Home / ಪ್ರಶ್ನೋತ್ತರ / ಗುಲಾಮಗಿರಿಯನ್ನು ನಿಷೇಧಿಸದಿರಲು ಕಾರಣವೇನು?

ಗುಲಾಮಗಿರಿಯನ್ನು ನಿಷೇಧಿಸದಿರಲು ಕಾರಣವೇನು?

ಇಸ್ಲಾಮ್ ಗುಲಾಮತನವನ್ನು ನಿಷೇಧಿಸಿಲ್ಲವೆಂದು ನಾನು ಭಾವಿಸಿದ್ದೇನೆ. ಹಾಗಿದ್ದರೆ ಸಮಾನತೆ ಹಾಗೂ ನ್ಯಾಯದ ಕುರಿತು ಮಾತನಾಡಲು ಇಸ್ಲಾಮಿಗೆ ಯಾವ ಅಧಿಕಾರವಿದೆ?

ಮನುಷ್ಯರೆಲ್ಲಾ ಒಂದೇ ದೇವನ ಸೃಷ್ಟಿಗಳೆಂದು, ಒಂದೇ ತಂದೆ ತಾಯಿಯ ಮಕ್ಕಳೆಂದು ಇಸ್ಲಾಮ್ ಕಲಿಸುತ್ತದೆ. ಆದ್ದರಿಂದ ಅವರ ನಡುವೆ ಭೇದಭಾವ ಸಲ್ಲದೆಂದು ಅದು ಆಜ್ಞಾಪಿಸುತ್ತದೆ, ‘ಮನುಷ್ಯರೇ, ನಿಮ್ಮನ್ನು ಒಂದು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಲಾಗಿದೆ. ನಿಮ್ಮನ್ನು ಕುಲಗೋತ್ರಗಳಾಗಿಯೂ, ಸಮುದಾಯಗಳಾಗಿಯೂ ವಿಂಗಡಿಸಿರುವುದು ನೀವು ಪರಸ್ಪರ ಪರಿಚಯ ಪಡುವ ಸಲುವಾಗಿ ಮಾತ್ರ.’ (ಪವಿತ್ರ ಕುರ್‌ಆನ್ 49:13)

ಪ್ರವಾದಿಯವರು ಹೇಳುತ್ತಾರೆ: ‘ನಿಶ್ಚಯವಾಗಿಯೂ ನಿಮ್ಮ ದೇವನು ಒಬ್ಬನೇ ನಿಮ್ಮೆಲ್ಲರ ತಂದೆಯೂ ಒಬ್ಬರೇ. ಎಲ್ಲರೂ ಆದಮನ ಮಕ್ಕಳು ಆದಮರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ. ಆದ್ದರಿಂದ ಅರಬನಿಗೆ ಅರಬೇತರನಿಗಿಂತಲೋ, ಬಿಳಿಯನಿಗೆ ಕರಿಯನಿಗಿಂತಲೂ ಯಾವುದೇ ಶ್ರೇಷ್ಠತೆಯಿಲ್ಲ ದೇವಭಕ್ತಿಯ ಹೊರತು.’ ( ಮುಸ್ಲಿಂ, ಅಬುದಾವೂದ್)

ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬುದು ಇಸ್ಲಾಮಿನ ಸಿದ್ಧಾಂತ. ಮಾನವ ಹಕ್ಕುಗಳ ವಿಚಾರದಲ್ಲಿ ಸರ್ವರೂ ಸಮಾನರು, ಸಂಪತ್ತು, ಸ್ಥಾನಮಾನಗಳು ಅವರಿಗೆ ವಿಶೇಷ ಹಕ್ಕನ್ನು ಕರುಣಿಸುವುದಿಲ್ಲ. ಮಾತ್ರವಲ್ಲ ಅಂತಹ ಅಸಮಾನತೆಯನ್ನು ಅದು ತೀವ್ರವಾಗಿ ಖಂಡಿಸುತ್ತದೆ.

ಇಷ್ಟೆಲ್ಲಾ ಇರುವಾಗಲೂ ಇಸ್ಲಾಮ್ ಗುಲಾಮತನವನ್ನು ನಿಷೇಧಿಸಲಿಲ್ಲವೇಕೆ ಎಂಬ ಪ್ರಶ್ನೆಯು ವಿಶಾಲವಾದ ವಿವರಣೆಯನ್ನು ಬಯಸುತ್ತದೆ.

1. ಪ್ರವಾದಿ ಮುಹಮ್ಮದ್ (ಸ) ರ ಕಾಲದಲ್ಲಿ ವಿಶ್ವದಲ್ಲಿ ಕ್ರೂರವಾದ ಗುಲಾಮಗಿರಿಯು ವ್ಯಾಪಕವಾಗಿತ್ತು. ಪ್ರಾಚೀನ ರೋಮ್‌ನಲ್ಲಿ ಗುಲಾಮರು ಜಾನುವಾರುಗಳಂತೆ ಮಾರಾಟ ವಾಗುವ ವ್ಯಾಪಾರ ಸರಕಾಗಿದ್ದರು. ತಪ್ಪಿಸಿಕೊಳ್ಳದಿರಲು ಕಾಲುಗಳಿಗೆ ಭಾರವಾದ ಸರಪಳಿಯನ್ನು ಬಿಗಿದ ಸ್ಥಿತಿಯಲ್ಲಿ ಅವರು ಕಠಿಣವಾದ ಕೆಲಸವನ್ನು ಮಾಡುತ್ತಿದ್ದರು. ಅವರ ವಾಸ ಸ್ಥಳವು ಜಾನುವಾರುಗಳ ಹಟ್ಟಿಯಂತಿತ್ತು. ಆಹಾರದ ಹೊರತು ಬೇರಾವ ಹಕ್ಕುಗಳು ಅವರಿಗಿರಲಿಲ್ಲ, ಅದು ಕೂಡ ಯಜಮಾನ ತಿಂದುಳಿದ ಆಹಾರವಾಗಿತ್ತು. ಚಾಟಿಯೇಟಿಗೆ ಬೆನ್ನು ತೋರಿಸಬೇಕಾದವರಾಗಿದ್ದರು. ಗೂಳಿಕಾಳಗದಂತೆ ಗುಲಾಮರ ನಡುವೆಯೂ ಕಾಳಗವನ್ನು ಏರ್ಪಡಿಸುವುದು ಸಾಮಾನ್ಯವಾಗಿತ್ತು. ಹೀಗೆ ಪರಸ್ಪರ ಹೊಡೆದಾಡಿ ಸಾಯುವುದನ್ನು ವೀಕ್ಷಿಸುವುದು ಯಜಮಾನರಿಗೆ ವಿನೋದವಾಗಿತ್ತು.

ಭಾರತದ ಸ್ಥಿತಿಯೂ ಭಿನ್ನವಾಗಿರಲಿಲ್ಲ, ಭಾರತೀಯ ಜಾತಿ ವ್ಯವಸ್ಥೆಯ ಆಧಾರದಲ್ಲಿ ಗುಲಾಮಗಿರಿ ಚಾಲ್ತಿಯಲ್ಲಿತ್ತು. ಆದ್ದರಿಂದ ಅದನ್ನು ದೇವವಿಧಿ ಎಂದು ಪರಿಗಣಿಸಲಾಗುತ್ತಿತ್ತು. ಅಮೇರಿಕಾ, ಆಫ್ರಿಕಾಗಳಲ್ಲೂ ಇತ್ತೀಚಿಗಿನವರೆಗೂ ಕ್ರೂರವಾದ ಗುಲಾಮ ಪದ್ಧತಿ, ವರ್ಣ ಭೇದ ನೀತಿ ನೆಲೆನಿಂತಿತ್ತು. ಇತರ ಪಾಶ್ಚಾತ್ಯ ದೇಶಗಳ ಸ್ಥಿತಿಯೂ ಭಿನ್ನವಾಗಿರಲಿಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ಲಾಮ್ ಈ ವಿಷಯದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿತು. ಮೊದಲನೇಯದಾಗಿ ಗುಲಾಮರ ಕುರಿತು ಸಮಾಜದಲ್ಲಿದ್ದ ಭಾವನೆಗಳಲ್ಲಿ ಸಂಪೂರ್ಣ ಬದಲಾವಣೆಯನ್ನು ಸೃಷ್ಟಿಸಿತು. ಗುಲಾಮರು ಇತರ ಮನುಷ್ಯರಂತೆಯೇ ಎಂದು ಘೋಷಿಸಿತು. ಆ ಪ್ರಜ್ಞೆಯನ್ನು ಎಲ್ಲರಲ್ಲೂ ಬೆಳೆಸಲು ಪ್ರಯತ್ನಿಸಿತು. ಅಲ್ಲಾಹನು ಆದೇಶಿಸಿದನು: ‘ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ, ಸಂಬಂಧಿಕರೊಂದಿಗೂ, ಅನಾಥರೊಂದಿಗೂ, ನಿರ್ಗತಿಕರೊಂದಿಗೂ ಆಪ್ತರಾದ ನೆರೆಹೊರೆಯವರೊಂದಿಗೂ, ಅನುಚರರರೊಂದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ ದಾಸಿಯರೊಂದಿಗೂ ಉತ್ತಮ ರೀತಿಯಿಂದ ವರ್ತಿಸಿರಿ. ದುರಂಕಾರ ಹೊಂದಿರುವ ಗರ್ವಿಷ್ಟನನ್ನೂ ಆತ್ಮಸ್ತುತಿಗೈಯುವವನನೂ ಅಲ್ಲಾಹನು ಮೆಚ್ಚುವುದಿಲ್ಲ.’ (ಪವಿತ್ರ ಕುರ್‌ ಆನ್ 4: 36)

ಪ್ರವಾದಿವರ್ಯರು ಹೇಳಿರುವರು: ‘ಅವರು ನಿಮ್ಮ ಸಹೋದರರೂ, ಬಂಧುಗಳೂ ಆಗಿದ್ದಾರೆ. ನಿಮ್ಮ ಕೈ ಅಧೀನದಲ್ಲಿರುವ ಸಹೋದರನಿಗೆ ನೀವು ತಿನ್ನುಂವತಹ ಆಹಾರ ಹಾಗೂ ತಾನು ಧರಿಸುವಂತಹ ವಸ್ತ್ರವನ್ನೇ ನೀಡಬೇಕು. ಅವರಿಗೆ ಅಸಾಧ್ಯವಾದ ಕಾರ್ಯವನ್ನು ವಹಿಸಿಕೊಡಬಾರದು ಅಥವಾ ಕಷ್ಟಕರವಾದ ಕೆಲಸವನ್ನು ವಹಿಸಿಕೊಡಬೇಕಾದಾಗ ನೀವೂ ಸಹಾಯ ಮಾಡಿರಿ.’ (ಬುಖಾರಿ)

‘ಇದು ನನ್ನ ಗುಲಾಮ, ಇದು ನನ್ನ ಗುಲಾಮಸ್ತ್ರೀ’ ಎಂದು ಹೇಳಬಾರದೆಂದು ಕಲಿಸಿದ ಪ್ರವಾದಿವರ್ಯರು ‘ಅವರನ್ನು ನಿಮಗೆ ಅಧೀನಗೊಳಿಸಿದ ಅಲ್ಲಾಹನು ನಿಮ್ಮನ್ನು ಅವರ ಅಧೀನಕ್ಕೆ ತರಲು ಶಕ್ತನು’ ಎಂದು ಸಮೂಹವನ್ನು ಎಚ್ಚರಿಸಿದರು.

ಪೈಗಂಬರರು ಹೇಳಿದರು: ‘ಯಾರಾದರೂ ತನ್ನ ಗುಲಾಮನನ್ನು ಕೊಂದರೆ ನಾವು ಅವನನ್ನು ಕೊಲ್ಲುವೆವು. ಯಾರಾದರೂ ತನ್ನ ಗುಲಾಮನ ಅಂಗಚ್ಛೇದ ಮಾಡಿದರೆ ನಾವು ಅವನ ಅಂಗಚ್ಛೇದ ಮಾಡುವೆವು, ಯಾರಾದರೂ ಗುಲಾಮನನ್ನು ಷಂಡೀಕರಣಗೊಳಿಸಿದರೆ, ನಾವು ಅವನನ್ನು ಷಂಡನನ್ನಾಗಿ ಮಾಡುವೆವು.” (ಬುಖಾರಿ ಮುಸ್ಲಿಂ) ಗೌರವಪೂರ್ಣ ಆಹಾರ, ವಸ್ತ್ರ ವಸತಿಯನ್ನು ಕಡ್ಡಾಯಗೊಳಿಸಿದ ಇಸ್ಲಾಮ್ ಗುಲಾಮರ ಸುರಕ್ಷಿತತೆಯನ್ನು ಭದ್ರಗೊಳಿಸಿತು. ಇತರ ಸ್ತ್ರೀಯರಿಗೆ ವಿವಾಹ ವೇಳೆಯಲ್ಲಿ ಮಹ್ರ್ (ವಿವಾಹಧನ) ಕಡ್ಡಾಯಗೊಳಿಸಿದಂತೆ ಗುಲಾಮ ಸ್ತ್ರೀಯರಿಗೂ ನಿಶ್ಚಯಿಸಿತು. ಪವಿತ್ರ ಕುರ್‌ಆನ್ ಹೇಳುತ್ತದೆ: ”ನಿಮ್ಮಲ್ಲಾರಾದರೂ ಕುಲೀನ ಮುಸ್ಲಿಮ್ ಸ್ತ್ರೀ (ಮುಹ್ಸನಾತ್)ಯರೊಂದಿಗೆ ವಿವಾಹ ಮಾಡಿಕೊಳ್ಳುವಷ್ಟು ಸ್ಥಿತಿವಂತನಾಗಿರದಿದ್ದರೆ ನಿಮ್ಮ ಸ್ವಾಧೀನದಲ್ಲಿರುವ ವಿಶ್ವಾಸಿನಿಯರಾದ ದಾಸಿಯರ ಪೈಕಿ ಯಾರೊಂದಿಗಾದರೂ ವಿವಾಹ ಮಾಡಿಕೊಳ್ಳಲಿ, ಅಲ್ಲಾಹನು ನಿಮ್ಮ ವಿಶ್ವಾಸವನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ. ನೀವೆಲ್ಲರೂ ಒಂದೇ ವರ್ಗಕ್ಕೆ ಸೇರಿದವರು. ಆದುದರಿಂದ ನೀವು ಅವರ ಪೋಷಕರ ಅನುಮತಿಯಿಂದ ಅವರೊಂದಿಗೆ ವಿವಾಹ ಮಾಡಿಕೊಳ್ಳಿರಿ ಮತ್ತು ಅವರ ವಿವಾಹ ಧನವನ್ನು ಅವರಿಗೆ ಸಲ್ಲಿಸಿರಿ.” (4:26) ಪ್ರವಾದಿ(ಸ) ರು ಹೇಳುತ್ತಾರೆ: ‘ನೀವು ಅವರನ್ನು ಗೌರವಿಸಿ ಮತ್ತು ಅನುಸರಿಸಿ, ನಿಮ್ಮ ನಾಯಕನಾಗಿ ಒಣಗಿದ ದ್ರಾಕ್ಷಿಯಂತಹ ತಲೆಗೂದಲಿರುವ ಗುಲಾಮ ನೀಗ್ರೋ ವ್ಯಕ್ತಿ ಆಯ್ಕೆಯಾದರು ಸರಿ.’

ಖಲೀಫಾ ಉಮರ್ (ರ) ಮರಣಾಸನ್ನರಾಗಿದ್ದ ಸಂದರ್ಭದಲ್ಲಿ ಭಾವೀ ಖಲೀಫರ ಕುರಿತ ಚರ್ಚೆಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದರು: ‘ಅಬೂಹುದೈಫ ಬಿಡುಗಡೆಗೊಳಿಸಿದ ಗುಲಾಮ ರಾಗಿದ್ದ ಸಲೀಮ್ ಬದುಕಿದ್ದಿದ್ದರೆ ಅವರನ್ನು ನಾನು ಆಡಳಿತಗಾರನನ್ನಾಗಿ ನೇಮಿಸುತ್ತಿದ್ದ!’

ಅಬೂಬಕರ್ ಸಿದ್ದೀಕ್, ಉಮರುಲ್ ಫಾರೂಕ್ ರಂತಹ ಬಹಳ ಪ್ರಮುಖರಾದ ಅನುಚರರನ್ನೊಳಗೊಂಡ ತಂಡದ ಸೇನಾಧಿಪತಿಯಾಗಿ ವಿಮೋಚಿತ ಗುಲಾಮನಾದ ಝೈದ್‌ರ ಮಗ ಉಸಾಮ(ರ) ಆಯ್ಕೆಯಾದಾಗ ಪ್ರವಾದಿಯವರು ಝೈದ್‌ರಿಗೆ ತನ್ನ ಪಿತೃ ಸಹೋದರಿಯ ಪುತ್ರಿ ಝೈನಬರನ್ನು ವಿವಾಹ ಮಾಡಿಸಲು ಸಿದ್ಧರಾದರು.

ಸ್ವತಂತ್ರ್ಯ ವ್ಯಕ್ತಿಗಳ ಮತ್ತು ಗುಲಾಮರ ನಡುವೆ ಸಹೋದರತೆಯನ್ನು ಸ್ಥಾಪಿಸುವುದು ಪ್ರವಾದಿವರ್ಯರ ದಿನಚರಿಯಾಗಿತ್ತು. ನಿಗೋ ಗುಲಾಮರಾಗಿದ್ದ ಬಿಲಾಲ್, ಖುಷ್ ಅರ್ಮೀ ಗೋತ್ರದವರಾದ ಖಾಲಿದುಬ್ನು ರುದೈಹರ ನಡುವೆ, ಗುಲಾಮರಾಗಿದ್ದ ಖಾರಿಜಾಬ್ನು ಝೈದ್‌ ಹಾಗೂ ಸ್ವಂತ ಚಿಕ್ಕಪ್ಪನಾದ ಹಂಝರ ನಡುವೆಯೂ, ಗುಲಾಮರಾಗಿದ್ದ ಖಾರಿಜಬ್ನು ಝೈದ್‌ ಹಾಗೂ ನಂತರ ಪ್ರಥಮ ಖಲೀಫರಾದ ಅಬೂಬಕರ್ ಸಿದ್ದೀಕ್‌ ನಡುವೆ ಪ್ರವಾದಿವರ್ಯರು ಸಹೋದರತೆಯನ್ನು ಸ್ಥಾಪಿಸಿದರು.

ಗುಲಾಮರನ್ನು ನಿರ್ಲಕ್ಷಿಸಲು, ಕಷ್ಟಕ್ಕೊಳಪಡಿಸಲು ಇಸ್ಲಾಮ್ ಅನುಮತಿಸುವುದಿಲ್ಲ. ಒಮ್ಮೆ ಗುಲಾಮನನ್ನು ಹಿಂಬದಿಯಿಂದ ನಡೆಸುತ್ತಾ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಪ್ರಯಾಣಿಕರೊಂದಿಗೆ ಅಬೂಹುರೈರಾ(ರ) ಹೇಳಿದರು: ‘ನಿನ್ನ ಹಿಂದೆ ಅವನನ್ನೂ ಹತ್ತಿಸಿಕೋ, ಅವನು ನಿನ್ನ ಸಹೋದರನಾಗಿದ್ದಾನೆ. ನಿನ್ನಂತಹ ಆತ್ಮವೇ ಅವನಲ್ಲಿದೆ.’

ಹೀಗೆ ಗುಲಾಮರಿಗೆ ಸಮಾಜದಲ್ಲಿ ಗೌರವಾರ್ಹ ಸ್ಥಾನಮಾನ, ಹಕ್ಕು ಹಾಗೂ ಪರಿಗಣನೆಯನ್ನು ನೀಡಿ ಅವನ ಹಕ್ಕುಗಳನ್ನು ಸಂರಕ್ಷಿಸಿದ ಇಸ್ಲಾಮ್ ಅವನೊಂದಿಗೆ ಅನ್ಯಾಯವೆಸಗುವುದನ್ನು ಶಿಕ್ಷಾರ್ಹ ಅಪರಾಧವೆಂದು ತಿಳಿಸಿತು. ಅದರೊಂದಿಗೆ ಗುಲಾಮರ ಬಾಧ್ಯತೆ ಹಾಗೂ ಶಿಕ್ಷೆಯನ್ನು ಗಮನಾರ್ಹವಾಗಿ ಕಡಿತಗೊಳಿಸಿತು.

2. ಇಸ್ಲಾಮ್ ಗುಲಾಮತನವನ್ನು ಅಂಗೀಕರಿಸುವುದಿಲ್ಲ, ಕೊನೆಗೆ ಗುಲಾಮಗಿರಿಯನ್ನು ನಿರ್ಮೂಲನೆಗೊಳಿಸುವ ಕ್ರಮಗಳನ್ನು ಅದು ಕೈಗೊಂಡಿತು. ಗುಲಾಮರ ಬಿಡುಗಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತು. ಅಲ್ಲಾಹನು ಹೇಳುತ್ತಾನೆ: ‘ಆದರೆ ಅವನು ದುರ್ಗಮ ಏರನ್ನು ಏರುವ ಸಾಹಸವನ್ನೇ ಮಾಡಲಿಲ್ಲ ಆ ದುರ್ಗಮ ಏರು ಏನೆಂದು ನಿಮಗೇನು ಗೊತ್ತು? ಯಾವುದಾದರೂ ಕೊರಳನ್ನು ದಾಸ್ಯ ಬಂಧನದಿಂದ ವಿಮೋಚಿಸುವುದು.’ (ಪವಿತ್ರ ಕುರ್ ಆನ್ 90:11-13)

ಇಸ್ಲಾಮ್ ಝಕಾತ್‌ ಪಾಲನ್ನು ಗುಲಾಮರ ಬಿಡುಗಡೆಗಾಗಿ ನಿಶ್ಚಯಿಸಿದೆ. (9:60) ತನ್ನ ಅಧೀನದಲ್ಲಿರುವ ಗುಲಾಮರನ್ನು ಬಿಡುಗಡೆಗೊಳಿಸುವುದು ಮತ್ತು ಇತರರ ಅಧೀನದಲ್ಲಿರುವ ಗುಲಾಮರನ್ನು ಖರೀದಿಸಿ ಬಿಡುಗಡೆಗೊಳಿಸುವ ವಿಧಾನವನ್ನು ಇಸ್ಲಾಮ್ ಕಲಿಸಿತು. ಹೀಗೆ ಪ್ರವಾದಿವರ್ಯರು ಹಾಗೂ ಅನುಯಾಯಿಗಳು ತಮ್ಮ ಗುಲಾಮರನ್ನು ಬಿಡುಗಡೆಗೊಳಿಸಿದ್ದರು. ಅಬೂಬಕರ್(ರ)ರಂತಹ ಸಹೃದಯಿಗಳು ತಮ್ಮ ಸಂಪತ್ತಿನ ಸಿಂಹಪಾಲನ್ನು ಇತರರಿಂದ ಗುಲಾಮರನ್ನು ಖರೀದಿಸಿ, ನಂತರ ಬಿಡುಗಡೆಗೊಳಿಸಲು ಉಪಯೋಗಿಸಿದರು. ಹತ್ತು ಜನರಿಗೆ ಓದು-ಬರಹವನ್ನು ಕಲಿಸಿಕೊಡುವ ಗುಲಾಮರನ್ನು ಪ್ರವಾದಿವರ್ಯರು ಬಿಡುಗಡೆಗೊಳಿಸುತ್ತಿದ್ದರು.

ಹಲವು ಪಾಪಕರ್ಮಗಳಿಗೆ ಪ್ರಾಯಶ್ಚಿತ್ತವಾಗಿ ಗುಲಾಮರ ಬಿಡುಗಡೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು. ‘ಸತ್ಯ ವಿಶ್ವಾಸಿಯೊಬ್ಬನು ಇನ್ನೊಬ್ಬ ಸತ್ಯವಿಶ್ವಾಸಿಯನ್ನು ಪ್ರಮಾದದಿಂದಾಗಿ ವಧಿಸಿ ಬಿಟ್ಟರೆ ಅದರ ಪ್ರಾಯಶ್ಚಿತ್ತವು ಒಬ್ಬ ಸತ್ಯವಿಶ್ವಾಸ ವ್ಯಕ್ತಿಯನ್ನು ದಾಸ್ಯದಿಂದ ಮುಕ್ತಗೊಳಿಸುವುದು.’ (ಪವಿತ್ರ ಕುರ್ ಆನ್ 4: 92)

ಶಪಥ ಮುರಿಯುವುದು, ಉಪವಾಸದ ಸಂದರ್ಭದಲ್ಲಿ ಪತಿ-ಪತ್ನಿ ಲೈಂಗಿಕ ಸಂಪರ್ಕದಲ್ಲೇರ್ಪಡುವಂತಹ ಅಪರಾಧಗಳಿಗೆ ಗುಲಾಮರನ್ನು ಬಿಡುಗಡೆಗೊಳಿಸುವುದನ್ನು ಪರಿಹಾರವಾಗಿ ನಿಶ್ಚಯಿಸಲಾಗಿದೆ. ಹೀಗೆ ಗುಲಾಮ ವಿಮೋಚನೆಗೆ ಇಸ್ಲಾಮ್ ವಿವಿಧ ಮಾರ್ಗಗಳನ್ನು ನಿಶ್ಚಯಿಸಿತು. ಪರಲೋಕದಲ್ಲಿ ಅದಕ್ಕೆ ಅತ್ಯುನ್ನತ ಪ್ರತಿಫಲವನ್ನು ವಾಗ್ದಾನ ಮಾಡಿತು. ಆದ್ದರಿಂದ ಇಸ್ಲಾಮೀ ಸಮಾಜದಲ್ಲಿ ಸಂಭವಿಸಿದಂತೆ ವ್ಯಾಪಕ ರೀತಿಯಲ್ಲಿ ಗುಲಾಮ ವಿಮೋಚನೆ ನಡೆದ ಬೇರೆ ಕಾಲಘಟ್ಟವು ಇತಿಹಾಸದಲ್ಲಿಲ್ಲ.

ಕರಾರು ಪತ್ರವನ್ನು ಬರೆದು ಸ್ವತಂತ್ರರಾಗಲು ಇಸ್ಲಾಮ್ ಗುಲಾಮರಿಗೆ ಅವಕಾಶ ನೀಡಿತು. ಇದರಿಂದ ಗುಲಾಮ ಮತ್ತು ಯಜಮಾನ ಸೇರಿ ಒಂದು ಮೌಲ್ಯವನ್ನು ನಿರ್ಣಯಿಸಿ, ಸ್ವಾತಂತ್ರ್ಯ ಗಳಿಸಲು ಗುಲಾಮರಿಗೆ ಸಾಧ್ಯವಾಯಿತು. ಇಂತಹ ಸಂದರ್ಭಗಳಲ್ಲಿ ಸ್ವತಂತ್ರ್ಯಗೊಳಿಸಬೇಕಾದುದು ಯಜಮಾನನ ಕರ್ತವ್ಯವಾಗಿದೆ. ಮಧ್ಯಪ್ರವೇಶಿಸಲು ಅಥವಾ ಕರಾರನ್ನು ನಿರಾಕರಿಸಲು ಆತನಿಗೆ ಅವಕಾಶವಿಲ್ಲ, ಕರಾರು ಪತ್ರವನ್ನು ಬರೆಯುವ ಕ್ಷಣದಿಂದಲೇ ಗುಲಾಮ ಗುಲಾಮನಾಗಿ ಉಳಿಯುವುದಿಲ್ಲ, ಕೂಲಿ ಕಾರ್ಮಿಕನ ಸ್ಥಾನಕ್ಕೆ ತಲುಪುತ್ತಾನೆ. ನಂತರ ಮಾಡುವ ಕೆಲಸಗಳಿಗೆ ಪ್ರತಿಫಲ ದೊರೆತು ಅದು ದಾಸ್ಯ ಮುಕ್ತಿಯ ಮೌಲ್ಯವಾಗಿ ಬದಲಾಗುತ್ತದೆ. ಇತರ ಕಾರ್ಮಿಕರಿಂದ ಹಣ ಪಡೆದು ವಿಮೋಚನಾ ಧನವನ್ನು ಶೇಖರಿಸುವ ಅವಕಾಶವೂ ಆತನಿಗೆ ಇದೆ, ಇಂತಹ ವ್ಯವಸ್ಥೆಯು ಯುರೋಪಿನಲ್ಲಿ ಹದಿನಾಲ್ಕನೇ ಶತಮಾನದಲ್ಲಷ್ಟೇ ಅಂಗೀಕರಿಸಲ್ಪಟ್ಟಿದೆಯೆಂಬುದು ಗಮನಾರ್ಹವಾಗಿದೆ.

ಹೀಗೆ ವಿವಿಧ ರೀತಿಯಲ್ಲಿ ವಿಮೋಚನೆ ಹೊಂದಿದ ಗುಲಾಮರು ಇಸ್ಲಾಮೀ ಚರಿತ್ರೆಯಲ್ಲಿ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ, ಆಡಳಿತದಲ್ಲೂ ಅಧಿಕಾರ ಚಲಾಯಿಸಿದರು. ಬಿಲಾಲ್ ಇಬ್ನು ರಬಾಹ್ ರಂತೆ ಅತ್ಯುನ್ನತ ಪದವಿಯನ್ನು ಪಡೆದವರು ಅವರಲ್ಲಿದ್ದಾರೆ.

3.ಗುಲಾಮರು ವಂಶಪಾರಂಪರ್ಯವಾಗಿ ಮುಂದುವರಿಯುವ ವ್ಯವಸ್ಥೆಗೆ ಇಸ್ಲಾಮ್ ತಡೆಯೊಡ್ಡಿತು. ಯಜಮಾನನಿಗೆ ಗುಲಾಮ ಸ್ತ್ರೀಯಿಂದ ಮಕ್ಕಳಾದರೆ ಅದು ಯಜಮಾನನ ಮಕ್ಕಳೆಂದು ಪರಿಗಣಿಸಿ, ಆತನ ಇತರ ಮಕ್ಕಳಂತೆ ಸಂಪೂರ್ಣ ಸ್ವತಂತ್ರ ಪ್ರಜೆಗಳೆಂದು ಇಸ್ಲಾಮ್ ಘೋಷಿಸಿತು. ಮಾತ್ರವಲ್ಲ ಯಜಮಾನನ ಮರಣದೊಂದಿಗೆ ಅವರ ತಾಯಂದಿರು ಸ್ವತಂತ್ರರಾಗುತ್ತಾರೆಂದು ಹೇಳಿತು ಮತ್ತು ಯಜಮಾನನು ಗುಲಾಮ ಸ್ತ್ರೀಯರನ್ನು ವೇಶ್ಯಾ ವೃತ್ತಿಗಿಳಿಸಿ ವರಮಾನ ಗಳಿಸುವ ಅತ್ಯಂತ ನೀಚ ಸಂಪ್ರದಾಯವನ್ನು ನಿಷೇಧಿಸಿತು.

4. ಕ್ರಮಬದ್ಧವಾಗಿ ಗುಲಾಮಗಿರಿಯನ್ನು ಕೊನೆಗೊಳಿಸಲು ಪ್ರಬುದ್ಧ ನಿಲುವನ್ನು ಸ್ವೀಕರಿಸಿದ ಇಸ್ಲಾಮ್, ಕೆಲವು ಅನಿವಾರ್ಯ ಕಾರಣಗಳಿಂದ ಅದನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ಯುದ್ಧಗಳ ಹೊರತಾಗಿ ಗುಲಾಮರಿಗೆ ಉಂಟಾಗುವ ಎಲ್ಲವನ್ನೂ ಇಸ್ಲಾಮ್ ಸಂಪೂರ್ಣವಾಗಿ ಕೊನೆಗೊಳಿಸಿತು. ಪ್ರವಾದಿಯವರ ನಿಯೋಗದ ಕಾಲದಲ್ಲಿ ಯುದ್ಧ ಕೈದಿಗಳನ್ನು ವಧಿಸುವ ಅಥವಾ ಗುಲಾಮರಾಗಿಸುವ ಪದ್ಧತಿ ಜಾರಿಯಲ್ಲಿತ್ತು. ಈ ಪರಿಸ್ಥಿತಿ ದೀರ್ಘ ಕಾಲದವರೆಗೆ ಮುಂದುವರಿಯಿತು. ಶತ್ರು ರಾಷ್ಟ್ರಗಳೊಂದಿಗೆ ಯುದ್ಧ ನಡೆಯುವಾಗ ಅವರ ಕೈದಿಗಳಾಗುವ ಮಸ್ಲಿಮ್ ಕೈದಿಗಳನ್ನು ವಧಿಸುವ ಅಥವಾ ಗುಲಾಮರಾಗಿಸುವ ಸಂಪ್ರದಾಯ ಚಾಲ್ತಿಯಲ್ಲಿರುವಾಗ, ಇಸ್ಲಾಮೀ ರಾಷ್ಟ್ರವು ಸೆರೆ ಹಿಡಿಯುವ ಶತ್ರು ರಾಷ್ಟ್ರದ ಕೈದಿಗಳ ಕುರಿತು ಬೇರೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವೋ ಪ್ರಾಯೋಗಿಕವೋ ಆಗಿರಲಿಲ್ಲ. ಆದರೂ ಯುದ್ಧ ಕೈದಿಗಳನ್ನು ವಧಿಸುವುದನ್ನು ಇಸ್ಲಾಮ್ ನಿಷೇಧಿಸಿತು. ಅವರ ಮೇಲೆ ಸೌಜನ್ಯ ತೋರುವುದೋ ಅಥವಾ ಪರಿಹಾರ ಧನ ಪಡೆದು ಬಿಡುಗಡೆಗೊಳಿಸುವುದೋ ಆಗಬಹುದೆಂದು ಆದೇಶಿಸಿತು.(47:4)

ಯುದ್ಧ ಕೈದಿಗಳನ್ನೆಲ್ಲಾ ಇರಿಸಿಕೊಳ್ಳಲು ಸೂಕ್ತ ಸೌಕರ್ಯವಿಲ್ಲದಿದ್ದಾಗ ಶತ್ರು ರಾಷ್ಟ್ರಗಳಂತೆ ಇಸ್ಲಾಮಿ ರಾಷ್ಟ್ರವು ಅವರನ್ನು ಗುಲಾಮರಾಗಿಸುತ್ತಿತ್ತು. ಇದರ ಕುರಿತು ಪ್ರಮುಖ ಇಸ್ಲಾಮೀ ವಿದ್ವಾಂಸ ಮುಹಮ್ಮದ್ ಕುತುಬ್‌ ಬರೆಯುತ್ತಾರೆ: ಯುದ್ಧ ಕೈದಿಗಳ ವಿಷಯದಲ್ಲಿ ‘ಶತ್ರುಗಳು ಬೇರೆ ನಿಲುವು ಸ್ವೀಕರಿಸಲು ಸಿದ್ಧರಾಗುವವರೆಗೆ’ ಎಂದು ದಾಸ್ಯ ಸಂಪ್ರದಾಯಕ್ಕೆ ಕಾಲ ನಿರ್ಣಯಿಸಿತು. ಮುಸ್ಲಿಮ್ ಯುದ್ಧ ಕೈದಿಗಳು ಏಕಪಕ್ಷೀಯವಾಗಿ ಗುಲಾಮಗಿರಿಗೆ ಎಸೆಯಲ್ಪಡಬಾರದೆಂಬ ಉದ್ದೇಶ ಮಾತ್ರ ಇದರಲ್ಲಿತ್ತು. ಇಲ್ಲಿ ಆಲೋಚಿಸಬೇಕಾದ ಒಂದು ಸಂಗತಿಯಿದೆ ‘ಸೌಜನ್ಯ ತೋರಿಯೋ, ಪರಿಹಾರ ಧನ ಪಡೆದೋ ಬಿಡುಗಡೆಗೊಳಿಸಿರಿ’ ಎಂಬ ಯುದ್ಧ ಕೈದಿಗಗಳ ಕುರಿತ ಒಂದೇ ಕುರ್‌ ಆನ್‌ ಸೂಕ್ತವು ಕೈದಿಗಳನ್ನು ಗುಲಾಮರಾಗಿಸುವ ವಿಷಯವನ್ನು ಹೇಳಿಲ್ಲ. ಅದು ಶಾಶ್ವತ ನಿಯಮವಾಗಬಾರದೆಂಬ ಉದ್ದೇಶ ಅದರಲ್ಲಿದೆ. ಪರಿಹಾರ ಧನ ಪಡೆದು ಬಿಡುಗಡೆಗೊಳಿಸುವ ವಿಷಯ ಹೇಳಲಾಯಿತು. ಪಡೆಯದೆಯೇ ಸ್ವತಂತ್ರಗೊಳಿಸುವುದನ್ನೂ ಹೇಳಲಾಯಿತು. ಕಾರಣವೇನೆಂದರೆ ಈ ಎರಡು ದೋರಣೆಗಳು ಮುಂದಿನ ಪೀಳಿಗೆಯ ಯುದ್ಧ ಕೈದಿಗಳಿಗಾಗಿ ಇಸ್ಲಾಮ್ ನಿಶ್ಚಯಿಸಿದ ಶಾಶ್ವತ ನಿಯಮವಾಗಿದೆ. ಗುಲಾಮ ಸಂಪ್ರದಾಯವನ್ನು ಮುಸ್ಲಿಮರು ಅತ್ಯಂತ ನಿರ್ಬಂಧ ಪರಿಸ್ಥಿತಿಯ ಅನಿವಾರ್ಯತೆಯಿಂದ ಸ್ವೀಕರಿಸಿದ್ದರು. ಅದೊಂದು ಇಸ್ಲಾಮೀ ನಿಲುವು ಎಂಬ ಆಧಾರದಲ್ಲಿ ಖಂಡಿತ ಅಲ್ಲ, (ತಪ್ಪುಕಲ್ಪನೆಗೊಳಗಾದ ಧರ್ಮ-ಪುಟ-62)

ಪ್ರವಾದಿ ಮುಹಮ್ಮದ್(ಸ) ರ ಕಾಲದಲ್ಲಿ ಯುದ್ಧ ಕೈದಿಗಳ ವಿಷಯದಲ್ಲಿ ಮುಖ್ಯವಾಗಿ ಐದು ರೀತಿಯ ತೀರ್ಮಾನಗಳನ್ನು ಸ್ವೀಕರಿಸಲಾಗಿತ್ತು.

೧. ಶತ್ರುಗಳು ಬಂಧನಕ್ಕೊಳಪಡಿಸಿದ ಕೈದಿಗಳಿಗೆ ಬದಲಿಯಾಗಿ ತಮ್ಮ ವಶದಲ್ಲಿರುವ ಯುದ್ಧ ಕೈದಿಗಳನ್ನು ಅವರಿಗೆ ಒಪ್ಪಿಸುವುದು.

೨. ಪರಿಹಾರ ಧನ ಪಡೆದು ಬಿಡುಗಡೆಗೊಳಿಸುವುದನ್ನು ಬದ್ರ್ ಯುದ್ಧದ ಸಂದರ್ಭದಲ್ಲಿ ಮಾತ್ರ ಕೈಗೊಳ್ಳಲಾಗಿತ್ತು. ಅಂದು ಇಸ್ಲಾಮೀ ರಾಷ್ಟ್ರವು ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದು,
ಮಕ್ಕಾದ ಶ್ರೀಮಂತರು ಕೈದಿಗಳಾಗಿದ್ದುದು ಇದಕ್ಕೆ ಕಾರಣವಾಗಿರಬಹುದು.

೩. ದೇಶದ ಭದ್ರತೆಗೆ ಬೆದರಿಕೆಯಿಲ್ಲದಿದ್ದರೆ ಉಚಿತವಾಗಿ ಬಿಡುಗಡೆಗೊಳಿಸುವುದು. ಹುನೈನ್ ಯುದ್ಧ ಕೈದಿಗಳ ವಿಷಯದಲ್ಲಿ ಪ್ರವಾದಿಯವರು ಈ ದೋರಣೆಯನ್ನು ಸ್ವೀಕರಿಸಿದ್ದರು. ಬನು ಮುಸ್ತಲಿಕ್ ಯುದ್ಧ ಕೈದಿಗಳ ಕುರಿತೂ ಇದೇ ನಿಲುವು ತಾಳಲಾಗಿತ್ತು.

೪. ಶತ್ರುಗಳ ವಶವಾಗುವ ಇಸ್ಲಾಮೀ ಪ್ರಜೆಗಳನ್ನು ಗುಲಾಮರಾಗಿಸುವಂತೆಯೇ ಮುಸ್ಲಿಮರ ವಶವಾಗುವ ಕೈದಿಗಳನ್ನು ಗುಲಾಮರನ್ನಾಗಿ ಸೈನಿಕರಿಗೆ ಹಂಚುವುದು. ಆಗಲೂ ಗುಲಾಮರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಲು ಹಾಗೂ ತಾವು ಸೇವಿಸುವ ಆಹಾರ,ಧರಿಸುವ ಉಡುಪು, ವಸತಿಯನ್ನು ನೀಡುವಂತೆ ಆದೇಶ ನೀಡಲಾಗಿತ್ತು.

೬. ಮುಸ್ಲಿಮರಿಗೆ ಕಡ್ಡಾಯ ಸೈನಿಕ ಸೇವೆ ನಿಶ್ಚಯಿಸಿದ್ದರಿಂದ, ಅದರಿಂದ ಮುಕ್ತರಾದ ಧಾರ್ಮಿಕ ಅಲ್ಪಸಂಖ್ಯಾತರಿಂದ ದೇಶದ ರಕ್ಷಣೆಗಾಗಿ ನೀಡಬೇಕಾದ ‘ಜಿಝಿಯಾ’ವನ್ನು ಸ್ವೀಕರಿಸಿ ಕೈದಿಗಳನ್ನೆಲ್ಲಾ ಬಿಡುಗಡೆಗೊಳಿಸಲಾಗುತ್ತಿತ್ತು. ನಜ್ರಾನಿನ ಕ್ರೈಸ್ತರ ಕುರಿತು ಪ್ರವಾದಿಯವರ ತೀರ್ಮಾನ ಇದುವೇ ಆಗಿತ್ತು. ಹಿಂದಿನ ಕಾಲದ ಇಸ್ಲಾಮೀ ರಾಷ್ಟ್ರದ ಆಡಳಿತಗಾರರ ನಿಲುವೂ ಇದೇ ಆಗಿತ್ತು.

ಅತ್ಯಂತ ಅನಿವಾರ್ಯವಾದ ಸಂದರ್ಭಗಳಲ್ಲಿ ಅಪರೂಪವಾಗಿ ಯುದ್ಧ ಕೈದಿಗಳನ್ನು ಗುಲಾಮರನ್ನಾಗಿಸುವ ನಿರ್ಧಾರವನ್ನು ತಗೆದುಕೊಳ್ಳಲಾಗುತ್ತಿತ್ತು. ಅದೊಂದು ಶಾಶ್ವತ
ಸಂಪ್ರದಾಯವಾಗಿರಲಿಲ್ಲ, ಆದ್ದರಿಂದಲೇ ಇಸ್ಲಾಮ್ ಅನಿವಾರ್ಯ ಸಂದರ್ಭದ ತಾತ್ಕಾಲಿಕ ನಿರ್ಧಾರವಾಗಿ ಗುಲಾಮ ಸಂಸ್ಕೃತಿಯನ್ನು ಒಪ್ಪಿಕೊಂಡಿತ್ತು. ಮುಹಮ್ಮದ್ ಕುತುಬ್ ಬರೆಯುತ್ತಾರೆ: ‘ಖಂಡಿತವಾಗಿಯೂ ಇಸ್ಲಾಮ್ ಗುಲಾಮಗಿರಿಯನ್ನು ಅಂಗೀಕರಿಸಿಲ್ಲ. ಗುಲಾಮರ ವಿಮೋಚನೆಗಾಗಿ ಇಸ್ಲಾಮ್ ತೋರಿಸಿಕೊಟ್ಟ ವಿವಿಧ ವಿಧಾನಗಳೇ ಇದಕ್ಕೆ ಸಾಕ್ಷಿ. ಅದರ ಬೇರನ್ನು ಕಡಿದು ಹಾಕಲು ಇಸ್ಲಾಮ್ ಸಾಕಷ್ಟು ಪ್ರಯತ್ನಿಸಿತು. ಇಸ್ಲಾಮ್‌ಗೆ ಏಕಮಖವಾಗಿ ತೀರ್ಮಾನ ತೆದುಕೊಳ್ಳಲು ಸಾಧ್ಯವಾಗದ ಅದರ ನಿಯಂತ್ರಣದಲ್ಲಿಲ್ಲದ ಒಂದು ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅದು ಇಸ್ಲಾಮಿನ ನಿಯಂತ್ರಣವಿಲ್ಲದ ರಾಷ್ಟ್ರಗಳು ಹಾಗೂ ಜನರಿಗೆ ಸಂಬಂಧಪಟ್ಟಿತು. ಅವರು ಮುಸ್ಲಿಮ್ ಯುದ್ಧ ಕೈದಿಗಳನ್ನು ಬಹಳ ಕ್ರೂರ ಶಿಕ್ಷೆಗೊಳಪಡಿಸಿದರು. ಆದ್ದರಿಂದ ಗುಲಾಮರೊಂದಿಗೆ ಅತ್ಯಂತ ನೀಚವಾಗಿ ವರ್ತಿಸುವುದನ್ನು ಬಿಟ್ಟು, ಗುಲಾಮರಾಗಿಸುವ ನಿರ್ಧಾರದಲ್ಲಾದರೂ, ಸಮಾನವಾದ ನಿಲುವನ್ನು ಸ್ವೀಕರಿಸಲು ನಿರ್ಬಂಧಿಸಿತು. ಗುಲಾಮ ಸಂಪ್ರದಾಯವನ್ನು ನಿಷೇಧಿಸದಿರಲು ಇಸ್ಲಾಮನ್ನು ನಿರ್ಬಂಧಿಸಿದ ಆ ಏಕೈಕ ಕಾರಣವು ಕೊನೆಗೊಳ್ಳಲು ವಿಶ್ವದ ಇತರ ಶಕ್ತಿಗಳ ಸಹಕಾರ ಅಗತ್ಯವಿತ್ತು. ಆ ಸಹಕಾರ ಲಭಿಸುವ ಕ್ಷಣದಿಂದಲೇ ನಿಸ್ಸಂಶಯವಾಗಿ ಇಸ್ಲಾಮ್ ತಾನು ಪ್ರತಿಪಾದಿಸಿದ ಆ ಮಹತ್ತರವಾದ ಸಿದ್ಧಾಂತದಡೆಗೆ ಮರಳುತ್ತದೆ. ಎಲ್ಲರಿಗೂ ಸಮಾನತೆ ಮತ್ತು ಸ್ವಾತಂತ್ರ್ಯ ಎಂಬ ತತ್ವದಡೆಗೆ ಸಾಗುತ್ತದೆ.’ (ತಪ್ಪುಕಲ್ಪನೆಗೊಳಗಾದ ಧರ್ಮ-ಪುಟ-64)

ಈಗಲೂ ಯುದ್ಧ ಕೈದಿಗಳನ್ನು ಆರೋಪಿಗಳೆಂದು ಪರಿಗಣಿಸಿ ಸೆರೆಮನೆಯಲ್ಲಿ ಇರಿಸಲಾಗುತ್ತಿದೆ. ಜೈಲಿನ ಕತ್ತಲು ಕೋಣೆಯಲ್ಲಿ ಬಂಧಿತರಾಗಿ ವರ್ಷಗಳನ್ನು ಕಳೆಯುವುದಕ್ಕಿಂತ, ಇಸ್ಲಾಮೀ ಸಮೂಹದಲ್ಲಿದ್ದಂತೆ ಎಲ್ಲಾ ಮೂಲಭೂತ ಅಗತ್ಯಗಳು ಪೂರೈಸಲ್ಪಡುವ, ಜನರೊಂದಿಗೆ ವಾಸಿಸುವ ಆ ಬದುಕೇ ಇದಕ್ಕಿಂತ ಎಷ್ಟೋ ಉತ್ತಮ ಎಂಬುದು ವಾಸ್ತವ, ಗುಲಾಮನೆಂಬ ವಿಶೇಷಣವು ಅದಷ್ಟೇ ಅರೋಚಕವಾಗಿದ್ದರೂ ಸರಿ.

ಒಂದು ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿ ಬೇರೂರಿದ್ದ ಸಂಪ್ರದಾಯವನ್ನು ತಟ್ಟನೆ ಕಾನೂನಿನ ಮೂಲಕ ನಿಷೇಧಿಸುವುದೇ ಫಲಪ್ರದವಾಗುವುದಿಲ್ಲ. ಗುಲಾಮ ಸಂಸ್ಕೃತಿಯನ್ನು ಆ ಕಾಲದಲ್ಲಿ ಒಂದು ವಾಕ್ಯದಿಂದ ಕೊನೆಗೊಳಿಸುವುದು ಸಾಧ್ಯವಾಗುತ್ತಿರಲಿಲ್ಲ. ಅಂತಹ ತುರ್ತು ಕ್ರಮ ಕೈಗೊಂಡರೂ ಮರುದಿನ ಸಮಾಜದ ಎಲ್ಲರೂ ಗುಲಾಮರನ್ನು ಸಾಮಾನ್ಯ ಸ್ವತಂತ್ರ ವ್ಯಕ್ತಿಗಳಂತೆ ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಿರಲಿಲ್ಲ. ಒಂದು ಮುಂಜಾನೆ ಮುಕ್ತವಾದ ಎಲ್ಲ ಗುಲಾಮರೊಂದಿಗೆ ಸಮಾಜವು ಸಮಾನತೆಯಿಂದ ವರ್ತಿಸುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ವಿವಾಹ ಸಂಬಂಧ ಬೆಳೆಸಲು ಇದು ತಡೆಯಾಗಬಹುದು. ವಿಮೋಚನೆಗೊಂಡ ಗುಲಾಮರ ಒಂದು ವರ್ಗ ರೂಪಗೊಳ್ಳುತ್ತಿತ್ತು. ಮೊದಲು ಲಭ್ಯವಾಗಿದ್ದ ಉದ್ಯೋಗ, ಸಂರಕ್ಷಣೆ ಲಭಿಸದ ಈ ವಿಭಾಗದ ಜೀವನ ದುಸ್ತರವಾಗಬಹುದು. ಅಬ್ರಹಾಂ ಲಿಂಕನ್ ಅಮೇರಿಕಾದ ಸಂಯುಕ್ತ ಸಂಸ್ಥಾನದ ಗುಲಾಮಗಿರಿ ವ್ಯವಸ್ಥೆಯನ್ನು ನಿಲ್ಲಿಸಿದಾಗ ಉಂಟಾದ ಅನುಭವ ಅದಕ್ಕೆ ಸಾಕ್ಷಿಯಾಗಿದೆ. ಗುಲಾಮರು ಸ್ವತಂತ್ರರಾಗಲು ಮಾನಸಿಕವಾಗಿ ಸಿದ್ಧರಾಗಿಲ್ಲದ ಕಾರಣ ಯಜಮಾನರ ಬಳಿಗೆ ಬಂದು ತಮ್ಮನ್ನು ಮರಳಿ ಗುಲಾಮರಾಗಿ ಸ್ವೀಕರಿಸಬೇಕೆಂದು ವಿನಂತಿಸುವ ಪರಿಸ್ಥಿತಿ ಉಂಟಾಗಿತ್ತು. ಆದ್ದರಿಂದ ಇಸ್ಲಾಮ್‌ ಗುಲಾಮಗಿರಿಯನ್ನು ಕೊನೆಗೊಳಿಸಲು ಅತ್ಯಂತ ಕ್ರಮಬದ್ಧವಾದ, ಸುವ್ಯವಸ್ಥಿತವಾದ ಮಾರ್ಗವನ್ನು ಅವಲಂಬಿಸಿತು.

5. ನಿಯಮವೆಂದರೆ ಮಾನವ ಶರೀರದ ಚಲನಗಳ ಮೇಲೆ ವಿಧಿಸಲಾಗುವ ನಿಯಂತ್ರಣವಾಗಿದೆ. ಆದ್ದರಿಂದ ನಾವು ಹೇಗೆ ಬದುಕಬೇಕೆಂದು ತೀರ್ಮಾನಿಸಬೇಕಾದುದು ನಿಯಮವಾಗಿದೆ. ಇಂತಹ ನಿಯಮಗಳನ್ನು ನಿರ್ಮಿಸುವ ಅತ್ಯಧಿಕ ಅಧಿಕಾರ ಯಾರಿಗೆ ಎಂಬುದಕ್ಕೆ ಮಾನವ ಸ್ವಾತಂತ್ರ್ಯದೊಂದಿಗೆ ಅಭೇದ್ಯವಾದ ನಂಟಿದೆ. ಪ್ರಜೆಗಳು ತಮ್ಮಿಚ್ಛೆಯಂತೆ ಬದುಕುವ ಅರಕ್ಷಿತತೆ ಹಾಗೂ ಅರಾಜಕತೆಯ ಗೂಡಾಗಿರುತ್ತದೆ. ಆದ್ದರಿಂದ ಸಮಾಜವು ವ್ಯವಸ್ಥಿತವಾಗಿ ಮುಂದುವರಿಯಲು ನಿಯಮಗಳು ಅನಿವಾರ್ಯವಾಗಿದೆ. ಅದನ್ನು ರೂಪಿಸುವ ಪರಮಾಧಿಕಾರವನ್ನು ಯಜಮಾನರು ವಹಿಸಿಕೊಳ್ಳುತ್ತಾರೆ. ಅದಕ್ಕೆ ಗುಲಾಮರು ವಿಧೇಯರಾಗಬೇಕಾಗುತ್ತದೆ. ಆದ್ದರಿಂದ ಕಾನೂನು ನಿರ್ಮಾಣದ ಪರಮಾಧಿಕಾರ ದೇವನಿಗಲ್ಲದೆ ಬೇರಾರಿಗೂ ಇಲ್ಲವೆಂಬ ಪರಮ ಸತ್ಯವನ್ನು ಅಂಗೀಕರಿಸದವರೆಲ್ಲರೂ ತಮ್ಮಂತಹ ಮನುಷ್ಯರ ಗುಲಾಮರೂ ಆಜ್ಞಾನುವರ್ತಿಗಳೂ ಆಗುತ್ತಾರೆ. ಈ ಅರ್ಥದಲ್ಲಿ ವೀಕ್ಷಿಸುವಾಗ ಕಾನೂನು ರಚನೆಯ ಪರಮಾಧಿಕಾರವನ್ನು ಸರ್ಕಾರಕ್ಕೆ ಒಪ್ಪಿಸುವ ಆಧುನಿಕ ಸಮೂಹಗಳು ಗುಲಾಮಗಿರಿಯ ಸಮೂಹಗಳಾಗಿದೆ. ಅಂತಹವರಿಗೆ ದಾಸ್ಯತನದಿಂದ ಮುಕ್ತಿಯೆಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ.

ಕಾನೂನು ರಚನೆಯ ಪರಮಾಧಿಕಾರವನ್ನೋ, ಸ್ಟೇಚ್ಛೆಯನ್ನೋ ಇತರರ ಮೇಲೆ ಹೇರಲು ಇಸ್ಲಾಮ್ ಯಾರಿಗೂ ಅನುಮತಿ ನೀಡುವುದಿಲ್ಲ. ಆ ಅಧಿಕಾರ ಸೃಷ್ಟಿಕರ್ತನಿಗೆ ಮಾತ್ರ ಇದೆ ಎಂದು ಅದು ಸಾರುತ್ತದೆ. ಆಡಳಿತಾಧಿಕಾರಿಗಳಿಗೆ ಅವನ ಕಾನೂನನ್ನು ಜಾರಿಗೊಳಿಸುವ ಅಧಿಕಾರ ಮಾತ್ರವಿದೆ. ಈಜಿಪ್ಪನ್ನು ಜಯಸಿದ, ಆ ದೇಶದ ಪ್ರಥಮ ಮುಸ್ಲಿಮ್ ಗವರ್ನರ್ ಆದ ಅಮ್ರ್ ಬಿನ್ ಆಸ್‌ರ ಮಗ ಓರ್ವ ಸಾಮಾನ್ಯ ಪ್ರಜೆಗೆ ಅನ್ಯಾಯವಾಗಿ ಹೊಡೆದ ದೂರು ದೊರೆತಾಗ ಖಲೀಫಾ ಉಮರುಲ್ ಫಾರೂಕ್ ಪ್ರತೀಕಾರ ತೀರಿಸಿದ ಬಳಿಕ ಗವರ್ನರ್ ರೊಂದಿಗೆ ಹೀಗೆ ಕೇಳಿದರು: ‘ಅಮ್ರ್, ನೀವು ಜನರನ್ನು ಗುಲಾಮರನ್ನಾಗಿಸಲು ಪ್ರಾರಂಭಿಸಿದ್ದು ಯಾವಾಗ? ಅವರ ತಾಯಂದಿರು ಅವರನ್ನು ಸ್ವತಂತ್ರರಾಗಿ ಹಡೆದಿದ್ದಾರೆ.’

ಗುಲಾಮ ಸಂಸ್ಕೃತಿಯ ಕುರಿತು ಇಸ್ಲಾಮ್‌ ನಿಲುವು ಏನೆಂದು ಫಾರೂಕ್ ರ ಈ ಪ್ರಶ್ನೆ ಸಂಶಯಾತೀತವಾಗಿ ಸ್ಪಷ್ಟಪಡಿಸುತ್ತದೆ. ಗುಲಾಮಗಿರಿಯನ್ನು ಸಂಪೂರ್ಣ ನಿರ್ಮೂಲನೆ ಗೊಳಿಸಬಯಸುವ ಇಸ್ಲಾಮ್ ಇತಿಹಾಸದಲ್ಲಿ ಕಂಡು ಬರುವಂತಹ ಆ ನೀಚ ಸಂಪ್ರದಾಯವನ್ನು ಖಂಡಿತವಾಗಿಯೂ ಒಪ್ಪಿಕೊಳ್ಳವುದಿಲ್ಲ.

ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *