ಸೌಹಾರ್ದವೆಂದರೆ…..
ನಾನು ನಾಮ ಹಾಕುವುದು!
ನೀನು ಟೊಪ್ಪಿ ದರಿಸುವುದಲ್ಲ!!
ನಾನು ನಾಮವ ,ನೀನು ಟೊಪ್ಪಿಯ ಗೌರವಿಸುವುದು…
ಸೌಹಾರ್ದವೆಂದರೆ…..
ನಾನು ಪೂಜೆ ಮಾಡುವುದು!
ನೀನು ನಮಾಝ್ ಮಾಡುವುದಲ್ಲ!!
ನಾನು ಪೂಜೆಯ, ನೀನು ನಮಾಝನ್ನು ಗೌರವಿಸುವುದು….
ಸೌಹಾರ್ದವೆಂದರೆ….
ನಾನು ಸಸ್ಯಾಹಾರಿ ಆಗುವುದು!
ನೀನು ಮಾಂಸಾಹಾರಿ ಆಗುವುದಲ್ಲ!!
ನಾನು ಸಸ್ಯಾಹಾರ ,ನೀನು ಮಾಂಸಾಹಾರವ ಗೌರವಿಸುವುದು…
ಸೌಹಾರ್ದವೆಂದರೆ…
ನಾನು ಭಗವದ್ಗೀತೆ ಓದುವುದು!
ನೀನು ಕುರ್ ಆನ್ ಓದುವುದಲ್ಲ!!
ನಾನು ಗೀತೆಯ ,ನೀನು ಕುರ್ ಆನ್ ಅರ್ಥೈಸುವುದು…
ಸೌಹಾರ್ದವೆಂದರೆ….
ನಾನು ನಿನ್ನನ್ನು ಹೊಗಳುವುದು!
ನೀನು ನನ್ನನ್ನು ಹೊಗಳುವುದಲ್ಲ!!
ನನ್ನ ಧರ್ಮದಂತೆ ನಾನು ,
ನಿನ್ನ ಧರ್ಮದಂತೆ ನೀನು ಬದುಕುವುದು…
ಸೌಹಾರ್ದ ವೆಂದರೆ
ಹಿಂದೂವಿಗೆ ಅನ್ಯಾಯವಾದಾಗ!
ನಾನು ಬರಹ ಬರೆದು ಸುಮ್ಮನಿರುವುದು!!
ಮುಸ್ಲಿಂ ಗೆ ಅನ್ಯಾಯ ವಾದಾಗ
ನೀನು ಬರಹ ಬರೆದು ಸುಮ್ಮನಿರುವುದಲ್ಲ
ನಾನು ,ನೀನೂ ಜೊತೆಯಾಗಿ ಪ್ರತಿಭಟಿಸುವುದು…
ಸೌಹಾರ್ದ ವೆಂದರೆ
ನನಗೆ ನೀನು ರಕ್ತ ಕೊಡುವುದು
ನಿನಗೆ ನಾನು ರಕ್ತ ಕೊಡುವುದಲ್ಲ
ನಾನೂ,ನೀನೂ ಸೇರಿ ಒಂದು ಹನಿ ಮಾನವ ರಕ್ತ
ಭೂಮಿಗೆ ಬೀಳದಂತೆ ಕಾಪಾಡುವುದು…
ಸೌಹಾರ್ದವೆಂದರೆ….
ಜಾತಿ ಧರ್ಮ ಪಕ್ಷ ಪಾರ್ಟಿ ನೋಡದೆ
ಮತಾಂಧರ,ಆಕ್ರಮಿ,ಭೃಷ್ಟಾಚಾರಿ,
ದೇಶದ್ರೋಹಿಗಳ ವಿರುದ್ಧ ಜೊತೆಯಾಗಿ ಹೋರಾಡುವುದು.
ನಾನು ಬದುಕುವುದು ,ಇತರರನ್ನು ಬದುಕಿಸುವುದು…
- ಜಮುಕ್ರಿ.
IslamKannada News Portal
