ಪ್ರವಾದಿ ಮುಹಮ್ಮದ್(ಸ) ಮಾನವ ಇತಿಹಾಸದಲ್ಲಿ ಅತ್ಯಧಿಕ ಪ್ರಭಾವ ಬೀರಿದ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಜೀವನದ ಎಲ್ಲಾ ರಂಗಗಳಲ್ಲಿಯೂ ಜನರಿಗೆ ಮಾದರಿಯಾಗಿದ್ದಾರೆ. ಅವರ ಪ್ರತಿಯೊಂದು ಮಾತು ಮತ್ತು ಕೃತಿಗಳು ಜನರ ಮನಸ್ಸಿಗೆ ನೆಮ್ಮದಿ, ಸಮಾಧಾನ, ಸಾಂತ್ವನವಾಗಿರುತ್ತದೆ. ಅವರ ಎಲ್ಲಾ ವಚನಗಳು ಆಧುನಿಕ ಕಾಲದಲ್ಲಿ ನಾವು ಎದುರಿಸುವ ಆರ್ಥಿಕ, ಕೌಟುಂಬಿಕ, ರಾಜಕೀಯ, ಸಾಮಾಜಿಕ, ಮಾನಸಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ, ಅವರ ಬೋಧನೆಗಳು ಉತ್ತಮ ಮತ್ತು ಶಾಂತಿಯುತ ಸಮಾಜವನ್ನು ನಿರ್ಮಿಸಲು ಪ್ರಸ್ತುತವಾಗಿದೆ. ಜಗತ್ತಿನಲ್ಲಿ ಪ್ರವಾದಿ ಮುಹಮ್ಮದ್(ಸ) ರ ಹೊರತು ಬೇರೆ ಯಾವುದೇ ಒಬ್ಬ ವ್ಯಕ್ತಿಯ ಜೀವನದ ಸಂಪೂರ್ಣ ಚರಿತ್ರೆ ದಾಖಲಿಸಿದ ಬೇರೊಂದು ಉದಾಹರಣೆ ಇತಿಹಾಸದಲ್ಲಿ ಕಾಣಸಿಗುವುದಿಲ್ಲ.
ಮಾನವರೆಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದ್(ಸ) ತಮ್ಮ ಜೀವನದಾದ್ಯಂತ ದುಃಖ, ಹಸಿವು, ದಾರಿದ್ರ್ಯ, ಸೋಲು, ಗೆಲುವು, ಮಾನಸಿಕ ಒತ್ತಡ, ಸಂಘರ್ಷವನ್ನನುಭವಿಸುವಂತಹ, ಭಾವನಾತ್ಮಕ ಸವಾಲುಗಳನ್ನು ಎದುರಿಸುವ ಅನೇಕ ಪರಿಸ್ಥಿತಿ ಉಂಟಾಗಿತ್ತು. ಆದರೂ ಅವರ ಯಾವುದೇ ಮಾತು ಮತ್ತು ಪ್ರತಿಕ್ರಿಯೆಯಿಂದ ಇನ್ನೊಬ್ಬರ ಮನಸ್ಸಿಗೆ ನೋವನ್ನುಂಟು ಮಾಡಲಿಲ್ಲ. ಸ್ವತಃ ದುಃಖಿತರಾಗಿದ್ದಾಗಲೂ ಇನ್ನೊಬ್ಬರ ಮನಸ್ಸಿಗೆ ಸಾಂತ್ವನ ನೀಡುತ್ತಿದ್ದರು ಎಂಬುದು ಅವರ ವಿಶಿಷ್ಟತೆಯಾಗಿದೆ.
ನಮ್ಮ ಒಳಿತು ಸಂತೋಷ, ವಿಜಯದ ಬಗ್ಗೆ ಮಾತ್ರವಲ್ಲ ವಿಶಾಲ ಹೃದಯದಿಂದ ಇನ್ನೊಬ್ಬರ ಮನಸ್ಸಿನ ಭಾವನೆಗಳನ್ನು ಗೌರವಿಸಲು ಕಲಿಸಿದರು. ಇನ್ನೊಬ್ಬರಿಗೂ ಒಳಿತನ್ನು ಬಯಸಲು ಉಪದೇಶಿಸುತ್ತಿದ್ದರು. ಇನ್ನೊಬ್ಬರ ಕಷ್ಟ ನಷ್ಟದಿಂದ ಸಂತೋಷ ಪಡುವುದನ್ನು ನಿಷೇಧಿಸಿರುವರು. ಇನ್ನೊಬ್ಬರನ್ನು ಅವಮಾನಗೊಳಿಸುವುದನ್ನು ಹಾಗೂ ಅಸಭ್ಯ ಮಾತುಗಳನ್ನಾಡುವುದನ್ನು ಸಂಪೂಣ೯ವಾಗಿ ತಡೆದಿರುವರು. ನಗುಮುಖದಿಂದ ತನ್ನ ಸಹೋದರನನ್ನು ಭೇಟಿಯಾಗುವುದನ್ನು ಸತ್ಕರ್ಮವೆಂದು ಸಾರಿರುವರು. ನಗುಮುಖವು ಎಲ್ಲಾ ನೋವು, ದುಃಖ, ದ್ವೇಷವನ್ನು ಮರೆಸುತ್ತದೆ.
ಪ್ರವಾದಿ ಮುಹಮ್ಮದ್(ಸ)ರು ಜೀವನದಲ್ಲಿ ಸುಖ ಸಂತೋಷ ದುಃಖ ಕಷ್ಟ ನೋವು ಎಲ್ಲವನ್ನು ಕೃತಜ್ಞತೆ, ಸಹನೆಯಿಂದ ಎದುರಿಸಲು ಕಲಿಸಿಕೊಟ್ಟರು. ಜನರಿಗೆ ಸಹನೆಯ ತರಭೇತಿ ನೀಡಿದರು. ರೋಗಿಗಳಿಗೆ ಆಶ್ವಾಸನೆ ನೀಡಿದರು. ಪ್ರತಿ ರೋಗ ಮತ್ತು ನೋವಿಗೆ ಪ್ರತಿಫಲ ವಾಗ್ದಾನ ಮಾಡಿದರು.
ಪ್ರವಾದಿ ಮುಹಮ್ಮದ್(ಸ) ಹೇಳಿರುವರು:
“ಸತ್ಯ ವಿಶ್ವಾಸಿಯ ಸ್ಥಿತಿಯು ಬಹಳ ವಿಚಿತ್ರವಾಗಿದೆ. ಅವನ ಎಲ್ಲ ವಿಷಯಗಳೂ ಅವನ ಪಾಲಿಗೆ ಸಾದ್ಯಂತ ಶುಭಕರವಾಗಿರುತ್ತದೆ. ಈ ವೈಶಿಷ್ಟ್ಯ ಸತ್ಯ ವಿಶ್ವಾಸಿಯ ಹೊರತು ಬೇರೆ ಯಾರಿಗೂ ಪ್ರಾಪ್ತವಾಗುವುದಿಲ್ಲ. ಸತ್ಯವಿಶ್ವಾಸಿಗೆ ಸುಖ ಸಿಕ್ಕಾಗ ಅವನು ಕೃತಜ್ಞತೆ ಸಲ್ಲಿಸುತ್ತಾನೆ. ಅದು ಅವನ ಪಾಲಿಗೆ ಶುಭಕಾರಿಯಾಗುತ್ತದೆ. ಇನ್ನು ಅವನಿಗೆ ದುಃಖ ಅಥವಾ ವಿಪತ್ತು ಎದುರಾದಾಗ ಅವನು ಸಹನೆ ವಹಿಸುತ್ತಾನೆ. ಅದು ಕೂಡಾ ಅವನ ಪಾಲಿಗೆ ಶುಭಕಾರಿಯಾಗುತ್ತದೆ.”
ಪತಿ ಪತ್ನಿಯರ ಹಕ್ಕು ಬಾಧ್ಯತೆ, ಮಾತಾಪಿತರು ಮಕ್ಕಳನ್ನು ಪ್ರೀತಿಸಲು, ಕರುಣೆ ತೋರಲು ಮತ್ತು ಮಕ್ಕಳು ಮಾತಾಪಿತರನ್ನು ಗೌರವಿಸಲು ಕಲಿಸಿ ಕೊಟ್ಟರು. ಕುಟುಂಬದ ಸದಸ್ಯರ ಮನಸ್ಸಿನಲ್ಲಿ ಪ್ರೀತಿಯನ್ನುಂಟು ಮಾಡಿದರು. ಹೆಣ್ಣು ಮಕ್ಕಳಿಗೆ ಜೀವಿಸುವ ಹಕ್ಕನ್ನು ಕಸಿಯುತ್ತಿದ್ದ ಆ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಬೆಳೆಸುವವರಿಗೆ ಸ್ವರ್ಗದ ಸುವಾರ್ತೆ ನೀಡಿರುವರು. ಅನಾಥರ, ನಿರ್ಗತಿಕರ, ಗುಲಾಮರ, ವಿಧವೆಯರ ಮನಸ್ಸಿಗೆ ಒಂದು ಆಸರೆಯಾಗಿದ್ದರು. ಅವರು ಜನಾಂಗೀಯತೆಯನ್ನು ಮತ್ತು ಗುಲಾಮಗಿರಿಯನ್ನು ನಿರ್ಮೂಲನೆ ಮಾಡಿದರು.
ಮಾನವನ ಮನಸ್ಸಿನ ಭಾವನೆ ಕೋಪ, ಅಸೂಯೆ, ದ್ವೇಷ, ವೈರತ್ವ, ಅತ್ಯಾಸೆ, ಒರಟು, ಪ್ರತೀಕಾರ ಭಾವನೆಗಳನ್ನು ನಿಯಂತ್ರಿಸಲು ಕಲಿಸಿದರು. ಕೋಪ ಬರುವಾಗ ನಿಂತಿದ್ದರೆ ಕುಳಿತುಕೊಳ್ಳಲು, ಕುಳಿತಿದ್ದರೆ ಮಲಗಳು, ಅಂಗಸ್ನಾನ ಮಾಡಲು ಉಪದೇಶಿಸಿರುವರು. ಅವರು ಅನುಸರಿಸಿದಂತಹ ರೀತಿ ಮನಸ್ಸಿನ ಎಲ್ಲಾ ರೋಗಗಳಿಗೆ ಗುಣೌಷಧಿಯಾಗಿದೆ. ಮಾನವನ ಮನಸ್ಸಿನಲ್ಲಿರುವ ಅಹಂಕಾರ, ಜಿಪುಣತೆ, ಕಾಠಿಣ್ಯ ಕಾಪಟ್ಯವನ್ನು ನಿರ್ಣಾಮ ಮಾಡಲು ಪ್ರಯತ್ನಿಸಿದರು.
ಮಾನವರಿಗೆ ಯಾವುದು ಒಳಿತು ಯಾವುದು ಕೆಡುಕು ಎಂದು ಅರಿತವರು. ಅವರು ಓರ್ವ ಶಾಂತಿಯ ದೂತರಾಗಿದ್ದರು. ಜಗತ್ತಿನಲ್ಲಿಯೇ ಶಾಂತಿಯ ಸಂದೇಶ ಸಾರಿದರು. ಶಾಂತಿಯ ವಾತಾವರಣವನ್ನುಂಟು ಮಾಡಲು ಪ್ರತ್ನಿಸಿದರು. ರಾತ್ರಿ ಕಾಲದ ದೀರ್ಘ ನಮಾಝ್, ಪ್ರಾರ್ಥನೆಗಳೆಲ್ಲವೂ ಮನಸ್ಸಿಗೆ ಸಂತೃಪ್ತಿ ನೀಡುತ್ತದೆ. ಮಾನಸಿಕ ರೋಗಗಳನ್ನು ಆಧ್ಯಾತ್ಮಿಕತೆಯಿಂದ ಗುಣಪಡಿಸಬಹುದು.
ಅವರು ಅನುಸರಿಸುತ್ತಿದ್ದಂತಹ ನಿದ್ದೆ, ಮಿತ ಆಹಾರ, ವಿವಾಹ, ಕುಟುಂಬ ಜೀವನ, ಧಾರ್ಮಿಕ ವಿಶ್ವಾಸ, ಆರಾಧನೆ ಇತ್ಯಾದಿ ಸಂತುಲಿತ ಜೀವನವು ಮಾನವ ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನುಂಟು ಮಾಡುತ್ತದೆ.
ಪ್ರವಾದಿ ಮುಹಮ್ಮದ್(ಸ) ರ ಹೊರತು ಜಗತ್ತಿನಲ್ಲಿ ಇತರ ಯಾವುದೇ ಧರ್ಮದ ನಾಯಕರ ನಿಂದನೆ ಮಾಡಿದ ಉದಾಹರಣೆ ಬೇರೆ ಇಲ್ಲ. ಅದು ಅವರ ಅನುಯಾಯಿಗಳಿಗೆ ತಮ್ಮ ವಿಶ್ವಾಸದ ಒಂದು ದೊಡ್ಡ ಪರೀಕ್ಷೆಯಾಗಿದೆ. ಪ್ರವಾದಿ ಮುಹಮ್ಮದ್(ಸ್)ರು ತಮ್ಮನ್ನು ನಿಂದನೆ ಮಾಡಿದವರೊಂದಿಗೂ ಸಕಾರಾತ್ಮಕವಾಗಿ ವರ್ತಿಸಿ ಕ್ಷಮಿಸುತ್ತಿದ್ದರು. ಪ್ರವಾದಿ ಮುಹಮ್ಮದ್(ಸ) ಜಗತ್ತಿಗೆ ಕ್ಷಮೆ, ಪ್ರೀತಿ, ಕರುಣೆ, ಸಮಾನತೆ, ಸಹೋದರತ್ವ, ಕೃತಜ್ಞತೆ, ನ್ಯಾಯ, ಸಹಬಾಳ್ವೆ, ಸಹಾನುಭೂತಿ, ಸಹಿಷ್ಣುತೆ, ಹಿತಾಕಾಂಕ್ಷೆ, ಅನುಕಂಪ, ಸೌಜನ್ಯಶೀಲತೆ, ಇತರರ ಹಕ್ಕುಗಳಿಗೆ ಆದ್ಯತೆ, ನಿಸ್ವಾರ್ಥ, ವಿಶಾಲ ಮನೋಭಾವ, ಔದಾರ್ಯ, ವಾತ್ಸಲ್ಯ, ಪರಸ್ಪರ ಗೌರವಾದಾರವನ್ನು ಬೋಧಿಸಿದರು.
ಪ್ರವಾದಿ ಮುಹಮ್ಮದ್(ಸ) ಹೇಳಿರುವರು: “ಯಾರ ನಾಲಗೆ ಮತ್ತು ಕೈಯಿಂದ ಜನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರಿಂದ ಜನರ ಜೀವ ಮತ್ತು ಸಂಪತ್ತು ಸುರಕ್ಷಿತವೋ ಅವನೇ ಸತ್ಯ ವಿಶ್ವಾಸಿ.”
- ಖದೀಜ ನುಸ್ರತ್
IslamKannada News Portal
