Home / ಲೇಖನಗಳು / ಯುದ್ಧ ಪ್ರಿಯರ ನಡುವೆ ಬದುಕಿದ ಯುದ್ಧ ವಿರೋಧಿ ಪ್ರವಾದಿ

ಯುದ್ಧ ಪ್ರಿಯರ ನಡುವೆ ಬದುಕಿದ ಯುದ್ಧ ವಿರೋಧಿ ಪ್ರವಾದಿ

ಭಿನ್ನಾಭಿಪ್ರಾಯಗಳು ಮನುಷ್ಯನ ಸಹಜ ಪ್ರಕೃತಿ. ಮಾತು ಕಲಿಯುವಾಗಲೇ ಮನುಷ್ಯನ ಈ ಗುಣ ಪ್ರಕಟವಾಗುತ್ತದೆ. ನಾನು ಇಷ್ಟಪಟ್ಟದ್ದನ್ನು ನನ್ನ ಮಕ್ಕಳು ಇಷ್ಟಪಡಬೇಕೆಂದಿಲ್ಲ. ಹಾಗೆಯೇ ಮನುಷ್ಯನ ಸಾಮಾಜಿಕ ರಂಗ,ರಾಜಕೀಯ ರಂಗದಲ್ಲಿಯೂ ಈ ಭಿನ್ನತೆ ಕಂಡು ಬರುತ್ತದೆ. ಅಭಿಪ್ರಾಯಗಳನ್ನು ಗೌರವಿಸಬೇಕು. ಭಿನ್ನಾಭಿಪ್ರಾಯಗಳು ಜಗಳಕ್ಕೆ ಕಾರಣವಾಗಬಾರದು. ಕುಟುಂಬದ ಸಮಸ್ಯೆಯೇ ಇರಲಿ, ದೇಶದ ಸಮಸ್ಯೆಯೇ ಇರಲಿ, ಒಂದೇ ಸಮೂಹವೇ ಆಗಿರಲಿ, ಎರಡು ಭಿನ್ನ ಸಮೂಹವೇ ಆಗಿರಲಿ ಪರಸ್ಪರ ಸಮಾಲೋಚಿಸಿ ಒಂದು ನಿರ್ಧಾರಕ್ಕೆ ಬಂದರೆ ಆ ನಿರ್ಧಾರದಲ್ಲಿ ದೇವನ ಮೇಲೆ ಭಾರ ಹಾಕಿ ಮುಂದುವರಿದರೆ ಸಮಸ್ಯೆಗಳು, ಜಗಳ, ಸಂಘರ್ಷಗಳಿಗೆ ಅವಕಾಶವಿರುವುದಿಲ್ಲ.

ಮುಹಮ್ಮದ್ (ಸ) ಜೀವನ ಅಧ್ಯಯನ ಮಾಡಿದರೆ ಪರಸ್ಷರ ಸಮಾಲೋಚನೆ, ಎಲ್ಲರೊಂದಿಗೂ ಶಾಂತಿಯ ಒಪ್ಪಂದಗಳೇ ಕಂಡು ಬರುತ್ತದೆ. ಯುವಕರಾಗಿದ್ದಾಗ ಮುಹಮ್ಮದ್ (ಸ) ರು ಮಕ್ಕಾದ ಜನರೊಂದಿಗೆ ಸ್ದದೇಶಕ್ಕಾಗಿ ಯುದ್ದದಲ್ಲಿ ಪಾಲ್ಗೊಂಡಿದ್ದರು. ಅದರ ನಂತರ ಶಾಂತಿ ಸಂಧಾನದಲ್ಲಿಯೂ ಪಾಲುಗೊಂಡಿದ್ದರು. ಮಕ್ಕಾದ ಜನತೆ ಯುದ್ಧ ಪ್ರಿಯರಾಗಿದ್ದರು ಎಂಬುದು ಬೇರೆ ಹೇಳಬೇಕಾಗಿಲ್ಲ. ಆಗ ಮುಹಮ್ಮದರಿಗೆ(ಸ) ದಿವ್ಯವಾಣಿ ಅವತೀರ್ಣವಾಗಿರಲಿಲ್ಲ. ಆ ಯುದ್ದದ ಹೆಸರು ಫುಜ್ಜಾರ್. ಯುದ್ಧದ ನಾಶ ನಷ್ಟ ಕಂಡು, ಅನಾಥರು, ವಿಧವೆಯರನ್ನು ಕಂಡು ಮುಹಮ್ಮದರು ಚಿಂತಾಕ್ರಾಂತರಾಗಿ ಹಿರಾ ಬೆಟ್ಟದಲ್ಲಿ ಧ್ಯಾನಾಸಕ್ತರಾಗುತ್ತಿದ್ದರು.

ನಲ್ವತ್ತು ವರ್ಷದ ಪ್ರಾಯದಲ್ಲಿ ದಿವ್ಯವಾಣಿ ಅವತೀರ್ಣವಾಯಿತು. ಪತ್ನಿ ಖದೀಜ (ರ) ಮೊದಲು ನಂಬಿದರು. ಸ್ನೇಹಿತ ಅಬೂಬಕ್ಕರ್(ರ) ಎರಡನೆಯವರಾದರು. ಕುಟುಂಬದಲ್ಲಿ ಹೆಚ್ಚಿನವರು ಪ್ರವಾದಿತ್ವವನ್ನು ಧಿಕ್ಕರಿಸಿದರು. ತನ್ನವರೇ ಕಿರುಕುಳ ನೀಡಿದರು. ಪ್ರವಾದಿಯಾಗುವುದಕ್ಕಿಂತ ಮುಂಚೆ ನಡೆದ ಫುಜ್ಜಾರ್ ಯುದ್ಧದ ಬಳಿಕ ಒಂದೇ ಒಂದು ಯುದ್ಧ ಪ್ರವಾದಿಯವರ ನಾಡಾದ ಮಕ್ಕಾದಲ್ಲಿ ನಡೆಯಲಿಲ್ಲ.

ದಿವ್ಯವಾಣಿಯನ್ನೂ ಮುಹಮ್ಮದರ ಪ್ರವಾದಿತ್ವವನ್ನೂ ಧಿಕ್ಕರಿಸಿದಾಗಲೂ ಸಂಗಾತಿಗಳಿಂದ ಸಂಘರ್ಷವಾಗಲಿಲ್ಲ. ಮುಹಮ್ಮದ್(ಸ) ಮದೀನಾಕ್ಕೆ ವಲಸೆ ಹೋದಾಗ ವಿರೋಧಿಗಳು ಮದೀನಾದಲ್ಲಿದ್ದ ಪ್ರವಾದಿಯನ್ನೂ ಸಂಗಾತಿಗಳನ್ನೂ ದಮನಿಸಲು ಪ್ರಯತ್ನಿಸಿದರು. ಶಾಂತಿ ಒಪ್ಪಂದ, ವಚನ ಪಾಲನೆ, ಸಮಾಲೋಚನೆಯೇ ಮುಹಮ್ಮದ್ (ಸ)ರ ಪ್ರವಾದಿತ್ವದಲ್ಲಿ ನಮಗೆ ಸಿಗುವ ಪಾಠ. ಪ್ರಸಿದ್ಧವಾದ ಹುದೈಬಿಯ ಸಂಧಿ ಕೂಡ ವಿರೋಧಿಗಳ ಬೇಡಿಕೆಗಳಿಗೆ ಬದ್ಧವಾಗಿತ್ತು.

ಇಂದು ಸಾಮ್ರಾಜ್ಯಶಾಹಿಗಳು ಅಪಪ್ರಚಾರ ಮಾಡುವಂತೆ ಇಸ್ಲಾಮ್ ಯುದ್ಧಕ್ಕೆ ಆಸ್ಪದ ಕೊಡಲಿಲ್ಲ. ಭಯೋತ್ಪಾದನೆಯನ್ನು ಪೋಷಿಸಲಿಲ್ಲ. ಎರಡನ್ನೂ ವಿರೋಧಿಸಿದೆ. ಒಂದು ವೇಳೆ ಶತ್ರುಗಳು ಏರಿ ಬಂದು ಯುಧ್ಧವೇ ಅನಿವಾರ್ಯವಾದರೆ ಮಕ್ಕಳು ಮಹಿಳೆಯರು ಆಸ್ತಿಪಾಸ್ತಿಗಳ ನಾಶದ ಬಗ್ಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.

ಮಾತು ಮಾತಿಗೂ ಖಡ್ಗ ಎತ್ತುತ್ತಿದ್ದ, ಪ್ರಯಾಣಿಸುವಾಗ ಖಡ್ಗ ಹಿಡಿದು ನಡೆಯುತ್ತಿದ್ದ ಅಜ್ಞಾನಿ ಅರಬರನ್ನು ನಿರ್ಭೀತಿಯಿಂದ, ಶಾಂತಿಯಿಂದ ಖಡ್ಗವಿಲ್ಲದೆ ಸಂಚರಿಸುವಂತೆ ಮಾಡಿರುವುದು ಮಾತ್ರವಲ್ಲ ಇಂದಿಗೂ ಪ್ರವಾದಿಯ ಅನುಯಾಯಿಗಳು ಬರಿಗೈಯ್ಯಲ್ಲಿ ಸಂಚರಿಸುವುದು ದೇವನು ಕಲಿಸಿದ ಧರ್ಮ ಶಾಂತಿಯ, ಕರುಣೆಯ ಧರ್ಮ ಎಂಬುದರ ಸ್ಪಷ್ಟ ನಿದರ್ಶನ.

✍️ಶಮೀರ್ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …