Home / ಲೇಖನಗಳು / ಸಮಾಜ ಸುಧಾರಣೆ: ಪ್ರವಾದಿ(ಸ) ಕೊಡುಗೆ

ಸಮಾಜ ಸುಧಾರಣೆ: ಪ್ರವಾದಿ(ಸ) ಕೊಡುಗೆ

  • ರಕ್ಷಾ, ಬೆಳ್ತಂಗಡಿ

‘ನೆರೆಮನೆಯಲ್ಲಿ ಹಸಿದವರಿದ್ದರೆ ಹೊಟ್ಟೆ ತುಂಬಾ ತಿಂದು ಉಣ್ಣುವವನು ನಮ್ಮವನಲ್ಲ’ ಎಂಬ ಮಾನವೀಯತೆಯ ಮಾತಿನ ಮುಖೇನ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೆ ಗೌರವಿಸಲ್ಪಡುವ ಅದಮ್ಯ ಚೇತನವೇ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ.

ಆರನೆಯ ಶತಮಾನದಲ್ಲಿ ಅಧರ್ಮದ ಅಂಧಕಾರದಲ್ಲಿ ಮುಳುಗಿದ್ದ ಅರೇಬಿಯನ್ನರನ್ನು ಧರ್ಮವೆಂಬ ಬೆಳಕಿನೆಡೆಗೆ ಒಯ್ಯಲು ಮಕ್ಕಾದ ಪ್ರತಿಷ್ಠಿತ ಕುರೈಶಿ ವಂಶದ ಅಬ್ದುಲ್ಲಾ -ಆಮಿನಾ ದಂಪತಿಗಳ ಸುಪುತ್ರರಾಗಿ ಕ್ರಿ.ಶ. 571 ಎಪ್ರಿಲ್ 20ರಂದು ಸೋಮವಾರದ ಶುಭ ಪ್ರಾತಃಕಾಲದಲ್ಲಿ ಪ್ರವಾದಿಯವರ(ಸ) ಜನನವಾಗುತ್ತದೆ. ಹುಟ್ಟುವ ಮೊದಲೇ ತಂದೆಯನ್ನು, 6ನೇ ವರ್ಷದಲ್ಲಿ ತಾಯಿಯನ್ನು, ಮತ್ತೆರಡು ವರ್ಷಗಳ ಅನಂತರ ಅಜ್ಜ ಅಬ್ದುಲ್ ಮುತ್ತಲಿಬರನ್ನೂ ಅಗಲಿದ ಪ್ರವಾದಿವರ್ಯರು(ಸ) ಚಿಕ್ಕಪ್ಪ ಅಬೂ ತ್ವಾಲಿಬರ ಆಶ್ರಯದಲ್ಲಿ ಬೆಳೆಯುತ್ತಾರೆ.

ತನ್ನ ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲೇ ‘ಅಲ್ ಅಮೀನ್’ ಅಂದರೆ ವಿಶ್ವಾಸಾರ್ಹನು ಎಂಬ ಬಿರುದು ದೊರಕಿದ್ದು, ಭವಿಷ್ಯದಲ್ಲಿ ಇವರು ಇಡೀ ವಿಶ್ವವೇ ಮೆಚ್ಚುವ ಪ್ರವಾದಿಯಾಗುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಸದಾ ಸಮಾನತೆಯ ಮಂತ್ರ ಪಠಿಸುತ್ತಿದ್ದ ಪ್ರವಾದಿವರ್ಯರು(ಸ) ನುಡಿದಂತೆ ನಡೆಯುತ್ತಿದ್ದ ಶ್ರೇಷ್ಠ ವ್ಯಕ್ತಿ. ಬಾಲ್ಯದಲ್ಲಿ ತನ್ನ ಆರೈಕೆ ಮಾಡುತ್ತಿದ್ದ ನೀಗ್ರೋ ವಂಶದ ಗುಲಾಮ ಹೆಣ್ಣಾದ ‘ಉಮ್ಮು ಐಮನ್’ ಎಂಬ ದಾಸಿಯೊಬ್ಬರನ್ನು, ಕರಿಯರನ್ನು ಅತೀ ಹೀನಾಯವಾಗಿ ದಂಡಿಸುತ್ತಿದ್ದ ಅಂದಿನ ಕಾಲದಲ್ಲಿ ‘ನನ್ನ ತಾಯಿಯ ನಂತರದ ತಾಯಿ’ ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳಿದುದು ಪ್ರವಾದಿ ಮುಹಮ್ಮದ್ ರವರ(ಸ) ಉದಾರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಜಾತಿ-ಧರ್ಮ ಎಂದು ಮನುಷ್ಯತ್ವವನ್ನು ಮರೆತು ಬಾಳುವ ಇಂದಿನ ಸಮಾಜದ ಮುಂದೆ ಪ್ರವಾದಿವರ್ಯರ(ಸ) ಜೀವನ ಚರಿತ್ರೆ, ಅವರ ಆದರ್ಶ ತತ್ವಗಳು ದೈವತ್ವದ ರೂಪದಲ್ಲಿ ಸದಾ ಹೊಳೆಯುತ್ತಿರುತ್ತವೆ. ಇಂದಿನ ಕಾಲಘಟ್ಟದಲ್ಲಿ ಪ್ರವಾದಿ ಮುಹಮ್ಮದ್ ರವರು(ಸ) ಕೇವಲ ಇಸ್ಲಾಮ್ ಧರ್ಮದವರಿಂದ ಮಾತ್ರ ಆದರಿಸಲ್ಪಟ್ಟರೂ ತಮ್ಮ ಜೀವಿತಾವಧಿಯಲ್ಲಿ ಎಲ್ಲ ಧರ್ಮೀಯರನ್ನೂ ಸಮಾನ ಮನಸ್ಥಿತಿಯಿಂದ ಕಂಡು, ತನ್ನ ಆಡಳಿತದ ಅವಧಿಯಲ್ಲಿ ಸರ್ವ ಧರ್ಮೀಯರಿಗೂ ಸಮಬಾಳ್ವೆಯ ಸ್ವಾತಂತ್ರ‍್ಯವನ್ನು ನೀಡಿದ್ದರು. ಮನುಷ್ಯರಂತೆ ಜನ್ಮ ತಾಳಿ, ಅಸಾಮಾನ್ಯ ಶಕ್ತಿಯನ್ನು ಹೊಂದಿದ್ದ ಪ್ರವಾದಿವರ್ಯರೇ(ಸ) ನಮಗೆ ಬಹುದೊಡ್ಡ ಕೊಡುಗೆ. ಹೀಗಿದ್ದರೂ ಅವರು ತಮ್ಮ ಜೀವನದ ಪ್ರತಿಯೊಂದು ಮಜಲುಗಳಲ್ಲೂ ತನಗಾಗಿ ಏನನ್ನೂ ಮೀಸಲಿಡದೆ, ಪರೋಪಕಾರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಸಮಾಜದ ಏಳಿಗೆಗಾಗಿ ಹಲವಾರು ಉತ್ತಮ ಕಾರ್ಯವನ್ನು ನಿರ್ವಹಿಸಿದ್ದಾರೆ.

ಸಮಾನತೆಯ ಸ್ಥಾಪನೆ:
ಮನುಷ್ಯರೆಲ್ಲರೂ ಒಂದೇ ಮೂಲದವರು ಎಂಬ ಪವಿತ್ರ ಕುರ್‌ಆನ್‌ನ ಸಂದೇಶದಂತೆ ‘ನಾವೆಲ್ಲರೂ ಒಂದೇ’ ಎಂಬ ಸತ್ಯವನ್ನು ಅರಿತಿದ್ದ ಪ್ರವಾದಿವರ್ಯರು(ಸ), ಅನಾಗರಿಕರಾಗಿದ್ದ ಅರೇಬಿಯನ್ನರನ್ನು ತಮ್ಮ ದಿವ್ಯ ಸಂದೇಶದ ಮೂಲಕ ಪರಿವರ್ತನೆಗೊಳಿಸಿದರು. ದೇಹದ ಬಣ್ಣಕ್ಕನುಗುಣವಾಗಿ ಜನರನ್ನು ನಡೆಸಿಕೊಳ್ಳುತ್ತಿದ್ದ ಕ್ರೂರ ಕಾಲಘಟ್ಟದಲ್ಲಿ, ಶ್ವಾನಕ್ಕಿಂತಲೂ ಹೀನಾಯವಾದ ಪರಿಸ್ಥಿತಿಯಲ್ಲಿದ್ದ, ಅಸ್ಪೃಶ್ಯರೆಂದು ಘೋಷಿಸಲ್ಪಟ್ಟಿದ್ದ ಕರಿಯರನ್ನು ಸಮಾಜದ ಮುನ್ನೆಲೆಗೆ ತಂದು ಅವರಿಗೂ ಸ್ಥಾನಮಾನಗಳನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಇಥಿಯೋಪಿಯಾದ ನೀಗ್ರೋ ಗುಲಾಮ ಬಿಲಾಲ್(ರ), ಪೇರ್ಷ್ಯಾದ ಸಲ್ಮಾನ್ (ರ), ರೋಮನ್ ವ್ಯಕ್ತಿ ಸುಹೈಬ್(ರ) ಮುಂತಾದವರು ಸವರ್ಣ ಕುಲೀನರಾದ ಅಬೂಬಕರ್(ರ), ಉಮರ್(ರ)ರಂತಹವರೊಂದಿಗೆ ಬೆರೆತು ನೆಮ್ಮದಿಯಿಂದ ಬಾಳಲು ಸಾಧ್ಯವಾಗಿದೆ. ಬಡವರ ಮೇಲಿನ ಶ್ರೀಮಂತರ ದಬ್ಬಾಳಿಕೆ, ಅಶಕ್ತರಿಗೆ ಚಿತ್ರಹಿಂಸೆ ನೀಡುತ್ತಿದ್ದ ಮೇಲ್ವರ್ಗದ ಜನರನ್ನು ಪರಿವರ್ತಿಸಿ, ಕಲುಷಿತಗೊಂಡಿದ್ದ ಅವರ ಮನಸ್ಸೆಂಬ ಕೊಳವನ್ನು ಶಾಂತಗೊಳಿಸಿ, ಪ್ರೀತಿ ವಾತ್ಸಲ್ಯ ವೆಂಬ ಹೂವನ್ನು ಪ್ರವಾದಿ ಮುಹಮ್ಮದ್(ಸ) ಅರಳಿಸಿದರು.

‘ಇಥಿಯೋಪಿಯಾದ ನೀಗ್ರೋ ಗುಲಾಮನೋರ್ವ ನಿಮಗೆ ಆಡಳಿತಗಾರನಾಗಿ ಬಂದರೂ ಅವನನ್ನು ನೀವು ಅನುಸರಿಸಿರಿ’, ‘ನಮಾಝ್’ ವೇಳೆ ಗುಲಾಮ ವ್ಯಕ್ತಿಯೋರ್ವ ಮೊದಲನೆಯ ಸರದಿಯಲ್ಲಿದ್ದರೆ, ನಂತರ ಬಂದ ರಾಜನಿಗೆ ಆತನನ್ನು ಅಲ್ಲಿಂದ ಹಿಂದೆ ತಳ್ಳುವ ಹಕ್ಕಿಲ್ಲ’ ಎಂದು ಪ್ರವಾದಿವರ್ಯರು ಹೇಳಿದ ಮಾತು ಅವರ ಮೇಲಿನ ಗೌರವವನ್ನು ಇಮ್ಮಡಿಗೊಳಿಸುತ್ತದೆ. ಹೀಗೆ ಉಚ್ಚ-ನೀಚವೆಂಬ ತಾರತಮ್ಯವನ್ನು ಹೊಡೆದೋಡಿಸಿ, ಅಸಮಾನತೆಯ ಸಂಕಲೆಗಳಿಂದ ಶೋಷಿತರನ್ನು ವಿಮೋಚನೆಗೊಳಿಸಿದ ಅದ್ಭುತ ಜ್ಞಾನಿಯೇ ಪ್ರವಾದಿವರ್ಯರಾಗಿದ್ದಾರೆ.

ಸ್ತ್ರೀ ಕುಲದ ರಕ್ಷಕ:
ಮಹಿಳಾ ದೌರ್ಜನ್ಯವೆಂಬುದು ಮಾನವನ ಉಗಮ ಕಾಲದಿಂದಲೂ ಕೇಳಿ ಬರುತ್ತಿರುವ ಮಾತು. ಹೀಗಾಗಿ ಪ್ರವಾದಿವರ್ಯರ(ಸ) ಕಾಲದಲ್ಲೂ ಲಿಂಗ ತಾರತಮ್ಯವೆಂಬುದು ಜೀವಂತವಾಗಿತ್ತು. ದೇವರ ಸಮಾನವಾದ ಹೆಣ್ಣನ್ನೇ ಅತೀ ತುಚ್ಛವಾಗಿ ಕಾಣುತ್ತಿದ್ದ ಕಾಲದಲ್ಲಿ ಸ್ತ್ರೀಯರಿಗೆ ರಕ್ಷಾ ಕವಚವಾಗಿ ನಿಂತ ಮಹಾನ್ ವ್ಯಕ್ತಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಭಾರತದಲ್ಲಿ ಹೆಣ್ಣು, ಸತಿ ಸಹಗಮನ ಪದ್ಧತಿ, ಭ್ರೂಣ ಹತ್ಯೆಗಳಿಂದ ಶೋಷಿತಳಾಗುತ್ತಿದ್ದರೆ ಅರೇಬಿಯಾದಲ್ಲಿ ಹೆಣ್ಣು ಮಗುವನ್ನು ಹುಟ್ಟಿದಾಕ್ಷಣವೇ ಕೆಲಗೋತ್ರಗಳಲ್ಲಿ ಜೀವಂತವಾಗಿ ಹೂಳಲಾಗುತ್ತಿತ್ತು. ಕೇವಲ ಭೋಗದ ದೃಷ್ಟಿಯಿಂದ ಮಾತ್ರವೇ ಹೆಣ್ಣನ್ನು ನೋಡುತ್ತಿದ್ದ ಅಂದಿನ ಕಾಲದಲ್ಲಿ ಸ್ತ್ರೀ ಶೋಷಣೆಯೆಂಬ ಹೀನ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯಲು ಪ್ರವಾದಿವರ್ಯರು ಪ್ರಯತ್ನಿಸಿದರು. ಇದರ ಪ್ರತಿಫಲವೆಂಬಂತೆ ಮಹಿಳಾ ಸ್ವಾತಂತ್ರ‍್ಯ, ಸಮಾನ ಅವಕಾಶ, ವಿವಾಹದ ಸಂದರ್ಭದಲ್ಲಿ ವಧುದಕ್ಷಿಣೆಯ ಜೊತೆಗೆ ಹದಿನಾಲ್ಕು ಶತಮಾನಗಳ ಹಿಂದೆಯೇ ‘ಬೈಅತ್’ ಅಂದರೆ ಬೆಂಬಲಿಸುವ ಹಕ್ಕು ಸ್ತ್ರೀಯರಿಗೆ ದೊರಕಿತು. ಬೇರೆ ಯಾವ ದೇಶದಲ್ಲೂ ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಇರದ ಕಾಲದಲ್ಲೂ ಅರೇಬಿಯಾದಲ್ಲಿ ಮಾತ್ರ ಪ್ರವಾದಿವರ್ಯರು(ಸ) ತಂದೆಯ ಆಸ್ತಿಯಲ್ಲಿ ಪಾಲನ್ನು ದೊರಕಿಸಿ ಕೊಟ್ಟಿದ್ದರು.

ಹೆಣ್ಣು ಮಗುವು ಕೂಡ ನಿಮ್ಮಂತೆಯೇ ಮನುಷ್ಯ ಜೀವಿ. ಅದನ್ನು ಪ್ರೀತಿಯಿಂದ ಸಾಕಿ-ಸಲಹಿ, ಉತ್ತಮ ಶಿಕ್ಷಣ ನೀಡಿ ಬೆಳೆಸುವುದೇ ಮೋಕ್ಷದ ದಾರಿ ಎಂಬ ವಿಚಾರವನ್ನು ತೆರೆದಿಟ್ಟು, ಹೆಣ್ಣು ಶಾಪವಲ್ಲ, ಶಕ್ತಿ ಎಂಬ ಸತ್ಯ ಮನಗಾಣಿಸಿ ಜನರ ಕಣ್ಣು ತೆರೆಸಿ, ‘ನಮಗೂ ಒಂದು ಹೆಣ್ಣು ಹುಟ್ಟಲಿ’ ಎಂದು ಜನರು ಪ್ರಾರ್ಥಿಸಿಕೊಳ್ಳುವಂತಹ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಕರುಣಾಳು ಪ್ರವಾದಿ ಮುಹಮ್ಮದ್. ಜಗತ್ತಿನ ಶ್ರೇಷ್ಠ ಮಸೀದಿಗಳಾದ ಮಕ್ಕಾ ಮತ್ತು ಮದೀನಾದಲ್ಲಿ ಮಹಿಳೆಯರಿಗೆ ನಮಾಝಿನ ವ್ಯವಸ್ಥೆ ಮಾಡಿಸಿ, ಇಂದಿಗೂ ಸ್ತ್ರೀ -ಪುರುಷರು ಮಸೀದಿಯಲ್ಲಿ ನಮಾಝ್ ಸಲ್ಲಿಸುವ ಪದ್ಧತಿಯು ಪ್ರವಾದಿವರ್ಯರು(ಸ) ಸ್ತ್ರೀ ಕುಲಕ್ಕೆ ನೀಡಿದ ಅಭೂತಪೂರ್ವ ಕೊಡುಗೆಯಾಗಿದೆ. ಇವೆಲ್ಲದರ ಜೊತೆಗೇ ಮಹಿಳೆಯರಿಗೆ ಧೈರ್ಯವನ್ನು ತುಂಬಿ, ಸಾಂಸಾರಿಕ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿಯನ್ನು ತುಂಬಿದರು. ಲೈಂಗಿಕವಾಗಿ ಹೆಣ್ಣನ್ನು ದುರುಪಯೋಗಪಡಿಸಿಕೊಳ್ಳುತ್ತಾ ಅಕ್ರಮ ಮಾರ್ಗದಿಂದ ಹಣ ಸಂಪಾದಿಸುತ್ತಿದ್ದ ವೇಶ್ಯಾವಾಟಿಕೆಯನ್ನು ನಿಷೇಧಿಸಿ, ಮಹಿಳೆಯರ ಪಾಲಿಗೆ ಪ್ರವಾದಿವರ್ಯರು(ಸ) ನಡೆದಾಡುವ ದೇವರಾಗಿದ್ದರು.

ಮದ್ಯಪಾನ ನಿಷೇಧ:
ಕಗ್ಗತ್ತಲ ಆರನೆಯ ಶತಮಾನದಲ್ಲಿ ಜನರು ಕುಡಿತದ ದಾಸರಾಗಿದ್ದರು. ಅಶ್ಲೀಲ ನೃತ್ಯ, ಮೋಜು ಮಸ್ತಿ, ಜೂಜು ಹೀಗೆ ಅಧರ್ಮವೇ ತುಂಬಿ ತುಳುಕಾಡಿ, ಮನುಷ್ಯತ್ವವನ್ನು ಮರೆತು ಅಂದಿನ ಜನ ಬದುಕುತ್ತಿದ್ದರು. ಮದ್ಯಪಾನಕ್ಕೆ ಅರೇಬಿಯನ್ನರು ಎಷ್ಟು ಆಳವಾಗಿ ದಾಸರಾಗಿದ್ದರೆಂದರೆ, ಸತ್ತ ಮೇಲೂ ಮಾನವನ ಶರೀರವನ್ನು ದ್ರಾಕ್ಷಿ ಬಳ್ಳಿಗಳ ಬಳಿ ಹೂತಿಟ್ಟುಕೊಂಡು, ಮದ್ಯರಸವನ್ನು ಹೀರಬೇಕೆಂಬ ಆಸೆಯನ್ನು ಹೊಂದಿದ್ದರು. ಹೀಗೆ ಅಧಃಪತನಕ್ಕೀಡಾಗಿದ್ದ ಜನರ ಕಣ್ಣನ್ನು ತೆರೆಸಿ, ಕುಡಿತದ ದಾಸ್ಯದಿಂದ ವಿಮೋಚನೆಗೊಳಿಸಿ ಅರೇಬಿಯನ್ನರಿಗೆ ಮರು ಜೀವನವನ್ನು ಪ್ರವಾದಿ ಮುಹಮ್ಮದ್(ಸ)ರವರು ನೀಡಿದರು.

ಬಡವರ ಬಂಧು:
‘ಕಾರ್ಮಿಕನೊಬ್ಬ ಕೆಲಸ ಮುಗಿಸಿ ಆತನ ಬೆವರು ಆರುವ ಮೊದಲೇ ಕೂಲಿ ಕೊಟ್ಟು ಬಿಡಿ’ ಎಂದು ಹೇಳುವ ಮುಖೇನ ಕಾರ್ಮಿಕರ ಶ್ರಮ ಎಂತಹದ್ದು ಎಂಬುದನ್ನು ಜನತೆಗೆ ತಿಳಿಸಿದರು. ಕಾರ್ಮಿಕರಿಲ್ಲದೆ ಯಾವ ಕೆಲಸವೂ ಮುಂದುವರಿಯುವುದಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟು, ಮಾಲೀಕರಿಂದ ದುಡಿಯುವ ವರ್ಗದ ಮೇಲಾಗುತ್ತಿದ್ದ ದೌರ್ಜನ್ಯಕ್ಕೆ ಪೂರ್ಣ ವಿರಾಮವಿಟ್ಟರು. ಮಾಲೀಕ ಮತ್ತು ಕಾರ್ಮಿಕ ವರ್ಗದ ಮಧ್ಯೆ ಉತ್ತಮ ಬಾಂಧವ್ಯವನ್ನು ಬೆಳೆಸುವಂತೆ ಪ್ರೇರೇಪಿಸಿ ಅವರವರ ಜವಾಬ್ದಾರಿಯನ್ನು ಮನದಟ್ಟು ಮಾಡಿಸಿ, ಬಡವರ ಬಾಳಿನ ಆಶಾಕಿರಣವಾದರು. ಬಡ್ಡಿ ವ್ಯವಹಾರಗಳ ಮೂಲಕ ಬಡವರ ರಕ್ತ ಹೀರುತ್ತಿದ್ದ ಮೇಲ್ವರ್ಗದ ಜನರ ಕ್ರೂರತೆಗೆ ಕಡಿವಾಣ ಹಾಕುವ ಸಲುವಾಗಿ ಬಡ್ಡಿ ನಿಷೇಧವನ್ನು ಜಾರಿಗೆ ತಂದರು. ಆರ್ಥಿಕವಾಗಿಯೂ ಜನರು ಅಭಿವೃದ್ಧಿ ಹೊಂದಬೇಕೆಂಬ ದೃಷ್ಟಿಕೋನವನ್ನಿಟ್ಟುಕೊಂಡು, ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು. ಇದರ ಜೊತೆಗೆ ನೈತಿಕ ಬಂಡವಾಳದ ಹೂಡಿಕೆಯನ್ನೂ ಪ್ರೋತ್ಸಾಹಿಸಿದರು. ಬಡವರು ಶೈಕ್ಷಣಿಕವಾಗಿ ಉನ್ನತ ಸ್ಥಾನಕ್ಕೇರಬೇಕೆಂಬ ಸದುದ್ದೇಶದಿಂದ ಶಿಕ್ಷಣ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದರು. ಹೀಗೆ ಶೋಷಿತರು, ಬಡವರ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿದ್ದುಕೊಂಡು ಸಾಮಾಜಿಕ ಸುಧಾರಕರಾಗಿಯೂ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪುಣ್ಯ ಕಾರ್ಯವೆಸಗಿದ್ದಾರೆ.

ಇಸ್ಲಾಮ್ ಧರ್ಮದಲ್ಲಿ ಇಂದಿಗೂ ದಾನ ಧರ್ಮವೆಂಬುದು ಜೀವಂತವಾಗಿರಲು ಮೂಲ ಕಾರಣವೇ ಈ ಪ್ರವಾದಿವರ್ಯರು. ನಿರ್ದಿಷ್ಟ ಮಿತಿಗಿಂತ ಅಧಿಕ ಸಂಪತ್ತನ್ನು ಹೊಂದಿರುವ ವ್ಯಕ್ತಿಯು, ಅದರ ಕನಿಷ್ಠ 2.5% ದಷ್ಟಾದರೂ ಹಣವನ್ನು ಯಾವುದೇ ರೂಪದಲ್ಲಾದರೂ ಕಡ್ಡಾಯವಾಗಿ ಬಡವರಿಗೆ ದಾನ ಮಾಡಲೇಬೇಕು. ಇದನ್ನು ಇಸ್ಲಾಮ್ ಧರ್ಮದ ಭಾಷೆಯಲ್ಲಿ ‘ಝಕಾತ್’ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಹಜೀವಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕೆಂಬ ಉದಾರ ಮನಸ್ಸು ಅವರದ್ದಾಗಿತ್ತು. ಈ ಪದ್ಧತಿಯಿಂದಾಗಿಯೇ ಅದೆಷ್ಟೋ ಬಡ ಕುಟುಂಬಗಳು ತಮ್ಮ ಜೀವನವನ್ನು ಸಾಗಿಸುತ್ತಿದ್ದವು. ಹೀಗಾಗಿಯೇ ಮರುಭೂಮಿಯ ನಡುವಿನ ಓಯಸಿಸ್‌ನಂತೆ ಅವತರಿಸಿದ ಮಹಾಪುರುಷ ಮುಹಮ್ಮದ್ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂರು ಸದಾ ಅಮರರಾಗಿರುತ್ತಾರೆ.

ಸಹನಾಮಯಿ ಸರ್ವಾಂತರ್ಯಾಮಿ:
ಉತ್ತಮ ವಾಗ್ಮಿ, ಚಿಂತಕ, ಸದ್ಗುಣಶೀಲ, ಮಾನವತಾವಾದಿ, ಸಮಾಜ ಸುಧಾರಕ, ನಾಯಕ, ನಲ್ಮೆಯ ಗಂಡ, ಸ್ನೇಹ ಜೀವಿಯಾಗಿದ್ದ ಪ್ರವಾದಿಯವರು ಎಲ್ಲಾ ಕ್ಷೇತ್ರದಲ್ಲೂ ಪಳಗಿದ್ದರು. ಸಣ್ಣ ವಯಸ್ಸಿನಲ್ಲಿ ಯುದ್ಧದ ಕುರಿತಾದ ಜ್ಞಾನವನ್ನು ಹೊಂದಿದ್ದರೂ ಸಹ ಎಂದಿಗೂ ತಾಳ್ಮೆಯನ್ನು ಕಳೆದುಕೊಂಡವರಲ್ಲ. ಮೂಕ ಪ್ರಾಣಿಯೊಂದರ ಕಾರಣದಿಂದ ನಲವತ್ತು ವರ್ಷ ಅಂತರ್ಯುದ್ಧ ನಡೆಸಿ 70,000 ನರಹತ್ಯೆ ನಡೆಸಿದ ಕ್ರೂರ ಜನರಿಗೆ ಅದ್ವಿತೀಯ ಸೇನಾ ನೇತಾರ ಪ್ರವಾದಿಯವರು ಶಿಸ್ತನ್ನು ಕಲಿಸಿ, ಯುದ್ಧ ರಂಗವನ್ನು ಮಾನವೀಯತೆಯಿಂದ ಬೆಳಗಿಸಿದರು. 20 ವರ್ಷಗಳ ಕಾಲ ಕಡು ವೈರಿಯಾಗಿದ್ದ ಇಕ್ರಿಮಃನನ್ನು ಕ್ಷಮಿಸಿ, ತನ್ನ ಶಿಷ್ಯನನ್ನಾಗಿ ಪರಿವರ್ತಿಸಿದ ಹಿರಿಮೆ ಪ್ರವಾದಿಯವರಿಗೆ ಸಲ್ಲುತ್ತದೆ. ತನ್ನ ನೇತೃತ್ವದಲ್ಲಿ ನಡೆದ ದ್ವಿತೀಯ ಯುದ್ಧ ‘ಉಹ್ದ್’ ಮುಗಿದ ನಂತರವೂ ಸಹ ಚಿಕ್ಕಪ್ಪನ ಹತ್ಯೆ ಮಾಡಿ, ಪ್ರವಾದಿಯವರ ಪವಿತ್ರ ಹಲ್ಲೊಂದನ್ನು ಉದುರಿಸಿದವರಿಗೆ ಅವರು, ‘ನಿಮ್ಮಲ್ಲಿ ಯಾರ ಮೇಲೂ ಪ್ರತೀಕಾರವನ್ನು ಕೈಗೊಳ್ಳುವುದಿಲ್ಲ. ನೀವೆಲ್ಲರೂ ಸ್ವತಂತ್ರರಾಗಿರುವಿರಿ’ ಎಂದು ನುಡಿದ ಕರುಣಾ ಸಾಮ್ರಾಟ. ಕಠಿಣ ಶತ್ರುವಿನಲ್ಲೂ ಹಗೆತನ ತೋರದೆ, ಪ್ರೀತಿ ತೋರಿಸುವ ಪ್ರವಾದಿವರ್ಯರು(ಸ) ತನ್ನ ಕೊರಳಿಗೆ ಕೊಳೆತು ನಾರುವ ಒಂಟೆಯ ಕರುಳನ್ನು ಹಾಕಿದಾಗಲೂ, ಗುಡಿಸಿ ಹಾಕಿದ ಕಸಕಡ್ಡಿಗಳನ್ನು ಎಸೆಯುತ್ತಿದ್ದ ಮಹಿಳೆಯನ್ನೂ ಉದಾರ ಮನಸ್ಸಿನಿಂದ ಕ್ಷಮಿಸಿದ ಅಮರ ನೇತಾರ.

ಸರಳ ವ್ಯಕ್ತಿತ್ವ:
ತಮ್ಮ ನಿಸ್ವಾರ್ಥ ಕಾರ್ಯದ ಮುಖೇನ ಸಮಾಜ ಸೇವಕರಾಗಿ ಒಂದೆಡೆ ಮಾದರಿಯಾದರೆ, ಅವರ ವೈಯಕ್ತಿಕ ಜೀವನ ಇನ್ನೊಂದು ಉತ್ತಮ ಸಂದೇಶವಾಗಿದೆ. ಶತ್ರುವಿನಲ್ಲೂ ಮಾನವೀಯತೆಯನ್ನು ಕಾಣುತ್ತಾ ಅಜಾತ ಶತ್ರುವೆನಿಸಿಕೊಂಡರು. ಮಕ್ಕಾದಿಂದ ಮದೀನಾಕ್ಕೆ ತೆರಳಿ ಅಲ್ಲಿಯ ಜನರ ಏಳಿಗೆಗಾಗಿ ಶ್ರಮಿಸಿದರು. ತನ್ನ ಕೆಲಸಗಳನ್ನು ತಾನೇ ನಿರ್ವಹಿಸುತ್ತಾ, ವಸ್ತ್ರ, ಚಪ್ಪಲಿಗಳನ್ನು ತಾವೇ ದುರಸ್ಥಿಗೊಳಿಸುತ್ತಾ, ಮನೆಮಂದಿಗೆ ಅಡುಗೆ ಕೆಲಸದಲ್ಲಿ ನೆರವಾಗುತ್ತಿದ್ದರು. ಮದೀನಾ ಮಸ್ಜಿದ್ ನಿರ್ಮಾಣದ ವೇಳೆ ತಾನೇ ಸ್ವತಃ ಗಾರೆ-ಆಯುಧಗಳನ್ನು ಹಿಡಿದು ಕೆಲಸ ನಿರ್ವಹಿಸಿದರ ಸರಳ ವ್ಯಕ್ತಿತ್ವ ಪ್ರವಾದಿಯವರದ್ದಾಗಿತ್ತು. ಪ್ರಾಣಿಗಳಿಗೆ ಹುಲ್ಲು ಹಾಕುತ್ತಾ, ಹಾಲು ಕರೆಯುತ್ತಾ ಮದೀನಾದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದರು. ಸಿಂಹಾಸನ, ಕಿರೀಟ, ಮೃಷ್ಟಾನ್ನ ಭೋಜನದ ಆಯ್ಕೆಗಳಿದ್ದರೂ ಗುಡಿಸಲಿನಲ್ಲಿ ಖರ್ಜೂರದ ಎಲೆಗಳಲ್ಲಿ ಮಲಗಿ ದಿನ ಕಳೆಯುತ್ತಿದ್ದರು. ಈ ರೀತಿಯಾದ ಅವರ ಅತೀ ಸರಳ ವ್ಯಕ್ತಿತ್ವವೇ ನಮಗೆಲ್ಲರಿಗೂ ಮಾದರಿ.

ಸತ್ಕಾರ್ಯಗಳಿಗೆ ಧರ್ಮ ಎಂಬುದಿಲ್ಲ. ದೇಶ ಕಂಡ ಅದ್ಭುತ ಜ್ಞಾನಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ, ಸಂತ ಶಿಶುನಾಳ ಶರೀಫ ಮುಂತಾದ ಮಹಾನ್ ಚೇತನಗಳನ್ನು ಎಲ್ಲಾ ಧರ್ಮದವರೂ ಗೌರವಿಸುತ್ತಾರೆ ಎಂದರೆ ಅದಕ್ಕೆ ಮುಖ್ಯ ಕಾರಣವೇ ಅವರ ಜೀವನ ಮತ್ತು ವ್ಯಕ್ತಿತ್ವ. ಹೀಗಾಗಿಯೇ ಯಾವ ಧರ್ಮದ ವ್ಯಕ್ತಿ ಉತ್ತಮ ಕಾರ್ಯವನ್ನು ಮಾಡಿದರೂ ಸಹ ಮನುಷ್ಯರಾದ ನಾವು ಅದನ್ನು ಗೌರವಿಸಬೇಕು. ಇಸ್ಲಾಮ್ ಧರ್ಮದ ಏಕದೇವಾರಾಧನೆ, ಏಕ ನಾಯಕತ್ವ, ಏಕಗ್ರಂಥ, ಏಕಕೇಂದ್ರ ಹಾಗೂ ಏಕಭಾಷೆಯು ಒಟ್ಟಾರೆಯಾಗಿ ಏಕತೆಯ ಸಂದೇಶವನ್ನು ಸಾರುತ್ತದೆ. ದಂತ ಶುದ್ಧೀಕರಣ, ಛೇದಕರ್ಮ ಇವೆಲ್ಲವೂ ವೈಜ್ಞಾನಿಕ ದೃಷ್ಟಿಕೋನದಿಂದ ಅದರದ್ದೆ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ರಂಜಾನ್ ಹಬ್ಬದ ಪ್ರಯುಕ್ತ ಆಚರಿಸುವ ಉಪವಾಸ ಹಸಿದವರ, ಬಡವರ ಪರಿಸ್ಥಿತಿ ಎಂತಹದ್ದು ಎಂಬುದನ್ನು ತಿಳಿಸುತ್ತದೆ. ಹೀಗೆ ಪ್ರವಾದಿವರ್ಯರು(ಸ) ರೂಪಿಸಿದ ಇಸ್ಲಾಮ್ ಧರ್ಮದ ಪ್ರತಿಯೊಂದು ಆಚರಣೆಗಳು ಸದಾ ಪರೋಪಕಾರದ ಪರವಾಗಿದೆ.

ಇತರ ಧರ್ಮೀಯರಿಗೂ ಬೆಳೆಯಲು ಅವಕಾಶ ನೀಡಿದ ಪ್ರವಾದಿವರ್ಯರು(ಸ) ಯಾವತ್ತೂ ಬಲವಂತದ ಮತಾಂತರವನ್ನು ಒಪ್ಪಲಿಲ್ಲ. ಅವರ ಇಂತಹ ಆಲೋಚನೆ, ಉತ್ತಮ ನಡವಳಿಕೆ ಹಾಗೂ ಸಾಮಾಜಿಕ ಸುಧಾರಣೆಯಿಂದಲೇ ಇಂದಿಗೂ ಜನರ ಮನಸ್ಸಿನಲ್ಲಿ ಸದಾ ಪೂಜಿಸಲ್ಪಡುತ್ತಾರೆ. ಆಧುನಿಕತೆಯ ಅಮಲಿನಲ್ಲಿ ಅಧರ್ಮದ ಹಾದಿಯಲ್ಲಿ ಸಾಗುತ್ತಿರುವ ಇಂದಿನ ಸಮಾಜಕ್ಕೆ ಇಂತಹ ಶ್ರೇಷ್ಠ ಪ್ರವಾದಿಯು ದಾರಿ ದೀಪವಾಗಿದ್ದಾರೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …