- ಮುಷ್ತಾಕ್ ಹೆನ್ನಾಬೈಲ್
ಮುಸ್ಲಿಮರಲ್ಲಿ ಪವಿತ್ರ ಕುರ್ಆನ್ ಕುರಿತಾಗಿ ಒಂದು ದೊಡ್ಡ ತಪ್ಪು ಕಲ್ಪನೆಯಿದೆ. ಕುರ್ಆನ್ ಪಾರಾಯಣವೇ ಅತೀ ಪುಣ್ಯದಾಯಕ ಎಂಬ ವ್ಯಾಪಕ ಭಾವನೆಯಿದೆ. ಹಾಗಾಗಿ ಹೆಚ್ಚು ಕಡಿಮೆ ಶೇ 99%ರಷ್ಟು ಮುಸ್ಲಿಮರು ಕುರ್ಆನ್ ಅರ್ಥ ಸಹಿತವಾಗಿ ಓದುವುದಿಲ್ಲ. ಅರ್ಥೈಸುವ ಗರಿಷ್ಠ ಪ್ರಯತ್ನ ಮಾಡುವುದಿಲ್ಲ.
ಹೀಗಿರುವುದರಿಂದಲೇ ಬಹುತೇಕ ಮುಸ್ಲಿಮರಿಗೆ, ಕುರ್ಆನಿನ ಕೆಲ ಆಯ್ದ ಸೂಕ್ತಗಳನ್ನು ಆರಿಸಿಕೊಂಡು ಅಪಪ್ರಚಾರ ಮಾಡುವ ಬಾಹ್ಯ ಶಕ್ತಿಗಳಿಗೆ ಸೂಕ್ತವಾದ ವಿವರಣೆಗಳ ಮೂಲಕ ಮನವರಿಗೆ ಮಾಡಲು ಕಷ್ಟವಾಗುತ್ತಿರುವುದು. ಕುರ್ಆನ್ ಪಾರಾಯಣವು ಪುಣ್ಯದಾಯಕ ಮತ್ತು ಅಲ್ಲಾಹನ ಸಂಪ್ರೀತಿಗೆ ಕಾರಣವಾಗುವುದು ಹೌದು. ಆದರೆ ಕುರ್ಆನಿನ ಅರ್ಥವನ್ನು ಅರಿಯಲು ಶ್ರಮಿಸದೆ ಅರ್ಥರಹಿತವಾಗಿ ಬದುಕಿಡೀ ಪಾರಾಯಣಕ್ಕೆ ಮಾತ್ರ ಸೀಮಿತವಾಗಿಸುವುದು ಅರ್ಥಹೀನ.
ಕುರ್ಆನಿನಲ್ಲಿ ಮಕ್ಕಾದಲ್ಲಿ ಅವತೀರ್ಣಗೊಂಡ ಸೂಕ್ತಗಳು ಮತ್ತು ಮದೀನಾದಲ್ಲಿ ಅವತೀರ್ಣಗೊಂಡ ಸೂಕ್ತಗಳು ಎಂಬ ಎರಡು ವಿಭಾಗಗಳಿವೆ. ಪವಿತ್ರ ಕುರ್ಆನಿನ ಸೂಕ್ತಗಳನ್ನು ಕಥೆ, ಕಾದಂಬರಿ ಓದಿದ ಹಾಗೆ ಓದಲಾಗದು. ಸೂಕ್ತಗಳ ಸುತ್ತಲಿನ ಘಟನೆಗಳು, ಅವತೀರ್ಣಕ್ಕೆ ಅನಿವಾರ್ಯವಾದ ಪ್ರಸಂಗಗಳು ಮತ್ತು ಅನುಷ್ಠಾನಗೊಂಡ ರೀತಿಯನ್ನು ಅರಿತರೆ ಮಾತ್ರ ಕುರ್ಆನ್ ಜೀವ ಸಂಕುಲದ ಒಳಿತುಗಳ ಸಂದೇಶ ಎಂದು ಸರ್ವರಿಗೂ ಮನವರಿಕೆಯಾಗುವುದು.
ಸ್ವತಃ ಮುಸ್ಲಿಮರೇ ಜಗತ್ತಿನ ಮಹಾನ್ ಸಾಹಿತ್ಯದ ಕಣಜವಾದ ದೇವಗ್ರಂಥ ಕುರ್ಆನ್ ಅರಿಯುವಲ್ಲಿ ಎಡವಿದರೆ ಅದರ ಸಂದೇಶ ಸಹಧರ್ಮಿಯರಿಗೆ ತಲುಪುವುದು ಮತ್ತು ಅವರ ಅನುಮಾನಗಳು ನಿವಾರಣೆಯಾಗುವುದು ಹೇಗೆ? ಕುರ್ಆನಿನ ಕುರಿತಾಗಿ ಮುಸ್ಲಿಮರ ಈ ಕೊರತೆಯೇ ಕೆಲವೊಂದು ಸೂಕ್ತಗಳು ದಶಕಗಳ ನಂತರವೂ ಅಪಪ್ರಚಾರ ಮತ್ತು ಅನುಮಾನಗಳಿಗೆ ಕಾರಣವಾಗಿರುವುದು.
ಧರ್ಮಗ್ರಂಥ ಪವಿತ್ರ ಕುರ್ಆನಿನ 9ನೇ ಅಧ್ಯಾಯದ 5ನೇ ಸೂಕ್ತದಲ್ಲಿ “ಪವಿತ್ರ ತಿಂಗಳು ಕಳೆದ ನಂತರ ನೀವು ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ. ಅವರನ್ನು ಸೆರೆಹಿಡಿಯಿರಿ, ಮುತ್ತಿಗೆ ಹಾಕಿರಿ ಮತ್ತು ಅವರಿಗಾಗಿ ಹೊಂಚು ಹಾಕಿ ಕುಳಿತುಕೊಳ್ಳಿರಿ. ಅವರೇನಾದರೂ ಪಶ್ಚಾತ್ತಾಪ ಪಟ್ಟು ನಮಾಜನ್ನು ಸಂಸ್ಥಾಪಿಸಿ ಝಕಾತ್ (ಬಡವರಿಗೆ ಕಡ್ಡಾಯ ವಾರ್ಷಿಕ ದಾನ) ನೀಡುವುದಾದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ. ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು” ಎಂದಿದೆ.
ಈ ಸೂಕ್ತವು ಪ್ರವಾದಿ ಮುಹಮ್ಮದ್(ಸ)ರ ಅನುಯಾಯಿಗಳು ಮತ್ತು ಅವರ ವಿರೋಧಿಗಳ ನಡುವೆ ನಡೆದ ಒಪ್ಪಂದವನ್ನು ಕಾರಣವಿಲ್ಲದೆ ಉಲ್ಲಂಘಿಸಿ, ಹಲ್ಲೆ, ಕೊಲೆ ನಡೆಸಿ ಹೀನತನ ಮೆರೆದವರ ಕುರಿತಾಗಿ ಯುದ್ಧ ನೀತಿಯ ಭಾಗವಾಗಿ ಅವತೀರ್ಣಗೊಂಡದ್ದು. ಆ ಒಪ್ಪಂದ ಉಲ್ಲಂಘನೆ ಮಾಡಿದ್ದು ವಿರೋಧಿ ಪಾಳಯದ ಕೆಲವೇ ಕೆಲವು ಮಂದಿ. ಅವರು ಯಾವುದೇ ರಾಜ್ಯ, ಪ್ರದೇಶ, ಪಂಗಡ, ಬುಡಕಟ್ಟುಗಳನ್ನು ಪ್ರತಿನಿಧಿಸುವವರಾಗಿರಲಿಲ್ಲ. ಹಾಗಾಗಿ ಆ ಒಪ್ಪಂದ ಉಲ್ಲಂಘಿಸಿದವರನ್ನು ಸೂಚಿಸಬಹುದಾದ ಒಂದೇ ಒಂದು ಪದವೆಂದರೆ ಅದು ಬಹುದೇವಾರಾಧಕರು ಎಂಬ ಪದ ಮಾತ್ರ. ಈ ಮೇಲಿನ ಸೂಕ್ತ ಬೆರಳೆಣಿಕೆಯ ಆ ನಿರ್ದಿಷ್ಟ ಅಪರಾಧಿಗಳಿಗೇ ಹೊರತು ಸಮಸ್ತ ಬಹುದೇವಾರಾಧಕರಿಗಲ್ಲ. ಸ್ವತಃ ಪ್ರವಾದಿ ಮುಹಮ್ಮದರ ಆಶ್ರಯದಾತ ಅವರ ಪ್ರೀತಿಯ ಚಿಕ್ಕಪ್ಪ ಅಬೂತಾಲಿಬ್ ಸಾಯುವವರೆಗೆ ಬಹುದೇವಾರಾಧಕರಾಗಿದ್ದರು. ಪ್ರವಾದಿ ಮುಹಮ್ಮದರ ಮನೆಯ ಹಿರಿಯ ವ್ಯಕ್ತಿಯೇ ಬಹುದೇವಾರಾಧಕರು. ಮೇಲಾಗಿ ಪ್ರವಾದಿ ಮುಹಮ್ಮದರು ಅನ್ಯಧರ್ಮದವರಿಗೆ, ನಮ್ಮಲ್ಲಿರುವ ಭಿನ್ನಮತವನ್ನು ಬದಿಗಿರಿಸಿ ಸಮಾನವಾಗಿರುವ ಅಂಶಗಳ ಆಧಾರದ ಮೇಲೆ ನಾವು ಒಂದಾಗಿರೋಣ ಎಂದು ನಿರಂತರ ಕರೆ ನೀಡುತ್ತಿದ್ದರು. ಜಗತ್ತಿನ ಪ್ರತಿಯೊಂದು ಧರ್ಮ ಗ್ರಂಥಗಳಲ್ಲಿಯೂ ಯುದ್ಧ ಮತ್ತು ವಧಾ ಸೂಕ್ತಿ-ಸಂಹಿತೆಗಳಿವೆ.
ದ್ವಾಪರಯುಗದಲ್ಲಿ ಅವತೀರ್ಣಗೊಂಡ ಭಗವದ್ಗೀತೆಯು ಕುರುಕ್ಷೇತ್ರದ ಯುದ್ಧಭೂಮಿಯಲ್ಲೇ ನಿರೂಪಿಸಲ್ಪಟ್ಟಿದ್ದು. ಭಗವದ್ಗೀತೆಯ ಆದಿ ಪ್ರೇರಣೆಯೇ ಯುದ್ಧ. ಅದೂ ಕೂಡ ಪಾಂಡವ ರನ್ನು ಬಾಲ್ಯದಲ್ಲಿ ಎತ್ತಿ ಮುದ್ದಿಸಿದ ವಂಶದ ಹಿರಿಯ ವ್ಯಕ್ತಿ ವಯೋವೃದ್ಧ ಭೀಷ್ಮನ ವಿರುದ್ದ. ಭಗವದ್ಗೀತೆಯ ಸೂಕ್ತಗಳು ಪಾಂಡವರ ಬದುಕನ್ನು ರೂಪಿಸಿದ ಗುರು ದ್ರೋಣಾಚಾರ್ಯರ ತಲೆಯನ್ನು ಹಾರಿಸಲೂ ಪ್ರೇರಣೆಯಾದವು. ಹಾಗಂತ ಹೇಳಿಕೊಂಡು ಭಗವದ್ಗೀತೆ ಹೇಳಿದ್ದು ತಪ್ಪೆಂದು ಅರ್ಥವಲ್ಲ. ಅದರ ಆಧಾರದ ಮೇಲೆ ಯಾವುದಾದರೂ ಸಮುದಾಯವನ್ನು ಆರೋಪಿಸಿದರೆ ಅದು ಅಜ್ಞಾನವಾಗುತ್ತದೆ. ಆಕ್ರಮಣಕ್ಕೆ ಬರುವ ಅಧರ್ಮದ ಪಕ್ಷದಲ್ಲಿದ್ದವನು ಅದೆಷ್ಟೇ ಧರ್ಮಿಷ್ಟನಾದರೂ ಆತ ಅಪರಾಧಿಯೇ ಎಂಬುದು ಗ್ರಂಥ ವಾಕ್ಯ. ಯುದ್ಧ, ಜೀವನ, ಬದುಕಿನ ಕುರಿತಾಗಿ ಭಗವದ್ಗೀತೆ ಹೇಳಿದ್ದು ಬಹಳಷ್ಟು ಪವಿತ್ರ ಕುರ್ಆನಿನ ಸೂಕ್ತಗಳನ್ನು ಹೋಲುತ್ತವೆ ಮತ್ತು ಸರಿಯೂ ಇದೆ. ಮಾತ್ರವಲ್ಲ, ಇತರ ದೈವಿಕ ಗ್ರಂಥಗಳ ಉಲ್ಲೇಖವೂ ಕೂಡ ಅದಕ್ಕೆ ಸಮಾನ ರೀತಿಯಲ್ಲೇ ಇದೆ. ಹೀಗಿದ್ದೂ ಯುದ್ಧ ಭೂಮಿಯಲ್ಲಿ ಅವತೀರ್ಣಗೊಂಡ ಭಗವದ್ಗೀತೆ ಮತ್ತು ನಿರಂತರ 23 ವರ್ಷಗಳ ಕಾಲ ಕ್ರಿಯೆಗಳ ಪ್ರತಿಕ್ರಿಯೆಯ ಜೊತೆಗೆ ಸಾಂದರ್ಭಿಕ ಸ್ವರೂಪದಲ್ಲಿ ಅವತೀರ್ಣಗೊಂಡ ಕುರ್ಆನ್ ಭಿನ್ನವಾಗಿ ಅರ್ಥೈಸಲ್ಪಟ್ಟಿದೆ. ಇದಕ್ಕೆ ಕಾರಣ ಮುಸ್ಲಿಮರು ಸ್ಥಳೀಯ ಭಾಷಾ ಸಾಹಿತ್ಯದಲ್ಲಿ ಧರ್ಮಗ್ರಂಥವನ್ನು ಸರಿಯಾಗಿ ಪ್ರಸ್ತುತ ಪಡಿಸದೆ ಅಸಡ್ಡೆ ತೋರುವುದು ಮತ್ತು ಅರ್ಥ ಸಹಿತ ಅಧ್ಯಯನದ ಮಹತ್ವ ಅರಿಯದಿರುವುದೇ ಆಗಿದೆ. ಅರ್ಥವಾಗುವ ಭಾಷೆಯ ಪವಿತ್ರ ಕುರ್ಆನಿನ ಪ್ರಾಥಮಿಕ ಅಧ್ಯಯನವೇ ಅದರ ಮೇಲಿನ ಎಲ್ಲ ಅಪವಾದಗಳನ್ನು ಸುಳ್ಳಾಗಿಸುತ್ತದೆ.
ಪಾರಾಯಣ ಮತ್ತು ಆರಾಧನಾ ಪರಿಕ್ರಮಗಳ ಕುರಿತಾಗಿ ಮುಸ್ಲಿಮರು ತೋರುವ ಉತ್ಸಾಹ, ಗ್ರಂಥಗಳ ಅನುಸರಣೆ, ಅರ್ಥೈಸುವಿಕೆ, ಸಶಕ್ತ ಪ್ರಸರಣ- ತರ್ಜುಮೆಗಳಿಗೆ ತೋರಿದ್ದಿದ್ದರೆ, ಇಂದು ಜಗತ್ತಿನ ಪೋಲಿಸ್ ಠಾಣೆಗಳಲ್ಲಿ ದಾಖಲಾಗುವ ಪ್ರತಿಯೊಂದು ಅಪರಾಧಕ್ಕೂ ಗ್ರಂಥ ವಾಕ್ಯದ ಸ್ಪಷ್ಟೀಕರಣ ನೀಡುವ ವಿಲಕ್ಷಣ ಬಾಧ್ಯತೆಯಿಂದ ಮುಸ್ಲಿಮರು ಮುಕ್ತರಾಗುತಿದ್ದರು.
ಇಂದು ಅಮೇರಿಕಾದಲ್ಲಿ ಮುಸ್ಲಿಂ ಒಬ್ಬ ಅಪರಾಧ ಮಾಡಿದರೂ ಭಾರತದ ಕೂಲಿ ಕಾರ್ಮಿಕ ಮುಸಲ್ಮಾನನಿಗೆ ಪ್ರಶ್ನೆ ಕೇಳಲಾಗುತ್ತದೆ. ಟಿವಿ ಆ್ಯಂಕರ್ಗಳಂತೂ ಬಾಯಿ ಬಡಿದುಕೊಂಡು ಲಬೋ ಲಬೋ ಅಂತ ಚೀರಾಡುತ್ತಾರೆ. ತಲೆ ಬುಡವಿಲ್ಲದ ಭಾರತೀಯ ಮುಸ್ಲಿಮರ ಧಾರ್ಮಿಕ ಅಧ್ಯಯನವು ದೇಶದಲ್ಲಿ ಕುರ್ಆನ್ ಸೂಕ್ತಗಳ ಮೇಲಿನ ಅಪವಾದ ನಿವಾರಿಸುವಷ್ಟು ಶಕ್ತವಾಗಿಲ್ಲ. ಹಾಗಾಗಿಯೇ ಸಮುದಾಯವನ್ನು ಪ್ರಭುತ್ವ ಶೋಷಿಸುವ ಮಟ್ಟಕ್ಕೆ ಇದು ತಂದು ನಿಲ್ಲಿಸಿದೆ.
ಇಂದು ಭಾರತೀಯ ಮುಸ್ಲಿಮರ ಪರಿಸ್ಥಿತಿ ಹೇಗಿದೆಯೆಂದರೆ ರಾಜಕಾರಣದ ಪ್ರಾಥಮಿಕ ಯೋಗ್ಯತೆ ಇಲ್ಲದವನೂ ಮುಸ್ಲಿಮರನ್ನು ಅವಹೇಳನ ಮಾಡಿ ಪೀಠ- ಪ್ರತಿಷ್ಠೆಗಳನ್ನು ಗಳಿಸಿ ಕೊಳ್ಳಬಹುದು. ಸಿಖ್ಖರು ಪೇಟಾ ಹಾಕಿಕೊಂಡು ಶಾಲೆಯಲ್ಲಿ ಕೂರಬಹುದು. ಅದೇ ಶಾಲೆಯ ಅದೇ ತರಗತಿ ಕೊಠಡಿಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಲು ಪ್ರಭುತ್ವ ಅನುಮತಿಸಬೇಕು. ಪೇಟಾ ಮತ್ತು ಹಿಜಾಬ್ ತಲೆಗೇ ಹಾಕುವುದು. ಹಾಕುವವರೂ ಭಾರತೀಯರೇ. ಇಬ್ಬರಿಗೂ ಒಂದೇ ರಾಷ್ಟ್ರ, ಒಂದೇ ರಾಷ್ಟ್ರ ಗೀತೆ, ಒಂದೇ ಸರ್ಕಾರ. ಎರಡೂ ಸಮುದಾಯದ ಅದೆಷ್ಟೋ ಸಾವಿರ ಸೈನಿಕರು ಈ ದೇಶಕ್ಕಾಗಿ ವಿರೋಧಿಗಳ ಗುಂಡಿಗೆ ಎದೆಯೊಡ್ಡಿ ಛಿದ್ರಛಿದ್ರವಾಗಿ ಸಿಡಿದು ಪ್ರಾಣಾರ್ಪಣೆ ಮಾಡಿದ್ದಾರೆ. ಆದರೂ ಒಂದು ತಲೆಗೆ ಒಂದು ಕಾನೂನು, ಇನ್ನೊಂದು ತಲೆಗೆ ಮತ್ತೊಂದು ಕಾನೂನು.
ಜಗತ್ತಿನಲ್ಲಿ ಮಹಿಳೆಯರಿಗೆ ಆಸ್ತಿಯ ಹಕ್ಕು, “ಮಹರ್” ಎಂಬ ವಧು ಧನದ ಹಕ್ಕು, ಶಿಕ್ಷಣದ ಹಕ್ಕು, ಮರು ಮದುವೆಯ ಹಕ್ಕು ಹೀಗೆ ಹಲವಾರು ಮಹಿಳಾ ವಿಮೋಚನೆಯ ಹಕ್ಕು ಪ್ರಥವಾಗಿ ನೀಡಿದ್ದು ಇಸ್ಲಾಮ್. ಕರಿಯ-ಶೂದ್ರರಿಗೆ ಮೇಲ್ವರ್ಗದವರೊಂದಿಗೆ ಸರಿಸಮಾನವಾಗಿ ಬದುಕುವ ಹಕ್ಕನ್ನು ಮೊದಲು ನೀಡಿದ್ದು ಇಸ್ಲಾಮ್. ಹೀಗೆ ಬರೆದರೆ ಮುಗಿಯಲಾರದಷ್ಟು ಜೀವಸಂಕುಲದ ಅಸಂಖ್ಯಾತ ಅನುಗ್ರಹಗಳಿಗೆ ಕಾರಣವಾದುದು ಇಸ್ಲಾಮ್. ಆದರೆ ಗ್ರಂಥಗಳ ಪಾರಾಯಣಕ್ಕೆ ಮಾತ್ರ ಸೀಮಿತವಾಗಿರುವ ಮುಸ್ಲಿಮ್ ಸಮುದಾಯಕ್ಕೆ ಇದರ ಅರಿವು ಮೂಡದೇ ಇರುವಾಗ ಸಹಧರ್ಮೀಯರಿಗೆ ಮೂಡುವುದಾದರೂ ಹೇಗೆ?
IslamKannada News Portal
