Home / ಲೇಖನಗಳು / ರಮಝಾನ್‌ ‘ಮಹಾನ್ ಮತ್ತು ಸಮೃದ್ಧ ತಿಂಗಳು’

ರಮಝಾನ್‌ ‘ಮಹಾನ್ ಮತ್ತು ಸಮೃದ್ಧ ತಿಂಗಳು’

  • ಖರ‍್ರಮ್ ಮುರಾದ್

ರಮಝಾನಿನ ಸಮೃದ್ಧ (ಬರಕತ್) ತಿಂಗಳು ನಮ್ಮನ್ನು ಆವರಿಸಿದೆ. ಅದರ ಅನುಗ್ರಹಗಳು ನಮ್ಮ ಜೀವನವನ್ನು ಫಲವತ್ತಾಗಿಸಲು ವರ್ಷಿಸಲಿವೆ. ಸ್ವತಃ ಪ್ರವಾದಿವರ್ಯರಿಂದಲೇ(ಸ) ‘ಮಹಾನ್ ತಿಂಗಳು ಮತ್ತು ಸಮೃದ್ಧ ತಿಂಗಳು’ ಎಂದು ವರ್ಣಿಸಲ್ಪಟ್ಟ ಈ ತಿಂಗಳ ಶ್ರೇಷ್ಠತೆ ಹಾಗೂ ಸಮೃದ್ಧಿಗೆ ಎಲ್ಲೆಯಿದ್ದೀತೇ? ಏಕೆಂದರೆ ಈ ತಿಂಗಳ ಶ್ರೇಷ್ಠತೆಯ ಉನ್ನತಿಯು ನಮ್ಮ ಕಲ್ಪನೆಗೂ ಮೀರಿದುದಾಗಿದೆ.

ಅಂತಹ ಶ್ರೇಷ್ಠತೆ ಏಕೆ?

ಈ ತಿಂಗಳಲ್ಲಿ ಸಾವಿರ ಮಾಸಗಳಿಗಿಂತಲೂ ಶ್ರೇಷ್ಠವಾದ ರಾತ್ರಿಯೊಂದಿದೆ. ಆ ರಾತ್ರಿಯಲ್ಲಿ ಒಳಿತು ಮತ್ತು ಸಮೃದ್ಧಿಗಳ ಅಮೃತ ವರ್ಷಿಸುತ್ತದೆ, ಮುಂದೆಯೂ ವರ್ಷಿಸಲಿದೆ. ಅದು ಸರ್ವ ಲೋಕಗಳ ಒಡೆಯನು ತನ್ನ ಕೃಪೆಯನ್ನು ನಮ್ಮ ಮೇಲೆ ಅವತೀರ್ಣಗೊಳಿಸಿದ ಪಾವನ ರಾತ್ರಿಯಾಗಿದೆ. ‘ನಾವು ಇದನ್ನು (ಕುರ್‌ಆನನ್ನು) ಮಹಾ ಸಮೃದ್ಧ ರಾತ್ರಿಯಲ್ಲಿ ಅವತೀರ್ಣಗೊಳಿಸಿದವು’ (ಪವಿತ್ರ ಕುರ್‌ಆನ್.44:3) ಆ ಗ್ರಂಥ ಎಂತಹದು? “ನಿನ್ನ ಪ್ರಭುವಿನ ಅನುಗ್ರಹದ ರೂಪದಲ್ಲಿ (ಪವಿತ್ರ ಕುರ್‌ಆನ್.44:6) ಅವತೀರ್ಣವಾದಂಥದ್ದು.

ಆದರೆ, ವಾಸ್ತವದಲ್ಲಿ ಈ ತಿಂಗಳ ಪ್ರತಿ ಹಗಲೂ ಪುಣ್ಯದಾಯಕ ಹಗಲಾಗಿದೆ. ಪ್ರತಿ ರಾತ್ರಿಯೂ ಸಮೃದ್ಧ ರಾತ್ರಿಯಾಗಿದೆ. ಈ ತಿಂಗಳ ಪ್ರತಿ ಮುಂಜಾವಿನಲ್ಲೂ ಅಲ್ಲಾಹನ ಅಸಂಖ್ಯಾತ ದಾಸರಿಗೆ ಇದರ ಪುಣ್ಯ ಪ್ರಾಪ್ತಿಯಾಗುತ್ತದೆ. ಆ ಪುಣ್ಯವೆಂತಹದು? ತನ್ನ ಪ್ರಭುವಿನ ಅನುಸರಣೆ ಮತ್ತು ಅವನ ಸಂಪ್ರೀತಿಗಾಗಿ, ತನ್ನ ಧರ್ಮಸಮ್ಮತ ದೇಹೇಚ್ಛೆಗಳನ್ನು ನಿಯಂತ್ರಿಸುವ ಮೂಲಕ ಕೇವಲ ಅಲ್ಲಾಹನೇ ತನ್ನ ಪ್ರಭು, ಆತನ ದಾಸ್ಯ-ಅನುಸರಣೆಯೇ ತನ್ನ ಜೀವನದ ನೈಜ ಹಸಿವು-ದಾಹವಾಗಿದೆ, ಅವನ ಸಂಪ್ರೀತಿಯಲ್ಲಿಯೇ ತನ್ನ ಮನಶ್ಯಾಂತಿ ಹಾಗೂ ಚೈತನ್ಯ ಅಡಗಿದೆ ಎಂಬುದನ್ನು ನಿರೂಪಿಸುವ ಸೌಭಾಗ್ಯ ಲಭಿಸುವುದೇ ಆ ಪುಣ್ಯ.
ಆ ಪಾವನ ರಾತ್ರಿಯ ಅಂಧಕಾರ ಆವರಿಸಿದಾಗ, ಅಲ್ಲಾಹನ ಅಸಂಖ್ಯಾತ ದಾಸರು ಅಲ್ಲಾಹನ ಸನ್ನಿಧಿಯಲ್ಲಿ ನಿಂತು, ಅವನ ವಾಣಿ ಮತ್ತು ಸ್ತುತಿಗಳಿಂದ ಸಮೃದ್ಧಿಯನ್ನು ತಮ್ಮ ಮೈಮನಗಳಲ್ಲಿ ತುಂಬಿಕೊಳ್ಳುತ್ತಿರುವರು. ಅವರ ಹೃದಯವು ಗಾಜಿನ ದೀಪದಂತೆ ಬೆಳಗಿ, ನಕ್ಷತ್ರ ಮಿನುಗುವಂತೆ ಶೋಭಿಸುವುದು. ಅದು ಅಲ್ಲಾಹನ ಪ್ರಕಾಶವಾಗಿರುವುದು.

‘ಆ ಪ್ರಕಾಶದ ಉಪಮೆ ಹೀಗಿದೆ- ಒಂದು ಗೋಡೆ ಗೂಡಿನಲ್ಲಿ ಒಂದು ದೀಪವನ್ನಿಡಲಾಗಿದೆ. ದೀಪವು ಒಂದು ಗಾಜಿನ ಬುರುಡೆಯೊಳಗಿದೆ. ಬುರುಡೆಯು ಮುತ್ತಿನಂತೆ ಹೊಳೆಯುವ ತಾರೆಯಂತಿದೆ…’(ಪವಿತ್ರ ಕುರ್‌ಆನ್ 24:25)

“ಬೆಳಗು-ಬೈಗುಗಳಲ್ಲಿ ಅವನ ಕೀರ್ತನೆ ಮಾಡುತ್ತಿರುವವರನ್ನು, ಅವರ ವ್ಯಾಪಾರ ಮತ್ತು ಕ್ರಯ-ವಿಕ್ರಯಗಳು ಅಲ್ಲಾಹನ ಸ್ಮರಣೆಯಿಂದಲೂ ನಮಾಝಿನ ಸಂಸ್ಥಾಪನೆಯಿಂದಲೂ ಝಕಾತಿನ ಪಾವತಿಯಿಂದಲೂ ಅಲಕ್ಷ್ಯವಾಗಿಡುವುದಿಲ್ಲ.” (ವರದಿ: ಸಲ್ಮಾನ್ ಫಾರ್ಸಿ(ರ) – ಬೈಹಕಿ)

“ರಮಝಾನ್ ಆಗತವಾದಾಗ ಆಕಾಶದ ಕವಾಟಗಳು ತೆರೆಯಲ್ಪಡುತ್ತವೆ ಮತ್ತು ಒಳಿತುಗಳ ಹಾದಿಯಲ್ಲಿ ನಡೆಯುವ ಸೌಭಾಗ್ಯ ಹಾಗೂ ಅವಕಾಶ ದೊರೆಯುತ್ತದೆ. ನರಕದ ಬಾಗಿಲು ಮುಚ್ಚಲ್ಪಡುತ್ತದೆ ಮತ್ತು ಉಪವಾಸ ವ್ರತವು ಕೆಡುಕುಗಳ ಹಾದಿಗೆ ಅಡ್ಡವಾಗಿ ನಿಲ್ಲುತ್ತದೆ. ಪಿಶಾಚಿಗಳನ್ನು ಸಂಕೋಲೆಗಳಲ್ಲಿ ಬಂಧಿಸಿಡಲಾಗುತ್ತದೆ ಮತ್ತು ಕೆಡುಕು ಹರಡುವ ಅವಕಾಶ ನಾಸ್ತಿಯಾಗುತ್ತದೆ.” [ವರದಿ: ಅಬೂಹುರೈರಾ(ರ) – ಬುಖಾರಿ, ಮುಸ್ಲಿಮ್]

“ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸುವವನ ಹಿಂದಿನ ಮತ್ತು ಮುಂದಿನ ಪಾಪಗಳನು ಕ್ಷಮಿಸಲಾಗುವುದು. ಆ ತಿಂಗಳ ರಾತ್ರಿಗಳಲ್ಲಿ ನಮಾಝ್‌ಗೆ ನಿಂತವನ ಪಾಪಗಳನ್ನು ಕ್ಷಮಿಸಲಾಗುವುದು ಹಾಗೂ ವಿಧಿ ನಿರ್ಣಾಯಕ ರಾತ್ರಿಯಲ್ಲಿ (ಲೈಲತುಲ್ ಕದ್) ಅಲ್ಲಾಹನ ಆರಾಧನೆಗೆ ನಿಂತವನ ಪಾಪಗಳನ್ನೂ ಕ್ಷಮಿಸಲಾಗುವುದೆಂದು ಸುವಾರ್ತೆ ನೀಡಲಾಗಿದೆ. ಇದಕ್ಕೆ ಶರತ್ತು ಇಷ್ಟೇ – ಆತ ತನ್ನ ಪ್ರಭುವಿನ ವಾಣಿ ಮತ್ತು ವಾಗ್ದಾನಗಳನ್ನು ನಿಜವೆಂದು ಗಣಿಸಬೇಕು. ತಾನು ಮಾಡಿದ ಅನುಸರಣೆಯ ಕರಾರನ್ನು ಪ್ರಾಮಾಣಿಕತೆಯಿಂದ ಪಾಲಿಸಬೇಕು ಮತ್ತು ಸ್ವಯಂ ಅರಿವು ಹಾಗೂ ಆತ್ಮವಿಮರ್ಶೆ ಮಾಡುವುದರಿಂದ ಅಲಕ್ಷ್ಯನಾಗಿರಬಾರದು.” [ವರದಿ: ಅಬೂಹುರೈರಾ(ರ) – ಬುಖಾರಿ, ಮುಸ್ಲಿಮ್ ]

ನಮ್ಮ ಪಾತ್ರವೇನು?
ಈ ತಿಂಗಳ ಮಹಾನತೆ ಮತ್ತು ಸಮೃದ್ಧಿಯು ನಿಶ್ಚಯವಾಗಿಯೂ ಉತ್ಕೃಷ್ಟವಾಗಿದೆ. ಆದರೆ ಕಾಲಚಕ್ರದೊಂದಿಗೇ ಉರುಳುತ್ತಾ ಆ ತಿಂಗಳನ್ನು ಹೊಂದುವ ಪ್ರತಿಯೊಬ್ಬರಿಗೂ ಅದರ ಕರುಣೆ ಮತ್ತು ಸಮೃದ್ಧಿ ಲಭಿಸುವುದೆಂದು ಭಾವಿಸಲಾಗದು. ಇದರ ಉಪಮೆ ಹೀಗಿದೆ ಮಳೆ ಸುರಿದಾಗ, ನದಿ-ನಾಲೆಗಳು ತಂತಮ್ಮ ವಿಸ್ತಾರ ಹಾಗೂ ಆಳಕ್ಕೆ ಅನುಗುಣವಾಗಿ ಅದರ ನೀರಿನಿಂದ ಪ್ರಯೋಜನ ಪಡೆಯುತ್ತವೆ. ಭೂಮಿಯ ವಿವಿಧ ಭಾಗಗಳೂ ಕೂಡ ತಂತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಫಸಲನ್ನು ನೀಡುತ್ತವೆ. ಮಳೆಯ ಪ್ರಯೋಜನವೇನೋ ಏಕ ಪ್ರಕಾರವಾಗಿರುತ್ತದೆ. ಆದರೆ, ವಿಸ್ತಾರವಾದ ನದಿಯಲ್ಲಿ ತುಂಬುವಷ್ಟು ನೀರು ಸಣ್ಣ ನಾಲೆಯಲ್ಲಿ ತುಂಬಲು ಸಾಧ್ಯವಿಲ್ಲ. ಅದೇ ರೀತಿ, ಯಾವುದಾದರೂ ಬಂಡೆ ಅಥವಾ ಬಂಜರು ಭೂಮಿಯಲ್ಲಿ ಮಳೆ ಸುರಿದರೆ, ಆ ನೀರು ಬಂಡೆ ಅಥವಾ ಬಂಜರು ಭೂಮಿಯ ಮೇಲ್ಮೈಯಿಂದಲೇ ಹರಿದು ಹೋಗುತ್ತದೆ. ಅದರೆ ಫಲವತ್ತಾದ ಭೂ ಪ್ರದೇಶದಲ್ಲಿ ಮಳೆ ಸುರಿದಾಗ ಅದು ಹಸಿರಿನಿಂದ ನಳನಳಿಸುತ್ತದೆ. ಮಾನವ ಪ್ರಕೃತಿ ಮತ್ತು ಭಾಗ್ಯದ ಅವಸ್ಥೆಯೂ ಅದುವೇ ಆಗಿದೆ.

ರಮಝಾನಿನ ಈ ಭಂಡಾರದಿಂದ ನಿಮಗೇನು ದೊರಕುವುದು? ಈ ಮೇಲೆ ತಿಳಿಸಿದ ಭೂ ಪ್ರದೇಶದಂತೆ ಹೃದಯವು ಮೃದು ಮತ್ತು ನೇತ್ರಗಳು ಆದ್ರ‍್ರಗೊಳ್ಳುವುವು. ಈಮಾನಿನ ಬೀಜವು ನಿಮ್ಮೊಳಗೆ ಬಿತ್ತಲ್ಪಡುವುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆ ಬೀಜವು ಗಿಡವಾಗಿಯೂ ಗಿಡವು ಮರವಾಗಿಯೂ ಬೆಳೆದು ಸತ್ಕರ್ಮದ ಫಲಪುಷ್ಪ ಮತ್ತು ಎಲೆಗಳಿಂದ ನಿಮ್ಮ ಆತ್ಮವು ಕಂಗೊಳಿಸುವುದು. ತರುವಾಯ ನೀವು ನಿಮ್ಮ ಚಿರಂತನ ಸಮೃದ್ಧಿಯ ಫಸಲನ್ನು ಕೊಯ್ಯುವಿರಿ, ಕೃಷಿಕನಂತೆ ನೀವೂ ಪರಿಶ್ರಮಪಟ್ಟು, ಕರ್ಮವೆಸಗಿದರೆ ಫಸಲನ್ನು ಪಡೆಯಬಹುದು. ಒಂದು ವೇಳೆ ನಿಮ್ಮ ಹೃದಯ ಕಲ್ಲಿನಂತೆ ಕಠೋರವಾಗಿ ನೀವು ಬೋಧ ಶೂನ್ಯ ಕೃಷಿಕನಂತೆ ಅಲಕ್ಷ್ಮರಾಗಿದ್ದು ಬಿಟ್ಟರೆ, ಉಪವಾಸ ಮತ್ತು ತರಾವೀಹ್ ನಿಂದ ದೊರಕುವ ಕರುಣೆ-ಸಮೃದ್ಧಿಯ ನೀರೆಲ್ಲವೂ ಹರಿದು ಹೋದೀತು ಮತ್ತು ನಿಮಗೇನೂ ಲಭಿಸದೆ ಹೋಗಬಹುದು.

ಏನನ್ನೇ ಗಳಿಸುವುದಿದ್ದರೂ ಅಲ್ಲಾಹನ ಅನುಗ್ರಹ ಅತ್ಯಗತ್ಯ. ಆದರೆ ಈ ಅನುಗ್ರಹವು ಪರಿಶ್ರಮ ಪಡುವವರಿಗಷ್ಟೇ ಲಭಿಸುವುದು. ನೀವು ಅಲ್ಲಾಹನಡೆಗೆ ಒಂದು ಗೇಣು ಮುಂದಡಿಯಿಟ್ಟರೆ, ಅಲ್ಲಾಹನು ಎರಡು ಗೇಣು ನಿಮ್ಮೆಡೆಗೆ ಬರುವನು, ನೀವು ಅಲ್ಲಾಹನ ಬಳಿಗೆ ನಡೆದರೆ, ಅಲ್ಲಾಹನು ನಿಮ್ಮ ಬಳಿಗೆ ಓಡಿ ಬರುವನು, ಎಂದು ಸ್ವತಃ ಅಲ್ಲಾಹನೇ ಹೇಳಿರುತ್ತಾನೆಂದು ಪ್ರವಾದಿವರ್ಯರು(ಸ) ತಿಳಿಸಿರುವರು. (ಮುಸ್ಲಿಮ್, ಅಬೂದಾವೂದ್) ಆದರೆ ನೀವು ನಿಂತೇ ಇದ್ದರೆ, ಬೆನ್ನು ತಿರುಗಿಸಿದರೆ ಅಥವಾ ಆಲಕ್ಷ್ಯರಾಗಿದ್ದು ಬಿಟ್ಟರೆ ದೇವ ಸೌಭಾಗ್ಯವು ಎಲ್ಲಿಂದ ದೊರೆತೀತು ಹೇಳಿ?

ಇನ್ನು ರಮಝಾನಿನ ಇಡೀ ತಿಂಗಳು ಕಳೆದು ಹೋಗುತ್ತಿದ್ದು, ಕೃಪೆ ಮತ್ತು ಸಮೃದ್ಧಿಗಳನ್ನು ಜನರು ಬಾಚಿಕೊಂಡು ತಮ್ಮಲ್ಲಿ ತುಂಬಿಕೊಳ್ಳುತ್ತಿದ್ದು, ನಿಮ್ಮ ಜೋಳಿಗೆ ಮಾತ್ರ ಖಾಲಿಯಾಗಿರುವಂತಹ ದುರದೃಷ್ಟ ನಿಮ್ಮದಾಗದಿರಲಿ ಮತ್ತು ಪ್ರವಾದಿವರ್ಯರ(ಸ) ಈ ಮಾತನ್ನು ಚೆನ್ನಾಗಿ ಮನನ ಮಾಡಿಕೊಳ್ಳಿರಿ,
‘ತಮ್ಮ ಉಪವಾಸ ವ್ರತಗಳಿಂದ ಕೇವಲ ಹಸಿವು, ದಾಹವನ್ನಲ್ಲದೆ ಬೇರೇನನ್ನೂ ಗಳಿಸದ ಅದೆಷ್ಟೋ ಉಪವಾಸಿಗರಿದ್ದಾರೆ ಮತ್ತು ತಮ್ಮ ನಮಾಝ್ ಗಳಿಂದ ರಾತ್ರಿ ಜಾಗರಣೆಯ ಹೊರತು ಬೇರೇನನ್ನೂ ಪಡೆಯದಂತಹ ಅದೆಷ್ಟೋ ನಮಾಝಿಗಳಿದ್ದಾರೆ.’ (ವರದಿ: ಅಬೂಹುರೈರಾ(ರ)- ದಾರಿಮಿ.)

ಇನ್ನು ಉಳಿದಿರುವುದು ನಿಮ್ಮ ಸಂಕಲ್ಪ ಮಾತ್ರ. ಪ್ರವಾದಿವರ್ಯರು(ಸ) ರಮಝಾನಿಗೆ ಮುಂಚೆ ತಮ್ಮ ಸಂಗಾತಿಗಳನ್ನುದ್ದೇಶಿಸಿ, ಈ ತಿಂಗಳ ಶ್ರೇಷ್ಠತೆ ಮತ್ತು ಸಮೃದ್ಧಿಯ ಬಗ್ಗೆ ಬೋಧಿಸುತ್ತಿದ್ದರು ಮತ್ತು ಈ ಸಮೃದ್ಧಿಯ ಭಂಡಾರದಿಂದ ನಿಮ್ಮ ಪಾಲನ್ನು ಗಳಿಸಲು ಸಾದ್ಯಂತ ಶ್ರಮಿಸಿರೆಂದೂ ತಾಕೀತು ಮಾಡುತ್ತಿದ್ದರು. ಪ್ರವಾದಿ ಚರ್ಯೆಯ ಅನುಸರಣೆಯಲ್ಲಿ ನನ್ನ ಉದ್ದೇಶವೂ ಇದುವೇ ಆಗಿದೆ. ಅಂದರೆ, ರಮಝಾನ್ ತಿಂಗಳಲ್ಲಿ ಇರುವಂತಹ ಸಮೃದ್ಧಿ ಶ್ರೇಷ್ಟತೆಯ ರಹಸ್ಯವೇನಿದೆಯೋ ಅದನ್ನು ನಿಮಗೆ ತಿಳಿಸ ಬಯಸುತ್ತೇನೆ, ಹಾಗೆಯೇ ಅದರಲ್ಲಿ ಅಡಕವಾಗಿರುವ ಅಪಾರ ಪ್ರಯೋಜನಗಳನ್ನು ತಮ್ಮದಾಗಿಸಲು ಯಾವ ರೀತಿಯ ತಯಾರಿ ನಡೆಸಬೇಕು, ಯಾವೆಲ್ಲ ವಿಷಯಗಳ ಬಗ್ಗೆ ವಿಶೇಷ ಆಸಕ್ತಿ ಮತ್ತು ಆಸ್ಥೆ ವಹಿಸಬೇಕು, ಯಾವ ವಿಧಾನವನ್ನು ಅನುಸರಿಸುವುದರಿಂದ ಅಂತಿಮ ಗುರಿಯನ್ನು ತಲುಪಬಹುದು ಹಾಗೂ ಯಾವ ರೀತಿಯ ಶಿಷ್ಟಾಚಾರದಿಂದ ಹೊರಬಂದರೆ ಆ ಗುರಿಯ ಪಥವು ಭ್ರಷ್ಟವಾಗುತ್ತದೆ ಎಂಬಿತ್ಯಾದಿ ವಿಷಯಗಳನ್ನೂ ನಿಮಗೆ ತಿಳಿಸಬಯಸುತ್ತೇನೆ.

ಸಮೃದ್ಧಿ, ಶ್ರೇಷ್ಠತೆಯ ರಹಸ್ಯ
ರಮಝಾನ್ ತಿಂಗಳಲ್ಲಿರುವಂತಹ ಶ್ರೇಷ್ಠತೆ ಮತ್ತು ಸಮೃದ್ಧಿಯ ರಹಸ್ಯವು ಯಾವುದರಲ್ಲಿ ಅಡಗಿದೆ? ಇದನ್ನರಿಯುವುದು ಸರ್ವಪ್ರಥಮ ಅಗತ್ಯವಾಗಿದೆ. ಅನ್ಯಥಾ ರಮಝಾನಿನ ಭಂಡಾರಗಳಿಂದ ಲಾಭ ಗಳಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ರಮಝಾನಿನ ಉದ್ದೇಶವಾದ ಏಕಾಗ್ರತೆ, ಸಂಕಲ್ಪ ಮತ್ತು ಪರಿಶ್ರಮಕ್ಕಾಗಿ ಸಜ್ಜುಗೊಳ್ಳಲೂ ಸಾಧ್ಯವಿಲ್ಲ. ಈ ಶ್ರೇಷ್ಠತೆ ಮತ್ತು ಸಮೃದ್ಧಿಯ ರಹಸ್ಯವು ಕೇವಲ ಒಂದು ವಿಷಯದಲ್ಲಿ ಅಡಕವಾಗಿದೆ. ಅದೆಂದರೆ, ಈ ತಿಂಗಳಲ್ಲಿ ಪವಿತ್ರ ಕುರ್‌ಆನ್ ಅವತೀರ್ಣವಾಗಿತ್ತು. ಅಂದರೆ ಅವತೀರ್ಣಾರಂಭವಾಯಿತು, ಕುರ್‌ಆನನ್ನು ಸಂಪೂರ್ಣವಾಗಿ ಗ್ರಂಥರೂಪದಲ್ಲಿ ಇಳಿಸಿ ಜಿಬ್ರೀಲರ(ಅ) ಸುಪರ್ದಿಗೆ ಒಪ್ಪಿಸಲಾಯಿತು ಅಥವಾ ಅದರ ಅವತೀರ್ಣದ ತೀರ್ಮಾನ ಕೈಗೊಳ್ಳಲಾಯಿತು.

ಒಂದರ್ಥದಲ್ಲಿ, ಈ ತಿಂಗಳಲ್ಲಿ ಪರಮ ದಯಾಮಯನಾದ ಕರುಣಾಳು ಪ್ರಭುವಿನ ಅಪಾರ ಕೃಪೆಯು ಮಾನವರ ಮಾರ್ಗದರ್ಶನದ ವ್ಯವಸ್ಥೆ ಮಾಡಿತು. ಅವನ ಅಪರಿಮಿತ ಯುಕ್ತಿಯು ಮಾನವರಿಗೆ ವಿಚಾರ ಮತ್ತು ಆಚಾರದ ಸರಿಯಾದ, ಸ್ಪಷ್ಟವಾದ ಮಾರ್ಗವನ್ನು ತೋರಿಸಿಕೊಟ್ಟಿತು. ಸರಿ ಮತ್ತು ತಪ್ಪನ್ನು ಅರಿಯುವ ಒರೆಗಲ್ಲನ್ನು ಒದಗಿಸಿತು. ಅದು ಕೊರತೆ, ಏಕಾಗ್ರತೆ ಮತ್ತು ಮಾರ್ಪಾಟಿನಿಂದ ಸಂಪೂರ್ಣ ಮುಕ್ತವಾಗಿದೆ. ಇದು ರಮಝಾನಿನ ಒಂದು ನಿರ್ದಿಷ್ಟ ಹಗಲು ಆರಂಭವಾಗುವುದಕ್ಕೆ ಕೊಂಚ ಮುಂಚೆ ದೇವವಾಣಿಯ ಪ್ರಥಮ ಕಿರಣವು ಪ್ರವಾದಿ ಮುಹಮ್ಮದ್(ಸ) ಹೃದಯವನ್ನು ಬೆಳಗುವ ಮೂಲಕ ಸಂಭವಿಸಿತು. ಈ ತಿಂಗಳಲ್ಲಿ ಉಪವಾಸ ಆಚರಿಸಲಾಗುತ್ತದೆ ಮತ್ತು ಪವಿತ್ರ ಕುರ್‌ಆನ್ ಪಠಿಸಲಾಗುತ್ತದೆ ಎಂಬ ಕಾರಣಕ್ಕಾಗಿ ರಮಝಾನ್ ಸಮೃದ್ಧಿದಾಯಕವಾಗಿರುವುದಲ್ಲ. ಬದಲಾಗಿ, ಈ ತಿಂಗಳಲ್ಲಿ ಕುರ್‌ಆನಿನ ಅವತೀರ್ಣ ಆರಂಭವಾದಂತಹ ಮಹಾನ್ ಘಟನೆ ಸಂಭವಿಸಿದ ಕಾರಣದಿಂದ ಈ ತಿಂಗಳು ಅದಾಗಲೇ ಶ್ರೇಷ್ಠತೆಗೆ ಪಾತ್ರವಾಗಿತ್ತು.

ಇದುವೇ ಈ ತಿಂಗಳಿಡೀ ಉಪವಾಸ ವ್ರತ, ಕುರ್‌ಆನ್ ಪಾರಾಯಣಗಳಿಗೆ ಆಯ್ದುಕೊಳ್ಳಲು ಹೇತುವಾಯಿತು. ಇದನ್ನು ಅಲ್ಲಾಹನು ಹೀಗೆ ವ್ಯಕ್ತಪಡಿಸಿದ್ದಾನೆ.
”ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ‘ಕುರ್‌ಆನ್’ ಅವತೀರ್ಣಗೊಂಡ ತಿಂಗಳು ‘ರಮಝಾನ್’ ಆಗಿರುತ್ತದೆ. ಆದುದರಿಂದ ಯಾವನಾದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು.(ಪವಿತ್ರ ಕುರ್‌ಆನ್ 2:185)

ಕುರ್‌ಆನ್ ಎಂಬ ಅನುಗ್ರಹ
ಕುರ್‌ಆನ್, ಅಲ್ಲಾಹನ ಅನುಗ್ರಹಗಳ ಪೈಕಿ ಅತ್ಯುನ್ನತ ಅನುಗ್ರಹವಾಗಿದೆ. ಅಲ್ಲಾಹನ ಕೃಪೆಗಳಲ್ಲಿ ಸರ್ವಪ್ರಧಾನ ಕೃಪೆಯಾಗಿದೆ. ಅದರ ಅವತೀರ್ಣವು ಮಾನವೇತಿಹಾಸದ ಅತಿ ಮಹತ್ತರ ಘಟನೆಯಾಗಿದೆ ಮತ್ತು ಅಲ್ಲಾಹನ ಅಪಾರ ದಯೆಯು ಈ ಲೋಕದಲ್ಲಿ ವರ್ಷಿಸಿದಂತಹ ಸುಸಂದರ್ಭವಾಗಿದೆ. ಆದ್ದರಿಂದಲೇ ಅಲ್ಲಾಹನು ಈ ರೀತಿ ಹೇಳಿರುವನು; ರಹ್ಮಾನನು (ಪರಮ ದಯಾಮಯನು) ಈ ಕುರ್ ಆನನ್ನು ಕಲಿಸಿದನು (ಪವಿತ್ರ ಕುರ್‌ಆನ್ 55-1,2)
ಮತ್ತು ಇದು ಪರಮ ದಯಾಮಯನೂ ಕರುಣಾನಿಧಿಯೂ ಆದವನ ಕಡೆಯಿಂದ ಅವತೀರ್ಣಗೊಳಿಸಲ್ಪಟ್ಟುದಾಗಿದೆ. (ಪವಿತ್ರ ಕುರ್‌ಆನ್ 41-2)

ಮಾನವನ ಪಾಲಿಗೆ ನ್ಯಾಯ-ಸಮಾನತೆಯ ತಕ್ಕಡಿಯೇನಿದ್ದರೂ ಅದು ಕುರ್‌ಅನ್ ಆಗಿದೆ. ಬೆಳಕಿನ ಕಿರಣ ಮತ್ತು ಆರೋಗ್ಯ ಸೂತ್ರ ಎಲ್ಲವೂ ಈ ಕುರ್‌ಆನ್ ಆಗಿದೆ.

ಅಲ್ಲಾಹನ ಅಸಂಖ್ಯ ಅನುಗ್ರಹಗಳು ಈ ಲೋಕದಲ್ಲಿ ನಮಗೆ ಇದ್ದೇ ಇದೆ. ಪ್ರತಿ ಕ್ಷಣವೂ ನಾವು ಅದರ ಭಂಡಾರದಿಂದ ನಮ್ಮೆರಡೂ ಕೈಗಳಿಂದ ಬಾಚಿಕೊಳ್ಳುತ್ತಲೂ ಇದ್ದೇವೆ. ಆದರೆ ಈ ಜಗತ್ತು ಮತ್ತು ಇಲ್ಲಿನ ಪ್ರತಿಯೊಂದು ಅನುಗ್ರಹವೂ ಕೇವಲ ನಮ್ಮ ಶ್ವಾಸೋಚ್ಛಾಸ ಇರುವ ತನಕ ಮಾತ್ರ ದೊರೆಯುತ್ತಿರುವುದು. ಅಂತಿಮ ಶ್ವಾಸ ಹೊರಟು ಹೋದ ನಂತರ ಜೀವನದ ಕ್ಷಣಗಳೆಲ್ಲವೂ ನಿಂತು ಬಿಡುತ್ತವೆ ಮತ್ತು ಲೋಕದ ಸಕಲ ಅನುಗ್ರಹಗಳೂ ಮುಗಿದು ಹೋಗುತ್ತವೆ. ನಶ್ವರ ಕ್ಷಣಗಳನ್ನು ಅನಶ್ವರವಾದ ಜೀವನದಲ್ಲಿ, ತಾತ್ಕಾಲಿಕ ಸಂತೋಷಗಳನ್ನು ಶಾಶ್ವತ ನೆಮ್ಮದಿಯಾಗಿ, ಮರಣದೊಂದಿಗೆ ಮುಗಿದು ಬಿಡುವ ಅನುಗ್ರಹಗಳನ್ನು ಚಿರಸ್ಥಾಯಿ ಅನುಗ್ರಹಗಳಾಗಿ ಪರಿವರ್ತಿಸುವ ಒಂದೇ ಒಂದು ವಸ್ತುವಿದ್ದರೆ ಅದು ಪವಿತ್ರ ಕುರ್‌ಆನಿನ ಅನುಗ್ರಹ ಮಾತ್ರವಾಗಿದೆ. ಆದ್ದರಿಂದಲೇ ಇದು ಲೋಕದ ಎಲ್ಲ ಸಂಪತ್ತುಗಳಿಗಿಂತಲೂ ಅಮೂಲ್ಯವಾದ ಸಂಪತ್ತಾಗಿದೆ. ಇದೇ ಕಾರಣವಾಗಿ, ಈ ಕುರ್‌ಆನ್ ಅವತೀರ್ಣಗೊಂಡ ರಾತ್ರಿಯನ್ನು ಸಮೃದ್ಧ ರಾತ್ರಿ ಮತ್ತು ವಿಧಿನಿರ್ಣಾಯಕ ರಾತ್ರಿಯೆನ್ನಲಾಯಿತು. ಈ ಕುರ್‌ಆನನ್ನು ಅವತೀರ್ಣಗೊಳಿಸಿದ ಪ್ರಸ್ತಾಪವಿರುವಲ್ಲೆಲ್ಲಾ, ಅಲ್ಲಾಹನು ತನ್ನ ಅಪಾರ ಅನುಗ್ರಹ ವರ್ಷಿಸಿದ, ತನ್ನ ಅನುಪಮ ಯುಕ್ತಿಯ ಮತ್ತು ತನ್ನ ಅಸಾಮಾನ್ಯ ಸಾಮರ್ಥ್ಯದ ಜತೆಯಲ್ಲಿ ಜೋಡಿಸಿ ಹೇಳಿದ್ದಾನೆ. ಹಾಗಾಗಿ, ಈ ತಿಂಗಳು ಕುರ್‌ಆನ್ ಅವತೀರ್ಣದ ದಿನಾಚರಣೆಯ ತಿಂಗಳಾದುದರಿಂದ ಈ ತಿಂಗಳ ಅಂತ್ಯದಲ್ಲಿ ಹಬ್ಬವನ್ನಾಚರಿಸಲು ಹೇಳಿದುದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ.

ಅಲ್ಲಾಹನು ಹೇಳುತ್ತಾನೆ,
‘ಜನರೇ! ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ಉಪದೇಶ ಬಂದಿದೆ. ಇದು ಮನಸ್ಸುಗಳೊಳಗಿನ ಕಾಯಿಲೆಗಳ ಗುಣೌಷಧವಾಗಿದೆ ಮತ್ತು ಅದನ್ನು ಸ್ವೀಕರಿಸಿಕೊಂಡವರಿಗೆ ಸನ್ಮಾರ್ಗದರ್ಶನವೂ ಕೃಪೆಯೂ ಆಗಿರುತ್ತದೆ. ಓ ಪೈಗಂಬರರೇ (ಹೀಗೆ) ಹೇಳಿರಿ, ಇದನ್ನು ಅವತೀರ್ಣಗೊಳಿಸಿದುದು ಅಲ್ಲಾಹನ ಅನುಗ್ರಹ ಮತ್ತು ಕೃಪೆಯಾಗಿರುತ್ತದೆ. ಇದಕ್ಕಾಗಿ ಜನರು ಸಂತೋಷ ಪಡಬೇಕು. ಜನರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಇದು ಉತ್ತಮವಾಗಿದೆ.’(ಪವಿತ್ರ ಕುರ್‌ಆನ್ 10:57-58)

ತಿಂಗಳುಗಳು ಮತ್ತು ದಿನಗಳೆಲ್ಲವೂ ಒಂದೇ ರೀತಿಯಾಗಿರುತ್ತವೆ. ಇವೆಲ್ಲವೂ ಅಲ್ಲಾಹನ ಸೃಷ್ಟಿಗಳು, ಅವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆದರೆ ಸಕಲ ಮಾನವರ ಮತ್ತು ಸರ್ವ ಲೋಕಗಳ ಭವಿಷ್ಯದೊಂದಿಗೆ ಜೋಡಿಕೊಂಡಿರುವ ಕೆಲವು ಕ್ಷಣಗಳೂ ಎದುರಾಗುತ್ತವೆ. ಅಂತಹುದೇ ಒಂದು ಕ್ಷಣ – ಹಿರಾ ಗುಹೆಯಲ್ಲಿ ಅಲ್ಲಾಹನ ಮಾರ್ಗದರ್ಶನದ ಅಂತಿಮ ಕಿರಣ ಪ್ರವೇಶಿಸಿತ್ತು ಹಾಗೂ ಪ್ರವಾದಿವರ್ಯರು(ಸ) ಅದರ ವಾಹಕರಾಗಿ ಮಾರ್ಪಟ್ಟರು. ಆ ಮಹಾನ್ ಕ್ಷಣವು ರಮಝಾನ್ ತಿಂಗಳಲ್ಲಿ ಅಡಕವಾಗಿದೆ ಮತ್ತು ಅದುವೇ ರಮಝಾನ್‌ನ ಶ್ರೇಷ್ಠತೆಯ ರಹಸ್ಯ.

ರಮಝಾನಿನಲ್ಲಿ ಉಪವಾಸ ವ್ರತ ಮತ್ತು ತರಾವೀಹ್ ಗಳೇಕೆ?
ಕುರ್‌ಆನ್ ಅವತೀರ್ಣದ ತಿಂಗಳ ಹಗಳಲ್ಲಿ ಉಪವಾಸ ವ್ರತಾಚರಿಸಲು ಮತ್ತು ಪ್ರತಿ ರಾತ್ರಿ ಕೆಲವು ಹೊತ್ತು (ನಮಾಝ್ ನಲ್ಲಿ) ನಿಂತು ಕುರ್‌ಆನ್ ಆಲಿಸಲು ಮಿಸಲಿರಿಸಿದುದೇಕೆ? ಇದನ್ನು ತಿಳಿಯುವುದು ಅಷ್ಟೇನೂ ಕಷ್ಟವಲ್ಲ. ಪವಿತ್ರ ಕುರ್‌ಆನಿನ ಅನುಗ್ರಹದ ವಾಸ್ತವಿಕತೆಯೇನು ಮತ್ತು ಅದರ ಮೇಲೆ ವಿಶ್ವಾಸವಿರಿಸುವವರ ಹೊಣೆಗಾರಿಕೆಗಳೇನು ಎಂಬುದನ್ನು ಅರಿತರೆ ಸಾಕಾಗುವುದು.

ಕುರ್‌ಆನಿನ ಮಹಾನ್ ಹೊಣೆ ಮತ್ತು ಕಾರ್ಯಭಾರ
ಅನುಗ್ರಹವು ಎಷ್ಟು ಬೆಲೆಬಾಳುತ್ತದೋ ಅದರ ಹಕ್ಕನ್ನು ತೀರಿಸುವ ಹೊಣೆಯೂ ಅಷ್ಟೇ ಘನವಾಗಿರುತ್ತದೆ. ಅಲ್ಲಾಹನ ಗ್ರಂಥ ಮತ್ತು ಅವನ ವಾಣಿಯು ಅತಿದೊಡ್ಡ ಕೃಪೆ ಮತ್ತು ಸಮೃದ್ಧವಾದುದಾಗಿದೆ. ಆದ್ದರಿಂದ, ಅದರ ಕುರಿತಾದ ಹೊಣೆಯೂ ಅತಿ ಪ್ರಮುಖವಾಗಿ ಬಿಡುತ್ತದೆ. ಈ ಗ್ರಂಥವು ಜೀವನದ ನೈಜ ಗುರಿ ಮತ್ತು ಜೀವನವನ್ನು ಯಶಸ್ವಿ ಹಾಗೂ ಸಂತೃಪ್ಪಮಯವಾಗಿ ಮಾಡಲು ಮಾರ್ಗದರ್ಶನವೀಯುತ್ತದೆ ಎಂಬುದೇ ಅದರ ಬಗೆಗಿನ ಹೊಣೆಗಾರಿಕೆಯ ಮಾನದಂಡವಾಗಿದೆ. ಈ ಗ್ರಂಥವು ಮಾನವರ ಸಂಪೂರ್ಣ ಆಂತರಿಕ ಮತ್ತು ಬಾಹ್ಯ ಹಾಗೂ ವೈಯಕ್ತಿಕ ಮತ್ತು ಸಾಮೂಹಿಕ ರೋಗಗಳಿಗೆ ಸಿದ್ಧಔಷದವಾಗಿದೆ. ಇದು ಅಂಧಕಾರದಲ್ಲಿ ದಾರಿಗಾಣದೆ ಪರದಾಡುವವರಿಗೆ ದಾರಿ ದೀಪವಾಗಿದೆ.

ಈ ಅರ್ಥದಲ್ಲಿ ನೋಡಿದರೆ, ದೇವ ಮಾರ್ಗದರ್ಶನದ ಈ ಅನುಗ್ರಹವು ಎರಡು ಹೊಣೆಗಾರಿಕೆಗಳನ್ನು ತನ್ನೊಂದಿಗೆ ಹೊತ್ತು ತರುತ್ತದೆ. ಒಂದನೆಯದಾಗಿ, ಸ್ವತಃ ಅದು ತೋರಿದ ಮಾರ್ಗದಲ್ಲಿ ನಡೆಯುವುದು, ಅದರ ಬೆಳಕಿನಲ್ಲಿ ತನ್ನ ಜೀವನದ ಯಾತ್ರೆಯನ್ನು ಕ್ರಮಿಸುವುದು, ಅದು ಸೂಚಿಸುವ ಗುಣ ಪದವನ್ನು ತನ್ನ ಆಧ್ಯಾತ್ಮಿಕ ರೋಗಗಳ ಶಮನಕ್ಕೆ ಬಳಸುವುದು, ತನ್ನ ಹೃದಯ ಮತ್ತು ಚಿಂತನೆ ಕಾರ್ಯ ಹಾಗೂ ನಡತೆಯನ್ನು ಅದು ತೋರುವ ಒರೆಗಲ್ಲಿಗೆ ಹಚ್ಚುವ ಪ್ರಯತ್ನದಲ್ಲಿ ತೊಡಗಿ ಕೊಳ್ಳುವುದು.

ಎರಡನೆಯದಾಗಿ, ಸಕಲ ಮಾನವರ ಮಾರ್ಗದರ್ಶಕವಾದ ಕುರ್‌ಆನಿನ ಸಂದೇಶವನ್ನು ಕೇವಲ ತನ್ನ ಬಳಿಯಲ್ಲೇ ಇರಿಸದೆ, ಈ ಮಾರ್ಗದರ್ಶನವನ್ನು ಮಾನವರಿಗೆ ತಲುಪಿಸುವುದು, ಅವರ ಮುಂದೆ ಅದನ್ನು ಪ್ರಕಟ ಪಡಿಸುವುದು, ಅದು ತೋರಿದ ಮಾರ್ಗದಲ್ಲಿ ನಡೆಯಲು ಆಹ್ವಾನಿಸುವುದು, ಅಂಧಕಾರದಲ್ಲಿ ಬೆಳಕಿನ ಕಿರಣ ಹರಿಸುವುದು ಮತ್ತು ರೋಗಗ್ರಸ್ತರಿಗೆ ಔಷಧೋಪಚಾರವನ್ನೊದಗಿಸುವುದು.

ಈ ಎರಡನೆಯ ಹೊಣೆಗಾರಿಕೆಯು ಮೊದಲಿನ ಹೊಣೆಗಾರಿಕೆಯ ಅನಿವಾರ್ಯ ಬೇಡಿಕೆ ಮತ್ತು ಅಭೇದ್ಯ ಅಂಗವಾಗಿದೆ. ಎರಡನೆಯ ಕೆಲಸವನ್ನು ಮಾಡದೆ ಮೊದಲಿನ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಒಂದೆಡೆ, ಪವಿತ್ರ ಕುರ್‌ಆನ್ ‘ಹುದಲ್ಲಿನಾಸ್’ (ಮಾನವರಿಗೆ ಮಾರ್ಗದರ್ಶಕ) ಆಗಿದೆಯೆಂಬ ತಿಳಿವಳಿಕೆಯು ಅದನ್ನು ಇತರರಿಗೆ ತಲುಪಿಸುವ ಹೊಣೆಗಾರಿಕೆಯನ್ನು ನೀಡುತ್ತದೆ. ಸರಿಯಾದ ದಾರಿ ತಿಳಿದವರು ದಾರಿ ತಪ್ಪಿದವರಿಗೆ ಮಾರ್ಗದರ್ಶನವೀಯುವುದು ಅವರ ಹಕ್ಕಾಗಿದೆ. ಅದೇ ರೀತಿ ಔಷಧಿಯನ್ನು ಹೊಂದಿದವನು ರೋಗಿಗಳಿಗೆ ಔಷಧವನ್ನು ಒದಗಿಸಿಕೊಡಬೇಕಾದುದು ರೋಗಿಯ ಹಕ್ಕಾಗಿದೆ.

ಇನ್ನೊಂದೆಡೆ, ಎಲ್ಲಿಯ ತನಕ ಇತರರನ್ನು ಪವಿತ್ರ ಕುರ್‌ಆನಿನ ಹಾದಿಯಲ್ಲಿ ನಡೆಸುವ ಪ್ರಯತ್ನ ಮತ್ತು ಪರಿಶ್ರಮ ನಡೆಸಲಾಗುವುದಿಲ್ಲವೋ ಅಲ್ಲಿಯ ತನಕ ಸ್ವತಃ ನೀವು ನಿಮ್ಮ ಸರಿಯಾದ (ಕುರ್‌ಆನ್ ತಿಳಿಸುವ) ಹಾದಿಯಲ್ಲಿ ನಡೆಯುವುದು ದುಸ್ತರ ಹಾಗೂ ಅಪೂರ್ಣವಾಗಿ ಬಿಡುತ್ತದೆ. ಈ ರೀತಿ ಸ್ವಯಂ ನಿಮ್ಮ ಗಮ್ಯ ಸ್ಥಾನವು ಮರೀಚಿಕೆಯಾಗಿ ಬಿಡುತ್ತದೆ. ಏಕೆಂದರೆ ಸಂದೇಶ ಪ್ರಚಾರ ಮತ್ತು ಜಿಹಾದ್ (ಸತತ ಪರಿಶ್ರಮ) ಕುರ್‌ಆನ್‌ನೊಂದಿಗಿನ ಸದ್ವರ್ತನೆಯ ಅನಿವಾರ್ಯ ಅಂಗವಾಗಿದೆ. ಮಾತ್ರವಲ್ಲ, ಈಮಾನಿನ ಸುಪ್ರಧಾನ ಕರ್ಮವೂ ಆಗಿದೆ. ಏಕೆಂದರೆ, ನಿಮ್ಮ ಜೀವನವು ಇತರ ಮಾನವರ ಜೀವನದೊಂದಿಗಿನ ಸಂಬಂಧದಲ್ಲಿ ಎಷ್ಟು ಬೆಸೆದುಕೊಂಡಿದೆಯೆಂದರೆ, ಇತರರು ಈ ಹಾದಿಯಲ್ಲಿ ಹೊರಡದೆ ನೀವು ಏಕಾಂಗಿಯಾಗಿ ನಡೆಯುವುದು ಸಾಧ್ಯವಲ್ಲ, ಇನ್ನು ಸಂಪೂರ್ಣವಾಗಿ ಆ ಹಾದಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಮತ್ತಷ್ಟು ಕ್ಲಿಷ್ಟಕರವಾಗಿದೆ.

ನೋಡಿ, ಪ್ರವಾದಿವರ್ಯರ(ಸ) ಮೇಲೆ ಪ್ರಥಮ ದಿವ್ಯವಾಣಿ ಅವತೀರ್ಣವಾದುದು ‘ಓದಿರಿ’ ಎಂಬ ವಚನದೊಂದಿಗಾಗಿತ್ತು. ಓದುವುದರಲ್ಲಿ ಕೇಳಿಸುವ ಕಾರ್ಯವೂ ಸೇರಿದೆ. ಆದರೆ ಎರಡನೆಯ ವಾಣಿಯು ವಿಷಯವನ್ನು ಸಂಪೂರ್ಣ ಸ್ಪಷ್ಟಪಡಿಸಿತು. ಒಂದು ಸಂಕ್ಷಿಪ್ತ ವಿರಾಮದ ಬಳಿಕ ಹೀಗೆನ್ನಲಾಯಿತು, ‘ಕುಮ್ ಫಅಂದಿರ್’ ಅಂದರೆ ‘ಎದ್ದೇಳಿರಿ ಮತ್ತು ಎಚ್ಚರಿಸಿರಿ’ ಹಾಗೂ ‘ರಬ್ಬಕ ಫಕಬ್ಬಿರ್’ ಅಂದರೆ, ‘ನಿಮ್ಮ ಪ್ರಭುವಿನ ಹಿರಿಮೆಯನ್ನು ಘೋಷಿಸಿರಿ.’ ಅರ್ಥಾತ್ ಸಕಲ ಮಾನವರ ಮುಂದೆ ಅಲ್ಲಾಹನ ಹಿರಿಮೆಯನ್ನು ಘೋಷಿಸಿರಿ ಮತ್ತು ಅವರ ಮೇಲೆ ಅಲ್ಲಾಹನ ಹಿರಿಮೆಯನ್ನು ಸ್ಥಾಪಿಸಿರಿ. ಅವನೇ ಉನ್ನತನಾಗಿದ್ದು ಉಳಿದ ಹಿರಿಮೆಗಳೆಲ್ಲವೂ ಅವನ ಮುಂದೆ ಶಿರಬಾಗುವಂತೆ ಮಾಡಿರಿ. ಎಲ್ಲಿಯವರೆಗೆಂದರೆ, ಲೋಕದಲ್ಲಿ ಯಾರೂ ಆರಾಧ್ಯನಾಗಿ ಆಳ್ವಿಕೆ ನಡೆಸದಿರಲಿ, ಯಾರೂ ಸ್ವಯಂ ತನ್ನನ್ನು ಮತ್ತು ತನ್ನ ಇಚ್ಛೆಯನ್ನು ತನ್ನಂತಹ ಇತರ ಮಾನವರ ಮೇಲೆ ಹೇರದಿರಲಿ ಹಾಗೂ ಮಾನವನ ತಲೆಯು ಕೇವಲ ತನ್ನ ಸೃಷ್ಟಿಕರ್ತನಾದ ಒಡೆಯನ ಮುಂದೆ ಬಾಗಲಿ,
ಸೂಕ್ಷ್ಮವಾಗಿ ಅವಲೋಕಿಸಿದರೆ, ಮುಸ್ಲಿಮ್ ಸಮುದಾಯದ ಸೃಷ್ಟಿಯೂ ಇದೇ ಉದ್ದೇಶದೊಂದಿಗಾಗಿತ್ತು. ಅನ್ಯಥಾ ಪವಿತ್ರ ಕುರ್‌ಆನ್ ಅವತೀರ್ಣಗೊಂಡಾಗ ಲೋಕದಲ್ಲಿ ದೇವನ ಏಕತ್ವವನ್ನು ಒಪ್ಪಿಕೊಂಡಂತಹ ಜನರಿದ್ದರೆಂಬುದು ನಿರಾಕರಿಸಲಾಗದ ಸತ್ಯವಾಗಿದೆ. ಅವರು ಪ್ರವಾದಿ ಪರಂಪರೆ ಮತ್ತು ಗ್ರಂಥಗಳ ಮೇಲೆ ವಿಶ್ವಾಸವಿರಿಸುತ್ತಿದ್ದರು. ಆರಾಧನಾಲಯಗಳಲ್ಲಿ ರಾತ್ರಿಯಿಡೀ ಅಲ್ಲಾಹನ ಆರಾಧನೆಯಲ್ಲಿ ಮಗ್ನರಾಗಿರುತ್ತಿದ್ದರು ಮತ್ತು ಉಪವಾಸ ವ್ರತವನ್ನು ಆಚರಿಸುತ್ತಿದ್ದರು. ಅಲ್ಲಾಹನೊಂದಿಗಿನ ಅವರ ಸಂಬಂಧ ಮತ್ತು ಅವರ ಸಚ್ಚಾರಿತ್ರ‍್ಯವನ್ನು ಸ್ವತಃ ಅಲ್ಲಾಹನು ಪವಿತ್ರ ಕುರ್‌ಆನಿನಲ್ಲಿ ಪ್ರಶಂಸಿಸಿದ್ದಾನೆ. ತರುವಾಯ ಒಂದು ಪ್ರತ್ಯೇಕ ಪ್ರವಾದಿತ್ವ, ಪ್ರತ್ಯೇಕ ಸಂದೇಶ ಪ್ರಚಾರ ಮತ್ತು ಪ್ರತ್ಯೇಕ ಜನಾಂಗದ ಅಗತ್ಯವೇನಿತ್ತು? ಏಕೆಂದರೆ, ಪ್ರಥಮತಃ ಸತ್ಯವಿಶ್ವಾಸ ಮತ್ತು ಕರ್ಮಗಳ ಹಾದಿಯು ಮಾನವರ ಸ್ವಯಂಕೃತ ಅಜ್ಞಾನಗಳಿಂದ ಸಂಪೂರ್ಣ ಮುಕ್ತವಾಗಿ ಪ್ರಕಾಶಿಸಬೇಕೆಂಬುದಾಗಿದೆ. ಎರಡನೆಯದಾಗಿ, ಸಕಲ ಮಾನವರ ಮುಂದೆ ತಮ್ಮ ಪ್ರಭು ಮತ್ತವನ ಧರ್ಮದ ಸಾಕ್ಷಿಗಳಾಗಿ ಎದ್ದು ನಿಂತು ಸತ್ಯದಲ್ಲಿ ಸ್ಥಿರವಾಗುವಂತಹ ಒಂದು ಜನಾಂಗ ಅಸ್ತಿತ್ವಕ್ಕೆ ಬರಬೇಕೆಂಬುಂದಾಗಿದೆ. ಅಲ್ಲಾಹನು ಹೇಳುತ್ತಾನೆ,
‘…ಮತ್ತು ಇದೇ ರೀತಿ ನೀವು ಜಗತ್ತಿನ ಮಾನವರ ಬಗ್ಗೆ ಸಾಕ್ಷಿಯಾಗಿರಲಿಕ್ಕೂ ಸಂದೇಶವಾಹಕರು ನಿಮ್ಮ ಬಗ್ಗೆ ಸಾಕ್ಷಿಯಾಗಿರಲಿಕ್ಕೂ ನಾವು ನಿಮ್ಮನ್ನು ಒಂದು ಸುಮಧ್ಯ ಸಮುದಾಯವನ್ನಾಗಿ ಮಾಡಿದ್ದೇವೆ…! (ಪವಿತ್ರ ಕುರ್‌ಆನ್ 2:143)

ಇದು ಕುರ್‌ಆನಿನ ಧೈಯವಾಗಿದೆ. ಕುರ್‌ಆನನ್ನು ಹೊಂದಿದ ಮತ್ತು ಅದರ ನ್ಯಾಸವನ್ನು ವಹಿಸಿಕೊಂಡವರೆಂಬ ನೆಲೆಯಲ್ಲಿ ನನ್ನ, ನಿಮ್ಮ ಮತ್ತು ಕುರ್‌ಆನಿನ ಮೇಲೆ ವಿಶ್ವಾಸ ತಾಳಿರುವ ಇಡೀ ಜನಾಂಗದ ಧೈಯವಾಗಿದೆ. ಇದು ಎಷ್ಟು ದೊಡ್ಡ ಹೊಣೆಗಾರಿಕೆಯಾಗಿದೆ ಎಂಬುದನ್ನು ಊಹಿಸುವುದೇ ಕಷ್ಟ. ವಾಸ್ತವದಲ್ಲಿ ಇದು ಸಕಲ ಮಾನವರನ್ನು ನೇರ ಹಾದಿಯಲ್ಲಿ ನಡೆಸುವಂತಹ ಮಹಾನ್ ಹೊಣೆಯಾಗಿದೆ. ಆದ್ದರಿಂದಲೇ ಪ್ರವಾದಿವರ್ಯರ(ಸ) ಮೇಲೆ ಪ್ರಥಮ ದಿವ್ಯವಾಣಿಯು ಅವತೀರ್ಣವಾದಾಗ ಹಿರಾ ಗುಹೆಯಿಂದ ನಡುಗುತ್ತಾ ಮನೆಗೆ ಮರಳಿದ್ದರು. ಸ್ವತಃ ಅಲ್ಲಾಹನೇ ಈ ಕಾರ್ಯಭಾರವನ್ನು ಒಂದು ‘ಘನವಾದ ವಾಣಿ’ಯೆಂದೂ “ಭಾರೀ ಹೊರೆ’ಯೆಂದೂ ಸಾರಿದ್ದಾನೆ. ಇದು ಸಾಮಾನ್ಯ ವಿಷಯವೇನಲ್ಲ. ಆದರೆ ಇದರ ಹೊಣೆಯನ್ನು ಹೊರುವುದು ಮಾನವರಿಂದಾಗದೆನ್ನುವಷ್ಟು ಕಷ್ಟಕರವೂ ಅಲ್ಲ. ಅನ್ಯಥಾ ಪರಮ ದಯಾಮಯ, ಕರುಣಾಳು, ನ್ಯಾಯಪಾಲಕ, ಯುಕ್ತಿವಂತನಾದ ಅಲ್ಲಾಹನು ಈ ‘ಹೊರೆ’ಯನ್ನು ಹೇರುತ್ತಿರಲಿಲ್ಲ.

ಇನ್ನು ಈ ಹೊಣೆಯನ್ನು ಹೊರಲು ತನ್ನೊಳಗೆ ಕೇವಲ ಅಲ್ಲಾಹನ ದಾಸನಾಗಿರುವ ಮತ್ತು ತನ್ನ ದಾಸ್ಯತನದಲ್ಲಿ ಕಲಬೆರಕೆಯಿಲ್ಲದ ವ್ಯಕ್ತಿತ್ವವನ್ನು ಬೆಳಸುವ ಅಗತ್ಯವಿದೆ. ಈ ವ್ಯಕ್ತಿತ್ವವನ್ನು ರೂಪಿಸಲು ಮತ್ತು ಕೇವಲ ಅಲ್ಲಾಹನ ಆದೇಶ ನಡೆಯುವ, ಅವನ ಮುಂದೆ ಮಾತ್ರ ಸರ್ವರೂ ತಲೆ ಬಾಗುವಂತಹ ವಾತಾವರಣವನ್ನು ತನ್ನ ಸುತ್ತಲೂ ಬೆಳೆಸಲು ಕುರ್ ಆನಿನ ಮೇಲೆ ವಿಶ್ವಾಸವಿರಿಸಬೇಕಾದ ಅಗತ್ಯವಿದೆ. ಕುರ್‌ಆನಿನ ಜ್ಞಾನ ಮತ್ತು ಅದರೊಂದಿಗೆ ನಿರಂತರ ಗಾಢ ಸಂಬಂಧದ ಅಗತ್ಯವಿದೆ. ಸಹನ ಮತ್ತು ದೃಢಚಿತ್ರತೆಯ ಅವಶ್ಯಕತೆಯಿದೆ. ಅದರಂತೆ ನಿರಂತರ ಪರಿಶ್ರಮ (ಜಿಹಾದ್) ಮತ್ತು ತ್ಯಾಗ-ಬಲಿದಾನಗಳೂ ಅತ್ಯಗತ್ಯವಾಗಿವೆ. ಕುರ್‌ಆನಿನ ಸಂದೇಶವು ಉನ್ನತ ಗುಣಗಳ ಬೇಡಿಕೆಯನ್ನಿಡುತ್ತದೆ. ಇದರ ತಾತ್ಪರ್ಯವೇನೆಂದರೆ, ಮಾನವನು ಕುರ್‌ಆನಿನ ಧ್ವಜವನ್ನು ಎತ್ತಿ ಹಿಡಿಯುವಾಗ ತನ್ನ ಚಿಂತನೆ ಮತ್ತು ಚಾರಿತ್ರ‍್ಯವನ್ನು ಅಷ್ಟೇ ಉನ್ನತವಾಗಿರಿಸಬೇಕು. ಇದಕ್ಕೆ ಸಾಮರ್ಥ್ಯ ಮತ್ತು ಯೋಗ್ಯತೆಯ ಅಗತ್ಯವೂ ಇದೆ.

ಕುರ್‌ಆನ್, ತಕ್ವಾ, ಮತ್ತು ಉಪವಾಸ ವ್ರತಗಳ ಪರಸ್ಪರ ಸಂಬಂಧ
ತಕ್ವಾವು ಈ ಮೇಲೆ ತಿಳಿಸಲಾದ ಯೋಗ್ಯತೆ ಮತ್ತು ಸಾಮರ್ಥ್ಯಗಳ ಮೂಲ ಸೆಲೆಯಾಗಿದೆ. ಅಲ್ಲಾಹನು ತನ್ನ ಗ್ರಂಥದ ಆರಂಭದಲ್ಲಿಯೇ ಸನ್ಮಾರ್ಗ ಪಡೆಯಲು, ಸನ್ಮಾರ್ಗದ ಹಾದಿ ಹಿಡಿಯಲು ಮತ್ತು ಅದರಂತೆ ನಡೆಯಲು ತಕ್ಷಾ (ಧರ್ಮನಿಷ್ಠೆ) ಇರುವವರಿಗೆ ಮಾತ್ರ ಸಾಧ್ಯವೆಂದು ಸಾರಿದ್ದಾನೆ. ತಕ್ವಾ(ಧರ್ಮನಿಷ್ಠೆ) ಹೊಂದಿದವರಿಗೆ ಇದು ಮಾರ್ಗದರ್ಶಿ (ಪವಿತ್ರ ಕುರ್‌ಆನ್ 2:2)
ಇನ್ನೊಂದೆಡ, ಉಪವಾಸ ವ್ರತಾಚರಿಸುವುದರ ಉದ್ದೇಶ (ಅಥವಾ ಉಪವಾಸದ ಗಳಿಕೆ) ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವುಂಟಾಗಲಿಕ್ಕಾಗಿದೆ (ಪವಿತ್ರ ಕುರ್‌ಆನ್ 2:183) ಎಂದು ಹೇಳಿರುವನು.

ಈ ಎರಡೂ ವಚನಗಳ ಪೂರ್ಣ ಪಾಠವನ್ನು ಸೇರಿಸಿ ಓದಿರಿ ಮತ್ತು ಚಿಂತನೆ ನಡೆಸಿರಿ! ಆಗ ಪವಿತ್ರ ಕುರ್‌ಆನ್ ಮತ್ತು ಉಪವಾಸಗಳ ನಡುವೆ ಇಷ್ಟೊಂದು ಗಾಡ ಸಂಬಂಧವೇಕಿದೆ ಮತ್ತು ಕುರ್‌ಆನ್ ಅವತೀರ್ಣದ ತಿಂಗಳನ್ನು ಉಪವಾಸ ವ್ರತಾಚರಿಸಲು ಯಾಕೆ ನಿಗದಿಪಡಿಸಲಾಗಿದೆಯೆಂಬ ರಹಸ್ಯವನ್ನು ನೀವು ಕಂಡುಕೊಳ್ಳಬಲ್ಲಿರಿ. ಉಪವಾಸ ವ್ರತದ ಮೂಲಕ ಪವಿತ್ರ ಕುರ್‌ಆನಿನ ಹಾದಿಯಲ್ಲಿ ನಡೆಯಲು ಮತ್ತು ಕುರ್‌ಆನಿನ ಹೊಣೆ (ಅಮಾನತ್)ಯ ಭಾರವನ್ನು ಹೊರಲು ಸಾಧ್ಯವಾಗುವಂತಹ ಧರ್ಮನಿಷ್ಠೆಯನ್ನು ಬೆಳೆಸಲು ಈ ತಿಂಗಳ ಸಮೃದ್ಧ ಕ್ಷಣಗಳಿಗಿಂತ ಉತ್ತಮ ಸಮಯ ಬೇರೆಯಾವುದಿದ್ದೀತು.

ತಕ್ವಾ ಎಂದರೇನು?
ತಕ್ವಾ ಎನ್ನುವುದು ಉನ್ನತ ಅಮೂಲ್ಯವಾದ ಗುಣವಿಶೇಷವಾಗಿದೆ. ಮಾತ್ರವಲ್ಲ, ಕುರ್‌ಆನ್ ಬಯಸುವ ಗುಣವಿಶೇಷಗಳ ಸಮ್ಮಿಳಿತ ಗುಣವೂ ಆಗಿದೆಯೆನ್ನಬಹುದು. ತಕ್ವಾದ ಗುಣ ವಿಶೇಷ ಹೊಂದಿದವರಿಗೆ ಅಲ್ಲಾಹನು ಇಹ-ಪರಗಳ ಒಳಿತುಗಳ ಭರವಸೆ ನೀಡಿದ್ದಾನೆ. ಜೀವನದ ಎಲ್ಲ ಸಮಸ್ಯೆಗಳಿಂದ ಹೊರ ಬರಲು ಸುಗಮ ದಾರಿಯೇ ತಕ್ವಾ. ತಕ್ವಾವೊಂದಿದ್ದರೆ, ನಾವು ಕನಸು ಮನಸ್ಸಿನಲ್ಲೂ ಎಣಿಸಿರದಂತಹ ಜೀವನಾಧಾರ ಒದಗಿ ಬರುತ್ತದೆ. ತಕ್ವಾದ ಕಾರಣವಾಗಿ ಧಾರ್ಮಿಕ ಮತ್ತು ಲೌಕಿಕವಾದ ಕಾರ್ಯಗಳೂ ಸುಲಭವಾಗುತ್ತವೆ. ಅಲ್ಲಾಹನು ಅಂತಹವರಿಂದ ಕೆಡುಕುಗಳನ್ನು ದೂರೀಕರಿಸುತ್ತಾನೆ ಅವರಿಗೆ ಮಹೋನ್ನತವಾದ ಪ್ರತಿಫಲವನ್ನು ದಯಪಾಲಿಸುತ್ತಾನೆ. ಭೂಮಿ ಆಕಾಶಗಳನ್ನು ಆವರಿಸುವಂತಹ ವಿಶಾಲ ಸ್ವರ್ಗೋದ್ಯಾನಗಳ ಸುವಾರ್ತೆ ಪಡೆದವರೂ ಇದೇ ಮುತ್ತಕೀಗಳಾಗಿದ್ದಾರೆ. ಸ್ವರ್ಗದಡೆಗೆ ಕೊಂಡೊಯ್ಯುವಂತಹ ಮೋಕ್ಷದ ವಾಗ್ದಾನವನ್ನು ಮುತ್ತಕೀಗಳೊಂದಿಗೇ ಮಾಡಲಾಗಿದೆ. ಈಮಾನ್ ಮತ್ತು ಗುಣ ವಿಶೇಷಗಳನ್ನು ಹೊಂದಿದವರ ಪಾಲಿಗೆ ಸ್ವರ್ಗವು ವಾರೀಸು ಹಕ್ಕಾಗಿ ಬಿಡುವುದು ಖಂಡಿತ. ಅದರೊಂದಿಗೆ ಇಹಲೋಕದಲ್ಲಿಯೇ ಅವರ ಪಾಲಿಗೆ ಭೂಮಿ-ಆಕಾಶಗಳ (ಅನುಗ್ರಹದ) ಬಾಗಿಲು ತೆರೆಯುವ ವಾಗ್ದಾನವನ್ನು ಮಾಡಲಾಗಿದೆ.
ನಾಡಿನವರು ವಿಶ್ವಾಸವಿರಿಸುತ್ತಿದ್ದರೆ ಮತ್ತು ದೇವಭಯವಿರಿಸುತ್ತಿದ್ದರೆ, ನಾವು ಅವರಿಗೆ ಆಕಾಶ ಮತ್ತು ಭೂಮಿಯಿಂದ ಸಮೃದ್ಧಿಯ ದ್ವಾರಗಳನ್ನು ತೆರೆದುಕೊಡುತ್ತಿದ್ದೆವು,’(ಪವಿತ್ರ ಕುರ್‌ಆನ್ 7:96)

ತಕ್ವಾ ಅಂದರೇನು? ಒಟ್ಟಾರೆಯಾಗಿ ಹೇಳುವುದಾದರೆ ವಿವೇಕ ಪ್ರಜ್ಞೆ, ಸಂಕಲ್ಪ ಇರಾದೆ, ಸಂಯಮ ಕರ್ಮ-ಚಾರಿತ್ರ‍್ಯಗಳ ಯೋಗ್ಯತೆ ಮತ್ತು ಸಾಮರ್ಥ್ಯದ ಹೆಸರಾಗಿದೆ. ಅದರ ಆಧಾರದಲ್ಲಿ ನಾವು ನಮ್ಮ ಮಟ್ಟಿಗೆ ನಷ್ಟಕರವಾದ ಮತ್ತು ಕೆಡುಕು ಎಂದು ಯಾವುದನ್ನು ಭಾವಿಸುತ್ತೇವೋ ಅದರಿಂದ ದೂರವುಳಿಯುತ್ತೇವೆ ಹಾಗೂ ಯಾವುದು ನಮ್ಮ ಮಟ್ಟಿಗೆ ಸರಿಯಾದುದು ಮತ್ತು ಒಳಿತೆಂದು ನಾವು ಗ್ರಹಿಸುತ್ತೇವೋ ಅದರಲ್ಲಿ ಸ್ಥಿರವಾಗುತ್ತೇವೆ. ‘ತಕ್ವಾ’ದ ಪಾರಿಭಾಷಿಕ ಅರ್ಥ ‘ತಡೆಹಿಡಿ’ ಎಂದಾಗಿದೆ. ಈ ಅರ್ಥದಲ್ಲಿ ನಾನು ಹೇಳಿರುವಂತೆ ಇದು ತಕ್ವಾದ ಮೂಲಭೂತ ಅರ್ಥ ವ್ಯಾಖ್ಯೆಯಾಗಿದೆ.

ಅಂತೆಯೇ ನಾವು ಕಷ್ಟ-ನಷ್ಟಗಳಿಂದ ದೂರವುಳಿಯಲು ಮತ್ತು ಲಾಭ-ಒಳಿತುಗಳ ಆಕಾಂಕ್ಷೆಯನ್ನಿರಿಸಲು ಹಾಗೂ ಅದಕ್ಕಾಗಿ ಪ್ರಯತ್ನ ಪಡಲು ಬೇಕಾದ ಈ (ತಕ್ವಾದ) ಶಕ್ತಿಯು ನಮ್ಮ ಪ್ರಕೃತಿದತ್ತ ಅಮಾನತ್ ಆಗಿದೆ. ಇದಿಲ್ಲದಿದ್ದರೆ ಮಾನವ ಜೀವನದ ಏಳಿಗೆ ಅಸಾಧ್ಯ. ಮಾತ್ರವಲ್ಲ, ಮಾನವನ್ನು ಅಭಿವೃದ್ಧಿಯ ಪಥದಲ್ಲಿಯೂ ಸಾಗಲಾರನು. ನಾವು ಧಗಧಗಿಸುವ ಬೆಂಕಿಗೆ ಕೈ ಹಚ್ಚುವುದಿಲ್ಲ. ಬದಲಾಗಿ ನಮ್ಮ ಕೈಯು ಸ್ವಯಂ ಬೆಂಕಿಯಿಂದ ದೂರ ಸರಿಯುತ್ತದೆ. ಅದೇ ವೇಳೆ, ನಮ್ಮ ಮಗು ತಿಳಿಯದ ಬೆಂಕಿಯ ಹತ್ತಿರಕ್ಕೆ ಹೋದರೆ ನಾವು ಕಳವಳಗೊಂಡು ಧಾವಿಸಿ ಮಗುವನ್ನು ರಕ್ಷಿಸಲು ನೋಡುತ್ತೇವೆ. ಏಕೆ? ಏಕೆಂದರೆ, ಬೆಂಕಿ ತಾಗಿದರೆ ನಮ್ಮ ಕೈ ಸುಟ್ಟು ಹೋದೀತೆಂದೂ ನಮ್ಮ ಮಗು ಬೆಂಕಿಗೆ ಬಲಿಯಾದೀತೆಂದೂ ನಮಗೆ ಸಂಪೂರ್ಣ ವಿಶ್ವಾಸವಿದೆ. ಇದು ಲೌಕಿಕ ಅಗ್ನಿಯ ಬಗೆಗಿನ ‘ತಕ್ವಾ ಆಗಿದೆ. ಏಕೆಂದರೆ, ಈ ಅಗ್ನಿಯ ಕಾರಣದಿಂದಾಗಿ ಆಗಬಹುದಾದ ನಷ್ಟ ಆಗ ನಮ್ಮ ಅನುಭವಕ್ಕೆ ಬಂದಿರುತ್ತದೆ. ಈ ಅಗ್ನಿಯು ನಮ್ಮ ದೃಷ್ಟಿಯ ಮುಂದೆಯೇ ಇದೆಯಷ್ಟೇ.

ಇದೇ ರೀತಿ, ಬೇರೊಂದು ಅಗ್ನಿಯಿದೆ. ಅದು ನಮ್ಮ ವಿಶ್ವಾಸ, ಕರ್ಮ, ಚಿಂತನ ಮತ್ತು ಚಾರಿತ್ರ‍್ಯದ ಕೇಡಿನಿಂದ ಧಗಧಗಿಸುತ್ತಿರುತ್ತದೆ. ಯಾವ ಹಾದಿಯಲ್ಲಿ ನಡೆದರೆ ಈ ಲೋಕದಲ್ಲಿ ಮತ್ತು ಮುಂಬರುವ ಪರಲೋಕದಲ್ಲಿ ಅಲ್ಲಾಹನ ಕ್ರೋಧಾಗ್ನಿಯಲ್ಲಿ ಬೀಳಲು ಸಾಧ್ಯವಿದೆ? ಇದನ್ನೇ ಪವಿತ್ರ ಕುರ್‌ಆನ್ ತಿಳಿಸುತ್ತದೆ ಮತ್ತು ಅಂತಹ ಹಾದಿಯ ಹತ್ತಿರವೂ ಸುಳಿಯದಿರಿ ಎಂದು ನಮ್ಮನ್ನು ಎಚ್ಚರಿಸುತ್ತಲೂ ಇದೆ. ಸತ್ಯದ ನಿರಾಕರಣೆ, ವಿದ್ರೋಹ, ಅಕ್ರಮ, ಸುಳ್ಳು, ನಿಷಿದ್ಧ ಸಂಪಾದನೆ- ಇವೇ ಆ ಅಗ್ನಿಯ ಪ್ರಕಾರಗಳಾಗಿವೆ. ಅವುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿರಿ.

ಈ ಅಗ್ನಿಯನ್ನು ನಮ್ಮ ಕಣ್ಣುಗಳು ಕಾಣಲಾರವು. ಅದರ ಅನುಭವವೂ ನಮಗಾಗುವುದಿಲ್ಲ. ಆ ಅಗ್ನಿಯಲ್ಲಿ ಕೈ ಹಾಕಿ ಅದರಿಂದ ಸುಡುವ ಅನುಭವವನ್ನು ‘ಈಗಲೇ’ ಪಡೆಯಲಾರವು, ಇಹಲೋಕದ ಬೆಂಕಿಯಿಂದ ನಾವು ದೂರ ಉಳಿಯಲು ಕಾರಣ, ನಾವು ಅದನ್ನು ಕಂಡಿರುತ್ತೇವೆ. ಅದರಿಂದ ಸುಡುವ ಅನುಭವವನ್ನು ನಾವು ‘ಈಗಲೇ’ ಪಡೆದರೆ ಅದರಿಂದಾಗುವ ನಷ್ಟದ ಬಗ್ಗೆಯೂ ನಾವು ಚೆನ್ನಾಗಿ ಬಲ್ಲೆವು. ಅದೇ ರೀತಿಯಲ್ಲಿ ಸುಳ್ಳು ಹೇಳುವುದರಿಂದ ನಾಲಗೆಯು ಅಗ್ನಿಯಲ್ಲಿ ಬೇಯುತ್ತದೆ, ನಿಷಿದ್ಧ ಸಂಪಾದನೆ ತಿನ್ನುವುದರಿಂದ ಹೊಟ್ಟೆಯಲ್ಲಿ ಅಗ್ನಿಕೆಂಡ ತುಂಬಿಕೊಳ್ಳುತ್ತದೆ ಅಥವಾ ನಿಷಿದ್ಧ ಮಾರ್ಗದಲ್ಲಿ ನಡೆಯುವುದರಿಂದ ಅಗ್ನಿಯ ಜ್ವಾಲೆಯೇ ಚಪ್ಪರ, ಹಾಸು, ಅನ್ನ- ಪಾನೀಯಗಳಾಗುತ್ತವೆ ಎಂಬ ಬಗ್ಗೆ ವಿಶ್ವಾಸ ಇದ್ದರೆ ನಮ್ಮನ್ನು ಈ ಕೃತ್ಯಗಳಿಂದ ತಡೆಯಬಲ್ಲಂತಹ ಶಕ್ತಿ ಸಾಮರ್ಥ್ಯಗಳು ನಮ್ಮ ಹೃದಯ ಮತ್ತು ದೇಹ ಮನಸ್ಸುಗಳಲ್ಲಿ ಹುಟ್ಟಿ ಬರುವುವು. ಇದುವೇ ಅಲ್ಲಾಹನ ಬಗೆಗಿನ ಮತ್ತು ಅವನ ಕ್ರೋಧಾಗ್ನಿಯ ಬಗೆಗಿನ ತಕ್ವಾ ಆಗಿದೆ. ಈ ತಕ್ವಾದ ಪ್ರಥಮ ಸೆಲೆಯು ಅದೃಶ್ಯದ ಮೇಲಿನ ವಿಶ್ವಾಸವಾಗಿದೆ. ”ಆದೃಶ್ಯದ ಮೇಲೆ ವಿಶ್ವಾಸವಿರಿಸುವವರೇ ಪವಿತ್ರ ಕುರ್‌ಆನಿನಿಂದ ಮಾರ್ಗದರ್ಶನ ಪಡೆಯಬಲ್ಲರು” ಎಂದು ಅಲ್ ಬಕರ: ಅಧ್ಯಾಯದ ಆರಂಭದಲ್ಲಿ ಹೇಳಲಾಗಿದೆ. ಇಂದಿನ ವಿಶ್ವಾ ಸಹೀನತೆ ಮತ್ತು ಕರ್ಮರಾಹಿತ್ವವೇ ನಾಳಿನ ಅಗ್ನಿಯಾಗಿದೆ. ಇದನ್ನು ನಾವು ಇಂದು ನೋಡಲಾರವಾದರೂ ಆ ಕುರಿತಾದ ವಿಶ್ವಾಸದಿಂದ ಮಾತ್ರವೇ ತಕ್ವಾ ಬೆಳೆದು ಬರುತ್ತದೆ. ಇದೇ ವಿಶ್ವಾಸದ ಮೂಲಕ ಪವಿತ್ರ ಕುರ್‌ಆನನ್ನು ಅನುಸರಿಸಲು ಬೇಕಾಗುವ ಶಕ್ತಿ-ಸಾಮರ್ಥ್ಯ ಹುಟ್ಟುತ್ತದೆ ಮತ್ತು ಈ ಮೂಲಕವೇ ಅತ್ಯಗತ್ಯವಿರುವಂತಹ ದಾರಿ ವೆಚ್ಚವೂ ದೊರೆಯುತ್ತದೆ.

ತಕ್ವಾದ ವಾಸ್ತವಿಕತೆಯನ್ನು ಮುಂದಿರಿಸಿ ಅವಲೋಕಿಸಿದಾಗ ನಾವು ಮೌಲ್ಯ ಮತ್ತು ಚಾರಿತ್ರ‍್ಯಗಳಲ್ಲಿ ಸರಿ-ತಪ್ಪು, ಸತ್ಯ-ಮಿಥ್ಯಗಳ ಕುರಿತಾಗಿ ಅಚಲವಾದ ನಿಯಮ ಹಾಗೂ ಮಾನದಂಡವನ್ನು ಒಪ್ಪಿಕೊಂಡು ಅದರಂತೆ ವ್ಯವಹರಿಸಬೇಕಾದುದು ತಕ್ವಾದ ಸರ್ವಪ್ರಥಮ ಅಗತ್ಯವಾಗಿದೆಯೆಂದು ನಮಗೆ ತಿಳಿಯಬಹುದಾಗಿದೆ. ಇನ್ನು ಯಾರಾದರೂ ವಿಶ್ವಾಸ ಚಾರಿತ್ರ‍್ಯಗಳಲ್ಲಿ ಸರಿ-ತಪ್ಪುಗಳ ಯಾವುದೇ ಅಚಲ ನಿಯಮ ಅಥವಾ ಮಾನದಂಡವಿಲ್ಲವೆಂದೂ ಅವು ಕಾಲ ಮತ್ತು ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಹೆಚ್ಚುವರಿ ವಿಷಯಗಳಾಗಿವೆಯೆಂದೂ ವ್ಯಕ್ತಿಯು ಪ್ರಾಮಾಣಿಕ ಅಥವಾ ಅಪ್ರಾಮಾಣಿಕನಾಗಿರುವುದರಲ್ಲಿ ಯಾವುದೇ ವ್ಯತ್ಯಾಸವಿಲ್ಲವೆಂದೂ ಯಾರಾದರೂ ಹೇಳುತ್ತಾರಾದರೆ ಅಂತಹವರ ಮಟ್ಟಿಗೆ ತಕ್ವಾದ ಪ್ರಶ್ನೆಯೇಳುವುದಿಲ್ಲ.

ನಾವು ಅಲ್ಲಾಹನನ್ನು ನಮ್ಮ ಪ್ರಭುವನ್ನಾಗಿ ಅಂಗೀಕರಿಸಿದ್ದೇವೆ. ಅಂದರೆ, ಅಲ್ಲಾಹನ ಸಂಪ್ರೀತಿ ಗಳಿಸಬಹುದಾದ ಕರ್ಮ, ಅವನ ಆದೇಶಗಳು ಮತ್ತು ಯಾವುದರ ಪ್ರಜ್ಞೆಯನ್ನು ಅವನು ನಮಗೆ ನೀಡಿದ್ದಾನೋ ಅದುವೇ ಸತ್ಯ ಮತ್ತು ಸರಿಯಾದುದು ಎಂಬುದು ಅದರರ್ಥ. ಯಾವೆಲ್ಲ ವಿಷಯ ಕರ್ಮಗಳು ಅಲ್ಲಾಹನನ್ನು ಕ್ರೋಧಗೊಳಿಸುತ್ತವೋ, ಯಾವುದರಿಂದ ಅಲ್ಲಾಹನ ಅವಿಧೇಯತೆಯು ಪ್ರಕಟಗೊಳ್ಳುತ್ತದೋ ಅದುವೇ ವಾಸ್ತವದಲ್ಲಿ ಮಿಥ್ಯೆಯಾಗಿದೆ ಮತ್ತು ಅದು ಕಷ್ಟ ನಷ್ಟಗಳಿಗೆ ಕಾರಣವಾಗುತ್ತದೆ. ಅದರಿಂದ ದೂರವುಳಿಯಬೇಕಾದುದು ಅಗತ್ಯವಾಗಿದೆ.

ಅಲ್ಲಾಹನನ್ನು ನಮ್ಮ ಪ್ರಭುವೆಂದು ನಂಬುವುದರ ಅರ್ಥ, ಕೆಲವು ವಾಸ್ತವಿಕತೆಗಳು ನಮ್ಮ ಹಿಡಿತಕ್ಕೆ ಅನ್ಯವಾಗಿದ್ದು, ಅವು ನಮ್ಮ ಜೀವ-ದೇಹಕ್ಕಿಂತ ಪ್ರಮುಖವಾದುದು, ಹಸಿವು ದಾಹಕ್ಕಿಂತ ಮಿಗಿಲಾದುದು ಮತ್ತು ಆಕಾಂಕ್ಷೆಗಳ ತ್ವರಿತ ಈಡೇರಿಕೆಯಿಂದಾಗಬಹುದಾದ ಸಂತೋಷಕ್ಕಿಂತ ಅಮೂಲ್ಯವಾದುದೆಂದೂ ನಂಬುವುದಾಗಿದೆ.

ಅದನ್ನು ಹೀಗೂ ಅರ್ಥೈಸಬಹುದು: ಸರಿ-ತಪ್ಪುಗಳ ಜ್ಞಾನವನ್ನು ನೀಡುವವನು ಅಲ್ಲಾಹನೇ, ಪ್ರಸ್ತುತ ವಾಸ್ತವಿಕತೆಗಳ ಅರಿವು ಕೂಡ ಅದೃಶ್ಯ ಮತ್ತು ಸತ್ಯದ ಜ್ಞಾನವಿರುವ ಅಲ್ಲಾಹನಿಂದ ಮಾತ್ರವೇ ದೊರೆಯಬಲ್ಲುದು ಹಾಗೆಯೇ ಅವನ ಇಚ್ಛೆಯೇ ಸರಿ ತಪ್ಪುಗಳ ಮಾನದಂಡವಾಗಿದೆ. ಅದೃಶ್ಯದ ಮೇಲೆ ವಿಶ್ವಾಸವಿರಿಸುವವರು ಮಾತ್ರವೇ ಮುತ್ತಕಿ(ಧರ್ಮನಿಷ್ಟರು)ಗಳಾಗಬಲ್ಲರು, ಅಂತಹ ಅದೃಶ್ಯ ವಿಷಯಗಳನ್ನು ನಂಬಿರುವ ದಾರಿ ಒಂದೇ, ಅದೆಂದರೆ, ತನ್ನ ತನು ಮನ ಧನಗಳೆಲ್ಲವನ್ನು ತನ್ನ ಪ್ರಭುವಿಗೆ ಅರ್ಪಿಸುವುದು, ಆತನ ಪ್ರತಿಯೊಂದು ನಡೆ ನುಡಿಯೂ ಅಲ್ಲಾಹನ ದಾಸ್ಯಕ್ಕೆ ಅರ್ಪಿಸುವುದು; ಅಲ್ಲಾಹನು ನೀಡಿರುವ ಸಂಪತ್ತು ಸಮಯ ಭೌತಿಕ ಆಧ್ಯಾತ್ಮಿಕ ಅನುಗ್ರಹ ಇತ್ಯಾದಿಗಳೆಲ್ಲವನ್ನೂ ದೇವನ ಮಾರ್ಗದಲ್ಲಿಯೇ ವಿನಿಯೋಗಿಸುವುದು ಹಾಗೂ ದೇವ ಮಾರ್ಗದಲ್ಲಿಯೇ ಖರ್ಚು ಮಾಡುವುದು, ನಾಳೆ ಅಲ್ಲಾಹನನ್ನು ಭೇಟಿಯಾಗಲಿಕ್ಕಿದೆ ಮತ್ತು ಅಂದಿನ ಯಶಸ್ಸೇ ನಿಜವಾದ ಯಶಸ್ಸೆಂಬುದನ್ನು ಅರಿತು ತನ್ನ ಇಡೀ ಜೀವನವನ್ನು ಅದೇ ಚಿಂತನೆಯಲ್ಲಿ ಕಳೆಯುವುದು.

ಇದುವೇ ಅಲ್ಲಾಹನು ತನ್ನ ವಾಣಿಯ ಆರಂಭದಲ್ಲಿಯೇ ತಿಳಿಸಿದ ತಕ್ವಾದ ತಾತ್ಪರ್ಯ. ಅದೃಶ್ಯದ ಮೇಲೆ ವಿಶ್ವಾಸ, ನಮಾಝನ ರೂಪದಲ್ಲಿ ತನು-ಮನಗಳಿಂದ ದೇವಾರಾಧನೆ, ಅಲ್ಲಾಹನು ನೀಡಿರುವುದರಲ್ಲಿ ಅವನ ಮಾರ್ಗದಲ್ಲೇ ಖರ್ಚು ಮಾಡುವುದು, ಸತ್ಯ-ಮಿಥ್ಯಗಳ ಮಾನದಂಡವಾಗಿ ವಹೀ(ದಿವ್ಯವಾಣಿಯ ಮೇಲೆ ವಿಶ್ವಾಸ ಮತ್ತು ಪರಲೋಕ ವಿಶ್ವಾಸ ಇವೇ ತಕ್ವಾದ ಮಾನದಂಡಗಳಾಗಿವೆ. ಆದರೆ ಅಲ್ಲಾಹನನ್ನು ತನ್ನ ಪ್ರಭುವನ್ನಾಗಿ ಅಂಗೀಕರಿಸಿದ ಬಳಿಕವೂ ತನ್ನ ತನು-ಮನಗಳ ಸಾಮರ್ಥ್ಯಗಳನ್ನೂ ತನ್ನ ಸಮಯ ಸಂಪತ್ತನ್ನೂ ದೇವನಿಗೆ ಇಷ್ಟವಿಲ್ಲದ ದಾರಿಯಲ್ಲಿ ವ್ಯಯಿಸಿದರೆ ಮತ್ತು ದೇವನ ಕ್ರೋಧಾಗ್ನಿಗೆ ಕಾರಣವಾಗಬಲ್ಲಂತಹ ವಿಷಯಗಳಿಂದ ದೂರವುಳಿಯುವ ಪ್ರಯತ್ನ ಮಾಡದಿದ್ದರೆ ಆತನು ತಕ್ವಾದಿಂದ ವಂಚಿತನಾಗಿದ್ದಾನೆಂದೇ ಅರ್ಥ. ತಕ್ವಾ, ಕೇವಲ ಬಾಹ್ಯ ಆಚರಣೆಗಳ ಹೆಸರಲ್ಲ, ಬದಲಾಗಿ ಅದು ಆಂತರಿಕ ಸಾಮರ್ಥ್ಯ ಮತ್ತು ನಿಗ್ರಹ ವಿಶ್ವಾಸದ ಹೆಸರಾಗಿದೆ. ಆದ್ದರಿಂದಲೇ ಪ್ರವಾದಿವರ್ಯರು(ಸ) ಹೇಳಿದರು. ಒಮ್ಮೆ ತಮ್ಮ ಹೃದಯದ ಕಡೆಗೆ ತೋರಿಸುತ್ತಾ ಮೂರು ಬಾರಿ, “ತಕ್ವಾ ಇಲ್ಲಿದೆ” ಎಂದು (ಮುಸ್ಲಿಮ್, ವರದಿ- ಅಬೂಹುರೈರಾ(ರ)]

ಉಪವಾಸದ ಗಳಿಕೆ
ತಕ್ವಾದ ಈ ಅರ್ಥವನ್ನು ನೀವು ಗ್ರಹಿಸಿದರೆಂದಾದರೆ, ತಕ್ವಾ ಉಂಟಾಗಲು ಉಪವಾಸ ವ್ರತ, ಕಿಯಾಮುಲೈಲ್ (ರಾತ್ರಿ ನಮಾಝ್) ಮತ್ತು ಕುರ್‌ಆನ್ ಪಠಣಕ್ಕಿಂತ ಪ್ರಭಾವಶಾಲಿ ಮಾಧ್ಯಮ ಬೇರೆ ಯಾವುದೂ ಇಲ್ಲವೆಂದೂ ಈ ಮಾಧ್ಯಮದ ಬಳಕೆಗೆ ರಮಝಾನ್ ತಿಂಗಳೇ ಎಲ್ಲಕ್ಕಿಂತ ಸೂಕ್ತ ತಿಂಗಳೆಂದೂ ಅರ್ಥೈಸಲು ನಿಮಗೆ ಕಷ್ಟವಾಗಲಾರದು, ಉಪವಾಸ ವ್ರತ ಮತ್ತು ರಾತ್ರಿ ನಮಾಝ್ ಗಳಲ್ಲಿ ಕುರ್‌ಆನ್ ಪಠಣ ಇವೆರಡನ್ನು ರಮಝಾನ್ ತಿಂಗಳಲ್ಲಿ ಜೋಡಿಸುವ ಮೂಲಕ ವಸ್ತುತಃ ಅಲ್ಲಾಹನು ಈ ತಕ್ವಾ ಗಳಿಕೆಯ ದಾರಿಯನ್ನು ನಿಮಗಾಗಿ ತೆರೆದಿಟ್ಟಿರುವನು

ನಾವು ಉಪವಾಸ ವ್ರತಾಚರಿಸಿದಾಗ ಬೆಳಗ್ಗಿನಿಂದ ಮುಸ್ಸಂಜೆಯವರೆಗೂ ಹಸಿವು, ದಾಹ ಮತ್ತಿತರ ರೂಪದಲ್ಲಿ ಪ್ರಕಟವಾಗುವ ನಮ್ಮ ಧರ್ಮಸಮ್ಮತ ದೈಹಿಕ ಬೇಡಿಕೆಗಳನ್ನು ಕೇವಲ ಅಲ್ಲಾಹನ ಸಂಪ್ರೀತಿಗಾಗಿ ತೊರೆಯುತ್ತೇವೆ. ನಾವು ಅಲ್ಲಾಹನಿಂದ ದೊರೆಯಬಹುದಾದ ಪ್ರತಿಫಲ ಮತ್ತು ಬಹುಮಾನಗಳಿಗಾಗಿ ನಮ್ಮ ಧರ್ಮಸಮ್ಮತ ಬೇಡಿಕೆಗಳನ್ನು ಬಲಿ ನೀಡುತ್ತೇವೆ. ರಾತ್ರಿಯಾದಾಗ ನಿಂತು ಅಲ್ಲಾಹನ ವಾಣಿಯನ್ನಾಲಿಸುತ್ತೇವೆ. ಹೀಗೆ ಒಂದು ತಿಂಗಳಲ್ಲಿ ಕನಿಷ್ಟ ಒಂದು ಬಾರಿ ಇಡೀ ಕುರ್‌ಆನನ್ನು ಆಲಿಸುತ್ತೇವೆ. ಆದರೆ ಅಲ್ಲಾಹನು (ಕುರ್‌ಆನಿನ ಮೂಲಕ) ನಮ್ಮೊಂದಿಗೆ ಏನು ಹೇಳುತ್ತಿದ್ದಾನೆ ಮತ್ತು ನಾವು ಏನನ್ನು ಆಲಿಸಿದೆವು ಎನ್ನುವುದನ್ನು ಕೇವಲ ಭಾಷೆ ಗೊತ್ತಿಲ್ಲದ ಕಾರಣಕ್ಕೆ ನಮಗೆ ಅರ್ಥವಾಗದಿರುವುದು ನಮ್ಮ ದುರದೃಷ್ಟವೇ ಸರಿ. ಆದರೆ ಅಲ್ಲಾಹನು ಪವಿತ್ರ ಕುರ್‌ಆನಿನ ರೂಪದಲ್ಲಿ ನಮಗೆ ದಯಪಾಲಿಸಿರುವ ಮಾರ್ಗದರ್ಶನವನ್ನು ಸಂಪೂರ್ಣವಾಗಿ ಈ ತಿಂಗಳಿನಾದ್ಯಂತ ಗ್ರಹಿಸಬೇಕೆಂಬುದು ಅವನ ಇಂಗಿತವಾಗಿರುವುದರಲ್ಲಿ ಎರಡು ಮಾತಿಲ್ಲ. ಅದಲ್ಲದೆ, ಆ ಮಾರ್ಗದರ್ಶನವನ್ನು ಸ್ವತಃ ಪಾಲಿಸಿ ಇತರರನ್ನು ಅದರೆಡೆಗೆ ಆಹ್ವಾನಿಸುವುದು ನಮ್ಮ ಕರ್ತವ್ಯವಾಗಿದೆಯೆಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ವಸ್ತುತ (ಅರ್ಥ ಸಹಿತವಾದ) ಕುರ್‌ಆನ್ ಪಠಣದಿಂದ ಜ್ಞಾನ ಮತ್ತು ವಿಶ್ವಾಸ ವೃದ್ಧಿಯಾಗುತ್ತದೆ ಹಾಗೂ ಉಪವಾಸ ವ್ರತಾಚರಣೆಯಿಂದ ಕರ್ಮಶಕ್ತಿ ವೃದ್ಧಿಯಾಗುತ್ತದೆ.

ಉಪವಾಸ ವ್ರತದಲ್ಲಿ (ರಮಝಾನಿನಲ್ಲಿ) ಅಲ್ಲಾಹನ ಆದೇಶವಾದಾಗ ನಾವು ತಿನ್ನುತ್ತೇವೆ ಕುಡಿಯುತ್ತೇವೆ ಮತ್ತು ಅಲ್ಲಾಹನ ಆದೇಶದಿಂದಲೇ ತಿನ್ನುವ, ಕುಡಿಯುವ ಕ್ರಿಯೆಯಿಂದ ನಮ್ಮನ್ನು ತಡೆದಿರಿಸುತ್ತೇವೆ. ಆದರೆ ಅನ್ನ-ಪಾನೀಯ ಸೇವನೆ ನಿಷಿದ್ಧವಲ್ಲ, ಅದಾಗಿಯೂ ರಮಝಾನಿನ ಹಗಲುಗಳಲ್ಲಿ ನಾವು ನಮ್ಮ ಮೂಲಭೂತ ಅಗತ್ಯಗಳನ್ನು ಕೇವಲ ದೇವಾದೇಶದಂತೆ ನಮ್ಮ ಮೇಲೆ ನಿಷಿದ್ಧಗೊಳಿಸುತ್ತೇವೆ. ವಸ್ತುತಃ ಈ ಅಗತ್ಯಗಳನ್ನು ಇತರ ವೇಳೆಗಳಲ್ಲಿ ಪೂರ್ತಿಕರಿಸಬೇಕಾದುದು ನಮ್ಮ ಬಾಧ್ಯತೆಯಾಗಿದೆ. ಮಾತ್ರವಲ್ಲ ಕಡ್ಡಾಯವೆಂದರೂ ತಪ್ಪಾಗಲಾರದು. ಈ ಮೂಲಕ ನಾವು ಅಲ್ಲಾಹನು ನಮ್ಮನ್ನು ತಡೆದಿರುವಂತಹ ಎಲ್ಲಾ ವಿಷಯಗಳಿಂದಲೂ ದೂರವುಳಿಯುವ ಶಕ್ತಿ-ಸಾಮರ್ಥ್ಯಗಳನ್ನು ಹೊಂದುತ್ತೇವೆ. ಅಂತಹ ವಿಷಯಗಳು ನಮಗೆ ಎಷ್ಟೇ ಅಗತ್ಯವಾಗಿದ್ದರೂ ಸರಿ ಅಥವಾ ನಮಗೆ ಎಷ್ಟೇ ಸರಿ ಮತ್ತು ಧರ್ಮಸಮ್ಮತ ಆಗಿ ಕಂಡರೂ ಸರಿಯೇ!

ಉಪವಾಸ ವ್ರತದಿಂದ, ಅಲ್ಲಾಹ್ ಮತ್ತವನ ಸಂದೇಶವಾಹಕರು(ಸ) ತಿಳಿಸಿರುವಂತಹ ವಾಸ್ತವಾಂಶಗಳ ಮೇಲಿನ ನಮ್ಮ ವಿಶ್ವಾಸವೂ ದೃಢಗೊಳ್ಳುತ್ತದೆ. ಅದು ಹಸಿವು, ದಾಹ ಮತ್ತು ದೇಹೇಚ್ಛೆಗಳಂತಹ ಭೌತಿಕ ವಾಸ್ತವಕ್ಕಿಂತ ಎಷ್ಟೋ ಉನ್ನತ ಮತ್ತು ಅಮೂಲ್ಯವಾಗಿರುತ್ತದೆ. ನಾವು ಕೇವಲ ಆಹಾರದಿಂದ ಬದುಕುತ್ತಿರುವುದಲ್ಲ, ಬದಲಾಗಿ ಉನ್ನತ ನೈತಿಕತೆಯೂ ಜೀವನಕ್ಕೆ ಅತ್ಯವಶ್ಯಕವಾಗಿದೆ. ಈ ಪ್ರಕಾರ, ನಂತರ ದೊರೆಯಬಹುದಾದ ಉನ್ನತ ಆಧ್ಯಾತ್ಮಿಕ ಮತ್ತು ನೈತಿಕ ಉದ್ದೇಶಗಳಿಗಾಗಿ ತಕ್ಷಣ ಈಡೇರಬಹುದಾದ ಲೌಕಿಕ ಅಗತ್ಯಗಳನ್ನು ತೊರೆಯುವ ಶಕ್ತಿ ಹುಟ್ಟುತ್ತದೆ. ಲೌಕಿಕ ಅಗತ್ಯಗಳಂತೂ ಲೋಕದಲ್ಲಿ ಮಾತ್ರವೇ ಅನುಭವಕ್ಕೆ ಬರುವಂತಹವುಗಳಾಗಿವೆಯಷ್ಟೇ.

ಮೂಲ ತತ್ವ ದೇವಾನುಸರಣೆಯಾಗಿದೆಯೆಂಬ ವಿಷಯವನ್ನೂ ಉಪವಾಸ ವ್ರತವು ಸ್ಪಷ್ಟಪಡಿಸುತ್ತದೆ. ಕೇವಲ ದೇವಾದೇಶವೇ ಒಂದು ವಸ್ತು ಅಥವಾ ವಿಷಯ ಸರಿ ಅಥವಾ ತಪ್ಪು ಎಂಬುದಕ್ಕೆ ಅಂತಿಮ ಸನದಾಗಿರುತ್ತದೆ. ಒಳಿತು ಮತ್ತು ಪ್ರತಿಫಲವು ಉಣ್ಣುವುದರಲ್ಲಿಯೋ ಹಸಿದಿರುವುದರಲ್ಲಿಯೋ ಅಥವಾ ಎಚ್ಚರದಿಂದಿರುವುದರಲ್ಲಿಯೋ ನಿದ್ರಿಸುವುದರಲ್ಲಿಯೋ ಇರುವುದಲ್ಲ. ಬದಲಾಗಿ ಅದು ಅಲ್ಲಾಹನ ಅನುಸರಣೆ ಮತ್ತು ಆಜ್ಞಾಪಾಲನೆಯಲ್ಲಿರುವುದು. ಕಿಯಾಮುಲೈಲ್‌ನಲ್ಲಿಯೂ ಇಂತಹುದೇ ಸಾಮರ್ಥ್ಯವು ದೊರೆಯುತ್ತದೆ.

ಇನ್ನು ಈ ಸಾಮರ್ಥ್ಯ ಮತ್ತು ಅವಸ್ಥೆಯನ್ನು ಹೊಂದಿದಾಗ ಅದರ ಪ್ರಮಾಣಕ್ಕೆ ತಕ್ಕಂತೆ ನಾವು ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಸಾಮುದಾಯಿಕವಾಗಿಯೂ ಕುರ್‌ಆನಿನ ಹೊಣೆಭಾರವನ್ನು ಹೊರಲು ಸಮರ್ಥರಾಗುತ್ತೇವೆ, ಏಕೆಂದರೆ ಈ ಮೂಲಕವೇ ನಾವು ನಮ್ಮ ಜೀವನೋದ್ದೇಶಗಳು ಮತ್ತು ಕುರ್‌ಆನಿನ ಹೊಣೆಗಾರಿಕೆಯ ಈಡೇರಿಕೆಯನ್ನು ಭೌತಿಕ, ಭಾವನಾತ್ಮಕ, ತ್ವರಿತ ಹಾಗೂ ಮೇಲ್ನೋಟಕ್ಕೆ ಗೋಚರಿಸುವ ಸುಖದ ಈಡೇರಿಕೆಗಿಂತ ಪ್ರಾಧಾನ್ಯತೆ ನೀಡುವಷ್ಟು ಯೋಗ್ಯತೆಯನ್ನು ಪಡೆಯುತ್ತೇವೆ. ಈ ಯೋಗ್ಯತೆಯ ಹೆಸರೇ ತಕ್ವಾ.

ಇದರ ಇನ್ನೊಂದು ಮಗ್ಗುಲನ್ನು ನೋಡಿರಿ- ಉಪವಾಸ ವ್ರತದ ಯಾವುದೇ ಬಾಹ್ಯ ರೂಪವಿಲ್ಲ. ಒಬ್ಬನ ಚಿತ್ತದ ಮತ್ತು ಉದರದ ಆಳದಲ್ಲಿ ಹುಟ್ಟುವ ಹಸಿವು ದಾಹ ಮತ್ತು ದೇಹೇಚ್ಚೆಯನ್ನು ಇತರ ಯಾರೂ ಕಾಣಲಾರರು ಮತ್ತು ಅನುಭವಿಸಲಾರರು. ಅಂತೆಯೇ ಯಾರೂ ಯಾರದೇ ಸಂವೇದನೆಯೊಂದಿಗೆ ಭಾಗಿಯಾಗಲಾರರು. ಈ ಇಚ್ಛೆಗಳನ್ನು ಬಲಿದಾನ ನೀಡುವುದಕ್ಕೂ ಯಾವುದೇ ಬಾಹ್ಯ ರೂಪವಿಲ್ಲ. ಹಾಗಾಗಿ, ಈ ಇಚ್ಚೆಗಳ ನಿಗ್ರಹವನ್ನು ಭೌತಿಕ ಮಾನದಂಡದೊಂದಿಗೆ ಅಳೆಯಲಾಗದು. ಅಲ್ಲಾಹನು ಎಲ್ಲ ಸಮಯದಲ್ಲೂ ಎಲ್ಲ ಸ್ಥಳದಲ್ಲೂ ನಮ್ಮೊಂದಿಗಿರುತ್ತಾನೆ. ಇಬ್ಬರಿದ್ದರೆ ಮೂರನೆಯವನು ಅಲ್ಲಾಹನಾಗಿರುವನು. ಒಬ್ಬಂಟಿಯಾಗಿದ್ದರೆ ಎರಡನೆಯವನು ಅಲ್ಲಾಹನಾಗಿರುತ್ತಾನೆ. ಆತನಾದರೋ ನಮ್ಮ ಜೀವನಾಡಿಗಿಂತಲೂ ಹತ್ತಿರವಿರುತ್ತಾನೆ. ಇದುವೇ ನಿಷ್ಕಳಂಕ ವಿಶ್ವಾಸ. ಅಲ್ಲಾಹನು ಎಲ್ಲ ಸಮಯದಲ್ಲೂ ತನ್ನೊಂದಿಗಿರುವನೆಂಬ ವಿಶ್ವಾಸ ಇದುವೇ ಉಪವಾಸ ವ್ರತದ ನೈಜ ಫಲವಾಗಿದೆ. ಆದ್ದರಿಂದಲೇ ಹದೀಸ್ ಕುದ್ಸಿಯಲ್ಲಿ ಅಲ್ಲಾಹನು ಹೇಳಿರುತ್ತಾನೆ, ‘ಉಪವಾಸ ವ್ರತವು ಕೇವಲ ನನಗಾಗಿದೆ ಮತ್ತು ನಾನೇ ಅದರ ಪ್ರತಿಫಲವನ್ನು ನೀಡುವವನಾಗಿದ್ದೇನೆ.” (ವರದಿ: ಅಬೂಹುರೈರಾ(ರ) ಬುಖಾರಿ, ಮುಸ್ಲಿಮ್]

ತಕ್ವಾವು ಇದೇ ವಿಶ್ವಾಸದ ಬುನಾದಿಯಲ್ಲಿ ಸ್ಥಿರವಾಗುತ್ತದೆ. ಇದೇ ವಿಶ್ವಾಸದಿಂದ ಆಹಾರ ಪಡೆಯುತ್ತದೆ. ಇದರಿಂದಲೇ ಗಟ್ಟಿಗೊಳ್ಳುತ್ತದೆ ಮತ್ತು ಇದರ ಮೂಲಕವೇ ಅಭಿವೃದ್ಧಿ ಗೊಳ್ಳುತ್ತದೆ.

ಕೊನೆಯಲ್ಲಿ ಮುಖ್ಯ ವಿಷಯ
ಈ ಮೇಲೆ ತಿಳಿಸಲಾದ ವಿಷಯಗಳ ಆಧಾರದಲ್ಲಿ ನಾವು ಅಪಾರವಾದ ಪ್ರಯೋಜನಗಳನ್ನು ಪಡೆಯಲು ಸಿದ್ಧರಾದಾಗ ನಮ್ಮನ್ನು ಅದರಿಂದ ತಡೆಯಲು ಸಾಧ್ಯವಾಗದೆಂಬುದನ್ನು ಶೈತಾನನು ತನ್ನಿಂದ ತಿಳಿದುಕೊಳ್ಳುತ್ತಾನೆ. ಆಗ ಆತ ಬೇರೊಂದು ಉಪಾಯ ಹೂಡುತ್ತಾನೆ. ಆತ ಆ ಪ್ರಯೋಜನಗಳನ್ನು ಸೀಮಿತಗೊಳಿಸಲು ಪ್ರಯತ್ನಿಸುತ್ತಾನೆ. ನಾವು ಸಮುದ್ರದಿಂದ ಕೆಲವು ಹನಿಗಳನ್ನು ಪಡೆಯುವುದರಲ್ಲಿಯೇ ತೃಪ್ತಿಪಟ್ಟುಕೊಳ್ಳಬೇಕೆಂದು ಆತ ಪ್ರಯತ್ನಿಸುತ್ತಾನೆ. ಉಪವಾಸ ಮತ್ತು ರಾತ್ರಿ ನಮಾಝ್ ಳಿಂದ ನಾವು ಈಗಾಗಲೇ ತಿಳಿದಂತೆ ತಕ್ವಾ (ಧರ್ಮನಿಷ್ಠೆ) ಗಳಿಸಿಕೊಳ್ಳುತ್ತೇವೆ. ಅದರಲ್ಲಿ ಈ ರೀತಿಯ ತಕ್ವಾ ಕೂಡಾ ಗಳಿಸಬಹುದಾಗಿದೆ. ಕೆಲವು ಸಣ್ಣ ಪುಟ್ಟ ಒಳಿತುಗಳನ್ನು ಮಾಡುವುದು, ಐಚ್ಛಿಕ ಮತ್ತು ನಫಿಲ್ ಆರಾಧನಾ ಕರ್ಮಗಳ ಬಗ್ಗೆ ಚಿಂತಿಸುವುದಕ್ಕೆ ಸೀಮಿತವಾಗಿರುವುದು ಮತ್ತು ಅವುಗಳನ್ನು ಆಚರಿಸುವುದು. ಹಾಗೆಯೇ ಸಣ್ಣ ಪುಟ್ಟ ಕೆಡುಕುಗಳಿಂದ ದೂರವುಳಿದರೆ ಸಾಕೆಂಬ ಗುಮಾನಿಯಿರಿಸುವುದು ಇತ್ಯಾದಿ.

ಆದರೆ ಅಲ್ಲಾಹನು ಉಪವಾಸ ವ್ರತದ ಮೂಲಕ ಬೆಳೆಸಲು ಕಲಿಸಿರುವ ತಕ್ವಾವು ಈ ಎಲ್ಲ ವಿಷಯಗಳಿಗಿಂತ ಅದಷ್ಟೋ ಮಿಗಿಲಾದುದಾಗಿದೆ. ಈ ತಕ್ವಾದಿಂದ ನಾವು ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಪವಿತ್ರ ಕುರ್‌ಆನಿನ ದೌತ್ಯವನ್ನು ಈಡೇರಿಸಲು ಮತ್ತು ಅದರ ಹಕ್ಕನ್ನು ತೀರಿಸಲು ಶಕ್ತರಾಗುತ್ತೇವೆ. ಒಂದು ಮಾತು ಇಲ್ಲಿ ಜ್ಞಾಪಕವಿಟ್ಟುಕೊಳ್ಳಬೇಕಾಗಿದೆ. ಹೆಚ್ಚಿನ ವೇಳೆ ಉಪವಾಸ ವ್ರತಾಚರಿಸುವವರು ಮತ್ತು ರಾತ್ರಿ ನಮಾಝ್ ನಿರ್ವಹಿಸುವವರು ಉಪವಾಸ ವ್ರತ ಆಚರಿಸುತ್ತಲಿರುತ್ತಾರೆ ಮತ್ತು ರಾತ್ರಿ ನಮಾಝ್ ನಿರ್ವಹಿಸುತ್ತಲಿರುತ್ತಾರೆಯೇ ಹೊರತು ರಮಝಾನಿನ ಉಪವಾಸ ವ್ರತ ಮತ್ತು ಪವಿತ್ರ ಕುರ್‌ಆನ್ ಅವರನ್ನು ಯಾವ ಸನ್ಮಾರ್ಗದಲ್ಲಿ ನಡೆಸಬಯಸುತ್ತದೋ ಆ ದಾರಿಯಲ್ಲಿ ಒಂದು ಹೆಜ್ಜೆಯನ್ನೂ ಅವರು ಇಡುವುದಿಲ್ಲ. ವಸ್ತುತಃ ನಾವು ಕುರ್‌ಆನಿನ ಹಕ್ಕು ತೀರಿಸಲು ಮತ್ತು ಅಲ್ಲಾಹನ ಇತರ ದಾಸರನ್ನು ಕುರ್‌ಆನಿನ ಹಾದಿಯಲ್ಲಿ ನಡೆಸಲು, ಸ್ವತಃ ನಮ್ಮನ್ನು ಸಿದ್ಧಪಡಿಸುವುದು ಹಾಗೂ ಅದಕ್ಕಾಗಿ ಕಾರ್ಯತಃ ಮುಂದಡಿಯಿಡುವುದೇ ಸತ್ಕರ್ಮಗಳಲ್ಲಿ ಉತ್ತಮ ಕರ್ಮವಾಗಿದೆ. ಅದುವೇ ಕಡ್ಡಾಯಗಳಲ್ಲಿ ಅತಿ ಪ್ರಧಾನ ಕಡ್ಡಾಯ ಕರ್ಮವಾಗಿದೆ ಮತ್ತು ಐಚ್ಛಿಕ ಕಾರ್ಯದಲ್ಲಿ ಅತಿ ಹೆಚ್ಚು ಪುಣ್ಯದಾಯಕ ಕರ್ಮವಾಗಿದೆ.

ನಾವು ಪವಿತ್ರ ಕುರ್‌ಆನ್, ರಮಝಾನಿನ ಉಪವಾಸ ವ್ರತ ಮತ್ತು ತಕ್ವಾಗಳ ಪರಸ್ಪರ ಸಂಬಂಧಗಳನ್ನು ಚೆನ್ನಾಗಿ ಅರಿತಾಗ ಮಾತ್ರವೇ ನಮ್ಮ ಈ ಬಾಧ್ಯತೆಯನ್ನು ಈಡೇರಿಸುವ ಬಗ್ಗೆ ಚಿಂತನೆ ನಡೆಸುವ ಯೋಗ್ಯತೆಯನ್ನು ಪಡೆಯುತ್ತೇವೆ, ನನ್ನ ಇದುವರೆಗಿನ ಚರ್ಚೆಯ ಉದ್ದೇಶವೂ ಇದುವೇ ಆಗಿದೆ, ನಾವು ಚೆನ್ನಾಗಿ ತಿಳಿದಿರಬೇಕು, ರಮಝಾನ್ ತಿಂಗಳ ಉಪವಾಸ ವ್ರತವನ್ನು ಕಡ್ಡಾಯಗೊಳಿಸಿರುವುದು ಆ ತಿಂಗಳಲ್ಲಿ ಅಲ್ಲಾಹನ ವಾಣಿ ಅವತೀರ್ಣಗೊಂಡುದರಿಂದಾಗಿದೆ. ಈ ತಿಂಗಳಲ್ಲಿ ಇಷ್ಟೆಲ್ಲ ಸಮೃದ್ಧಿ ಮತ್ತು ಶ್ರೇಷ್ಟ್ರತೆ ಇರಲು ಕಾರಣ ಅಲ್ಲಾಹನು ಈ ತಿಂಗಳಲ್ಲಿ ತನ್ನ ದಾಸರಿಗೆ ಸನ್ಮಾರ್ಗದರ್ಶನ ನೀಡುವ ಇರಾದೆಯನ್ನು ಮಾಡಿದುದಾಗಿದೆ ಮತ್ತು ತನ್ನ ಮಹಾನ್ ಅನುಗ್ರಹದಿಂದ ತನ್ನ ಮಾರ್ಗದರ್ಶನದ ಅಂತಿಮ ಸಂದೇಶವನ್ನು ತನ್ನ ಅಂತಿಮ ಸಂದೇಶವಾಹಕರ(ಸ) ಮೂಲಕ ಜಗತ್ತಿಗೆ ತಿಳಿಯಪಡಿಸುವುದಾಗಿದೆ. ಒಟ್ಟಿನಲ್ಲಿ ಈ ತಿಂಗಳಲ್ಲಿ ಉಪವಾಸ ವ್ರತವನ್ನು ಕಡ್ಡಾಯಗೊಳಿಸುವುದರ ಉದ್ದೇಶವೇ ಅಲ್ಲಾಹನ ಗ್ರಂಥದ ಮಾರ್ಗದರ್ಶನವನ್ನು ಪಾಲಿಸುವ ಶಕ್ತಿ ಮತ್ತು ಯೋಗ್ಯತೆ ನಮ್ಮಲುಂಟಾಗಬೇಕೆಂಬುದಾಗಿದೆ.

ನಾವು ಏನು ಮಾಡಬೇಕು.
ರಮಝಾನ್ ತಿಂಗಳಿನಿಂದ ಅತ್ಯಧಿಕ ಪ್ರಯೋಜನ ಪಡೆಯಲಿಕ್ಕಾಗಿ ನಾವು ಏನು ಮಾಡಬೇಕು? ರಮಝಾನಿನ ಉಪವಾಸ ವ್ರತಗಳಿಂದ, ಅದರ ತರಾವೀಹ್ (ರಾತ್ರಿ ನಮಾಝ್) ಗಳಿಂದ ಪಠಿಸುವ ಕುರ್‌ಆನ್ ವಚನಗಳಿಂದ, ಆರಾಧನೆ ಮತ್ತು ದಿನಚರಿಗಳಿಂದ, ಅದರ ಹಗಲುಗಳಿಂದ ಹಾಗೂ ರಾತ್ರಿಗಳಿಂದ ತಕ್ವಾದ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಗಳಿಸುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ.

ಸಂಕಲ್ಪ (ನಿಯ್ಯತ್)
ಪ್ರಥಮವಾಗಿ ಇರಬೇಕಾದುದು ಸರಿಯಾದ ಸಂಕಲ್ಪ ಮತ್ತು ಪರಿಪಕ್ವ ಇರಾದೆ. ಸಂಕಲ್ಪವು ಪ್ರಜ್ಞೆಯನ್ನು ಬೆಳೆಸುತ್ತದೆ ಮತ್ತು ಅದನ್ನು ಸಕ್ರಿಯವಾಗಿಸುತ್ತದೆ. ಪ್ರಜ್ಞೆ ಜಾಗೃತಾವಸ್ಥೆಯಲ್ಲಿದ್ದರೆ ಸಂಕಲ್ಪವು ಎಚ್ಚರಗೊಂಡಿರುತ್ತದೆ ಹಾಗೂ ಸಂಕಲ್ಪವು ಪರಿಶ್ರಮ ಮತ್ತು ಪ್ರಯತ್ನಗಳ ರೂಪದಲ್ಲಿ ಪ್ರಕಟವಾಗುತ್ತದೆ.

ಒಂದು ಕಾರ್ಯವನ್ನು ಸಾಧಿಸಬೇಕಾದರೆ, ಅದರ ಬಗ್ಗೆ ಸರಿಯಾದ ಪ್ರಜ್ಞೆ ಮತ್ತು ಅದನ್ನು ಗಳಿಸಬೇಕೆನ್ನುವ ಆಗ್ರಹವು ದೇಹಕ್ಕೆ ಆತ್ಮದ ಅಗತ್ಯವಿರುವಷ್ಟೇ ಇದೆ. ಇದೇ ಅರ್ಥದಲ್ಲಿ ನಮಾಝ್, ಉಪವಾಸ ವ್ರತ ಮತ್ತು ಸಕಲ ಉಪಾಸನಾ ವಿಧಿಗಳಿಗೆ ಸಂಕಲ್ಪ ಅಗತ್ಯವೆಂದು ತಾಕೀತು ಮಾಡಲಾಗಿದೆ. ಕೆಲವು ವಿದ್ವಾಂಸರ ಪ್ರಕಾರ, ನಾಲಗೆಯ ಮೂಲಕ ಸಂಕಲ್ಪವನ್ನು ಉಚ್ಚರಿಸದೆ ಕರ್ಮವು ಸಾರ್ಥಕವಾಗಲಾರದು. ಇನ್ನು ಕೆಲವು ವಿದ್ವಾಂಸರ ಪ್ರಕಾರ, ಮನಸ್ಸಿನ ಇಚ್ಛೆ ಮತ್ತು ನಿರ್ಧಾರವೇ ಸಾಕು. ಈ ರೀತಿ ಸಂಕಲ್ಪದ ವಾಕ್ಯವನ್ನು ನಾಲಗೆಯ ಮೂಲಕ ಉಚ್ಚರಿಸಿದರೂ ಮನಸ್ಸಿನಲ್ಲೇ ಸಂಕಲ್ಪಿಸಿದರೂ ಕ್ರಿಯೆಯ ಕರ್ಮಶಾಸ್ತ್ರೀಯ ಶರತ್ತೇನೋ ಈಡೇರುತ್ತದೆ, ಆದರೆ ಮನ ಮಸ್ತಿಷ್ಯಗಳಲ್ಲಿ ಕರ್ಮದ ಉದ್ದೇಶವು ಅಭಿವ್ಯಕ್ತಗೊಂಡರೆ ಹಾಗೂ ಮನಸ್ಸಿನಲ್ಲಿ ಅದರ ಗಳಿಕೆಯ ದೃಢ ನಿಶ್ಚಯ ಹುಟ್ಟಿ ಕೊಂಡರೆ ಮಾತ್ರವೇ ಆ ಸಂಕಲ್ಪವು ಆತ್ಮದ ರೂಪ ತಳೆಯುತ್ತದೆ.

ಜೀವಂತ ಮತ್ತು ಮೃತ ದೇಹದಲ್ಲಿ ಮೇಲ್ನೋಟಕ್ಕೆ ಯಾವುದೇ ವ್ಯತ್ಯಾಸ ಕಾಣಲಾರದು. ಆದರೆ ಜೀವಂತ ದೇಹವು ಕ್ರಿಯಾಶೀಲತೆ ಮತ್ತು ಕರ್ಮ ಶಕ್ತಿಯನ್ನು ಹೊಂದಿರುತ್ತದೆ, ಅದೇ ವೇಳೆ ಮೃತ ದೇಹವು ಜಡ ಮತ್ತು ನಿಶ್ಚಲವಾಗಿರುತ್ತದೆ. ಕರ್ಮಗಳ ಅವಸ್ಥೆಯೂ ಅದೇ ರೀತಿಯಿರುತ್ತದೆ. ಒಂದು ವೇಳೆ ಕರ್ಮದಲ್ಲಿ ಸತ್ಯಕಲ್ಪದ ಆತ್ಮವಿದ್ದರೆ ಅದು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಶಕ್ತಿಯನ್ನು ಹೊಂದುತ್ತದೆ. ಇದನ್ನೇ ಪ್ರವಾದಿವರ್ಯರು(ಸ), ‘ಕರ್ಮಗಳ ಸ್ಥಿತಿ ಮತ್ತು ತೂಕವು ಸಂಕಲ್ಪವನ್ನು ಆಧರಿಸಿರುತ್ತದೆ” (ವರದಿ: ಹ. ಉಮರ್(ರ) – ಬುಖಾರಿ) ಎಂಬ ಮಾತಿನಿಂದ ವ್ಯಕ್ತಪಡಿಸಿರುವರು. ಅರ್ಥಾತ್ ಪ್ರತಿಯೊಬ್ಬ ಮಾನವನಿಗೂ ಅವನು ಸಂಕಲ್ಪಿಸಿದುದೇ ದೊರೆಯುತ್ತದೆ.

ಸಂಕಲ್ಪ ಇರಬೇಕು, ಸರಿಯಾದುದೇ ಆಗಿರಬೇಕು, ಆದರೆ ಅದರೊಂದಿಗೇ ನಿಷ್ಕಳಂಕವೂ ಆಗಿರಬೇಕು. ಅಂದರೆ ಪ್ರತಿಯೊಂದು ಕರ್ಮವೂ ಅಲ್ಲಾಹನ ಸಂಪ್ರೀತಿಗಾಗಿರಬೇಕು ಹಾಗೂ ಅವನಿಂದ ಮಾತ್ರವೇ ಪ್ರತಿಫಲ ಪಡೆಯುವ ಉದ್ದೇಶವನ್ನು ಹೊಂದಿರಬೇಕು. ಒಂದು ವೇಳೆ ನಿಮ್ಮ ಸಂಕಲ್ಪವು ನಿಷ್ಕಳಂಕವಾಗಿಲ್ಲದಿದ್ದರೆ, ನಿಮ್ಮ ಕರ್ಮವು ಕೇವಲ ಅಲ್ಲಾಹನಿಗಾಗಿರದೆ ಇದ್ದರೆ ಅದು ಸ್ವೀಕೃತವಾಗಲಾರದು ಹಾಗೂ ನಿಮ್ಮ ಪರಿಶ್ರಮವು ಫಲಪ್ರದವಾಗಲಾರದು.

ಸಂಕಲ್ಪವು ಕರ್ಮಕ್ಕಾಗಿರುವ ಆಗ್ರಹ ಮತ್ತು ಇಚ್ಛೆಯ ಪ್ರಕಟನೆಯೂ ಆಗಿದೆ. ಒಂದು ವೇಳೆ ನಿಮ್ಮಲ್ಲಿ ಒಂದು ಕರ್ಮದ ಇಚ್ಛೆ ಮತ್ತು ಆಗ್ರಹವಿಲ್ಲದಿದ್ದರೆ, ಸಂಕಲ್ಪವು ಅದನ್ನು ಹುಟ್ಟಿಸುತ್ತದೆ. ಇಚ್ಚೆ ಮತ್ತು ಆಗ್ರಹವಿದ್ದರೆ ದೃಢ ನಿಶ್ಚಯವೂ ಹುಟ್ಟುತ್ತದ. ಈ ಆಗ್ರಹ ಮತ್ತು ದೃಢ ನಿಶ್ಚಯವೇ ನಮ್ಮಲ್ಲಿ ಸಕ್ರಿಯತೆಯ ಶಕ್ತಿಯನ್ನು ತುಂಬುತ್ತದೆ. ಮಾತ್ರವಲ್ಲ, ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಇದೊಂದು ಮೂಲಭೂತ ಗುಣವಿಶೇಷವಾಗಿದೆ. ಇದರ ಹೊರತು ಯಾವುದೇ ದಾರಿಯನ್ನು ಕ್ರಮಿಸಲಾಗದು ಮತ್ತು ರಮಝಾನಿನ ದಾರಿಯೂ ನಿಮ್ಮನ್ನು ತನ್ನ ಗುರಿಯೆಡೆಗೆ ಕರೆದೊಯ್ಯಲಾರದು.

ಪವಿತ್ರ ಕುರ್‌ಆನಿನೊಂದಿಗೆ ಸಂಬಂಧ
ಎರಡನೆಯದಾಗಿ, ಪವಿತ್ರ ಕುರ್‌ಆನಿನ ಪಠಣ, ಶ್ರವಣ ಮತ್ತು ಅದರ ಶಿಕ್ಷಣವನ್ನು ಗಳಿಸುವುದಾಗಿದೆ. ರಮಝಾನ್ ತಿಂಗಳು ತನ್ನ ವಿಶೇಷ ಆರಾಧನೆಗಳನ್ನು ಅರ್ಥಾತ್ ಉಪವಾಸ ವ್ರತ ಮತ್ತು ರಾತ್ರಿಯ ನಮಾಝನ್ನು ಯಾವುದಾದರೊಂದು ರೀತಿಯಲ್ಲಿ ಪವಿತ್ರ ಕುರ್‌ಆನಿನೊಂದಿಗೆ ಜೋಡಿಸುತ್ತದೆ. ಈ ತಿಂಗಳ ಮೂಲ ಗಳಿಕೆಯೇ ಪವಿತ್ರ ಕುರ್‌ಆನನ್ನು ಆಲಿಸುವುದು, ವರಿಸುವುದು, ಕಲಿಯುವುದು ಮತ್ತು ಅದನ್ನು ಅನುಸರಿಸುವ ಸಾಮರ್ಥ್ಯವನ್ನು ಹೊಂದುವುದಾಗಿದೆ. ಆದ್ದರಿಂದ ಹೆಚ್ಚೆಚ್ಚು ಸಮಯ ಪವಿತ್ರ ಕುರ್‌ಆನಿನ ಸಾಂಗತ್ಯದಲ್ಲಿ ಕಳೆಯುವುದನ್ನು ರೂಢಿಸಿಕೊಳ್ಳಿರಿ, ಈ ಸಮಯವನ್ನು ಒಂದೆಡೆ, ಅಲ್ಲಾಹನು ನಿಮ್ಮೊಂದಿಗೆ ಏನನ್ನು ಹೇಳುತ್ತಿದ್ದಾನೆಂದು ತಿಳಿದುಕೊಳ್ಳುವಂತೆಯೂ ಇನ್ನೊಂದಡೆ ನಿಮ್ಮ ಮನ ಮಸ್ತಿಷ್ಕವು ಪವಿತ್ರ ಕುರ್‌ಆನನ್ನು ತನ್ನಲ್ಲಿ ಹೀರಿಕೊಳ್ಳುವಂತೆಯೂ ಅದರ ಶಿಕ್ಷಣದಂತೆ ಕಾರ್ಯ ಪ್ರವೃತ್ತವಾಗುವ ಹುಮ್ಮಸ್ಸು ಬೆಳೆಯುವಂತೆಯೂ ಬಳಸಬೇಕು.

ತರಾವೀಹ್ ನಮಾಝನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಕನಿಷ್ಠ ಒಂದು ಬಾರಿ ಸಂಪೂರ್ಣ ಕುರ್‌ಆನನ್ನು ಆಲಿಸಿದಂತಾಗುತ್ತದೆ. ಅಲ್ಲಾಹನ ಸನ್ನಿಧಿಯಲ್ಲಿ ನಿಂತು ಅಲ್ಲಾಹನ ವಾಣಿಯನ್ನು ಆಲಿಸುವ ಆಧ್ಯಾತ್ಮಿಕ ಪ್ರಯೋಜನವು ಸ್ವಯಂ ಒಂದು ಅಮೂಲ್ಯವಾದ ಅನುಭೂತಿಯಾಗಿದೆ. ಆದರೆ ಅರಬಿ ಭಾಷೆ ಅರಿಯದಿರುವ ಕಾರಣ ಕುರ್‌ಆನಿನ ಸಂದೇಶ, ಉಪದೇಶಗಳನ್ನು ಮನನ ಮಾಡುವಂತಹ ಸೌಭಾಗ್ಯದಿಂದ ನೀವು ವಂಚಿತರಾಗುತ್ತೀರಿ. ಆದ್ದರಿಂದ ಈ ಉದ್ದೇಶದ ಈಡೇರಿಕೆಗಾಗಿ ಸ್ವಲ್ಪ ಹೆಚ್ಚೇ ಪರಿಶ್ರಮ ಪಡಬೇಕು ಮತ್ತು ತರಾವೀನ್‌ಗೆ ಮೀಸಲಿಡುವುದಕ್ಕಿಂತ ಸ್ವಲ್ಪ ಹೆಚ್ಚು ಸಮಯವನ್ನು ಅದಕ್ಕಾಗಿ ವ್ಯಯಿಸಬೇಕು. ಅಂದರೆ ನಿತ್ಯವೂ ಪವಿತ್ರ ಕುರ್‌ಆನಿನ ಕೆಲವು ಭಾಗಗಳನ್ನು ಅನುವಾದ ಸಹಿತ ಅಧ್ಯಯನ ಮಾಡಲು ಪ್ರಯತ್ನಿಸಬೇಕು.

ಇನ್ನು ಎಷ್ಟು ಭಾಗವನ್ನು ಅಭ್ಯಸಿಸಬೇಕು ಎಂಬ ಪ್ರಶ್ನೆ. ಇದನ್ನು ತರಾವೀನ್‌ನ ಪಠಣದ ರೂಪದಲ್ಲಿಯೂ ನಿರ್ಧರಿಸಬಹುದಾಗಿದೆ. ಅಂದರೆ ರಮಝಾನ್ ತಿಂಗಳಲ್ಲಿ ಪವಿತ್ರ ಕುರ್‌ಆನನ್ನು ಒಂದು ಬಾರಿಯಾದರೂ ಅರ್ಥ ಸಹಿತ ಸಂಪೂರ್ಣ ಓದಿ ಮುಗಿಸುವಂತಾಗಬೇಕು.

ನಾವು ಏನು ಮಾಡಬೇಕು?
ಈ ಒಂದು ತಿಂಗಳಲ್ಲಿ ದೇವಚರ ಜಿಲ್‌ರು(ಅ) ಸ್ವತಃ ಬಂದು ಪ್ರವಾದಿವರ್ಯರಿಂದ(ಸ) ಸಂಪೂರ್ಣ ಕುರ್‌ಆನನ್ನು ಒಂದು ಬಾರಿ ಓದಿಸುತ್ತಿದ್ದರು ಎಂದು ಹದೀಸ್‌ಗಳಿಂದಲೂ ತಿಳಿದು ಬರುತ್ತದೆ. (ವರದಿ: ಇಬ್ನು ಅಬ್ಬಾಸ್(ರ)- ಬುಖಾರಿ, ಮುಸ್ಲಿಮ್] ಆದ್ದರಿಂದ ನಿತ್ಯವೂ ತರಾವೀನ್‌ನಲ್ಲಿ ಪಠಿಸಿದಷ್ಟು (ಸುಮಾರು ಒಂದು ಕಾಂಡ) ಕುರ್‌ಆನ್ ವಚನಗಳನ್ನು ಅರ್ಥ ಸಹಿತ ಪರಿಸಬೇಕು. ಆದರೆ ಈ ಕಾರ್ಯವು ಎಲ್ಲರ ಮಟ್ಟಿಗೆ ಸುಲಭವಾಗುತ್ತದೆನ್ನುವಂತಿಲ್ಲ.ಆದ್ದರಿಂದ ಪವಿತ್ರ ಕುರ್‌ಆನ್‌ನಲ್ಲಿಯೇ ದುರ್ಬಲ ಮಂದಿಗೆ ಈ ನಿಟ್ಟಿನಲ್ಲಿ ಸೌಲಭ್ಯವನ್ನು ಒದಗಿಸಿ ಕೊಡಲಾಗಿದೆ. ಈ ದೌರ್ಬಲ್ಕವು ರೋಗ ಕಾರಣವಾಗಿರಬಹುದು, ಜೀವನಾಧಾರದ ಹುಡುಕಾಟದಿಂದಾಗಿರಬಹುದು ಅಥವಾ ದೇವ ಮಾರ್ಗದಲ್ಲಿ ಕಾರ್ಯ ನಿರತರಾಗಿರುವುದರಿಂದ ಆಗಿರಬಹುದು. ಆದ್ದರಿಂದ ಇನ್ನು (ಮುಂದೆ) ಕುರ್‌ಆನ್‌ನಿಂದ, ಸುಲಭವಾಗಿ ಪಠಿಸಲು ನಿಮಗೆ ಸಾಧ್ಯವಿರುವಷ್ಟನ್ನು ಪಠಿಸಿರಿ” ಎಂದು ಉಪದೇಶಿಸಲಾಯಿತು. ಹಾಗಾಗಿ ಈಗ ಆಗತವಾಗಲಿರುವ ರಮಝಾನಿನ ಪ್ರಥಮ ದಿನದಿಂದಲೇ ಕುರ್‌ಆನ್ ಅಧ್ಯಯನ ಆರಂಭಿಸಿ ಮುಂಬರುವ ರಮಝಾನ್‌ಗಿಂತ ಮುಂಚೆ ಒಂದು ಬಾರಿ ಕುರ್‌ಆನ್ ಪಠಿಸಿ ಮುಗಿಸುವ ಸಂಕಲ್ಪ ತೊಡಬೇಕು. ಇದಕ್ಕಾಗಿ ದಿನನಿತ್ಯ ಒಂದು ಅಥವಾ ಎರಡು ರುಕೂಅ್ ಗಿಂತ ಹೆಚ್ಚು ಪರಿಸುವ ಅಗತ್ಯವಿರಲಾರದು. ಇಷ್ಟು ಸಮಯ ವಿನಿಯೋಗಿಸುವುದು ರಮಝಾನಿನಲ್ಲಾಗಲೀ ಇತರ ದಿನಗಳಲ್ಲಾಗಲೀ ಕಷ್ಟವಿಲ್ಲ.

ಒಂದು ವೇಳೆ ನೀವು ಕಟ್ಟುನಿಟ್ಟಾಗಿ ಇಷ್ಟನ್ನು ಪಠಿಸಲಾರಿರೆಂದಾದರೆ, ಈ ರಮಝಾನಿನ ಆರಂಭದಿಂದ ಕನಿಷ್ಠ ಮೂರು ವಚನಗಳನ್ನು ಅರ್ಥ ಸಹಿತ ಪಠಿಸಲು ಆರಂಭಿಸಿರಿ. ಈ ರೀತಿಯಾಗಿ ಒಂದು ವರ್ಷದಲ್ಲಿ ಅಲ್ಲದಿದ್ದರೂ, ಐದಾರು ವರ್ಷಗಳಲ್ಲಿಯಾದರೂ ಒಂದು ಬಾರಿ ಇಡೀ ಕುರ್‌ಆನನ್ನು ಅರ್ಥ ಸಹಿತ ಪಠಿಸಿ ಮುಗಿಸಬಲ್ಲಿರಿ. ಅದೇ ವೇಳೆ, ಈ ಕಾರ್ಯವನ್ನು ಇದೇ ರಮಝಾನಿನಿಂದ ಆರಂಭಿಸುವ ಮೂಲಕ ಅಲ್ಲಾಹನ ವಿಶೇಷ ಕೃಪೆ-ಅನುಗ್ರಹವನ್ನೂ ಗಳಿಸಬಲ್ಲಿರಿ.

ಅರ್ಥ ಮಾಡಿಕೊಳ್ಳುವುದರೊಂದಿಗೇ ಪವಿತ್ರ ಕುರ್‌ಆನಿನ ಬೋಧನೆಗಳನ್ನು ನಿಮ್ಮೊಳಗೆ ಅಳವಡಿಸಿಕೊಳ್ಳುವುದು ಮತ್ತು ನಿಮ್ಮ ಮನಸ್ಸು-ಆತ್ಮದ ಸಂಬಂಧವನ್ನು ಗಾಢಗೊಳಿಸುವುದು ಕೂಡ ಅತ್ಯಗತ್ಯವಾಗಿದೆ. ಪವಿತ್ರ ಕುರ್‌ಆನ್, ತನ್ನನ್ನು ಪಠಿಸುವವರ ಗುಣವನ್ನು ಕೇವಲ ಅರ್ಥಸಹಿತ ಪಠಿಸುವವರೆಂದು ಬಣ್ಣಿಸಿದುದಲ್ಲ, (ಈ ರೀತಿಯಾಗಿ ಮುಸ್ಲಿಮೇತರರೂ ಪಠಿಸುತ್ತಾರೆ) ಬದಲಾಗಿ ಆತ್ಮ, ಮನಸ್ಸು ಮತ್ತು ದೇಹ ಸಂಪೂರ್ಣವಾಗಿ ಅದರ ಪಠಣದಲ್ಲಿ ತೊಡಗಿಕೊಳ್ಳಬೇಕೆಂಬುದು ಅದರ ಉದ್ದೇಶವಾಗಿದೆ.

ಪವಿತ್ರ ಕುರ್‌ಆನ್ ಸ್ವತಃ ಹೇಳುವ ಪ್ರಕಾರ, ಅದನ್ನು ಪಠಿಸುವಾಗ ಕೇಳುಗರ ಮತ್ತು ಪಠಿಸುವವರ ಹೃದಯಗಳು ಕಂಪಿಸುತ್ತವೆ ಮತ್ತು ಹೃದಯ ಮೃದುವಾಗುತ್ತದೆ. ಅವರ ದೇಹವು ರೋಮಾಂಚನಗೊಳ್ಳುತ್ತದೆ, ಕಂಗಳಲ್ಲಿ ಅಶ್ರುಧಾರೆ ಹರಿಯುತ್ತದೆ, ಅವರು ರೋದಿಸತೊಡಗುತ್ತಾರೆ, ಅವರ ಈಮಾನ್ ಅಧಿಕಗೊಳ್ಳುತ್ತದೆ. ಪ್ರವಾದಿವರ್ಯರು(ಸ) ಒಂದು ಸಂದರ್ಭದಲ್ಲಿ ಹೀಗೆಂದಿದ್ದಾರೆ, ”ಕುರ್‌ಆನ್ ಪಠಿಸುವಾಗ ಅತ್ತು ಬಿಡಿರಿ, ಅಳು ಬರದಿದ್ದರೆ ಅಳಲು ಪ್ರಯತ್ನಿಸಿರಿ.”

ನೀವು ಬೇಕಾದರೆ ಅತ್ಯಲ್ಪವೇ ಪಠಿಸಿ ನೋಡಿ- ಭಯ ವಿಹ್ವಲಗೊಳಿಸುವ ‘ಅಲ್ ಕಾರಿಅ ಪರಿಸಿ ನೋಡಿ, ಅಥವಾ ಅಣುಗಾತ್ರದ ಸತ್ಕರ್ಮವೂ ಅಣುಗಾತ್ರದ ದುಷ್ಕರ್ಮವೂ ಕಂಡೇ ತೀರುವುದೆಂದು ಎಚ್ಚರಿಸುವ ‘ಅಝಿಲ್‌ಝಾಲ್’ ಪಠಿಸಿರಿ- ಆದರೆ ಅವನ್ನು ಅವುಗಳಲ್ಲಿ ಆಳವಾಗಿ ಇಳಿದು ಪಠಿಸಬೇಕು ಮತ್ತು ಅಲ್ಲಾಹನು ನಿಮ್ಮ ಮುಂದೆಯೇ ಇದ್ದು, ನಿಮ್ಮೊಡನೆ ಮಾತನಾಡುತ್ತಿರುವನು ಹಾಗೂ ಏನು ಮಾಡಬೇಕು, ಏನನ್ನು ಮಾಡಬಾರದು, ಹೀಗೆ ಮಾಡಿದರೆ ಏನು ಆಗುವುದು ಎಂದು ಸ್ವಯಂ ತಿಳಿಸುತ್ತಿರುವನೋ ಎಂಬಂತೆ ಭಾವಿಸುತ್ತಾ ಪರಿಸಬೇಕು. ಒಟ್ಟಿನಲ್ಲಿ ಈ ರೀತಿ ನಿಮ್ಮ ಮನ-ಮಸ್ತಿಷ್ಕ ಮತ್ತು ದೇಹದ ಸಕಲ ಅವಯವಗಳೂ ಈ ಪಠಣ ಕಾರ್ಯದಲ್ಲಿ ಶಾಮಿಲಾಗಬೇಕು.

ದೇವಾಜೋಲ್ಲಂಘನೆಯಿಂದ ದೂರವಿರುವುದು
ಮೂರನೆಯದಾಗಿ, ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸುವುದರಿಂದ ದೂರವಿರಲು ಪ್ರಯತ್ನಿಸುವುದಾಗಿದೆ. ತಕ್ವಾ (ಧರ್ಮನಿಷ್ಠೆ)ವನ್ನು ಊರ್ಜಿತಗೊಳಿಸುವುದೇ ಉಪವಾಸ ವ್ರತದ ಉದ್ದೇಶವಾಗಿದೆ. ಹಾಗೆಯೇ ರಮಝಾನ್ ತಿಂಗಳಿಡೀ ತಕ್ವಾವನ್ನು ಉದ್ದೀಪಿಸುವ ವಸಂತ ಮಾಸವಾಗಿದೆ. ಆದ್ದರಿಂದ ಈ ತಿಂಗಳಲ್ಲಿ ಅಲ್ಲಾಹನ ಆಜ್ಞೆಲ್ಲಂಘನೆಯಿಂದ ಸಾದ್ಯಂತ ದೂರವಿರಲು ಪ್ರಯತ್ನಪಡುವುದು ಅಗತ್ಯವಾಗಿದೆ. ಅಂದರೆ ರಮಝಾನಿಗೆ ಹೊರತಾದ ಇತರ ಹಗಲು ರಾತ್ರಿಗಳಲ್ಲಿ ಅಲ್ಲಾಹನ ಆಜ್ಞೆಲ್ಲಂಘನೆಯಿಂದ ದೂರವಿರಲು ಪ್ರಯತ್ನಿಸಬೇಕಾಗಿಲ್ಲವೆಂದು ಅದರ ಅರ್ಥವಲ್ಲ. ಬದಲಾಗಿ, ರಮಝಾನಿನಲ್ಲಿ ಪವಿತ್ರ ಕುರ್‌ಆನಿನೊಂದಿಗೆ ವಿಶೇಷ ಸಂಬಂಧವಿರಿಸುವುದು, ಕೇವಲ ದೇವ ಸಂಪ್ರೀತಿಗಾಗಿ ಹಗಲಿಡೀ ಹಸಿದಿರುವುದು, ರಾತ್ರಿ ಬಹಳಷ್ಟು ಹೊತ್ತು ನಿಂತು (ನಮಾಝಿನಲ್ಲಿ) ದೇವವಾಣಿಯನ್ನು ಆಲಿಸುವುದು- ಇವೆಲ್ಲವೂ ಒಂದು ವಿಶಿಷ್ಟ ವಾತಾವರಣವನ್ನು ಸೃಷ್ಟಿಸುತ್ತವೆ ಹಾಗೂ ಒಂದು ಅನುಪಮವಾದ ಅನುಭೂತಿಯನ್ನು ಉಂಟು ಮಾಡುತ್ತವೆ. ಇಂತಹ ವಾತಾವರಣ ಮತ್ತು ಅನುಭೂತಿಯು ನಿಮ್ಮನ್ನು ದೇವಾಜ್ಞೆಂಘನೆಯಾಗಬಲ್ಲ ಪ್ರತಿಯೊಂದು ವಸ್ತುವಿನಿಂದಲೂ ದೂರವಿರಿಸಬಹುದಾದಂತಹ ರೀತಿಯಲ್ಲಿ ಗಾಢ ಮತ್ತು ಶಕ್ತಿಯುತವಾಗಿ ಬಿಟ್ಟಿರುತ್ತದೆ.

ವಸ್ತುತಃ ಈ ಪ್ರಯತ್ನವನ್ನು ಜೀವನದ ಪ್ರತಿಯೊಂದು ವಿಷಯದಲ್ಲಿಯೂ ಮಾಡುತ್ತಿರಬೇಕಾಗಿದೆ. ಆದರೆ ಇಂತಹ ವ್ಯಕ್ತಿಗಳೊಂದಿಗಿನ ಸಂಬಂಧ ಮತ್ತು ಸಾಮಾಜಿಕ ವ್ಯವಹಾರಗಳಿಗೆ ಸಂಬಂಧಿಸಿ ವಿಶೇಷ ಗಮನ ನೀಡುವ ಅಗತ್ಯವಿದೆ, ಒಬ್ಬನು ರಮಝಾನಿನಲ್ಲಿ ಕಟ್ಟುನಿಟ್ಟಾಗಿ ಉಪವಾಸ ವ್ರತಾಚರಿಸಿಯೂ ನಮಾಝ್ ನಿರ್ವಹಿಸಿಯೂ ದಾನ-ಧರ್ಮಗಳನ್ನು ಮಾಡಿಯೂ ಕುರ್‌ಆನ್ ಪಠಿಸಿಯೂ ದೇವನ ಮುಂದೆ ಅಪರಾಧಿಯಂತೆ ನಿಲ್ಲುವಂತಹ ಪರಿಸ್ಥಿತಿಯನ್ನು ಊಹಿಸಿ ನೋಡಿ, ಅಂದರೆ ಆತನು ಇತರರಿಗೆ ಹೊಡದ, ಇತರರನ್ನು ಅವಮಾನಿಸಿದ, ಇತರರ ಮನನೋಯಿಸಿದ ಇತರರ ಸಂಪತ್ತನ್ನು ಅನ್ಯಾಯವಾಗಿ ಕಬಳಿಸಿದ ಆರೋಪಗಳ ಪಟ್ಟಿಯೊಂದಿಗೆ ಪುನರುಜ್ಞಾನ ದಿನ ಅಲ್ಲಾಹನ ಮುಂದೆ ನಿಲ್ಲುವವರವನ್ನು ಪ್ರವಾದಿವರ್ಯರು(ಸ) ಹೀಗೆಂದಿರುವರು, ‘ಇಂತಹವನೇ ನನ್ನ ಸಮುದಾಯದ ನಿಜವಾದ ದಿವಾಳಿ, ಅವನ ಎಲ್ಲ ಒಳಿತುಳಗಳನ್ನು ಅವನಿಂದ ಅಕ್ರಮಕ್ಕೊಳಗಾದವರಿಗೆ ನೀಡಲಾಗುವುದು, ಅದಾಗಿಯೂ ಆರೋಪಗಳು ಉಳಿದಿದ್ದರೆ, ಇತರರ ಪಾಪಗಳನ್ನು ಅವನ ಹಗಲಿಗೇರಿಸಲಾಗುವುದು ಮತ್ತು ಅವನನ್ನು ಕವುಚಿ ಹಾಕಿ ಎಳೆದು ನರಕಕ್ಕೆಸೆಯಲಾಗುವುದು.” [ವರದಿ; ಹ, ಅಬೂಹುರೈರಾ(ರ) – ಮುಸ್ಲಿಮ್ |

ನೀವು ಪವಿತ್ರ ಕುರ್‌ಆನಿನಲ್ಲಿ ಉಪವಾಸ ವ್ರತವನ್ನು ಕಡ್ಡಾಯಗೊಳಿಸಿದ ವಚನದ ವಿಷಯಾನುಬಂಧದೆಡೆಗೆ ಒಮ್ಮೆ ಕನ್ನಾಡಿಸಿರಿ, ಆಗ ಉಪವಾಸ ವ್ರತದ ಉದ್ದೇಶವೇನು ಎಂಬುದು ನಿಮಗೆ ತಕ್ಷಣವೇ ಹೊಳೆಯುವುದು.

ಪವಿತ್ರ ಕುರ್‌ಆನ್ ಮೊದಲಿಗೆ ಮಾನವ ಜೀವದ ಘನತೆಯನ್ನು ಎತ್ತಿ ಹಿಡಿಯುತ್ತದೆ. ಮತ್ತು ಕಿಸಾಸ್‌ನ (ಪ್ರತೀಕಾರ) ಆದೇಶ ನೀಡುತ್ತದೆ. ಬಳಿಕ ವಾರೀಸಿನಲ್ಲಿ ನ್ಯಾಯದೊಂದಿಗೆ ಉಯಿಲು ಮಾಡಲು ಉಪದೇಶಿಸುತ್ತದೆ. ಅದರ ನಂತರ ಉಪವಾಸ ವ್ರತ ಮತ್ತು ರಮದಾನ್ ತಿಂಗಳ ಪ್ರಸ್ತಾಪ ಬರುತ್ತದೆ, ಅದಾದ ತಕ್ಷಣವೇ ಪರಸ್ಪರರ ಸಂಪತ್ತನ್ನು ಅನುಚಿತ ಮಾರ್ಗದಲ್ಲಿ ಕಬಳಿಸಬೇಡಿರಿ ಎಂದು ಉಪದೇಶಿಸುತ್ತದೆ, ಹಾಗೆಯೇ ಒಳಿತುಗಳು ತೋರಿಕೆಯ ಆಚಾರ ಕರ್ಮಗಳ ಹೆಸರಲ್ಲ : ಬದಲಾಗಿ ವಿಶ್ವಾಸ, ಪ್ರೀತಿ, ದೇವ ಮಾರ್ಗದಲ್ಲಿ ಹಣವ್ಯಯ ಮತ್ತು ಸಹನೆಗಳೆಂಬ ತಕ್ವಾವೇ ಉದ್ದೇಶವಾಗಿದೆ ಎಂದು ಹೇಳಲಾಯಿತು. ತರುವಾಯ ದೇವ ಮಾರ್ಗದಲ್ಲಿ ಹೋರಾಡಲು ಆದೇಶಿಸಲಾಯಿತು. ಅದರೊಂದಿಗೇ ಅತಿಕ್ರಮಿಸುವವರನ್ನು ಅಲ್ಲಾಹನು ಮೆಚ್ಚುವುದಿಲ್ಲವಾದ್ದರಿಂದ ಯುದ್ಧದ ವೇಳೆಯೂ ಅಕ್ರಮವೆಸಗಬೇಡಿರಿ ಎಂದು ತಾಕೀತು ಮಾಡಲಾಯಿತು.

ಆದೇಶ-ನಿರ್ದೇಶಗಳ ಈ ಶೃಂಖಲೆಯಲ್ಲಿ ಉಪವಾಸ ವ್ರತವನ್ನು ಜೋಡಿಸಿರುವ ರೀತಿಯಲ್ಲಿಯೇ ಒಂದು ಮಾತು ಸ್ಪಷ್ಟವಾಗುತ್ತದೆ. ಅದೆಂದರೆ, ಉಪವಾಸವ್ರತಾಚರಿಸುತ್ತಾ ನೀವು ಇತರರ ಜೀವ, ಸೊತ್ತು, ಹಕ್ಕು ಮತ್ತು ಮಾನವರ ಮೇಲೆ ಕೈ ಮಾಡದಿರಬೇಕಾದುದು ಅತೀ ಅಗತ್ಯವಾಗುತ್ತದೆ. ಈ ಮಾತನ್ನು ಪ್ರವಾದಿವರ್ಯರು(ಸ) ಹೀಗೆ ಉಲ್ಲೇಖಿಸಿರುವರು.
“ಉಪವಾಸ ವ್ರತವು ಪಾಪಗಳಿಂದ ರಕ್ಷಿಸಿಕೊಳ್ಳಲಿಕ್ಕಾಗಿರುವ ಗುರಾಣಿಯಂತೆ ಕೆಲಸ ನಿರ್ವಹಿಸುತ್ತದೆ, ಆದ್ದರಿಂದ ಅದನ್ನು ಗುರಾಣಿಯಾಗಿ ಮಾಡಿಕೊಳ್ಳಿರಿ. ಉಪವಾಸಿಗಳು ಕೆಟ್ಟ ಮಾತುಗಳನ್ನಾಡಬಾರದು, ಬಯ್ಗಳ-ಜಗಳಕ್ಕಿಳಿಯಬಾರದು ಮತ್ತು ಒಂದು ವೇಳೆ ಯಾರಾದರೂ ನಿಮ್ಮೊಡನೆ ಜಗಳಕ್ಕಿಳಿದರೆ ‘ನಾನು ಉಪವಾಸಿಗನಾಗಿದ್ದೇನೆ’ ಇಂಥಹ ದುಷ್ಕೃತ್ಯದಲ್ಲಿ ತೊಡಗಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ’ ಎಂದು ಹೇಳಿ ಬೇರ್ಪಡಬೇಕು (ವರದಿ: ಅಬೂಹುರೈರಾ, ಬುಖಾರಿ ಮುಸ್ಲಿಮ್)

ಅಬೂಹುರೈರಾ(ರ) ವರದಿ ಮಾಡಿರುವ ಇನ್ನೊಂದು ವಚನದಲ್ಲಿ ಪ್ರವಾದಿವರ್ಯರು(ಸ) ಹೀಗೆ ಸ್ಪಷ್ಟಪಡಿಸಿರುವರು, “ಆಹಾರ ಪಾನೀಯ ತೊರೆಯುವುದಷ್ಟೇ ಉಪವಾಸದ ಉದ್ದೇಶವಲ್ಲ. ಬದಲಾಗಿ ಸುಳ್ಳು ಹೇಳುವುದನ್ನು ಸುಳ್ಳು ಕೃತ್ಯವೆಸಗುವುದನ್ನು ತೊರೆಯುವುದಾಗಿದೆ.” (ಬುಖಾರಿ) ಚೆನ್ನಾಗಿ ನೆನಪಿಟ್ಟುಕೊಳ್ಳಿರಿ- ಉಪವಾಸ ವ್ರತವು ಕೇವಲ ಹೊಟ್ಟೆಯ ಉಪವಾಸವಲ್ಲ. ಅದು ಕಣ್ಣಿನ ಉಪವಾಸವೂ ಆಗಿದೆ, ಕಿವಿಯ ಉಪವಾಸವೂ ಆಗಿದೆ. ಅದು ಹೇಗೆಂದರೆ, ಅಲ್ಲಾಹನಿಗೆ ಇಷ್ಟವಿಲ್ಲದ ಮತ್ತು ಅವನು ತಡೆದಿರುವಂತಹವುಗಳನ್ನು ಕಣ್ಣು ನೋಡಬಾರದು. ಕಿವಿ ಕೇಳಿಸಿಕೊಳ್ಳಬಾರದು, ನಾಲಿಗೆ ಹೇಳಬಾರದು, ಕೈ-ಕಾಲುಗಳು ಮಾಡಬಾರದು.

ನಿಮ್ಮಲ್ಲಿರುವ ಕುಂದು-ಕೊರತೆ, ದೋಷಗಳ ಮೇಲೆ ಒಂದೊಂದಾಗಿ ಹತೋಟಿ ಸಾಧಿಸುವುದರಿಂದ ಹಲವು ಪ್ರಯೋಜನಗಳಿವೆ. ಉದಾಹರಣೆಗೆ: ಈ ರಮಝಾನಿನಲ್ಲಿ ನೀವು ಯಾರ ಮೇಲೆಯೂ ರೇಗಾಡುವುದಿಲ್ಲವೆಂದು, ಯಾರೊಂದಿಗೂ ಜಗಳಾಡುವುದಿಲ್ಲವೆಂದು ಮತ್ತು ಯಾರ ಬಗ್ಗೆಯೂ (ಅವರು ಎದುರಿಗಿದ್ದರೂ ಇಲ್ಲದಿದ್ದರೂ) ಒಳಿತಿನ ಹೊರತು ಬೇರೇನನ್ನೂ ಹೇಳುವುದಿಲ್ಲವೆಂದು ನಿರ್ಧರಿಸಿಕೊಳ್ಳಿರಿ. ದೇವಾಜೋಲ್ಲಂಘನೆಯಿಂದ ರಕ್ಷಿಸಿಕೊಳ್ಳುವುದರ ಆರಂಭವನ್ನು ನಾಲಿಗೆಯ ನಿಯಂತ್ರಣದೊಂದಿಗೆ ಮಾಡಿರಿ. ಇದು ಕೊಂಚ ಕ್ಲಿಷ್ಟಕರವಾಗಿದೆಯಾದರೂ ಇದನ್ನು ಪಾಲಿಸುವುದರಿಂದ ಎಲ್ಲ ಕಾರ್ಯಗಳೂ ಸಾಧಿತವಾಗುತ್ತವೆ. ಅದರೊಂದಿಗೆ ನಿಮ್ಮ ಒಳಿತುಗಳು ವ್ಯಯವಾಗಿ ಹೋಗುವುದರಿಂದ ತಡೆದು, ಅಪಾರ ಪ್ರಯೋಜನಗಳು ಒದಗಿ ಬರುತ್ತವೆ. ಪ್ರತಿನಿತ್ಯ ರಾತ್ರಿಯ ವೇಳೆ ಈ ಎರಡು ವಿಷಯಗಳ ಬಗ್ಗೆ ಆತ್ಮಾವಲೋಕನ ನಡೆಸಿರಿ. ಒಂದು ವೇಳೆ ಅದರಲ್ಲಿ ಕೊರತೆ ಕಂಡು ಬಂದಲ್ಲಿ ತಕ್ಷಣವೇ ಅಲ್ಲಾಹನಲ್ಲಿ ಕ್ಷಮೆ ಯಾಚಿಸಿರಿ.

ಒಳಿತಿನ ಬಗೆಗಿನ ವಿಶೇಷ ಗಮನ
ನಾಲ್ಕನೆಯದಾಗಿ, ಎಲ್ಲ ರೀತಿಯ ಒಳಿತುಗಳನ್ನೆಸಗುವ ಹಂಬಲ ಬೆಳೆಸುವುದಾಗಿದೆ. ಪ್ರತಿ ಕ್ಷಣವೂ ಎಲ್ಲ ರೀತಿಯ ಒಳಿತನ್ನು ಬಯಸುವುದು ಮತ್ತು ಅದರೆಡೆಗೆ ಸಾಗುವುದು ಸತ್ಯವಿಶ್ವಾಸಿಯ ಒಂದಂಗವಾಗಬೇಕು. ಆದರೆ ರಮಝಾನ್ ತಿಂಗಳಲ್ಲಿ ಈ ಬಗ್ಗೆ ವಿಶೇಷ ಗಮನ ಮತ್ತು ಪ್ರಯತ್ನ ನಡೆಯಬೇಕಾಗಿದೆ. ಏಕೆಂದರೆ ನೀವು ಈ ತಿಂಗಳಲ್ಲಿ ಯಾವುದೇ ಸತ್ಕಾರ್ಯ ಮಾಡಿದರೂ ಅದಕ್ಕೆ ಇತರ ತಿಂಗಳಲ್ಲಿ ಮಾಡುವ ಕಡ್ಡಾಯ ಕರ್ಮಕ್ಕೆ ಸಮಾನವೆಂದು ಪರಿಗಣಿಸಲಾಗುವುದು. [ವರದಿ: ಸಲ್ಮಾನ್ ಫಾರ್ಸಿ(ರ) – ಬೈಹಕಿ) ಇದಕ್ಕಿಂತ ಮಿಗಿಲಾದ ಸುವಾರ್ತೆ ಬೇರೇನಿದ್ದೀತು?

ಇಂತಹ ವಿಶೇಷ ಗಮನವು ಇತರ ಉಪಾಸನಾ ವಿಧಿಗಳಲ್ಲಿಯೂ ಇರಬೇಕು. ಉದಾ ಪ್ರತಿ ಕಡ್ಡಾಯ ಸಾಮೂಹಿಕ ನಮಾಝಿನಲ್ಲಿ ತಕ್ಬಿರ್ ತಹ್ರೀಮವನ್ನು ಪಾಲಿಸುವುದು, ಐಚ್ಛಿಕ ನಮಾಝ್ ಗೆ ಹೆಚ್ಚೆಚ್ಚು ಆದ್ಯತೆ ನೀಡುವುದು. ಈ ಗಮನವು ಮಾನವೀಯ ಸಂಬಂಧದ ಕುರಿತಾಗಿಯೂ ಇರಬೇಕು. ತನ್ನ ಸಹೋದರನನ್ನು ಮುಗುಳ್ನಗೆಯೊಂದಿಗೆ ಭೇಟಿಯಾಗುವುದೂ ಒಂದು ಸದಕಾ(ದಾನ) ಆಗಿದೆ. ಆತನಿಗೆ ತೊಂದರೆ ಕೊಡದಿರುವುದೂ ದಾನವಾಗಿದೆ. ಆತನ ಕೆಲಸ ಕಾರ್ಯಗಳಲ್ಲಿ ಸಣ್ಣ ಪುಟ್ಟ ಸಹಾಯ ಮಾಡುವುದೂ ದಾನವಾಗಿದೆ. ಫರ್ಝ್ ಮತ್ತು ನಫಿಲ್ ಎಂದ ಕೂಡಲೇ ಹೆಚ್ಚಿನವರು ಕೇವಲ ನಮಾಝ್ ನ ಬಗ್ಗೆಯೇ ಆಲೋಚಿಸುತ್ತಾರೆ. ಅದರೆ ಜೀವನದ ಪ್ರತಿ ರಂಗದಲ್ಲಿಯೂ ಫರ್ಝ್ ನಫಿಲ್ ಕಾರ್ಯಗಳು ಅನೇಕ ಇವೆ.

ದೇವನ ಓರ್ವ ದಾಸನು ಕಡ್ಡಾಯ ಕರ್ಮಗಳೊಂದಿಗೇ ಐಚ್ಛಿಕ ಕರ್ಮಗಳನ್ನು ಪಾಲಿಸುತ್ತಿದ್ದರೆ, ಅದು ಸ್ವ ಇಚ್ಛೆಯಿಂದ ಮಾಡುತ್ತಾನೆಂಬುದು ಸ್ಪಷ್ಟ. ಏಕೆಂದರೆ ಐಚ್ಛಿಕ ಕರ್ಮಗಳನ್ನಸಗದಿದ್ದರೆ ಆತನ ಮೇಲೆ ಯಾವುದೇ ದೋಷವಿರುವುದಿಲ್ಲವಷ್ಟೇ ಹೀಗೆ ಆತನು ಪ್ರಭುವಿನ ಸಂಪ್ರೀತಿ ಬಯಸುತ್ತಾ, ಇಚ್ಛೆಯಿಂದ ಸತ್ಕರ್ಮವೆಸಗುತ್ತಾನೆಂದಾದರೆ ಮತ್ತು ಅದಕ್ಕಿರುವ ಯಾವ ಅವಕಾಶವನ್ನೂ ತಪ್ಪಿ ಹೋಗಲು ಇಚ್ಚಿಸುವುದಿಲ್ಲವೆಂದಾದರೆ, ಆತನ ಪಾಲಿಗೆ ಹದೀಸ್ ಕುದ್ದ್ಸಿ ಸಾಕಾರಗೊಳ್ಳುತ್ತದೆ ಅಲ್ಲಾಹನು ಹೇಳುತ್ತಾನೆ “ನಾನು ಅವನನ್ನು ಪ್ರೀತಿಸ ತೊಡಗುತ್ತೇನೆ, ಅವನು ಆಲಿಸುವ ಕಿವಿಯಾಗುತ್ತಾನೆ, ಅವನು ನೋಡುವ ಕಣ್ಣಾಗುತ್ತಾನೆ ಅವನು ನಡೆಯುವ ಕಾಲಾಗುತ್ತಾನೆ. (ವರದಿ: ಅಬೂಹುರೈರಾ(ರ) ಬುಖಾರಿ]

ಈ ಸಂಬಂಧವಾಗಿ ನೀವು ಯಾವುದಾದರೂ ಮೂರು ಒಳಿತುಗಳನ್ನು ಆರಿಸಿಕೊಳ್ಳಿರಿ. ಅವುಗಳನ್ನು ರಮಝಾನ್ ತಿಂಗಳಲ್ಲಿ ಪಾಲಿಸಲು ಪ್ರಯತ್ನಿಸಿರಿ. ಉದಾಹರಣೆಗೆ: ಪ್ರತಿ ಕಡ್ಡಾಯ ನಮಾಝನ್ನು ತಪ್ಪದೆ ಸಾಮೂಹಿಕವಾಗಿ ನಿರ್ವಹಿಸುವುದು, ಯಾವೊಬ್ಬನಿಗೂ ನಿಮ್ಮಿಂದ ತೊಂದರೆಯಾಗದಂತೆ ನೋಡಿಕೊಳ್ಳುವುದು, ಪ್ರತಿಯೋರ್ವನನ್ನೂ ಮುಗುಳ್ನ ಗೆಯೊಂದಿಗೆ ಭೇಟಿಯಾಗುವುದು ಇತ್ಯಾದಿ.

ಕಿಯಾಮುಲೈಲ್ (ರಾತ್ರಿಯ ನಮಾಝ್)
ಐದನೆಯದಾಗಿ, ರಾತ್ರಿಯ ನಮಾಝನ್ನು ಪಾಲಿಸುವುದಾಗಿದೆ. ರಾತ್ರಿಯ ನಮಾಝ್ (ತರಾವೀಹ್) ಮತ್ತು ಕುರ್‌ಆನ್ ಪಠಣ, ಆತ್ಮಾವಲೋಕನ ಮತ್ತು ಇಸ್ತಿಗ್‌ಫಾರ್- ಇವು ತಕ್ವಾವನ್ನು ಗಳಿಸಲಿಕ್ಕಿರುವ ಅತ್ಯುತ್ತಮ ಮತ್ತು ಅತ್ಯಗತ್ಯದ ಕ್ರಿಯೆಗಳಾಗಿವೆ. ಇವು ಮುತ್ತಕೀಗಳ (ಧರ್ಮನಿಷ್ಕರ) ಗುಣವಿಶೇಷವಾಗಿದೆ. ಇಂತಹವರ ಬಗ್ಗೆ ಅಲ್ಲಾಹನು ಹೇಳುತ್ತಾನೆ,
”ಅವರು ರಾತ್ರಿ ಸ್ವಲ್ಪವೇ ನಿದ್ರಿಸುತ್ತಿದ್ದರು ಮತ್ತು ಅವರು ರಾತ್ರಿಯ ಕೊನೆಯ ಜಾವಗಳಲ್ಲಿ ಕ್ಷಮಾಯಾಚನೆ ಮಾಡುತ್ತಿದ್ದರು.” ತರಾವೀಹ್ ನಮಾಝ್, ರಮಝಾನ್ ತಿಂಗಳ ಮಟ್ಟಿಗೆ ಕಿಯಾಮುಲೈಲ್ ಆಗಿದೆ. ನೀವು ಮೊದಲ ರಾತ್ರಿಯೇ ನಮಾಝ್ ನಲ್ಲಿ ನಿಂತು ಕುರ್‌ಆನ್ ಪಠಣ ಆಲಿಸುತ್ತೀರಿ- ಅದು ಕಿಯಾಮುಲ್ಲೈ ಲ್ ನ ಇನ್ನೊಂದು ಸಮಯ ರಾತ್ರಿಯ ಅಂತಿಮ ಜಾವವಾಗಿದೆ. ಇದು ಸಹ್ರಿಯ ಸಮಯವಾಗಿದೆ. ಈ ಸಮಯದಲ್ಲಿಯೇ ಇಸ್ಥಿ ಗ್‌ಫಾರ್ (ಕ್ಷಮಾಯಾಚನೆ) ಮಾಡುವ ಕುರಿತಾಗಿಯೇ ಕುರ್‌ಆನ್ ಹೇಳಿರುವುದು.

ರಮಝಾನ್‌ನಲ್ಲಿ ನೀವು ಕೊಂಚ ಪ್ರಯತ್ನಪಟ್ಟಲ್ಲಿ ಈ ಅಂತಿಮ ಜಾವದಲ್ಲಿ ಕಿಯಾಮುಲ್ಲೈಲ್‌ನ ಸಮೃದ್ಧಿಯನ್ನು ಗಳಿಸಬಲ್ಲಿರಿ, ಮತ್ತು ಕುರ್‌ಆನ್ ಬಯಸುವ ಧರ್ಮನಿಷ್ಠರ ಸಾಲಿನಲ್ಲಿ ನೀವೂ ಸೇರಬಲ್ಲಿರಿ. ಇದರ ವಿಧಾನ ಬಲು ಸುಲಭವಿದ, ಸಹ್ರಿಗಾಗಿ ನೀವು ಎದ್ದೇಳುತ್ತೀರಷ್ಟೇ. ಅಂದಾಜಿಗಿಂತ ಸುಮಾರು 20 ನಿಮಿಷ ಬೇಗ ಎದ್ದು, ವುಝ ಮಾಡಿ ಎರಡು ರಕಾತ್ ನಮಾಝ್ ನಿರ್ವಹಿಸಿದರೆ ಸಾಕಾಗುವುದು.

ಇದು ಅಲ್ಲಾಹನು ತನ್ನ ದಾಸರಿಗೆ ಅತ್ಯಂತ ನಿಕಟವಾಗುವಂತಹ ಸಮಯವಾಗಿದೆ. ಪ್ರವಾದಿವರ್ಯರು(ಸ) ಹೀಗೆ ಹೇಳಿರುವರು, “ಅಲ್ಲಾಹನು ಈ ಸಮಯದಲ್ಲಿ ಜಗತ್ತಿನ ಮಂದಿಗೆ ತೀರಾ ನಿಕಟನಾಗುತ್ತಾನೆ ಮತ್ತು ನನ್ನಿಂದ ಯಾಚಿಸುವವರು ಯಾರಿದ್ದಾರೆ? ನಾನು ಅವರಿಗೆ ನೀಡುವೆನು. ನನ್ನಿಂದ ತನ್ನ ಪಾಪಗಳಿಗೆ ಕ್ಷಮೆ ಕೇಳುವವರು ಯಾರಿದ್ದಾರೆ? ನಾನವರಿಗೆ ಕ್ಷಮೆ ನೀಡುವೆನು ಎಂದು ಹೇಳುತ್ತಾನೆ.” (ವರದಿ: ಅಬೂಹುರೈರಾ(ರ) – ಬುಖಾರಿ, ಮುಸ್ಲಿಮ್

ಇನ್ನೊಂದು ವರದಿಯಲ್ಲಿ ಹೃದಯಗಳನ್ನು ಕುಲುಕಿ ಬಿಡುವಂತಹ ಮಾತುಗಳಿವೆ “ರಾತ್ರಿಯ ಈ ಸಮಯದಲ್ಲಿ ಅಲ್ಲಾಹನು ತನ್ನ ಬಾಹುಗಳನ್ನು ಚಾಚುತ್ತಾನೆ ಮತ್ತು ‘ಫಕೀರನೂ ಅಲ್ಲದ, ಅಕ್ರಮಿಯೂ ಅಲ್ಲದ ಈ ಅಸ್ತಿತ್ವಕ್ಕೆ ಸಾಲ ನೀಡುವವರು ಯಾರಿದ್ದಾರೆ?’ ಹೀಗೆ ಬೆಳಗ್ಗಿನ ತನಕವೂ ಅಲ್ಲಾಹನು ಹೇಳುತ್ತಿರುತ್ತಾನೆ.”(ವರದಿ: ಅಬೂಹುರೈರಾ(ರ) – ಮುಸ್ಲಿಮ್] ಹೀಗೆ ಅಲ್ಲಾಹನು ತನ್ನ ಬಾಹುಗಳನ್ನು ಹರಡಿಕೊಂಡಿದ್ದ ಸಮಯದಲ್ಲಿಯೇ ನೀವು ಸಹ್ರಿ ಉಣ್ಣಲು ಎದ್ದೇಳುತ್ತೀರಿ. ಇಂತಹ ಸಂದರ್ಭದಲ್ಲಿ ಕೆಲವು ನಿಮಿಷಗಳನ್ನು ಹೆಚ್ಚು ವ್ಯಯಿಸಿ ನಿಮ್ಮ ಪಾಪಗಳಿಗೆ ಕ್ಷಮೆ ಯಾಚಿಸುವ ಮತ್ತು ಬಯಸಿದುದನ್ನು ಬೇಡುವ ಹಾಗೂ ಅದನ್ನು ಗಳಿಸುವಂತಹ ಸುಲಭ ಸೌಭಾಗ್ಯದ ಮಾರ್ಗ ಬೇರೇನಿದ್ದೀತು?

ಒಂದು ವೇಳೆ, ಎರಡು ರಕಾತ್ ನಮಾಝ್ ನಿರ್ವಹಿಸಲು ಕಷ್ಟವೆನಿಸಿದರೆ, ಕನಿಷ್ಟ ದೇವ ಸನ್ನಿಧಿಯಲ್ಲಿ ಸಾಷ್ಟಾಂಗವೆರಗಿ ಕ್ಷಮಾ ಯಾಚನೆಯನ್ನಾದರೂ ಮಾಡಬಹುದಲ್ಲವೇ ಹೀಗೆಯೇ ಕೆಲವು ಕ್ಷಣಗಳ ಮಟ್ಟಿಗಾದರೂ ನಿಮ್ಮ ಪಾಪಗಳಿಗೆ ಕ್ಷಮೆ ಯಾಚಿಸಿರಿ, ಒಳಿತಿನ ಆಗ್ರಹ ವ್ಯಕ್ತಪಡಿಸಿರಿ ಮತ್ತು ಸತ್ಯ ಮಾರ್ಗದಲ್ಲಿ ದೃಢತೆಗಾಗಿ ಪ್ರಾರ್ಥಿಸಿರಿ, ಇದು ಕೆಲವು ಕ್ಷಣಗಳ ಮಾತು. ಆದರೆ ಒಮ್ಮೆ ನೀವು ರಾತ್ರಿಯ ಈ ಆಲಾಪನೆಯ ಸವಿಯನ್ನನುಭವಿಸಿದರೆ ಮುಂದಕ್ಕೆ ನೀವು ಹೆಚ್ಚೆಚ್ಚು ಸಮಯವನ್ನು ವ್ಯಯಿಸಲು ಬಯಸುವಿರಿ, ರಮಝಾನಿನ ಬಳಿಕವೂ ಅದಕ್ಕಾಗಿ ಸಮಯ ಮೀಸಲಿಡ ಬಲ್ಲಿರಿ.

ದಿಕೃ್- ದುಆ (ದೇವ ಸ್ಮರಣೆ- ಪ್ರಾರ್ಥನೆ)
ಆರನೆಯನಾಗಿ, ದೇವ ಸ್ಮರಣೆ ಮತ್ತು ಪ್ರಾರ್ಥನೆಯನ್ನು ಹೆಚ್ಚಿಸುವುದಾಗಿದೆ. ದಿಕ್ರ್ ದುಆಗಳನ್ನು ಮಾಡುತ್ತಿರುವುದು ಇಡೀ ಜೀವಮಾನದ ಅಗತ್ಯವಾಗಿದೆ. ದಿಕ್ರ್ ಅಂದರೇನು? ಅಲ್ಲಾಹನಿಗೆ ಇಷ್ಟವಾಗುವಂತಹ ಎಲ್ಲ ಕಾರ್ಯವೂ ದಿಕ್ರ್ ಆಗಿದೆ. ಅದು ಹೃದಯದಿಂದಾಗಿರಲಿ, ನಾಲಿಗೆ ಅಥವಾ ದೈಹಿಕ ಶ್ರಮವೇ ಆಗಿರಲಿ, ಈ ಅರ್ಥದಲ್ಲಿ ಉಪವಾಸ ವ್ರತಾಚರಣೆಯೂ ದಿಕ್ರ್ ಆಗಿದೆ. ಹಸಿವು ಬಾಯಾರಿಕೆಗಳೂ ದಿಕ್ರ್ ಆಗಿವೆ, ಕುರ್‌ಆನ್ ಪಠಣ, ಅದರಲ್ಲೂ ನಮಾಝ್ ನಲ್ಲಿ ಪಠಣವಂತೂ ಅತಿ ದೊಡ್ಡ ದಿಕ್ರ್ ಆಗಿದೆ. ಆದರೆ ರಮಝನಿನಲ್ಲಿ ನಾಲಗೆಯ ದಿಕ್ರ್ ಅಂದರೆ ದೇವನಾಮ ಸ್ಮರಣೆ ಮತ್ತು ದುಆಗಳನ್ನು ಉಚ್ಚರಿಸುವುದು ಪ್ರಮುಖ ಅಗತ್ಯವಾಗಿದೆ. ಇದು ಐಚ್ಛಿಕವಾಗಿದ್ದರೂ ಪಣ್ಯಫಲವು ಕಡ್ಡಾಯ ಕರ್ಮದಷ್ಟಿರುತ್ತದೆ. ಇದರಿಂದ ಅಲಕ್ಷ್ಯವು ದೂರವಾಗುತ್ತದೆ ಮತ್ತು ರಮಝಾನಿನ ಒಳಿತು ಹಾಗೂ ಸಮೃದ್ಧಿ ಗಳಿಸುವತ್ತ ಗಮನವು ದೃಢವಾಗುತ್ತದೆ.

ರಮಝಾನಿನಲ್ಲಿ, ಸುಬಹಾನಾಹ್, ಅಲ್ ಹಮ್ಹುಲಿಲ್ಲಾಹ್ ಲಾ ಇಲಾಹ ಇಲ್ಲಲ್ಲಾಹ್, ಅಲ್ಲಾಹು ಅಕ್ಚರ್, ಸುಬ್ ಹಾನಲ್ಲಾಹಿಲ್ ಅಝೀಮ್, ಲಾ ಹೌಲ ವಲಾಕುವ್ವತ ಇಲ್ಲಾ ಬಿಲ್ಲಾಹ್, ಅಸ್ತಗ್ ಫಿರುಲ್ಲಾಹ ವಅತೂಬು ಇಲೈಹಿ ಇತ್ಯಾದಿ ದಿಕ್ರ್ ಗಳನ್ನು ಸ್ಮರಿಸುತ್ತಲಿರಿ, ಈ ಮೂಲಕ ನಿಮ್ಮ ನಾಲಿಗೆಯು ಅಲ್ಲಾಹನ ಸ್ಮರಣೆಯಲ್ಲಿ ಆದ್ರವಾಗಿರಲಿ.

ದಿಕ್ರ್ ನ ಇನ್ನೊಂದು ರೂಪ ದುಆ (ಪ್ರಾರ್ಥನೆ) ಆಗಿದೆ. ಎಲ್ಲವೂ ಅಲ್ಲಾಹನಿಂದ ದೊರಯುತ್ತವೆ ಮತ್ತು ಸಕಲ ಸಾಮಥ್ಯ ಗಳೂ ಅಲ್ಲಾಹನಿಗೇ ಇವೆ ಎಂಬ ವಿಶ್ವಾಸವೇ ಪ್ರಾರ್ಥನೆಯ ಮೂಲವಾಗಿದೆ. ದುಆ, ಅಂದರೆ ನಾವು ದೇವನ ಆಶ್ರಿತರು ಎಂಬುದರ ಸಂಕೇತವಾಗಿದೆ, ನಾವು ನಮ್ಮನ್ನು ಕೇವಲ ಅಲ್ಲಾಹನ ಆಶ್ರಿತರೆಂದು ಭಾವಿಸಬೇಕು. ಇದುವೇ ದೇವದಾಸ್ಯದ ಆತ್ಮವಾಗಿದೆ. ಏಕೆಂದರೆ ರಮಝಾನ್ ತಿಂಗಳ ಪ್ರತಿಕ್ಷಣವೂ ಉನ್ನತ ಸಮೃದ್ಧಿಯ ಕ್ಷಣವಾಗಿದೆ, ಆದ್ದರಿಂದ ನಿತ್ಯ ನಿರಂತರ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿರಬೇಕಾಗಿದೆ, ರಮಝಾನಿನಲ್ಲಿ ಸಾಮಾನ್ಯ ಸ್ಥಿತಿಗೆ ಭಿನ್ನವಾಗಿ ಪ್ರಾರ್ಥನೆ ಸ್ವೀಕಾರಕ್ಕೆ ವಿಶೇಷ ಸಂದರ್ಭಗಳೂ ಇರುತ್ತದೆ, ಅವುಗಳ ಪೈಕಿ ಒಂದು ಇಫ್ತಾರ್ ನ (ಪಾರಣೆ) ಸಮಯ, ಆ ಸಂದರ್ಭದಲ್ಲಿ ಅಲ್ಲಾಹನ ದಯೆಯು ಅತ್ಯಧಿಕವಿರುತ್ತದೆ.

ಈ ನಿಟ್ಟಿನಲ್ಲಿ, ರಮಝಾನ್ ತಿಂಗಳ ಮೊದಲ ಹತ್ತು ದಿನಗಳಲ್ಲಿ, ದಯೆ ಕರುಣೆಯನ್ನು ಯಾಚಿಸುತ್ತಲಿರಿ, ಎರಡನೆಯ ಹತ್ತು ದಿನಗಳಲ್ಲಿ, ಕ್ಷಮೆಯ ಪ್ರಾರ್ಥನೆ ಮತ್ತು ಅಂತಿಮ ಹತ್ತು ದಿನಗಳಲ್ಲಿ, ನರಕಾಗ್ನಿಯಿಂದ ಮುಕ್ತಿಗಾಗಿ ಪ್ರಾರ್ಥನೆ ನಡೆಸುತ್ತಲಿರಿ. ಪ್ರವಾದಿವರ್ಯರು(ಸ) ಈ ದಿನಗಳ ವಿಶೇಷತೆಯಲ್ಲಿ ಪ್ರಸ್ತುತ ವಿಷಯಗಳನ್ನು ತಿಳಿಸಿರುವರು. ಹೀಗೆ ಕೆಲವು ಕಂಠಪಾಠ ಮಾಡಿ ಅವುಗಳಿಗೆ ಒಂದು ಕ್ರಮವನ್ನು ನಿಶ್ಚಯಿಸಿಕೊಳ್ಳಿರಿ. ಆ ಪ್ರಕಾರ ಅದನ್ನು ಕಟ್ಟು ನಿಟ್ಟಾಗಿ ಪಾಲಿಸಿರಿ. ವಿವಿಧ ಸಂದರ್ಭ, ಸ್ಥಿತಿಗಳ ವೇಳೆ ಪಠಿಸುವ ದುವಾಗಳನ್ನು ಸ್ಮರಿಸಿ ಪ್ರಾರ್ಥಿಸುತ್ತಲಿರುವುದೂ ಉತ್ತಮವಾಗಿದೆ.

ಕದ್ರ್ ನ ರಾತ್ರಿ ಮತ್ತು ತಪಶ್ಚರ್ಯೆ
ಏಳನೆಯದಾಗಿ, ಲೈಲತುಲ್ ಕದ್ರನ್ನು ಗೌರವಿಸುವುದಾಗಿದೆ. ಈ ಸಮೃದ್ಧ ರಾತ್ರಿಯಲ್ಲಿಯೇ ಪವಿತ್ರ ಕುರ್‌ಆನಿನ ಅವತೀರ್ಣ ಆರಂಭವಾಗಿತ್ತು. ಈ ರಾತ್ರಿಯು ತನ್ನ ಶ್ರೇಷ್ಠತೆ ಮತ್ತು ಮೌಲ್ಯದ ದೃಷ್ಟಿಯಲ್ಲಿ, ತನ್ನ ದೌತ್ಯದ ದೃಷ್ಟಿಯಲ್ಲಿ, ಅಂದು ಹಂಚಲಾಗುವ ಅಪಾರ ಸಮೃದ್ಧಿಯ ದೃಷ್ಟಿಯಲ್ಲಿ ಅದು ಸಾವಿರಾರು ವರ್ಷಗಳಿಗಿಂತ ಮಿಗಿಲಾಗಿದೆ. ಈ ರಾತ್ರಿ ನಿದ್ದೆಗೆಟ್ಟು ನಿಂತು ನಮಾಝ್ ನಿರ್ವಹಿಸಿದವನ (ಜಾಗರಣೆ ಮಾಡಿದವನ) ಸಕಲ ಪಾಪಗಳು ಕ್ಷಮಿಸಲ್ಪಡುವುದೆಂದು ಸುವಾರ್ತೆ ನೀಡಲಾಗಿದೆ.

“ಎಲ್ಲ ರಾತ್ರಿಗಳಂತೆಯೇ ಈ ರಾತ್ರಿಯಲ್ಲಿಯೂ ಪ್ರಾರ್ಥನೆ ಸ್ವೀಕರಿಸಲ್ಪಡುವ ವಿಶೇಷ ಸಂದರ್ಭವಿದೆ. ಆ ವೇಳೆಯಲ್ಲಿ ಇಹ-ಪರಗಳ ಒಳಿತಿಗಾಗಿ ಬೇಡಿದ್ದೆಲ್ಲವೂ ದೊರೆಯುತ್ತದೆ.” [ವರದಿ: ಚಾಬಿರ್(ರ) – ಮುಸ್ಲಿಮ್

*”ನೀವು ಈ ರಾತ್ರಿಯ ಒಳಿತುಗಳಿಂದ ವಂಚಿತವಾದಿರಾದರೆ ಅದಕ್ಕಿಂತ ಮಿಗಿಲಾದ ದುರದೃಷ್ಟ ಬೇರೆ ಇರಲಾರದು.”* (ವರದಿ: ಅನಸ್ ಬಿನ್ ಮಾಲಿಕ್(ರ) – ಇನ್ನು ಮಾಜ)
ಇದು ಯಾವ ರಾತ್ರಿ ಮತ್ತು ಯಾವಾಗ ಆಗತವಾಗುತ್ತದೆ ಎಂಬುದನ್ನು ನಮಗೆ ಸ್ಪಷ್ಟ ಪಡಿಸಲಾಗಿಲ್ಲ. ಹದೀಸ್‌ಗಳಿಂದ ತಿಳಿದು ಬರುವಂತೆ ಇದು ರಮಝಾನಿನ ಕೊನೆಯ ಹತ್ತರ ಬೇಸಂಖ್ಯೆಯ ರಾತ್ರಿಗಳಲ್ಲಿ ಒಂದಾಗಿದೆ. ಅಂದರೆ 21, 23, 25, 27 ಅಥವಾ 29ನೆಯ ರಾತ್ರಿ, ಇನ್ನು ಕೆಲವು ಹದೀಸ್‌ಗಳಲ್ಲಿ ಕೊನೆಯ ಹತ್ತರ ಯಾವುದಾದರೂ ರಾತ್ರಿ ಅಥವಾ ರಮಝಾನ್ ತಿಂಗಳ ಯಾವುದಾದರೊಂದು ರಾತ್ರಿಯಾಗಿದೆಯೆಂದೂ ಹೇಳಲಾಗಿದೆ.

ಸಾಮಾನ್ಯವಾಗಿ 27ನೆಯ ರಾತ್ರಿಯನ್ನೇ ಲೈಲತುಲ್ ಕದ್ರ್ ಎಂದು ಭಾವಿಸಲಾಗುತ್ತಿದೆ ಮತ್ತು ಆ ರಾತ್ರಿಯಲ್ಲಿ ಜಾಗರಣೆ, ನಮಾಝ್ ಗಳ ವ್ಯವಸ್ಥೆ ಮಾಡಿದರೆ ಸಾಕೆಂದು ನಂಬಲಾಗುತ್ತಿದೆ. ಕೆಲವು ಸಹಾಬಿಗಳು ಮತ್ತು ಸುಧಾರಕರ ಮಾತುಗಳಿಂದ 27ನೆಯ ರಾತ್ರಿಗೆ ಹೆಚ್ಚು ಮನ್ನಣೆ ದೊರೆಯುತ್ತದೇನೋ ನಿಜ. ಆದರೆ ಆ ರಾತ್ರಿಯನ್ನು ಅಸ್ಪಷ್ಟವಾಗಿರಿಸಿದುದರಲ್ಲಿ ಅಪಾರ ಯುಕ್ತಿಯು ಅಡಗಿದೆಯೆಂಬುದೇ ಹೆಚ್ಚು ಸೂಕ್ತವೆನಿಸುತ್ತದೆ. ಒಂದು ವೇಳೆ ಅದು ಇಂತಹುದೇ ರಾತ್ರಿಯಾಗಿದೆಯೆಂದು ಜನರು ತಿಳಿದುಕೊಂಡರೆ, ಆ ಯುಕ್ತಿಯ ಪ್ರಾಮುಖ್ಯತೆಯೇ ಹೊರಟು ಹೋಗುತ್ತದೆ.

ಅದನ್ನು ರಹಸ್ಯವಾಗಿಡುವುದರ ಉದ್ದೇಶವೇ ನೀವು ಅದರ ಹುಡುಕಾಟ ಮತ್ತು ಆಗ್ರಹದಲ್ಲಿ ಮುತುವರ್ಜಿ ವಹಿಸಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸಬೇಕೆಂಬುದಾಗಿದೆ. ಹಾಗಾಗಿ ರಮಝಾನಿನ ಕೊನೆಯ ಹತ್ತರ ಬೆಸ ಸಂಖ್ಯೆಯ ರಾತ್ರಿಗಳಲ್ಲಿ ವಿಶೇಷವಾಗಿ ಈ ಪ್ರಯತ್ನ ಮಾಡಿರಿ, ಸಾಧ್ಯವಿದ್ದರೆ ಆ ಇಡೀ ಹತ್ತು ದಿನಗಳ ಪ್ರತಿ ರಾತ್ರಿಯೂ ಲೈಲತುಲ್ ಕದ್ರ್ ನ ಹುಡುಕಾಟ ಮಾಡಿರಿ. ಇನ್ನೂ ಸಾಧ್ಯವಿದ್ದರೆ ರಮಝಾನ ಎಲ್ಲ ರಾತ್ರಿಗಳಲ್ಲೂ ಆ ಪ್ರಯತ್ನ ಮಾಡಿರಿ, ನೆನಪಿಡಿ, ದಾಸನು ತನ್ನ ಪ್ರಭುವಿನ ಸಂಪ್ರೀತಿಗಾಗಿ ಪ್ರತಿನಿತ್ಯ ಕಟಿಬದ್ಧನಾಗಿರುವುದು ಅಲ್ಲಾಹನಿಗೆ ಹೆಚ್ಚು ಪ್ರಿಯವಾದ ಕರ್ಮವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಅಲ್ಲಾಹನಿಗೆ ಇಷ್ಟವಾಗುವುದು ಅದರ ಸಂಕಲ್ಪವಾಗಿದೆ. ಒಂದು ವೇಳೆ ರಾತ್ರಿ ಯಾವುದೆಂದು ಜನರಿಗೆ ಸ್ಪಷ್ಟವಾಗಿ ತಿಳಿದುಬಿಟ್ಟರೆ ಆ ಹುಡುಕಾಟ, ಆಗ್ರಹಗಳು ಇಲ್ಲವಾಗಿ ಬಿಡುತ್ತವೆ.

ಆ ರಾತ್ರಿಯ ಜಾಗರಣೆಯಿಂದ, ಇತರ ಯಾವುದೇ ರಾತ್ರಿಯ ಜಾಗರಣೆಯಿಂದ ದೊರೆಯುವ ಒಳಿತು ಸಮೃದ್ಧಿಗಳು ದೊರೆಯುವುದಂತೂ ಖಂಡಿತವೇ ಆದರೆ ಆ ಒಳಿತು ಸಮೃದ್ಧಿಗಳು ಸಾಮಾನ್ಯ ರಾತ್ರಿಗಳಲ್ಲಿ ದೊರೆಯುವದಕ್ಕಿಂತ ಎಷ್ಟೋ ಪಾಲು ಅಧಿಕವಿರುತ್ತವೆ ಇನ್ನೊಂದೆಡೆ, ನಾವು ಊಹಿಸಿರದಂತಹ ರೀತಿಯಲ್ಲಿ ಹಲವು ಅನುಗ್ರಹಗಳ ಬಾಗಿಲುಗಳು ತೆರೆಯಲ್ಪಡುತ್ತವೆ. ಅಲ್ಲಾಹನು ಇತರ ಯಾವುದೇ ಜನಾಂಗಕ್ಕೆ ಸಾವಿರಾರು ವರ್ಷಗಳಲ್ಲಿ ನೀಡುತ್ತಿದ್ದಂತಹ ಅನುಗ್ರಹಗಳ ಭಂಡಾರವನ್ನು ಮುಸ್ಲಿಮ್ ಜನಾಂಗಕ್ಕೆ ಕೇವಲ ರಮಝಾನ್ ತಿಂಗಳಲ್ಲಿ ದಯಪಾಲಿಸುತ್ತಾನೆಂಬುದೇ ಇಲ್ಲಿರುವ ವಿಶೇಷ. ಪ್ರವಾದಿ ವಚನಗಳಿಂದ ತಿಳಿದು ಬರುವಂತೆ, ಮುಸ್ಲಿಮ್ ಜನಾಂಗ ಅಸರ್‌ನಿಂದ ಮಗ್ರಿಬ್‌ ವರೆಗೆ ಪರಿಶ್ರಮ ಪಟ್ಟರೆ, ಯಹೂದಿಗಳು ಫಜರ್ ನಿಂದ ಝುಹರ್ ತನಕವೂ ಕ್ರೈಸ್ತರು ಝುಹರ್ ನಿಂದ ಆಸರ ತನಕವೂ ಪರಿಶ್ರಮ ಪಟ್ಟು ಪಡೆಯುತ್ತಿದ್ದಂತಹ ಪುಣ್ಯ ಫಲಗಳಿಗಿಂತ ಅಧಿಕ ಪಟ್ಟು ಪಡೆಯುತ್ತಾರೆ. [ಇನ್ನು ಉಮರ್ (ರ) – ಬುಖಾರಿ] ಲೈಲತುಲ್ ಕದ್ರ್ ನಮ್ಮ ಪ್ರಭುವಿನ ಈ ವಿಶೇಷ ಅನುಗ್ರಹದ ಅತಿದೊಡ್ಡ ಉದಾಹರಣೆಯಾಗಿದೆ.

ಹಾಗಾಗಿ ನೀವು ಈ ನಿಟ್ಟಿನಲ್ಲಿ ಟೊಂಕ ಕಟ್ಟಿಕೊಳ್ಳಿರಿ ಕನಿಷ್ಠ ಕೊನೆಯ ಹತ್ತರ ಬೆಸ ಸಂಖ್ಯೆಯ ರಾತ್ರಿಗಳಲ್ಲಿ ದೇವನ ಸನ್ನಿಧಿಯಲ್ಲಿ ನಿಂತು ನಮಾಝ್, ಕುರ್‌ಆನ್ ಪಠಣ, ದಿಕ್ರ್ ಸ್ವಲಾತ್, ದುಅ, ಕ್ಷಮಾ ಯಾಚನೆಗಳಲ್ಲಿ ತಲ್ಲೀನರಾಗಿದ್ದು ಬಿಡಿ, ಇಡೀ ರಾತ್ರಿ ಜಾಗರಣೆ ಮಾಡಲು ಸಾಧ್ಯವಿಲ್ಲದಿದ್ದರೆ, ಸಹ್ರಿಗಿಂತ ಮುಂಚೆ ಒಂದೆರಡು ಗಂಟೆಯಾದರೂ ದೇವಾರಾಧನೆಯಲ್ಲಿ ತೊಡಗಿಕೊಳ್ಳಿರಿ, ಕೈ ಕಟ್ಟಿ ನಿಲ್ಲಿರಿ, ಸಾಷ್ಟಾಂಗವೆರಗಿರಿ, ಅತ್ತೂ ಕೂಗಿ ನಿಮ್ಮ ಪಾಪಗಳಿಗೆ ಕ್ಷಮಾ ಯಾಚನೆ ಮಾಡಿರಿ.

ಪ್ರಾರ್ಥನೆ ಸ್ವೀಕಾರದ ವಿಶೇಷ ಸಂದರ್ಭವು ಎಲ್ಲ ರಾತ್ರಿಗಳಲ್ಲೂ ಬರುತ್ತದೆ. ಆದರೆ ಲೈಲತುಲ್ ಕದ್ರ್ ನಲ್ಲಿ ಆ ಸಂದರ್ಭಕ್ಕೆ ವಿಶೇಷತೆಯಿದೆ. ಅದರ ಘನತೆ, ಪ್ರಭಾವವೂ ಅಷ್ಟೇ ಉನ್ನತವಾಗಿರುತ್ತದೆ. ಆ ಒಂದು ಕ್ಷಣ ಅಥವಾ ಸಂದರ್ಭವು ಯಾವುದಾಗಿರಬಹುದು ಎಂಬುದು ಯಾರಿಗೂ ತಿಳಿದಿಲ್ಲ. ಆದ್ದರಿಂದಲೇ ಪ್ರವಾದಿವರ್ಯರು(ಸ) ತಮ್ಮ ಪತ್ನಿ ಹ. ಆಯಿಶಾರಿಗೆ(ರ) ಒಂದು ಸಂಕ್ಷಿಪ್ತವಾದ ಸಮಗ್ರ, ದುಆವನ್ನು ಕಲಿಸಿಕೊಟ್ಟು, ನಿರಂತರ ಪಠಿಸಲು ಉಪದೇಶಿಸಿದ್ದರು. ನೀವೂ ಆ ಪ್ರಾರ್ಥನೆಯನ್ನು ಮಾಡುತ್ತಲಿರಿ.
”ಅಲ್ಲಾಹುಮ್ಮ ಇನ್ನಕ ಅಪುವ್ವುನ್ ತುಹಿಬ್ಬುಲ್ ಅಪ್ಪ ಫಅ್ ಪ್ಪು ಅನ್ನಿ (ಓ ನನ್ನ ಪ್ರಭೂ! ನೀನು ಅತ್ಯಧಿಕ ಕ್ಷಮಿಸುವವನಾಗಿರುತ್ತಿ, ಕ್ಷಮಿಸುವುದು ನಿನಗೆ ಇಷ್ಟವಾಗಿದೆ. ಹಾಗಾಗಿ ನನ್ನನ್ನು ಕ್ಷಮಿಸಿ ಬಿಡು.)

ನಿಮ್ಮಲ್ಲಿ ಆತ್ಮಸ್ಟೈರ್ಯ ಮತ್ತು ಆಸಕ್ತಿ ಇದ್ದರೆ, ಕೊನೆಯ ಹತ್ತು ದಿನಗಳಲ್ಲಿ ಇಅ್ ತಿಕಾಫ್ ಗೆ ಕುಳಿತುಕೊಳ್ಳಿರಿ. ಹತ್ತು ದಿನ ಸಾಧ್ಯವಿಲ್ಲದಿದ್ದರೆ, ಸ್ವಲ್ಪ ಹೊತ್ತಿಗಾದರೂ ಇಅ್ ತಿಕಾಫ್ ಮಾಡಿರಿ, ಇಅ್ ತಿಕಾಫ್ ಒಂದು ರೀತಿಯಲ್ಲಿ ಹೃದಯ-ಆತ್ಮ, ಚಾರಿತ್ರ್ಯ ಚಿಂತನೆ ಮತ್ತು ಕರ್ಮಗಳನ್ನು ಕೇವಲ ದೇವನಿಗೆ ಅರ್ಪಿಸಲಿಕ್ಕಾಗಿ ತರಬೇತುಗೊಳಿಸುತ್ತದೆ. ಈ ಪ್ರಕಾರ, ಅದು ಲೈಲತುಲ್ ಕದ್ರ್ ನ ನಿರೀಕ್ಷೆಗೂ ಸಹಾಯಕವಾಗುತ್ತದೆ. ಅದೇ ವೇಳೆ, ಇಅ್ ತಿಕಾಫ್ ಪ್ರತಿಯೋರ್ವನಿಗೂ ಸಾಧ್ಯವಿಲ್ಲದ ಮಾತಾಗಿದೆ. ಆದರೆ ಅದನ್ನು ಫರ್ಝ್ ಕಿಫಾಯವನ್ನಾಗಿ ಮಾಡಿರುವುದರಲ್ಲಿಯೇ ಅದರ ಪ್ರಾಮುಖ್ಯತೆ ಅಡಗಿದೆ. ಪ್ರವಾದಿವರ್ಯರು(ಸ) ಪ್ರತಿ ರಮಝಾನಿನಲ್ಲಿಯೂ ಇಅ್ ತಿಕಾಫ್ ಮಾಡಿದ್ದಾರೆ. ಮಾತ್ರವಲ್ಲ, ಹಾಗೆ ಮಾಡಲು ಅನುಯಾಯಿಗಳಿಗೆ ತಾಕೀತು ಕೂಡ ಮಾಡಿದ್ದಾರೆ. ಹ. ಆಯಿಶಾ(ರ) ಹೇಳುತ್ತಾರೆ, “ಅಲ್ಲಾಹನ ಸಂದೇಶವಾಹಕರು(ಸ) ರಮಝಾನಿನ ಕೊನೆಯ ಹತ್ತರಲ್ಲಿ ಟೊಂಕ ಕಟ್ಟಿಕೊಳ್ಳುತ್ತಿದ್ದರು. ರಾತ್ರಿಗಳಲ್ಲಿ ಜಾಗರಣೆ ಮಾಡುತ್ತಿದ್ದರು. ತಮ್ಮ ಮನೆಯವರನ್ನೂ ಎಬ್ಬಿಸುತ್ತಿದ್ದರು ಮತ್ತು ಇತರ ದಿನಗಳಲ್ಲಿ ಮಾಡುವುದಕ್ಕಿಂತ ಹೆಚ್ಚೇ ಪರಿಶ್ರಮ ಪಡುತ್ತಿದ್ದರು.
[ಬುಖಾರಿ, ಮುಸ್ಲಿಮ್]

ನೀವು ಕೆಲವು ಸಮಯದ ಮಟ್ಟಿಗಾದರೂ ಎಲ್ಲ ಲೌಕಿಕ ಕಾರ್ಯ-ಕಲಾಪ, ಆಸಕ್ತಿಗಳನ್ನು ದೂರವಿರಿಸಿ ನಿಮ್ಮನ್ನು ಕೇವಲ ಅಲ್ಲಾಹನಿಗೆ ಸಮರ್ಪಿಸಿ ಬಿಡುವುದೇ ಇಅ್ ತಿಕಾಫ್‌ನ ಮೂಲ ಉದ್ದೇಶವಾಗಿದೆ. ಇದು ನಿಮ್ಮ ಮನೆ, ಪತ್ನಿ, ಸಂತಾನ ಎಲ್ಲವನ್ನೂ ದೂರವಿರಿಸಿ ಅಲ್ಲಾಹನ ಗ್ರಹದಲ್ಲಿ ಅವನ ಆರಾಧನೆಯಲ್ಲಿ ತಲ್ಲೀನರಾಗುವುದರಿಂದ ಸಾಧಿತವಾಗುತ್ತದೆ. ಇಅ್ ತಿಕಾಫ್‌ನ ಗಳಿಕೆಯೇ ಅಲ್ಲಾ ಹ್ ಮತ್ತವನ ದಾಸ್ಯವನ್ನು ಇತರೆಲ್ಲವುಗಳಿಗಿಂತ ಮಿಗಿಲಾಗಿ ಪರಿಗಣಿಸಲ್ಪಡುವುದಾಗಿದೆ.

ನಿಮ್ಮಲ್ಲಿ ಎಲ್ಲರಿಗೂ ಹತ್ತು ದಿನ ಇಅ್ ತಿಕಾಫ್ ಮಾಡಲು ಸಾಧ್ಯವಿಲ್ಲವಷ್ಟೇ. ಆದರೆ ಒಂದಂತೂ ನೀವು ಸುಲಭದಲ್ಲಿ ಮಾಡಬಲ್ಲಿರಿ. ನೀವು ನಿಮ್ಮಿಂದ ಸಾಧ್ಯವಿರುವಷ್ಟು ಹೊತ್ತು ಇಅ್ ತಿಕಾಫ್ ಮಾಡಿ ಆ ಕನಿಷ್ಟ ಅವಧಿಯಲ್ಲಿಯೂ ಅತ್ಯಧಿಕ ಪ್ರಣ್ಯಫಲ ಗಳಿಸಬಲ್ಲಿರಿ. ಅದರ ಒಂದು ವಿಧಾನ ಹೀಗಿದೆ ನೀವು ಮಸೀದಿಗೆ ಹೋಗುವಾಗ, ಆ ಮಸೀದಿಯಲ್ಲಿ ಇರುವಷ್ಟು ಹೊತ್ತು ಇಅ್ ತಿಕಾಪ್ ಮಾಡುವುದಾಗಿ ಸಂಕಲ್ಪ ತೊಡುವುದಾಗಿದೆ.

ದೇವ ಮಾರ್ಗದಲ್ಲಿ ಖರ್ಚು
ಎಂಟನೆಯದಾಗಿ ದೇವ ವರ್ಗದಲ್ಲಿ ದಾನ-ಧರ್ಮ ಮಾಡುವುದಾಗಿದೆ. ನಮಾಝ್ ನ ನಂತರ ಅತ್ಯಂತ ಪ್ರಾಮುಖ್ಯತೆ ಇರುವ ಕರ್ಮವು ದೇವ ಮಾರ್ಗದಲ್ಲಿ ದಾನ ಮಾಡುವುದಾಗಿದೆ.
ಅಲ್ಲಾಹನು ನಿಮಗೆ ದಯಪಾಲಿಸಿರುವುದನ್ನು ಖರ್ಚು ಮಾಡುವುದು, ಅದರಲ್ಲಿ ನಿಮ್ಮ ಸಮಯ ಮತ್ತು ದೈಹಿಕ ಶ್ರಮವು ಸೇರಿದೆ, ಆದರೆ ಎಲ್ಲಕ್ಕಿಂತ ಮಿಗಿಲಾದ ಖರ್ಚು ಸಂಪತ್ತಿನ ಖರ್ಚಾಗಿದೆ. ಏಕೆಂದರೆ ಧನವೆನ್ನುವುದು ಈ ಜಗತ್ತಿನಲ್ಲಿ ಅತ್ಯಧಿಕ ಪ್ರೀತಿಗೆ ಪಾತ್ರವಾದ ವಸ್ತುವಾಗಿದೆ. ಹಾಗೆಯೇ ಈ ಲೌಕಿಕ ವ್ಯಾಮೋಹವೇ ಎಲ್ಲ ಸಂಕಷ್ಟಗಳ ಮೂಲವಾಗಿದೆ.

ಪ್ರವಾದಿವರ್ಯರು(ಸ) ಸಕಲ ಮಾನವರಿಗಿಂತಲೂ ಹೆಚ್ಚು ದಾನಿಯಾಗಿದ್ದರು. ಆದರೆ ರಮಝಾನ್ ಆಗತವಾದಾಗ, ಜಿಬ್ರಿಲ್‌ರೊಂದಿಗೆ ಸಂಧಿಸುವ ಸಂದರ್ಭ ಬಂದಾಗ ಅವರ ದಾನಶೀಲತೆಯು ತೀವ್ರಗತಿಯನ್ನು ಪಡೆಯುತ್ತಿತ್ತು. ಅವರು ತಮ್ಮ ದಾನಶೀಲತೆಯಲ್ಲಿ ಮಳೆ ಸುರಿಸುವ ಬಿರುಗಾಳಿಯಂತಾಗಿ ಬಿಡುತ್ತಿದ್ದರು. (ಇಬ್ನು ಅಬ್ಬಾಸ್ (ರ) ಬುಖಾರಿ, ಮುಸ್ಲಿಮ್) ಕೈದಿಗಳನ್ನು ಬಿಡುಗಡೆಗೊಳಿಸುತ್ತಿದ್ದರು. ಬೇಡುವವರನ್ನು ಎಂದೂ ಬರಿಗೈಯಲ್ಲಿ ಮರಳಿಸುತ್ತಿರಲಿಲ್ಲ.

ದೇವ ಮಾರ್ಗದಲ್ಲಿ ವ್ಯಯಿಸುವ ಪ್ರತಿಯೊಂದು ಪೈಸೆ ಮತ್ತು ಧಾನ್ಯಕ್ಕೂ ಕನಿಷ್ಠ ಏಳು ನೂರು ಪಟ್ಟು ಪ್ರತಿಫಲವನ್ನು ನೀಡುವುದಾಗಿ ಅಲ್ಲಾಹನು ವಾಗ್ದಾನವಿತ್ತಿದ್ದಾನೆ, ಅಷ್ಟೇ ಅಲ್ಲ, ತಾನಿಚ್ಚಿಸಿದವನಿಗೆ ಅದಕ್ಕೂ ಅಧಿಕ ನೀಡುವುದಾಗಿಯೂ ಹೇಳಿದ್ದಾನೆ. ಈ ವಾಗ್ದಾನವು ಎಳ್ಳಷ್ಟೂ ಸಂಶಯಕ್ಕೆ ಎಡೆಯಿಲ್ಲದಂತೆ ಕುರ್‌ಆನಿನಲ್ಲಿ ನಮೂದಿಸಲ್ಪಟ್ಟಿದೆ ಹೂಡಿಕೆಗೆ ಇಂತಹ ಲಾಭಗಳ ವಾಗ್ದಾನ ನೀಡಬಲ್ಲ ವ್ಯಾಪಾರ ಬೇರೆ ಯಾವುದಿದ್ದೀತು? ಈ ಹೂಡಿಕೆಗೆ ರಮಝಾನಿನಂಥ ಸಮೃದ್ಧ ತಿಂಗಳಲ್ಲದೆ ಬೇರೆ ಯಾವ ಸಮಯ ಉತ್ತಮವೆನಿಸೀತು? ರಮಝಾನಿನಲ್ಲಾದರೂ ಕಡ್ಡಾಯ ಕರ್ಮವು ಎಪ್ಪತ್ತು ಪಟ್ಟುಗಳಾಗಿಯೂ ಐಚ್ಛಿಕ ಕರ್ಮವು ಕಡ್ಡಾಯದಷ್ಟಾಗಿಯೂ ಪರಿಗಣಿಸಲ್ಪಡುತ್ತದೆಯಷ್ಟೇ.

ದೇವ ಮಾರ್ಗದಲ್ಲಿ ವ್ಯಯಿಸುವುದು ಧರ್ಮನಿಷ್ಟರ ಗುಣವಿಶೇಷತೆಯಾಗಿದೆ, ಅದು ಧರ್ಮನಿಷ್ಠೆಯ ಮೂಲಭೂತ ಶರತ್ತಾಗಿದೆ ಮತ್ತು ಧರ್ಮನಿಷ್ಟೆ ಬೆಳೆಸಲಿಕ್ಕಾಗಿರುವ ಅತ್ಯಗತ್ಯವಾದ ಕರ್ಮವಾಗಿದೆ. ರಮಝಾನಿನಲ್ಲಿ ಈ ವ್ಯಯವು ಉಪವಾಸ ವ್ರತದೊಂದಿಗೆ ಸೇರಿ, ಧರ್ಮನಿಷ್ಠೆ ಬೆಳೆಸುವ ನಿಮ್ಮ ಪ್ರಯತ್ನವನ್ನು ಹಲವು ಪಟ್ಟು ಪರಿಣಾಮಕಾರಿಯನ್ನಾಗಿ ಮಾಡುತ್ತದೆ.

ಹಾಗಾಗಿ, ನೀವು ರಮಝಾನಿನಲ್ಲಿ ಮನಸ್ಸು ಮತ್ತು ಕೈಗಳನ್ನು ಬಿಚ್ಚಿ ಬಿಡಿರಿ ದೇವ ಧರ್ಮದ ಸಂಸ್ಥಾಪನೆ ಮತ್ತು ಪ್ರಚಾರಕ್ಕೆ ಸಂಬಂಧಿಕರು, ಅನಾಥರು ಮತ್ತು ನಿರ್ಗತಿಕರಿಗೆ ಎಷ್ಟು ಸಂಪತ್ತನ್ನು ಮೀಸಲಿಡಲು ನಿಮ್ಮಿಂದ ಸಾಧ್ಯವೋ ಅಷ್ಟನ್ನೂ ತೆಗೆದಿರಿ, ಹೊಟ್ಟೆಗೆ ಹಸಿವು-ದಾಹಗಳನ್ನು ನೀವು ಸಹಿಸುವಾಗ ಜೇಬಿಗೂ ಅಭಾವ-ಅಡಚಣೆಗಳನ್ನು ಸಹಿಸಿಕೊಳ್ಳಿರಿ ಆದರೆ ನೀಡುವುದೇನಿದ್ದರೂ ಕೇವಲ ದೇವನಿಗಾಗಿ ನೀಡಬೇಕು. ಯಾರಿಂದಲೂ ಪ್ರತಿಫಲ ಅಥವಾ ಕೃತಜ್ಞತೆಯ ನಿರೀಕ್ಷೆಯನ್ನಿರಿಸಬೇಡಿರಿ, ‘ಲಾ ನುರೀದು ಮಿನ್‌ಕುಮ ಜಝಾನ್ ವಲಾ ಶುಕೂರಾ’ (ನಾವು ನಿಮ್ಮಿಂದ ಯಾವುದೇ ಪ್ರತಿಫಲ ಮತ್ತು ಕೃತಜ್ಞತೆ ಬಯಸುವುದಿಲ್ಲ) ಎಂಬ ಕುರ್‌ಆನ್ ವಚನದಂತೆ, ಹಾಗೆಯೇ ಝಕಾತನ್ನು ಲೆಕ್ಕ ಮಾಡಿ ಈ ತಿಂಗಳಲ್ಲಿಯೇ ವಿತರಿಸುವ ವ್ಯವಸ್ಥೆ ಮಾಡಿರಿ. ಈ ಪ್ರಕಾರ, ಝಕಾತ್ ಒಂದು ನಿರ್ದಿಷ್ಟ ಸಮಯ ನಿಗದಿಪಡಿಸಿದಂತೆಯೂ ಆಗುತ್ತದೆ. ರಮಝಾನಲ್ಲಾಗುವುದರಿಂದ ಎಪ್ಪತ್ತು ಪಟ್ಟು ಪುಣ್ಯ ಫಲದ ಶುಭ ನಿರೀಕ್ಷೆಯನ್ನೂ ಇರಿಸಬಹುದಾಗಿದೆ.

ಮಾನವ ಸೇವೆ
ಒಂಭತ್ತನೆಯದಾಗಿ, ಮಾನವೀಯ ನೆಲೆಯಲ್ಲಿ ಸಹಾಯ, ಸೇವೆ ಮಾಡುವುದು. ರಮಝಾನ್ ತಿಂಗಳನ್ನು ಪ್ರವಾದಿವರ್ಯರು(ಸ) ‘ಶಹ್ರುಲ್‌ ಮವಾಸಾತ್’ (ಹಿತಚಿಂತನೆಯ ತಿಂಗಳು) ಎಂದು ಕರೆದಿದ್ದಾರೆ. ಇದು ನಮ್ಮಂತೆಯೇ ಇರುವ ಮಾನವರೊಂದಿಗೆ, ನಮ್ಮ ಸೋದರ-ಸೋದರಿಯರೊಂದಿಗೆ ಹಿತಚಿಂತನೆ ಮತ್ತು ಅನುಕಂಪ ವ್ಯಕ್ತಪಡಿಸುವ ತಿಂಗಳಾಗಿದೆ. ವಿಶೇಷತಃ ಜೀವನಾಧಾರಕ್ಕೆ ಸಂಬಂಧಿಸಿ ಪರಸ್ಪರರ ಕಷ್ಟ ಕಾರ್ಪಣ್ಯಗಳನ್ನು, ವಿವಶತೆ, ಚಿಂತೆ ಮತ್ತು ದುಃಖಗಳನ್ನು ದೂರ ಮಾಡುವ, ಆ ನಿಟ್ಟಿನಲ್ಲಿ ಸಹಾಯ-ಸಹಕಾರ ನೀಡುವ ತಿಂಗಳಾಗಿದೆ. ಉಪವಾಸ ವ್ರತಾಚರಣೆಯಲ್ಲಿ ನಿಮ್ಮ ಹಸಿವು-ದಾಹಗಳು ನಿಮ್ಮಲ್ಲಿ ಧರ್ಮನಿಷ್ಠೆ, ಆತ್ಮ ನಿಯಂತ್ರಣ, ದೇವಾದೇಶ ಪಾಲನೆ ಮತ್ತು ಸಹನೆಯ ಗುಣಗಳನ್ನು ಬೆಳೆಸುವಂತೆಯೇ ಇತರರು ಅನುಭವಿಸುವ ಹಸಿವಿನ ಸಂಕಷ್ಟವನ್ನೂ ಅರಿಯುವಂತೆ ಮಾಡುತ್ತವೆ. ನಿಮ್ಮ ಈ ವೈಯಕ್ತಿಕ ಅನುಭವ ಮತ್ತು ಭಾವನೆಯಿಂದಾಗಿ ನಿಮ್ಮಲ್ಲಿ ಪರಹಿತ ಚಿಂತನೆ ಮತ್ತು ಸಹಕಾರ ಮನೋಭಾವ ಹುಟ್ಟುತ್ತದೆ.

ಒಳಿತು, ಸತ್ಕರ್ಮ ಮತ್ತು ಧರ್ಮನಿಷ್ಠೆಯ ಈ ವೃಕ್ಷವು ವಿಶಾಲವಾಗಿದೆ. ಅದರ ಗೆಲ್ಲುಗಳೂ ಅಸಂಖ್ಯವಾಗಿವೆ. ಬಡವರಿಗೆ ಉಣಬಡಿಸುವುದು, ರೋಗಿಗಳ ಶುಶ್ರೂಷೆ ಮತ್ತು ರೋಗಿ ಸಂದರ್ಶನ, ಅನಾಥರ ಮತ್ತು ವಿಧವೆಯರ ಪೋಷಣೆ, ಅಪೇಕ್ಷಿತರ ಬೇಡಿಕೆಗೆ ಸ್ಪಂದಿಸುವುದು, ಸದ್ವರ್ತನೆ ಇತ್ಯಾದಿಗಳು ಈ ವಿಶಾಲ ವೃಕ್ಷದ ಗೆಲ್ಲುಗಳ ಪೈಕಿ ಕೆಲವು ಈ ಮಾನವೀಯ ಸೇವೆಗೆ ಎಲ್ಲರೂ ಹಕ್ಕುದಾರರಾಗಿದ್ದಾರೆ. ನಿಮ್ಮ ಕುಟುಂಬಿಕರು ಮತ್ತು ಸಂಬಂಧಿಕರು, ನಿಮ್ಮ ಧಾರ್ಮಿಕ ಸೋದರರು ಮತ್ತು ಮಿತ್ರರು, ನೆರೆಕರೆಯವರು ಇತರ ಮುಸ್ಲಿಮರು ಹಾಗೂ ಮಾನವರೆಂಬ ನೆಲೆಯಲ್ಲಿ ಎಲ್ಲರೂ ಈ ಮಾನವ ಸಂಬಂಧ ಅಥವಾ ಸೇವೆಯನ್ನು ಸಂಸ್ಥಾಪಿಸಲಿಕ್ಕಾಗಿ ಪ್ರವಾದಿವರ್ಯರು(ಸ) ಅತ್ಯುತ್ತಮ ವಿಧಾನವನ್ನು ಸೂಚಿಸಿದ್ದಾರೆ. ಅವರು ಹೀಗೆ ಹೇಳಿರುವರು, “ಈ ತಿಂಗಳಲ್ಲಿ ಯಾರಾದರು ಒಬ್ಬ ಉಪವಾಸಿಗನಿಗೆ ಪಾರಣೆ ಮಾಡಿಸಿದರೆ ಆತನ ಸಕಲ ಪಾಪಗಳೂ ಪರಿಹರಿಸಲ್ಪಡುವುವು ಮತ್ತು ನರಕದ ಅಗ್ನಿಯಿಂದ ರಕ್ಷಣೆ ದೊರೆಯುವುದು. ಅದರ ಜತೆಗೆ ಆ ಉಪವಾಸಿಗನ ಉಪವಾಸ ವ್ರತದ ಪುಣ್ಯ ಫಲಗಳಲ್ಲಿ ಕಡಿತವಾಗದೆಯೇ ಅದರಷ್ಟೇ ಪುಣ್ಯಫಲವು ಪಾರಣೆ ಮಾಡಿಸಿದವನಿಗೆ ಲಭಿಸುವುದು. ಆಗ ಸಂಗಾತಿಗಳು ಕೇಳಿದರು, “ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲಿ ಎಲ್ಲರ ಬಳಿ ಉಪವಾಸ ಪಾರಣೆ ಮಾಡಿಸುವಷ್ಟು ಆಹಾರ ವಸ್ತುಗಳಿಲ್ಲವಲ್ಲ?” ಆಗ ಪ್ರವಾದಿವರ್ಯರು(ಸ) ಹೀಗೆ ಹೇಳಿದರು, “ಅಲ್ಲಾಹನು ಒಂದು ಗುಟುಕು ಹಾಲು, ನೀರು ಅಥವಾ ಒಂದು ಖರ್ಜೂರದಿಂದ ಪಾರಣೆ ಮಾಡಿಸಿದವರಿಗೂ ಈ ಪುಣ್ಯಫಲವನ್ನು ದಯಾಲಿಸುವನು.” ಮುಂದುವರಿದು ಅವರು ಹೇಳಿದರು, “ಯಾರಾದರೂ ಉಪವಾಸಿಗನಿಗೆ ಹೊಟ್ಟೆ ತುಂಬಾ ಉಣಬಡಿಸಿದರೆ, ಅಲ್ಲಾಹನು ಆತನಿಗೆ ನನ್ನ ಸರೋವರದಿಂದ ನೀರು ಕುಡಿಸುವನು, ಅದರ ನಂತರ ಆತನಿಗೆ ಸ್ವರ್ಗ ಪ್ರವೇಶಿಸುವ ವರೆಗೂ ದಾಹವಾಗಲಾರದು.” (ಹ. ಸಲ್ಮಾನ್ ಫಾರ್ಸಿ(ರ) – ಬೈಹಕಿ]

ಅದ್ದರಿಂದ ಈ ತಿಂಗಳಲ್ಲಿ ನೀವು ವಿಶೇಷವಾಗಿ ನಿಮ್ಮ ಸೋದರ, ಸೋದರಿಯರಿಗೆ ನೆರವಾಗಿರಿ, ಹಸಿದವರಿಗೆ ಉಣ ಬಡಿಸಿರಿ, ಅಪೇಕ್ಷಿತರಿಗೆ ಸಹಾಯ ಮಾಡಿರಿ, ಅಪೇಕ್ಷಿತರಿಗೆ ಮತ್ತು ನಿರ್ಗತಿಕರಿಗೆ ನಿಮ್ಮ ಸಂಪತ್ತಿನಿಂದ ಅವರ ಹಕ್ಕನ್ನು ಸಂದಾಯ ಮಾಡಿರಿ, ನೆನಪಿಡಿ ಪಾಪಗಳಿಗೆ ಕ್ಷಮೆ, ನರಕದಿಂದ ಮುಕ್ತಿ, ಕೌಸರ್ ಸರೋವರದಿಂದ ದಾಹರಿಸುವುದು ಮತ್ತು ಸ್ವರ್ಗ ಪ್ರವೇಶಗಳಂತಹ ಉನ್ನತ ಪ್ರತಿಫಲಗಳು ಮಾನವ ಸೇವೆಯಿಂದ ಮಾತ್ರವೇ ದೊರೆಯಲು ಸಾಧ್ಯ, ಮಾನವರ ಮನ ನೋಯಿಸುವುದರಿಂದ ನಮಾಝ್, ಉಪವಾಸ ವ್ರತ, ದಾನ ಧರ್ಮಗಳ ಭಂಡಾರವಿದ್ದರೂ ಯಾವುದೇ ಪ್ರಯೋಜನಕ್ಕೆ ಬಾರದು. ಸೇವೆಯು ಸಣ್ಣ ಅಥವಾ ದೊಡ್ಡ ಪ್ರಮಾಣವೆಂಬುದು ಮುಖ್ಯವಲ್ಲ. ನಿಮ್ಮಲ್ಲಿ ಇರುವುದರ ಪೈಕಿ ಏನನ್ನಾದರೂ ಕೊಟ್ಟು ಬಿಡುವುದು, ನಿಮ್ಮಿಂದ ಆಗಬಹುದಾದ ಸಹಾಯ ಮಾಡುವುದು ಮುಖ್ಯವಾಗುತ್ತದೆ. ಯಾವುದೇ ಸಣ್ಣ ವಸ್ತುವನ್ನೂ ಕುಲ್ಲಕವೆಂದು ಭಾವಿಸದಿರಿ- ಅದು ಒಂದು ಹೊತ್ತಿನ ಊಟವಾಗಿರಬಹುದು, ಒಂದು ಲೋಟ ನೀರಾಗಿರಬಹುದು, ಒಂದೇ ಒಂದು ರೂಪಾಯಿಯಾಗಿರಬಹುದು, ಒಂದು ಒಳ್ಳೆಯ ಮಾತು ಅಥವಾ ಶಿಫಾರಸು, ಅಷ್ಟೇ ಏಕೆ, ಒಂದು ಬಾಯಾರಿದ ನಾಯಿಯ ದಾಹ ತೀರಿಸುವುದೂ ಈ ಒಳಿತಿನ ಕಾರ್ಯದಲ್ಲಿ ಒಳಪಡುತ್ತದೆ. ಇವು ನಿಮ್ಮ ಸ್ವರ್ಗ ಪ್ರವೇಶಕ್ಕೆ ಉಪಾಧಿಯಾಗಬಹುದು.

ದೇವಗ್ರಂಥದೆಡೆಗೆ ಆಹ್ವಾನ
ಹತ್ತನೆಯದಾಗಿ, ಪವಿತ್ರ ಕುರ್‌ಆನ್ ಮತ್ತು ಒಳಿತಿನೆಡೆಗೆ ಜನರನ್ನು ಆಹ್ವಾನಿಸುವುದಾಗಿದೆ. ಜನರನ್ನು ದೇವ ಕ್ರೋಧ ಮತ್ತು ನರಕಾಗ್ನಿಯಿಂದ ರಕ್ಷಿಸಿ ದೇವ ಸಂಪ್ರೀತಿ ಮತ್ತು ಸ್ವರ್ಗದ ಅನುಗ್ರಹಗಳೆಡೆಗೆ ಆಹ್ವಾನಿಸುವುದಕ್ಕಿಂತ ಉತ್ತಮವಾದ ಮಾನವ ಸೇವೆಯನ್ನು ನೀವು ಊಹಿಸಲಾರಿರಿ. ಜಗತ್ತಿನ ಹಸಿವು-ದಾಹವು ಐಹಿಕ ಜೀವನದೊಂದಿಗೇ ಕೊನೆ ಗೊಳ್ಳುವುದು. ಇಲ್ಲಿನ ಎಲ್ಲ ದುಃಖ ದುಮ್ಮಾನಗಳೂ ಇಲ್ಲಿಗೇ ಮುಗಿಯುವುದು. ಆದರೆ ಪರಲೋಕದ ಹಸಿವು-ದಾಹಗಳು ಎಂದೂ ಮುಗಿಯುವಂತಹದ್ದಲ್ಲ, ಅಲ್ಲಿನ ದುಃಖ ದುಮ್ಮಾನಗಳಿಂದ ಎಂದೂ, ಮುಕ್ತಿ ಸಿಗಲಾರದು. ಅಲ್ಲಿನ ಮುಳ್ಳು-ಕಲ್ಲು ತುಂಬಿದ ಆಹಾರ, ಕೀವು-ರಕ್ತ ಮತ್ತು ಕುಡಿಯುವ ನೀರಿನ ಗುಟುಕು ಎಲ್ಲವೂ ಶಾಶ್ವತವಾಗಿರುವುದು. ಆದ್ದರಿಂದ ಯಾವುದಾದರೊಂದು ಸೇವೆಯಿಂದ ಅಲ್ಲಿನ ಹಸಿವು ದಾಹಗಳು ತಣಿಯುವುದಿದ್ದರೆ ಹಾಗೂ ಅಲ್ಲಿನ ದುಃಖ-ದುಮ್ಮಾನಗಳಿಂದ ಮುಕ್ತಿ ದೊರೆಯುವುದಿದ್ದರೆ, ಅಂತಹ ಸೇವೆಯೇ ಅತಿ ದೊಡ್ಡ ಸೇವೆಯೆನಿಸುತ್ತದೆ. ಉಪವಾಸ ಪಾರಣೆ ಮಾಡಿಸುವುದರಿಂದ ಆತನ ಉಪವಾಸದಷ್ಟೇ ಫಲವು ನಿಮಗೆ ದೊರೆಯುತ್ತದೆಯಲ್ಲವೇ. ಅಂತದ ಮಾರ್ಗದಲ್ಲಿ ನಡೆಸಿದರೆ ಅವರಿಂದಾಗುವ ಒಳಿತುಗಳ ಪುಣ್ಯವೂ ಲಭಿಸುವುದು. ಆದರೆ ದೊರೆಯುತ್ತಿರುವುದು ವಿಶೇಷ ಪವಿತ್ರ ಕುರ್‌ಆನಿನ ಕಾರಣವಾಗಿಯೇ ರಮಝಾನ್ ತಿಂಗಳಿಗೆ ಶ್ರೇಷ್ಠತೆ-ಗೌರವ ಲಭಿಸಿದೆ. ಆದ್ದರಿಂದ ನೀವು ಜನರಿಗೆ ಪವಿತ್ರ ಸಂದೇಶವನ್ನು ಕುರ್‌ಆನಿನ ಶಿಕ್ಷಣವನ್ನು ಕೊಡಲು, ಕುರ್‌ಆನಿನ ಉದ್ದೇಶದೆಡೆಗೆ ಆಹ್ವಾನಿಸಲು ಕುರ್‌ಆನಿನ: ಅಮಾನತ್‌ನ ವಾಹಕರಾಗುವಂತೆ ಸಿದ್ಧಗೊಳಿಸಲು ಅದರ ಅವತೀರ್ಣದ ತಿಂಗಳಿಗಿಂತ ಉತ್ತಮ ಅವಕಾಶ ಬೇರೆ ಯಾವುದಿದ್ದೀತು?

ರಮಝಾನ್ ತಿಂಗಳಲ್ಲಿ ನಿಮಗೆ ನಿಮ್ಮದೇ ಆದ ದಿನಚರಿ ಇರುತ್ತದೆ. ನಿಮ್ಮ ಗಮನವು ಹೆಚ್ಚಾಗಿ ಆತ್ಮ ಸಂಸ್ಕರಣೆ, ಕುರ್‌ಆನ್ ಪಠಣ, ಐಚಿಕ ನಮಾಝ್ ಮತ್ತು ನಿಮ್ಮ ಪಾಲಿಗೆ ಹೆಚ್ಚೆಚ್ಚು ಪುಣ್ಯವನ್ನು ಗಳಿಸುವುದರ ಕಡೆಗೆ ಇರುತ್ತದೆ. ಆದರೆ ಎಲ್ಲಕ್ಕಿಂತ ದೊಡ್ಡ ಸತ್ಕರ್ಮವಾದ ಒಳಿತಿನ ಕಡೆಗೆ ಉಪದೇಶದಿಂದ ನಿಮ್ಮ ಗಮನ ಹರಿಯುತ್ತಿರಲಿ, ಅಲ್ಲಾಹನೆಡೆಗೆ ಆಹ್ವಾನ ಮತ್ತು ಕುರ್‌ಆನಿನೆಡೆಗಿನ ಕರೆಯು ಅತಿ ದೊಡ್ಡ ಸತ್ಕರ್ಮ ಹಾಗೂ ಒಳಿತುಗಳಲ್ಲಿ ಅತ್ಯುತ್ತಮವಾಗಿರುವುದು ಮಾತ್ರವಲ್ಲ, ಅದರ ಜತೆಗೇ ಸ್ವಯಂ ನಿಮ್ಮ ಸಂಸ್ಕರಣೆ ಮತ್ತು ತರಬೇತಿಯಲ್ಲಿ ಕೂಡ ಪ್ರಭಾವ ಬೀರುತ್ತದೆ.

ರಮಝಾನ್ ತಿಂಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರ ಹೃದಯಗಳು ಅಲ್ಲಾಹ್ ಮತ್ತು ಸತ್ಕರ್ಮಗಳೆಡೆಗೆ ವಾಲಿಕೊಂಡಿರುತ್ತವೆ. ಆದ್ದರಿಂದ ಜನರು ನಿಮ್ಮ ಒಳಿತಿನ ಉಪದೇಶ ಆಲಿಸಲು, ಅದರಂತೆ ನಡೆಯಲು ಹಾಗೂ ಅಲ್ಲಾಹನು ತನ್ನ ಸಂದೇಶವಾಹಕರ ಮೂಲಕ ಅವತೀರ್ಣಗೊಳಿಸಿದ ಕುರ್‌ಆನಿನ ಆಶಯದಂತೆ ಬಾಳ್ವೆ ನಡೆಸಲು ಪ್ರೇರಿತರಾಗಲು ಈ ತಿಂಗಳು ಅತ್ಯುಪಯುಕ್ತವಾಗಿದೆ.

ಈ ಕಾರ್ಯ ಎರಡು ರೀತಿಯಲ್ಲಿ ಸಾಧಿತವಾಗುತ್ತದೆ
ಮೊದಲನೆಯದಾಗಿ, ರಮಝಾನಿನಲ್ಲಿ ನೀವು ಅನುಸರಿಸುವ ದಿನಚರಿಯಲ್ಲಿ ಅಲ್ಲಾಹನೆಡೆಗೆ ಆಹ್ವಾನಿಸಲು, ಒಳಿತಿನ ಮಾತುಗಳನ್ನಾಡಲು ಹಾಗೂ ಜನರನ್ನು ಒಳಿತಿನ ಕಾರ್ಯಗಳಲ್ಲಿ ಸಕ್ರಿಯರಾಗಿಸಲು ಸಮಯ ಮೀಸಲಿಡಿರಿ, ಇಫ್ತಾರ್‌ ಕೂಟ ನಡೆಸಿದರೆ ಆ ವೇಳೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಮಾಡಿಕೊಡಿರಿ. ಸಹೋದ್ಯೋಗಿಗಳಲ್ಲಿ, ಸಹಪಾಠಿಗಳಲ್ಲಿ ಮಾತುಕತೆಯ ವೇಳೆ ಈ ವಿಷಯಗಳನ್ನು ಅವರ ಮುಂದಿರಿಸಿರಿ. ನಿಮ್ಮ ಮಾತುಗಳು ಯಾವಾಗಲೂ ರಮಝಾನನ್ನೇ ಆಧರಿಸಿರಲಿ ಮತ್ತು ಅದರ ಅಂತ್ಯವು ಕುರ್‌ಆನಿನ ಉದ್ದೇಶ ಈಡೇರಿಸುವ ಕಡೆಗೆ ಸೂಚಿಸುವಂತಿರಲಿ.

ಎರಡನೆಯದಾಗಿ, ನಿಮ್ಮ ಸಂಬಂಧಿಕರು ಮತ್ತು ಮಿತ್ರರ ಒಂದು ಪಟ್ಟಿಯನ್ನು ತಯಾರಿಸಿಡಿರಿ ಹಾಗೂ ಈ ಒಂದು ತಿಂಗಳಲ್ಲಿ ಅವರೊಂದಿಗೆ ನಿರಂತರ ಸಂಪರ್ಕವಿರಿಸಿ ಪವಿತ್ರ ಕುರ್ ಆನಿನ ಅದೇಶ ನಿರ್ದೇಶನಗಳಂತೆ ಬಾಳಲು ಪ್ರೇರೇಪಿಸುವುದಾಗಿ ಸಂಕಲ್ಪ ತೊಡಿರಿ.

ಕೊನೆಯ ಮಾತು
ಈ ಮೇಲೆ ತಿಳಿಸಲಾಗಿರುವ ಹತ್ತು ವಿಷಯಗಳ ಬಗ್ಗೆ ಸರಿಯಾದ ಚಿಂತನೆ ನಡೆಸಿದರೆ, ಅವೆಲ್ಲವೂ ಒಂದೇ ದಾರದಿಂದ ಪೋಣಿಸಲ್ಪಟ್ಟಿವೆ ಮತ್ತು ಪರಸ್ಪರ ಅಭೇದ್ಯ ಸಂಬಂಧವನ್ನು ಹೊಂದಿವೆಯೆಂದು ತಿಳಿಯಬಹುದಾಗಿದೆ. ಇದು ನಮಗೆ ರಮಝನಿನ ಮೂಲಕ ಕುರ್‌ಆನಿನ ಅಮಾನತ್ ನ ಭಾರವನ್ನು ಹೊರಲು ಸಮರ್ಥರಾಗಬಲ್ಲಂತಹ ಶಕ್ತಿಯನ್ನೂ ಧರ್ಮನಿಷ್ಠೆಯನ್ನೂ ಗಳಿಸಲು ಸಹಕಾರಿಯಾಗುವಂತಹ ಸಂಬಂಧವಾಗಿದೆ. ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಜೀವನದ ಪ್ರಗತಿಯು ಕೇವಲ ಕುರ್‌ಆನನ್ನು ಆಧರಿಸಿದೆ. ಮತ್ತು ಜಗತ್ತಿನಲ್ಲಿ ಸ್ಥಾನಮಾನ ಉನ್ನತಿಯೂ ಕೇವಲ ಕುರ್‌ಆನಿನ ಮೂಲಕವೇ ಸಾಧ್ಯವಾಗುವುದು ಎಂಬ ಕಾರಣಕ್ಕಾಗಿ ಈ ಉದ್ದೇಶವು ಅತಿ ಪ್ರಮುಖವೆನಿಸುತ್ತದೆ. ಪರಲೋಕದಲ್ಲಿಯೂ ಅಷ್ಟೇ… ನಾವು ಇಲ್ಲಿ ಪವಿತ್ರ ಕುರ್‌ಆನಿನೊಂದಿಗೆ ಹೇಗೆ ವ್ಯವಹರಿಸುತ್ತೇವೆ, ಅದು ತೋರಿದ ಹಾದಿಯಲ್ಲಿ ಎಷ್ಟರ ತನಕ ನಡೆಯುತ್ತೇವೆ ಮತ್ತು ಅದನ್ನು ನಮಗೆ ತಲುಪಿಸಿದವರನ್ನು (ಸ) ನಾವು ಎಷ್ಟಂಶ ಅನುಸರಿಸಿದ್ದೇವೆ ಎಂಬುದರಲ್ಲಿಯೇ ನಮ್ಮ ಪರಲೋಕ ಮೋಕ್ಷ ಮತ್ತು ವಿಜಯವು ಅವಲಂಬಿಸಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …