Home / ಪ್ರಶ್ನೋತ್ತರ / ವಿಧಿ ವಿಶ್ವಾಸ-ಭೌತಿಕವಾದಿಗಳು ಮತ್ತು ಇಸ್ಲಾಮ್

ವಿಧಿ ವಿಶ್ವಾಸ-ಭೌತಿಕವಾದಿಗಳು ಮತ್ತು ಇಸ್ಲಾಮ್

ದೇವನು ಸರ್ವಶಕ್ತ ಹಾಗೂ ಸರ್ವಜ್ಞನಾಗಿದ್ದಾನಲ್ಲವೇ? ಹೀಗಿರುವಾಗ ಲೋಕದ ಮನುಷ್ಯರು ಯಾವ ರೀತಿಯವರೆಂದೂ, ಹೇಗೆ ಬದುಕುವರೆಂದೂ ಸೃಷ್ಟಿಕರ್ತನಿಗೆ ಮೊದಲೇ ತಿಳಿದಿದೆ. ದಿವ್ಯಜ್ಞಾನದಲ್ಲಿ ತಪ್ಪು ಸಂಭವಿಸುವುದು ಅಸಾಧ್ಯವಾದುದರಿಂದ ದೇವನ ತೀರ್ಮಾನದಲ್ಲಿ ಸ್ವಲ್ಪವೂ ಬದಲಾವಣೆ ಸಾಧ್ಯವಿಲ್ಲವೆಂದು ಇದರ ಅರ್ಥವಲ್ಲವೇ?

ದೇವವಿಧಿಗನುಗುಣವಾಗಿ ಮನುಷ್ಯ ಸಾಗಬೇಕಾದುದರಿಂದ ಮನುಷ್ಯನಿಗೆ ಸ್ವಾತಂತ್ರ್ಯ ಎಲ್ಲಿದೆ? ದೇವವಿಧಿಗೆ ನಿರ್ಬಂಧಿತನಾಗಿ ಆತ ಮಾಡುವ ಕರ್ಮಗಳ ಹೆಸರಿನಲ್ಲಿ ಶಿಕ್ಷೆ ನೀಡುವುದು ಎಷ್ಟು ಸರಿ?

ಆಸ್ತಿಕರು ಹಾಗು ನಾಸ್ತಿಕರು ನಿರಂತರವಾಗಿ ಈ ವಿಷಯದಲ್ಲಿ ಸಂಶಯ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದ್ದರಿಂದ ಈ ವಿಷಯವನ್ನು ಸ್ವಲ್ಪ ವಿವರವಾಗಿ ತಿಳಿಸುವುದು ಪ್ರಯೋಜನಕಾರಿಯೆಂದು ಭಾವಿಸುತ್ತೇನೆ. ದೇವವಿಧಿ ಹಾಗೂ ಮಾನವ ಸ್ವಾತಂತ್ರ್ಯದ ಕುರಿತು ಇಸ್ಲಾಮ್‌ನ ನಿಲುವನ್ನು ವಿವರಿಸುವುದಕ್ಕಿಂತ ಮೊದಲು ಮನುಷ್ಯನ ಕುರಿತು ಭೌತಿಕವಾದಿಗಳ ನಿಲುವು ಹೇಗಿದೆಯೆಂದು ನೋಡುವುದು ಒಳಿತು.

1. ಭೌತಿಕವಾದಿಗಳ ಸ್ಪಷ್ಟನೆಯಂತೆ ಜೀವಶಾಸ್ತ್ರಕ್ಕೆ ಅನುಗುಣವಾಗಿ ಮನುಷ್ಯನು ಸ್ವಾತಂತ್ರ್ಯವಿಲ್ಲದವನು. ಅವನ ವಿಕಾರ, ವಿಚಾರ, ತೀರ್ಮಾನ ಹಾಗೂ ಕರ್ಮಗಳೆಲ್ಲಾ ದೇಹ ರಚನೆಯ ಸೃಷ್ಟಿಯಾಗಿದೆ. ಜೈವಿಕ ವಸ್ತುಗಳು ಜೀವಕೋಶಗಳಿಂದ ರೂಪಗೊಳ್ಳುತ್ತದೆ. ಅದರೊಳಗಿನ ಕ್ರೋಮೋಝೋಮ್‌ಗಳ ಜೀನುಗಳಲ್ಲಿರುವ ಜೈವಿಕಧಾತುಗಳು ಜೀವಿಗಳ ಸ್ವಭಾವವನ್ನು ನಿರ್ಧರಿಸುತ್ತದೆ. ಮಾನವನ ಸ್ಥಿತಿಯೂ ಅಷ್ಟೆ, ಆದ್ದರಿಂದ ಕರುಣೆ, ಕ್ರೌರ್ಯ, ಸದ್ಗುಣ, ದುರ್ಗುಣ, ಸತ್ಕರ್ಮ-ದುಷ್ಕರ್ಮಗಳೆಲ್ಲವೂ ಜೀವಧಾತುಗಳಿಗೆ ಸಂಬಂಧಿಸಿದೆ. ಮಾನವನ ದೇಹ ಪ್ರಕೃತಿಯಿಂದ ವಿಚಾರಗಳು ಕೂಡಾ ಅದನ್ನೇ ಅನುಸರಿಸುತ್ತದೆ. ಜೀವನದ ಎಲ್ಲಾ ಕಾರ್ಯಗಳನ್ನು ಈ ರೀತಿ ವಂಶವಾಹಿನಿಯನ್ನು ಅವಲಂಬಿಸಿದೆಯೆಂದು ವಾದಿಸಲಾಗುತ್ತಿದೆ. ಅದನ್ನು ಉಲ್ಲಂಘಿಸಲು ಅಥವಾ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅಥವಾ ಮನುಷ್ಯನು ಸಂಪೂರ್ಣವಾಗಿ ತನ್ನ ಶರೀರ ಪ್ರಕೃತಿಗೆ ವಿಧೇಯನಾಗಿದ್ದಾನೆ. ಆತನನ್ನು ಸಂಪೂರ್ಣ ನಿಯಂತ್ರಿಸುವ ಕೆಲಸವನ್ನು ಅವನ ಮಸ್ತಿಷ್ಕದ ಹಾಗೂ ನರ ವ್ಯೂಹಗಳ ಪದಾರ್ಥ ಘಟಕಗಳು ನಿರ್ಣಯಿಸುತ್ತದೆ. ಅದರಲ್ಲಿ ಯಾರಿಗೂ ಮಧ್ಯ ಪ್ರವೇಶಿಸಲು ಅಥವಾ ಏನಾದರೂ ಪಾಲುದಾರರಾಗಲು ಸಾಧ್ಯವಿಲ್ಲ, ಆದ್ದರಿಂದ ಆಧುನಿಕ ಭೌತಿಕ ಜೈವಿಕ ಶಾಸ್ತ್ರದಂತೆ ಮನುಷ್ಯನು ಪ್ರಕೃತಿ ವಿಧಿಗೆ ವಿಧೇಯನಾಗಿದ್ದಾನೆ. ಅದರಿಂದ ಹೊರಬರಲು ಸಾಧ್ಯವಾಗದ ರೀತಿಯಲ್ಲಿ ಸಂಪೂರ್ಣ ಬಂಧಿತನಾಗಿದ್ದಾನೆ. ನಾವು ಸರಿ-ತಪ್ಪು, ಒಳಿತು-ಕೆಡುಕು, ಧರ್ಮ-ಅಧರ್ಮ, ವಿನಯ-ಅಹಂಕಾರ, ಕರುಣೆ-ಕ್ರೌರ್ಯ ಎಂದು ಜೀನ್‌ಗಳ ವಂಶವಾಹಿನಿಗಳ ಕಾರಣಗಳಿಂದಲೇ ಉಂಟಾಗುತ್ತದೆ. ಜೀವನ ಪಾವಿತ್ರ್ಯತೆಯೂ ಶಾರೀರಿಕ ಆರೋಗ್ಯದಂತಹ ವಿಷಯವಾಗಿದೆ. ಜೀವನದ ಕೆಡುಕು ಶಾರೀರಿಕ ಅನಾರೋಗ್ಯದಂತೆ. ಆದ್ದರಿಂದ ಉತ್ಕೃಷ್ಟ ಕಾರ್ಯಗಳನ್ನು ನಿರ್ವಹಿಸುವ ವ್ಯಕ್ತಿಗಳನ್ನು ಹೊಗಳುವುದು ದೇಹದ ಆರೋಗ್ಯದ ವಿಷಯದಲ್ಲಿ ಒಬ್ಬನನ್ನು ಅಭಿನಂದಿಸಿದಂತೆ ಅರ್ಥಶೂನ್ಯವಾಗಿದೆ. ಓರ್ವನ ಕೆಡುಕನ್ನು ಖಂಡಿಸುವುದೆಂದರೆ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಅನಾರೋಗ್ಯದ ಕಾರಣಕ್ಕೆ ಖಂಡಿಸಿದಂತಾಗುತ್ತದೆ.

2. ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದವು ಮುಂದಿರಿಸುವ ಒಂದು ವಿಷಯವೇನೆಂದರೆ ಪರಂಪರಾಗತ ನಿಯಮ. ಅದು ಹೇಳುವಂತೆ ಮನುಷ್ಯನ ಸ್ವಭಾವ, ಒಡನಾಟ, ಜೀವನ ಶೈಲಿಯೆಲ್ಲವೂ ಯುಗಯುಗಾಂತರಗಳಿಂದ ವಂಶಪಾರಂಪರ್ಯವಾಗಿ ಮುಂದುವರಿಯುತ್ತಾ ಬರುತ್ತದೆ. ಇದರಿಂದ ಪಾರಾಗಲು ಯಾರಿಗೂ ಸಾಧ್ಯವಿಲ್ಲ. ಮನುಷ್ಯನು ಮಾಡುವ ಒಳಿತು ಮತ್ತು ಕೆಡುಕಿನ ಬೀಜಗಳು ತನ್ನ ಪೂರ್ವಿಕರಲ್ಲಿ ನಿಕ್ಷೇಪಿಸಲಾಗಿದೆ. ಹೀಗೆ ಆ ಬೀಜವು ತಲೆತಲಾಂತರಗಳಿಗೆ ಮುಂದುವರಿಯುತ್ತದೆ. ಅದೇ ರೀತಿ ಮಾವಿನ ಬೀಜದಿಂದ ಮಾವಿನ ಹಣ್ಣು ದೊರೆಯುವಂತೆ ಮನುಷ್ಯನಲ್ಲೂ ಪರಂಪರಾಗತವಾಗಿ ಮುಂದುವರಿಯುತ್ತದೆ. ಆದ್ದರಿಂದ ಯಾರಿಗೂ ತಮ್ಮ ಸ್ವಭಾವಗುಣ, ವರ್ತನೆ, ಸಂಪ್ರದಾಯ, ಕರ್ಮಗಳನ್ನು ತೀರ್ಮಾನಿಸಲು ಸಾಧ್ಯವಿಲ್ಲ. ಎಲ್ಲವೂ ಅನುಲ್ಲಂಘನೀಯವಾದ ನಿಯಮಗಳಿಗೆ ವಿಧೇಯವಾಗಿದೆ. ಮನುಷ್ಯನು ಕಾಲದ ಕೈಯಲ್ಲಿರುವ ಆಟಿಕೆ ಮಾತ್ರ.

3. ಕಾರ್ಲ್ ಮಾರ್ಕ್ಸ್ ಮತ್ತು ಫೆಡ್ರಿಕ್ ಏಂಗಲ್ಸ್ ಸೇರಿದಂತೆ ಭೌತಿಕವಾದಿಗಳ ದೃಷ್ಟಿಕೋನದಂತೆ ಮನುಷ್ಯನು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಪರಿಸ್ಥಿತಿಯ ಸೃಷ್ಟಿಯಾಗಿದ್ದಾನೆ. ಕೇವಲ ಭೌತಿಕ ಮಟ್ಟದಲ್ಲಿ ಇತಿಹಾಸವನ್ನು ವ್ಯಾಖ್ಯಾನಿಸಿದವರು ಅದನ್ನು ಸಮರ್ಥಿಸಲು ಅನೇಕ ಆಧಾರ ಪ್ರಮಾಣಗಳನ್ನು ಕಂಡುಹಿಡಿದರು. ಮನುಷ್ಯನ ಗುಣಸ್ವಭಾವ ಒಡನಾಟ, ವಿಚಾರಗಳು, ಕರ್ಮ, ಸಂಪ್ರದಾಯಗಳೆಲ್ಲವೂ ಬಾಹ್ಯ ಕಾರಣಗಳಿಂದ ಸಂಭವಿಸುತ್ತದೆಂದು ಅವರು ವಾದಿಸುತ್ತಾರೆ. ಜನರ ಒಳಿತು-ಕೆಡುಕುಗಳು ಅವರು ಬದುಕುವ ವಾತಾವರಣವನ್ನು ಅವಲಂಬಿಸಿದೆಯೆನ್ನುವ ಈ ವಿಭಾಗವು ಸರಿ-ತಪ್ಪು, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ… ಎಲ್ಲವೂ ಕೂಡಾ ಪ್ರಸ್ತುತ ಪರಿಸ್ಥಿತಿಯ ಸೃಷ್ಟಿಯೆಂದು ವಾದಿಸುತ್ತಾರೆ. ಇಲ್ಲಿಯು ಕೂಡಾ ಮನುಷ್ಯನು ಪರಿಸ್ಥಿತಿಯ ವಿಧಿಗೆ ತಲೆಬಾಗುವವನಾಗುತ್ತಾನೆ. ಆತ ಮಾಡುವ ಎಲ್ಲಾ ಕರ್ಮಗಳು ಅಲ್ಲಿ ಪರಿಸ್ಥಿತಿಯೇ ಕಾರಣವೆನ್ನಲಾಗುತ್ತದೆ.

ಧರ್ಮ ವಿರೋಧಿ ಮುಖಮುದ್ರೆಯನ್ನು ಹೊತ್ತುಕೊಂಡು ಭೌತಿಕವಾದವು ಮನುಷ್ಯನು ಸ್ವಾತಂತ್ರ್ಯವಿಲ್ಲದವನೆಂದು ಘೋಷಿಸುತ್ತದೆ. ಸ್ವಂತ, ಸ್ವತಂತ್ರವಾದ ತೀರ್ಮಾನ ತೆಗೆದುಕೊಳ್ಳುವ ಶಕ್ತಿಯೂ ಅವನಿಗಿಲ್ಲ, ಆತ ಪ್ರಕೃತಿ ನಿಯಮದಲ್ಲಿ ಬಂಧಿತನಾದ, ಅನುಲ್ಲಂಘನೀಯ ವಿಧಿಯ ಬಲಿಪಶು. ಇವಾಗ್ ಪಾವಲೋ ಬರೆಯುತ್ತಾರೆ: ”ಪ್ರಕೃತಿಯಲ್ಲಿರುವ ಎಲ್ಲಾ ವ್ಯವಸ್ಥೆಗಳಂತೆ ಮನುಷ್ಯನು ಒಂದು ವ್ಯವಸ್ಥೆಯಾಗಿದ್ದಾನೆ. ಪ್ರಕೃತಿಯ ಅನುಲ್ಲಂಘನೀಯವೂ ಸಾಮಾನ್ಯವೂ ಆದ ನಿಯಮಗಳಿಗೆ ಮನುಷ್ಯನು ಒಳಪಟ್ಟಿದ್ದಾನೆ.” (Psychologic Experimental, ಉದ್ದರಣೆ: ಅಲಿಜಾ ಅಲೀ ಬೇಗೋವಿಚ್ – ಇಸ್ಲಾಮ್ ರಾಜಮಾರ್ಗ ಪುಟ-39)

ಫ್ರೆಡ್ರಿಕ್ ಏಂಗಲ್ಸ್ ಹೇಳುತ್ತಾರೆ: ”ಮನುಷ್ಯನು ಆಯಾ ಪರಿಸ್ಥಿತಿಯ ಹಾಗೂ ಉದ್ಯೋಗದ ಉತ್ಪನ್ನವಾಗಿದ್ದಾನೆ.” ( ಉದ್ದರಣೆ Ibid, ಪುಟ 39)

ಮನುಷ್ಯನ ಹೊರತು ಇತರ ಜೀವಜಾಲಗಳಿಗೆ ಇವೆಲ್ಲವೂ ಸರಿಯಾಗಿದೆ. ಆದರೆ ಮನುಷ್ಯನು ಸ್ವಾತಂತ್ರ್ಯವಿಲ್ಲದವನೋ, ಪ್ರಕೃತಿ ನಿಯಮಗಳಲ್ಲಿ ಬಂಧಿತನೋ ಅಲ್ಲ

1. ಪ್ರಾಣಿ ಪಕ್ಷಿಗಳು, ಕೀಟಗಳು, ಜಲಚರಗಳೆಲ್ಲವೂ ಅವುಗಳ ಹುಟ್ಟುಗುಣಕ್ಕೆ ಅನುಗುಣವಾಗಿ ಬದುಕುತ್ತದೆ. ಅದನ್ನು ಉಲ್ಲಂಘಿಸಲು, ಬದಲಾಯಿಸಲು ಅವುಗಳಿಗೆ ಸಾಧ್ಯವಿಲ್ಲ. ಸಹಜಗುಣದ ವಿಷಯದಲ್ಲಿ ಮನುಷ್ಯನನ್ನೂ ಮೀರಿಸುವ ಜೀವಜಾಲಗಳಿವೆ. ಅವುಗಳ ಸಹಜಗುಣಗಳೇ ಅವುಗಳ ಉಳಿವಿಗೂ, ಸುರಕ್ಷತೆಗೂ ಕಾರಣವಾಗಿದೆ. ಆದರೆ ಸಹಜಗುಣಗಳನ್ನು ನಿಯಂತ್ರಿಸಲು ಅವುಗಳಿಗೆ ಸಾಧ್ಯವಾಗುವುದಿಲ್ಲ. ಬಾಯಾರಿ ಬಳಲಿದ ನಾಯಿಗೆ ನೀರು ಲಭಿಸಿದರೆ ಕುಡಿಯದಿರಲು ಸಾಧ್ಯವಿಲ್ಲ. ಕುಕ್ಕಲು ಬರುವ ಕೋಳಿಗೆ ಎದುರಾಗುವ ಹುಂಜವು ಅದನ್ನು ಕ್ಷಮಿಸುವುದಿಲ್ಲ, ಜೇನ್ನೊಣವು ನಿರ್ಣಯಿಸಿದ ಗೂಡಿನ ರೀತಿಯಲ್ಲಿ ಮಾತ್ರ ಗೂಡು ಕಟ್ಟಬಲ್ಲದು. ದೇಶಾಂತರ ಹೋಗುವ ಪಕ್ಷಿಗಳಿಗೆ ದೂರ ಪ್ರದೇಶಕ್ಕೆ ತಲುಪದಿರಲು ಸಾಧ್ಯವಿಲ್ಲ. ಹಸಿದು ಬಳಲಿದ ದನಕ್ಕೆ ಹುಲ್ಲು ದೊರೆತರೆ ತಿನ್ನದಿರಲು ಸಾಧ್ಯವಾಗದು. ಆದರೆ ಮನುಷ್ಯನ ಸ್ಥಿತಿ ಭಿನ್ನವಾಗಿದೆ. ತೀವ್ರ ದಾಹವಿದ್ದರೂ ನೀರು ದೊರೆತರೂ, ಕುಡಿಯುವ ಬಯಕೆ ಇದ್ದರೂ ಕುಡಿಯದಿರಲು ಮನುಷ್ಯರಿಗೆ ಸಾಧ್ಯವಿದೆ. ಬಹಳ ಹಸಿದಿದ್ದರೂ, ಆಹಾರ ಬಳಿಯಿದ್ದರೂ ತಿನ್ನದಿರಲು ಮನುಷ್ಯನಿಗೆ ಸಾಧ್ಯವಿದೆ. ಬೈದವನಿಗೆ ತಿರುಗಿ ಬಯ್ಯುವ ಸಾಮರ್ಥ್ಯವಿದ್ದರೂ ಹಾಗೆ ಮಾಡದಿರಲು ನಮಗೆ ಸಾಧ್ಯವಿದೆ. ನಮ್ಮ ಜೀವನ ಶೈಲಿಯನ್ನು ನಿರ್ಧರಿಸಲು, ರೂಢಿಸಲು ನಮಗೆ ಸಾಧ್ಯವಿದೆ. ಮಹಾನ್ ಧೈಯಕ್ಕಾಗಿ ಹೋರಾಡುವ ವ್ಯಕ್ತಿ ತುಂಬಿದ ಇಚ್ಚಾಶಕ್ತಿಯೊಂದಿಗೆ ಆ ಕೆಲಸಕ್ಕೆ ಮುಂದಾಗುತ್ತಾನೆ. ಮೋಹಗಳಿಗೆ ಕಡಿವಾಣ ಹಾಕಲು, ಬಯಕೆಗಳನ್ನು ನಿಯಂತ್ರಿಸಲು, ಇಚ್ಛೆಗಳನ್ನು ನಿಯಂತ್ರಿಸಲು ಸಾಧ್ಯವಿರುವ ಮನುಷ್ಯರು ಖಂಡಿತವಾಗಿಯೂ ಸಹಜಗುಣದ ಗುಲಾಮರಲ್ಲ ಅದರ ಯಜಮಾನನಾಗಿದ್ದಾನೆ. ಶಾರೀರಿಕ ರಚನೆ, ವಂಶ ಪಾರಂಪರ್ಯ ಅಥವಾ ಪರಿಸ್ಥಿತಿಯ ಸೃಷ್ಟಿಯಲ್ಲ ಬದಲಾಗಿ ಸ್ವತಃ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವಿರುವ ಸ್ವತಂತ್ರ ವ್ಯಕ್ತಿತ್ವವುಳ್ಳವನಾಗಿದ್ದಾನೆ.

2. ನಿರ್ಬಂಧಿತನಾಗಿ ಮಾಡುವ ಕರ್ಮಗಳಿಗಾಗಿ ಯಾರೂ ಹೊಗಳಲ್ಪಡುವುದಿಲ್ಲ. ತೆಗಳಲ್ಪಡುವುದಿಲ್ಲ. ಗೌರವಾರ್ಹನೋ, ಶಿಕ್ಷಾರ್ಹನೋ ಆಗುವುದಿಲ್ಲ, ಯಜಮಾನನ ಬಲವಂತ ದಿಂದ ಕಳ್ಳತನ ಮಾಡುವ ಗುಲಾಮ, ದಾರಿ ಹೋಕರಿಗೆ ಕಲ್ಲೆಸೆಯುವ ಮನೋರೋಗಿಯನ್ನು ಅಪರಾಧಿಯೆಂದು ಹೇಳುವುದಿಲ್ಲ, ಆದರೆ ಬೇರೆ ಯಾರಿಂದಾದರೂ ಆ ಕೃತ್ಯ ಸಂಭವಿಸಿದರೆ ಆತ ಆ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸುತ್ತಾನೆ. ಆದ್ದರಿಂದ ಭೂಮಿಯಲ್ಲಿ ಗೌರವ, ಆಕ್ಷೇಪ, ಶಿಕ್ಷೆ, ರಕ್ಷೆಯೂ ದೊರೆಯುತ್ತಿರುವುದು. ಮನುಷ್ಯನು ನಿರ್ಬಂಧಿತಾವಸ್ಥೆಯಲ್ಲಿಲ್ಲ. ಸ್ವತಂತ್ರನಾಗಿದ್ದಾನೆಂಬುದಕ್ಕೆ ಸೂಕ್ತ ಆಧಾರವಾಗಿದೆ. ಆತ ಸ್ವಾತಂತ್ರ್ಯವಿಲ್ಲದವನೂ, ಪ್ರಕೃತಿ ನಿಯಮಗಳಿಂದ ಬಂಧಿಸಲ್ಪಟ್ಟವನೂ ಆಗಿದ್ದರೆ ತಾನೆಸಗಿದ ಕ್ರೂರ ಕೃತ್ಯಗಳಿಗಾಗಿ ಶಿಕ್ಷಿಸಲ್ಪಡುವುದರಲ್ಲಿ ಅರ್ಥವಿಲ್ಲ, ಅದೇ ವೇಳೆ ಉತ್ಕೃಷ್ಟ ಕಾರ್ಯಗಳಿಗಾಗಿ ಅವನಿಗೆ ಗೌರವ ಹಾಗೂ ಪ್ರತಿಫಲ ನೀಡುವುದಕ್ಕೂ ಅರ್ಥವಿಲ್ಲ.

3. ಭೌತಿಕವಾದಿಗಳ ನಂಬಿಕೆಯಂತೆ ಮನುಷ್ಯನು ಸಂಪೂರ್ಣವಾಗಿ ಪ್ರಕೃತಿಯ ವಿಧಿಗೆ ವಿಧೇಯನೆಂದಾದರೆ ಕಾನೂನು ನಿಯಮಗಳಿಗೂ, ವ್ಯವಸ್ಥೆಗಳಿಗೂ, ಶಿಷ್ಟಾಚಾರ, ಶಿಸ್ತುಗಳಿಗೂ ಯಾವುದೇ ಬೆಲೆಯಿರುವುದಿಲ್ಲ, ಮಸ್ತಿಷ್ಕ, ನರವ್ಯೂಹ, ಜೀನುಗಳು, ವಂಶವಾಹಿನಿಗಳಂತೆ ಮಾನವ ಸಾಗುತ್ತಾನೆಂದಾದರೆ ಈ ವ್ಯವಸ್ಥೆಗಳ ಅಗತ್ಯವಿತ್ತೇ? ಆದರೆ ಸಂವಿಧಾನ, ಕಾನೂನು ವ್ಯವಸ್ಥೆ, ನ್ಯಾಯಾಲಯಗಳಿಲ್ಲದ ಯಾವುದೇ ಸಮೂಹವಾಗಲಿ, ರಾಷ್ಟ್ರವಾಗಲಿ, ವಿಶ್ವದಲ್ಲಿಲ್ಲ, ಇದು ಮನುಷ್ಯನಿಗೆ ಸೀಮಿತ ಸ್ವಾತಂತ್ರ್ಯವಿದ್ದು ಕರ್ಮಗಳಿಗೆ ಪ್ರತಿಯೊಬ್ಬರೂ ಜವಾಬ್ದಾರರೆಂಬುದನ್ನು ಎಲ್ಲರೂ ಒಪ್ಪುತ್ತಾರೆಂಬುದನ್ನು ಸೂಚಿಸುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಿದ್ದರೆ ಭೌತಿಕವಾದಿಗಳು ಧರ್ಮವಿಶ್ವಾಸಿಗಳಿಗಿಂತಲೂ ಹೆಚ್ಚು ವಿಧಿಯ ಮೇಲೆ ವಿಶ್ವಾಸವುಳ್ಳವರಾಗಿದ್ದಾರೆ. ಅದರೊಂದಿಗೆ ಪ್ರಕೃತಿ ನಿಯಮಗಳ ಬಿಗಿ ಹಿಡಿತದಿಂದ ಬಂಧಿತನಾಗಿ, ಸ್ವಾತಂತ್ರ್ಯವೇ ಇಲ್ಲದ ಯಂತ್ರಸಮಾನವಾದ ಪ್ರಾಣಿಯೆಂಬ ದೃಷ್ಟಿಕೋನ ಖಂಡಿತವಾಗಿಯೂ ವಸ್ತುನಿಷ್ಠವಲ್ಲ, ಮನುಷ್ಯನು ಇತರ ಜೀವಿಗಳಿಗಿಂತ ಭಿನ್ನವಾದ ಅಸ್ತಿತ್ವ ಹಾಗೂ ವ್ಯಕ್ತಿತ್ವ ಹೊಂದಿರುವನೆಂದು ಒಪ್ಪಿಕೊಳ್ಳದ ದಾರ್ಶನಿಕತೆಯು ಅಸಂಬದ್ಧವೆನಿಸುತ್ತದೆ.

ವಿಧಿವಿಶ್ವಾಸ: ಇಸ್ಲಾಮೀ ನಿಲುವು
ಬಿಳಿಯ, ಕರಿಯ, ಸುಂದರ, ಕುರೂಪಿ, ಪುರುಷ-ಸ್ತ್ರೀ, ಕುಳ್ಳಗಿನವ, ಉದ್ದದವ ನಾವು ಯಾರಾಗಿರಬೇಕು? ಎಲ್ಲಿ ಹುಟ್ಟಬೇಕು? ಭಾರತದಲ್ಲೋ? ಇಂಡೋನೇಶ್ಯದಲ್ಲೋ? ಮರು ಭೂಮಿಯಲ್ಲೋ? ಮಲೆನಾಡಿನಲ್ಲೊ? ಬಡವನ ಮನೆಯಲ್ಲೋ? ಸಿರಿವಂತನ ಅರಮನೆಯಲ್ಲೋ? ಸರ್ವಾಧಿಕಾರಿ ವ್ಯವಸ್ಥೆಯಲ್ಲೋ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೋ? ಯಾವ ಕಾಲದಲ್ಲಾಗಿರಬೇಕು? ಹನ್ನೊಂದನೇ ಶತಮಾನದಲ್ಲೋ? ಇಪ್ಪತ್ತೊಂದನೇ ಶತಮಾನದಲೋ? ಹೀಗೆ ವರ್ಗ, ವರ್ಣ, ದೇಶ, ಭಾಷೆ, ಕಾಲ, ರೂಪ, ಕುಲ, ಲಿಂಗ… ಮೊದಲಾದವುಗಳನ್ನು ತೀರ್ಮಾನಿಸುವವರು ನಾವಲ್ಲ ನಮ್ಮೊಡನೆ ಸಮಾಲೋಚಿಸದೇ ಅದೆಲ್ಲವನ್ನೂ ತೀರ್ಮಾನಿಸಲಾಗಿದೆ. ನಮ್ಮ ಮರಣವು ಎಲ್ಲಿ ಯಾವಾಗ ತೀರ್ಮಾನವೂ ನಮ್ಮದಲ್ಲ, ಎಲ್ಲವೂ ದೇವ ನಿಶ್ಚಿತವಾಗಿದೆ. ಅದು ಅನುಲ್ಲಂಘನೀಯವಾದ ವಿಧಿ ನಿಯಮವಾಗಿದೆ. ಇಂತಹ ಏಷಯಗಳಲ್ಲಿ ನಾವು ದೇವನ ವಿಧಿಯನ್ನು ಪಾಲಿಸಲು ನಿರ್ಬಂಧಿತರಾಗಿದ್ದೇವೆ. ಇದರಲ್ಲಿ ನಮ್ಮ ಆಸೆ, ಅಭಿಲಾಷೆ, ಇಚ್ಛೆಗಳಿಗೆ ಯಾವುದೇ ಪಾಲು ಇಲ್ಲ. ಅಲ್ಲಾಹನು ಹೇಳುತ್ತಾನೆ, ”ನಿಮ್ಮ ಮಾತೆಯರ ಗರ್ಭಗಳಲ್ಲಿ ತನಗಿಷ್ಟ ಬಂದ ರೂಪವನ್ನು ನಿಮಗೆ ಕೊಡುವವನು ಅಲ್ಲಾಹನು, ಪ್ರಭಲನೂ, ಯುಕ್ತಿಪೂರ್ಣನೂ ಆಗಿರುವ ಅವನ ಹೊರತು ಅನ್ಯ ಆರಾಧ್ಯನಿಲ್ಲ.” (ಪವಿತ್ರ ಕುರ್ ಆನ್ 3:6) ”ನಾವು ನಿಮ್ಮ ಸೃಷ್ಟಿಯನ್ನು ಆರಂಭಿಸಿದೆವು. ಅನಂತರ ನಾವು ನಿಮಗೆ ರೂಪ ಕೊಟ್ಟೆವು.’” (ಪವಿತ್ರ ಕುರ್‌ ಆನ್ 7:11) ಓ ಮಾನವಾ! ಆ ನಿನ್ನ ಕರುಣಾಮಯ ಪ್ರಭುವಿನ ಬಗ್ಗೆ ನಿನ್ನನ್ನು ಮೋಸಗೊಳಪಡಿಸಿದ ವಸ್ತು ಯಾವುದು? ಅವನು ನಿನ್ನನ್ನು ಸೃಷ್ಟಿಸಿದನು. ನಿನ್ನನ್ನು ನಖಶಿಖಾಂತ ಸರಿಪಡಿಸಿದನು, ನಿನ್ನನ್ನು ಸಂತುಲಿತಗೊಳಿಸಿದನು.” (ಪವಿತ್ರ ಕುರ್‌ಆನ್ 82:6-8)

ಪುರುಷನ ಯಾವ ಬೀಜವು ಸ್ತ್ರೀಯ ಅಂಡಾಣುವಿನೊಂದಿಗೆ ಸಂಯೋಜಿಸಬೇಕೆಂದು ತೀರ್ಮಾನಿಸುವುದು ಮನುಷ್ಯನಲ್ಲ ದೇವನಾಗಿದ್ದಾನೆ. ಸಂಯೋಜನೆಗೊಳ್ಳುವ ಬೀಜದ ಬದಲಾವಣೆಗನುಗುಣವಾಗಿ ಮನುಷ್ಯನ ಸ್ವಭಾವ, ರೂಪ, ಪ್ರಕೃತಿಯಲ್ಲೂ ವ್ಯತ್ಯಾಸ ಸಂಭವಿಸುವುದೆಂಬ ಅರಿವು ಮೂಡಿದಾಗ ದೇವನಿಯಮದ ಪ್ರಾಧಾನ್ಯತೆ ಅರಿವಾಗುತ್ತದೆ. ಅಲ್ಲಾಹನು ಕೇಳುತ್ತಾನೆ, “ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಅದರಿಂದ ಶಿಶುವನ್ನು ಉಂಟು ಮಾಡುವವರು ನೀವೋ ಅಥವಾ ಅದನ್ನುಂಟು ಮಾಡುವವರು ನಾವೋ? (ಪವಿತ್ರ ಕುರ್‌ ಆನ್ 56: 58,59)

ಲಕ್ಷಾಂತರ ವೀರ್ಯಾಣುಗಳ ಪೈಕಿ ಅಲ್ಲಾಹನು ತನಗಿಷ್ಟ ಬಂದ ಒಂದನ್ನು ಗರ್ಭಾಶಯದಲ್ಲಿರುವ ಅಂಡಾಣುವಿನೊಂದಿಗೆ ಸೇರಿಸುತ್ತಾನೆ. ಅದರ ಗುಣದಂತೆ ಮಗು ಹೆಣ್ಣು ಅಥವಾ ಗಂಡು ಆಗುತ್ತದೆ. ಅಲ್ಲಾಹನು ಹೇಳುತ್ತಾನೆ, ಅಲ್ಲಾಹನು ಭೂಮಿ, ಆಕಾಶಗಳ ಪ್ರಭುತ್ವದ ಒಡೆಯನು. ಅವನು ತಾನಿಚ್ಛಿಸಿದವರಿಗೆ ಹೆಣ್ಣು ಮಕ್ಕಳನ್ನು ಕೊಡುತ್ತಾನೆ. ತಾನಿಚ್ಛಿಸಿದವರಿಗೆ ಗಂಡು ಮಕ್ಕಳನ್ನು ಕೊಡುತ್ತಾನೆ. ತಾನಿಚ್ಛಿಸಿದವರಿಗೆ ಗಂಡು-ಹೆಣ್ಣುಗಳೆರಡನ್ನೂ ಸೇರಿಸಿ ಕೊಡುತ್ತಾನೆ. ತಾನಿಚ್ಚಿಸಿದವರನ್ನು ಬಂಜೆಯಾಗಿ ಮಾಡುತ್ತಾನೆ. ಅವನು ಸರ್ವಜ್ಞನೂ, ಸರ್ವ ಸಮರ್ಥನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 42: 49–50)

“ಅಲ್ಲಾಹನು ವೀರ್ಯದ ಒಂದು ಬಿಂದುವಿನಿಂದ ಇವನನ್ನು ಸೃಷ್ಟಿಸಿದನು. ಹಾಗೂ ರೂಪ ಕೊಟ್ಟನು.’ (ಪವಿತ್ರ ಕುರ್ ಆನ್ 80:19)

ಮನುಷ್ಯನ ರಚನೆ, ಜೀವನ ರೀತಿ, ಕುಟುಂಬ ಪರಂಪರೆಯಲ್ಲಿ ಶಾರೀರಿಕ ಪ್ರಕೃತಿಯೆಂಬ ಪಾತ್ರವಿದೆ. ಆದುದರಿಂದ ಅದು ದೇವನಿಶ್ಚಿತವಾಗಿದೆ. ದೇವನ ಮಿತಿಯನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ, ಅಲ್ಲಾಹನು ಹೇಳುತ್ತಾನೆ: ವಸ್ತುತಃ ನಿಮ್ಮನ್ನೂ ನೀವು ನಿರ್ಮಿಸುವ ವಸ್ತುಗಳನ್ನೂ ಸೃಷ್ಟಿಸಿದವನು ಅಲ್ಲಾಹನಾಗಿದ್ದಾನೆ.” (ಪವಿತ್ರ ಕುರ್ ಆನ್ 37:96) ಅಲ್ಲಾಹನು ತನಗಿಷ್ಟ ಬಂದವರನ್ನು ಪಥಭ್ರಷ್ಟಗೊಳಿಸುತ್ತಾನೆ ಮತ್ತು ತನಗಿಷ್ಟ ಬಂದವರನ್ನು ಸನ್ಮಾರ್ಗಕ್ಕೆ ಹಾಕಿಬಿಡುತ್ತಾನೆ.” (ಪವಿತ್ರ ಕುರ್‌ ಆನ್ 6:39) ಅಲ್ಲಾಹನು ಸನ್ಮಾರ್ಗ ನೀಡದಾತನಿಗೆ ನೀವು ಸನ್ಮಾರ್ಗ ನೀಡಲಿಚ್ಛಿಸುತ್ತೀರಾ? ವಸ್ತುತಃ ಅಲ್ಲಾಹನು ಸನ್ಮಾರ್ಗದಿಂದ ತಪ್ಪಿಸಿದಾತನಿಗಾಗಿ ನೀವು ಯಾವ ದಾರಿಯನ್ನೂ ಕಾಣಲಾರಿರಿ. (ಪವಿತ್ರ ಕುರ್‌ ಆನ್ 4:88) “ನಿಮ್ಮ ಪ್ರಭುವಿನ ವಿಧಿ-ನಿಯಮವಿರುತ್ತಿದ್ದರೆ ಭೂನಿವಾಸಿಗಳೆಲ್ಲರೂ ವಿಶ್ವಾಸವಿಟ್ಟೇ ತೀರುತ್ತಿದ್ದರು. ಹೀಗಿರುವಾಗ ಜನರೆಲ್ಲರೂ ಸತ್ಯವಿಶ್ವಾಸಿಗಳಾಗಬೇಕೆಂದು ನೀವು ಒತ್ತಾಯಪಡಿಸುವಿರಾ? ಯಾರೊಬ್ಬನೂ ಅಲ್ಲಾಹನ ಅನುಮತಿಯ ಹೊರತು ವಿಶ್ವಾಸವಿಡಲಾರನು. (ಪವಿತ್ರ ಕುರ್ ಆನ್ 10:99) ‘ಅವಿಶ್ವಾಸಿಗಳಿಗೆ ನೀವು ಆದೇಶ ಕೊಟ್ಟರೂ, ಕೊಡದಿದ್ದರೂ ಸರಿಯೇ, ಅವರಂತೂ ವಿಶ್ವಾಸವಿಡುವವರರಲ್ಲ. ಅಲ್ಲಾಹನು ಅವರ ಹೃದಯಗಳ ಹಾಗೂ ಕಿವಿಗಳ ಮೇಲೆ ಮುದ್ರೆಯೊತ್ತಿರುತ್ತಾನೆ. ಅವರ ದೃಷ್ಟಿಗಳ ಮೇಲೆ ಪರದೆ ಬಿದ್ದಿದೆ. ಅವರಿಗೆ ಘೋರ ಶಿಕ್ಷೆ ಕಾದಿದೆ.’ (ಪವಿತ್ರ ಕುರ್‌ ಆನ್ 2:6-7)

ಭೂಮಿಯ ಮೇಲೆ ಅಥವಾ ನಿಮ್ಮ ಮೇಲೆ ಎರಗುವ ಯಾವ ಸಂಕಷ್ಟವೂ ನಾವು ಅದನ್ನು ಸೃಷ್ಟಿಸುವುದಕ್ಕೆ ಮುಂಚೆ ಒಂದು ಗ್ರಂಥದಲ್ಲಿ (ವಿಧಿ ಲಿಖಿತದಲ್ಲಿ) ಬರೆದಿಟ್ಟುಕೊಳ್ಳದೇ ಇಲ್ಲ. ಖಂಡಿತವಾಗಿಯೂ ಹೀಗೆ ಮಾಡುವುದು ಅಲ್ಲಾಹನಿಗೆ ಅತ್ಯಂತ ಸುಲಭ ಕಾರ್ಯವಾಗಿದೆ.” (ಪವಿತ್ರ ಕುರ್ ಆನ್ 57: 22)

ಆದರೆ ಎಲ್ಲವನ್ನೂ ದೇವವಿಧಿಯೆಂದು ಹೇಳುವ ಪವಿತ್ರ ಕುರ್‌ ಆನ್ ಮನುಷ್ಯರಿಗೆ ನೀಡಲಾಗುವ ಸ್ವಾತಂತ್ರ್ಯದ ಕುರಿತು ಒತ್ತಿ ಹೇಳುತ್ತದೆ. ಹುಟ್ಟಿನಿಂದಲೇ ಮನುಷ್ಯನಿಗೆ ಒಳಿತು ಕೆಡುಕುಗಳನ್ನು ವಿವೇಚಿಸುವ ಶಕ್ತಿಯನ್ನು ನೀಡಲಾಗಿದೆ. ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನು ಮಾನವ ಚಿತ್ತದ ಹಾಗೂ ಅದನ್ನು ಸುಗಮಗೊಳಿಸಿದ ಬಳಿಕ ಅದರ ದುಷ್ಟತೆಯನ್ನೂ, ಅದರ ಸಾತ್ವಿಕತೆಯನ್ನೂ ಅದಕ್ಕೆ ಪ್ರೇರೇಪಿಸಿದನು.’ (ಪವಿತ್ರ ಕುರ್ ಆನ್ 91:7-8)

ನಾವು ಅವನಿಗೆ ಎರಡು ಕಣ್ಣುಗಳನ್ನೂ, ಒಂದು ನಾಲಗೆಯನ್ನೂ, ಎರಡು ತುಟಿಗಳನ್ನೂ ಕೊಟ್ಟಿಲ್ಲವೇ? ಮತ್ತು ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನೂ ತೋರಿಸಿ ಕೊಡಲಿಲ್ಲವೇ? (ಪವಿತ್ರ ಕುರ್‌ ಆನ್ 90:8-10)

ಆದ್ದರಿಂದ ಮಾನವರಿಗೆ ಒಳಿತು-ಕೆಡುಕು, ಸರಿ-ತಪ್ಪು, ಧರ್ಮ-ಅಧರ್ಮವನ್ನು ಆರಿಸಿಕೊಂಡು ಸನ್ಮಾರ್ಗಿ ಹಾಗೂ ದುರ್ಮಾಗಿಯಾಗುವ ಸ್ವಾತಂತ್ರ್ಯವಿದೆ. ಹೀಗೆ ಸ್ವಯಂ ತೀರ್ಮಾನಿಸಿ ಬದುಕು ಸಾಗಿಸುವುದಕ್ಕೆ ಅನುಗುಣವಾಗಿ ಪರಲೋಕದ ಶಿಕ್ಷೆ-ರಕ್ಷೆ ದೊರೆಯುತ್ತದೆ. ಕುರ್ ಆನ್ ಹೇಳುತ್ತದೆ, ”ಸನ್ಮಾರ್ಗ ಸ್ವೀಕರಿಸಿಕೊಳ್ಳುವವನ ಸನಾರ್ಗವು ಅವನಿಗೇ ಒಳಿತಾಗಿದೆ ಮತ್ತು ಪಥಭ್ರಷ್ಟನ ಪಥಭ್ರಷ್ಟತೆಯ ವಿಪತ್ತು ಅವನ ಮೇಲೆಯೇ ಬೀಳುತ್ತದೆ. ಯಾವ ಹೊರೆ ಹೊರುವಾತನೂ, ಇನ್ನೊಬ್ಬನ ಹೊರೆಯನ್ನು ಹೊರಲಾರನು.’ (ಪವಿತ್ರ ಕುರ್‌ ಆನ್‌ 17: 15) ‘ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ, ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಬೇರ್ಪಡಿಸಲ್ಪಟ್ಟಿದೆ. ಇನ್ನು ‘ತಾಗೂತ್ ‘ (ಅತಿಕ್ರಮ)ನ್ನು ನಿರಾಕರಿಸಿ, ಅಲ್ಲಾಹನಲ್ಲಿ ವಿಶ್ವಾಸವಿಟ್ಟಾತನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡನು.’ (ಪವಿತ್ರ ಕುರ್ ಆನ್ 2:256) ‘ಸ್ಪಷ್ಟವಾಗಿ (ಹೀಗೆ) ಹೇಳಿಬಿಡಿರಿ, ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವರು ಸ್ವೀಕರಿಸಿಕೊಳ್ಳಲಿ, ಇಷ್ಟವಿದ್ದವರು ನಿರಾಕರಿಸಲಿ. (ನಿರಾಕರಿಸುವ) ಅಕ್ರಮಿಗಳಿಗೆ ನಾವು ಒಂದು ಅಗ್ನಿಯನ್ನು ಸಿದ್ಧಗೊಳಿಸಿ ಬಿಟ್ಟಿರುತ್ತೇವೆ.’ (ಪವಿತ್ರ ಕುರ್ ಆನ್ 18:29) ವಾಸ್ತವದಲ್ಲಿ ಒಂದು ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹನು ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ.” (ಪವಿತ್ರ ಕುರ್‌ಆನ್ 13:11) “ಕೇಡು ಯಾರು ಮಾಡಿದರೂ ಅದರ ಫಲವನ್ನು ಅವನು ಪಡೆದು ತೀರುವನು.” (ಪವಿತ್ರ ಕುರ್‌ ಆನ್ 4:123) ‘ಪ್ರತಿಯೊಬ್ಬನೂ ತನ್ನ ದುಡಿಮೆಯ ಬದಲಿಗೆ ಅಡವಾಗಿದ್ದಾನೆ.” (ಪವಿತ್ರ ಕುರ್‌ಆನ್ 52:21) “ಇಂದು ನಿಮಗೆ ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು.” (ಪವಿತ್ರ ಕುರ್‌ ಆನ್ 45:28) ಮಾಡಿದುಣ್ಣುವ ಹೊರತು ನೀವು ಇನ್ನಾವುದಾದರೂ ಪ್ರತಿಫಲ ಪಡೆಯಬಲ್ಲಿರಾ?” (27:90) ‘ನಿಮ್ಮ ಪ್ರಭು ತನ್ನ ದಾಸರ ಪಾಲಿಗೆ ಅಕ್ರಮಿಯಲ್ಲ.” (ಪವಿತ್ರ ಕುರ್ ಆನ್ 41:46) ‘ಜನರ ಸ್ವಂತ ಕೈಗಳ ದುಡಿಮೆಯಿಂದ ನೆಲ-ಜಲಗಳಲ್ಲಿ ಕ್ಷೋಭೆಯುಂಟಾಗಿ ಬಿಟ್ಟಿದೆ.” (ಪವಿತ್ರ ಕುರ್ ಆನ್ 30:41) ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ.” (ಪವಿತ್ರ ಕುರ್ ಆನ್ 42:30) .”ವಾಸ್ತವದಲ್ಲಿ ಅಲ್ಲಾಹನು ಜನರ ಮೇಲೆ ಅಕ್ರಮವೆಸಗುವುದಿಲ್ಲ. ಜನರು ತಾವೇ ತಮ್ಮ ಮೇಲೆ ಅಕ್ರಮವೆಸಗಿಕೊಳ್ಳುತ್ತಾರೆ.” (ಪವಿತ್ರ ಕುರ್ ಆನ್ 10:44) “ಯಾರು ಸನ್ಮಾರ್ಗವನ್ನು ಅನುಸರಿಸುವನೋ, ಅವನ ಸನ್ಮಾರ್ಗ ಪ್ರಕ್ರಿಯೆಯಿಂದ ಅವನಿಗೇ ಫಲಕಾರಿಯಾಗುವುದು.” (ಪವಿತ್ರ ಕುರ್‌ ಆನ್ 10:108) ‘ನಾಡುಗಳಲ್ಲಿರುವವರು ಅಕ್ರಮಿಗಳಾಗಿ ಬಿಡುವವರೆಗೂ ನಿಮ್ಮ ಪ್ರಭು ನಾಡುಗಳನ್ನು ನಾಶಗೊಳಿಸುವವನಾಗಿರಲಿಲ್ಲ.” (ಪವಿತ್ರ ಕುರ್‌ ಆನ್ 28:59) ಯಾರು ಒಳಿತಿಗಾಗಿ ಹೋರಾಡುವರೋ ಅವರಿಗೆ ನಾವು ನಮ್ಮ ಮಾರ್ಗಗಳನ್ನು ತೋರಿಸಿಕೊಡುವೆವು.” (ಪವಿತ್ರ ಕುರ್‌ಆನ್ 29:69) ‘ನನ್ನ ಬೋಧನೆಯಿಂದ ವಿಮುಖನಾದವನ ಜೀವನವು ಭೂಲೋಕದಲ್ಲಿ ಸಂಕೀರ್ಣವಾಗಿವುದು. ಮತ್ತು ಪುರುತ್ಥಾನದ ದಿನ ನಾವು ಅವರನ್ನು ಕುರುಡನನ್ನಾಗಿ ಮಾಡಿ ಎಬ್ಬಿಸುವೆವು. ಆಗ ಅವನು ”ಓ ನನ್ನ ಪ್ರಭೂ, ಭೂಲೋಕದಲ್ಲಿ ನಾನು ದೃಷ್ಟಿಯುಳ್ಳವನಾಗಿದ್ದೆ. ನನ್ನನ್ನು ಇಲ್ಲೇಕೆ ಕುರುಡನಾಗಿ ಎಬ್ಬಿಸಿದೆ ಎಂದು ಕೇಳುವನು, ಆಗ ಅಲ್ಲಾಹನು ‘ನಮ್ಮ ವಚನಗಳು ನಿನ್ನ ಬಳಿಗೆ ಬಂದಿದ್ದಾಗ ನೀನು ಇದೇ ರೀತಿಯಲ್ಲಿ ಮರೆತು ಬಿಟ್ಟಿದ್ದೆ. ಹಾಗೆ ಇಂದು ನೀನು ಮರೆಯಲ್ಪಡುತ್ತಿರುವೆ’ ಎನ್ನುವನು. ಹೀಗೆ ನಾವು ಹದತಪ್ಪಿ ಸಾಗುವವನಿಗೂ ತನ್ನ ಪ್ರಭುವಿನ ವಚನಗಳ ಮೇಲೆ ವಿಶ್ವಾಸವಿರಿಸದವನಿಗೂ (ಭೂಲೋಕದಲ್ಲಿ) ಪ್ರತಿಫಲ ಕೊಡುತ್ತೇವೆ ಮತ್ತು ಪರಲೋಕದ ಯಾತನೆಯು ಅಧಿಕ ಪ್ರಚಂಡವೂ ಹೆಚ್ಚು ಶಾಶ್ವತವೂ ಆಗಿರುತ್ತದೆ. (ಪವಿತ್ರ ಕುರ್‌ ಆನ್ 20:124-127)

‘ಯಾವ ಹೊರೆ ಹೊರುವಾತನೂ ಇನ್ನೊಬ್ಬನ ಹೊರೆ ಹೊರಲಾರನು. ಮನುಷ್ಯನು ತಾನೇ ಪರಿಶ್ರಮಿಸುವುದರ ಹೊರತು ಅವನಿಗೆ ಬೇರೇನೂ ಇಲ್ಲ ಮತ್ತು ಅವನ ಪರಿಶ್ರಮವನ್ನು ಸದ್ಯವೇ ನೋಡಲಾಗುವುದು. ಅನಂತರ ಅವನ ಸಂಪೂರ್ಣ ಪ್ರತಿಫಲ ನೀಡಲಾಗುವುದು.’ (ಪವಿತ್ರ ಕುರ್ ಆನ್ 53:38-41) ”ಅಣು ಗಾತ್ರದಷ್ಟು ಪುಣ್ಯಕಾರ್ಯವೆಸಗಿರುವವನು ಅದನ್ನು ಕಂಡೇ ತೀರುವನು ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು.” (ಪವಿತ್ರ ಕುರ್‌ ಆನ್ 99:7-8)

ಇಸ್ಲಾಮೀ ದೃಷ್ಟಿಕೋನದಂತೆ ಮನುಷ್ಯರು ಸ್ವಲ್ಪವೂ ಸ್ವಾತಂತ್ರ್ಯವಿಲ್ಲದವರೋ ಅಥವಾ ಕೇವಲ ವಿಧಿಯ ಕೈಗೊಂಬೆಯೋ, ಉಪಕರಣವೋ ಅಲ್ಲವೆಂದ ಮೇಲೆ ಉದ್ಧರಿಸಿದ ಹಲವಾರು ಕುರ್ ಆನ್ ವಚನಗಳು ಸ್ಪಷ್ಟಪಡಿಸುತ್ತದೆ. ತನ್ನ ಜೀವನ ಮಾರ್ಗವನ್ನು ತೀರ್ಮಾನಿಸಲು ಹಾಗೂ ಆಯ್ದುಕೊಳ್ಳಲು ಪ್ರತಿಯೊಬ್ಬನಿಗೂ ಸ್ವಾತಂತ್ರ್ಯ ಹಾಗೂ ಅನುಮತಿಯಿದೆ. ಆದ್ದರಿಂದ ಮಾನವ ಜೀವನದಲ್ಲಿ ಎರಡು ವಿಧವಿದೆ. ಊರು, ದೇಶ, ಭಾಷೆ, ಕಾಲ, ಲಿಂಗ, ವಂಶ, ಜನನ, ಮರಣ, ರೂಪ… ಮೊದಲಾದವುಗಳು ಮನುಷ್ಯರ ನಿಯಂತ್ರಣದಲ್ಲೋ, ಪರಿಧಿಯಲ್ಲೋ ಇಲ್ಲ. ಇದು ಒಂದನೆಯ ಭಾಗ. ಇನ್ನೊಂದು ಭಾಗದಲ್ಲಿ ತಾನು ಏನು ಕುಡಿಯಬೇಕು? ಕುಡಿಯಬಾರದು? ಏನು ನೋಡಬೇಕು? ನೋಡಬಾರದು? ಏನು ತಿನ್ನಬೇಕು? ತಿನ್ನಬಾರದು? ಏನು ಕೇಳಬೇಕು? ಕೇಳಬಾರದು? ಏನು ಹೇಳಬೇಕು? ಹೇಳಬಾರದು? ಏನು ಮಾಡಬೇಕು? ಮಾಡಬಾರದು? ಹೇಗೆ ಬದುಕಬೇಕು? ಬದುಕಬಾರದು? ಮೊದಲಾದ ವಿಷಯಗಳನ್ನು ತೀರ್ಮಾನಿಸಿ ಅದರೆಡೆಗೆ ಸಾಗಲು ಮನುಷ್ಯನಿಗೆ ಹೊಣೆಗಾರಿಕೆಯೂ, ಸ್ವಾತಂತ್ರ್ಯವೂ ಇದೆ. ಆದರೆ ಈ ಸ್ವಾತಂತ್ರ್ಯವು ಅಪರಿಮಿತವೋ, ಅನಿಯಂತ್ರಿತವೋ ಅಲ್ಲ, ಅದಕ್ಕೆ ಉಪಯೋಗಿಸುವ ಕಣ್ಣು, ಕಿವಿ, ನಾಲಗೆ, ಮೂಗು, ಕೈ, ಕಾಲು, ಶರೀರ ಹಾಗೂ ಜೀವನ ಸಂಪೂರ್ಣವಾಗಿ ಮನುಷ್ಯನ ನಿಯಂತ್ರಣದಲ್ಲಿಲ್ಲವಲ್ಲಾ? ಅವೆಲ್ಲವೂ ದೇವನ ನಿಯಂತ್ರಣದಲ್ಲಿದೆ. ಅದರೊಂದಿಗೆ ಅವುಗಳನ್ನು ತಮ್ಮಿಷ್ಟದಂತೆ ಉಪಯೋಗಿಸುವ ಸಾಧ್ಯತೆ ಹಾಗೂ ಸ್ವಾತಂತ್ರ್ಯವನ್ನು ದೇವನೇ ಮನುಷ್ಯರಿಗೆ ನೀಡಿದ್ದಾನೆ. ಹೀಗೆ ಲಭ್ಯವಿರುವ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಮನುಷ್ಯರ ಮೇಲೆ ಹಲವಾರು ಹೊಣೆಗಾರಿಕೆಯನ್ನು ವಹಿಸಲಾಗಿದೆ. ಅಥವಾ ಪ್ರತಿಯೊಬ್ಬ ಮನುಷ್ಯನೂ ತನಗೆ ಲಭಿಸಿದ ಸ್ವಾತಂತ್ರ್ಯವನ್ನು ಯಾವ ರೀತಿ ಉಪಯೋಗಿಸಿದ್ದಾನೆಂಬುದನ್ನು ನೋಡಿಕೊಂಡು ಅವನಿಗೆ ಜೀವನದ ವಿಜಯ ಹಾಗೂ ಪರಾಜಯ, ರಕ್ಷೆ-ಶಿಕ್ಷೆ ಲಭಿಸುತ್ತದೆ. ಹೀಗೆ ದೇವನು ನೀಡಿದ ಸ್ವಾತಂತ್ರ್ಯದಲ್ಲಿ ನಾವು ಮಾರ್ಗದರ್ಶನ ಪಡೆಯಲು ದೇವನು ಪ್ರವಾದಿಗಳನ್ನು ಕಳುಹಿಸಿದ್ದನು. ತಮಗಿರುವ ಅವಕಾಶ ಹಾಗೂ ಸ್ವಾತಂತ್ರ್ಯವನ್ನು ಬಳಸಿಕೊಂಡು ಯಶಸ್ವೀ ಜೀವನ ನಡೆಸುವವರಿಗೆ ಸ್ವರ್ಗದ ಸುವಾರ್ತೆ ನೀಡಲಾಗಿದೆ. ಅದೇ ರೀತಿ ದೇವ ಧರ್ಮವನ್ನು ಧಿಕ್ಕರಿಸಿ ಸ್ಟೇಚ್ಛೆಯಿಂದ ಬಾಳುವವರಿಗೆ ಪರಾಜಯ ಹಾಗೂ ನರಕದ ಕಠಿಣ ಶಿಕ್ಷೆಯಿದೆ. ಸನ್ಮಾರ್ಗವನ್ನು ಸ್ವೀಕರಿಸಿ ಉತ್ತಮ ವ್ಯಕ್ತಿಗಳಾಗಿ ಬಾಳಲು ತೀರ್ಮಾನಿಸಿದ ಹಾಗೂ ಅದಕ್ಕಾಗಿ ಪ್ರಯತ್ನಿಸುವ ಯಾರನ್ನೂ ಅಲ್ಲಾಹನು ನಿರ್ಬಂಧಿಸಿ ದುರ್ಮಾರ್ಗಿಗಳನ್ನಾಗಿ ಮಾಡುವುದಿಲ್ಲ.

ಮನುಷ್ಯನಿಗೆ ನೀಡಲಾದ ಸ್ವಾತಂತ್ರ್ಯವನ್ನು ಹಾಗೂ ಸಾಧ್ಯತೆಯನ್ನು ಮೀರಿದ ಯಾವುದೇ ಕಾರ್ಯವನ್ನು ದೇವನು ಅವರಿಗೆ ಆಜ್ಞಾಪಿಸುವುದಿಲ್ಲ. ಅಲ್ಲಾಹನು ಹೇಳುತ್ತಾನೆ, “ಅಲ್ಲಾಹನು ಯಾವ ಜೀವಿಯ ಮೇಲೂ ಅವನ ಶಕ್ತಿಗೆ ಮೀರಿದ ಹೊಣೆ ಹೊರಿಸುವುದಿಲ್ಲ. ಪ್ರತಿಯೊಬ್ಬನು ಗಳಿಸಿದ ಪುಣ್ಯದ ಫಲ ಅವನಿಗೆ ಸಿಗುವುದು. ಮತ್ತು ಅವನು ಶೇಖರಿಸಿದ ಪಾಪದ ದಂಡವೂ ಅವನ ಮೇಲಿರುವುದು. (ಪವಿತ್ರ ಕುರ್ ಆನ್ 2:286)

ಅಲ್ಲಾಹನು ಯಾರಿಗೂ ಅನ್ಯಾಯ ಮಾಡುವುದಿಲ್ಲ, ನಿಮ್ಮ ಪ್ರಭು ತನ್ನ ದಾಸರ ಪಾಲಿಗೆ ಅಕ್ರಮಿಯಲ್ಲ.” (ಪವಿತ್ರ ಕುರ್ ಆನ್ 41:46)

ಮಾನವರ ತೀರ್ಮಾನಗಳು ಹಾಗೂ ಕರ್ಮಗಳು ದೇವನ ಅರಿವು ಮತ್ತು ವಿಧಿಗೆ ವಿಧೇಯವಲ್ಲವೇ? ಮಾನವ ಸ್ವಾತಂತ್ರ್ಯವನ್ನೂ ದೇವ ವಿಧಿಯನ್ನೂ ಜೋಡಿಸುವ ಕೊಂಡಿ ಯಾವುದು? ಹೇಗೆ? ಎಂಬ ಪ್ರಶ್ನೆಗಳು ಉಂಟಾಗಬಹುದು. ಆದರೆ ಇಲ್ಲಿ ಮನುಷ್ಯನು ತನ್ನ ಪರಿಧಿ ಹಾಗೂ ಪರಿಮಿತಿಯನ್ನು ಚೆನ್ನಾಗಿ ಗ್ರಹಿಸಿಕೊಳ್ಳಬೇಕು. ಭೂಮಿಯು ಅನಂತವೂ, ವಿಶಾಲವೂ ಆದ ಮಹಾ ಪ್ರಪಂಚದ ಒಂದು ಸಣ್ಣ ಗೋಳವಾಗಿದೆ. ಅದರ ಸಹಸ್ರ ಕೋಟಿ ಜೀವಿಗಳಲ್ಲಿ ಮನುಷ್ಯ ಓರ್ವ ಸೃಷ್ಟಿ ಮಾತ್ರ. ಆತನಿಗೆ ಇಂದಿನವರೆಗೆ ತನ್ನ ಕುರಿತು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ, ಜೀವನ, ಬುದ್ಧಿ, ನೆನಪು ಶಕ್ತಿ, ಆತ್ಮ…. ಮೊದಲಾದವುಗಳ ಕುರಿತು ಸೂಕ್ಷ್ಮವಾದ ಅರಿವು ಯಾರಿಗೂ ಇಲ್ಲ, ತಾನು ಬದುಕುತ್ತಿರುವ ಭೂಮಿ ಹಾಗೂ ಪ್ರಪಂಚದ ಕುರಿತು ಜ್ಞಾನವೂ ಪರಿಮಿತವಾಗಿದೆ. ಆ ಮಹಾ ಜ್ಞಾನ ಬಂಡಾರವನ್ನು ಸಮುದ್ರಕ್ಕೆ ಹೋಲಿಸಿದರೆ ಅದರ ಒಂದು ಹನಿಯನ್ನೂ ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಸಾಧ್ಯವಾಗಿಲ್ಲ. ನಮ್ಮ ಜ್ಞಾನದ ಮಿತಿಯೇ ಇದಕ್ಕೆ ಕಾರಣ. ಆದ್ದರಿಂದ ನಾವು ಪ್ರಪಂಚದ ಸೃಷ್ಟಿಕರ್ತನನ್ನು ಹಾಗೂ ಅವನ ಕರ್ಮಗಳನ್ನು ತಿಳಿಯಬೇಕೆಂದು ಹಠ ಹಿಡಿಯುವುದರಲ್ಲಿ ಅರ್ಥವಿಲ್ಲ. ಅವನಿಗೆ ಸಂಬಂಧಿಸಿದ ಎಲ್ಲವೂ ಪಂಚೇಂದ್ರಿಯಗಳಿಗೂ ಅವುಗಳ ಪರಿಧಿಯೊಳಗೆ ವಿಧೇಯವಾದ ಮನುಷ್ಯ ಬುದ್ಧಿ ಶಕ್ತಿಗೂ, ಚಿಂತನೆಗೂ ಮೀರಿದ ಅಲೌಕಿಕ ಜ್ಞಾನಕ್ಕೆ ಒಳಪಟ್ಟಿದೆ. ಅಲ್ಲಾಹನು ತನ್ನ ಸಂದೇಶವಾಹಕರ ಮೂಲಕ ತಿಳಿಸಿದ ವಿಷಯದ ಹೊರತು ಯಾರಿಗೂ ಅದರ ಜ್ಞಾನವಿಲ್ಲ. ಆದ್ದರಿಂದ ದೇವ ವಿಧಿಯ ಕುರಿತು, ದಿವ್ಯ ಬೋಧನೆಗಳಿಂದ ಲಭ್ಯವಾದ ವಿಷಯಗಳನ್ನು ಗ್ರಹಿಸಲು ನಮಗೆ ಸಾಧ್ಯವಿಲ್ಲ, ದೇವ ಗ್ರಂಥದಿಂದ ಲಭಿಸಿದ ಜ್ಞಾನದಂತೆ ದೇವ ವಿಧಿಯೂ, ಜ್ಞಾನವೂ ಪ್ರಪಂಚ ಹಾಗೂ ಅದರಲ್ಲಿರುವ ಸರ್ವವನ್ನೂ ಆವರಿಸಿಕೊಂಡಿದೆ. ಮನುಷ್ಯನು ಅದಕ್ಕೆ ಅತೀತನಲ್ಲ, ಅದೇ ವೇಳೆ ಸ್ವಯಂ ತೀರ್ಮಾನ ತೆಗೆದುಕೊಳ್ಳಲು ಹಾಗೂ ಅದರಂತೆ ಜೀವಿಸಲು ಅವನಿಗೆ ಸ್ವಾತಂತ್ರ್ಯ ಹಾಗೂ ಅವಕಾಶ ನೀಡಲ್ಪಟ್ಟಿದೆ. ಅದು ಅಪರಿಮಿತವೋ, ಅನಿಯಂತ್ರಿತವೋ ಅಲ್ಲ, ಸ್ವಾತಂತ್ರ್ಯ ಲಭಿಸಿದ ರಂಗಗಳಲ್ಲಿ ದೇವನನ್ನು ಅನುಸರಿಸಿ ಅವನು ನಿಶ್ಚಯಿಸಿದ ದಾರಿಯಲ್ಲಿ ಮುನ್ನಡೆಯಬೇಕೆಂದು ಅಲ್ಲಾಹನು ಆಜ್ಞಾಪಿಸಿದ್ದಾನೆ. ಹೀಗೆ ಈ ಭೂಮಿಯಲ್ಲಿ ಬಾಳಿದವರಿಗೆ ಯಶಸ್ಸು ಹಾಗು ಪರಲೋಕದಲ್ಲಿ ರಕ್ಷಣೆ ದೊರೆಯುವುದೆಂದು ವಾಗ್ದಾನ ಮಾಡಿದ್ದಾನೆ. ದೇವನನ್ನು ಧಿಕ್ಕರಿಸುವ ಆಯ್ಕೆ ಹಾಗೂ ಸ್ವಾತಂತ್ರ್ಯ ಮನುಷ್ಯನಿಗೆ ನೀಡಲಾಗಿದೆ. ಅಂತಹವರಿಗೆ ಪರಾಜಯವೂ ಪರಲೋಕದಲ್ಲಿ ಕಠಿಣ ಶಿಕ್ಷೆಯ ಕುರಿತೂ ಎಚ್ಚರಿಕೆ ನೀಡಲಾಗಿದೆ. ಪ್ರತಿಯೊಬ್ಬರ ಕರ್ತವ್ಯವು ಅವರವರಿಗೆ ನೀಡಲಾದ ಸಾಮರ್ಥ್ಯ ಹಾಗು ಸ್ವಾತಂತ್ರ್ಯವನ್ನು ಹೊಂದಿಕೊಂಡಿದೆ. ಅದನ್ನು ನಿರ್ವಹಿಸಿದ ಹಾಗೂ ಉಲ್ಲಂಘಿಸಿದ ಆಧಾರದಲ್ಲಿ ಮರಣಾನಂತರ ಪರಲೋಕದಲ್ಲಿ ರಕ್ಷೆ-ಶಿಕ್ಷೆಯು ದೊರೆಯುವುದು. ಆದ್ದರಿಂದ ಸ್ವರ್ಗ ಮತ್ತು ನರಕವನ್ನು ಪಡೆಯಬೇಕಾದವರು ನಾವೇ, ಸ್ವಂತ ತೀರ್ಮಾನಗಳಿಂದ ಹಾಗೂ ಕರ್ಮಗಳಿಂದ ಎರಡರಲ್ಲಿ ಒಂದರ ಹಕ್ಕುದಾರರಾಗುತ್ತೇವೆ. ಆದ್ದರಿಂದ ಯಾರೂ ಅಕ್ರಮಕ್ಕೆ ಒಳಗಾಗುವುದಿಲ್ಲ. ಅನ್ಯಾಯಕ್ಕೆ ಗುರಿಯಾಗುವುದೂ ಇಲ್ಲ.

ವಿಧಿವಿಶ್ವಾಸ ಹಾಗೂ ಮನಶ್ಯಾಂತಿ
ಕರ್ಮಗಳನ್ನು ಮಾಡುವವರಿಗೆ ಅವರು ಬಯಸಿದ ಫಲವೇ ಸಿಗಬೇಕೆಂದಿಲ್ಲ, ಲಾಭವನ್ನು ಬಯಸಿ ವ್ಯಾಪಾರ ಮಾಡುವವರು ನಷ್ಟಕ್ಕೊಳಗಾಗುತ್ತಾರೆ. ವರಮಾನವನ್ನು ನಿರೀಕ್ಷಿಸಿ ಕೃಷಿ ಸ್ಥಳಗಳಲ್ಲಿ ದುಡಿಯುವರು ಬೆಳೆ ನಷ್ಟವನ್ನು ಅನುಭವಿಸುತ್ತಾರೆ. ನಾವು ನಮ್ಮ ತಿಳುವಳಿಕೆ, ಅನುಭವ, ಸಾಮರ್ಥ್ಯದ ಪರಿಮಿತಿಯಿಂದ ವಿಷಯಗಳನ್ನು ಗ್ರಹಿಸಿಕೊಂಡು ಅದರಂತೆ ಕಾರ್ಯ ಮಗ್ನರಾಗುತ್ತೇವೆ. ಕೆಲವೊಮ್ಮೆ ನಮ್ಮ ಕನಸು, ಆಶೆ ಆಕಾಂಕ್ಷೆಗಳೆಲ್ಲವೂ ನಿಮಿಷಗಳಲ್ಲೇ ನೆಲಕ್ಕಪ್ಪಳಿಸಿರುತ್ತದೆ. ಅನಿರೀಕ್ಷಿತವಾದ ಅಪಘಾತಗಳನ್ನು ಎದುರಿಸುಬೇಕಾಗುತ್ತದೆ. ಹಾಗಿದ್ದರೂ ಇಂತಹ ವಿಪತ್ತಿನ ಸಾಧ್ಯತೆಯು ಯಾರನ್ನೂ ನಿಷ್ಕ್ರಿಯಗೊಳಿಸುವುದಿಲ್ಲ, ನಿಷ್ಕ್ರಿಯಗೊಳಿಸಲೂ ಬಾರದು. ವಿಜಯ ಹಾಗೂ ಗುರಿಯನ್ನು ನಿರೀಕ್ಷಿಸಿ ಕರ್ಮಗಳನ್ನು ಮುಂದುವರಿಸುವುದು ಕಂಡು ಬರುತ್ತದೆ. ನಮ್ಮ ಮೋಹಗಳು ಫಲ ನೀಡುವುದಿಲ್ಲವೆಂದು ಯಾರೂ ಏನನ್ನು ಆಗ್ರಹಿಸದಿರುವುದಿಲ್ಲ. ಮನುಷ್ಯ ಆಶಿಸಿದ್ದು ಸಿಗುವುದಿಲ್ಲ. ದೇವನು ವಿಧಿಸಿದ್ದು ಮಾತ್ರ ದೊರೆಯುವುದು.

”ಭೂಮಿ-ಆಕಾಶಗಳ ಭಂಡಾರಗಳ ಬೀಗದ ಕೈಗಳು ಅವನಲ್ಲೇ ಇದೆ. ತಾನಿಚ್ಚಿಸಿದವರಿಗೆ ಧಾರಾಳ ಜೀವನಾಧಾರ ನೀಡುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಪರಿಮಿತವಾಗಿ ಕೊಡುತ್ತಾನೆ. ಅವನಿಗೆ ಸಕಲ ವಿಷಯದ ಜ್ಞಾನವಿದೆ.’” (ಪವಿತ್ರ ಕುರ್ ಆನ್ 42: 12)

ನೀವು ಬಿತ್ತುವ ಬೀಜದ ಕುರಿತು ನೀವೆಂದಾದರೂ ವಿವೇಚಿಸಿದಿರಾ? ಅವುಗಳಿಂದ ಬೆಳೆಯನ್ನು ಬೆಳೆಸುವವರು ನೀವೋ ಅಥವಾ ಅದನ್ನು ಬೆಳೆಸುವವರು ನಾವೋ? ನಾವುಚ್ಛಿಸಿದರೆ ಆ ಹೊಲಗಳನ್ನು ಹೊಟ್ಟನ್ನಾಗಿ ಮಾಡಿಬಿಡಬಲ್ಲೆವು. ಆಗ ನೀವು ತರತರದ ಮಾತುಗಳನ್ನಾಡುತ್ತಲೇ ಇರುವಿರಿ. ಎಲ್ಲವೂ ನಮ್ಮ ಮೇಲೆ ತಿರುಗಿ ಬಿತ್ತು. ನಿಜವಾಗಿ ನಮ್ಮ ಭಾಗ್ಯವೇ ಹಾಳು.’ (ಪವಿತ್ರ ಕುರ್ ಆನ್ 56:63-67)

ನಮ್ಮ ಮರಣ ಎಲ್ಲಿ? ಹೇಗೆ? ಎಂದು ಯಾರಿಗೂ ತಿಳಿದಿಲ್ಲ, ಎಲ್ಲವೂ ಅನುಲ್ಲಂಘನೀಯವಾದ ದೇವವಿಧಿಗೆ ವಿಧೇಯವಾಗಿದೆ ಅದನ್ನು ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ, ನಮ್ಮ ಆಯುಷ್ಯದ ಹೃಸ್ವ-ದೀರ್ಘವೆಲ್ಲವೂ ಅಲ್ಲಾಹನ ತೀರ್ಮಾನಕ್ಕೆ ಅನುಗುಣವಾಗಿದೆ. ‘ಯಾವ ಜೀವಿಯೂ ತಾನು ನಾಳೆ ಏನನ್ನು ಗಳಿಸುವೆನು ಎಂಬುದನ್ನು ತಿಳಿಯುದಿಲ್ಲ ಮತ್ತು ತನಗೆ ಯಾವ ಭೂಭಾದಲ್ಲಿ ಮರಣ ಬರುವುದೆಂಬ ಅರಿವು ಯಾರಿಗೂ ಇಲ್ಲ.’ (ಪವಿತ್ರ ಕುರ್ ಆನ್ 31: 34) ‘ಯಾವ ಜೀವಿಯೂ ಅಲ್ಲಾಹನ ಅನುಮತಿ ಹೊಂದದೆ ಸಾಯಲಾರದು, ಮರಣದ ಸಮಯವಂತು ಬರೆದಿಡಲ್ಪಟ್ಟಿದೆ.’ (ಪವಿತ್ರ ಕುರ್‌ ಆನ್ 3:145) ‘ವಾಸ್ತವದಲ್ಲಿ ಜೀವದಾನ ಮಾಡುವವನೂ ಮರಣ ಕೊಡುವವನೂ ಅಲ್ಲಾಹನು ಮಾತ್ರವಾಗಿದ್ದಾನೆ.’ (ಪವಿತ್ರ ಕುರ್ ಆನ್ 3:156) ‘ಮರಣವು ನೀವು ಎಂತಹ ಭದ್ರ ಕೋಟೆಯೊಳಗಿದ್ದರೂ ನಿಮಗೆ ಬಂದೇ ತೀರುವುದು.’ (ಪವಿತ್ರ ಕುರ್ ಆನ್ 4:78)

ಮನುಷ್ಯ ಜೀವನದ ಒಳಿತು-ಕೆಡುಕುಗಳು ಸನ್ಮಾರ್ಗ -ದುರ್ಮಾರ್ಗಗಳು ಜಯಾಪಜಯಗಳಂತೆ ಇಹಲೋಕದ ಕಾರ್ಯಗಳು ದೇವವಿಧಿಗೆ ವಿಧೇಯವಾಗಿದೆ. ಅದೇ ವೇಳೆ ದೇವ ವಿಧಿಯಿದ್ದರೆ ಆಹಾರ ಲಭಿಸುತ್ತದೆಂದು ಭಾವಿಸಿ ಯಾರೂ ದುಡಿಯದೆ ಸುಮ್ಮನಿರುವುದಿಲ್ಲ. ದೇವನ ವಿಧಿಯಂತೆ ಮರಣ ಸಂಭವಿಸುವುದರಿಂದ, ರೋಗ ಬಂದಾಗ ದೇವೇಚ್ಚೆಯಿದ್ದರೆ ಗುಣವಾಗುತ್ತದೆಂದು ಸಮಾಧಾನಪಟ್ಟು ಚಿಕಿತ್ಸೆ ನಡೆಸದವರಿರುವುದಿಲ್ಲ, ಪ್ರಜ್ಞಾವಂತರು ಜೀವನವನ್ನು ಸಂಪೂರ್ಣವಾಗಿ ವಿಧಿಗೆ ಬಿಟ್ಟು ಕೊಟ್ಟು ಆಲಸ್ಯವಾಗಿರುವುದಿಲ್ಲ, ಸೂಕ್ತ ಮಾರ್ಗಗಳನ್ನು ಆರಿಸಿಕೊಂಡು, ತನ್ನ ಜೀವನದ ಮುನ್ನಡೆಗೂ, ಗುರಿಯಡೆಗೂ ತಲುಪಲು ಗರಿಷ್ಠ ಶ್ರಮಿಸುವುದು ವಾಡಿಕೆಯಾಗಿದೆ. ಧರ್ಮವೂ ಅದನ್ನೇ ಕಲಿಸುತ್ತದೆ. ಮನುಷ್ಯನ ಕರ್ಮಗಳನ್ನು ಅವಲಂಬಿಸಿ ದೇವವಿಧಿ ಉಂಟಾಗುತ್ತದೆ.

‘ಪ್ರತಿಯೊಬ್ಬರಿಗೂ ಅವರವರ ಕರ್ಮಗಳಿಗನುಸಾರವಾದ ಸ್ಥಾನವಿದೆ. ಅಲ್ಲಾಹನು ಅವರಿಗೆ ಅವರ ಕರ್ಮಗಳ ಸಂಪೂರ್ಣ ಪ್ರತಿಫಲ ನೀಡುವಂತಾಗಲಿಕ್ಕಾಗಿ, ಅವರ ಮೇಲೆ ಖಂಡಿತ ಅನ್ಯಾಯವಾಗದು.’ (ಪವಿತ್ರ ಕುರ್ ಆನ್ 46: 19)

‘ಸತ್ಕರ್ಮವೆಸಗಿರಿ, ನೀವು ಮಾಡುವುದನ್ನೆಲ್ಲಾ ನಾನು ನೋಡುತ್ತಿದ್ದೇನೆ.’ (ಪವಿತ್ರ ಕುರ್ ಆನ್ 34: 11)

ಪ್ರವಾದಿಯವರು ಹೇಳುತ್ತಾರೆ: “ನೀವು ಪ್ರಭಾತ ಪ್ರಾರ್ಥನೆ ಪೂರ್ತಿಗೊಳಿಸಿದರೆ, ಆಹಾರಕ್ಕಾಗಿ ಶ್ರಮಪಡದೆ ನಿದ್ರಿಸಬಾರದು.” (ತಬ್ರಾನಿ)

‘ಅಂತಿಮ ದಿನ ಆಸನ್ನವಾದ ಸಂದರ್ಭದಲ್ಲೂ ನಿಮ್ಮಲ್ಲಿ ಯಾರಾದರೂ ಕೈಯಲ್ಲಿ ಖರ್ಜೂರದ ಗಿಡವಿದ್ದರೆ ಅವನು ಅದನ್ನು ನೆಡಲಿ, ಅವನಿಗೆ ಅದರ ಪ್ರತಿಫಲ ದೊರೆಯುವುದು, ಒಮ್ಮೆ ಪ್ರವಾದಿ(ಸ) ರು ಇಬ್ಬರ ನಡುವಿನ ಪ್ರಕರಣದಲ್ಲಿ ತೀರ್ಪು ನೀಡಿದರು. ಅಲ್ಲಿಂದ ಮರಳುವಾಗ ಕೇಸ್‌ನಲ್ಲಿ ಪರಾಜಿತನಾದವವನು ಹೇಳಿದನು: ‘ನನಗೆ ಅಲ್ಲಾಹನು ಸಾಕು, ಅವನೇ ಅತ್ಯಂತ ಉತ್ತಮ ಸಂರಕ್ಷಕ’ ಇದನ್ನು ಕೇಳಿದ ಪ್ರವಾದಿಯವರು ಆತನೊಡನೆ ಹೇಳಿದರು. ದೌರ್ಬಲ್ಯವನ್ನು ಅಲ್ಲಾಹನು ದ್ವೇಷಿಸುತ್ತಾನೆ. ಆದ್ದರಿಂದ ನೀವು ಸ್ವಂತಿಕೆ ಹಾಗೂ ಸ್ಪೂರ್ತಿಯನ್ನು ಬೆಳೆಸಿಕೊಳ್ಳಿ, ನಂತರವೂ ಪರಾಜಿತರಾದರೆ ಹೀಗೆ ಹೇಳಬಹುದು: ‘ನನಗೆ ಅಲ್ಲಾಹನೇ ಸಾಕು ಅವನೇ ಅತ್ಯುತ್ತಮ ಸಂರಕ್ಷಕ.’

ಮನುಷ್ಯನು ತನಗಿರುವ ಅವಕಾಶಗಳನ್ನೆಲ್ಲಾ ಬಾಚಿಕೊಂಡು ಪ್ರತಿಕೂಲ ಪರಿಸ್ಥಿತಿಯೊಂದಿಗೆ ಹೋರಾಡಲು ಹೊಣೆಗಾರನಾಗಿದ್ದಾನೆ. ವಿಜಯಗಳಿಸಲು ಅದು ಅನಿವಾರ್ಯ ಎಂದು ಧರ್ಮವು ಕಲಿಸುತ್ತದೆ. ದೃಢನಿಶ್ಚಯ, ಸ್ಥಿರಚಿತ್ತತೆ, ತ್ಯಾಗ ಮನೋಭಾವ, ಬತ್ತದ ಉತ್ಸಾಹ ಅವುಗಳನ್ನು ಕರಗತ ಮಾಡಿಕೊಳ್ಳಬೇಕೆಂದು ಅದು ಹೇಳುತ್ತದೆ. ದುಡಿಯದೆ, ಸೋಮಾರಿಯಾಗಿ ಸೋಲು, ದೌರ್ಬಲ್ಯ, ತಪ್ಪುಗಳೆಲ್ಲವನ್ನೂ ವಿಧಿಯ ಮೇಲೆ ಆರೋಪಿಸುವುದು ಬಹಳ ದೊಡ್ಡ ಅಪರಾಧವಾಗಿದೆ, ಉದಾಸೀನ ಹಾಗೂ ಅನಾಸ್ಥೆಯಿಂದ ಉಂಟಾದ ಅನಿವಾರ್ಯಫಲಗಳಿಗೆ ದೇವವಿಧಿಯ ಕವಚವನ್ನು ತೊಡಿಸುವುದು ಖಂಡನೀಯವಾಗಿದೆ. ದುಡಿಯದ ಫಲವನ್ನು ನಿರೀಕ್ಷಿಸುವುದೂ, ಕಷ್ಟಪಡದೆ ಸುಖವನ್ನು ಆಶಿಸುವುದೂ ಮೂರ್ಖತನವಾಗಿದೆ. ಅಲ್ಲಾಹನು ಕರ್ಮಗಳಿಗೆ ಮಾತ್ರ ಪ್ರತಿಫಲ ನೀಡುತ್ತಾನೆ. ನಿಷ್ಕ್ರಿಯತೆಯು ನಾಶಕ್ಕೆ ಹೇತುವಾಗಿದೆ.

ಒಬ್ಬರು ಪ್ರವಾದಿಯವರೊಡನೆ ಕೇಳುತ್ತಾರೆ: ‘ಪ್ರವಾದಿಗಳೇ, ನಾನು ಒಂಟೆಯನ್ನು ಕಟ್ಟಿ ಹಾಕಿದ ಬಳಿಕ ಅಲ್ಲಾಹನಲ್ಲಿ ಭರವಸೆಯಿರಿಸಬೇಕೇ? ಅಥವಾ ಹಗ್ಗದಿಂದ ಬಿಚ್ಚಿ ಭರವಸೆಯಿರಿಸಬೇಕೇ?’ ಪ್ರವಾದಿಗಳು ಹೇಳಿದರು: ಅದನ್ನು ಕಟ್ಟಿ ಹಾಕಿ, ಬಳಿಕ ಅಲ್ಲಾಹನಲ್ಲಿ ಭರವಸೆಯಿರಿಸಿ.’

ಆಹಾರ ಸೇವಿಸದೆ ಹಸಿವು ತಣಿಯುವುದಿಲ್ಲ. ನೀರು ಕುಡಿಯದ ದಾಹ ಶಮನವಾಗುವುದಿಲ್ಲ. ಬೀಜ ಬಿತ್ತದೆ ಸಸಿ ಮೊಳಕೆಯೊಡೆಯುವುದಿಲ್ಲ. ದುಡಿಯದೆ ಸಂಪಾದನೆ ಸಾಧ್ಯವಿಲ್ಲ, ಮಹಾನ್ ಯಶಸ್ಸಿಗೂ ಉತ್ತಮ ಕರ್ಮಗಳು ಅನಿವಾರ್ಯ. ಇದು ಬದಲಾವಣೆಯಿಲ್ಲದ ದೇವ ನಿಯಮವಾಗಿದೆ. ಇದನ್ನು ತಿಳಿದಿರುವ ನೈಜ ವಿಶ್ವಾಸಿ ಸದಾ ಕರ್ಮನಿರತನಾಗಿರುತ್ತಾನೆ. ಆದ್ದರಿಂದ ವಿಧಿವಿಶ್ವಾಸವು ಆಲಸಿಗಳನ್ನಾಗಿಸುವುದಿಲ್ಲ, ಉತ್ಸಾಹ ಪುಟಿದೇಳುವಂತೆ ಮಾಡುತ್ತದೆ. ದೇವವಿಧಿ ಹಾಗೂ ದಿವ್ಯಜ್ಞಾನ ಪ್ರತ್ಯಕ್ಷವೂ ಬಹಿರಂಗವೂ ಆಗಿಲ್ಲ. ಆದ್ದರಿಂದ ತನಗೆ ಅಜ್ಞಾತವಾದ ಒಂದು ವಿಷಯದ ಕುರಿತು ಆಲೋಚಿಸಿ ಅಸ್ವಸ್ಥನಾಗುವುದರಲ್ಲಿ ಅರ್ಥವಿಲ್ಲ, ಗಡಿ ರೇಖೆಗಳಿಲ್ಲದ ದೇವಕಾರುಣ್ಯವನ್ನು ನಿರೀಕ್ಷಿಸಿ ಕರ್ಮನಿರತನಾಗಬೇಕಾಗಿದೆ. ನಿರಾಶೆಯು ವಿಶ್ವಾಸಿಗೆ ಅಪರಿಚಿತವಾಗಿದೆ. ‘ನೀವು ದೇವಕಾರುಣ್ಯದ ಬಗ್ಗೆ ನಿರಾಶರಾಗದಿರಿ.’ (ಪವಿತ್ರ ಕುರ್ ಆನ್ 39:53) ಶ್ರಮವಹಿಸುವ ದೃಢನಿಶ್ಚಯದ ಬಳಿಕವೇ ನೀನು ಅಲ್ಲಾಹನಲ್ಲಿ ಭರವಸೆಯಿಡು ಎಂದು ಧರ್ಮವು ಕಲಿಸುತ್ತದೆ. ‘ನೀವು ಯಾವುದಾದರೊಂದು ಅಭಿಪ್ರಾಯದಲ್ಲಿ ದೃಢ ನಿರ್ಧಾರ ತಾಳಿದರೆ ಅಲ್ಲಾಹನ ಮೇಲೆ ಭರವಸೆಯಿಡಿರಿ.’ (ಪವಿತ್ರ ಕುರ್ ಆನ್ 3: 159)

ಉತ್ಸಾಹದ ಚಿಲುಮೆಯಂತೆ ಅತ್ತಿತ್ತ ಓಡಾಡಿಕೊಂಡಿದ್ದ ಯುವಕ ಆಕಸ್ಮಿಕವಾಗಿ ವಾತರೋಗ ಪೀಡಿತನಾಗುತ್ತಾನೆ. ಹಲವು ವಿಧದ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಲಿಲ್ಲ. ಕೊನೆಗೆ ಅಲೋಪಥಿ, ಆಯುರ್ವೇದ, ಹೋಮಿಯೋಪತಿಯೂ ಸೇರಿದಂತೆ ವೈದ್ಯಕೀಯ ರಂಗವು ರೋಗ ಗುಣವಾಗುವುದಿಲ್ಲವೆಂದು ಕೈಚೆಲ್ಲುತ್ತದೆ. ಆದ್ದರಿಂದ ಇನ್ನೆಂದು ಮಂಚದಿಂದಿಳಿದು ನಡೆಯಲಾರನೆಂದು ಆತನಿಗೆ ತಿಳಿಯುತ್ತದೆ. ಅಂತಾದರೆ ಆತ ದುಃಖಿತನಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಆತನಿಗೆ ಸಾಂತ್ವನ ನೀಡಲು ಲೋಕದ ಯಾವ ಶಕ್ತಿಗೂ ಸಾಧ್ಯವಿಲ್ಲ. ಇಪ್ಪತ್ತನೇ ಶತಮಾನದ ವೀರ ಕ್ರಾಂತಿಕಾರಿಯಾದ ವಿ.ಎ.ಲೆನಿನ್ ವಾತರೋಗ ಪೀಡಿತನಾದಾಗ ಅತ್ಯಂತ ನಿರಾಶನಾಗಿ ತನ್ನ ಆಪ್ತಮಿತ್ರ ಸ್ಟಾಲಿನ್‌ ರೊಡನೆ ಸಯನೈಡ್ ಕೇಳಲು ಅದೇ ಕಾರಣ. ಆದರೆ ದೇವನ ವಿಧಿಯಲ್ಲಿ ವಿಶ್ವಾಸವಿರಿಸುವವರು ಸರ್ವವನ್ನೂ ಸೃಷ್ಟಿಕರ್ತನಿಗೆ ಅರ್ಪಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ. ಅವರು ಮಾನಸಿಕ ಸಂತೃಪ್ತಿಯೊಂದಿಗೆ ಹೇಳಿಕೊಳ್ಳುತ್ತಾರೆ, ‘ತನಗೆ ಕೈ, ಕಾಲು, ಕಣ್ಣು, ಕಿವಿ, ನಾಲಗೆ, ಮೂಗು, ಆಯುಷ್ಯ, ಆರೋಗ್ಯ ಜೀವನವನ್ನು ನೀಡಿದವನು ಅಲ್ಲಾಹನಾಗಿದ್ದಾನೆ. ಅವನು ಅನುಗ್ರಹಿಸಿದ ಆರೋಗ್ಯವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾನೆ. ಇದೊಂದು ಪರೀಕ್ಷೆಯಾಗಿದೆ, ದೇವವಿಧಿಯೂ ಹೌದು. ನನ್ನಲ್ಲಿ ವ್ಯತಿಚಲನೆ ಉಂಟಾದರೆ ಪರಾಜಯ ಹೊಂದುತ್ತೇನೆ. ತಾಳ್ಮೆ ವಹಿಸಿದರೆ ಯಶಸ್ಸು ದೊರೆಯುವುದು ಯಾವ ರೋಗವೂ ಇಲ್ಲದ ಸುಂದರ ಸ್ವರ್ಗ ಜೀವನ ಪ್ರತಿಫಲವಾಗಿ ದೊರೆಯುವುದು.’

ನೋಡುಗರನ್ನು ಆಕರ್ಷಿಸುತ್ತಿದ್ದ ಆ ತಂದೆ ತಾಯಿಯ ಏಕೈಕ ಪುತ್ರನಾಗಿದ್ದ ನಾಲ್ಕು ವರ್ಷದ ಬಾಲಕ ಮರಣ ಹೊಂದುತ್ತಾನೆ. ಇಂತಹ ವ್ಯಕ್ತಿಗಳು ಅನುಭವಿಸುವ ದುಃಖ ಹಾಗೂ ನೋವು ವಿವರಿಸಲಾಸಾಧ್ಯ. ಇಂದಿನ ಕುಟುಂಬ ವ್ಯವಸ್ಥೆಯು ವಶಾಹತುಶಾಹಿ ವ್ಯವಸ್ಥೆಯ ಸೃಷ್ಟಿಯೂ, ಖಾಸಗಿ ಒಡೆತನದ ಅವಕಾಶವಿಲ್ಲದ ಮಹಿಳಾ ಸ್ವಾತಂತ್ರ್ಯದ ಕಮ್ಯೂನಿಸ್ಟ್ ಕಾಲದಲ್ಲಿ ಮಕ್ಕಳು ಹೆತ್ತವರನ್ನು ಗುರುತಿಸುತ್ತಿರಲಿಲ್ಲವೆಂದು ವಾದಿಸಿದ್ದ ಕಾರ್ಲ್ ಮಾರ್ಕ್ಸ್ ಕೂಡಾ ತನ್ನ ಮಗನ ವಿಯೋಗದಿಂದ ಅತ್ಯಂತ ದುಃಖಿತರಾಗಿದ್ದರು. 1855ರಲ್ಲಿ ಅವರ ಪ್ರೀತಿಯ ಪುತ್ರ ಎಡ್ಗರ್‌ಗೆ ಮಾರಕ ರೋಗ ಬಾಧಿಸಿತು. ಎಂಟು ವರ್ಷದ ಸಮರ್ಥನಾಗಿದ್ದ ಆ ಬಾಲಕನನ್ನು ‘ಮುಶ್’ ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ಏಕ ಪುತ್ರನ ರೋಗಶಯ್ಯೆಯಲ್ಲಿ ದೀರ್ಘ ರಾತ್ರಿಗಳನ್ನು ನಿದ್ರಿಸದೆ ಕಳೆದ ಮಾರ್ಕ್ಸ್ ಆ ಸಂದರ್ಭದಲ್ಲಿ ಏಂಗಲ್ಸ್‌ಗೆ ಬರೆದರು. ‘ಹೃದಯ ರೋದಿಸುತ್ತಿದೆ. ತಲೆ ಹೊಗೆಯಾಡುತ್ತಿದೆ, ನಂತರ ‘ಮುಶ್’ ಮರಣ ಹೊಂದಿದಾಗ ಆತ ಬರೆದರು: ‘ಪಾಪ, ಮುಶ್’ ತೀರಿಕೊಂಡ …ನನ್ನ ದುಃಖ ಎಷ್ಟೆಂದು ಹೇಳಲಸಾಧ್ಯವಾಗಿದೆ. ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ ವ್ಯಕ್ತಿ ನಾನು. ಆದರೆ ನಿಜವಾದ ದುಖವೆಂದರೇನೆಂದು ನನಗೀಗ ಅರ್ಥವಾಯಿತು.’

ಇಂತಹ ಸಂದರ್ಭಗಳಲ್ಲೂ ವಿಧಿಯ ಮೇಲೆ ವಿಶ್ವಾಸವುಳ್ಳವರು ಸಮಾಧಾನ ಪಡುತ್ತಾರೆ. ಅವರ ಮನಸ್ಸು ಮಂತ್ರಿಸುತ್ತದೆ, ”ನನಗೆ ಮಗುವನ್ನು ಕರುಣಾಮಯಿಯಾದ ದೇವನು ಅನುಗ್ರಹಿಸಿದ್ದಾನೆ. ತನ್ನ ಪ್ರೀತಿಯ ಪುತ್ರನನ್ನು ಅವನೇ ಕರೆಸಿಕೊಂಡಿದ್ದಾನೆ. ಎಲ್ಲವೂ ಅವನ ಉಲ್ಲಂಘಿಸಲಾಗದ ವಿಧಿಯಾಗಿದೆ. ನನಗಿಂತಲೂ ಪ್ರೀತಿ, ಕರುಣೆ, ವಾತ್ಸಲ್ಯವಿರುವ ಸೃಷ್ಟಿಕರ್ತನಿಗೆ ನನ್ನ ಮಗನನ್ನು ಮರಳಿಸಿದ್ದೇನೆ. ಆದ್ದರಿಂದ ನಾನು ತಾಳ್ಮೆಗೆಡುವುದು ಅರ್ಥಶೂನ್ಯವಾಗಿದೆ. ಸಹನೆ ಅವಲಂಬಿಸಿದರೆ ನನಗೆ ಸ್ವರ್ಗ ಲಭಿಸುತ್ತದೆ. ಶಾಶ್ವತವಾದ ಸ್ವರ್ಗದ ದ್ವಾರದಲ್ಲಿ ನನ್ನ ಪ್ರಿಯ ಪುತ್ರ ಮುಗಳ್ನಗೆಯೊಂದಿಗೆ ನನ್ನನ್ನು ಸ್ವಾಗತಿಸಲು ಕಾದು ನಿಂತಿದ್ದಾನೆ.”

ವಿಧಿಯಲ್ಲಿ ವಿಶ್ವಾಸವಿಲ್ಲದವರು ಆಪತ್ತುಗಳೆರಗಿದಾಗ ಅಸಹಾಯಕರಾಗಿ ಸಹಿಸಲಾಗದ ವ್ಯಥೆ ಅನುಭವಿಸುತ್ತಾರೆ. ಅವರು ತಮ್ಮ ದೂರು ಹಾಗೂ ನೋವನ್ನು ಹೇಳಿಕೊಳ್ಳುತ್ತಿರುತ್ತಾರೆ. ಅವರ ದುಗುಡ, ಆತಂಕ ಅರಕ್ಷಿತ ಭಾವನೆಯನ್ನು ಹೋಗಲಾಡಿಸಲು ಯಾವುದೇ ಸಾಂತ್ವನದ ಮಾತುಗಳಿಗೆ ಸಾಧ್ಯವಾಗುವುದಿಲ್ಲ. ಆದರೆ ಅಲ್ಲಾಹನ ಅನುಲ್ಲಂಘನೀಯವಾದ ವಿಧಿಯಲ್ಲಿ ವಿಶ್ವಾಸವಿರಿಸುವವರು ಸಹನೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಹನೆ ವಹಿಸಿದರೂ, ಇಲ್ಲದಿದ್ದರೂ ಲೌಕಿಕ ಫಲ ಒಂದೇ ಎಂಬ ಅರಿವು ಅವರಿಗಿರುತ್ತದೆ. ಮಾತ್ರವಲ್ಲ ಅಸಹನೆಯು ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ. ಸಹನೆ ಹಾಗೂ ಕ್ಷಮೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ದೇವ ಸನ್ನಿಧಿಯಲ್ಲಿ ಸಹನೆ ವಹಿಸಿದವರಿಗೆ ಮಹತ್ತರವಾದ ಪ್ರತಿಫಲವೂ, ಸಹನೆ ವಹಿಸದಿರುವುದು ಅಪರಾಧವು ಆಗಿದೆ. ಐಹಿಕ ಜೀವನವು ಸಂಪೂರ್ಣವಾಗಿ ಪರೀಕ್ಷೆಯಾಗಿದೆ. ಅನುಗ್ರಹಗಳನ್ನು ನೀಡಿಯೂ, ನಿಷೇಧಿಸಿಯೂ ದೇವನು ಪರೀಕ್ಷಿಸುತ್ತಾನೆ. ಪ್ರತಿಫಲವು ಮರಣಾನಂತರ ಪರಲೋಕದಲ್ಲಿ ಲಭಿಸುತ್ತದೆ. ಅನುಗ್ರಹಗಳು ತುಂಬಿದ ಕಾಲದಲ್ಲಿ ಆಹ್ಲಾದದಲ್ಲಿ ಮಿತಿಯನ್ನು ಪಾಲಿಸಬೇಕೆಂದು ಧರ್ಮವು ಕಲಿಸುತ್ತದೆ. ಅನುಗ್ರಹಗಳು ಕಸಿಯಲ್ಪಡುವಾಗ ಕ್ಷಮೆ ಹಾಗೂ ಸಹನೆಯನ್ನು ಪಾಲಿಸಬೇಕೆಂದು, ಅಂತಹವರಿಗೆ ವಿಜಯವೆಂದೂ ಹೇಳಲಾಗಿದೆ.

‘ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ. ಅಂತಹವರ ಮೇಲೆ ವಿಪತ್ತೇನಾದರೂ ಎರಗಿದಾದಗ ಅವರು ನಿಶ್ಚಯವಾಗಿಯೂ ನಾವು ಅಲ್ಲಾಹನವರು ಮತ್ತು ಅಲ್ಲಾಹನೆಡೆಗೆ ನಮಗೆ ಮರಳಲಿಕ್ಕಿದೆ ಎನ್ನುವರು, ಅವರ ಮೇಲೆ ಅವರ ಪ್ರಭುವಿನ ಕಡೆಯಿಂದ ಮಹಾ ಅನುಗ್ರಹಗಳಿರುವುವು ಆತನ ಕಾರುಣ್ಯವು ಅವರನ್ನು ಆಚ್ಛಾದಿಸುವುದು ಮತ್ತು ಇಂತಹವರೇ ಸನ್ಮಾರ್ಗ ಹೊಂದಿದವರಾಗಿರುತ್ತಾರೆ.’ (ಪವಿತ್ರ ಕುರ್ ಆನ್ 2: 155-157)

ಇದನ್ನು ಅಂಗೀಕರಿಸುವ ವಿಶ್ವಾಸಿಗಳು ಸ್ವಸ್ತರೂ, ನಿರ್ಭಯರೂ ಆಗಿರುತ್ತಾರೆ. ತಮ್ಮ ವಿಧಿಯಲ್ಲಿ ಸಂಪೂರ್ಣ ತೃಪ್ತರಾಗಿರುತ್ತಾರೆ. ಅದು ತಮಗೆ ಅನುಕೂಲವೋ ಪ್ರತಿಕೂಲವೋ ಎಂಬುದು ಅವರಿಗೆ ಅಪ್ರಸಕ್ತವಾಗಿದೆ. ನೋವು, ದುಃಖ, ಭಯ, ನಿಟ್ಟುಸಿರು, ವಿಧಿಯಲ್ಲಿ ಸ್ವಲ್ಪವೂ ಬದಲಾವಣೆಯನ್ನು ತರುವುದಿಲ್ಲ. ಅವರು ದೌರ್ಭಾಗ್ಯ ಹಾಗೂ ಸೌಭಾಗ್ಯದ ಹೆಸರಿನಲ್ಲಿ ದುಃಖಿಸಿ ಕಾಲಕಳೆಯದೆ, ದಿವ್ಯ ಕಾರುಣ್ಯದಲ್ಲಿ ನಿರೀಕ್ಷೆಯನ್ನಿರಿಸಿ ಸ್ವಸ್ಥತೆಯಿಂದ ಹೊಸ ಹುಮ್ಮಸ್ಸಿನಿಂದ ಕಾರ್ಯನಿರತರಾಗುತ್ತಾರೆ. ಅವರು ಕಳೆದು ಹೋದ ನಷ್ಟವನ್ನು ನೆನಪಿಸಿ ನಿಟ್ಟುಸಿರು ಬಿಡುವುದಿಲ್ಲ. ಅವುಗಳನ್ನು ವರ್ತಮಾನ ಕ್ರಿಯೆಗಳಲ್ಲೂ ಭಾವಿ ಕರ್ಮಗಳಲ್ಲೂ ಕಂಡುಕೊಳ್ಳುತ್ತಾರೆ. ಹೀಗೆ ನೈಜ ವಿಧಿವಿಶ್ವಾಸವು ಕರ್ಮಕ್ಕೆ ಪ್ರೇರಕವೂ, ಮನಶ್ಯಾಂತಿಗೆ ಕಾರಣವೂ ಆಗಿ ಪರಿವರ್ತನೆಯಾಗುತ್ತದೆ. ವಿರಲ ವಿಧಿವಿಶ್ವಾಸವು ಸೋಮಾರಿತನಕ್ಕೂ, ಕರ್ಮಶಾಹಿತ್ಯಕ್ಕೂ ಹಾದಿತೋರಿಸುತ್ತದೆ. ಇಸ್ಲಾಮ್ ಅದನ್ನು ಖಂಡಿತ ಒಪ್ಪಿಕೊಳ್ಳುವುದಿಲ್ಲ.

“ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *