Home / ಲೇಖನಗಳು / ಜೇನ್ನೊಣ ಹಾಗೂ ಸತ್ಯವಿಶ್ವಾಸಿ

ಜೇನ್ನೊಣ ಹಾಗೂ ಸತ್ಯವಿಶ್ವಾಸಿ

@ ಅಬೂ ಝೀಶಾನ್

ಪ್ರವಾದಿ(ಸ) ಹೇಳುತ್ತಾರೆ, ಮುಹಮ್ಮದ್‌ನ(ಸ) ಆತ್ಮ ಯಾರ ಕೈಯಲ್ಲಿದೆಯೋ ಆತನಾಣೆ, ಸತ್ಯವಿಶ್ವಾಸಿ ಜೇನ್ನೊಣದ ಹಾಗೆ. ಜೇನ್ನೊಣ ಶುದ್ಧ ಹಾಗೂ ಆರೋಗ್ಯಕರವಾದುದನ್ನು ತಿನ್ನುತ್ತದೆ. ಮತ್ತು ಶುದ್ಧ ಹಾಗೂ ಆರೋಗ್ಯಕರವಾದುದರ ಮೇಲೆ ಕುಳಿತುಕೊಳ್ಳುತ್ತದೆ. ಹಾಗೆಯೇ ಜೇನ್ನೊಣ ಯಾವುದರ ಮೇಲೆ ಕುಳಿತುಕೊಳ್ಳುವುದೋ ಅದನ್ನು ಮುರಿಯುವುದಿಲ್ಲ ಅಥವಾ ಅದನ್ನು ಹಾಳು ಮಾಡುವುದಿಲ್ಲ.

ಪವಿತ್ರ ಕುರ್‌ಆನಿನಲ್ಲಿ ಕೂಡಾ ಜೇನ್ನೊಣದ ಹೆಸರಿನ ಅನ್ನಹ್ಲ್ ಎಂಬ ಅಧ್ಯಾಯವಿದೆ. ಅದರಲ್ಲಿ ಅಲ್ಲಾಹನು ಜೇನ್ನೊಣದ ಕಾರ್ಯ ವಿಧಾನವನ್ನು ಅದಕ್ಕೆ ಹೇಗೆ ವಹ್ಯ್ ಮಾಡಿದ್ದಾನೆ ಎಂದು ತಿಳಿಸಿದ್ದಾನೆ. ಹಾಗೆಯೇ ಹದೀಸಿನಲ್ಲೂ ಪ್ರವಾದಿ(ಸ) ಸತ್ಯವಿಶ್ವಾಸಿಯನ್ನು ಜೇನ್ನೊಣಕ್ಕೆ ಹೋಲಿಸಿರುವಾಗ ನಾವು ಇದರ ಬಗ್ಗೆ ವಿಶೇಷ ಗಮನಹರಿಸಬೇಕು.

ಜೇನ್ನೊಣ ಶುದ್ಧ ಹಾಗೂ ಆರೋಗ್ಯಕರವಾದುದನ್ನು ಮಾತ್ರ ತಿನ್ನುತ್ತದೆ. ನಮ್ಮ ಈಮಾನಿನ ಪ್ರಥಮ ಬೇಡಿಕೆಯೂ ಹಲಾಲ್ ರಿಝ್ಕ್ ಆಗಿದೆ. ನಾವು ಎಷ್ಟು ಒಳ್ಳೆಯ ಕಾರ್ಯವನ್ನು ಮಾಡುವುದಾದರೂ ನಾವು ಗಳಿಸುವ ಸಂಪತ್ತು ಹಲಾಲ್ ಆಗಿರದಿದ್ದರೆ ಅವು ಯಾವುವೂ ನಮ್ಮ ಪರಲೋಕಕ್ಕೆ ಪ್ರಯೋಜನವಾಗಲಾರದು.

ಜೇನ್ನೊಣ ಪರಿಪಕ್ವ ಆಗದ, ಕೇಡಾದ ಹೂವಿನ ಹತ್ತಿರ ಹೋಗುವುದಿಲ್ಲ. ಯಾವಾಗಲೂ ಶುದ್ಧವಾದ ಹಾಗೂ ಆರೋಗ್ಯಕರವಾದ ಹೂವನ್ನು ಹುಡುಕುತ್ತಾ ಹೋಗುತ್ತದೆ. ನಾವಾದರೋ ಸಂಪಾದಿಸಿದರೆ ಆಯಿತು, ಅದು ಯಾವ ರೀತಿಯದ್ದು, ಅಲ್ಲಾಹನ ಸಂಪ್ರೀತಿಯ ಮಾರ್ಗವೊ ಅಥವಾ ಕ್ರೋಧದ ಮಾರ್ಗವೋ ಎಂದು ಹೆಚ್ಚಿನವರು ಆಲೋಚಿಸುವುದಿಲ್ಲ. ಬಡ್ಡಿ, ಅಕ್ರಮ ದಾರಿ ಇಂದು ಮುಸ್ಲಿಮರಲ್ಲಿಯೂ ಸಾಮಾನ್ಯವಾಗಿದೆ. ಇಮಾಮ್ ಮಾಲಿಕ್(ರ) ರಿಝ್ಕ್ ನ ಬಗ್ಗೆ ಹೇಳುತ್ತಾರೆ,
“ಅಲ್ಲಾಹನು ನಿಭಾಯಿಸಿದ ರಿಝ್ಕ್ ಮುಗಿಯದೆ ಯಾರೂ ಸಾಯುವುದಿಲ್ಲ. ಆದರೆ ಅದನ್ನು ಗಳಿಸುವ ಬಗ್ಗೆ ಜಾಗ್ರತೆ ವಹಿಸಿರಿ.”

ನಾವು ಒಂದು ವೇಳೆ ಹರಾಮ್‌ನ ಮಾರ್ಗಕ್ಕೆ ಹೋಗದಿದ್ದರೆ ಅಲ್ಲಾಹನು ನಮಗೆ ನಿಶ್ಚಯಿಸಿದ ರಿಝ್ಕನ್ನು ಹಲಾಲ್‌ನ ಮೂಲಕ ನಮಗೆ ನೀಡಿಯೇ ತೀರುತ್ತಾನೆ. ಉದಾಹರಣೆಗೆ ಒಬ್ಬನಿಗೆ ಅಲ್ಲಾಹನು ಅವನ ವಿಧಿಯಲ್ಲಿ ಒಂದು ಮನೆ ಬರೆದಿದ್ದರೆ ಹಲಾಲ್‌ನ ರೂಪದಲ್ಲಿ  ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಆತನಿಗೆ ಸಿಗುವುದು. ಆದರೆ ಆತನಾದರೋ ಬಡ್ಡಿಯ ರೂಪದಲ್ಲಿ ಹರಾಮ್‌ನ ಮೂಲಕ ಮನೆ ಕಟ್ಟಿ ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗುತ್ತಾರೆ.

ಜೇನ್ನೊಣ ಒಂದು ಹೂವಿನ ರಸವನ್ನು ಹೀರುವಾಗ ಬಹಳ ಜಾಗ್ರತೆ ವಹಿಸುತ್ತದೆ. ಹೂವಿನ ಭಾರಕ್ಕೆ ಹೋಲಿಸಿದರೆ ಜೇನ್ನೊಣದ ಭಾರ ಹೆಚ್ಚಾಗಿದೆ. ಅದಲ್ಲದೆ ಅದು ಹೂವಿನ ಅಲೆ ಮೃದುವಾದ ಭಾಗದಲ್ಲಿ ರಸ ಹೀರಲು ಕುಳಿತುಕೊಳ್ಳುತ್ತದೆ. ಹಾಗಾಗಿ ಅದು ಬಹಳ  ಜಾಗ್ರತೆಯಿಂದ ಹೂವಿಗೆ ಭಾರ ಹಾಕದೆ ರೆಕ್ಕೆಯನ್ನು ಬಡಿಯುತ್ತಾ ರಸ ಹೀರುತ್ತದೆ. ಅದಲ್ಲದೆ ಅದು ಹೂವಿನಿಂದ ರಸ ಹೀರುವುದಕ್ಕಿಂತ  ಹೆಚ್ಚಾಗಿ ಹೂವಿಗೆ ಕೊಡುತ್ತದೆ. ಹೂವಿಗೆ ಪರಾಗಸ್ಪರ್ಶ ಮಾಡುವ ಜವಾಬ್ದಾರಿಯನ್ನು ಅಲ್ಲಾಹನು ಈ ಜೇನ್ನೊಣಗಳಿಗೆ ನೀಡಿದ್ದಾನೆ.  ನಮಗೆ 90% ಆಹಾರಗಳನ್ನು ನೀಡುವ ಸುಮಾರು 100 ಬೆಳೆಗಳಿವೆ. ಅಂತಹ 100 ಬೆಳೆಗಳಲ್ಲಿ 70 ಬೆಳೆಗಳು ಬೆಳೆಯುವುದು ಈ ಜೇನ್ನೊಣಗಳು ಮಾಡುವ ಪರಾಗಸ್ಪರ್ಶದ ಕಾರಣದಿಂದಾಗಿರುತ್ತದೆ. ಆದರೆ ನಾವು ನಮ್ಮ ಸಂಬಂಧಗಳಲ್ಲಿ ಕೊಡುವುದಕ್ಕಿಂತ ಹೆಚ್ಚು  ತೆಗೆಯುತ್ತೇವೆ ಹಾಗೂ ಅದನ್ನೇ ನಿರೀಕ್ಷೆ ಮಾಡುತ್ತೇವೆ. ನಮ್ಮಲ್ಲಿ ಬೇಡಿಕೆಗಳು ಹೆಚ್ಚಿರುತ್ತವೆ. ಪತಿ ಭಾವಿಸುತ್ತಾನೆ, ಪತ್ನಿ ನನಗೆ ಹಕ್ಕು ಗಳನ್ನು ನೀಡಬೇಕು, ಮಾತಾಪಿತರು ಮಕ್ಕಳು ತಮಗೆ ಹಕ್ಕುಗಳನ್ನು ನೀಡಬೇಕು, ಪತ್ನಿಯಾದವಳು ಪತಿ ತನಗೆ ತನ್ನ ಹಕ್ಕುಗಳನ್ನು ನೀಡಬೇಕು ಎಂದು ಬಯಸುತ್ತಾರೆ. ಹೀಗೆಯೇ ಎಲ್ಲ ಸಂಬಂಧಗಳಲ್ಲೂ ನಾವು ನೀಡಬೇಕಾದ ಹಕ್ಕುಗಳನ್ನು ಮರೆತು ನಮಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಹೀಗಾಗುವಾಗ ಬೇಡಿಕೆಗಳು ಹೆಚ್ಚಾಗಿ ಹೆಚ್ಚಿನ ಕಡೆ ಸಂಬಂಧಗಳು  ಮುರಿಯುತ್ತವೆ. ಆದರೆ ನಿಜವಾದ ಸತ್ಯವಿಶ್ವಾಸಿ ತನಗೆ ಸಿಗಬೇಕಾದ ಹಕ್ಕುಗಳಿಗಿಂತ ತಾನು ಇತರರಿಗೆ ನೀಡುವ ಹಕ್ಕುಗಳ ಬಗ್ಗೆ ಹೆಚ್ಚು ಚಿಂತಿತನಾಗಿರುತ್ತಾನೆ.

ನಮಗೆ ಜೇನ್ನೊಣದ ಜೀವನದಿಂದ ಬಹಳಷ್ಟು ಪಾಠ ಕಲಿಯಲಿಕ್ಕಿದೆ. ಜೇನ್ನೊಣ ಬಹಳ ಸಂಘಟಿತ ಜೀವನ ನಡೆಸುತ್ತದೆ. ಒಂದು ಜೇನ್ನೊಣಕ್ಕೆ ದಾರಿಯಲ್ಲಿ ಒಂದು ಹೂವಿನ ರಸ ಸಿಕ್ಕಿದರೆ ಅದು ಸ್ವಾರ್ಥಿಯಾಗಿ ತಾನೊಬ್ಬನೇ ಅದನ್ನು ಹೀರುವುದಿಲ್ಲ. ಅದು ನೇರವಾಗಿ ತನ್ನ ಗೂಡಿಗೆ ಹಿಂದಿರುಗಿ ಬಂದು ತಾನು ಹೀರಿದ ರಸದ ಸ್ವಾದವನ್ನು ಬೇರೆ ಜೇನ್ನೊಣಗಳ ಬಾಯಿಗೆ ತಾಗಿಸುತ್ತದೆ. ನಂತರ ನೃತ್ಯ ಮಾಡಿ ಆ ಹೂವು ಇರುವ ದಾರಿಯ ದಿಕ್ಕನ್ನು ತನ್ನ ಸಂಗಾತಿಗಳಿಗೆ ತೋರಿಸುತ್ತದೆ.
ಜೇನ್ನೊಣದಲ್ಲಿ ಒಂದು ಸೂಜಿ ಇರುತ್ತದೆ. ಅದು ನಮಗೆ ಚುಚ್ಚಿದರೆ ಬಹಳ ನೋವಾಗುತ್ತದೆ. ಒಂದು ಜೇನ್ನೊಣ ತನ್ನ ಸೂಜಿಯನ್ನು ಒಮ್ಮೆ ಚುಚ್ಚಿದರೆ ಅದು ಸಾಯುತ್ತದೆ. ಆದರೂ ಅಪಾಯದ ಸಂದರ್ಭದಲ್ಲಿ ಇತರರ ಉಳಿವಿಗಾಗಿ ತನ್ನ ಸಾವನ್ನು ಲೆಕ್ಕಿಸದೆ ತನ್ನ  ಸೂಜಿಯನ್ನು ವೈರಿಗೆ ಚುಚ್ಚಿ ಸಾಯುತ್ತದೆ.
ಜೇನ್ನೊಣ ತನಗೆ ಅಲ್ಲಾಹನು ನಿಶ್ಚಯಿಸಿದ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತದೆ ಹಾಗೂ ಅದರ ಜೀವನದಲ್ಲಿ ಖಂಡಿತವಾಗಿಯೂ  ಸತ್ಯವಿಶ್ವಾಸಿಗೆ ದೊಡ್ಡ ಪಾಠವಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …