Home / ಲೇಖನಗಳು / ಪವಿತ್ರ ಕುರ್‌ಆನ್, ಶ್ರೀ ನಾರಾಯಣ ಗುರು: ಪ್ರಾರ್ಥನೆಯ ಸಮಾನ ಪರಾಮರ್ಶೆ

ಪವಿತ್ರ ಕುರ್‌ಆನ್, ಶ್ರೀ ನಾರಾಯಣ ಗುರು: ಪ್ರಾರ್ಥನೆಯ ಸಮಾನ ಪರಾಮರ್ಶೆ

@ ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲು

ಪ್ರಾರ್ಥನೆಯೆಂಬುದು ನಂಬಿಕೆಯ ಗುರುತಾಗಿದೆ. ಆಸ್ತಿಕರನ್ನು ಮತ್ತು ನಾಸ್ತಿಕರನ್ನು ಬೇರ್ಪಡಿಸುವ ಚಿಹ್ನೆ. ಪ್ರಾರ್ಥನೆ ಎಲ್ಲ ಧರ್ಮದಲ್ಲೂ ಇದೆ. ಎಲ್ಲ ದೇವಭಕ್ತ ಮನುಷ್ಯರಲ್ಲಿಯೂ ಪ್ರಾರ್ಥನೆಗೆ ಪ್ರಥಮ ಸ್ಥಾನವಿದೆ. ನಮಾಝ್, ಪೂಜೆ, ತಪಸ್ಸು, ಧ್ಯಾನ, ಯೋಗ, ಕುರ್ಬಾನಿ ಇತ್ಯಾದಿ ಪ್ರಕಾರಗಳು ವಿವಿಧ ಧರ್ಮದಲ್ಲಿ ವಿವಿಧ ರೀತಿಯಲ್ಲಿ ಇದ್ದರೂ ಅದರ ಅಂತಿಮ ಗುರಿ ಏಕಾಂತದಿಂದ ಸೃಷ್ಟಿಕರ್ತನನ್ನು ನಮಿಸಿ ಬೇಡಿಕೊಂಡು ತನ್ನ ಅಗತ್ಯತೆಯನ್ನು ಪೂರೈಸಿಕೊಳ್ಳುವುದು, ತನ್ನ ನೋವುಗಳನ್ನು ಪಾಪಗಳನ್ನು ತೊಲಗಿಸುವುದು. ಪ್ರಾರ್ಥನೆಯಿಂದ ಪ್ರತಿಯೊಬ್ಬ ವಿಶ್ವಾಸಿಯೂ ಪ್ರಸನ್ನನಾಗುತ್ತಾನೆ.

ಪ್ರಾಕೃತಿಕ ವಿಕೋಪಗಳಿಂದ, ಅನಾರೋಗ್ಯದಲ್ಲಿ, ಆರ್ಥಿಕ ಸಂಕಷ್ಟದಲ್ಲಿ, ಜೀವನದ ಏರು-ಪೇರುಗಳಲ್ಲಿ, ಸೋಲು ಕಂಡಾಗ ಮನುಷ್ಯನಿಗೆ ಪ್ರಾರ್ಥನೆಯಿಂದಲೇ ಆತ್ಮಸಂತೃಪ್ತಿ ಉಂಟಾಗುತ್ತದೆ. ಮನುಷ್ಯನ ಪ್ರಯತ್ನಗಳೆಲ್ಲವೂ ವಿಫಲವಾದಾಗ ಪ್ರಾರ್ಥನೆಯೊಂದೇ ಶಕ್ತಿ ತುಂಬುತ್ತದೆ. ಪ್ರಾರ್ಥನೆ ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವೆ ಇರುವ ನೇರ ಸಂಭಾಷಣೆ. ಎಲ್ಲ ಜೀವಜಾಲಗಳಲ್ಲಿಯೂ ಪ್ರಾರ್ಥನೆಯ ಗುಣವಿದೆ. ಗಾಳಿ ಬೀಸುವುದು, ಮರದ ಗೆಲ್ಲುಗಳು ಅಲುಗಾಡುವುದು, ಸಮುದ್ರದ ತೆರೆ, ನದಿಯ ಹರಿವು ಇತ್ಯಾದಿಗಳನ್ನು ಸಂತರು, ಸೂಫಿಗಳು ಪ್ರಾರ್ಥನೆಗೆ ಹೋಲಿಸಿದ್ದಾರೆ.

ಜೀವನ ಮಂಗಳದಾಯಕವಾಗುವೆಂತೆ ಬೇಡುವ ಪ್ರಾರ್ಥನೆಗಳಲ್ಲಿ ಸ್ವಾರ್ಥ, ಸಾಮಾಜಿಕ ಬದ್ಧತೆ, ಕ್ಷಮೆ, ಆತ್ಮಸಂಸ್ಕರಣೆ, ಜ್ಞಾನೋದಯ, ದುಃಖ, ನೋವು ಎಲ್ಲವೂ ತುಂಬಿರುತ್ತದೆ. ಭಕ್ತನಿಗೆ ಭಗವಂತನ ಮೇಲಿರುವ ನಿಷ್ಕಲ್ಮಶ ಭರವಸೆಯೇ ಮನುಷ್ಯನ ಬದುಕಿಗಿರುವ ಏಕೈಕ ಪರಿಹಾರ ಮತ್ತು ನಿಷ್ಕಳಂಕ ಪ್ರಾರ್ಥನೆಯಿಂದಲೇ ಅವನ ಬೇಡಿಕೆಗಳು ಸಫಲವಾಗುತ್ತವೆ ಎಂಬುದು ವಿಶ್ವಾಸಿಗಳ ನಂಬಿಕೆ. ಪ್ರಾರ್ಥನೆಗೆ ಜಾತಿಯಿಲ್ಲ, ಧರ್ಮವಿಲ್ಲ, ಬೇಧಭಾವವಿಲ್ಲ, ವಿಭಜನೆಗಳಿಲ್ಲ, ತಾರತಮ್ಯವಿಲ್ಲ. ಪ್ರತಿಯೊಬ್ಬ ಅಡಿಯಾಳುವಿನ ಪ್ರಾರ್ಥನೆಯನ್ನು ಪರಮೇಶ್ವರನೂ ಸೃಷ್ಟಿದಾತನಾದ ಅಲ್ಲಾಹನೂ ಆಲಿಸುತ್ತಾನೆ. ಆದ್ದರಿಂದ ಪ್ರಾರ್ಥನೆ ಯಾವುದೇ ಕಲ್ಮಶವಿಲ್ಲದೆ ನಿಷ್ಕಳಂಕದಿಂದ ಕೂಡಿರಬೇಕು. ಜಗಕ್ಕೆ ಒಂದೇ ದೇವರು ಎಂದು ನಾರಾಯಣ ಗುರುಗಳು ಕಲಿಸಿದ ಪ್ರಾರ್ಥನೆ ಮತ್ತು ಕುರ್‌ಆನಿನ ಪ್ರಾರ್ಥನೆಯಲ್ಲಿ ಸಮಭಾವವಿದೆ. ದಿವ್ಯವಾಣಿ ಮತ್ತು ಗುರುವಾಣಿಯ ಪ್ರಾರ್ಥನೆಯ ಸಾಲುಗಳಲ್ಲಿರುವ ಸಮಾನತೆಗಳ ಬಗ್ಗೆ ಚರ್ಚಿಸೋಣ.

ಕುರ್‌ಆನ್‌ನಲ್ಲಿ ಪ್ರಾರ್ಥನೆ
ಕುರ್‌ಆನಿನ ಅಧ್ಯಾಯಗಳು ಪ್ರಾರ್ಥನೆಯಿಂದಲೇ ಪ್ರಾರಂಭವಾಗುತ್ತವೆ. ‘ಅಲ್ ಫಾತಿಹಾ’ ಎಂಬ ಪ್ರಥಮ ಸೂರ(ಅಧ್ಯಾಯ)ದಲ್ಲಿರುವ ಎಲ್ಲ ಸೂಕ್ತಗಳು ಪ್ರಾರ್ಥನೆಗಳಿಂದ ಕೂಡಿವೆ. ‘ಫಾತಿಹಾ’ ಎಂದರೆ ಪೀಠಿಕೆ ಅಥವಾ ಮಾತಿನ ಆರಂಭ ಎಂಬ ಅರ್ಥವಿದೆ.
ಕುರ್‌ಆನಿನ ಮೂಲಕ ಜಗದೊಡೆಯನಾದ ಅಲ್ಲಾಹನು ಸಕಲ ಮನುಷ್ಯರಿಗೆ ಕಲಿಸಿಕೊಟ್ಟ ಪ್ರಾರ್ಥನೆಯಾಗಿದೆ ಇದು. ದೇವನನ್ನು ಸ್ತುತಿಸಿ ಸ್ಮರಿಸಿ ಅವನ ನಾಮ ಜಪದಿಂದ ಆರಂಭ ವಾಗುವುದಾಗಿದೆ ಕುರ್‌ಆನಿನಲ್ಲಿ ಕಲಿಸಿದ ಪ್ರಾರ್ಥನೆ.

ಅಲ್ ಫಾತಿಹ:
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಅಲ್ಲಾಹನಿಗೆ ಸರ್ವಸ್ತುತಿ. ಅವನು ಸಕಲ ವಿಶ್ವದ ಪ್ರಭು,
ಪರಮ ದಯಾಳು ಕರುಣಾನಿಧಿ, ನಿರ್ಣಾಯಕ ದಿನದ ಅಧಿಪತಿ,
ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ.
ನಮಗೆ ಸನ್ಮಾರ್ಗವನ್ನು ತೋರಿಸು.
ನೀನು ಅನುಗ್ರಹಿಸಿದವರ ಮಾರ್ಗ, ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗವಲ್ಲ, ನೀನು ತೋರಿದ ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ. (ಕುರ್‌ಆನ್‌ –1: 1-7)

‘ಅಲ್ಲಾಹ್’ ಎಂಬ ಅರಬಿ ಪದವು ಆರಾಧ್ಯ, ದೇವ ಎಂಬ ಅರ್ಥವನ್ನು ಕೊಡುತ್ತದೆ. ಆರಾಧ್ಯ ದೇವನು ಏಕೈಕನು, ವಿಶ್ವದ ಒಡೆಯನಾಗಿರುವನು. ಅವನ ಹಿರಿಮೆ ಮತ್ತು ಉಪಕಾರಗಳನ್ನು ಒಪ್ಪಿಕೊಂಡು ಸಭ್ಯ ರೀತಿಯಲ್ಲಿ ಪ್ರಾರ್ಥಿಸಬೇಕೆಂದು ಕುರ್‌ಆನ್ ಹೇಳುತ್ತದೆ. ಸರ್ವಸ್ತುತಿಗಳು ಒಡೆಯನಿಗೆ ಮಾತ್ರ. ಅವನು ವಿಶಾಲ ಕೃಪಾದಾನಿಯಾಗಿದ್ದಾನೆ. ಪ್ರೀತಿ ಮತ್ತು ಭಯ ಅಲ್ಲಾಹನಿಗೆ ಮೀಸಲಿಡಬೇಕು. ಸತ್ಯ ಮತ್ತು ನ್ಯಾಯದ ಮಾರ್ಗದಲ್ಲಿ ನಡೆಯಲು ದೇವನು ಪ್ರತಿಯೊಬ್ಬನಿಗೆ ಶಕ್ತಿ ಕೊಡಬೇಕು. ದುರ್ಮಾರ್ಗದಲ್ಲಿ ನಡೆಯುವುದರಿಂದ ಮನುಷ್ಯನು ಅಂತಿಮವಾಗಿ ಇಹ ಮತ್ತು ಪರದಲ್ಲಿ ಸರ್ವನಾಶವಾಗುತ್ತಾನೆ. ನಿನ್ನ ಕ್ರೋಧಕ್ಕೆ ಪಾತ್ರರಾದವರ ಸಾಲಿನಲ್ಲಿ ನಮ್ಮನ್ನು ಸೇರಿಸಬೇಡ ಎಂಬ ಕಳಕಳಿಯ ವಿನಂತಿಯಾಗಿದೆ ಅಲ್ ಫಾತಿಹಾ ಅಧ್ಯಾಯದ ಒಟ್ಟು ಸಾರಾಂಶ. ಒಟ್ಟು ಏಳು ಸೂಕ್ತಗಳನ್ನು ಹೊಂದಿರುವ ಈ ಅಧ್ಯಾಯವು ಪ್ರವಾದಿ ಮುಹಮ್ಮದರ(ಸ) ಮಕ್ಕ ಜೀವನ ಕಾಲದಲ್ಲಿ ಅವತೀರ್ಣಗೊಂಡಿದೆ.

ಗುರುವಾಣಿಯಲ್ಲಿ ಪ್ರಾರ್ಥನೆ
ಶ್ರೀ ನಾರಾಯಣ ಗುರು ಶಿವಗಿರಿಯಲ್ಲಿ ಮಕ್ಕಳಿಗೆ ಪ್ರಾರ್ಥನೆ ಹೇಳಲು ಕಲಿಸಿಕೊಟ್ಟ ಪದ್ಯ ರೂಪವಾಗಿದೆ ‘ದೈವ ದಶಕಂ’. ದೇವರನ್ನು ಹಾಡಿ ಹೊಗಳುವ ಹತ್ತು ಪದ್ಯಗಳನ್ನೊಳಗೊಂಡ ಕೃತಿಯಾಗಿದೆ ಇದು. ದೇವನ ಏಕತೆಯನ್ನು ಸತ್ಯವನ್ನು ಈ ಕೃತಿಯ ಮೂಲಕ ವಿವರಿಸುತ್ತಾರೆ.
ಒಂದೇ ದೇವರು ಎಂಬ ತತ್ವಾದರ್ಶ ಪುರುಷರಾದ ಶ್ರೀ ನಾರಾಯಣ ಗುರು ಸಮಸ್ತ ಜನರ ಒಳಿತಿಗಾಗಿ ಬರೆದ ಪ್ರಾರ್ಥನೆಯಾಗಿದೆ ಇದು. ಐಹಿಕ ಸುಖಲೋಲುಪತೆಯಲ್ಲಿ ಮನುಷ್ಯ ಬಂಧಿಯಾಗಿದ್ದಾನೆ. ಜೀವನದ ಅರ್ಥ ಮತ್ತು ಗುರಿಯ ಬಗ್ಗೆ ಅವನು ಆಲೋಚಿಸುವುದಿಲ್ಲ. ಅಂತಹ ಅಸಂತೃಪ್ತ ಮಾನವ ಹೃದಯಗಳನ್ನು ಪರಿಶುದ್ಧಿಗೊಳಿಸಿ ದೇವ ಮಾರ್ಗದೆಡೆಗೆ ಕೊಂಡೊಯ್ಯುವುದಾಗಿದೆ ಇದರ ಉದ್ಧೇಶವೆಂದು ಅವರು ಹೇಳುತ್ತಾರೆ. ದೇವನೆಂಬ ಪ್ರಪಂಚದ ನಾವಿಕನನ್ನು, ಅವನ ಸೃಷ್ಟಿ ವೈಭವದ ರಹಸ್ಯವನ್ನು ತಿಳಿಯುತ್ತಾ ನಮ್ಮನ್ನು ಕಾಪಾಡು ಎಂದು ಕೇಳಿಕೊಳ್ಳುವ ಭಕ್ತನು ಗುರುವಾಣಿಯಲ್ಲಿ ಸ್ತುತಿಸುತ್ತಾ ಪ್ರಾರ್ಥನೆಯನ್ನು ಆರಂಭಿಸುತ್ತಾನೆ.

ದೈವ ದಶಕಂ
1. ದೇವನೇ ಕಾಪಾಡು ನೀನಿಲ್ಲಿ
ಕೈಯನ್ನು ಬಿಡದಂತೆ ನಮ್ಮನಿಲ್ಲಿ
ನೀನು ನಾವಿಕನು ನಿನ್ನ ಪದವು ಭವಾಬ್ದಿಗೆ
ಒಂದು ಆವಿಯ ಮಹತ್ತಾದ ನಾವೆ
2. ಒಂದೊಂದಾಗಿ ಎಣಿಸಿ ಎಣಿಸಿ
ಎಣಿಸುವ ಪದಾರ್ಥಗಳು ಮುಗಿದರೆ
ಆಗ ಉಳಿಯುವುದು, ಅದರ ಹಾಗೆ
ನಿನ್ನಲ್ಲಿ ನನ್ನ ಅಂತರಾತ್ಮವು ನಿಶ್ಚಲತೆ ಹೊಂದಬೇಕು
3. ಅನ್ನ ಅರಿವೆಯನ್ನು ತಡೆಯಿಲ್ಲದಂತೆ
ನೀಡಿ ರಕ್ಷಿಸು ನಮ್ಮನ್ನು
ಧನ್ಯರಾಗುವೆವು ನಾವು
ನೀನೋರ್ವನೇ ನಮಗೆ ಒಡೆಯನು
4. ಕಡಲು, ಅಲೆ, ಗಾಳೆ
ಆಳವೂ ಇದ್ದಂತೆ ನಾವುಗಳು
ಮಾಯೆಯಾ ನಿನ್ನ ಮಹಿಮೆಯಾ
ನೀನೆ ಎಂದು ಒಳಗೆ ತಿಳಿಯಬೇಕು
5. ನೀನು ತಾನೆ ಸೃಷ್ಟಿಯಾ ಸೃಷ್ಟಿ-
ಕರ್ತನೂ ಸೃಷ್ಟಿಜಾಲವೂ
ನೀನಲ್ಲ ಪ್ರಭುವೇ
ಸೃಷ್ಟಿಗೆಲ್ಲಾ ಸಾಮಗ್ರಿಯಾದವನು
6. ನೀನಲ್ಲವೇ ಮಾಯೆಯಾ ಮಾಯಾ-
ವಿಯಾ ಮಾಯಾ ವಿನೋದಕನು
ನೀನಲ್ಲವೇ ಮಾಯೆಯನ್ನು ಕಳೆದು
ಸಾಯುಜ್ಯವನ್ನು ಕೊಡುವ ಆರ್ಯನೂ
7. ನೀನು ಸತ್ಯ ಜ್ಞಾನಾನಂದನು
ನೀನೇ ವರ್ತಮಾನ, ಭೂತ,
ಭವಿಷ್ಯತ್ತೂ ಬೇರಲ್ಲ, ಮಾತಾಡುವ
ನುಡಿಯು ನೆನೆದೊಡೆ ನೀನೇ ಅಲ್ಲವೇ
8. ಒಳಗೂ ಹೊರಗೂ ತುಂಬಿರುವ
ಮಹಿಮೆಯುಳ್ಳ ನಿನ್ನ ಪದವನ್ನು
ಹೊಗಳುವೆವು ನಾವು
ಒಡೆಯನೇ ಜಯಿಸು
9. ಜಯವಾಗಲಿ ನೀ ಮಹಾದೇವ
ದೀನಾವನ ಪರಾಯಣ
ಜಯಿಸು ನೀ ಚಿದಾನಂದನೇ
ದಯಾಸಿಂಧುವಿಗೆ ಜಯವಾಗಲಿ
10. ಅಧಿಕ ಆಳವಿರುವ ನಿನ್ನ ಮಹತ್ತಾದ
ಕಡಲಲ್ಲಿ ನಾವೆಲ್ಲರೂ ಒಟ್ಟಾಗಿ
ಆಳಬೇಕು, ಬಾಳಬೇಕು ನಿತ್ಯ
ಬಾಳಬೇಕು ಆಳಬೇಕು ಸುಖ

‘ದೈವಮೇ…’ ಎಂದು ಕೂಗಿ ಕರೆಯುವಂತೆ ಆರಂಭವಾಗುವ ಈ ಪ್ರಾರ್ಥನೆಯಲ್ಲಿ ಜಗದ ನಾವಿಕನು ಒಬ್ಬನೆಂದು ಒಪ್ಪಿಕೊಂಡು ನಮ್ಮ ನ್ನು ಸಂರಕ್ಷಿಸಬೇಕೆಂದು ಮೊದಲನೆಯದಾಗಿ ಬೇಡಿಕೊಳ್ಳಲಾಗುತ್ತದೆ. ಉಡಲು ಬಟ್ಟೆ, ತಿನ್ನಲು ಆಹಾರ ಸಾಮಗ್ರಿಗಳನ್ನು ‘ಮನುಷ್ಯನು ಭೂಮಿಯಲ್ಲಿ ದುಡಿಯುವ ಮುಖಾಂತರ ಪಡೆಯುವುದಲ್ಲವೇ?’ ಎಂಬ ಯುಕ್ತಿವಾದಿಗಳ ಪ್ರಶ್ನೆಗಳಿಗೆ ಉತ್ತರವೆಂಬಂತೆ ಗುರುಗಳ ಈ ಶ್ಲೋಕ ಮೇಲ್ನೋಟಕ್ಕೆ ಮನುಷ್ಯನೇ ಆದರೂ ಅದರ ಹಿಂದಿರುವ ಸತ್ಯ ಶೋಧನೆಯಾಗಿದೆ ಈ ವಚನ.

ಸಂಸಾರ ಸಮುದ್ರದಲ್ಲಿ ಅಲೆಗಳಂತಿರುವ ನಮ್ಮನ್ನು ‘ನಿನ್ನ ಮಹಿಮೆ’ಯಿಂದ ಅನುಗ್ರಹಿಸು ಎನ್ನಲಾಗಿದೆ. ಮಹತ್ವವಿರುವವನು ದೇವನೊಬ್ಬನೇ ಎಂದು ವಿವರಿಸಿದೆ. ಸಕಲಚರಾಚರಗಳ ಸೃಷ್ಟಿಕರ್ತನೂ ಪ್ರತಿಯೊಂದು ಜೀವಿಗಳದಾತನೂ ಒಬ್ಬನೇ ಆಗಿದ್ದಾನೆ. ಪ್ರಪಂಚ ಸೃಷ್ಟಿಗೆ ಕಾರಣಕರ್ತನಾದ ದೇವನನ್ನು ಆರನೇ ಶ್ಲೋಕದಲ್ಲಿ ‘ಮಾಯೆ’ ಎಂದು ಕರೆಯಲಾಗಿದೆ. ದೇವನು ಸತ್ಯವಾಗಿದ್ದಾನೆ, ಜ್ಞಾನಿಯಾಗಿದ್ದಾನೆ. ವರ್ತಮಾನ, ಭೂತ ಮತ್ತು ಭವಿಷ್ಯವಾಗಿದ್ದಾನೆಂಬ ವಾಸ್ತವವನ್ನು ತಿಳಿಸಲಾಗಿದೆ. ದೇವನು ಸರ್ವಂತರ್ಯಾಮಿ ಮತ್ತು ಸರ್ವವ್ಯಾಪಿಯಾಗಿದ್ದಾನೆ. ‘ಜಯವಾಗಲಿ ಮಹಾದೇವ’ ಎನ್ನುವ ಸ್ತುತಿಯೊಂದಿಗೆ ದೈವದಶಕಂ ಸಾಲುಗಳು ಕೊನೆಗೊಳ್ಳುತ್ತವೆ. ‘ದೈವದಶಕಂ’ನ ಹತ್ತು ಪದ್ಯಗಳಲ್ಲಿಯೂ ದೇವನೆಂಬ ಸತ್ಯದ ಸಾಕ್ಷಾತ್ಕಾರದಿಂದಲೇ ಜೀವನ ಸಫಲವಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನು 1914ರಲ್ಲಿ ರಚಿಸಲಾಗಿದೆ.

ಇತರ ಪ್ರಾರ್ಥನೆಗಳು
ಕೃಪೆಯನಿಕ್ಕುತಾ ಎನ್ನಲನಂಗರಸ
ಕಾಯ ಕಿತ್ತೊಗೆದು ಕರವ ತೊಳೆದು
ಮಾಗಿ ಬರಿ ಮುಕುತಿ ಸುರಿದು ಹರಿವ
ಹೊಂಬಳ್ಳಿಯ ಕಾಲ್ಗಳ ನೀಡೆಲೇ ನೀ
(ಶಿವ ಪ್ರಸಾದ ಪಂಚಕ: 5)
ದೇವನನ್ನು ಸ್ಮರಿಸಿ ಸ್ತುತಿಸಿ ತನ್ನಲ್ಲಿರುವ ಕಾಮ ಮೋಹವನ್ನು ನೀಗಿಸಿ ಶುದ್ಧಿಯಾಗಿಸುವ ಬೇಡಿಕೆಯಾಗಿದೆ ಇದು. (ಪ್ರೊಫೆಸರ್ ಜಿ. ಬಾಲಕೃಷ್ಣನ್ ನಾಯರ್‌ರವರು ಹೀಗೆ ವ್ಯಾಖ್ಯಾನಿಸಿದ್ದಾರೆ, “ಆದಮ್ ಮತ್ತು ಹವ್ವಾ: ಆದಮ್ ದೇವನ ಆಜ್ಞೆಯನ್ನು ಪಾಲಿಸದೆ ಪ್ರಪಂಚ ವೃಕ್ಷದ ಕಾಮಕಾಯ ತಿಂದರು. ಅದರ ಫಲವಾಗಿಯಾಗಿದೆ ಮನುಷ್ಯ ಪರಂಪರೆ ಇಂದು ಅನುಭವಿಸುತ್ತಿರುವ ದುರಂತ. ಆದ್ದರಿಂದ ಇಲ್ಲಿ ಭಕ್ತನು ಭಗವಂತನಲ್ಲಿರುವ ಬೇಡಿಕೆ ನನ್ನಿಂದ ಕಾಮ ಮೋಹವನ್ನು ನೀಗಿಸಿ ಶುದ್ಧಿಯಾಗಿಸು.” (ಶ್ರೀ ನಾರಾಯಣ ಗುರು ದೇವೋಕೃತಿಗಳ್ ಸಂಪೂರ್ಣ ವ್ಯಾಖ್ಯಾನ ಭಾಗ-1, ಪುಟ 184-185)

ಕುರ್‌ಆನ್‌ನಲ್ಲಿ ಹೀಗಿದೆ, “ಓ ನಮ್ಮ ಪ್ರಭು! ನೀನು ನಮ್ಮನ್ನು ನೇರಮಾರ್ಗದಲ್ಲಿ ಹಾಕಿರುತ್ತಾ ನಮ್ಮ ಮನಸ್ಸುಗಳನ್ನು ಪುನಃ ದೋಷಗಳಲ್ಲಿ ಸಿಲುಕಿಸಬೇಡ. ನೀನು ನಿನ್ನ ಮಹಾ ಅನುಗ್ರಹದಿಂದ ಕೃಪೆಯನ್ನು ನೀಡು. ನೀನೇ ನೈಜ ಮಹಾದಾನಿಯಾಗಿರುತ್ತಿ.” (ಆಲಿ ಇಮ್ರಾನ್: 2)

ಈ ಲೋಕವನ್ನೆಲ್ಲಾ ಕ್ಷಣ ಮಾತ್ರದಿ ಸೃಜಿಸಿ
ಬರಿ ನೋಟದಿಂದ ಪಾಲಿಸುವನು ಸದಾ
ಈ ಲೀಲೆಗಳಾಡುವವನು ಪಾಲಿಸಬೇಕು ನನ್ನ
ಕೋಲತ್ತುಕರ ಗುಡಿಯಲ್ಲಿ ನೆಲೆಸಿರುವ ಪರಮೇಶ್ವರನೇ
(ಕೋಲತ್ತೀರೇಶಸ್ತಮ: 2)
ದಾರಿದ್ರ‍್ಯ ಮಹದುಃಖ ನನ್ನಲ್ಲಿ ಬರದಿರಲಿ
ದೂರ ಸರಿಯಲಿ ಮದವೆಂದಿಗೂ ಸುಜನರ
ಸೇರಿ ವಾಸಿಸಲೊಂದು ಭಾಗ್ಯ ಬರಬೇಕು ಶ್ರೀ
ಕೂಲತ್ತುಕರ ಗುಡಿಯಲ್ಲಿ ನೆಲೆಸಿರುವ ಪರಮೇಶ್ವರನೇ
(ಕೋಲತ್ತೀರೇಶತ್ತಮ: 7)

“ಭೂಮಿ ಆಕಾಶಗಳ ನಿರ್ಮಾತೃವೇ! ನೀನೇ ಇಹದಲ್ಲೂ ಪರದಲ್ಲೂ ನನ್ನ ಪೋಷಕನಾಗಿರುತ್ತಿ. ನನ್ನ ಅವಸಾನವನ್ನು ಆಜ್ಞಾಪಾಲನೆಯ ಅವಸ್ಥೆಯಲ್ಲಿಯೇ ಮಾಡು. ಕೊನೆಗೆ ನನ್ನನ್ನು ಸಜ್ಜನರೊಂದಿಗೆ ಸೇರಿಸು.” (ಯೂಸುಫ್: 101)

ಹೀಗೆ ಹಲವು ಶ್ಲೋಕ ಮತ್ತು ಗುರುಗಳು ರಚಿಸಿದ ವಾಣಿಯು ಪವಿತ್ರ ಕುರ್‌ಆನ್‌ನಲ್ಲಿ ಕಲಿಸಿದ ಪ್ರಾರ್ಥನೆಗಳಲ್ಲಿ ಸಮಾನ ಪರಾಮರ್ಶೆಗಳನ್ನು ಕಾಣಲು ಸಾಧ್ಯವಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …