ಕ್ರೈಸ್ತರ) ಇಗರ್ಜಿಗಳನ್ನು, (ಯಹೂದ್ಯರ) ಪ್ರಾರ್ಥನಾಲಯಗಳನ್ನು ಮತ್ತು ಧಾರಾಳವಾಗಿ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವ ಮಸೀದಿಗಳನ್ನು ಕೆಡವಿ ಹಾಕಲಾಗುತ್ತಿತ್ತು. …. …. ” (22:40)

ಈ ವಚನಗಳನ್ನು ಗಮನವಿಟ್ಟು ಓದಿದರೆ, ಇದು ನಿಜವಾಗಿ ಹಲವು ವರ್ಷಗಳ ಕಾಲ ಅನ್ಯಾಯ, ದೌರ್ಜನ್ಯಗಳನ್ನು ಎದುರಿಸುತ್ತಾ ಬಂದವರಿಗೆ ತಮ್ಮ ರಕ್ಷಣೆಗೆ ನೀಡಲಾದ ಸಮ್ಮತಿಯೇ ಹೊರತು ಏಕಪಕ್ಷೀಯ ಆಕ್ರಣದ ಅನುಮತಿ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಎರಡನೆಯ ವಚನದಲ್ಲಿ ವಿರಕ್ತರ, ಕ್ರೈಸ್ತರ, ಯಹೂದಿಗಳ ಮತ್ತು ಮುಸ್ಲಿಮರ ಆರಾಧನಾಲಯಗಳನ್ನು ಜಂಟಿಯಾಗಿ ಪ್ರಸ್ತಾಪಿಸುವ ಮೂಲಕ, ಇದು ನ್ಯಾಯ ಮತ್ತು ಅನ್ಯಾಯ, ಸರಿ ಮತ್ತು ತಪ್ಪುಗಳ ನಡುವಣ ಸಂಘರ್ಷವೇ ಹೊರತು ಕೇವಲ ಮುಸ್ಲಿಮರು ಮತ್ತು ಮುಸ್ಲಿಮರಲ್ಲದವರ ನಡುವಣ ಹೋರಾಟಕ್ಕೆ ಸಂಬಂಧಿಸಿದ್ದಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ.

ಒಂದು ಪ್ರಮುಖ ನಿಯಮ

ಜಾಗತಿಕ ಮುಸ್ಲಿಮ್ ಸಮಾಜದಲ್ಲಿ ಒಂದು ವಿಷಯದಲ್ಲಿ ಒಮ್ಮ ತವಿದೆ:
ದಂಡ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರ ಇರುವುದು ಅಧಿಕೃತ ಸರಕಾರಕ್ಕೆ ಮಾತ್ರ. ವ್ಯಕ್ತಿಗಳಿಗಾಗಲಿ, ಜನರ ಗುಂಪು, ಸಂಸ್ಥೆ, ಸಂಘಟನೆ ಇತ್ಯಾದಿಗಳಿಗಾಗಲಿ ಅಂತಹ ಅಧಿಕಾರ ಇರುವುದಿಲ್ಲ.
ಆಕ್ರಮಣಕಾರಿ ಸೈನಿಕ ಕಾರ್ಯಾಚರಣೆಯ ಅಧಿಕಾರ ಇರುವುದು ಅಧಿಕೃತ ಸರಕಾರಕ್ಕೆ ಮಾತ್ರ. ವ್ಯಕ್ತಿಗಳಿಗಾಗಲಿ, ಜನರ ಗುಂಪು, ಸಂಸ್ಥೆ, ಸಂಘಟನೆ ಇತ್ಯಾದಿಗಳಿಗಾಗಲಿ ಅಂತಹ ಅಧಿಕಾರ ಇರುವುದಿಲ್ಲ.

  • ಅಬ್ದುಸ್ಸಲಾಮ್ ಪುತ್ತಿಗೆ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …