Home / ಪ್ರಶ್ನೋತ್ತರ / ಕುರ್‌ಆ‍ನ್ ವಚನಗಳಲ್ಲಿ ವಿರೋಧಾಭಾಸವೇ?

ಕುರ್‌ಆ‍ನ್ ವಚನಗಳಲ್ಲಿ ವಿರೋಧಾಭಾಸವೇ?

ಎಲ್ಲಾ ಕಾರ್ಯಗಳು ದೇವವಿಧಿಗೆ ಅನುಗುಣವಾಗಿ ನಡೆಯುತ್ತದೆಂದು ಹೇಳುವ ಕುರ್‌ಆ‍ನ್ ವಚನಗಳು ಮತ್ತು ಮನುಷ್ಯನ ಕರ್ಮಗಳಿಗೆ ಅನುಗುಣವಾದ ಫಲ ಉಂಟಾಗುವುದೆಂದು ಸ್ಪಷ್ಟಪಡಿಸುವ ಹಲವಾರು ವಚನಗಳನ್ನು ಇಲ್ಲಿ ಉಲ್ಲೇಖಿಸಲಾಯಿತು. ವಿಧಿವಿಶ್ವಾಸದ ಕುರಿತು ಕುರ್‌ಆ‍ನ್ ವಚನದಲ್ಲಿರುವ ವಿರೋಧಾಭಾಸವನ್ನು ಇದು ಸ್ಪಷ್ಟಪಡಿಸುತ್ತದೆಯಲ್ಲವೇ?

ವಿಧಿವಿಶ್ವಾಸಕ್ಕೆ ಸಂಬಂಧಿಸಿದ ಕುರ್‌ಆ‍ನ್ ವಚನಗಳಲ್ಲಿ ಸ್ವಲ್ಪವೂ ವಿರೋಧಾಭಾಸವಿಲ್ಲ. ಮಾತ್ರವಲ್ಲ ಅವುಗಳು ಪರಸ್ಪರ ವ್ಯಾಖ್ಯಾನಿಸಲು ವಿವರಿಸಲು ಪೂರಕವಾಗಿದೆ. ಒಂದು ಉದಾಹರಣೆಯ ಮೂಲಕ ಇದು ಸ್ಪಷ್ಟಪಡಿಸಬಹುದು.

ಸುಂದರವಾಗಿ ನಿರ್ಮಿಸಿದ ಉನ್ನತ ದರ್ಜೆಯ, ಶಿಸ್ತುಬದ್ಧವಾಗಿ ನಡೆಸಲ್ಪಡುತ್ತಿರುವ ಒಂದು ಮಾದರಿ ಶಾಲೆ, ಅಲ್ಲಿ ಸಮರ್ಥನಾದ ಮುಖ್ಯೋಪಾಧ್ಯಾಯ, ನಿಸ್ವಾರ್ಥ ಶಿಕ್ಷಕ ವೃಂದ, ಯೋಗ್ಯರಾದ ವಿದ್ಯಾರ್ಥಿಗಳು, ಮಕ್ಕಳ ಕಲಿಕೆಯನ್ನು ಆಸಕ್ತಿಯಿಂದ ಗಮನಿಸುವ ಪೋಷಕ ವೃಂದ ಹೀಗೆ ಎಲ್ಲರೂ ಶಾಲೆಯ ಉನ್ನತಿಗಾಗಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಸಂಸ್ಥೆಯ ಏಳಿಗೆಯ ಹಿಂದೆ ಹಲವಾರು ಕಾರಣಗಳು, ಹಲವರ ಪರಿಶ್ರಮವಿದೆ ಎಂದರ್ಥ. ಇಂತಹ ಸಂಧರ್ಭದಲ್ಲಿ ಶಾಲೆಯು ಮಾದರಿಯೋಗ್ಯವಾಗಲು ಮುಖ್ಯೋಪಾಧ್ಯಾಯರೇ ಕಾರಣವೆನ್ನಬಹುದು. ಶಿಕ್ಷಕರೆಂದೂ, ವಿದ್ಯಾರ್ಥಿಗಳೆಂದೂ, ಪೋಷಕರೆಂದೂ ಹೇಳಬಹುದು. ಇದರಲ್ಲಿ ಯಾವುದಾದರೊಂದನ್ನು ಹೇಳಿದರೂ ತಪ್ಪಾಗಲಾರದು. ಒಮ್ಮೆ ಒಂದು ಹೆಸರನ್ನು ಇನ್ನೊಮ್ಮೆ ಇನ್ನೊಂದನ್ನು ಹೇಳಿದರೂ ತಪ್ಪಾಗಲಾರದು. ಅದು ಪರಸ್ಪರ ವಿರುದ್ಧವಾಗುವುದಿಲ್ಲ. ಅಗತ್ಯಕ್ಕನುಗುಣವಾಗಿ ಒಂದೊಂದು ಕಾರಣವನ್ನು ಎತ್ತಿ ಹೇಳಿದರೆ ಸಂದರ್ಭಕ್ಕನುಗುಣವಾದ ನೈಜ ಸಂಗತಿ ಮಾತ್ರ ಆಗುತ್ತದೆ. ಆದರೆ ಇವುಗಳಲ್ಲಿ ಯಾರಾದರೊಬ್ಬರೇ ಇದಕ್ಕೆ ಕಾರಣವೆಂದು ವಿಶ್ವಾಸವಿರಿಸುವುದಾದರೆ ಅದನ್ನು ವಿರೋಧಿಸಬೇಕಾಗುತ್ತದೆ.

ಮನುಷ್ಯನ ಕರ್ಮಗಳ ಸ್ಥಿತಿಯೂ ಅಷ್ಟೆ ಒಬ್ಬ ವ್ಯಕ್ತಿ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ವೃದ್ಧನೋರ್ವ ಬಿದ್ದಿರುವುದು ಕಂಡು ಬರುತ್ತದೆ. ಆತನಿಗೆ ಬೇಕಾದರೆ ವೃದ್ಧನನ್ನು ಕಾಣದಂತೆ ನಟಿಸಿ ಮುಂದುವರಿಯಬಹುದು. ಆದರೆ ಹಾಗೆ ಮಾಡದೆ, ಆತ ವೃದ್ಧನನ್ನು ಎಬ್ಬಿಸಿ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾನೆ. ಅದನ್ನು ಆತ ಬೇರೆ ಬೇರೆ ಉದ್ದೇಶಗಳಿಗೆ ನಿರ್ವಹಿಸಬಹುದು. ವೃದ್ಧನ ಹಾಗೂ ಆತನ ಸಂಬಂಧಿಕರ ಕೃತಜ್ಞತೆ, ಪ್ರತ್ಯುಪಕಾರ, ಪ್ರತಿಫಲವನ್ನು ಬಯಸಬಹುದು. ಅದ್ಯಾವುದನ್ನೂ ಬಯಸದೆ ವೃದ್ಧನ ಮೇಲಿನ ಪ್ರೀತಿ-ಕಾರುಣ್ಯ-ವಾತ್ಸಲ್ಯ ಹಿತಕಾಂಕ್ಷೆಯ ಭಾವನೆಯಿಂದಲೂ ಮಾಡಬಹುದು. ಅಂದರೆ ಈ ಘಟನೆಯಲ್ಲಿ ಮನುಷ್ಯನು ತೆಗೆದುಕೊಳ್ಳುವ ತೀರ್ಮಾನ, ಆತನ ಉದ್ದೇಶ ಹಾಗೂ ಆತನ ಪ್ರಯತ್ನಗಳ ಪಾಲು ಇದೆ. ಆದ್ದರಿಂದ ವೃದ್ಧನನ್ನು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ಕೊಡಿಸಿದ್ದು ಆ ಮನುಷ್ಯನೆಂದು ಹೇಳುವುದರಲ್ಲಿ ತಪ್ಪಿಲ್ಲ. ಅದೇ ವೇಳೆ ವೃದ್ಧನನ್ನು ಎಬ್ಬಿಸಲು ಉಪಯೋಗಿಸಿದ ಕೈಗಳು, ದೇಹ, ಆರೋಗ್ಯ ಹಾಗೂ ಸಾಮರ್ಥ್ಯವನ್ನು ನೀಡಿದವನು ದೇವನಾಗಿದ್ದಾನೆ. ವೃದ್ಧನಲ್ಲಿ ಅನುಕಂಪ ತೋರಿ, ಚಿಕಿತ್ಸೆ ಮಾಡುವ ತೀರ್ಮಾನ ತಗೆದುಕೊಂಡ ಮನಸ್ಸು ದೇವನ ದಾನವಾಗಿದೆ. ಆದ್ದರಿಂದ ವೃದ್ಧನನ್ನು ದೇವನೇ ರಕ್ಷಿಸಿದ್ದಾನೆಂದು ಹೇಳಿದರೆ ಅದು ವಸ್ತುನಿಷ್ಟವೂ, ವಾಸ್ತವಿಕತೆಯೂ ಆಗುತ್ತದೆ. ಆಗ ಇಂತಹ ಘಟನೆಗಳನ್ನು ಮನುಷ್ಯನೊಂದಿಗೂ ಜೋಡಿಸಿ ಹೇಳಬಹುದು. ದೇವನೊಂದಿಗೂ `ಜೋಡಿಸಬಹುದು. ಎರಡನ್ನೂ ಒಟ್ಟಿಗೆ ಜೋಡಿಸಿ, ಏಕಕಾಲಕ್ಕೆ ಹೇಳಬಹುದು. ಹಾಗೆಯೇ ಇದು ಮನುಷ್ಯನ ಮಾತ್ರವೇ ಪ್ರಯತ್ನವೆಂದು ಹೇಳಿದರೆ ಅದನ್ನು ವಿರೋಧಿಸಬಹುದು. ದೇವನ ಪಾಲನ್ನು ಒತ್ತಿ ಹೇಳಬಹುದು. ಇಂತಹ ರೀತಿಗಳನ್ನು ಕುರ್‌ಆ‍ನ್ ಆರಿಸಿಕೊಂಡಿದೆ. ನಮ್ಮ ಮನದ ತೀರ್ಮಾನದಲ್ಲೂ ಉದ್ದೇಶದಲ್ಲೂ ಮನುಷ್ಯನ ಪಾಲು ಎಷ್ಟೆಂದು ಲೋಕದಲ್ಲಿ ಯಾರಿಗೂ ತಿಳಿಯುವುದಿಲ್ಲ, ಮನುಷ್ಯನ ಗ್ರಹಿಸುವ ಶಕ್ತಿಗೆ ಮೀರಿದ ವಿಷಯವಾದ್ದರಿಂದ ದೇವನು ವಿವರವಾಗಿ ಹೇಳಿಕೊಟ್ಟಿಲ್ಲ.

ಘಟನೆಗಳು, ಕರ್ಮಗಳು ಹಾಗೂ ಅವುಗಳ ಹಿಂದಿರುವ ತೀರ್ಮಾನಗಳನ್ನು ಪವಿತ್ರ ಕುರ್‌ಆ‍ನ್ ದೇವ ಮತ್ತು ಮನುಷ್ಯನೊಂದಿಗೆ ಜೋಡಿಸಿರುವುದು ಕಂಡು ಬರುತ್ತದೆ. ಕಪಟ ವಿಶ್ವಾಸಿಗಳು ಸ್ವೀಕರಿಸುವ ದೃಷ್ಟಿಕೋನವನ್ನು ತಿದ್ದಿ ಪವಿತ್ರ ಕುರ್ ಆನ್ ಹೇಳುತ್ತದೆ: ”ಅವರಿಗೇನಾದರೂ ಲಾಭ ಉಂಟಾದರೆ ‘ಇದು ಅಲ್ಲಾಹನ ಕಡೆಯಿಂದ’ ಎನ್ನುತಾರೆ. ನಷ್ಟ ಉಂಟಾದರೆ ಓ ಪೈಗಂಬರರೇ, ಇದು ನಿಮ್ಮಿಂದಾಗಿ ಉಂಟಾಗಿರುತ್ತದೆ” ಎನ್ನುತ್ತಾರೆ. ‘ಎಲ್ಲವೂ ಅಲ್ಲಾಹನ ಕಡೆಯಿಂದಲೇ ಆಗಿದೆ’ ಎಂದು ಹೇಳಿರಿ. ಇವರಿಗೆ ಏನಾಗಿಬಿಟ್ಟಿದೆ ? ಇವರಿಗೆ ಯಾವ ವಿಷಯವೂ ತಿಳಿಯುವುದಿಲ್ಲವಲ್ಲಾ” (ಪವಿತ್ರ ಕುರ್‌ಆ‍ನ್ 4:78)

ಒಳಿತು-ಕೆಡುಕು ದೇವನಿಂದ ಎಂದು ಸ್ಪಷ್ಟಪಡಿಸುವ ಕುರ್‌ಆ‍ನ್ ಇಲ್ಲಿ ಕಪಟವಿಶ್ವಾಸಿಗಳ ತಪ್ಪಾದ ನಿಲುವಿಗೆ ಅವರೇ ಕಾರಣಕರ್ತರೆಂದು ಹೇಳಿ, ಅದಕ್ಕಾಗಿ ಅವರನ್ನು ಆಕ್ಷೇಪಿಸಿತು. ಸೂಕ್ತ ನಿಲುಮೆಯನ್ನು ಕೈಗೊಳ್ಳುವ ಅವಕಾಶವಿದ್ದರೂ ಅವರು ಬೇರೆಯೇ ತೀರ್ಮಾನ ಕೈಗೊಂಡದ್ದು ಇದಕ್ಕೆ ಕಾರಣವಾಗಿತ್ತು.

ಗುಣದೋಷಗಳಲ್ಲಿ ಮನುಷ್ಯನ ಕರ್ಮದಂತೆಯೇ ದೇವವಿಧಿಗೂ ಪಾಲು ಇರುವುದರಿಂದ ಅದಕ್ಕೆ ಕಾರಣವನ್ನು ಸೃಷ್ಟಿಕರ್ತನಿಗೆ ಜೋಡಿಸಿ ಹೇಳುವುದಕ್ಕೆ ಪವಿತ್ರ ಕುರ್‌ಆನ್‌ನಲ್ಲಿ ಬಹಳಷ್ಟು ಉದಾಹರಣೆಗಳಿವೆ.

‘ಅಲ್ಲಾಹನು ನಿಮಗೆ ಯಾವುದೇ ರೀತಿಯ ಕೇಡನ್ನುಂಟುಮಾಡಿದರೆ, ಅವನ ಹೊರತು ನಿಮ್ಮನ್ನು ಆ ಕೇಡಿನಿಂದ ರಕ್ಷಿಸುವವರು ಯಾರೂ ಇಲ್ಲ ಅವನು ನಿಮಗೆ ಒಳಿತನ್ನುಂಟು ಮಾಡಿದರೆ ಅವನು ಸಕಲ ಕಾರ್ಯಗಳಿಗೆ ಸಮರ್ಥನು.’ (6: 17)

‘ಅಲ್ಲಾಹನನು ತನಗಿಷ್ಟ ಬಂದವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ತನಗಿಷ್ಟ ಬಂದವರಿಗೆ ಸನ್ಮಾರ್ಗದರ್ಶನ ನೀಡುತ್ತಾನೆ. ಅವನು ಮಹಾ ಪ್ರತಾಪಶಾಲಿಯೂ, ಧೀಮಂತನನೂ ಆಗಿದ್ದಾನೆ.’ (14: 4)

ಅದರೊಂದಿಗೆ ಸನ್ಮಾರ್ಗ-ದುರ್ಮಾರ್ಗದ ಪ್ರಾಪ್ತಿಯಲ್ಲಿ ಮನುಷ್ಯನ ಪಾಲನ್ನು ಪವಿತ್ರ ಕುರ್‌ಆನ್ ಎತ್ತಿ ಹೇಳಿದೆ. ‘ಯಾರು ಅಣುತೂಕ ಒಳಿತು ಮಾಡುತ್ತಾನೋ ಅದನ್ನು ಅವನು ಕಂಡೇ ತೀರುವನು. ಯಾರು ಅಣುತೂಕ ಕೆಡಕು ಮಾಡುವನೋ ಅವನು ಅದನ್ನು ಪಡೆದೇ ತೀರುವನು.’ (ಪವಿತ್ರ ಕುರ್‌ಆ‍ನ್ 99: 7-8)

‘ಒಬ್ಬನು ಇನ್ನೊಬ್ಬನ ಹೊರೆಯನ್ನು ಹೊರುವುದಿಲ್ಲ. ಮನುಷ್ಯನು ತಾನೇ ಪರಿಶ್ರಮಿಸಿದುದರ ಹೊರತು ಅವನಿಗೆ ಬೇರೇನೋ ಇಲ್ಲ.’ (ಪವಿತ್ರ ಕುರ್‌ಆ‍ನ್ 53: 38-39)

“ಅಲ್ಲಾಹನು ಯಾವ ಜೀವಿಯ ಮೇಲೂ ಅವನ ಶಕ್ತಿಗೆ ಮೀರಿದ ಹೊಣೆ ಹೊರಿಸು ವುದಿಲ್ಲ. ಪ್ರತಿಯೊಬ್ಬನೂ ಗಳಿಸಿದ ಪುಣ್ಯದ ಫಲ ಅವನಿಗೆ ಸಿಗುವುದು ಮತ್ತು ಅವನು ಶೇಖರಿಸಿದ ಪಾಪದ ದಂಡ ಅವನ ಮೇಲೆಯೇ ಇರುವುದು.’ (ಪವಿತ್ರ ಕುರ್‌ಆ‍ನ್ 2: 286)

“ನಿನಗೊದಗುವ ಪ್ರತಿಯೊಂದು ಒಳಿತು ಅಲ್ಲಾಹನ ಕೃಪೆಯಿಂದ ಒದಗುತ್ತದೆ ಮತ್ತು ನಿನಗೊದಗುವ ಪ್ರತಿಯೊಂದು ವಿಪತ್ತೂ ನಿನ್ನ ಕರ್ಮದಿಂದಾಗಿರುತ್ತದೆ.’ (ಪವಿತ್ರ ಕುರ್‌ಆ‍ನ್ 4:79)

‘ಸತ್ಯ ವಿಶ್ವಾಸ ಮತ್ತು ಸತ್ಕರ್ಮಗಳ ನಿಲುಮೆಯನ್ನಿರಿಸಿಕೊಂಡವರಿಗೆ ಅವರ ಪ್ರತಿಫಲಗಳು ಸರ್ವ ಸಂಪೂರ್ಣವಾಗಿ ಕೊಡಲ್ಪಡುವುವು ಮತ್ತು ಅಲ್ಲಾಹನು ಆಕ್ರಮಿಗಳನ್ನು ಎಂದೆಂದಿಗೂ ಪ್ರೀತಿಸುವುದಿಲ್ಲ.’ (ಪವಿತ್ರ ಕುರ್‌ಆ‍ನ್ 3:57)

‘ಆ ಮಾರ್ಗದಶನವನ್ನು ಮಾನ್ಯ ಮಾಡಲು ನಿರಾಕರಿಸುವವರೂ ನಮ್ಮ ‘ದೃಷ್ಟಾಂತ’ ಗಳನ್ನು ಸುಳ್ಳಾಗಿಸುವವರೂ ನರಕಾಗ್ನಿಯಲ್ಲಿ ಬೀಳುವವರಾಗಿದ್ದು, ಅಲ್ಲಿ ಅವರು ಸದಾ ಕಾಲ ಇರುವರು.’ (2:39) ‘ಸತ್ಯನಿಷೇಧಿಗಳೇ, ಇಂದು ನೆಪಗಳನೊಡ್ಡಬೇಡಿರಿ, ನಿಮಗೆ ನೀವು ಮಾಡುತ್ತಿದ್ದ ಕರ್ಮಗಳಿಗೆ ತಕ್ಕುದಾದ ಪ್ರತಿಫಲವನ್ನೇ ನೀಡಲಾಗುತ್ತಿದೆ.” (66:7)

ಒಳಿತು-ಕೆಡುಕುಗಳಲ್ಲಿ ಮನುಷ್ಯನ ಪಾಲು ಮತ್ತು ದೇವವಿಧಿಯು ಹೇಗೆ ಜೋಡಿಸಲ್ಪಡುತ್ತದೆಯೆಂದು ಕುರ್ ಆನ್ ಸ್ಪಷ್ಟಪಡಿಸುತ್ತದೆ. ‘ಹೇಳಿರಿ ಅಲ್ಲಾಹನು ನಿಶ್ಚಯವಾಗಿಯೂ ತನಗಿಷ್ಟ ಬಂದವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ಅವನ ಕಡೆಗೆ ವಾಲುವವರಿಗೆ ತನ್ನ ಕಡೆಗೆ ಬರುವ ದಾರಿಯನ್ನು ತೋರಿಸುತ್ತಾನೆ.” (ಪವಿತ್ರ ಕುರ್‌ಆನ್ 13:27) ‘ಸನ್ಮಾರ್ಗವು ವ್ಯಕ್ತವಾದ ಬಳಿಕವು ಸಂದೇಶವಾಹಕರ ವಿರುದ್ಧ ಟೊಂಕ ಕಟ್ಟಿಕೊಂಡವನನ್ನೂ ಸತ್ಯವಿಶ್ವಾಸಿಗಳ ಮಾರ್ಗದ ಹೊರತು ಅನ್ಯ ಮಾರ್ಗಗಳಲ್ಲಿ ನಡೆಯುವವನನ್ನೂ ಅವನು ತಾನಾಗಿ ತಿರುಗಿಕೊಂಡ ಕಡೆಗೆ ನಾವು ತಿರುಗಿಸಿ ಬಿಡುವೆವು.’ (ಪವಿತ್ರ ಕುರ್‌ಆ‍ನ್ 4:115)

ಸಂಕ್ಷಿಪ್ತದಲ್ಲಿ ಕರ್ಮಗಳ ಪ್ರತಿಫಲದ ಕುರಿತು ತಿಳಿದುಕೊಳ್ಳಲು ಸಾಧ್ಯವಿರುವ ಮನುಷ್ಯನಿಗೆ, ಆಲೋಚಿಸಿ ತೀರ್ಮಾನಿಸಲು, ಅದರಂತೆ ಕಾರ್ಯ ಪ್ರವೃತವಾಗಲು ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಈ ಸ್ವಾತಂತ್ರ್ಯ, ಅಪರಿಮಿತವೋ, ಅನಿಯಂತ್ರಿತವೋ ಅಲ್ಲ, ಅದು ದೇವೇಚ್ಛೆಗೂ, ವಿಧಿಗೂ ವಿಧೇಯವಾಗಿದೆ. ಈ ಸೀಮಿತ ಪರಿಧಿಯೊಳಗೆ ಮನುಷ್ಯನಿಗೆ ನೀಡಲಾಗಿರುವ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಹೊಣೆಗಾರಿಕೆಯನ್ನು ನೀಡಲಾಗಿದೆ. ಈ ಹೊಣೆಗಾರಿಕೆಯ ನಿರ್ವಹಣೆ ಹಾಗೂ ಉಲ್ಲಂಘನೆಯು ಜೀವನದ ಜಯಾಪಜಯಗಳನ್ನು ಸ್ವರ್ಗ-ನರಕವನ್ನು ತೀರ್ಮಾನಿಸುತ್ತದೆ. ಆದ್ದರಿಂದ ಅಲ್ಲಾಹನು ಯಾರಿಗೂ ಅವನ ಸಾಮರ್ಥ್ಯಕ್ಕೆ ಮೀರಿದ ಹೊಣೆಯನ್ನು ಹೊರಿಸುವುದಿಲ್ಲ, ಯಾರಿಗೂ ಅನ್ಯಾಯ ಮಾಡುವುದಿಲ್ಲ, ದೇವವಿಧಿ ಮತ್ತು ಮನುಷ್ಯ ಸ್ವಾತಂತ್ರ್ಯದ ಕುರಿತು ಹಾಗೂ ಅವುಗಳ ನಡುವಿನ ಸಂಬಂಧದ ಕುರಿತು ಮಾನವನಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಗಿರುವ ಕುರ್‌ಆನ್‌ನ ಸೂಕ್ತಗಳಲ್ಲಿ ಸ್ವಲ್ಪವೂ ವಿರೋಧಾಭಾಸವಿಲ್ಲ.

ಎರಡನೇ ಖಲೀಫ ಉಮರುಲ್ ಫಾರೂಕ್ (ರ) ರ ಕಾಲದಲ್ಲಿ ದೇವವಿಧಿ ಮತ್ತು ಮಾನವ ಸ್ವಾತಂತ್ರ್ಯದ ಇಸ್ಲಾಮೀ ದೃಷ್ಟಿಕೋನವನ್ನು ಅನಾವರಣಗೊಳಿಸುವ ಘಟನೆ ನಡೆಯಿತು. ಫೆಲಸ್ತೀನ್‌ನಲ್ಲಿ ಪ್ಲೇಗ್ ರೋಗ ವ್ಯಾಪಕವಾಯಿತು. ಕೆಲವೇ ದಿನಗಳಲ್ಲಿ ಅದು ಸಿರಿಯಾಕ್ಕೂ ತಲುಪಿತು. ಆ ರೋಗಪೀಡಿತರಾದವರೆಲ್ಲ ಮರಣ ಹೊಂದಿದರು. ಔಷಧಿ, ಚಿಕಿತ್ಸೆ ಯಾವುದೂ ಫಲಕಾರಿಯಾಗಲಿಲ್ಲ. ಒಂದೇ ತಿಂಗಳಿನಲ್ಲಿ ಹದಿನೈದು ಸಾವಿರ ಜನರ ಅಂತ್ಯವಾಯಿತು. ವಿಷಯದ ಗಂಭೀರತೆ ಅರ್ಥಮಾಡಿಕೊಂಡ ಖಲೀಫ, ಸೈನಿಕರ ಒಂದು ತಂಡದೊಂದಿಗೆ ಸಿರಿಯಾಕ್ಕೆ ಹೊರಟರು. ದಾರಿ ಮಧ್ಯೆ ತನ್ನ ಆಪ್ತಸಂಗಾತಿಗಳೊಡನೆ, ಕಾರ್ಯಯೋಜನೆಯ ಕುರಿತು ಸಮಾಲೋಚನೆ ನಡೆಸಿದರು. ತುರ್ತು ಚಿಕಿತ್ಸಾ ಸೇವೆಗಳಿಗೆ ಆದೇಶಿಸಿದ ಬಳಿಕ ಅಲ್ಲಿಗೆ ಹೋಗಬೇಕಾಗಿಲ್ಲವೆಂದು ತೀರ್ಮಾನಿಸಲಾಯಿತು. ಸಾಂಕ್ರಾಮಿಕ ರೋಗ ವ್ಯಾಪಕವಾಗಿರುವ ಸ್ಥಳಕ್ಕೆ ಪ್ರಯಾಣ ಮಾಡುವುದು ಅಪಾಯಕಾರಿಯೆಂದು ಯಾತ್ರೆ ರದ್ದುಗೊಳಿಸಲಾಯಿತು. ವಿಷಯ ತಿಳಿದ ಅಬೂ ಉಬೈದ ಓಡಿ ಹೋಗುತ್ತಿದ್ದೀರಾ? ಆ ಸೈನಿಕನ ಅಂತರ್ಗತವನ್ನು ಅರ್ಥಮಾಡಿಕೊಂಡ ಖಲೀಫ ಹೇಳಿದರು, ‘ಹೌದು, ಒಂದು ದೇವವಿಧಿಯಿಂದ ಇನ್ನೊಂದು ದೇವವಿಧಿಯ ಕಡೆಗೆ’ ಸ್ವಲ್ಪ ಹೊತ್ತು ಮೌನವಹಿಸಿದ ಬಳಿಕ ಅವರು ಹೇಳಿದರು, ಒಬ್ಬನು ಒಂದು ಸ್ಥಳಕ್ಕೆ ಬಂದು ತಲುಪಿದ. ಅಲ್ಲಿ ಅವನಿಗೆ ಎರಡು ಸ್ಥಳಗಿಳಿವೆ. ಒಂದು ಫಲಸಮೃದ್ಧವಾದದ್ದು ಮತ್ತು ಇನ್ನೊಂದು ಏನೂ ಇಲ್ಲದ್ದು. ಫಲಸಮೃದ್ಧವಾದದ್ದನ್ನು ಸಂರಕ್ಷಿಸುವವನು ಅಲ್ಲಾಹನ ವಿಧಿಯ ಪ್ರಕಾರ ಕಾರ್ಯನಿರತನಾಗುವವನಲ್ಲವೇ? ಇನ್ನೊಂದನ್ನು ನೋಡಿಕೊಳ್ಳವವನೂ ಅಲ್ಲಾಹನ ವಿಧಿಯನ್ನೇ ಪಾಲಿಸುವುದಲ್ಲವೇ?

ಇಸ್ಲಾಮಿನ ವಿಧಿವಿಶ್ವಾಸವು ವಿಪತ್ತು ಹಾಗೂ ವಿನಾಶದ ಕೀಲಿಕೈಯಾಗಬಾರದೆಂದೂ, ಅಭಿವೃದ್ಧಿ, ಏಳಿಗೆ ಹಾಗೂ ವಿಜಯದ ಹಾದಿಯಲ್ಲಿ ಆಘಾತ ನೀಡಬಾರದೆಂದೂ ಉಮರುಲ್ ಫಾರೂಕ್ ಸ್ಪಷ್ಟ ಭಾಷೆಯಲ್ಲಿ ಸಮಾಜಕ್ಕೆ ಕಲಿಸಿಕೊಟ್ಟಿದ್ದಾರೆ. ದೇವವಿಧಿಯ ನಿರೀಕ್ಷೆಯಲ್ಲಿ ಮನುಷ್ಯನು ತನಗೆ ನೀಡಲಾದ ಸ್ವಾತಂತ್ರ್ಯದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂಬ ಪಾಠವನ್ನು ಅದು ಒಳಗೊಂಡಿದೆ.

ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *