- ಯೋಗೇಶ್ ಮಾಸ್ಟರ್
ನಿನ್ನೆ ಸುರಿಯುವ ಮಳೆಯಲ್ಲಿ ಆತ ಕತ್ತಲಲ್ಲಿ ನಮ್ಮ ಮನೆಯ ರಸ್ತೆಯಲ್ಲಿ ನಿಂತಿದ್ದ. ನಮ್ಮ ಕಟ್ಟಡದ ಆಶ್ರಯಕ್ಕೆ ಬಂದು ತನ್ನನ್ನು ಮಳೆಯ ದಾಳಿಯಿಂದ ಕಾಪಾಡಿಕೊಳ್ಳಲು ಕರೆದೆ. ಆತ ಬಂದ. ಇಬ್ಬರೂ ಒಬ್ಬರನ್ನೊಬ್ಬರು ಗುರುತು ಹಿಡಿದೆವು. ಸುಮಾರು ಹದಿನೈದು ವರ್ಷಗಳ ಹಿಂದೆ ನನ್ನ ಜೊತೆ ಜಗಳ ಮಾಡಿಕೊಂಡು ಹೋಗಿದ್ದ ವ್ಯಕ್ತಿ. ಚಾಮರಾಜಪೇಟೆಯ ನಿವಾಸಿ. ತೀರಾ ಆತ್ಮೀಯನಲ್ಲದಿದ್ದರೂ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಗೆಳೆಯನೇ.
ಮುಸಲ್ಮಾನರ ಕಡು ದ್ವೇಷಿ.
“ನೀವು ಹಿಂದೂ ಧರ್ಮದ ನ್ಯೂನತೆಗಳನ್ನು ಎತ್ತಿ ತೋರಿಸುವವರು ಮುಸಲ್ಮಾನರ ಮತ್ತು ಕ್ರೈಸ್ತರ ಮೌಢ್ಯ, ಅವರ ಅಂಧಶ್ರದ್ಧೆಗಳ ವಿಷಯಕ್ಕೆ ಬಂದರೆ ಜಾಣ ಕುರುಡು ನಟಿಸುತ್ತೀರಿ. ಮುಸಲ್ಮಾನರನ್ನು ಓಲೈಸುತ್ತೀರಿ. ಕಾಂಗ್ರೇಸಿನವರ ಬುದ್ಧಿ. ನೀವು ಹಿಂದೂಗಳ ವಿಷಯದಲ್ಲಿ ಮಾತ್ರ ಪ್ರಗತಿಪರರು, ಮುಸಲ್ಮಾರರ ವಿಷಯದಲ್ಲಿ ಜೀವಪರರು. ಥೂ ನಿಮ್ಮ ಡಬ್ಬಲ್ ಸ್ಟ್ಯಾಂಡರ್ಡ್ ಮುಖಕ್ಕೆ.” ಎಂದು ಅವನು ನನ್ನ ಮುಖಕ್ಕೆ ಉಗಿದು, ಇನ್ನೆಂದೂ ನಿನ್ನ ನೋಡುವುದಿಲ್ಲ ಎಂದು ಬೈದು ಹೋದಾಗ 2005.
ಆ ಮೇಲೆ ಅವನು ಸಿಕ್ಕಿರಲೇ ಇಲ್ಲ. ನನ್ನ ನಿಲುವು, ಒಲವು ಹೀಗೆಂದು ಕೇಳಲು ಸಿದ್ಧವಿಲ್ಲದವರಿಂದ ಹೀಗೆ ಉಗಿಸಿಕೊಳ್ಳುವುದೂ ಕೂಡಾ ನನಗೆ ಹೊಸತಲ್ಲವಾದ್ದರಿಂದ ನಾನೇನೂ ಅವನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಸಂಪೂರ್ಣವಾಗಿ ಮರೆತೇ ಹೋಗಿದ್ದೆ.
ನಿನ್ನೆ ರಾತ್ರಿಯೇ ಆತನ ನೋಡಿದ ಮೇಲೆ ಎಲ್ಲವೂ ನೆನಪಿಗೆ ಬಂತು. ಊಟ ಮಾಡಲು ಆಹ್ವಾನಿಸಿದೆವು. ಮಾಡಿದ.
“ಅವತ್ತು ನಾನು ಬೈದಾಡಿ ಹೋಗಿದ್ದು ನೆನಪಿನಲ್ಲಿ ಇರತ್ತೆ ಅಂತ ಅಂದುಕೊಂಡಿದ್ದೆ” ಎಂದ.
“ಅಂದೆಂದೋ ಗಾಯವಾಗಿರುವುದು ನೆನಪಿಗೆ ಬರಬಹುದು. ಆದರೆ ಅದರ ನೋವೇನೂ ಈಗ ಇರುವುದಿಲ್ಲವಲ್ಲ. ಹಾಗಾಗಿ ಏನೂ ಸಮಸ್ಯೆ ಇಲ್ಲ” ಎಂದು ನಕ್ಕೆ.
“ಅಜ್ಞಾನ ಕಾಲದಲ್ಲಾದ ತಪ್ಪುಗಳನ್ನು ಮನ್ನಿಸಬೇಕು ಅಲ್ಲವಾ?” ಎಂದ.
ಇದೇ ಬಗೆಯ ಮಾತು ಪ್ರವಾದಿ ಮಹಮದರ ಕೊನೆಯ ಭಾಷಣದಲ್ಲಿ ಇರುವುದನ್ನು ನೆನಪಿಸಿಕೊಂಡೆ. ಆದರೆ ಹೇಳಲಿಲ್ಲ.
ಬೇರೆ ಮಾತುಕತೆಗಳಾದವು.
ಬೆಳಗ್ಗೆ ತಿಂಡಿ ತಿನ್ನು ಎಂದು ಆಹ್ವಾನಿಸಿದಾಗ ಬೇಡ ಎಂದ. ಒತ್ತಾಯಿಸಿದಾಗ, “ಉಪವಾಸ” ಎಂದ.
“ಇವತ್ತೆಂತ ಉಪವಾಸ” ಎಂದರೆ ಆಶ್ಚರ್ಯ ಕಾದಿತ್ತು.
ಅವನು ಮಾಡುತ್ತಿರುವುದು ರಂಜಾನ್ ಉಪವಾಸ.
2005 ರಲ್ಲಿ ಅವನು ನನ್ನೊಂದಿಗೆ ಜಗಳವಾಡಿ ಹೋಗುವಾಗ ಅವನ ಶರ್ಟಿನ ಮೇಲು ಜೇಬಿನಲ್ಲಿ ಒಂದು ಪುಟ್ಟ ಪುಸ್ತಕವನ್ನು ತುರುಕಿದ್ದೆ. “ಅಂತಿಮ ಪ್ರವಾದಿಯ (ಸ) ವಿದಾಯ ಭಾಷಯ” ಎಂದಿತ್ತು. ಶಾಂತಿ ಪ್ರಕಾಶನ. ಬೆಲೆ ಮೂರು ರೂಪಾಯಿ. ಸುಮಾರು ಹದಿನೈದು ಇಪ್ಪತ್ತು ಕೊಂಡಿದ್ದು, ಅದನ್ನು ನನ್ನ ಮುಸ್ಲೀಂ ವಿರೋಧಿ ಸ್ನೇಹಿತರಿಗೆ ಕೊಡುತ್ತಿದ್ದೆ. ಅಂದೂ ನಾನು ಆ ಕೆಲಸ ಮಾಡಿದ್ದೆ. ಅವನೊಂದಿಗೆ ಮನೆಗೆ ಹೋಗಿದ್ದ ವಿದಾಯ ಭಾಷಣ ಅಲ್ಲೆಲ್ಲೋ ಟೇಬಲ್ಲಿನ ಮೇಲೆ ಎಸೆದಿದ್ದ. ಮೂರ್ನಾಲ್ಕು ದಿನಗಳಾದ ಮೇಲೆ ಓದಿದ್ದಾನೆ.
* ದೇವರು ನಿಮ್ಮೆಲ್ಲರನ್ನೂ ವಿವಿಧ ಕುಲ ಗೋತ್ರಗಳಾಗಿ ಮಾಡಿರುವುದು ಪರಸ್ಪರ ಪರಿಚಯ ಮಾಡಿಕೊಳ್ಳುವುದಕ್ಕೇ ಆಗಿದೆ.
* ಯಾರ ಮೇಲೂ ಯಾರಿಗೂ ಶ್ರೇಷ್ಟತೆಯ ಅಧಿಕಾರವಿಲ್ಲ.
* ಅಜ್ಞಾನ ಕಾಲದಲ್ಲಿ ಆಚರಿಸುತ್ತಿದ್ದ ಎಲ್ಲಾ ಸಂಪ್ರದಾಯಗಳನ್ನು ಗಣಿಸಬೇಡಿ. ಅಜ್ಞಾನ ಕಾಲದಲ್ಲಾದ ಎಲ್ಲಾ ರಕ್ತಪಾತಗಳನ್ನೂ ಅನೂರ್ಜಿತಗೊಳಿಸಿ.
* ನಿಮ್ಮ ರಕ್ತ, ನಿಮ್ಮ ಸೊತ್ತು ಮತ್ತು ನಿಮ್ಮ ಮಾನ; ಇವೆಲ್ಲದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಿ.
* ಅಪರಾಧಕ್ಕೆ ಅಪರಾಧವೆಸಗಿದವನ ಹೊರತು ಬೇರೆ ಯಾರೂ ಹೊಣೆಯಲ್ಲ. ಮಗು ತನ್ನ ತಂದೆಯ ಅಪರಾಧಕ್ಕೆ ಹೊಣೆಯಲ್ಲ. ತಂದೆ ತನ್ನ ಮಗುವಿನ ಅಪರಾಧಕ್ಕೆ ಹೊಣೆಯಲ್ಲ.
* ನಿಮ್ಮ ಆಳುಗಳಿಗೆ ನೀವು ಉಡುವುದನ್ನೇ ಉಡಿಸಿ, ನೀವು ಉಣ್ಣುವುದನ್ನೇ ಉಣಿಸಿ.
ಇತ್ಯಾದಿ ಮಾತುಗಳೆಲ್ಲಾ ಅವನ ಮೇಲೆ ಪ್ರಭಾವ ಬೀರಿವೆ.
ನಂತರ ಅದೇ ಶಾಂತಿ ಪ್ರಕಾಶನದ ವಚನ ರತ್ನ ಮತ್ತು ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳು ಪುಸ್ತಕವನ್ನೂ ಓದಿದ್ದಾನೆ. ನಂತರ ಅವನಲ್ಲಿ ಒಂದು ಮಾರ್ಪಾಟಾಗಿದೆ. ನನ್ನ ಕಣ್ಮುಂದೆ ಯಾರೋ ಕೆಲವರು ಮುಸಲ್ಮಾನರು ಅನಾಗರಿಕವಾಗಿ ನಡೆದುಕೊಂಡರು ಎಂದ ಮಾತ್ರಕ್ಕೆ ಇಸ್ಲಾಂನ್ನು ಮತ್ತು ಮಹಮದ್ ಪೈಗಂಬರರನ್ನು ದ್ವೇಶಿಸಿಕೊಂಡು ಕೂರುವುದರಲ್ಲಿ, ಅಂತಹ ನಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಅವನಿಗೆ ಅನಿಸಿದೆ. ಮುಂದೆ ದಿವ್ಯ ಕುರಾನ್ ಮತ್ತು ಪ್ರವಾದಿ ಮಹಮದರ ಜೀವನ ಮತ್ತು ಸಂದೇಶ ಎಂಬ ಪುಸ್ತಕವನ್ನು ಓದಿದ್ದಾನೆ.
ಆತ ಇಸ್ಲಾಂ ಧರ್ಮಕ್ಕೆ ಮತಾಂತರವೇನೂ ಆಗಿಲ್ಲ. ಆಗುವುದೂ ಇಲ್ಲವಂತೆ. ಅವರ ಮನೆಯಲ್ಲಿ ಅವನ ಹೆಂಡತಿ, ತಾಯಿ ಮತ್ತು ಮಕ್ಕಳೆಲ್ಲಾ ದೇವರು ಹಬ್ಬ ಪೂಜೆ ಮಾಡುವಾಗ ಅವನೂ ಪಾಲ್ಗೊಳ್ಳುತ್ತಾನೆ. ಆದರೆ ಮಹಮದ್ ಪೈಗಂಬರರ ಬಗ್ಗೆ ಅವನಿಗೆ ಪ್ರೀತಿ ಹುಟ್ಟಿದೆ. ಇಸ್ಲಾಂ ಮೇಲಿನ ಅವನ ದ್ವೇಷ ಹೋಗಿದೆ. ಅದನ್ನು ಸ್ಮರಣೆಯಲ್ಲಿಟ್ಟುಕೊಳ್ಳಲು ರಂಜಾನಿನಲ್ಲಿ ಅವನು ಉಪವಾಸ ಮಾಡುತ್ತಾನಂತೆ. ಇನ್ನೊಂದು ವಿಷಯ, ಅವನು ಇದನ್ನು ನನ್ನ ಬಳಿ ಬಿಟ್ಟರೆ ಇನ್ನಾರಿಗೂ ಹೇಳೂ ಇಲ್ಲವಂತೆ. ಇದನ್ನು ಟಾಂ ಟಾಂ ಹೊಡೆಯುವ ಅಗತ್ಯವಿಲ್ಲ. ನನಗೆ ಉಂಟಾಗುವ ಅರಿವು ನನ್ನ ಪರ್ಸನಲ್ ಎಂದು ಹೇಳುತ್ತಾನೆ.
ಫೋಟೋ ಹಿಡಿಸಿಕೊಂಡ. ಆದರೆ ಅದನ್ನು ಇದನ್ನೆಲ್ಲಾ ಹೇಳಿ ಫೇಸ್ಬುಕ್ಕಿನಲ್ಲಿ ವಾಟ್ಸಪ್ಪಿನಲ್ಲಿ ಹಾಕಬೇಡ ಎಂದು ಎಚ್ಚರಿಸಿದ. ಆದರೆ ಇಂತಹ ವಿಷಯಗಳನ್ನು ಹಂಚಿಕೊಳ್ಳಬೇಕು. ಆದರೆ ನಿನ್ನ ಮುಖ ಹಾಕುವುದಿಲ್ಲ ಮತ್ತು ಹೆಸರು ಹೇಳುವುದಿಲ್ಲ ಎಂದು ಮಾತು ಕೊಟ್ಟೆ.
ಅವನು ಅಂದು ಕೇಳಿದ ಪ್ರಶ್ನೆಯನ್ನೇ ಇಂದೂ ಮತ್ತೆ ಕೇಳಿದ. “ನೀವ್ಯಾಕೆ ಮುಸ್ಲೀಮರ ವಿಷಯದಲ್ಲಿ ಅಗತ್ಯ ಬಂದಾಗಲೂ ಗಟ್ಟಿ ದನಿಯಲ್ಲಿ ವಿರೋಧಿಸುವುದಿಲ್ಲ?”
ಇಂದು ಅವನು ಕೇಳುವುದಕ್ಕೆ ಸಿದ್ಧವಾಗಿದ್ದಾನೆ. ಹಾಗೂ ಅವನ ಮನೋಭೂಮಿಕೆ ಹದಗೊಂಡಿದೆ.
ಹೇಳಿದೆ.
“ಅದು ಒಂದು ಮಟ್ಟಿಗೆ ನಿಜ. ಆದರೆ ಅದರ ಅರ್ಥ ಮುಸಲ್ಮಾನರ ತಪ್ಪುಗಳನ್ನು, ಅಂದಶ್ರದ್ಧೆಗಳನ್ನು ಪುರಸ್ಕರಿಸುತ್ತೇವೆ ಎಂದೇನಲ್ಲ. ನಾನೂ ಅವರ ಎಷ್ಟೋ ವಿಷಯಗಳನ್ನು ಅಗತ್ಯ ಬಂದಾಗ ಖಂಡಿಸುತ್ತೇನೆ ಮತ್ತು ಆಕ್ಷೇಪಿಸುತ್ತೇನೆ. ಆದರೆ ನನ್ನ ಖಂಡನೆ ಮತ್ತು ಆಕ್ಷೇಪಗಳಿಗೆ ಇರುವ ಕಾರಣ ’ಕಾಳಜಿ’. ಸಂಘ ಪರಿವಾರದ ಹಿಂದುತ್ವವಾದಿಗಳ ಖಂಡನೆ ಮತ್ತು ಆಕ್ಷೇಪಗಳಿಗೆ ಇರುವ ಕಾರಣ ’ದ್ವೇಷ’. ನಮ್ಮ ಕಾಳಜಿ ಪೂರಿತ ಖಂಡನೆಗಳು ಅವರ ಖಂಡನೆಗಳಿಗೆ ಬಲ ನೀಡುತ್ತಾ ಅವರ ದ್ವೇಷವನ್ನು ಗಟ್ಟಿಗೊಳಿಸದಿರಲಿ ಎಂಬ ಸೂಕ್ಷ್ಮ ದೃಷ್ಟಿ ನಮ್ಮಲ್ಲಿ ಹಲವರಿಗಿದೆ. ಹಾಗಾಗಿ ಹೇಳಬೇಕಾದುದನ್ನು ಹೇಳಿದರೂ ಸಂಘಪರಿವಾರದವರ ಜೊತೆಗೆ ಸೇರಿಕೊಂಡು ಅವರ ಭಾಷೆಯಲ್ಲಿ ಹೇಳುವುದಿಲ್ಲ. ನಮ್ಮ ಭಾಷೆಯ ಬಳಕೆಗಳಲ್ಲೂ ಕೂಡಾ ವ್ಯತ್ಯಾಸವಿದೆ. ಹಾಗೆಯೇ ನಾನೂ ಕೂಡಾ. ನಮ್ಮ ಖಂಡನೆಗಳು ಅವರ ಒಳಿತನ್ನು ಆಶಿಸುತ್ತದೆಯೋ ಅಥವಾ ಅವರ ಕೆಡುಕನ್ನು ಆಶಿಸುತ್ತದೆಯೋ ಅದನ್ನು ಗಮನಿಸಬೇಕು. ಹಾಗೆಯೇ, ಹಿಂದೂ ಧರ್ಮದ ಸಾಂಪ್ರದಾಯಿಕ ಆಚರಣೆಗಳ ವಿರುದ್ಧವಾಗಿ ಧ್ವನಿ ಎತ್ತಿದರೂ ಅದು ಹೀಯಾಳಿಸಲೋ ಅಥವಾ ಅಪಮಾನಿಸಲೋ ಅಲ್ಲ. ಕೆಲವು ನ್ಯೂನತೆಗಳನ್ನು ಹೊಗಲಾಡಿಸಿಕೊಳ್ಳಲು. ಧರ್ಮ ಮತ್ತು ದೇವರ ವಿಷಯವನ್ನು ರಾಜಕೀಯಗೊಳಿಸಿ ಮತ್ತು ಅದನ್ನು ಉಪಯೋಗಿಸಿಕೊಂಡು ಮನುಷ್ಯರ ಮೇಲೆ ದೌರ್ಜನ್ಯ ಮಾಡುತ್ತಿರುವವರ ಬಗ್ಗೆ ಎಚ್ಚರಿಸಲು ನಮ್ಮಲ್ಲಿ ಪ್ರತಿರೋಧದ ಧ್ವನಿ ಎದ್ದೇಳುವುದು. ಆದರೆ ಅದನ್ನು ರಾಜಕೀಯವಾಗಿ, ಅಥವಾ ಸಾಂಘಿಕವಾಗಿ ಬಳಸಿಕೊಂಡು ಕೆಲವರು ಅತಿರೇಕಕ್ಕೆ ಒಯ್ಯುತ್ತಾರೆ. ಅಂತಹ ಎಷ್ಟೆಷ್ಟೋ ನ್ಯೂನತೆಗಳನ್ನು ಸರಿಪಡಿಸಲೆಂದೇ ನಮ್ಮ ದೇಶದಲ್ಲಿ ಬೇಕಾದಷ್ಟು ಭಕ್ತಿ ಚಳವಳಿಗಳಾಗಿರುವುದು. ನಾನು ಮೌಢ್ಯ, ಅಂಧಾನುಕರಣೆಯಾಗಿದ್ದು ಅದು ಜೀವ ವಿರೋಧಿಯಾಗಿದ್ದರೆ, ಅದು ಯಾವ ಧರ್ಮದ್ದಾದರೂ ಖಂಡಿಸಿಯೇ ತೀರುತ್ತೇನೆ. ಹಾಗೆಯೇ, ತಪ್ಪಾಗಿ ನಡೆದುಕೊಳ್ಳುವ ಮುಸಲ್ಮಾರನನ್ನು ನೋಡಿ ಇಡೀ ಮುಸಲ್ಮಾನ ಸಮುದಾಯವನ್ನು ದ್ವೇಷಿಸುವುದು, ಇಸ್ಲಾಂನ ಹೀಯಾಳಿಸುವುದು ಯಾವ ನ್ಯಾಯ? ಹಾಗೆಯೇ ಹಿಂದುತ್ವವಾದಿಗಳ ಉಪಟಳಕ್ಕೆ ಹಿಂದೂ ಧರ್ಮವನ್ನೂ ನಾನೆಂದೂ ಹೀಯಾಳಿಸಲಾರೆ. ಹಾಗೆಯೇ ಹಿಂದುತ್ವವಾದಿಗಳು ಹಿಂದೂ ಧರ್ಮದ ಪ್ರತಿನಿಧಿಗಳು ಅಲ್ಲ. ಅವರಿಗೆ ಈ ಹಿಂದೂ ಧರ್ಮದ ಸೂಕ್ಷ್ಮತೆ ಮತ್ತು ವಿಸ್ತಾರ ಗೊತ್ತಿಲ್ಲ ಎಂದೇ ಎಚ್ಚರಿಸುತ್ತೇನೆ. ನನ್ನ ಸಂದರ್ಶನಗಳ ವಿಡಿಯೋಗಳನ್ನು ನೋಡು. ಇಷ್ಟೇ ಕಣಪ್ಪಾ.”
ಅವನು ಇಂದು ವಾದಿಸಲಿಲ್ಲ. ಕೋಪಿಸಿಕೊಳ್ಳಲಿಲ್ಲ.
“ನಾನು ನಿನ್ನ ವಿಡಿಯೋಗಳನ್ನು ನೋಡಿದ್ದೇನೆ. ನಾಸ್ತಿಕನಾಗಿರುವ ನಿನಗೆ ಯಾವ ಧರ್ಮವೂ ನಿನ್ನ ಮರಣಾನಂತರ ಜೀವನದ ಗ್ಯಾರಂಟಿಯನ್ನು ಕೊಡಲಾಗದು, ಅಲ್ವಾ” ಎಂದು ನಕ್ಕ ಆತ ಒಂದಷ್ಟು ಹೊತ್ತು ಸುಮ್ಮನಿದ್ದು ನಂತರ ಹೇಳಿದ, “ಆದರೆ ನಾನು ದೇವರನ್ನು ನಂಬುತ್ತೇನೆ. ನಾನು ದೇವರೆನ್ನುತ್ತೇನೆ. ಅವರು ಅಲ್ಲಾಹ್ ಎನ್ನುತ್ತಾರೆ. ಆದರೆ, ನಾಸ್ತಿಕರಾಗಿರುವ ನಿಮಗೆ ಧಾರ್ಮಿಕತೆಯ ವಿಷಯಗಳನ್ನು ಪಬ್ಲಿಕ್ಕಾಗಿ ಸಮತೂಕದಲ್ಲಿ ನಿರ್ವಹಿಸಿ ಬಿಡಲು ಅಷ್ಟು ಸುಲಭವಾಗಿ ಆಗದು, ಅಲ್ವಾ?” ಎಂದು ನಕ್ಕ ಅವನ ನಗೆಯಲ್ಲಿ ವಿಷಾದವೇ ಕಾಣುತ್ತಿದ್ದದ್ದು.
ನಾನು “ನನ್ನ ಅರಿವಿನ ಪ್ರವಾದಿ” ಪುಸ್ತಕವನ್ನು ಬರೆಯುತ್ತಿರುವುದರ ಬಗ್ಗೆ ತಿಳಿದು ಸಂತೋಷಗೊಂಡ.
ಮುಸ್ಲೀಮೇತರರಿಗೆ ಇಸ್ಲಾಂ ಮತ್ತು ಪ್ರವಾದಿ ಮಹಮದರನ್ನು ಅವರಿಗೆ ತಿಳಿದಿರುವ ಧಾರ್ಮಿಕತೆಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ತಿಳಿಸುವ ಅಗತ್ಯವಂತೂ ಈಗ ಇದೆ ಎಂದೂ ಅಭಿಪ್ರಾಯ ಪಟ್ಟ.
ಒಟ್ಟಾರೆ “ವಿದಾಯ ಭಾಷಣ” ಎಂಬ ಶಾಂತಿ ಪ್ರಕಾಶನದ ಒಂದು ಮೂರು ರೂಪಾಯಿಯ ಪುಟ್ಟ ಪುಸ್ತಕ ಒಬ್ಬನ ಅರಿವನ ಕದವನ್ನು ತೆರೆಯಲು ಕೀಲಿಕೈ ಆಯಿತು ಎನ್ನುವುದು ಒಂದು ಸಂತೋಷದ ಸಂಗತಿ. ಅದನ್ನು ಕೊಟ್ಟವನು ನಾನು ಎಂಬುದು ನನ್ನ ಸಾರ್ಥಕ ಭಾವ.
- ಯೋಗೇಶ್ ಮಾಸ್ಟರ್
IslamKannada News Portal
