Home / ಪ್ರಶ್ನೋತ್ತರ / ಕುರ್‌ಆನ್ ಮುಸ್ಲಿಮರಿಗೆ ಮಾತ್ರವೇ?

ಕುರ್‌ಆನ್ ಮುಸ್ಲಿಮರಿಗೆ ಮಾತ್ರವೇ?

  • ಖದೀಜಾ ನುಸ್ರತ್

ಮಾನವಕುಲದ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನು ಅವತೀರ್ಣಗೊಳಿಸಿದಂತಹ ಗ್ರಂಥವಾಗಿದೆ ಪವಿತ್ರ ಕುರ್‌ಆನ್. ಸೃಷ್ಟಿಕರ್ತನು ಮಾನವರಿಗೆ ಮಾರ್ಗದರ್ಶನ ನೀಡಬೇಕೆಂಬುದು ಅವನ ದೇವತ್ವದ, ಕರುಣೆಯ ಬೇಡಿಕೆಯಾಗಿದೆ. ತನ್ನ ಸೃಷ್ಟಿಯ ಭೂತ, ವರ್ತಮಾನ ಮತ್ತು ಭವಿಷ್ಯಗಳೆಲ್ಲವೂ ಪರಿಪೂರ್ಣವಾಗಿ ಸೃಷ್ಟಿಕರ್ತನಿಗೆ ಮಾತ್ರ ತಿಳಿದಿದೆ. ಈ ಕಾರಣದಿಂದಾಗಿಯೇ ಎಲ್ಲಾ ಕಾಲದಲ್ಲೂ ನಿರಂತರವಾಗಿ ಎಲ್ಲಾ ಜನಾಂಗಗಳಿಗೂ ಸಂದೇಶವಾಹಕರನ್ನು ಕಳುಹಿಸುತ್ತಿದ್ದನು. ಪ್ರಥಮ ಮನುಷ್ಯರಾದ ಆದಮ್(ಅ) ಪ್ರವಾದಿಯಾಗಿದ್ದರು. ಅಲ್ಲಾಹನ ಕಡೆಯಿಂದ ವಿವಿಧ ಕಾಲಗಳಲ್ಲಿ ನಾನಾ ಪ್ರದೇಶಗಳ ಮತ್ತು ಜನಾಂಗಗಳ ಮಾರ್ಗದರ್ಶನಕ್ಕಾಗಿ ಬೇರೆ ಬೇರೆ ಪ್ರವಾದಿಗಳಿಗೆ ವಿವಿಧ ಭಾಷೆಗಳಲ್ಲಿ ಗಂಥಗಳು ಅವತೀರ್ಣಗೊಳ್ಳುತ್ತಿದ್ದವು. ಎಲ್ಲ ಗ್ರಂಥಗಳ ಮತ್ತು ಪ್ರವಾದಿಗಳ ಸಂದೇಶ ಒಂದೇ ಆಗಿತ್ತು. ಆದರೆ ಅದು ಕೇವಲ ಒಂದು ಜನಾಂಗಕ್ಕೆ ಮತ್ತು ಆ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು. ಪವಿತ್ರ ಕುರ್‌ಆನ್‌ನ ವಿಶೇಷತೆಯೇನೆಂದರೆ ಅದು ಲೋಕಾಂತ್ಯದವರೆಗೆ ಬರುವ ಜಗತ್ತಿನ ಯಾವುದೇ ಮೂಲೆಯ ಸರ್ವ ಜನಾಂಗದ ಸಕಲ ಮಾನವರಿಗೆ ಮಾರ್ಗದರ್ಶನವಾಗಿದೆ.
“ಇದಂತು ಸಮಸ್ತ ಲೋಕದವರಿಗೊಂದು ಉಪದೇಶವಾಗಿರುತ್ತದೆ.” (ಪವಿತ್ರ ಕುರ್‌ಆನ್ 81:27)

ಮಾನವನು ಸೃಷ್ಟಿಕರ್ತನ ದಾಸ್ಯಾರಾಧನೆಯಿಂದ ದೂರ ನಡೆದು ಅವನ ಮಾರ್ಗದರ್ಶನವನ್ನು ಬಿಟ್ಟು ಸ್ವಚಿತ್ತದ ದಾಸ್ಯಾರಾಧನೆ ಸ್ವೀಕರಿಸುವುದೇ ಭೂಮಿಯಲ್ಲಿ ಹಲವು ಕ್ಷೋಭೆಗಳುಂಟಾಗಲು ಮೂಲ ಕಾರಣ. ಈ ಕ್ಷೋಭೆಯನ್ನು ಸಂಪೂರ್ಣವಾಗಿ ತಡೆಯುವುದೇ ಕುರ್‌ಆನ್‌ನ ಮೂಲ ಉದ್ದೇಶ. ನಾನು ಯಾರು? ಭೂಮಿಯ ಮೇಲೆ ಹೇಗೆ ಜೀವಿಸಬೇಕು? ನನ್ನ ಜವಾಬ್ದಾರಿಗಳೇನು? ನನ್ನ ಸೃಷ್ಟಿಕರ್ತ ಯಾರು? ಯಾವ ರೀತಿ ಅವನ ಆಜ್ಞೆಗಳಿಗೆ ಬದ್ಧನಾಗಿರಬೇಕು? ಯಾವ ರೀತಿ ಅವನ ಸಂತೃಪ್ತಿಯನ್ನು ಗಳಿಸಬಹುದು? ಯಾರನ್ನು ಆರಾಧಿಸಬೇಕು? ಯಾರನ್ನು ಆರಾಧಿಸಬಾರದು? ಯಾವ ರೀತಿ ಆರಾಧಿಸಬೇಕು? ತನ್ನ ಮಾತಾಪಿತರೊಂದಿಗೆ, ಸಂಬಂಧಿಕರೊಂದಿಗೆ, ಸಹಜೀವಿ ಗಳೊಂದಿಗೆ ತನಗಿರುವ ಬಾಧ್ಯತೆಗಳೇನು? ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಭೂಮಿಯ ಮೇಲೆ ಯಾವ ರೀತಿ ನೆಮ್ಮದಿಯಿಂದ ಜೀವಿಸಬಹುದು? ತನ್ನ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಯಾವ ರೀತಿ ಎದುರಿಸಬೇಕು? ಇತ್ಯಾದಿ ವಿಷಯಗಳಲ್ಲಿ ಪ್ರತಿ ಹೆಜ್ಜೆಯಲ್ಲೂ ಸರಿಯಾದ ಯುಕ್ತಿ ಪೂರ್ಣವಾದ ಮಾರ್ಗದರ್ಶನ ನೀಡುತ್ತದೆ.
“ನಾವು ಸಕಲ ಮಾನವರಿಗಾಗಿ ಈ ಪರಮ ಸತ್ಯಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ.” (ಪವಿತ್ರ ಕುರ್‌ಆನ್ 39: 41)

ಪವಿತ್ರ ಕುರ್‌ಆನ್ ಕೇವಲ ಪಾರಾಯಣ ಮಾಡಿ ಪುಣ್ಯ ಗಳಿಸಲಿರುವ ಗ್ರಂಥವಲ್ಲ. ಅದು ಆರಾಧನಾ ಕರ್ಮಗಳ ಜೊತೆ ಜೊತೆಗೆ ಒಂದು ಕ್ರಮಬದ್ಧ ಜೀವನ ರೀತಿಯನ್ನು ಬೋಧಿಸುತ್ತದೆ. ಕುರ್‌ಆನ್ ಕೇವಲ ಮುಸ್ಲಿಮರ ಗ್ರಂಥ ಅಥವಾ ಮುಸ್ಲಿಮರಿಗಾಗಿ ಮಾತ್ರ ಇರುವ ಗ್ರಂಥವೆಂದು ಮುಸ್ಲಿಮರಲ್ಲೂ ಮುಸ್ಲಿಮೇತರಲ್ಲೂ ತಪ್ಪು ತಿಳುವಳಿಕೆ ಇದೆ. ಪವಿತ್ರ ಕುರ್‌ಆನ್‌ನಾದ್ಯಂತ ‘ಓ ಜನರೇ’ ಎಂದು ಮಾನವಕುಲವನ್ನೇ ಉದ್ದೇಶಿಸಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

ಯಾವುದೇ ಒಂದು ಗ್ರಂಥ ಸಕಲ ಮಾನವರಿಗೆ ಮಾರ್ಗದರ್ಶನವಾಗಬೇಕಾದರೆ ಈ ಕೆಳಗಿನ ಮಾನದಂಡವನ್ನು ಹೊಂದಿರಬೇಕು. ಎಲ್ಲಾ ಗೋತ್ರ, ರಾಷ್ಟ್ರ, ಜನಾಂಗ, ಎಲ್ಲಾ ವರ್ಗ- ಶ್ರೀಮಂತ, ಬಡವ, ಕರಿಯ- ಬಿಳಿಯರನ್ನು ಒಟ್ಟಾಗಿ ನಿಲ್ಲಿಸುವಂತಹ ತತ್ವಗಳನ್ನು ಹೊಂದಿರಬೇಕು. ಭೂಮಿಯ ಎಲ್ಲಾ ಪ್ರದೇಶದ ಜನರಿಗೆ ಅನ್ವಯಿಸುವಂತಹ ನಿಯಮಗಳನ್ನು ಹೊಂದಿರಬೇಕು. ಅದು ಕಾಲ ಮಿತಿಯನ್ನು ಹೊಂದಿರಬಾರದು. ಭವಿಷ್ಯತ್ ಕಾಲಕ್ಕೆ ಅನುಗುಣವಾಗಿರಬೇಕು. ಅದರ ಎಲ್ಲಾ ನಿಯಮಗಳು ಸಂತುಲಿತ ಸಮಾಜವನ್ನು ನಿರ್ವಹಿಸುವಲ್ಲಿ ಪ್ರಸ್ತುತವಾಗಿರಬೇಕು. ಸಾಮಾಜಿಕ ಅನ್ಯಾಯ, ದಬ್ಬಾಳಿಕೆ, ತೀವ್ರವಾದ, ಜನಾಂಗೀಯವಾದ, ಭ್ರಷ್ಟಾಚಾರ ಇತ್ಯಾದಿಗಳಿಂದ ಮುಕ್ತವಾಗಿರಬೇಕು. ಪವಿತ್ರ ಕುರ್‌ಆನ್ ಈ ಎಲ್ಲಾ ಮಾನದಂಡವನ್ನು ಹೊಂದಿದೆ. ಯಾವುದೇ ತಡೆಯಿಲ್ಲದೆ, ಪುರೋಹಿತರ ಮಧ್ಯಸ್ಥಿಕೆಯಿಲ್ಲದೆ ದಾಸನನ್ನು ನೇರವಾಗಿ ದೇವನೊಂದಿಗೆ ಜೋಡಿಸುತ್ತದೆ. ಕುರ್‌ಆನ್‌ನ ಭಾಷಾ ಶೈಲಿ, ಸಾಹಿತ್ಯ, ನಿರೂಪಣೆ, ವಿವರಣೆ, ಅಸದೃಶ ವಾರ್ತೆ, ಅದು ಮುಂದಿಡುವ ವಿಷಯ, ವಾಸ್ತವಿಕತೆಗಳು, ಇದು ಒಬ್ಬ ಸಾಮಾನ್ಯ ವ್ಯಕ್ತಿಯ ವಾಣಿಯಲ್ಲ. ಇದು ಸಕಲ ಲೋಕದ ಸೃಷ್ಟಿಕರ್ತನೂ, ಸಾರ್ವಭೌಮನೂ, ಏಕಾಧಿಪತಿಯೂ, ಯುಕ್ತಿಪೂರ್ಣನೂ ಆದ ಜಗದೊಡೆಯನ ಗ್ರಂಥವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ.

ಪವಿತ್ರ ಕುರ್‌ಆನ್ ಸೃಷ್ಟಿಕರ್ತನಿಂದ ನಮಗೆ ಬಂದಿರುವಂತಹ ಸಂದೇಶ, ಇದನ್ನು ಯಾವ ರೀತಿ ಅನುಸರಿಸಬೇಕು, ಇದು ನನ್ನ ಪರಿಸ್ಥಿತಿಗೆ ಹೇಗೆ ಅನುಗುಣವಾಗಿದೆ, ನನಗೂ ಈ ಆಜ್ಞೆಗೂ ಯಾವ ಸಂಬಂಧವಿದೆ ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕು. ಓರ್ವ ಚಿತ್ರ ಕಲಾಕಾರ ಯಾವುದಾದರೊಂದು ವಿಷಯದ ಬಗ್ಗೆ ಚಿತ್ರಿಸಿ ಜನರ ಮುಂದೆ ಇಡುವಂತೆ, ಇಡೀ ಜಗತ್ತಿನ ದೃಷ್ಟಾಂತವನ್ನು ಕುರ್‌ಆನ್‌ನಲ್ಲಿ ಮಾನವನ ಮುಂದೆ ಇಡಲಾಗಿದೆ. ಅದು ನಮ್ಮ ಸತ್ಕರ್ಮಗಳಿಗೆ ಅನುಗ್ರಹಗಳಿಂದ ಕೂಡಿದ ಸ್ವರ್ಗದ ಸುವಾರ್ತೆ ನೀಡುತ್ತದೆ. ದುಷ್ಕರ್ಮಗಳಿಗೆ ನರಕದ ಎಚ್ಚರಿಕೆಯನ್ನು ನೀಡುತ್ತದೆ. ತಮ್ಮ ಸ್ವಂತ ಚಿತ್ತಾಕಾಂಕ್ಷೆಯ ಅನುಕರಣೆ, ಪೂರ್ವಿಕರ ಅಂಧಾನುಕರಣೆ, ಲೌಖಿಕ ವ್ಯಾಮೋಹ, ಅತ್ಯಾಸೆ ಇತ್ಯಾದಿಗಳನ್ನು ನಿಯಂತ್ರಿಸಿ ಪವಿತ್ರ ಕುರ್‌ಆನ್‌ನ ಸಂದೇಶವನ್ನು ಜೀವನದಲ್ಲಿ ಅಳವಡಿಸಿದಾಗ ಮಾತ್ರ ಇಹಲೋಕದಲ್ಲಿ ಮನಃ ಶ್ಶಾಂತಿಯಿಂದ ಜೀವಿಸಬಹುದು.

ಕುರ್‌ಆನ್‌ನ ಸಂದೇಶವನ್ನು ಮಾನವಕುಲಕ್ಕೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದು ಮಾನವನಿಗೆ ಆರ್ಥಿಕ, ಸಾಮಾಜಿಕ, ವೈವಾಹಿಕ, ಕೌಟುಂಬಿಕ, ವ್ಯವಹಾರ, ನೈತಿಕ ಹಾಗೂ ಇನ್ನು ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ನಮ್ಮ ಜೀವನ, ಮನೋಭಾವ, ವರ್ತನೆಗಳಲ್ಲಿ ಸುಧಾರಣೆ ತರುವುದರ ಮೂಲಕ ಹೊಸ ಮಾನವ ಮತ್ತು ಸಮಾಜದ ನಿರ್ಮಾಣವಾಗಬೇಕು. ನಮ್ಮ ಚಾರಿತ್ರ್ಯ, ಗುಣನಡತೆ, ವ್ಯವಹಾರಗಳು ಇತರರಿಗೆ ಸತ್ಯದ ಸಾಕ್ಷಿಯಾಗಬೇಕು.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *