Home / ಲೇಖನಗಳು / ಇಸ್ಲಾಮ್ ನಲ್ಲಿ ಮಕ್ಕಳ ಹಕ್ಕಿನ ರಕ್ಷಣೆ

ಇಸ್ಲಾಮ್ ನಲ್ಲಿ ಮಕ್ಕಳ ಹಕ್ಕಿನ ರಕ್ಷಣೆ

ನನ್ನ ಅಧ್ಯಯನದ ವ್ಯಾಪ್ತಿಯಲ್ಲಿ ಗಮನಿಸಿದಂತೆ ಜಗತ್ತಿನ ಹಲವು ಧರ್ಮಗಳು ಮತ್ತು ಸಿದ್ಧಾಂತಗಳು ಕಿರಿಯರಿಗೆ ದೊಡ್ಡವರನ್ನು ಹೇಗೆ ಗೌರವಿಸಬೇಕೆಂದು ಹೇಳಿಕೊಡುತ್ತದೆ. ಆದರೆ ಇಸ್ಲಾಮ್ ಮಕ್ಕಳನ್ನು ಹೇಗೆ ಗೌರವಿಸಬೇಕು, ಅವರನ್ನು ಹೆಂಗೆ ನಡೆಸಿಕೊಳ್ಳಬೇಕು ಎಂದು ಸೂಕ್ಷ್ಮತೆಗಳನ್ನು ತಿಳಿಸುತ್ತದೆ. ಹಾಗಾಗಿ ಮಕ್ಕಳ ದಿನಾಚರಣೆಯ ನೆಪದಲ್ಲಿ ಮಕ್ಕಳನ್ನು ಗೌರವಿಸುವ ಇಸ್ಲಾಮಿನ ಸೂಕ್ಷ್ಮತೆಗಳನ್ನು ಸಾರ್ವತ್ರಿಕವಾಗಿ ಅರಿಯುವ ಅಗತ್ಯವಿದೆ. ಅದಕ್ಕಾಗಿ ಈ ಲೇಖನ.

ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ತೈತ್ತಿರೀಯೋಪನಿಷತ್‍ನ ಶಿಕ್ಷಾವಲ್ಲಿಯಲ್ಲಿ ಹೇಳುವಂತೆ ವಿದ್ಯಾರ್ಥಿಗೆ ಅಥವಾ ಮಕ್ಕಳಿಗೆ ಸಾಧಾರಣವಾಗಿ ಎಲ್ಲಾ ಧಾರ್ಮಿಕತೆಗಳಲ್ಲಿ ತಂದೆ, ತಾಯಿ ಮತ್ತು ಇತರ ಗುರು ಹಿರಿಯರ ಬಗ್ಗೆ ಮಕ್ಕಳ ಕರ್ತವ್ಯಗಳ ಮೇಲೆ ಪ್ರಾಧಾನ್ಯತೆ ನೀಡಿದರೆ, ಇಸ್ಲಾಮ್ ಮಕ್ಕಳ ಹಕ್ಕುಗಳ ಬಗ್ಗೆ ಧ್ವನಿ ಎತ್ತುತ್ತದೆ. ಮಕ್ಕಳ ಮೌಲ್ಯಗಳನ್ನು ಗುರುತಿಸುವ ನಿಟ್ಟಿನಲ್ಲಿ ಎತ್ತುವ ಮಕ್ಕಳ ಈ ವಿಶೇಷ ಹಕ್ಕುಗಳು ಪೋಷಕರ, ಸಮುದಾಯಗಳ ಅಥವಾ ಸರಕಾರಗಳಿಂದ ಗ್ಯಾರಂಟಿ ಕೊಡುತ್ತಿರುವುದಲ್ಲ, ದೇವರೇ ಹೊಣೆಗಾರನಾಗುವ ಮೂಲಕ ಮಕ್ಕಳ ಹಕ್ಕಿಗೆ ಪ್ರಾತಿನಿಧ್ಯವಿದೆ.

ಮಕ್ಕಳಿಗಾಗಿ ವಾಗ್ದಾನ
ಇಸ್ಲಾಮ್ ತನ್ನ ನೈತಿಕ ಚೌಕಟ್ಟನ್ನು ಕಟ್ಟಿಕೊಟ್ಟು ಅದರಲ್ಲಿ ಪ್ರತಿಯೊಬ್ಬರ ವ್ಯಕ್ತಿಗತವಾದಂತಹ ಹಕ್ಕುಗಳನ್ನು ಸಾಮಾಜಿಕವಾಗಿ ಅವರವರ ಬದುಕಿಗೆ ಕಟ್ಟಿಕೊಡುತ್ತಾ ಮಕ್ಕಳ ರಕ್ಷಣೆಗೆ ಆದ್ಯತೆ ನೀಡುತ್ತದೆ. ಮಗುವಿನ ಹಕ್ಕು ಮಗುವು ಹುಟ್ಟುವ ಮುನ್ನವೇ ಚಾಲ್ತಿಗೆ ಬರುತ್ತದೆ. ಗರ್ಭದಲ್ಲಿರುವ ಮಗುವನ್ನು ಕೊಲ್ಲುವುದನ್ನು ಒಪ್ಪದ ಕುರ್‌ಆನ್ (6:151) “ಬಡತನದ (ದಾರಿದ್ರ್ಯದ) ಕಾರಣಕ್ಕಾಗಿ ನಿಮ್ಮ ಮಕ್ಕಳನ್ನು ಕೊಲೆ ಮಾಡದಿರಿ. ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಪೋಷಣೆಯನ್ನು ನಾವೊದಗಿಸುತ್ತೇವೆ” ಎಂಬ ವಾಗ್ದಾನ ಅಲ್ಲಿದೆ.
ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುತ್ತಾ ಹಿರಿಯರಿಗೆ ಅವರನ್ನು ನೋಡಿಕೊಳ್ಳುವ ಕರ್ತವ್ಯಗಳನ್ನು ವಿಧಿಸುತ್ತದೆ. ಮಕ್ಕಳನ್ನು ನೋಡಿಕೊಳ್ಳುವುದೆಂದರೆ ಸುಲಭವಲ್ಲ ಎಂದು ಇಸ್ಲಾಂನಲ್ಲಿ ಅರಿವಿದೆ. ಆದರೂ ಕರ್ತವ್ಯ ಚ್ಯುತರಾಗಬಾರದೆಂದು ಹೇಳಲು ನಿಮ್ಮನ್ನು ಒರೆಗೆ ಹಚ್ಚುವಂತಹ ಪರಿಕ್ಷಾ ಸಾಧನವಾಗಿದೆ. ಅದನ್ನು ಸರಿಯಾಗಿ ನಿರ್ವಹಿಸಿದ್ದೇ ಆದಲ್ಲಿ ಅಲ್ಲಾಹನ ಅನುಗ್ರಹದ ಪ್ರತಿಫಲನಕ್ಕೆ ಯೋಗ್ಯರಾಗುವಿರಿ (64:15) ಎಂಬರ್ಥದ ಮಾತುಗಳು ಕುರ್‌ಆನ್ ನಲ್ಲಿ ಸಿಗುತ್ತವೆ.

ಪಾಶ್ಚಾತ್ಯ ಅಥವಾ ಐರೋಪ್ಯ ದೇಶಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸುಮಾರು ಹದಿನಾರನೆಯ ಶತಮಾನದವರೆಗೂ ಮಾತಾಡಿರಲೇ ಇಲ್ಲ. ಆದರೆ ನಂತರ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಮಕ್ಕಳನ್ನು ಕಿರು ವಯಸ್ಕರಂತೆಯೇ ಕಾಣುವುದಿದ್ದು, ವಯಸ್ಕರ ಅಗತ್ಯಗಳು ಮಕ್ಕಳಿಗೂ ಸಿಗಬೇಕೆಂಬ ಧೋರಣೆಯಿಂದ ಇರುವಂತಹ ಹಕ್ಕುಗಳಲ್ಲ ಇಸ್ಲಾಂನಲ್ಲಿ ಇರುವುದು. ಬದಲಿಗೆ, ಮಕ್ಕಳನ್ನು ಅವರ ನೈಸರ್ಗಿಕ ಸ್ವಭಾವವಾದ ಮುಗ್ಧತೆ ಮತ್ತು ಮೃದುತ್ವವನ್ನು ಕಾಪಾಡುವಂತಹ ಹೊಣೆಯನ್ನು ಹಿರಿಯರಿಗೆ ಹೊರಿಸುವುದು. ಜೊತೆಗೆ ಇಸ್ಲಾಮಿನಲ್ಲಿ ಧಾರ್ಮಿಕವಾಗಿ ಮಹತ್ವವಿರುವ ನಿರ್ಣಾಯಕ ದಿನದಂದು ಮಕ್ಕಳನ್ನು ನೋಡಿಕೊಳ್ಳಬೇಕಾಗಿದ್ದರ ಬಗ್ಗೆಯೂ ಈ ಹಿರಿಯರು ಉತ್ತರಿಸಬೇಕು ಎಂಬಷ್ಟು ಆದ್ಯತೆ ಉಂಟು.

ಮಕ್ಕಳು ಸ್ವತ್ತಲ್ಲ
ಇಸ್ಲಾಮ್ ನಲ್ಲಿ ಮಗುವೆಂದರೆ ಅದು ಪೋಷಕರ ಸ್ವತ್ತಲ್ಲ, ಅದು ದೇವರ ವಿಶ್ವಾಸವೇ ಮಾನವ ರೂಪದಲ್ಲಿ ಒದಗಿರುವಂತಹದ್ದು. ಹಾಗೆಯೇ ಗಂಡು ಮಗು ಅಥವಾ ಹೆಣ್ಣು ಮಗುವೆಂದು ಅಲ್ಲಾಹನ ಕೊಡುಗೆಯಲ್ಲಿ ತಾರತಮ್ಯ ಮಾಡುವಂತಿಲ್ಲ. ಮಾನವನು ತಾನು ನಿರ್ಧರಿಸಿದಂತೆ ಸೃಷ್ಟಿಸಲಾಗದ ಸಂತಾನವು ಅಲ್ಲಾಹನ ಕರುಣೆ ಮತ್ತು ಅನುಗ್ರಹವಲ್ಲದೇ ಮತ್ತಿನ್ನೇನು? ಅದನ್ನು ಪಡೆದ ಪೋಷಕರು ಆ ಸಂತಾನವನ್ನು ಅಲ್ಲಾಹನದೇ ಅನುಗ್ರಹದಿಂದ ನೋಡಿಕೊಳ್ಳುವ ಬಾಧ್ಯಸ್ಥರಾಗುವರು. ಇದು ಇಸ್ಲಾಮಿನ ಧೋರಣೆ.

ಇಸ್ಲಾಮ್ ಉದಯವಾಗುವ ಸಮಯದಲ್ಲಿ ಮತ್ತು ಮುನ್ನ ಅರಬ್ಬರಲ್ಲಿ ಒಂದು ಅಮಾನವೀಯವಾದಂತಹ ಮಕ್ಕಳನ್ನು ಹತ್ಯೆ ಮಾಡುವಂತಹ ಆಚರಣೆಗಳಿದ್ದವು. ಅವಕ್ಕೆ ಕ್ಷಾಮವೋ, ದಾರಿದ್ರ್ಯವೋ ಕಾರಣವಾಗಿರುತ್ತಿತ್ತು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಜೀವಂತವಾಗಿಯೇ ಹೂತು ಬಿಡುತ್ತಿದ್ದರು. ಈ ಅಜ್ಞಾನದ ಆಚರಣೆಯನ್ನು ಪ್ರವಾದಿ ಮಹಮ್ಮದರು ಧಿಕ್ಕರಿಸುವುದೇ ಅಲ್ಲದೇ ಹೆಣ್ಣು ಮಕ್ಕಳೂ ಕೂಡ ಅಲ್ಲಾಹನ ಅನುಗ್ರಹವೇ ಹಾಗೂ ಆ ಮಕ್ಕಳನ್ನು ಮೌಲ್ಯಾಧಾರಿತವಾಗಿ ಬೆಳೆಸುವುದು ಒಂದು ಕರ್ತವ್ಯವೆಂದು ಪ್ರತಿಪಾದಿಸಿದರು. ಪ್ರವಾದಿ ಮಹಮ್ಮದರು ಸ್ವಯಂ ಹೆಣ್ಣು ಮಕ್ಕಳ ತಂದೆಯಾಗಿದ್ದು, ಹೆಣ್ಣು ಮಕ್ಕಳ ಪೋಷಕರ ಉತ್ತಮ ಪ್ರತಿನಿಧಿಯಾಗಿ ನನಗೆ ತೋರುತ್ತಾರೆ. ಎಲ್ಲಾ ಮಕ್ಕಳೂ ಒಟ್ಟಾಗಿರುವಾಗ ತಂದಿರುವ ಹಣ್ಣನ್ನು (ಅಥವಾ ಕೊಡುಗೆಗಳನ್ನು) ಮೊದಲು ಹೆಣ್ಣು ಮಕ್ಕಳಿಂದ ಕೊಡಮಾಡು ಎನ್ನುವ ಮಾತು ಅವರಿಂದಲೇ.

ಹೆಣ್ಣು ಮಕ್ಕಳ ಪೋಷಕರ ಮೇಲೆ ಔದಾರ್ಯವಿರಲಿ
ಒಮ್ಮೆ ಒಬ್ಬಾಕೆಯು ಪ್ರವಾದಿಯವರ ಪತ್ನಿಯಾದ ಆಯಿಷಾರವರ ಬಳಿಗೆ ಬಂದಳು. ಅವಳ ಜೊತೆ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಆಕೆ ಭಿಕ್ಷೆ ಬೇಡಿದಳು. ಇವರ ಬಳಿ ಏನೂ ಇರದೇ ಬರಿಯ ಒಂದೇ ಒಂದು ಖರ್ಜೂರವಿರುತ್ತದೆ. ಆಗ ಅದನ್ನೇ ನೀಡಲಾಗಿ, ಆಕೆಯು ಅದನ್ನು ಎರಡು ಭಾಗ ಮಾಡಿ, ತಾನು ತಿನ್ನದೆಯೇ ಖರ್ಜೂರದ ಚೂರುಗಳನ್ನು ತನ್ನ ಎರಡು ಹೆಣ್ಣು ಮಕ್ಕಳಿಗೂ ತಿನ್ನಲು ಕೊಟ್ಟು ಅಲ್ಲಿಂದ ಹೊರಟು ಹೋದಳು. ಪ್ರವಾದಿ ಮಹಮ್ಮದರು ಮನೆಗೆ ಮರಳಿದಾದ ಅವರ ಪತ್ನಿ ಇದನ್ನು ವಿವರಿಸಿದರು. ಆಗ ಪ್ರವಾದಿ ಮಹಮ್ಮದರು, ಹೆಣ್ಣುಮಕ್ಕಳನ್ನು ಬೆಳೆಸುವ ಪರೀಕ್ಷೆಗೆ ಒಳಗಾಗಿರುವವರನ್ನು ಔದಾರ್ಯದಿಂದ ಕಾಣಬೇಕು. ಹೆಣ್ಣು ಮಕ್ಕಳ ಪೋಷಕರ ಬಗೆಗಿರುವ ಈ ಔದಾರ್ಯದ ಮನೋಭಾವ ನಿನ್ನನ್ನು ನರಕಾಗ್ನಿಯಿಂದ ರಕ್ಷಿಸುವುದು” ಎಂದು ಹೇಳುತ್ತಾರೆ. ಈ ಔದಾರ್ಯದ ಸಂಸ್ಕಾರವೇ ಮುಂದೆ ವರದಕ್ಷಿಣೆಯ ಬದಲಾಗಿ ವಧುದಕ್ಷಿಣೆಯ ಸಂಪ್ರದಾಯವಾಗಿದ್ದಿರಬಹುದೆಂದು ನನಗೆ ಅನ್ನಿಸುತ್ತದೆ.

ಅವರ ನೆರೆಹೊರೆಯಲ್ಲಿ ಮಗುವೊಂದು ಜನಿಸಿದಾಗ ಆಯಿಷಮ್ಮ ಹುಟ್ಟಿದ ಮಗುವು ಗಂಡೋ ಅಥವಾ ಹೆಣ್ಣೋ ಎಂದು ವಿಚಾರಿಸುತ್ತಿರಲಿಲ್ಲವಂತೆ. ಮಗುವು ಆರೋಗ್ಯವಂತವಾಗಿದೆಯೋ, ಸದೃಢವಾಗಿದೆಯೋ ಎಂದು ಕೇಳುತ್ತಿದ್ದರು. ಹೌದು ಎಂಬ ಉತ್ತರ ಬಂದ ಮೇಲೆ ಎಲ್ಲಾ ವಿಶ್ವಗಳ ಪ್ರಭುವಾದ ಅಲ್ಲಾನಿಗೆ ಕೃತಜ್ಞತಾ ಪೂರ್ವಕವಾಗಿ ಸ್ತುತಿಸುತ್ತಿದ್ದರು. ಅಂದರೆ ಗಂಡು ಹುಟ್ಟಿದರೆ ಊರಿಗೆಲ್ಲಾ ಹಾಲು ಖೀರು ಉಣಿಸಿ, ಹೆಣ್ಣು ಹುಟ್ಟಿದರೆ ಬೂಂದಿಯಲ್ಲೇ ಮನೆ ಮಂದಿ ನಾಮಕಾವಸ್ಥೆಯ ಆಚರಣೆಯನ್ನು ಮುಗಿಸುವ ಧೋರಣೆಯನ್ನು ಇದು ಖಂಡಿಸುತ್ತದೆ. ಯಾವ ಮಗುವಾದರೂ ಅಲ್ಲಾಹನಿಗೆ ಪ್ರಾರ್ಥನೆಯನ್ನು ಸಲ್ಲಿಸುವುದೇ, ತಹ್ನೀಕ್ ಮಾಡುವುದೇ. ತಹ್ನೀಕ್ ಎಂದರೆ ಹುಟ್ಟಿದ ಮಗುವಿನ ಬಾಯಲ್ಲಿ ಮೆದುವಾದ ಖರ್ಜೂರ ಅಥವಾ ಜೇನು ತುಪ್ಪದಂತಹ ಸಿಹಿಯನ್ನು ಇಟ್ಟು ಪ್ರಾರ್ಥನೆ ಸಲ್ಲಿಸುವುದು.

ಅನಾಥ ಮಕ್ಕಳ ಹಕ್ಕುಗಳು
ಪ್ರವಾದಿ ಮಹಮ್ಮದರು ಒಮ್ಮೆ ಹಬ್ಬದ ದಿನ ಪ್ರಾರ್ಥನೆಗೆಂದು ಸಮಯಕ್ಕೆ ಸರಿಯಾಗಿ ಈದ್‍ಗಾಗೆ ಹೋಗುತ್ತಿದ್ದರಂತೆ. ಮಾರ್ಗದಲ್ಲಿ ಒಬ್ಬ ಹುಡುಗ ಅಳುತ್ತಾ ನಿಂತಿದ್ದನ್ನು ಕಂಡು, ತಾವೇ ಅವನ ದುಃಖಕ್ಕೆ ಕಾರಣವನ್ನು ವಿಚಾರಿಸಿದರು. ಆಗ, ಆ ಹುಡುಗನು ತಂದೆ ತಾಯಿಗಳನ್ನು ಕಳೆದುಕೊಂಡ ಒಬ್ಬ ಅನಾಥನೆಂದು ತಿಳಿದು ಬಂದಿದ್ದಲ್ಲದೇ ಆತನಿಗೆ ಹಬ್ಬವನ್ನು ಆಚರಿಸಲು ಅನುಕೂಲವಿಲ್ಲದಿರುವುದನ್ನು ತಿಳಿದರು. ನಂತರ ನನ್ನನ್ನೇ ನಿನ್ನ ತಂದೆಯೆಂದು ತಿಳಿದು ಜೊತೆಗೆ ಬಾ ಎಂದು ಆತನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ತಮ್ಮ ಪತ್ನಿಗೆ ಆ ಮಗುವಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಯನ್ನು ತೊಡಿಸಲು ಹೇಳಿದರು. ಹಾಗೆ ತಯಾರಾದ ಮಗುವನ್ನು ತಮ್ಮ ಜೊತೆಗೆ ಈದ್ಗಾಗೆ ಕರೆದುಕೊಂಡು ಹೋಗಿ ಪ್ರಾರ್ಥನೆ ಸಲ್ಲಿಸಿದರು. ಒಬ್ಬ ಅನಾಥ ಮಗುವಿಗೆ ಹಬ್ಬದ ಸಂತಸವನ್ನು ನೀಡಲು ಮಹಮ್ಮದರು ಈದ್ಗಾ ಮಾರ್ಗವನ್ನು ಬಿಟ್ಟು ಮನೆಯ ಮಾರ್ಗ ತುಳಿಯಲು ಸಮಯ ನೀಡಿದ್ದೇ ಅಲ್ಲದೇ, ನಂತರ ತಮ್ಮ ಪ್ರಾರ್ಥನೆಯನ್ನು ಆ ಹುಡುಗನೊಂದಿಗೆ ನೆರವೇರಿಸಿದರು.

ಎಲ್ಲಾ ಮಕ್ಕಳನ್ನೂ ಪ್ರೇಮಭಾವದಿಂದ ನೋಡಲು ಪ್ರೇರೇಪಿಸುವ ಮಹಮ್ಮದರು, ಅನಾಥ ಮಕ್ಕಳ ಎದುರಿನಲ್ಲಿ ತಮ್ಮ ಮಕ್ಕಳನ್ನು ಮಾತ್ರ ಮುದ್ದಾಡುವುದು ಪಾಪ ಎಂದು ಹೇಳುತ್ತಾರೆ. ಅನಾಥ ಮಗುವಿನ ಮನಸ್ಸಿನಲ್ಲಿ ಕೊರತೆಯ ಮತ್ತು ನಿರಾಶೆಯ ನೋವು ಉಂಟಾಗಬಾರದೆಂಬ ಕಾಳಜಿ ಅಲ್ಲಿ. ಅನಾಥ ಮಕ್ಕಳಿಗೆ ಪ್ರೀತಿ, ಮಮತೆ ಮತ್ತು ಔದಾರ್ಯವನ್ನು ತೋರುವುದರಲ್ಲಿ ಕುರ್‌ಆನ್ ಬಹಳ ಕಾಳಜಿ ತೋರುತ್ತದೆ. ಅವರನ್ನು ಕಠೋರವಾಗಿ ನಡೆಸಿಕೊಳ್ಳುವುದಾಗಲಿ, ಕಟು ಮಾತುಗಳನ್ನಾಗಲಿ ಆಡುವುದನ್ನು ಅದು ನಿಷೇಧಿಸುತ್ತದೆ. ಅನಾಥ ಮಕ್ಕಳ ಹಕ್ಕುಗಳನ್ನು ಕಾಪಾಡುವ ರಚನಾತ್ಮಕ ಧೋರಣೆಗಳನ್ನು ಹೊಂದಿರುವುದಲ್ಲದೇ, ಅಂತಹ ಮಕ್ಕಳಿಗೆ ಮಾಡುವಂತಹ ಸೇವೆಗಳನ್ನು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಪ್ರೋತ್ಸಾಹಿಸುತ್ತದೆ. ಅಷ್ಟೇಕೆ, ಕ್ರಿಸ್ತಶಕ 577ರಲ್ಲಿ ಮಹಮ್ಮದರ ತಾಯಿ ಮರಣಿಸಿದರು. ಆಗ ಆರು ವರ್ಷದ ಮಹಮ್ಮದ್ ಓರ್ವ ಅನಾಥ.

ಮಕ್ಕಳ ಗೆಳೆಯ ಮಹಮ್ಮದ್
ಪ್ರವಾದಿ ಮಹಮ್ಮದರ ತೊಡೆಯ ಮೇಲೆ, ಮೈ ಮೇಲೆ, ಗಡ್ಡದ ಜೊತೆ ಮಕ್ಕಳು ತಮಗಿಷ್ಟ ಬಂದಂತೆ ಆಡಬಿಡುತ್ತಿದ್ದರು. ಅವರ ಆಟಕ್ಕೆ ಭಂಗವಾಗುವ ರೀತಿಯಲ್ಲಿ ಎಂದೂ ತಡೆಯೊಡ್ಡುತ್ತಿರಲಿಲ್ಲ. ಅವರ ಮಗಳ ಪುಟ್ಟ ಮಕ್ಕಳಾದ ಹಸನ್ ಮತ್ತು ಹುಸೇನರು ನಮಾಝ್ ಗೆ ಬಾಗಿದಾಗ ಬೆನ್ನನ್ನು ಏರಿ, ಅವರು ಮತ್ತೆ ತಾವಾಗೇ ಇಳಿಯುವವರೆಗೂ ತಾವು ಮುಂದಿನ ಭಂಗಿಗೆ ಹೋಗದೇ ಹಾಗೇ ಇದ್ದದ್ದನ್ನು ಇಲ್ಲಿ ಸ್ಮರಿಸಬಹುದು.

ಮಕ್ಕಳ ವಿಷಯದಲ್ಲಿ ನೋವು ಮತ್ತು ನಲಿವು; ಈ ಎರಡನ್ನೂ ಅನುಭವಿಸಿದ್ದರು ಪ್ರವಾದಿ ಮಹಮ್ಮದರು. ಅವರಿಗೆ ಏಳು ಮಕ್ಕಳು. ಮೂರು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು. ಅವರ ಎಲ್ಲಾ ಗಂಡು ಮಕ್ಕಳು ತಮ್ಮ ಎಳೆತನದಲ್ಲಿಯೇ ಮರಣಿಸಿ, ಬರಿಯ ಹೆಣ್ಣು ಮಕ್ಕಳಷ್ಟೇ ಉಳಿದಿದ್ದರು. ಕಣ್ಣ ಮುಂದೆ ಸತ್ತ ಮಕ್ಕಳ ಶೋಕಿತ ತಂದೆಯಾಗಿಯೂ ಮಹಮ್ಮದರಿಗೆ ಅನುಭವವಿರುವುದರಿಂದ ಮಕ್ಕಳ ಕುರಿತಾದ ಅವರ ನಿಲುವುಗಳಲ್ಲಿ ಗಾಢತೆ ಇತ್ತು. ಹಾಗೆ ಅವರಿಗೆ ಮಕ್ಕಳೊಂದಿಗೆ ನಲಿವು ಪಡೆವಲ್ಲಿ ನಾಲ್ಕು ಹೆಣ್ಣು ಮಕ್ಕಳು ಮಾತ್ರವಲ್ಲದೇ, ಓರ್ವ ದತ್ತು ಪುತ್ರನೂ, ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮೊಮ್ಮಕ್ಕಳು ಇದ್ದು ಮಕ್ಕಳೊಡನೆಯ ಅವರ ಸಾಂಗತ್ಯಕ್ಕೆ ಅನುಭವದ ಕಣಜ ಕಟ್ಟಿದ್ದರು.

ಮಹಮ್ಮದರು ಹುಸೇನನ ಬೆನ್ನಟ್ಟಿ ಅವನ ಹಿಡಿಯುವಂತಹ ಜೂಟಾಟ ಆಡುತ್ತಿದ್ದರು. ಅದರಂತೆಯೇ ಮೊಮ್ಮಗಳನ್ನು ಹೆಗಲ ಮೇಲೇರಿಸಿಕೊಂಡೇ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು. ಇತರ ಮಕ್ಕಳೊಂದಿಗೂ ಮನಸೋಯಿಚ್ಛೆ ಆಡುತ್ತಾ ಸ್ನೇಹದಿಂದ ವರ್ತಿಸುತ್ತಿದ್ದರು. ಯಾವುದೇ ಧರ್ಮದ ಮಕ್ಕಳಾದರೂ ಅವರನ್ನು ಆದರಿಸುತ್ತಿದ್ದ, ಜ್ವರ ಅಥವಾ ತೊಂದರೆಗೆ ಒಳಗಾದಾಗ ಹೋಗಿ ನೋಡುವ ಮೂಲಕ ಕಾಳಜಿ ತೋರುತ್ತಿದ್ದ ಉಲ್ಲೇಖಗಳಿವೆ. ಒಮ್ಮೆ ಅವರದೇ ಮೊಮ್ಮಗುವಿಗೆ ಮುತ್ತು ಕೊಡಲು ಹೋದಾಗ ಮಗುವು ಅದಕ್ಕೆ ಒಪ್ಪದೇ ತನ್ನ ತಾತನನ್ನೇ ಗದರಿಕೊಂಡಿತಂತೆ. ಆಗ ಮಹಮ್ಮದರು, “ನಾನು ಏನು ಮಾಡಲಿ, ದೇವರು ನಿನ್ನ ಮಾನವ ಭಾವನೆಗಳ ಹೃದಯವನ್ನು ಕಸಿದಿಟ್ಟುಕೊಂಡಿರಲು” ಎಂದು ಪ್ರತಿಕ್ರಿಯಿಸುವ ಮೂಲಕ ದೇವರಿಗೆ ಮಕ್ಕಳು ಬಲು ಪ್ರಿಯರಾದವರೆಂಬ ಯೇಸುವಿನ ಮಾತನ್ನು ನೆನಪಿಸುತ್ತಾರೆ. ಯಾವುದೋ ಮಗುವಿನ ಪ್ರೀತಿಯ ಬುಲ್ ಬುಲ್ ಹಕ್ಕಿಯು ಸತ್ತು ಹೋದಾಗ, ತಾವೂ ಅದನ್ನು ಗಂಭೀರವಾಗಿ ಪರಿಗಣಿಸಿ ಮಗುವನ್ನು ಸಂತೈಸುತ್ತಾರೆ.

ಎಲ್ಲಾ ಮಕ್ಕಳಿಗೂ ಸಮಾನತೆ
ಎಲ್ಲಾ ಮಕ್ಕಳನ್ನೂ ಸಮವಾಗಿ ನೋಡಬೇಕು ಎನ್ನುವಾಗ ಕುರುಡು, ಅಂಗವೈಕಲ್ಯದಂತಹ ಯಾವುದಾದರೂ ದೈಹಿಕ ನ್ಯೂನ್ಯತೆಗೆ ಒಳಗಾಗಿರುವ ಮಗುವನ್ನು ವಿಶೇಷ ಕಾಳಜಿಯನ್ನು ತೋರಬೇಕಾದ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಸಮಾನ ದೃಷ್ಟಿಯೆಂಬುದು ಚೌಕಟ್ಟಿಗೆ ಸಿಕ್ಕಿ ಪೆಡಸಾಗುವುದಕ್ಕೆ ಬಿಡದೇ, ಅಗತ್ಯ ಮತ್ತು ಅನಿವಾರ್ಯತೆಗಳನ್ನು ಗಮನಿಸುವಂತಹ ಪ್ರಜ್ಞಾವಂತಿಕೆಯ ಬಗ್ಗೆಯೂ ಕೂಡ ವಿವೇಚಿಸುತ್ತದೆ. ಯಾವ ಮಗುವಿಗೆ ಹೆಚ್ಚಿನ ಕಾಳಜಿ ಮತ್ತು ಗಮನ ನೀಡಬೇಕಾಗುತ್ತದೆಯೋ ಅದನ್ನೂ ಸಲಿಲತೆಯಿಂದ ಗಮನಿಸಲು ತಿಳಿಸುತ್ತದೆ. ಒಂದು ವೇಳೆ ಮಲ ಮಕ್ಕಳಾದರೂ ಕೂಡ ಅವರು ತನ್ನ ಮಲ ತಂದೆ ಅಥವಾ ತಾಯಿಯಿಂದ ಶೋಷಿತರಾಗದಿರುವಂತೆ ಅವರ ಹಕ್ಕನ್ನೂ ಕೂಡಾ ರಕ್ಷಿಸುತ್ತದೆ. ಆರ್ಥಿಕವಾಗಿ ಸ್ವತ್ತುಗಳನ್ನು ವಿಭಜಿಸುವಾಗಲೂ ಕೂಡ ಸಮಪಾಲನ್ನು ಅದು ಸೂಚಿಸುತ್ತದೆ. ಇಸ್ಲಾಂನಲ್ಲಿ ಮಕ್ಕಳ ಮೇಲೆ ಹಿರಿಯರ ಅಥವಾ ಪೋಷಕರ ಹಕ್ಕಿದೆ, ಅಂದರೆ ಅದು ಅವರನ್ನು ಎಂದಿಗೂ ಅಪಮಾನಗೊಳಿಸುವ ರೀತಿಯಲ್ಲಾಗಲಿ, ಕೆಟ್ಟದಾಗಿ ನಡೆಸಿಕೊಳ್ಳುವ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಖಂಡಿತ ನೀಡಿಲ್ಲ. ಹೀಗೆ ಧಾರ್ಮಿಕವಾಗಿಯೇ ಮಕ್ಕಳ ಹಕ್ಕನ್ನು ರಕ್ಷಣೆ ಮಾಡುವ ಹೊಣೆಯನ್ನು ಇಸ್ಲಾಂ ಸಂಸ್ಕೃತಿ ಹೊತ್ತುಕೊಂಡಿದೆ.

“ಒಬ್ಬ ತಂದೆಯು ಉತ್ತಮ ಶಿಕ್ಷಣಕ್ಕಿಂತ ಇನ್ನೇನು ತನ್ನ ಮಗುವಿಗೆ ನೀಡಬೇಕು?” ಎಂದು ಕೇಳುವ ಮಹಮದರು “ಯಾರು ತಮ್ಮ ನಡವಳಿಕೆಯಿಂದ ಮಗುವು ತಮಗೇ ಅವಿಧೇಯವಾಗಿ ನಡೆದುಕೊಳ್ಳುವಂತೆ ಮಾಡುತ್ತಾರೋ ಆ ತಂದೆ ತಾಯಿಗಳು ಅಲ್ಲಾಹ್‍ನಿಂದಲೇ ಶಾಪಗ್ರಸ್ತರು” ಎಂದು ಉದ್ಗರಿಸುವುದರ ಮೂಲಕ, ಮಕ್ಕಳು ಕೆಟ್ಟದಾಗಿ ನಡೆದುಕೊಳ್ಳಲು ಕಾರಣರು ಪೋಷಕರಾಗಿರುತ್ತಾರೆ ಎಂದು ಸೂಚ್ಯವಾಗಿ ತಿಳಿಸುತ್ತಾ, ಅವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಪ್ರೇರೇಪಿಸುತ್ತಾರೆ.

ಯಾವ ಪೋಷಕರು ಮಕ್ಕಳ ಹಕ್ಕನ್ನು ಕಸಿದುಕೊಳ್ಳುತ್ತಾರೋ, ಸರಿಯಾದ ಶಿಕ್ಷಣ, ಪೋಷಣೆ ಇತ್ಯಾದಿಗಳನ್ನು ಕೊಡುವುದಿಲ್ಲವೋ, ಮಕ್ಕಳ ನೈತಿಕ ಸ್ವಭಾವವನ್ನು ರೂಪಿಸಲು ಅವಗಣಿಸುತ್ತಾರೋ, ಮಕ್ಕಳ ಸಾಮರ್ಥ್ಯಕ್ಕೆ ಮೀರಿ ಅವರ ಮೇಲೆ ಒತ್ತಡಗಳನ್ನು ಹೇರುತ್ತಾರೋ, ಮಕ್ಕಳ ಮೇಲೆ ಸರ್ವಾಧಿಕಾರವನ್ನು ಸ್ಥಾಪಿಸುತ್ತಾರೋ; ಅವರು ಮಕ್ಕಳು ತಮ್ಮ ವಿರುದ್ಧವೇ ಬಂಡಾಯವೇಳುವಂತೆ ಮಾಡುವ ಪೋಷಕರು. ಅವರು ದೇವರಿಂದಲೂ ಶಾಪಗ್ರಸ್ತರು!! ಮಕ್ಕಳ ಅನಪೇಕ್ಷಿತ ವರ್ತನೆಗೆ ಪೋಷಕರೇ ಕಾರಣ ಎಂಬುದನ್ನು ಇಸ್ಲಾಂ ಧಾರ್ಮಿಕತೆ ನೇರವಾಗಿಯೇ ಹೇಳುತ್ತದೆ. ಅದೇ ಮಕ್ಕಳ ಮನೋವಿಜ್ಞಾನವೂ ಇಂದು ಹೇಳುತ್ತಿರುವುದು.
ಒಟ್ಟಾರೆ ಇಸ್ಲಾಂ ಧಾರ್ಮಿಕ ದೃಷ್ಟಿಕೋನದ ಪ್ರಕಾರವೇ ಪ್ರತಿಯೊಂದು ಮಗುವೂ ಕೂಡ ಗೌರವ, ಪ್ರೇಮ ಮತ್ತು ಔದಾರ್ಯಕ್ಕೆ ಅರ್ಹವಾದುದು.

ಸ್ವರ್ಗದ ಮಕ್ಕಳು
ಕಲರ್ ಆಫ್ ಪ್ಯಾರಡೈಸ್, ಓರ್ವ ಕುರುಡ ಹುಡುಗ ಮತ್ತು ಅವನ ವಿದುರ ತಂದೆಯ ಕಥೆ. ಇದರಲ್ಲಿ ತಾಯಿಯಿಲ್ಲದ ಆ ಅಂಧ ಹುಡುಗನನ್ನು ಪ್ರೀತಿಸುವ ತಂದೆ ತನ್ನ ವೈಯಕ್ತಿಕ ಸುಖಕ್ಕಾಗಿ ಮಗನನ್ನು ನಿವಾರಿಸಿಕೊಳ್ಳುವ ಮನಸ್ಸು ಮಾಡಿದರೂ, ನೈತಿಕತೆಯು ಕುಟುಕುವ ಅತ್ಯಂತ ಸೂಕ್ಷ್ಮ ಸಂವೇದನೆಯ ಚಿತ್ರ. ಹಾಗೆಯೇ ಬಡ ಮುಸಲ್ಮಾನ ಕುಟುಂಬದ ಪುಟ್ಟ ಅಣ್ಣ ಮತ್ತು ತಂಗಿಯರಿಬ್ಬರ ಬಾಲ್ಯದ ಆಸೆ, ಆಶಯ, ಕೌಟುಂಬಿಕ ಪರಿಸ್ಥಿತಿಯ ಒತ್ತಡಗಳು ಇತ್ಯಾದಿಗಳನ್ನು ಎದುರಿಸುವ ಮನಮುಟ್ಟುವ ಕಥಾನಕದ ಸಿನಿಮಾ ಚಿಲ್ಡ್ರನ್ ಆಫ್ ಹೆವೆನ್. ಮತ್ತೊಂದು ‘ದ ಸಾಂಗ್ ಆಫ್ ಸ್ಪ್ಯಾರೋಸ್’ ಚಿತ್ರದಲ್ಲಿ ಚಿನ್ನದ ಓಲೆಯನ್ನು ಕೆಸರು ಬಗ್ಗಡವಿರುವ ನೀರಲ್ಲಿ ಕಳೆದಿದೆಯೆಂದು ಹುಡುಕಿಸಿ, ನಂತರ ಅದು ತಾವು ಮೀನುಗಳನ್ನು ಸಾಕಲು ಮಾಡುವ ಮಕ್ಕಳ ಆಶಯ. ಇಂತಹ ಮಕ್ಕಳ ಸೂಕ್ಷ್ಮತೆಗಳನ್ನು ಮತ್ತು ಅವರ ಬಗ್ಗೆ ಇರುವ ಆದರ ಮತ್ತು ಅವರಿಗಿರುವ ಘನತೆಯನ್ನು ತಮ್ಮ ಚಿತ್ರಗಳಲ್ಲಿ ತೋರಿಸುವುದು ಮಜೀದ್ ಮಜೀದಿ ಓರ್ವ ಇರಾನ್ ಸಿನಿಮಾ ನಿರ್ದೇಶಕ. ಸೃಜನಶೀಲನೂ, ಸೂಕ್ಷ್ಮಸಂವಾದಿಯೂ ಆಗಿರುವಂತಹ ನಮ್ಮ ಸಮಕಾಲೀನ ಇರಾನೀ ನಿರ್ದೇಶಕ ಮಜೀದ್ ಮಜೀದಿಯ ಚಿತ್ರಗಳನ್ನು ನೋಡಿದ ಮೇಲೆ ಹಲವಾರು ದಿನಗಳು ಒಂಟಿಯಾಗಿ ಚಿತ್ರಗಳನ್ನು ನೆನೆದು ಕಣ್ಣೀರಿಡುವಂತಹ ಭಾವ ಸಂವೇದನೆಗಳಿವೆ.

ಕುಟುಂಬ, ಕುಟುಂಬದ ಯಜಮಾನ, ಆ ಕುಟುಂಬವಿರುವ ಪರಿಸರ, ಸಂಸ್ಕೃತಿ, ಅವರ ಗೋಜಲು, ಗೊಂದಲ, ಸಮಸ್ಯೆ, ವ್ಯವಹಾರ ಇತ್ಯಾದಿಗಳೆಲ್ಲದರ ನಡುವೆ, ಸಮಾಜಕ್ಕೆ ಕಾಣಿಸುವಂತೆ ದೊಡ್ಡದಾಗಿ ಪ್ರದರ್ಶಿತವಾಗದ ಮಕ್ಕಳು ಮತ್ತು ಅವರ ಸಮಸ್ಯೆಗಳು ಲೆಕ್ಕಕ್ಕೆ ಬರದೇ ಹೊರಟು ಹೋಗುತ್ತದೆ. ದೊಡ್ಡವರದೇ ಸಮಸ್ಯೆಗಳು ದೊಡ್ಡದಾಗಿರುವಾಗ ಇನ್ನು ಮಕ್ಕಳದ್ದೇನು ಎನ್ನುವ ಉಡಾಫೆಯ ಮನೋಭಾವ ಒಂದು ಕಡೆಯಾದರೆ, ದೊಡ್ಡವರು ನೆಮ್ಮದಿಯಾಗಿ, ಸುಖವಾಗಿದ್ದರೆ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಮಕ್ಕಳೂ ಚೆನ್ನಾಗಿರುತ್ತಾರೆ ಎಂಬ ಧೋರಣೆಯೂ ಮತ್ತೊಂದು. ಆದರೆ ಅವರಿಗೆ ಅವರದೇ ಆದಂತಹ, ದೊಡ್ಡವರೆಂದಿಗೂ ಇಣುಕಿ ನೋಡಲಾಗದಂತಹ ಅನೇಕ ಸಮಸ್ಯೆಗಳಿರುತ್ತವೆ ಎಂದು ತಿಳಿಯುವುದೇ ಇಲ್ಲ. ಅಂತಹವನ್ನೂ ಬೆಳಕಿಗೆ ತಂದ ಕೀರ್ತಿ ಮಜೀದ್ ಮಜೀದಿಯದು.

ಮುಸ್ಲಿಂ ಕುಟುಂಬಗಳಲ್ಲಿ ಮಕ್ಕಳು
ಮುಸಲ್ಮಾನ ಕುಟುಂಬಗಳಲ್ಲಿ, ಮಕ್ಕಳೆಂದರೆ ಸಂತಾನ ಹರಣದ ಕ್ರಮಗಳಿಗೆ ಒಳಗಾಗದೇ ಬೇಕಾಬಿಟ್ಟಿಯಾಗಿ ಮಕ್ಕಳನ್ನು ಹೆತ್ತು, ಅವರುಗಳನ್ನು ಗ್ಯಾರೆಜ್‍ನಲ್ಲಿ ನಟ್ಟು ಬೋಲ್ಟು ಫಿಟ್ಟು ಮಾಡಲು, ಮಟನ್ ಸ್ಟಾಲ್ ಇತ್ಯಾದಿಗಳಿಗೆ ಸಣ್ಣ ವಯಸ್ಸಿನಲ್ಲಿಯೇ ದುಡಿಯಲು ಎಸೆದು ಬಿಡುವವರು ಎಂಬ ಧೋರಣೆ ಇದ್ದಂತಹ ಹಲವಾರು ನನ್ನ ಸ್ನೇಹಿತರಿಗೆ ಮಕ್ಕಳ ಬಗ್ಗೆ ಮಜೀದ್ ಮಜೀದಿಯಂತಹ ಒಬ್ಬ ಮುಸಲ್ಮಾನ ನಿರ್ದೇಶಕ ಇಷ್ಟೊಂದು ಸೂಕ್ಷ್ಮತೆಗಳನ್ನು ಹೊಂದಿದ್ದಾನೆಂದರೆ, ಅದು ಆಶ್ಚರ್ಯ! ತಮ್ಮ ಧರ್ಮವನ್ನು ಪ್ರಪಂಚದ ಪೂರ್ತಿ ಬೆಳೆಸಲು ಕುಟುಂಬ ಯೋಜನೆಯೇ ಬೇಡದ ಅಥವಾ ತಿಳಿಯದ ಮುಸಲ್ಮಾನರಿಗೆ ಮಕ್ಕಳ ಬಗ್ಗೆ ಏನೂ ತಿಳುವಳಿಕೆಯಿಲ್ಲ ಅಥವಾ ಮಾಹಿತಿಯಿಲ್ಲ ಎಂಬ ಒಂದು ಅಭಿಪ್ರಾಯ ನಮ್ಮ ನಡುವೆ ಬಹಳಷ್ಟು ಮಂದಿಗೆ ಇದೆ. ಇಸ್ಲಾಂ ಮಕ್ಕಳ ಬಗ್ಗೆ ಎಂತಹ ಮೌಲ್ಯಗಳನ್ನು ಹೊಂದಿದೆ ಎಂದು ಅವರಿಗೆ ತಿಳಿಯುವ ಸಾಧ್ಯತೆಗಳನ್ನಾದರೂ ಕಂಡುಕೊಳ್ಳಬೇಕಿದೆ.

ಕುರ್‍ಆನ್‍ನಲ್ಲಿ ತಾಯಿ ಮಗುವಿಗೆ ಮೊಲೆಯೂಡಿಸುವ ಬಗ್ಗೆಯೂ ಸ್ಪಷ್ಟ ಉಲ್ಲೇಖವಿದೆ, (2:233) ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷ ಪೂರ್ಣವಾಗಿ ಹಾಲು ಕುಡಿಸಬೇಕು ಎಂದು. ಇದು ಇಂದಿನ ಮುಂದುವರಿದ ವೈದ್ಯಕೀಯ ಸಂಶೋಧನೆಗಳೂ ಕೂಡ ಇದನ್ನು ಎತ್ತಿ ಹಿಡಿಯುತ್ತವೆ. ಮಗುವಿನ ಸಮಗ್ರ ಆರೋಗ್ಯಕ್ಕೆ ಇದು ಅಗತ್ಯ ಎಂದು ದೃಢಪಡಿಸುತ್ತಾರೆ.

ಅಷ್ಟೇಕೆ, ಒಂದು ಮುಸಲ್ಮಾನ ಕುಟುಂಬಕ್ಕೆ ಯಾವುದೇ ಮಗುವು ಸದಸ್ಯನಾಗಿ ಬರಲಿ, ಅದೊಂದು ಭಾವನಾತ್ಮಕ ಸಂಭ್ರಮಕ್ಕಿಂದ ಮಿಗಿಲಾಗಿ ಧಾರ್ಮಿಕವಾಗಿಯೇ ಮಾನ್ಯವಾಗಿರುವಂತಹ ಬರಮಾಡಿಕೊಳ್ಳುವಿಕೆಯಿರುತ್ತದೆ. ಆ ಮಗುವಿಗೆ ಅದರ ಹೆತ್ತವರು ಜೊತೆಗೆ ಇರಲಿ, ಇಲ್ಲದಿರಲಿ, ಸತ್ತಿರಲಿ, ಬದುಕಿರಲಿ, ಆ ಮಗುವಿನ ಪರಿಚಯ ತಿಳಿದಿರಲಿ ಅಥವಾ ತಿಳಿಯದೇ ಇರಲಿ; ಮಗುವು ಪ್ರವೇಶಿಸಿದ ಮುಸ್ಲೀಂ ಕುಟುಂಬದ ಎಲ್ಲರಿಗೂ ಅದನ್ನು ನೋಡಿಕೊಳ್ಳುವ ಬಾಧ್ಯತೆ ಧಾರ್ಮಿಕ ನೈತಿಕತೆಯಲ್ಲೇ ವಿಧಿಸಲಾಗಿದೆ. ಮಗುವಿಗೆ ಒದಗುವ ಅಲ್ಲಾಹ್‍ನ ಪ್ರೇಮ ಮತ್ತು ಕ್ರಮಕ್ಕೆ ಮಾನ್ಯತೆ ಕೊಡಬೇಕಾಗಿರುವ ಕರ್ತವ್ಯ ಅವರಿಗಿದೆ. ಅಷ್ಟರಮಟ್ಟಿಗೆ ಮಗುವಿಗೆ ಅಲ್ಲಿ ಹಕ್ಕಿನ ರಕ್ಷಣೆಯಿರುತ್ತದೆ.

ಇಸ್ಲಾಂ ಧರ್ಮದಲ್ಲಿ ವಿಧಿಸಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಗಂಭೀರವಾದಂತಹ ಮಾನ್ಯತೆ ಮುಸಲ್ಮಾನರಲ್ಲಿ ಇದೆ. ಪ್ರತಿಯೊಬ್ಬರೂ ಸೃಷ್ಟಿಯ ಎಲ್ಲಾ ಜೀವಿಗಳನ್ನು ಗೌರವ ಮತ್ತು ಘನತೆಯಿಂದ ಪರಿಗಣಿಸಬೇಕೆಂಬ ಆಶಯವನ್ನು ಅದು ಹೊಂದಿದೆ. ಇಸ್ಲಾಂ ಪ್ರಕಾರ (ಹಿರಿಯ ಅಥವಾ ಬೆಳೆದ ಶ್ರದ್ಧಾವಂತರ ಕುರಿತಾಗಿ) ಮಕ್ಕಳಿಗೆ ಪೋಷಣೆ, ಪ್ರೇಮ ಮತ್ತು ಶಿಕ್ಷಣವನ್ನು ನೀಡಲೇಬೇಕೆಂಬ ನಿರೀಕ್ಷೆ ಅಲ್ಲಾಹನದಾಗಿರುತ್ತದೆ. ಹಾಗಾಗಿಯೇ ಹಕ್ಕು ಮತ್ತು ಕರ್ತವ್ಯಗಳನ್ನು ಗಂಭೀರವಾಗಿ ಪರಿಗಣಿಸಿದಾಗ, ವ್ಯಕ್ತಿಗೂ ಅಲ್ಲಾಹನನ್ನು ಗೌರವಿಸಲೂ ಮತ್ತು ಪ್ರೀತಿಸಲೂ ಸಾಧ್ಯವಾಗುತ್ತದೆ ಎಂದು ಭಾವಿಸುತ್ತಾರೆ.

ಮಗುವಿಗೆ ಹೆಸರು
ಪ್ರಾರ್ಥನೆಯ ಕರೆಯನ್ನು ಹೊಸದಾಗಿ ಹುಟ್ಟಿದ ಮಗುವಿನ ಬಲಗಿವಿಯಲ್ಲಿ ಹೇಳುವ ಸಂಪ್ರದಾಯ ಮುಸಲ್ಮಾನರಲ್ಲಿದೆ. ಪ್ರಪಂಚಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿದ ಮಗುವು ಶುಭವಾದುದನ್ನು ಕೇಳಲಿ, ದೈವಿಕವಾಗಿರುವುದಕ್ಕೆ ಸಮರ್ಪಿತವಾಗಲೆಂದು ಹಾಗೆ ಮಾಡುವುದು.

ಮಗುವಿಗೆ ಹುಟ್ಟಿದ ಕೂಡಲೇ ಹೆಸರಿಡುವ ವಾಡಿಕೆಯು ಇರುವುದಾದರೂ, ಹುಟ್ಟಿದ ಏಳು ದಿನಗಳಿಗೆ ಹೆಸರು ಇಡುವ ಪದ್ಧತಿಯೂ ಅವರಲ್ಲಿ ಉಂಟು. ಹೆಸರನ್ನು ಬರಿದೆ ಚೆಂದಕ್ಕೆ ಮಾತ್ರ ಇಡುವುದನ್ನು ಒಪ್ಪದ ಮುಸಲ್ಮಾನರಲ್ಲಿ ಹೆಸರಿನ ಅರ್ಥವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಹೆಸರು ಸಾಂಕೇತಿಕವಾಗಿದ್ದು, ಅದು ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿನಿಧಿಸಲೆಂಬ ಆಶಯವೂ ಅದಾಗಿರುತ್ತದೆ. ಮಗುವಿಗೆ ತಂದೆಯೇ ಹೆಸರಿಡುವುದಾದರೂ, ಇಸ್ಲಾಂ ಪಂಡಿತರು ತಂದೆ ತಾಯಿಗಳಿಬ್ಬರೂ ಒಟ್ಟಿಗೆ ಮಗುವಿಗೆ ಹೆಸರನ್ನು ಆಯ್ಕೆ ಮಾಡುವುದನ್ನು ಅನುಮೋದಿಸುತ್ತಾರೆ. ದೇವರನ್ನು ಮಾತ್ರವೇ ಸಂಕೇತಿಸುವ ಹೆಸರುಗಳನ್ನು ಅವರು ಇಡುವುದಿಲ್ಲ. ಉದಾಹರಣೆಗೆ ಅಲ್ ಖಾಲಿಖ್ಹ್ (ಸೃಷ್ಟಿಕರ್ತ), ಅಲ್ ಖ್ಹುದ್ದೂಸ್ (ಪರಮ ಪವಿತ್ರ) ಎನ್ನುವಂತಹದ್ದೋ, ಅಥವಾ ದೇವರಲ್ಲದೇ ಇನ್ನಾವುದಕ್ಕೂ ಸೂಕ್ತವಲ್ಲದ ಹೆಸರುಗಳಾದ ಮಾಲಿಕ್ ಅಲ್-ಮುಲೂಕ್ (ಅರಸರ ಅರಸ) ಎಂಬಂತಹ ಹೆಸರನ್ನೂ ಇಡುವುದಿಲ್ಲ. ದೇವರನ್ನಷ್ಟೇ ದೇವರೆನ್ನಬೇಕೇ ಹೊರತು ಇತರರನ್ನು, ವಸ್ತುಗಳನ್ನೆಲ್ಲಾ ದೇವರೆಂದು ಅಲ್ಲಾಹನ ನಾಮದ ಪಾವಿತ್ರ್ಯತೆಯನ್ನು ಸಡಿಸಗೊಳಿಸಲು ಅಲ್ಲಿ ಅವಕಾಶವಿಲ್ಲ.

ಈ ಸಂದರ್ಭದಲ್ಲಿ ನನಗೆ ಹಿಂದೂಗಳಲ್ಲಿ ತಾವು ದೇವರೆಂದು ನಂಬುವ ಶಕ್ತಿಗಳನ್ನು ಸರ್ವೇ ಸಾಧಾರಣವಾಗಿ ಮಕ್ಕಳಿಗೆ ಇಡುವ ಪದ್ಧತಿಯ ಬಗ್ಗೆ ಅವಲೋಕನ ಮಾಡುವಂತಾಗುತ್ತದೆ. ನಾನು ಸಣ್ಣವನಿದ್ದಾಗ ರಾಮ, ಕೃಷ್ಣ, ಶಿವ, ವಿಷ್ಣು, ದುರ್ಗಾ, ಸರಸ್ವತಿ ಇತ್ಯಾದಿ ಹೆಸರುಗಳನ್ನು ಏಕೆ ಇಡುತ್ತಾರೆಂದು ನಾನು ನನ್ನ ಅಜ್ಜಿಯನ್ನು ಕೇಳಿದ್ದೆ. ಆಗ ಅವರು, ದೇವರ ಹೆಸರುಗಳನ್ನು ಮಕ್ಕಳಿಗೆ ಇಡುವುದರಿಂದ ದೇವರ ನಾಮಸ್ಮರಣೆ ಸದಾ ಆಗುತ್ತಿರುತ್ತದೆ. ದೇವರಿಗೆ ಪ್ರೀತ್ಯವಾಗುತ್ತದೆ. ಹೀಗೆ ಮಕ್ಕಳ ಮೇಲಿನ ಪ್ರೀತಿ ಮತ್ತು ದೇವರ ಮೇಲಿನ ಭಕ್ತಿ ಎರಡೂ ಒಟ್ಟಿಗೆ ಅಲ್ಲಿ ವ್ಯಕ್ತವಾಗುತ್ತದೆ ಎಂಬಂತಹ ಅರ್ಥದ ಮಾತನ್ನಾಡಿದ್ದರು. ಆದರೆ, ಮಕ್ಕಳಿಗೆ ಬಾಯಿಗೆ ಬಂದಂತೆ ಬೈಯುವಾಗ, ಹೊಡೆಯುವಾಗ, ದೊಡ್ಡವರಾದರೂ ಕೆಟ್ಟಾ ಕೊಳಕು ಮಾತುಗಳಲ್ಲಿ ಅವರನ್ನು ನಿಂದಿಸುವಾಗ ಆ ದೇವರ ಹೆಸರನ್ನು ಉಪಯೋಗಿಸುವುದಿಲ್ಲವೇ? ಆಗ ಆ ಹೆಸರಿನ ದೇವರನ್ನು ನಿಂದಿಸಿದ ಹಾಗೆ ಆಗುವುದಿಲ್ಲವೇ? ಎಂದು ಕೇಳಿದಾಗ ಮಾರುತ್ತರ ಬರಲಿಲ್ಲ. ಬದಲಿಗೆ, ಸಣ್ಣವನ ಪ್ರಶ್ನೆ ಎಂದು ನಕ್ಕು ಸುಮ್ಮನಾಗಿದ್ದರು.

ಶ್ರದ್ಧೆಯ ವಯಸ್ಸು ಮತ್ತು ಮಗುವಿನ ಮನಸ್ಸು
ಮಗುವು ವಿಷಯಗಳನ್ನು ತಿಳಿದುಕೊಳ್ಳುವಷ್ಟು ಬುದ್ಧಿ ಬೆಳೆದಾಗ (ಸುಮಾರು ಏಳು ವರ್ಷದ ಹೊತ್ತಿಗೆ) ಪ್ರಾರ್ಥನೆ ಮಾಡಲು ಕಲಿಸಿರಿ ಎಂದು ಹೇಳುತ್ತಾರೆ. ಎಳೆಯ ಮಗುವು ಅದಕ್ಕೆ ತಿಳಿಯಲಿ ಬಿಡಲಿ, ಅದನ್ನು ತೆಗೆದುಕೊಂಡು ಹೋಗಿ ದೇವರ ಪಾದಗಳ ಮೇಲೆ ಹಾಕುವ, ಯಾಂತ್ರಿಕವಾಗಿ ಹೇಳಿದಷ್ಟು ಮಾಡು ಎನ್ನುತ್ತಾ ಮಾಡಿಸುವ ಅಗತ್ಯವಿಲ್ಲ. ಮಗುವಿಗೂ ತಿಳುವಳಿಕೆ ಬಂದಿರಬೇಕು, ಜೊತೆಗೆ ಏಳು ಹತ್ತು ವರ್ಷದ ನಂತರ ಹೊರಗಿನ ಪ್ರಭಾವಗಳಿಗೆ ಸೆಳೆದು ಹೋಗುವ ಸಾಧ್ಯತೆಗಳಿರುವುದರಿಂದ, ಆಗ ಪ್ರಾರ್ಥನೆ, ಶ್ರದ್ಧೆ ಇತ್ಯಾದಿಗಳ ಅರಿವು ಮೂಡಿಸಬೇಕು ಎಂಬ ಧೋರಣೆ ಇದು. ಇಲ್ಲವಾದರೆ ದೇವರ ಏಕತ್ವವನ್ನು ತಿಳಿಯದೇ, ಅದು ದೇವರು, ಇದು ದೇವರು ಎಂದು ಗೊಂದಲಗಳಿಗೆ ಒಳಗಾಗಿ ದಾರಿ ತಪ್ಪದೇ ಇರಲಿ ಎಂದು. ಇನ್ನೂ ಮುಖ್ಯವಾಗಿ ವಿಗ್ರಹಾರಾಧನೆ, ಮಾಟ ಮಂತ್ರ, ದೆವ್ವ ಭೂತ ಇತ್ಯಾದಿಗಳೂ ಇಲ್ಲಿ ಸಮ್ಮತವಿಲ್ಲ.

ಮಕ್ಕಳಿಗೇನು ಹೇಳಿಕೊಡಬೇಕು?
ಹೆಸರಾಂತ ಇಸ್ಲಾಂ ಪಂಡಿತರಾದ ಇಮಾಂ ಅನ್ ನವಾವಿ ಹೇಳುವಂತೆ, “ಓರ್ವ ಮುಸಲ್ಮಾನ ತಂದೆಯಾದವನು ತನ್ನ ಮಕ್ಕಳಿಗೆ ತಿನ್ನುವುದರಲ್ಲಿ, ಕುಡಿಯುವುದರಲ್ಲಿ, ಬಟ್ಟೆ ತೊಡುವುದರಲ್ಲಿ, ಮಲಗುವುದರಲ್ಲಿ, ಮನೆಯಿಂದ ಹೊರಗೆ ಹೋಗುವುದರಲ್ಲಿ, ಮನೆಗೆ ಪ್ರವೇಶಿಸುವುದರಲ್ಲಿ, ಗಾಡಿಗಳನ್ನು ಓಡಿಸುವುದರಲ್ಲಿ; ಹೀಗೆ ಪ್ರತಿಯೊಂದರಲ್ಲೂ ಸನ್ನಡತೆಯನ್ನು ಕಲಿಸಬೇಕು. ಮಗುವಿನಲ್ಲಿ ಪ್ರೇಮ, ತ್ಯಾಗ, (ರೇಸಿಂಗ್ ಧೋರಣೆ ಅಥವಾ ದುರಾಸೆ ಇಲ್ಲದೆ) ಇತರರನ್ನು ಮುಂದಕ್ಕೆ ಬಿಡುವ ಔದಾರ್ಯ, ಸಹಾಯ ಮಾಡುವುದು, ಘನತೆಯಿಂದ ನಡೆದುಕೊಳ್ಳುವುದು ಮತ್ತು ಔದಾರ್ಯ ಇತ್ಯಾದಿ ವ್ಯಕ್ತಿತ್ವ ನಿರ್ಮಾಣದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಮತ್ತು ಕಲಿಸಬೇಕು. ಹಾಗೆಯೇ ನಕಾರಾತ್ಮಕ ವಿಷಯಗಳಾದ ಹೇಡಿತನ, ಜಿಪುಣತನ, ಸೌಜನ್ಯವಿಲ್ಲದಿರುವುದು, ಗಮ್ಯರಹಿತವಾಗಿರುವುದು ಇತ್ಯಾದಿಗಳು ನುಸುಳದಂತೆ ನೋಡಿಕೊಳ್ಳಬೇಕು. ಕ್ರೌರ್ಯಕ್ಕೆ ಮುಂದಾಗಿ ಭೌತಿಕವಾಗಿ ಹಾನಿ ಮಾಡುವಂತಹ ಪಾಪಕ್ಕೆ ಒಳಗಾದಂತೆಯೂ ಮಗುವನ್ನು ರಕ್ಷಿಸಬೇಕು.”

ಇಸ್ಲಾಂ ವಿಧಿಸುವಂತಹ ಹಕ್ಕು ಮತ್ತು ಕರ್ತವ್ಯಗಳ ಅರಿವಿನ ಅಗತ್ಯ ಬರಿಯ ಮುಸಲ್ಮಾನ ಪೋಷಕರಿಗೆ ಮಾತ್ರವಲ್ಲದೇ ಯಾವುದೇ ಪೋಷಕರಿಗಾದರೂ ಮಕ್ಕಳ ಬಗ್ಗೆ ಇದೆ. ಆದರೆ ಮಗುವನ್ನು ಡೂ’ಸ್ ಮತ್ತು ಡೋಂಟ್’ಸ್‍ಗಳಲ್ಲಿ ಒಯ್ಯುವಾಗ ಅವರಿಗೆ ಹೇರಿಕೆಯಂತಾಗಿ, ಉಸಿರುಗಟ್ಟಿ ಅವರಿಗೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂಸೆಯಾಗದಂತೆ ನೋಡಿಕೊಳ್ಳಬೇಕಾದ ಪ್ರಜ್ಞಾವಂತಿಕೆಯ ಜವಾಬ್ದಾರಿಯೂ ಕೂಡ ಪೋಷಕರಲ್ಲಿದೆ. ಕಠಿಣ ಕಟ್ಟಳೆಗಳಿಗೂ, ಕ್ರಮಗೊಳಿಸುವುದಕ್ಕೂ ವ್ಯತ್ಯಾಸವಿದೆ. ಅದನ್ನು ಅರಿಯುವಂತಹ ಸಾಮಾನ್ಯ ಪ್ರಜ್ಞೆ ಇರಬೇಕು.

ಭಯ ಭಕ್ತಿ ಮತ್ತು ಮಕ್ಕಳ ಪ್ರೀತಿ
ಪ್ರವಾದಿ ಮಹಮ್ಮದ್ ಸ್ಪಷ್ಟವಾಗಿ ಉಲ್ಲೇಖಿಸುವುದೇನೆಂದರೆ, “ಅಲ್ಲಾಹ್‍ನಿಗೆ ಭಯ (ಭಯ-ಭಕ್ತಿ) ಪಡಿ, ನಿಮ್ಮ ಮಕ್ಕಳನ್ನು ಚೆನ್ನಾಗಿ (ಸರಿಯಾಗಿ) ನೋಡಿಕೊಳ್ಳಿ” ಎಂದು. ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಸಂಗತಿಯೆಂದರೆ, ದೇವರಿಗೆ ಹೆದರುವುದು ಎಷ್ಟು ಧಾರ್ಮಿಕವಾಗಿ ಗಂಭೀರವಾದದ್ದೋ ಅದೇ ರೀತಿ ಮಕ್ಕಳನ್ನು ನೋಡಿಕೊಳ್ಳುವುದೂ ಕೂಡ ಅಷ್ಟೇ ಗಂಭೀರವಾದ ವಿಷಯವೆಂದು.

ಹೀಗಿರುವಾಗ ಮಜೀದ್ ಮಜೀದಿ ಸೂಕ್ಷ್ಮ ಸಂವೇದನೆಯ ವಿಚಾರಗಳನ್ನು ಪ್ರಭಾವಶಾಲಿ ಮಾದ್ಯಮಗಳಿಂದ ಹಂಚಿಕೊಳ್ಳುವುದಕ್ಕೆ ಶಕ್ತವಾಗಿರಲಿಕ್ಕೆ ಸಾಧ್ಯ ಮತ್ತು ಇಸ್ಲಾಂನ ಮಕ್ಕಳ ಕುರಿತಾದ ಧೋರಣೆಗಳು ಮತ್ತು ಆಸಕ್ತಿಗಳು ನಮ್ಮ ನಡುವಿನ ಮಕ್ಕಳನ್ನು ಸ್ವರ್ಗದ ಮಕ್ಕಳನ್ನಾಗಿ ಸತ್ಕರಿಸುವುದರಲ್ಲಿ ಆಶ್ಚರ್ಯವೇನಿಲ್ಲ!
ಇಸ್ಲಾಂನಲ್ಲಿ ನೈತಿಕತೆಯನ್ನು ಹೇಳುವಂತಹ ‘ಅಖ್ಲಕ್ಹ್’ ಮಕ್ಕಳ ಬಗ್ಗೆ ಏನು ತಿಳಿಹೇಳುವುದೋ ಮುಂದೆ ಗಮನಿಸೋಣ.

ಮಗುವಿಗಿಡುವ ಮುತ್ತಿಗೆ ಸ್ವರ್ಗಮಾನ
ಪ್ರತಿಯೊಂದು ಸಮಾಜವೂ ತನ್ನ ಸಾಂಸ್ಕೃತಿಕ ನೆಲೆಗಟ್ಟಿನಿಂದ ತನ್ನ ಪೀಳಿಗೆಯನ್ನು ಮುಂದುವರಿಸುವ ಸಂತಾನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಮಾನ್ಯತೆಯನ್ನು ಕೊಟ್ಟೇ ತೀರುತ್ತದೆ. ಮಕ್ಕಳಿಗೆ ಮಾನ್ಯತೆ ಕೊಡುವುದು ಒಂದು ವಿಷಯವಾದರೆ, ಮಕ್ಕಳಿಗಾಗಿ ನೈತಿಕತೆಯನ್ನು ಪಾಲನೆ ಮಾಡುವ ಅಗತ್ಯತೆ ಜೀವಂತ ಉದಾಹರಣೆಯಾಗಿ ನಿಲ್ಲುವಂತಹ ದೊಡ್ಡವರಿಗೆ ಖಂಡಿತ ಇರುತ್ತದೆ.

ಇಸ್ಲಾಂನ ನೈತಿಕತೆಯನ್ನು ಸೂಚಿಸುವ ಅಕ್ಲಾಕ್ ಮಕ್ಕಳ ವಿಷಯದಲ್ಲಿ ಹೇಳುವ ಕೆಲವು ಬಹಳ ಅಗತ್ಯವಾಗಿ ಗಮನಿಸಬೇಕಾಗುತ್ತದೆ.
ಉಡುಗೊರೆಗಳನ್ನು ಮೊದಲು ಹೆಣ್ಣುಮಕ್ಕಳಿಗೆ ನೀಡಿ ಹೆಣ್ಣು ಮಕ್ಕಳಿಗೆ ಆದ್ಯತೆಯನ್ನೂ ಮತ್ತು ಗೌರವವನ್ನೂ ನೀಡುವ ಈ ಅಂಶ, ಹೆಣ್ಣು ಮಗುವೆಂಬ ಕಾರಣದಿಂದಲೇ ಭ್ರೂಣಹತ್ಯೆ ಮಾಡುವಂತಹ ಅಥವಾ ಹೆಣ್ಣು ಮಗು ಜನಿಸಿದಾಗ ಅದನ್ನು ಹಾಲಿನಲ್ಲಿ ಮುಳುಗಿಸಿ ಕೊಲ್ಲುವಂತಹ ಕ್ರೂರ ಮತ್ತು ಬರ್ಬರ ಪದ್ಧತಿಗಳಿಗೆ ಇದು ಸಂಪೂರ್ಣ ಹೊರತಾಗಿದೆ.

ಮಕ್ಕಳೊಂದಿಗೆ ಆಟಗಳನ್ನು ಆಡಿ ಮಕ್ಕಳ ಪಾಲನೆ ಪೋಷಣೆಯಲ್ಲಿ ದೊಡ್ಡವರು ಅವರೊಂದಿಗೆ ಆಡುವುದು ಬಹಳ ಮುಖ್ಯವಾಗುತ್ತದೆ. ಇಸ್ಲಾಂ ನಾಯಕರನೇಕರು ಮಕ್ಕಳೊಂದಿಗೆ ಆಟವಾಡುವುದರ ಮಹತ್ವಕ್ಕೆ ಬಹಳ ಒತ್ತುಕೊಟ್ಟು ಹೇಳುತ್ತಾರೆ. ಪ್ರವಾದಿ ಮಹಮದ್ ಹೇಳುವಂತೆ, “ಮಗುವಿರುವಾತನು ಮಗುವಿನಂತೆಯೇ ಮಗುವಿನೊಂದಿಗೆ ವರ್ತಿಸಬೇಕು.”

ಹೌದು, ಹಾಗಾದರೆ ಮಾತ್ರವೇ ಮಗುವಿಗೆ ತನ್ನೊಂದಿಗೆ ಇರುವಂತಹ ವ್ಯಕ್ತಿಯು ಯಾರೋ ತನಗೆ ಸಂಬಂಧಪಡದವರಲ್ಲ ಎಂದು ಎನಿಸದೇ ಇರಲು ಸಾಧ್ಯ. ಹಾಗೆಯೇ ಇಮಾಮ್ ಅಲಿಯಲ್ಲಿ ಹೇಳುವಂತೆ, “ಮಕ್ಕಳಿರುವ ಯಾರೇ ಆಗಲೀ, ಮಕ್ಕಳನ್ನು ತರಬೇತುಗೊಳಿಸಲು ಅವರ ಬಾಲ್ಯದ ಸ್ಥಿತಿಗಿರುವಂತೆಯೇ ಅವರ ಮಾನಸಿಕ ಮಟ್ಟವನ್ನು ಕೆಳಗಿಳಿಸಿಕೊಳ್ಳಬೇಕು.” ಸಾಮಾನ್ಯವಾಗಿ ತಾನು ಕಲಿಸುತ್ತಿದ್ದೇನೆಂಬ ಅಹಂಕಾರದಲ್ಲಿ ತನ್ನಿಂದ ಕಲಿಯುತ್ತಿರುವವನು ತನಗಿಂತ ಕೆಳಗಿರುವವನೆಂಬ ಮೇಲ್ಪಂಕ್ತಿಯ ಒಣ ಸ್ಥಾನದಲ್ಲಿ ನಿಲ್ಲಬೇಡವೆಂದು ಇದು ಎಚ್ಚರಿಸುತ್ತದೆ. ಜಿನಿವಾದ ಸಂತ ಫ್ರಾನ್ಸಿಸ್ ಡಿ ಸೇಲ್ಸ್ ಎಂಬ ಕ್ರೈಸ್ತ ಸಂತ ಹೇಳುವಂತೆ, “ಬೋಧಿಸುವುದು ಅಥವಾ ಕಲಿಯುವುದು ತಾವು ಕಲಿಯಲು ಅತ್ಯುತ್ತಮ ಮಾರ್ಗ.” ನಾವು ಕಲಿಯುತ್ತಿದ್ದೇವೆ ಎಂಬ ಭಾವದಲ್ಲಿ ಕಲಿಯುವವರೊಡನೆ ಕಲೆತರೆ, ನಿಜಕ್ಕೂ ಉತ್ತಮವಾಗಿ ಕಲಿಯುತ್ತೇವೆ. ಇದರೊಟ್ಟಿಗೆ ಕಲಿಯುವವರು ಮತ್ತು ಕಲಿಸುವವರ ನಡುವೆ ತಾರತಮ್ಯವಿಲ್ಲದೇ ಕಲಿಕೆಯ ಉದ್ದೇಶ ಸಫಲವಾಗುತ್ತದೆ.

ಮಕ್ಕಳು ಅತ್ತಾಗ ಹೊಡೆಯಬೇಡಿ
ಮಕ್ಕಳು ಅಳುವುದು ಹಿರಿಯರಿಗೆ ಎಷ್ಟೋ ಬಾರಿ ಅವಮಾನದ ಸಂಗತಿಯಾಗಿ ಕಾಣುತ್ತದೆ. ಮುಖ್ಯವಾಗಿ ಅವರನ್ನು ನಗುನಗುತ್ತಾ ಇರಿಸಿಕೊಳ್ಳಲು ವಿಫಲವಾಗಿರುವ ಅಂಶವೊಂದಾದರೆ, ಅದು ಅತ್ತಾಗ ಇತರರೆಲ್ಲರ ಗಮನ ತಮ್ಮ ಕಡೆಗೆ ಹರಿಯುತ್ತದೆ ಎಂಬುದು. ಮತ್ತೊಂದು, ಮಕ್ಕಳ ಅಳು ಬಹಳ ಕಿರಿಕಿರಿ ಉಂಟು ಮಾಡುತ್ತದೆ.

ಪ್ರವಾದಿ ಮಹಮದರು ಹೇಳುವಂತೆ, “ನಿಮ್ಮ ಮಕ್ಕಳು ಅಳುವಾಗ ಹೊಡೆಯಬೇಡಿ. ಆ ಅಳುವಿನಲ್ಲಿ ಅರ್ಥವಿದೆ. ಹುಟ್ಟಿದ ಮಗುವಿನ ಮೊದಲ ನಾಲ್ಕು ತಿಂಗಳ ಅಳುವಿನಲ್ಲಿ ಅಲ್ಲಾಹ್‍ನೊಂದಿಗೆ ಬೆಸೆದುಕೊಂಡಿರುವ ಐಕ್ಯತೆಯಿದ್ದರೆ, ನಂತರ ನಾಲ್ಕು ತಿಂಗಳ ಅಳುವಿನಲ್ಲಿ ಸಂದೇಶವಾಹಕರಿಗೆ ಹರಸುವ ಹರಕೆಯಿರುತ್ತದೆ. ಹಾಗೆಯೇ ತದನಂತರದ ನಾಲ್ಕು ತಿಂಗಳ ಅಳುವಿನಲ್ಲಿ ತನ್ನ ಪೋಷಕರಿಗಾಗಿ ಮಾಡುವಂತಹ ಪ್ರಾರ್ಥನೆ ಇರುತ್ತದೆ.”

ಧಾರ್ಮಿಕ ಅಥವಾ ಅಧ್ಯಾತ್ಮಿಕತೆಯನ್ನು ಮಗುವಿನ ಅಳುವಿಗೆ ಒರೆಹಚ್ಚಿ ನೋಡುವ ಈ ದೃಷ್ಟಿಯನ್ನು ಧಾರ್ಮಿಕವಾಗಿಯೇ ನೋಡುವ ಅಗತ್ಯವಿರದಿದ್ದರೂ ಅದರಲ್ಲಿರುವ ಮೌಲ್ಯವನ್ನು ಗುರುತಿಸಬೇಕು. ಧಾರ್ಮಿಕತೆ ಮತ್ತು ಅಧ್ಯಾತ್ಮಿಕತೆಯ ಮೂಲಕವಾದರೂ ಅಲ್ಲಿ ಅಗತ್ಯವಿರುವ ಒಳನೋಟಕ್ಕೆ ಅವಕಾಶ ಮಾಡಿಕೊಡುತ್ತದೆ. ಮಗುವು ಅತ್ತಾಗ ಕಿರಿಕಿರಿ ಮಾಡಿಕೊಳ್ಳುವುದನ್ನು ಬಿಟ್ಟು, ಅಳಬೇಡ, ಉಸಿರುಬಿಡಬೇಡ ಎಂದು ಬೈಯುವ ಅಥವಾ ಮಗುವಿನ ಸಂವಹನೆ ಅಥವಾ ಪ್ರತಿಭಟನೆಯನ್ನು ಹತ್ತಿಕ್ಕುವಂತಹ ಹಿರಿಯರಿಗೆ ಈ ಮೂಲಕವಾದರೂ ಸಂಯಮವನ್ನು ಕಲಿಸುವ ಪರಿಯಾಗಿ ನನಗೆ ತೋರುತ್ತದೆ.

ಮಗುವನ್ನು ಚುಂಬಿಸಿ
ಮಗುವಿಗೆ ಚುಂಬನಗಳನ್ನು ನೀಡಬೇಕು. ಸಂತ ಫ್ರಾನ್ಸಿಸ್ ಡಿ ಸೇಲ್ಸ್ ಹೇಳುವಂತೆ, “ಚುಂಬನವು ನಮ್ಮ ಪ್ರೇಮವನ್ನು ನಮ್ಮ ಪ್ರೀತಿಪಾತ್ರರಿಗೆ ಸ್ಪರ್ಶಿಸುವಂತೆ ಮಾಡುತ್ತದೆ.”

ಇಮಾಮ್ ಅಲಿ ಮಗುವಿಗೆ ಚುಂಬಿಸುವುದರ ಮೌಲ್ಯವನ್ನು ಅದ್ಯಾವ ಆಧ್ಯತ್ಮಿಕ ಸಾಧನೆಯ ಮಟ್ಟಕ್ಕೆ ಕೊಂಡೊಯ್ಯುವರು ಎಂಬುದನ್ನು ನೋಡಿ. “ಮಗುವಿಗೆ ಚುಂಬಿಸುವುದು ಬಹಳ ಮಹತ್ತರವಾದುದು. ಆ ಚುಂಬನದಿಂದ ದಿವ್ಯ ಮತ್ತು ಸ್ವರ್ಗೀಯ ಶ್ರೇಣಿಯು ನಿನಗೆ ಲಭಿಸುವುದು. ಇಲ್ಲವಾದರೆ ಅದನ್ನು (ಆ ಸ್ವರ್ಗೀಯ ಶ್ರೇಣಿಯನ್ನು) ಪಡೆಯಲು ನೀನು ಐದು ನೂರುವರ್ಷಗಳ ಸಾಧನೆ ಮಾಡಬೇಕು.” ಐದು ನೂರು ವರ್ಷಗಳ ಆಧ್ಯಾತ್ಮಿಕ ಸಾಧನೆಯು ಒಂದು ಮಗುವಿಗೆ ನೀಡುವ ಮುತ್ತಿಗೆ ಸಮ!

ಒಬ್ಬಾತ ಪ್ರವಾದಿಯ ಬಳಿ ಹೇಳುತ್ತಾನೆ, “ನಾನು ನನ್ನ ಮಗುವನ್ನು ಚುಂಬಿಸಿಯೇ ಇಲ್ಲ” ಎಂದು. ಅದಕ್ಕೆ ಪ್ರವಾದಿ ನೀಡಿದ ಉತ್ತರವೆಂದರೆ, “ನಿಸ್ಸಂದೇಹವಾಗಿ ನಿನ್ನಂತಹ ವ್ಯಕ್ತಿಯು ನರಕಾಗ್ನಿಯಲ್ಲಿ ವಾಸಿಸುತ್ತಾನೆ” ಎಂದು.

ಮಕ್ಕಳಿಗೆ ವಂದಿಸಿ
ಮಕ್ಕಳಿಗೆ ಸಲಾಂ ಹೇಳುವ ಮೂಲಕ ಆ ಮಗುವಿನ ವ್ಯಕ್ತಿತ್ವ ಮತ್ತು ಮೌಲ್ಯದ ಘನತೆಯನ್ನು ಗುರುತಿಸಿಕೊಳ್ಳುವಂತೆ ಮಾಡಿ. ಯಾರಾದರೂ ಸಲಾಂ ಹೇಳಿದರೆ, ಪ್ರತಿವಂದಿಸುವುದು ಸಾಮಾನ್ಯ. ಆದರೆ ಪ್ರವಾದಿ ಹೇಳುವುದೇನೆಂದರೆ, ವ್ಯಕ್ತಿ ಚಿಕ್ಕವರಾಗಲಿ, ದೊಡ್ಡವರಾಗಲಿ, ನೀವು ಮೊದಲು ಸಲಾಂ ಹೇಳಿ.

ಮಕ್ಕಳನ್ನು ಅಣಕಿಸಬೇಡಿ
ಮಕ್ಕಳು ಯಾವುದಾದರೂ ಕೆಲಸವನ್ನು ಹುಡುಗುತನದಲ್ಲಿ ಮಾಡಿದಾಗ ಅದನ್ನು ಖಂಡಿಸುವುದೋ ಅಥವಾ ಹೀಯಾಳಿಸುವುದೋ ಮಾಡಬೇಡಿ. ಅದನ್ನು ಕ್ಷುಲ್ಲಕವೆಂದೂ ಪರಿಗಣಿಸಬೇಡಿ.

ಆಜ್ಞೆಯ ದರ್ಪ ಬೇಡ
ಮಕ್ಕಳಿಗೆ ಅಪ್ಪಣೆ ನೀಡುವುದು, ದರ್ಪದಲ್ಲಿ ಆಜ್ಞೆ ಮಾಡುವುದು; ಇತ್ಯಾದಿಗಳನ್ನು ಮಾಡಬೇಡಿ. ದೊಡ್ಡವರ ಇಂತಹ ನಡವಳಿಕೆಗಳು ಮಕ್ಕಳನ್ನು ಮೊಂಡರನ್ನಾಗಿ ಮಾಡುವುದೇ ಅಲ್ಲದೇ ಅವರು ಒರಟರನ್ನಾಗಿಯೂ, ವಿನಾಕಾರಣ ಬಂಡಾಯಗಾರರನ್ನಾಗಿಯೂ ರೂಪಿಸುತ್ತದೆ.

ನಿಮ್ಮ ಮಕ್ಕಳನ್ನು ಗೌರವಿಸುತ್ತಾ ಅವರ ವ್ಯಕ್ತಿತ್ವವನ್ನು ರೂಪಿಸಿ ಎಂದು ಮಹಮದರ ಅಳಿಯ ಇಮಾಂ ಅಲಿ ಒತ್ತಿ ಹೇಳುತ್ತಾರೆ. ಮಗುವನ್ನು ಹಿರಿಯರು ದರ್ಪದಿಂದಲೋ ಅಥವಾ ಅಧಿಕಾರದಿಂದಲೋ ಮಣಿಸುವುದನ್ನು ನಿರಾಕರಿಸುವ ಈ ಧೋರಣೆಯು ಗೌರವಿಸುವುದನ್ನು ಎತ್ತಿ ಹಿಡಿಯುತ್ತದೆ.

ಪ್ರವಾದಿಯ ಸಾಂಪ್ರದಾಯಕ ಒಲವು ನಿಲುವುಗಳಲ್ಲಿ ಹೇಳುವುದಾದರೆ, ಪೋಷಕರು ಮಗುವಿನ ಸಹಜವಾದ ವಾಂಛೆ ಅಥವಾ ಆಸೆಗಳನ್ನು, ಆ ಮಗುವು ತಪ್ಪು ದಾರಿ ಮತ್ತು ಅಡ್ಡ ಮಾರ್ಗಗಳಿಂದ ತನ್ನ ಬಯಕೆಯನ್ನು ಪೂರೈಸಿಕೊಳ್ಳಲು (ಪಾಪ ತುಂಬಿರುವ ಮಾರ್ಗಗಳಲ್ಲಿ) ಮುಂದಾಗುತ್ತದೆ. ಆದ್ದರಿಂದಲೇ, ಮಕ್ಕಳಿಗೆ ಅಗತ್ಯವಿರುವ ವ್ಯಕ್ತಿಗತ ಸ್ವಾತಂತ್ರ್ಯ, ಆತ್ಮ ವಿಶ್ವಾಸ, ಮುಂದಳತ್ವ ಇತ್ಯಾದಿಗಳನ್ನು ಪ್ರೇರೇಪಿಸಿ ಎಂದು ಹೇಳುತ್ತಾ, ಅದೇ ರೀತಿ, ತಂದೆ ಮಡಿಯಲ್ಲಿ ಮತ್ತು ತಾಯಿಯ ಎದೆಯಲ್ಲಿರುವ ಮಕ್ಕಳಿಗೆ ಆತ್ಮ ವಿಶ್ವಾಸದ ಕೊರತೆ, ದೌರ್ಬಲ್ಯ ಇತ್ಯಾದಿಗಳು ಉಂಟಾಗಬಾರದು ಎಂದು ಸ್ಪಷ್ಟಗೊಳಿಸುತ್ತದೆ.

ಯಾವ ಮಗುವಿಗೆ ಮತ್ತೋರ್ವ ವ್ಯಕ್ತಿಯಂತೆಯೇ ಮಾನ್ಯತೆ ನೀಡಿ ಕುಟುಂಬದಲ್ಲಿ ಅಥವಾ ಸಮೂಹದಲ್ಲಿ ಪರಿಗಣಿಸಲಾರರೋ ಅದು ಸರಿಯಾದ ವ್ಯಕ್ತಿತ್ವದಿಂದ ತನ್ನ ವಯಸ್ಕ ಸ್ಥಿತಿಯಲ್ಲಿ ರೂಪುಗೊಳ್ಳಲಾರದು ಎಂಬುದು ಸ್ಪಷ್ಟ ನಿರ್ದೇಶನ.

ಮಾತು ಉಳಿಸಿಕೊಳ್ಳಿ
ಮಗುವು ಅಳು ನಿಲ್ಲಿಸಲೆಂದೋ, ಹಟ ಮಾಡದಿರಲೆಂದೋ ತಕ್ಷಣಕ್ಕೆ ಅದರ ಕೋರಿಕೆಯನ್ನು ಈಡೇರಿಸುವ ಹಾಗೆ ಮಾತುಕೊಟ್ಟು, ನಂತರ, ಮಗುವು ಸುಮ್ಮನಾದ ಮೇಲೆ ಅಥವಾ ಅದು ಮರೆತ ಮೇಲೆ ಬೇಕೆಂದೇ ಅದನ್ನು ಅಲಕ್ಷಿಸಿ ಬಿಡುವುದನ್ನು ಇಸ್ಲಾಂ ಒಪ್ಪುವುದಿಲ್ಲ. ವಾಗ್ದಾನ ಅಥವಾ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರ ಬಗ್ಗೆ ಅದೊಂದು ವಿಶ್ವಾಸದ ಕುರುಹೆಂದು ಇಸ್ಲಾಂನಲ್ಲಿ ಅದಕ್ಕೆ ಘನವಾದ ಮಾನ್ಯತೆಯಿದೆ.

ಕುರ್‍ಆನ್‍ನ ಎರಡನೇ ಅಧ್ಯಾಯವಾದ ಸೂರಃ ಅಲ್‍ಬಕರದಲ್ಲಿ ವಿಶ್ವಾಸ ಘಾತುಕರ ಬಗ್ಗೆ ಕಟುವಾದ ವಾಕ್ಯಗಳಿವೆ. ಆತ್ಮವಂಚನೆ ಮಾಡಿಕೊಳ್ಳುವವರು ಹೃದಯದಲ್ಲಿ ರೋಗವುಳ್ಳವರು ಎಂದೂ ತಿಳಿಸಲಾಗಿದೆ.

ಅಲ್ಲಾಹ್‍ನ ನೇರ ಅನುಗ್ರಹಕ್ಕೆ ಪಾತ್ರವಾದ ಮಗುವಿಗೆ ತತ್ಕಾಲಕ್ಕೆ ಏನೋ ವಾಗ್ದಾನ ಮಾಡಿ, ನಂತರ ಅದರ ವಿಶ್ವಾಸವನ್ನು ಉಳಿಸಿಕೊಳ್ಳಲಾರದೆ ಇರುವುದು ಧಾರ್ಮಿಕವಾಗಿಯೇ ಕ್ಷಮಾರ್ಹವಲ್ಲ. ಮಗುವು ಮುಗ್ಧವಾಗಿ ಹಿರಿಯರ ವಾಗ್ದಾನದ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತದೆ. ಮತ್ತು ವಿಶ್ವಾಸಿಸುತ್ತದೆ, ನಂಬುತ್ತದೆ. ಹಿರಿಯರಾದವರು ಅದನ್ನು ಖಂಡಿತ ನಡೆಸಿಕೊಡುವ ಮೂಲಕ ವಾಗ್ದಾನವನ್ನು ಉಳಿಸಿಕೊಳ್ಳುವ ಬಗ್ಗೆ ತಮ್ಮ ಮೌಲ್ಯವನ್ನು ಮತ್ತು ವಸ್ತುನಿಷ್ಟತೆಯನ್ನು ಉಳಿಸಿಕೊಳ್ಳಬೇಕು.

ಅಕ್ಲಾಕ್ ನೇರವಾಗಿ ಒತ್ತಿಹೇಳುತ್ತದೆ, “ನಿಮ್ಮ ಮಕ್ಕಳನ್ನು ಪ್ರೀತಿಸಿ ಮತ್ತು ಅವರನ್ನು ಮಮತೆ ಹಾಗೂ ಕರುಣೆಯಿಂದ ಸತ್ಕರಿಸಿ. ಯಾವಾಗಲೇ ನೀವು ಅವರಿಗೆ ಮಾತುಕೊಟ್ಟರೂ ಅದನ್ನು ನೆರವೇರಿಸಿಕೊಡಿ. ಅವರು ನಿಮ್ಮನ್ನು ಪೋಷಿಸುವವರು ಎಂಬ ವಿಶ್ವಾಸವು ಅದರಿಂದಲೇ ಬರುವುದು.”

ಲೈಂಗಿಕ ಶಿಕ್ಷಣ
ಸುರತ್ ನೂರ್ (58) ಮಕ್ಕಳಿಗೆ ಲೈಂಗಿಕ ತಿಳುವಳಿಕೆ ನೀಡುವ ದಿಕ್ಕಿನಲ್ಲಿಯೂ ಬೆರಳು ಮಾಡುತ್ತದೆ. ಮೊದಲನೆಯದಾಗಿ ಮಕ್ಕಳಿಗೆ ಪ್ರತಿಯೊಂದು ವಿಷಯಗಳಲ್ಲೂ ಅತ್ಯಧಿಕವಾದಂತಹ ಕುತೂಹಲವಿರುತ್ತದೆ ಮತ್ತು ತಿಳಿದಂತಹ ಅರೆಬರೆ ವಿಷಯವನ್ನು ಕಾರಣ ಮತ್ತು ಪರಿಣಾಮಗಳನ್ನು ವಿಚಾರಿಸದೇ ಅದನ್ನು ಪ್ರಯೋಗಕ್ಕೆ ಒಳಮಾಡುತ್ತವೆ. ಇದರಿಂದ ಅವರಿಗೇ ಅರಿವಿಲ್ಲದಂತೆ ಅನೇಕ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಲೈಂಗಿಕತೆಯ ಬಗ್ಗೆ ಪರೋಕ್ಷವಾಗಿ ತರಬೇತಿ ನೀಡಲು ಗಮನ ಹರಿಸಲಾಗುವುದು.

ಕುರ್‍ಆನ್‍ನಲ್ಲಿ (24:58,59) ನಿಮ್ಮ ದಾಸರೂ, ನಿಮ್ಮಲ್ಲಿನ ಪ್ರಾಯ ಪೂರ್ತಿಯಾಗದಂತವರೂ ಮೂರೂ ಹೊತ್ತುಗಳಲ್ಲಿ ಒಳಗೆ (ಖಾಸಗೀ ಕೋಣೆಗಳಲ್ಲಿ) ಬರಲು ಪ್ರವೇಶವನ್ನು ಕೇಳಲಿ. (ಎಂದು ಹೇಳುತ್ತಾ ಮುಂದುವರೆದು) ನಿಮ್ಮ ಮಕ್ಕಳು ಪ್ರಾಯಪೂರ್ತಿಗೆ ಬಂದಾಗ ನಿಮ್ಮ ಬಳಿ ಬರಲು ಅವರ ಹಿಂದಿನವರು ಅನುಮತಿ ಪಡೆದುಕೊಂಡಿದ್ದಂತೆ, ಅವರೂ ಅನುಮತಿ ಕೇಳಲಿ. ಇಲ್ಲಿ ನೇರವಾಗಿ ಮಕ್ಕಳಿಗೆ ಗೊಂದಲ ಎಬ್ಬಿಸುವಂತಹ ಅಥವಾ ಕುತೂಹಲದ ಪ್ರಶ್ನೆಗಳನ್ನು ಎಬ್ಬಿಸುವ ಬದಲು, ಪರೋಕ್ಷವಾಗಿ ಹಿಂದಿನಿಂದಲೂ ಗಮನಿಸಿರುವಂತಹ ವಿಷಯದ ಅಭ್ಯಾಸದ ಮುಂದುವರಿಕೆಯು ಅವರಿಗೆ ಅನಗತ್ಯ ಕುತೂಹಲಗಳನ್ನು ಉಂಟು ಮಾಡಲು ಬಿಡುವುದು ಬೇಡವೆಂದು ಸೂಚಿಸುತ್ತದೆ. ದಾರಿ ತಪ್ಪುವಂತಹ ಕುತೂಹಲವನ್ನು ಉಂಟು ಮಾಡುವ ದಾರಿಗೆಳೆಯುವ ರೂಢಿಯನ್ನೇ ಮಾಡದಿರದ್ದರೆ ಸರಿ ಎಂಬ ನಿಲುವು ಇಲ್ಲಿದೆ.

ಪ್ರೇಮವೆಂದರೆ ಜವಾಬ್ದಾರಿಯೇ ಆಗಿರುವುದು. ಅಮೂರ್ತವಾದ ಪ್ರೇಮವನ್ನು ನಾವು ವ್ಯಕ್ತಪಡಿಸುವುದಾದರೂ ಹೇಗೆ? ಮಕ್ಕಳ ಮೇಲಿನ ಪ್ರೇಮವನ್ನು ಅವರಿಗೆ ಸಂಬಂಧಪಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು. ಕಟ್ಟಿಕೊಂಡವರ, ಹೆತ್ತವರ, ಸ್ನೇಹ ಸಂಬಂಧಿಗಳ, ಸಮಾಜದ ಮೇಲಿನ ಪ್ರೇಮವನ್ನು ಅವರ/ಅದರ ಕುರಿತಾದ ಜವಾಬ್ದಾರಿಯನ್ನು ನಿರ್ವಹಿಸುವುದು. ಖಲೀಲ್ ಗಿಬ್ರಾನ್ ಅದಕ್ಕೆಯೇ ಹೇಳುವುದು, “ಕೆಲಸವು ಪ್ರೇಮದ ವ್ಯಕ್ತರೂಪ” ಎಂದು. ಜವಾಬ್ದಾರಿಯೆಂದರೆ ಎಚ್ಚರಿಕೆಯನ್ನೂ ತೆಗೆದುಕೊಳ್ಳುವುದು ಬಹು ಮುಖ್ಯವಾದ ಅಂಶ.

ಹೀಗೆ ಮಕ್ಕಳಿಗೆ ಎಂತಹ ಕಥೆಗಳನ್ನು ನಿರೂಪಿಸಬೇಕೆಂದು, ಅಪರಿಚಿತರೊಂದಿಗೆ ಎಷ್ಟರಮಟ್ಟಿಗೆ ಸಲಿಗೆಯಿಂದಿರಬೇಕೆಂದೂ ಸೂಕ್ಷ್ಮವಾದಂತಹ ಗ್ರಹಿಕೆಯನ್ನು ಉಳ್ಳಂತಹ ಜವಾಬ್ದಾರಿಗಳನ್ನು ಇಸ್ಲಾಂ ತೆರೆದಿಡುತ್ತದೆ ಎಂದು ಮುಂದೆ ನೋಡೋಣ.

ಮಗುವಿಗೆ ನಾವು ಪಥ್ಯವಾಗೋಣ
ಅಸಹನೆ ಮತ್ತು ಒರಟುತನದ ಪೋಷಕರಿಗೆ ತಮ್ಮ ಮಕ್ಕಳನ್ನು ವಿದೇಯವಾಗಿ, ವಿನೀತರಾಗಿ ಹಾಗೂ ಸೌಹಾರ್ದಪೂರ್ಣವಾಗಿ ಹೇಗೆ ಬೆಳೆಸಲು ಸಾಧ್ಯ? ಇದೊಂದು ಬಹು ದೊಡ್ಡ ಪ್ರಶ್ನೆ. ಮಕ್ಕಳೊಂದಿಗೆ ಒರಟಾಗಿ ನಡೆದುಕೊಳ್ಳುವುದರಿಂದ ಸಹಜವಾಗಿಯೇ ಮಕ್ಕಳಲ್ಲಿ ಅದಕ್ಕೆ ಪ್ರತಿಕ್ರಿಯಾತ್ಮಕವಾದ ಗುಣ ನಡವಳಿಕೆಗಳು ಮೂಡುತ್ತವೆಯೇ ಹೊರತು, ಅದಕ್ಕೆ ವ್ಯತಿರಿಕ್ತವಾದಂತಹ ಗುಣ ನಡವಳಿಕೆಗಳು ಮೂಡುವುದಿಲ್ಲ. ಬಹಳಷ್ಟು ದೊಡ್ಡವರು ಅತ್ಯಂತ ಅವೈಜ್ಞಾನಿಕವಾದ ಮತ್ತು ಅವೈಚಾರಿಕವಾದ ಉದಾಹರಣೆಯನ್ನು ನೀಡುತ್ತಾರೆ. ಅದೆಂದರೆ, ಬಂಡೆಯೊಂದಕ್ಕೆ ಉಳಿಯ ಪೆಟ್ಟು ಬಿದ್ದರೇನೇ ಅದು ಸುಂದರ ಶಿಲ್ಪ ಕಲಾಕೃತಿಯಾಗುವುದು. ಹಾಗೆಯೇ ತಾವು ಬೈಯುವುದು, ಹೊಡೆಯುವುದು, ಒರಟಾಗಿ ನಡೆದುಕೊಳ್ಳುವುದರಿಂದ ಮಕ್ಕಳಿಗೆ ನೋವಾಗಬಹುದು, ಆದರೆ ಅದನ್ನು ಸಕಾರಣವಾಗಿಯೂ, ಸಕಾರಾತ್ಮಕವಾಗಿಯೂ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ. ಅದೆಲ್ಲವೂ ಮಗುವಿನ ಒಳ್ಳೆಯ ಭವಿಷ್ಯಕ್ಕೇ ಎಂದು ಹೇಳುತ್ತಾರೆ. ಈ ಮಾತನ್ನಾಡುವವರಿಗೆ ನನ್ನ ಷರಾ ಏನೆಂದರೆ, ಆ ಉಳಿಯ ಪೆಟ್ಟನ್ನು ಮಕ್ಕಳಿಂದ ನೀವೇ ತಿನ್ನಿ. ಬಹುಶಃ ನಿಮಗೆ ರೂಪುಗೊಳ್ಳುವ ಅಗತ್ಯವಿದೆ. ಯಾವುದೇ ಮಗುವು ತಾನು ಏನನ್ನು ಸ್ವೀಕರಿಸುತ್ತದೆಯೋ ಅದನ್ನು ತನಗೆ ಒಪ್ಪಿತವಾಗುವ ರೀತಿಯಲ್ಲಿ ಸಮೀಪಿಸುವುದನ್ನು ಸಹಜವಾಗಿಯೇ ನಿರೀಕ್ಷಿಸುತ್ತದೆ. ಅದಕ್ಕೆ ನೀಡುವ ವಿಧಾನವೇ ಕೆಟ್ಟಾದಾಗಿದ್ದ ಪಕ್ಷದಲ್ಲಿ ಸಹಜವಾಗಿ ಮಗುವು ಅದನ್ನು ತಿರಸ್ಕರಿಸುತ್ತದೆ.

ಮಕ್ಕಳ ಮನೋವಿಜ್ಞಾನಿ
ಮಕ್ಕಳ ಮನೋವಿಜ್ಞಾನಿಯಂತೆ ಮಾತಾಡುವ ಪ್ರವಾದಿ ಮಹಮದರ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. “ನಿಮ್ಮ ಮಕ್ಕಳನ್ನು ಗೌರವಿಸಿ. ಅವರೊಂದಿಗೆ ಸನ್ನಡತೆಯುಳ್ಳವರಾಗಿಯೂ ಮತ್ತು ಒಪ್ಪಿತವಾಗುವಂತೆಯೂ (ಪಥ್ಯವಾಗುವಂತೆಯೂ) ಮಾತನಾಡಿ.”
ಹೌದಲ್ಲವೇ? ನಾವು ಅವರಿಗೆ ಕೊಡುವ ಗೌರವವನ್ನು ಅವರು ಕಲಿಯುತ್ತಾರೆ. ನಮ್ಮ ನಡಾವಳಿಗಳು ಅವರೊಂದಿಗೆ ಒರಟಾಗಿದ್ದರೆ, ಒರಟುತನದ್ದೇ ಅವರಿಗೆ ಸಿಗುವ ಜೀವಂತ ಉದಾಹರಣೆ.
ಸಾಂಪ್ರದಾಯಕವಾಗಿ ನಿರೂಪಿಸುವಂತೆ ಪ್ರವಾದಿ ಮಹಮದರು ಆಶಿಸುವುದೇನೆಂದರೆ, “ಅಲ್ಲಾಹ್‍ನ ಕರುಣೆ ಮಗುವನ್ನು ಸನ್ನಡತೆಯಿಂದ ನಡೆಸಿಕೊಳ್ಳುವಂತವನ ಮೇಲಿರಲಿ.” ಹಾಗೆಯೇ ಪ್ರವಾದಿ ಮಹಮದ್ ಕೊಡುವ ನಾಲ್ಕು ಸೂಚನೆಗಳು ಬಹಳ ಮುಖ್ಯವೆನಿಸುತ್ತದೆ.
1. ಮಗುವಿನಲ್ಲಿ ಯಾವ ಚೈತನ್ಯವು ಇರುವುದೋ, ಅದನ್ನು ಆ ಮಗುವು ದಾಟಿಸುತ್ತದೆ (ವ್ಯಕ್ತಪಡಿಸುತ್ತದೆ). ಅದನ್ನು ಮನ್ನಿಸಿ.
2. ಮಗುವಿಗೆ ಕಠಿಣವೆನಿಸುವುದನ್ನು (ಹೇರಲು) ನಿರೀಕ್ಷಿಸಬೇಡಿ.
3. ಮಗುವು ಪಾಪ ಮಾರ್ಗಕ್ಕೆ ಹೋಗದಿರುವಂತೆ ನೋಡಿಕೊಳ್ಳಿ. (ಅಂತಹ ಉದಾಹರಣೆಗಳನ್ನು ನೀಡಬೇಡಿ.)
4. ಮಗುವಿಗೆ ಸುಳ್ಳುಗಳನ್ನು ಹೇಳಬೇಡಿ ಮತ್ತು ಅದರೊಂದಿಗೆ ಕ್ಷುಲ್ಲಕವಾಗಿ ನಡೆದುಕೊಳ್ಳಬೇಡಿ.
ಮಗುವು ಎಂದಾಕ್ಷಣ ವಿರಾಮವಾಗಿ, ಮುಕ್ತ ಮತ್ತು ಸರಳವಾಗಿ ಇರುವುದೆಂದರೆ, ಅದರೊಂದಿಗೆ ಲಘುವಾಗಿ ನಡೆದುಕೊಳ್ಳುವುದೋ ಅಥವಾ ಹಗುರವಾಗಿ ಉಡಾಫೆಯಿಂದ ಮಾತಾಡುವುದೋ ಅಲ್ಲ.

ಮಕ್ಕಳನ್ನು ಪ್ರೀತಿಸುವುದೇ ಅತ್ಯುತ್ತಮ ಕಾರ್ಯ
ಇಮಾಮ್ ಅಸ್ ಸಾಧಿಕ್ ಹೇಳುವಂತೆ, “ನಿಸ್ಸಂದೇಹವಾಗಿ ಅಲ್ಲಾಹ್‍ನು ತಮ್ಮ ಸಂತಾನವನ್ನು ಗಾಢವಾಗಿ ಪ್ರೀತಿಸುವವರ ಮೇಲೆ ಕರುಣೆಯನ್ನು ಹೊಂದುತ್ತಾನೆ.” ಹಾಗೆಯೇ ಇಮಾಮ್ ಮುಂದುವರಿದು ಹೇಳುತ್ತಾರೆ, “ತೂರ್ ಬೆಟ್ಟದ ಮೇಲೆ ಪ್ರವಾದಿ ಮೂಸ ಅಲ್ಲಾಹ್‍ನಿಗೆ ಈ ರೀತಿ ಕೇಳುತ್ತಾರೆ: ‘ನಿನ್ನ ಪ್ರಕಾರ, ಯಾವ ಕ್ರಿಯೆ (ನಡವಳಿಕೆ) ಅತ್ಯಂತ ಉತ್ತಮವೆಂದು ತೋರುತ್ತದೆ?’ ಆಗ ಅಲ್ಲಾಹ್ ಉತ್ತರಿಸಿದ, ‘ಮಕ್ಕಳನ್ನು ಪ್ರೀತಿಸುವುದೇ ಅತ್ಯುತ್ತಮ ಕಾರ್ಯ’ ಎಂದು.”

ಮಕ್ಕಳನ್ನು ಪೋಷಿಸುವ ಹಿರಿಯರೆನಿಸಿಕೊಂಡ ನಾವು ಗಮನಿಸಬೇಕಾದ ಬಹುದೊಡ್ದ ಸಂಗತಿಯೆಂದರೆ, ಮಗುವನ್ನು ಬೆಳೆಸುವ ಮತ್ತು ಪೋಷಿಸುವ ಮೂಲಕ ನಾವು ನಮ್ಮನ್ನು ಪೋಷಿಸಿಕೊಳ್ಳುತ್ತೇವೆ. ಅಕ್ಲಾಕ್ ತಿಳಿಯದ ಪೋಷಕರು ತಮ್ಮ ತಲೆ ಬಿಸಿಮಾಡಿಕೊಂಡು, ಅಸಹನೆ ಕಳೆದುಕೊಂಡು ಸಹನಾಮೂರ್ತಿಯಾಗಿ ಮಗುವನ್ನು ಬೆಳೆಸಲು ಹೇಗೆ ಸಾಧ್ಯ? ಪೋಷಕರು ನಾಚಿಗೇಡಿತನದಲ್ಲಿ ವರ್ತಿಸುತ್ತಾ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಿರಲು, ಮತ್ತೊಬ್ಬ ವ್ಯಕ್ತಿಯ ಬೆನ್ನಿನ ಹಿಂದೆ ಆಡಿಕೊಳ್ಳುವುದು, ಮೋಸ ಮಾಡುವುದು, ಸುಳ್ಳು ಹೇಳುವುದು ಇತ್ಯಾದಿಗಳನ್ನು ಮಾಡುತ್ತಿದ್ದರೆ ಮಕ್ಕಳು ಅದೇ ಉದಾಹರಣೆಗಳನ್ನು ಪಡೆದುಕೊಂಡು ಅಂತೆಯೇ ಆಗುತ್ತಾರೆ. ಅವರು ಹಾಗಾಗದಿರಲು ಯತ್ನಿಸುವ ಪೋಷಕರು ಅವರಿಗಾಗಿಯಾದರೂ ತಮ್ಮ ದುರ್ನಡತೆಗಳನ್ನು ತೊರೆಯಬೇಕಾದ ಸಂದರ್ಭ ಬರುವುದರಿಂದ, ಇದು ಮಕ್ಕಳಿಗೆ ಅದೆಷ್ಟು ಲಾಭದಾಯಕವೋ, ಪೋಷಕರಿಗೆ ಅದಕ್ಕಿಂತಲೂ ಹೆಚ್ಚಿನ ಲಾಭದಾಯಕ.

ಹಾಸುಗೆಗಳನ್ನು ಬೇರ್ಪಡಿಸಿ
ಹಾಗೆಯೇ ಅಕ್ಲಾಕ್ ಇನ್ನೂ ಮುಂದುವರಿದು ಹೇಳುತ್ತದೆ. ಮಗು ಆರು ವರ್ಷವನ್ನು ಮುಟ್ಟಿದಾಗ ಅವರ ಹಾಸುಗೆಗಳನ್ನು ಬೇರ್ಪಡಿಸಿ. ಅವರು ಹೆಣ್ಣು ಮಕ್ಕಳೇ ಆಗಿರಲಿ, ಗಂಡು ಮಕ್ಕಳೇ ಆಗಿರಲಿ. ಈ ವಿಷಯದಲ್ಲಿ ಎರಡು ಬಗೆಯ ಅನುಕೂಲಗಳನ್ನು ಗಮನಿಸಬಹುದು. ಮಗುವು ಸ್ವತಂತ್ರವಾಗಿ, ನಿರಾಲಂಬವಾಗಿ ಧೈರ್ಯವಾಗಿ ಇರುವುದು ಒಂದಾದರೆ, ಆಗ ತಾನೇ ಚಿಗುರುವ ಲೈಂಗಿಕತೆಯ ವಾಸನೆಗಳಿಗೆ ತಮಗೇ ಅರಿವಿಲ್ಲದಂತೆ ಒಳಗಾಗಕೂಡದೆಂಬುದೂ ಕೂಡ.

ಮಗುವಿಗೆ ನೀಡುವ ಸೂಚನೆಗಳಲ್ಲಿ ಮತ್ತು ನಿರೀಕ್ಷೆಗಳಲ್ಲಿ ಸಮಯೋಚಿತ ಮತ್ತು ಸ್ಥಳೋಚಿತ ಬದಲಾವಣೆಗಳೂ ಅಗತ್ಯವಿದೆ ಎಂದು ಅಕ್ಲಾಕ್ ಹೇಳುತ್ತದೆ. ಅದೇನೆಂದರೆ, ಮಗುವು ಮನೆಯಲ್ಲಿ ಮುಕ್ತವಾಗಿಯೂ, ಸ್ವತಂತ್ರವಾಗಿಯೂ ವರ್ತಿಸಲು ಸಮ್ಮತಿಸುವ ಹಾಗೆಯೇ ಮನೆಯಿಂದ ಹೊರಗೆ ಮತ್ತು ಬೇರೆಯೇ ಸ್ಥಳದಲ್ಲಿ ಹಾಗೆ ವರ್ತಿಸುವುದಕ್ಕೆ ಆಸ್ಪದ ಕೊಡಬೇಡಿ ಎಂದು ಹೇಳುತ್ತದೆ. ಇದರ ಮುಖ್ಯ ಉದ್ದೇಶ ಆ ಪರಿಸರವು ಮನೆಯ ರೀತಿಯಲ್ಲಿರದೇ ಮತ್ತೇನೋ ಬೇರೆ ಆಗಿರುವುದರಿಂದ ಮಗುವಿಗೆ ಅದು ಅನುಕೂಲವಾಗಿ ಪರಿಣಮಿಸದಿರಬಹುದು.

ಮಕ್ಕಳ ಅನಪೇಕ್ಷಿತ ನಡವಳಿಕೆಗಳು
ಹಾಗೆಯೇ ಅಕ್ಲಾಕ್ ಮತ್ತೊಂದು ರೀತಿಯಲ್ಲಿ ಮಗುವಿನ ಬಗ್ಗೆ ಎಚ್ಚರಿಸುತ್ತದೆ. “ನಿಮ್ಮ ಮಗುವಿನಿಂದ ಅನೀರಿಕ್ಷಿತವಾದಂತಹ ವರ್ತನೆಗಳು ಅಥವಾ ನಡವಳಿಕೆಗಳು ಕಾಣಬರಬಹುದು. ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿರಿ. ಅದರಿಂದಾಗಿ ಅವರನ್ನು ನಿಮಗೆ ಕ್ಷಮಿಸಲೂ ಸಾಧ್ಯವಾಗುತ್ತದೆ ಮತ್ತು ಅವರನ್ನು ಶಿಕ್ಷಿಸುವ ಆತುರಕ್ಕೆ ನೀವು ಒಳಗಾಗುವುದಿಲ್ಲ.” ಮಗುವು ಮಗುವೇ ಆಗಿರುವುದರಿಂದ ಅನಿರೀಕ್ಷಿತವಾದಂತಹ ವರ್ತನೆಗಳು ಮತ್ತು ನಡವಳಿಕೆಗಳು ಸಹಜ. ಹಾಗಾಗಿ ಸಹನೆ, ಅನುಸರಿಸಿಕೊಳ್ಳುವುದು ಮತ್ತು ಕ್ಷಮಿಸುವುದು ನಮಗೂ ಅಗತ್ಯವಿರುವ ಗುಣಗಳು ಹಾಗೆಯೇ ಅವನ್ನೇ ಮಕ್ಕಳೂ ಕಲಿಯುತ್ತಾರೆ. ಮಕ್ಕಳಲ್ಲಿ ತೀರಾ ಅನಪೇಕ್ಷಿತ ನಡವಳಿಕೆಗಳು ಕಂಡು ಬಂದರೆ ಅದನ್ನು ಬಹಳ ಜಾಣತನದಿಂದಲೂ ಮತ್ತು ಸೂಕ್ಷ್ಮ ರೀತಿಯಿಂದಲೂ ಅದನ್ನು ಸರಿಪಡಿಸಬೇಕು. ಯಾವಾಗಲೂ ಮಕ್ಕಳ ಅನಪೇಕ್ಷಿತ ನಡವಳಿಕೆಯನ್ನು ದೂಷಿಸುತ್ತಾ, ಅದನ್ನು ಖಂಡಿಸುತ್ತಾ ಬೈಯುತ್ತಾ ಸರಿಪಡಿಸಲು ಹೋದರೆ, ಮಕ್ಕಳು ಹಟಮಾರಿಗಳಾಗಿ ಬೆಳೆಯುವುದಲ್ಲದೇ, ನಿಮ್ಮ ಅನಪೇಕ್ಷಿತ ನಡವಳಿಕೆಯನ್ನು ಪದೇ ಪದೇ ಮಾಡಲು ಮೊಂಡು ಬೀಳುತ್ತಾರೆ.
ಇಮಾಂ ಅಲಿ ಹೇಳುವಂತೆ, “ಅತಿಯಾದ ಖಂಡನೆಯು ಹಟಮಾರಿತನದ ಬೆಂಕಿಗೆ ಇಂಧನವಾಗುತ್ತದೆ.”

ಮಕ್ಕಳ ತುಂಟತನಗಳು ಅವರ ಬುದ್ಧಿವಂತಿಕೆಯನ್ನು ತೋರಿಸುವಂತಹುದ್ದೇ ಆಗಿದ್ದು, ಅದು ಮುಂದಿನ ಬೆಳೆಯುವ ದಿನಗಳಲ್ಲಿ ಸ್ಪಷ್ಟಗೊಳಿಸಿಕೊಳ್ಳುತ್ತಾ ಹೋಗುತ್ತದೆ. ಅದಕ್ಕಾಗಿ ಮಕ್ಕಳ ತುಂಟತನಕ್ಕೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುವಂತಿಲ್ಲ ಮತ್ತು ಶಿಕ್ಷಿಸುವ ಅಗತ್ಯವಿಲ್ಲ. ಹಾಗೆಯೇ ಅಕ್ಲಾಕ್ ಮಗುವು ಹೇಳುವ ಸುಳ್ಳುಗಳನ್ನು ಕ್ಷಮಿಸಲು ಹೇಳುತ್ತದೆ. ಏಕೆಂದರೆ, ಮಗುವಿಗೆ ಐದು ವರ್ಷದ ವರೆಗೂ ಆ ಸುಳ್ಳುಗಳು ಕಾಲ್ಪನಿಕವಾಗಿರುವುದು. ಅಲ್ಲದೇ ಕುತೂಹಲದಿಂದ ತನ್ನ ಸುತ್ತ ಮುತ್ತಲಿನ ಪರಿಸರವನ್ನು ಶೋಧಿಸುವ ಬಗೆಯೂ ಅದಾಗಿರುತ್ತದೆ. ಗಮನ ಸೆಳೆಯುವುದಕ್ಕಾಗಿರುತ್ತದೆಯೇ ಹೊರತು ಇನ್ನಾವ ದುರುದ್ದೇಶವೂ ಅವರಲ್ಲಿರುವುದಿಲ್ಲ.

ಮಕ್ಕಳ ಎದುರು ಎಂದಿಗೂ ಜಗಳವಾಡದಿರಲು ಮತ್ತು ಸಾವು ನೋವಿನ ಬಗ್ಗೆ ಅನಗತ್ಯವಾಗಿ ಭಯ ಹುಟ್ಟಿಸುವಂತೆ ಮಗುವಿನ ಎದುರು ಮಾತಾಡದಿರಲು ಅಕ್ಲಾಕ್ ಎಚ್ಚರಿಸುತ್ತದೆ. ಮಕ್ಕಳಿಗೆ ಸೂಚನೆಗಳನು ಕೊಡುವಾಗ ಇತರ ಮಕ್ಕಳ ಹೆಸರುಗಳನ್ನು ಪದೇ ಪದೇ ಹೇಳುತ್ತಿರಬೇಡಿ ಅಥವಾ ಹೋಲಿಸದಿರಿ ಎಂದು ಸೂಚಿಸುವ ಅಕ್ಲಾಕ್, ಹಾಗೆಯೇ ಮತ್ತೊಂದು ವಿಷಯವನ್ನು ಒತ್ತಿ ಹೇಳುತ್ತದೆ.

ಕಥೆಗಳು ಮತ್ತು ನಿರೂಪಣೆ ಹೇಗಿರಬೇಕು?
ತಿಳುವಳಿಕೆ ನೀಡಲು ಕಥೆಗಳು ಬಹಳ ಮುಖ್ಯವಾದ ಮತ್ತು ಪರಿಣಾಮಕಾರಿಯಾದಂತಹ ಮಾಧ್ಯಮಗಳಾಗಿರುತ್ತವೆ. ಹಾಗಾಗಿ ಕೆಟ್ಟದ್ದನ್ನು ಎತ್ತಿ ಹಿಡಿಯದಂತಹ, ಸ್ನೇಹಿತರ ಹಕ್ಕು ಮತ್ತು ಕರ್ತವ್ಯಗಳನ್ನು ಎತ್ತಿ ಹಿಡಿಯುವಂತಹ, ವಿಶ್ವಾಸಕ್ಕೆ ಒತ್ತುಕೊಡುವಂತಹ ಕಥೆಗಳನ್ನು ನಿರೂಪಿಸಿ ಎಂಬ ಸ್ಪಷ್ಟ ನಿರ್ದೇಶನಗಳಿವೆ.
ಕುರ್‍ಆನ್‍ನಲ್ಲಿ (12:111) ಹೇಳುವಂತೆ “(ಗತಿಸಿ ಹೋದ) ಅವರ ಕಥೆಗಳಲ್ಲಿ ಬುದ್ಧಿಶಾಲಿಗಳಿಗೊಂದು ಪಾಠವುಂಟು.” ಹೌದು, ಹೇಳುವ ಕಥೆಗಳಲ್ಲಿ ತಿಳುವಳಿಕೆ ಇರಬೇಕು. ಚಿಂತನೆಗೆ ಒರೆ ಹಚ್ಚ ಬೇಕು. ಹಾಗೆಯೇ ಸನ್ನಡತೆಗಳಿಗೆ ಪ್ರೇರಣೆ ನೀಡುವಂತಹದ್ದಾಗಿರಬೇಕು.

ಹಾಗಾಗಿ ಅಕ್ಲಾಕ್ ಮಕ್ಕಳಿಗೆ ಕಥೆಗಳನ್ನು ಹೇಳುವಾಗ ಕೆಲವು ವಿಚಾರಗಳನ್ನು ಗಮನಿಸಲು ಸೂಚಿಸುತ್ತದೆ.
1. ಮಗುವಿನ ವ್ಯಕ್ತಿತ್ವ ಮತ್ತು ಮನೋಧರ್ಮ ವಿಕಾಸವಾಗುವಂತಹ ಕಥೆಗಳನ್ನು ಹೇಳಬೇಕು.
2. ಮಗುವಿನ ವಯಸ್ಸು, ಮಾನಸಿಕ ಗುಣಮಟ್ಟ ಮತ್ತು ಬುದ್ಧಿವಂತಿಕೆಯನ್ನು ಅನುಸರಿಸಿ ಕಥೆಗಳನ್ನು ಆಯ್ದುಕೊಳ್ಳಬೇಕು.
3. ಕಥೆಗಳಲ್ಲಿ ಅತಿರೇಕತನ, ಸುಳ್ಳುಗಳು ಮತ್ತು ಬಾಯಿ ನೆವೆಯ ಗಾಳಿ ಸುದ್ಧಿಗಳು ಇರಬಾರದು.
4. (ಬಹಳ ಮುಖ್ಯವಾಗಿ) ಮಕ್ಕಳ ಪ್ರಶ್ನೆಗಳಿಗೆ ಆ ಕಥೆಗಳಲ್ಲಿ ಉತ್ತರಗಳಿರಬೇಕು.
5. ಅತ್ಯುತ್ತಮವಾದ ಕಥೆಯನ್ನು ಆಯ್ದುಕೊಳ್ಳಬೇಕು. ಹೇಗೆ ಅಲ್ಲಾಹನು ಮಹಮದರಿಗೆ ತನ್ನ ವಾಕ್ಯವನ್ನು ಮನದಟ್ಟಾಗುವಂತೆ ನಿರೂಪಿಸಿಕೊಟ್ಟನೋ ಹಾಗೆ. (ಕುರ್‍ಆನ್: 12:3) “(ಹೇ ಮಹಮದರೇ) ನಾವು ಈ ಕುರ್‍ಆನನ್ನು ನಿಮಗೆ ‘ವಹೀ’ ಮಾಡಿ ಯಥಾರ್ಥ ಸಂಭವಗಳನ್ನು ಅತ್ಯುತ್ತಮ ಶೈಲಿಯಲ್ಲಿ ವಿವರಿಸಿ ಕೊಡುತ್ತೇವೆ. – ಇದಕ್ಕೆ ಮೊದಲಾದರೋ, ನೀವು (ಈ ಸಂಭವಗಳ ಬಗ್ಗೆ ಏನೇನೂ) ತಿಳುವಳಿಕೆ ಇಲ್ಲದವರಾಗಿದ್ದಿರಿ.” ಹಾಗೆಯೇ ಮಕ್ಕಳಿಗೆ ಕಥೆಯನ್ನು ನಾವು ನಿರೂಪಿಸಿದ ಮೇಲೆ ವಿಷಯದ ಬಗ್ಗೆ ಅವರಿಗೆ ತಿಳುವಳಿಕೆ ಉಂಟಾಗಬೇಕು.
6. ಸತ್ಯ ಮತ್ತು ಸನ್ನಡತೆಯು ಸದಾ ಕಥೆಗಳಲ್ಲಿ ಹಾಸುಹೊಕ್ಕಾಗಿರಬೇಕು.
7. ಕಥೆಯಲ್ಲಿನ ಮುಖ್ಯ ಪಾತ್ರ ಅಥವಾ ನಾಯಕನಾಗಿರುವಂತವನು ಕೆಟ್ಟ ನಡತೆಗಳನ್ನೂ, ದುರ್ವಿಚಾರಗಳನ್ನೂ ಹೊಂದಿರಬಾರದು.
8. ಕಥೆಗಳು ಸಿಕ್ಕಾಪಟ್ಟೆ ಉದ್ದವಾಗಿದ್ದು ಮಗುವಿಗೆ ಸುಸ್ತಾಗಬಾರದು.
9. ಮಗುವು ಕೇಳುವ ಪ್ರಶ್ನೆಗಳಿಗೆ ಅಸಹನೆಗೊಳ್ಳುವುದು ಬೇಡ. ನಿಮ್ಮ ಅಸಹನೆಯ ದೌರ್ಬಲ್ಯವು ಮಗುವಿನ ಕುತೂಹಲವನ್ನು ನಾಶಗೊಳಿಸುವುದು ಬೇಡ.
ನನ್ನ ದೃಷ್ಟಿಯಲ್ಲಿ ಕಥೆಗಳ ಬಗ್ಗೆ ಇರುವಂತಹ ಈ ನಿಯಮಗಳು ಬರಿದೇ ಮಕ್ಕಳಿಗೆ ಹೇಳುವ ಕಥೆಗಳಲ್ಲಿ ಮಾತ್ರವಲ್ಲದೇ ಎಲ್ಲಾ ಕಥೆಗಳಲ್ಲೂ ಇರಬೇಕಾದ ಅಂಶಗಳೆಂದು ಅನ್ನಿಸುತ್ತದೆ. ಅಷ್ಟೇ ಮಾತ್ರವಲ್ಲ, ಈ ನೀತಿ ಈಗ ಸಿನಿಮಾ ಮಾಡುವ ಮಂದಿಗೂ ಅತ್ಯಗತ್ಯವಾಗಿ ತಿಳಿಸಬೇಕಿದೆ. ಸಿನಿಮಾ ನಿರ್ದೇಶಕರು ಈ ಸೂಚನೆಗಳನ್ನು ಫೋಟೋ ಚೌಕಟ್ಟಿನಲ್ಲಿ ಹಾಕಿಕೊಂಡು ದಿನಬೆಳಗಾದರೆ ತಮ್ಮ ಕಣ್ಣೆದುರು ಇರುವಂತೆ ಹಾಕಿಕೊಳ್ಳುವಂತಹ ಅಗತ್ಯವಿದೆ ಎಂದು ನನ್ನ ಭಾವನೆ.

ಪ್ರಾರ್ಥನೆ ಮತ್ತು ಉಪವಾಸ
ಇಮಾಂ ಅಸ್-ಸಾಧಿಕ್ ಹೇಳುವಂತೆ, ಮಗುವು ಐದು ವರ್ಷದ್ದಾದಾಗ ಸಲಾತ್ ಪ್ರಾರ್ಥಿಸುವ ಬಗ್ಗೆ ತಿಳಿಸಿರಿ. ಏಳು ವರ್ಷ ತಲುಪಿದಾಗ ಪ್ರಾರ್ಥಿಸಲು ಹೇಳಿಕೊಡಿ. ಹಾಗೆಯೇ ಉಪವಾಸವನ್ನೂ ಮಾಡಲು ಹೇಳಿಕೊಡಿ. ಆದರೆ, ಕಠಿಣವಾಗಿ ಉಪವಾಸದ ವ್ರತವನ್ನು ಹೇರುವ ಅಗತ್ಯವಿಲ್ಲ. ಅರ್ಧ ದಿನವೋ ಅಥವಾ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಕಾಲ ಉಪವಾಸ ಮಾಡಲಿ. ಮಗುವಿನ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರಲಿ ಹೊರತು, ನೀವು ಇಚ್ಛಿಸಿದ ರೀತಿಯಲ್ಲಿ ಏನೂ ಬಲತ್ಕರಿಸುವ ಅಗತ್ಯವಿಲ್ಲ. ಹಾಗೆ ಉಪವಾಸವನ್ನು ಅಭ್ಯಾಸ ಮಾಡುವಾಗ ಅವರ ಹಸಿವು ತಡೆದುಕೊಳ್ಳುವ ಸಾಮರ್ಥ್ಯವೂ ಹೆಚ್ಚುತ್ತದೆ. ಮಗುವು ಒಂಭತ್ತು ವರ್ಷ ತಲುಪಿದಾಗ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಉಪವಾಸ ಮಾಡಲಿ.
ಆರಾಧನೆಯೆಂಬುದು ಅತ್ಯಂತ ಮುಖ್ಯ ಆದರೆ, ಬಹು ಮುಖ್ಯವಾದ ಪ್ರವಾದಿ ಮಹಮದರು ಹೇಳುವಂತಹ ಒಂದಂಶ ನೆನಪಿನಲ್ಲಿಟ್ಟುಕೊಳ್ಳಬೇಕು. “ಇಸ್ಲಾಂ ಅಲ್ಲಾಹ್‍ನ ಬಹು ದೃಢವಾದ ಧರ್ಮ. ಸಲಿಲವಾಗಿ ಮುನ್ನಡೆಯಿರಿ ಮತ್ತು ಅಲ್ಲಾಹ್‍ನ ಆರಾಧಿಸಲು ನಿಮ್ಮ ಹೃದಯವು ನಿರಾಶಾದಾಯಕವಾಗುವಂತೆ ಒತ್ತಡಕ್ಕೆ ತಳ್ಳಿಕೊಳ್ಳುವುದು ಬೇಡ.”

ಪೋಷಕರ ಕರುಣೆ ಮತ್ತು ಮಮತೆಯೇ ಮಗುವಿನ ವ್ಯಕ್ತಿತ್ವವನ್ನು ಸನ್ನಡತೆಯ ಮೂಲಕ ರೂಪಿಸುವ ಪರಮೋಚ್ಚ ಸಾಧನ ಎಂಬುದೇ ನಾನು ಕಂಡುಕೊಂಡ ಅಕ್ಲಕ್‍ನ ಧ್ವನಿ. “ನೀವು ಅವರ ಜೊತೆ ಸೌಮ್ಯವಾಗಿರುವುದು ಅವರ ಮೇಲೆ ಅಲ್ಲಾಹನ ಮಹತ್ತಾದ ಕರುಣೆಯಾಗಿದೆ. ನೀವು ಓರ್ವ ಕ್ರೂರ ಸ್ವಭಾವದವರೋ, ಕಠೋರ ಮನಸ್ಕರೋ ಆಗಿರುತ್ತಿದ್ದರೆ, ನಿಮ್ಮ ಸುತ್ತುಮುತ್ತಲಿಂದ ಅವರು ಚದುರಿಹೋಗುತ್ತಿದ್ದರು.” (ಕುರ್‍ಆನ್: 3:159)

ಹದವರಿತ ಸೂತ್ರವಿರಲಿ ಪೋಷಕರಲ್ಲಿ
ಮಗುವೊಂದು ಗಾಳಿಪಟವನ್ನು ಏರಿಸಲು ಪ್ರಯತ್ನಿಸುತ್ತಿತ್ತು. ಪಟದ ನಡುವೆ ಬಿಗಿದಿರುವ ಸೂತ್ರವು ಸಡಿಲವಾದ್ದರಿಂದ ಅದಕ್ಕೆ ಅದನ್ನು ಏರಿಸಲೂ, ಹಾರಿಸಲೂ ಆಗುತ್ತಿರಲಿಲ್ಲ. ಹಾಗಾಗಿ, ದಾರವನ್ನು ಬಿಗಿಗೊಳಿಸಿತು. ಈಗ ಸೂತ್ರವು ಬಿಗಿಯಾದ ಕಾರಣದಿಂದಲೂ ಪಟವು ಏರಲಿಲ್ಲ ಮತ್ತು ಹಾರಲು ಆಗಲಿಲ್ಲ. ಗಾಳಿ ಪಟದ ವಿನ್ಯಾಸ ಮತ್ತು ಅಳತೆಯ ಪ್ರಕಾರ ಅದರ ನಡುವಲ್ಲಿ ಕೇಂದ್ರಗಳನ್ನು ಗುರುತು ಮಾಡಿಕೊಂಡು, ನಂತರ ಪಟದ ಗಾತ್ರದ ಅನುಗುಣವಾಗಿ ಸೂತ್ರವನ್ನು ಕಟ್ಟುವ ನಡುವಿನ ಅವಕಾಶವನ್ನು ಗುರುತಿಸಿಕೊಂಡು ದಾರ ಕಟ್ಟಬೇಕು. ನಂತರ ಅದು ಏರುತ್ತದೆ. ಹಾರುತ್ತದೆ.

ಗಾಳಿಪಟದ ವಿಷಯದಲ್ಲಿ ಪಟಗಳ ಅಳತೆ ಮತ್ತು ವಿನ್ಯಾಸಕ್ಕೆ ತಕ್ಕಂತೆ ಸೂತ್ರಗಳನ್ನು ಕಟ್ಟುವ ಹದವರಿತಿರುವಂತೆ, ಮಕ್ಕಳ ವಿಷಯದಲ್ಲಿ ಒಂದು ಪಾಠವಿದೆ.
“ನೀವೆಲ್ಲರೂ ಇಂದು ಈ ಸಮಾಜದ ಮಕ್ಕಳೇ. ಹಾಗೆಯೇ ಹೊಂದಿರುವ ಭರವಸೆಯ ಪ್ರಕಾರ ನೀವು ನಾಳಿನ ಸಮಾಜದ ನಾಯಕರು” ಎಂದು ಇಮಾಂ ಹುಸೇನ್ ತನ್ನ ಮಕ್ಕಳನ್ನೂ ಮತ್ತು ತಮ್ಮ ಸೋದರರ ಮಕ್ಕಳನ್ನೂ ಕರೆದು ಹೇಳುವ ಮಾತಿದು.
ಮಕ್ಕಳಿಗೆ ತಮ್ಮ ಇತಿ ಮಿತಿ ಮತ್ತು ಸಾಮರ್ಥ್ಯದ ಬಗ್ಗೆ ಸ್ಪಷ್ಟ ಅರಿವು ಇರಬೇಕಾಗಿರುವುದರ ಜೊತೆಗೆ, ಇಂದಿನ ತಮ್ಮ ಬೆಳವಣಿಗೆಯ ಪ್ರತಿಫಲವಾಗಿ ನಾಳಿನ ತಮ್ಮದೇ ಪ್ರತಿಮೆಯ ಸ್ಪಷ್ಟ ಚಿತ್ರಣ ನೀಡಬೇಕೆಂದು ಇಲ್ಲಿ ವ್ಯಕ್ತವಾಗುತ್ತದೆ.

ಮೇರೆ ಮೀರದಿರಲಿ
ಇಮಾಂ ಅಸ್-ಸಾಧಿಕ್ ಹೇಳುವಂತೆ, “ತಮ್ಮ ಮಕ್ಕಳ ಬಗೆಗಿನ ಒಳ್ಳೆಯತನ ಮತ್ತು ಪ್ರೀತಿಯಲ್ಲಿ, ಮಿತಿ ಮೀರಿದ, ಎಲ್ಲೆಯನ್ನು ದಾಟುವಂತಹ ಸನ್ನಿವೇಶಗಳನ್ನು ಸೃಷ್ಟಿಸುವವನು ಒಬ್ಬ ಕೆಟ್ಟ ತಂದೆಯಾಗುತ್ತಾನೆ!”
ಹೌದು, ಸಸಿಗೆ ಎಷ್ಟು ಅಗತ್ಯವಿರುವುದೋ ಅದಕ್ಕಿಂತ ಹೆಚ್ಚಾದ ನೀರು ಮತ್ತು ಗೊಬ್ಬರದ ಪೋಷಣೆಗಳನ್ನು ಕೊಡಬೇಕೇ ಹೊರತು, ಬೆಳೆದ ಮರಕ್ಕೆ ನೀಡುವ ಉಪಚಾರ ನೀಡಿದರೆ ಆ ಸಸಿ ಹಾಳಾಗುತ್ತದೆ ಎಂಬ ಎಚ್ಚರಿಕೆ ಅಲ್ಲಿ ಧ್ವನಿತವಾಗುತ್ತದೆ. ಹಾಗಾಗಿ ಮಕ್ಕಳ ವಯಸ್ಸು, ಬೆಳವಣಿಗೆಯ ಹಂತಗಳು, ಅವರ ಲಿಂಗ, ಅವರು ಪಡೆಯುತ್ತಿರುವ ವಿದ್ಯಾಭ್ಯಾಸ; ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅಗತ್ಯವಿರುವಂತಹ ಕ್ರಮಗಳನ್ನು ಪೋಷಕರು ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯ.

ಮಕ್ಕಳನ್ನು ಮುಕ್ತವಾಗಿರಲು ಬಿಡಿ ಎಂದು ಹೇಳುತ್ತಲೇ, ತಾವು ಹೊಂದಿರುವಂತಹ ಸ್ವಾತಂತ್ರ್ಯ ತಮಗೇ ತೊಂದರೆಯಾಗದಂತೆ ಅಥವಾ ತಮ್ಮ ನಾಶಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುವ ಮಾತುಗಳಲ್ಲಿರುವ ವ್ಯತ್ಯಾಸ ಮತ್ತು ಸಂಬಂಧವನ್ನು ಗಮನಿಸಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳುವಷ್ಟು ಆ ಸ್ವಾತಂತ್ರ್ಯವೆಂಬುದು ಇರಬೇಕೇ ಹೊರತು, ಆತ್ಮನಾಶಕ್ಕೆ ಕಾರಣವಾಗುವಂತಾಗಬಾರದು ಎಂಬುದೇ ಇಲ್ಲಿ ಧ್ವನಿಸುವ ಕಳಕಳಿ.

ಗಾಳಿಪಟಕ್ಕೆ ಸೂತ್ರವನ್ನು ಕಟ್ಟಿರುವ ಹಾಗೆ, ಅದರ ಸೂತ್ರವನ್ನು ಹಿಡಿದಿರುವ ಹಾಗೆ. ಅಲ್ಲೊಂದು ಹದವಿದೆ. ಹಾಗೆಯೇ ಮಕ್ಕಳ ವಯಸ್ಸು, ಬೆಳವಣಿಗೆಯ ಹಂತ, ಅದರ ಸುತ್ತಮುತ್ತಲಿನ ಪರಿಸರ ಇತ್ಯಾದಿಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅವರಿಗೆ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಳ್ಳುವ ಶಿಕ್ಷಣವನ್ನು ಕೊಡಬೇಕು. ಪಟವು ಆಕಾಶದಲ್ಲಿ ಹಾರುತ್ತಲೇ ಇದ್ದರೂ ಅದರ ಸೂತ್ರದ ದಾರವನ್ನು ನಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಹಾಗೆ, ಮಕ್ಕಳನ್ನು ಸ್ವತಂತ್ರವಾಗಿ, ಮುಕ್ತವಾಗಿ ಬಿಟ್ಟಿದ್ದರೂ, ಅದರ ಬಗ್ಗೆ ತೀವ್ರ ಗಮನವನ್ನು ಹಿಡಿದಿರಬೇಕು, ಆದರೆ ಅದು ಅವರಿಗೆ ಬಂಧನವೆಂದೂ ಆಗಬಾರದು. ಇದು ಪೋಷಕರಿಗೆ ಇರಬೇಕಾದ ಒಂದು ವಿಶೇಷ ಕಲೆ.

ಸ್ವಾತಂತ್ರ್ಯದ ಜೊತೆಜೊತೆಗೇ ಜವಾಬ್ದಾರಿಯನ್ನೂ ಕಲಿಸಿದರಾದರೆ ಅಲ್ಲಿ ಸಮಸ್ಯೆ ಇರುವುದಿಲ್ಲ. ಹಕ್ಕಿನ ಬಗ್ಗೆ ಮಾತ್ರವೇ ಆಲೋಚಿಸುತ್ತಾ ಕರ್ತವ್ಯವನ್ನು ಮರೆತರೆ ಅಲ್ಲಿ ಸ್ವಾತಂತ್ರ್ಯದ ದುರುಪಯೋಗವಾಗುತ್ತದೆ. ಮಕ್ಕಳ ಮನೋಭೂಮಿ ಬಹಳ ಮೆದು, ಫಲವತ್ತು ಮತ್ತು ಸೂಕ್ಷ್ಮವಾಗಿರುವುದರಿಂದ ಎಲ್ಲಾ ವಿಷಯಗಳಲ್ಲಿ ಪೋಷಕರೂ ಸೂಕ್ಷ್ಮವೂ ಮತ್ತು ಪ್ರಜ್ಞಾವಂತಿಕೆಯಿಂದ ಕೂಡಿರುವ ಎಚ್ಚರಿಕೆಯನ್ನು ಹೊಂದಿರಲೇ ಬೇಕಾಗಿರುವುದು ಅನಿವಾರ್ಯ.

ಗಾಳಿಯ ಪಟವನ್ನು ಹಾರಿಸುವಾಗ ಅದು ಕಣ್ಣಿಗೆ ಕಾಣುವಂತೆ ಗಗನದ ಬಯಲಲ್ಲಿ ಹಾರುವಾಗ ನಮಗೆ ಅದರ ಸ್ಪಷ್ಟ ಚಿತ್ರವಿರುತ್ತದೆ. ಹಾಗೆಯೇ ಅದು ಯಾವುದಾದರೂ ಮರಕ್ಕೋ, ಗಿಡಕ್ಕೋ, ಲೈಟ್ ಕಂಭಕ್ಕೋ ಸಿಕ್ಕಿಹಾಕಿಕೊಳ್ಳುವುದು ಎಂಬ ಸೂಚನೆ ಕಾಣುತ್ತಿದ್ದಂತೆ ಅದನ್ನು ಎಳೆದುಕೊಳ್ಳುವುದೋ ಅಥವಾ ಮಾರ್ಗ ಬದಲಾಯಿಸುವುದೋ ಮಾಡಬೇಕಾಗುತ್ತದೆ. ಪಟವು ಯಾವುದಕ್ಕೋ ಸಿಕ್ಕಿ ಹರಿದು ಹೋಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಅಲ್ಲಿದೆ.

ಸೂಕ್ಷತೆ ಮತ್ತು ಪ್ರಜ್ಞಾವಂತಿಕೆ
ಲೈಂಗಿಕ ಅಂಗಗಳ ಕುರಿತಾದ ಹಿಂಜರಿಕೆಯಲ್ಲಿ ತಾಯಂದಿರು ಗಂಡಾಗಲಿ, ಹೆಣ್ಣಾಗಲಿ, ಅವಕ್ಕೆ ತಮ್ಮ ಲೈಂಗಿಕ ಅಂಗಗಳನ್ನು ಶುದ್ಧವಾಗಿಟ್ಟುಕೊಳ್ಳದನ್ನು ಕಲಿಸದೇ ಹೋದರೆ ಅಸ್ಪಚ್ಛತೆಯಿಂದ ಮಕ್ಕಳು ತೊಂದರೆಗಳಿಗೆ ಈಡಾಗಬೇಕಾಗುತ್ತದೆ. ಸ್ನಾನ ಮಾಡುವಾಗ ಮತ್ತು ವಿಸರ್ಜನೆಗಳನ್ನು ಪೂರೈಸಿದ ಬಳಿಕ ಗುಪ್ತಾಂಗಗಳನ್ನು ಶುದ್ಧವಾಗಿ ಇರಿಸಿಕೊಳ್ಳುವಂತಹ ಶಿಕ್ಷಣ ಕೊಡಬೇಕು. ಆದರೆ, ಅವುಗಳ ಬಗ್ಗೆ ಪ್ರಚೋದನೆಯೋ ಅಥವಾ ಕೌತುಕವೋ ಹುಟ್ಟುವಂತೆ ಲೈಂಗಿಕಾಂಗಗಳೊಡನೆಯಾಗಲಿ, ಎದೆ ಅಥವಾ ತೊಡೆಗಳೊಂದಿಗಾಗಲಿ ಆಡುವಂತಾಗಬಾರದು.

ಇಲ್ಲಿ ಮತ್ತೊಂದು ಎಚ್ಚರಿಕೆಯನ್ನು ಗಮನಿಸಬೇಕು. ಮಕ್ಕಳು ಒಂದು ಹಂತಕ್ಕೆ, (ಸುಮಾರು ಆರು ವರ್ಷ) ತಮ್ಮ ಬೆತ್ತಲೆ ದೇಹದೊಡನೆ ಮುಕ್ತವಾಗಿ ಹೊರಗೆ ಬರುವುದನ್ನೋ ಅಥವಾ ಅದರ ಬಗ್ಗೆ ಗಮನ ಕೊಡದೇ ಇರುವುದನ್ನು ಪ್ರೋತ್ಸಾಹಿಸದೇ ಖಾಸಗೀ ವಿಷಯಗಳನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳುವ ಬಗ್ಗೆ ಸೂಕ್ಷ್ಮತೆಯನ್ನು ಬೆಳೆಸಬೇಕು.
ಪೋಷಕರು ಮತ್ತು ಮನೆಯ ಸದಸ್ಯರ ಮುದ್ದಿಗೆ ಒಳಗಾಗುವುದಕ್ಕೂ, ಅಪರಿಚಿತರಿಂದ ಮತ್ತು ಅನಪೇಕ್ಷಿತ ಸಂಸ್ಕಾರ ಹೊಂದಿರುವ ವ್ಯಕ್ತಿಗಳ ಮುದ್ದಿಗೆ ಒಳಗಾಗುವುದಕ್ಕೂ ಮಕ್ಕಳಿಗೆ ಅಷ್ಟೇನೂ ಸೂಕ್ಷ್ಮತೆ ಇರುವುದಿಲ್ಲ. ಆದರೆ ಮಕ್ಕಳಿಗೆ ತಿಳಿಯದೇ ಇರುವ, ಅವರ ಅರಿವಿಗೆ ಸಿಗದೇ ಇರುವಂತಹ ಲೋಕವನ್ನು ನೋಡುತ್ತಿರುವ ನಮಗೆ ಅದರ ಬಗ್ಗೆ ಸ್ಪಷ್ಟತೆಯೂ ಮತ್ತು ಪ್ರಜ್ಞಾವಂತಿಕೆಯೂ ಇರಬೇಕಾಗಿರುವುದು ಅನಿವಾರ್ಯ. ಹಾಗಾಗಿ ನಿಬಂಧನೆಗಳಂತಲ್ಲದಿದ್ದರೂ, ಅನುಮಾನಿಸದಂತಹ ಎಚ್ಚರಿಕೆಯಿಂದಲೇ ಇರುವುದನ್ನು ಮಕ್ಕಳಿಗೆ ಕಲಿಸುವುದು ಬಹಳ ಮುಖ್ಯ.

ಎಲ್ಲಾ ಅಪರಿಚಿತರನ್ನೂ, ಕುಟುಂಬದ ಸದಸ್ಯರಲ್ಲದವರನ್ನು ವಿಶ್ವಾಸ ಮತ್ತು ಗೌರವವೇ ಇಲ್ಲದಂತೆ ಅನುಮಾನದಿಂದ ನೋಡುವಂತಾಗಬಾರದು, ಆದರೆ ಎಚ್ಚರಿಕೆಯಿಂದಲೂ ಇರಬೇಕೆಂಬ ಸೂಕ್ಷ್ಮ ಪ್ರಜ್ಞೆಯನ್ನು ಬೆಳೆಸುವುದು ಬಹಳ ಮುಖ್ಯವಾಗುತ್ತದೆ. ಇವೆಲ್ಲವೂ ಹದವರಿಯದ ಪೋಷಕರಿಗೆ ನಿಜಕ್ಕೂ ಅರ್ಥ ಮಾಡಿಕೊಳ್ಳುವುದೂ ಕಷ್ಟವೇ.

ರೋಗದ ಯೋಗ
ಮಕ್ಕಳಿಗೆ ಎಷ್ಟೋ ಬಾರಿ ಶಾಲೆಗೆ ಹೋಗಲು ಇಷ್ಟವಾಗದೇ ಹೋದರೆ ಹೊಟ್ಟೆಯೋ, ತಲೆಯೋ ಯಾವುದಾದರೊಂದು ನೋವು ಎಂದು ಕೂತು ಬಿಡುತ್ತಾರೆ. ಏಕೆಂದರೆ ಅವರಿಗೆ ರೋಗ ತರುವ ಯೋಗದ ಬಗ್ಗೆ ತಿಳುವಳಿಕೆ ಇರುತ್ತದೆ. ಹೊಟ್ಟೆ ನೋವು ಅಥವಾ ಇನ್ನೇನೋ ಆಯಿತೆಂದರೆ, ಪೋಷಕರೂ, ಶಿಕ್ಷಕರೂ ಗಮನ ಹರಿಸುತ್ತಾರೆ. ಬೈಯುವ ಸಮಯದಲ್ಲೂ ಬೈಯುವುದಿಲ್ಲ. ಸಾಂತ್ವಾನ ಹೇಳುತ್ತಾರೆ. ಓದುವುದೋ ಅಥವಾ ಬೇರೆ ಕೆಲಸ ಮಾಡದಿದ್ದರೂ ಕ್ಷಮೆ ಇದೆ. ಇಷ್ಟೆಲ್ಲಾ ಇರುವಾಗ ಸುಳ್ಳು ರೋಗವನ್ನು ತರಿಸಿಕೊಂಡು ಈ ಸುಖವನ್ನು ಅನುಭವಿಸಲು ಸಹಜವಾಗಿಯೇ ಹಲವು ಮಕ್ಕಳು ಆಸೆ ಪಡುತ್ತಾರೆ.

ಇಂಥಾ ಸಮಯದಲ್ಲಿ ಅವರಿಗೆ ಇರುವ ರೋಗವು ನಿಜವೋ ಸುಳ್ಳೋ ಎಂದು ತಿಳಿಯುವುದೇ ಕಷ್ಟವಾಗುತ್ತದೆ. ಏನಿಲ್ಲ ಎಂದು ನಿರಾಕರಿಸಲೂ ಭಯ. ಒಂದು ವೇಳೆ ನಿಜವಾಗಿ ಅವರಿಗೆ ತೊಂದರೆ ಇದ್ದು ಅದು ಮತ್ತೊಂದು ದೊಡ್ಡ ತೊಂದರೆಗೆ ದಾರಿಯಾದರೆ ಎಂದು. ಹಾಗೆಯೇ ಸುಳ್ಳಿನ ರೋಗಕ್ಕೆ ಅನವಶ್ಯಕವಾದ ಮದ್ದು ಕೊಡಬಾರದೂ ಎಂಬುದಿದೆ. ಹಾಗೆ ಕೊಡುವ ಮದ್ದಿನಿಂದ ಮತ್ತೊಂದು ತೊಂದರೆ ಏನಾದರೂ ಹುಟ್ಟಿಕೊಳ್ಳಬಹುದು. ಹಾಗೆಯೇ ಏನೂ ಇಲ್ಲದೇ ಎಲ್ಲರ ಗಮನವನ್ನು ಸೆಳೆಯುತ್ತಾ, ಶಿಕ್ಷಕರ, ಪೋಷಕರ ಸಮಯ, ಶ್ರಮ ಮತ್ತು ಹಣವನ್ನು ವ್ಯರ್ಥಗೊಳಿಸುವ ಸುಳ್ಳಿನ ರೋಗದ ಸುಖದ ಯೋಗ ಬರೀ ಮಕ್ಕಳಿಗೆ ಕೆಲಸದಿಂದ ತಪ್ಪಿಸಿಕೊಳ್ಳಲು, ಅಥವಾ ಬೈಗುಳದಿಂದ ತಪ್ಪಿಸಿಕೊಳ್ಳಲಾಗುತ್ತದೆ. ಆದರೆ ಅದಕ್ಕೆ ಇನ್ನಾವುದರ ವ್ಯರ್ಥತೆಯ ಬಗ್ಗೆ ಅರಿವಿರುವುದಿಲ್ಲ.

ಹಾಗಾಗಿಯೇ ಪೋಷಕರು ಮತ್ತು ಶಿಕ್ಷಕರು, ವೈದ್ಯರಿಗೆ ಪ್ರಾಥಮಿಕವಾಗಿ ತಿಳಿದಿರಬೇಕಾಗಿರುವಂತಹ ರೋಗ ಲಕ್ಷಣಗಳನ್ನು ಗುರುತಿಸಲು ಕಲಿತಿರಬೇಕು. ಸುಳ್ಳಿಗೂ ಕೂಡ ಕೆಲವು ಗುಣಲಕ್ಷಣಗಳಿದ್ದು ಅವನ್ನೂ ತಿಳಿದಿರಬೇಕು. ಮಕ್ಕಳು ಹುಸಿ ರೋಗವನ್ನು ತೋರಿಸುವ ಲಕ್ಷಣಗಳನ್ನು ಗುರುತಿಸಿದರೆ ಅವರಿಗೆ, ನಿನಗೆ ರೋಗವಿರಲಿ, ಇಲ್ಲದಿರಲಿ ನಾವು ನಿನ್ನನ್ನು ಪರಿಗಣಿಸುತ್ತೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು.

ಸಾಮಾನ್ಯವಾಗಿ ಸಹಜವಾದ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಆಪ್ತವಾಗಿ ವರ್ತಿಸದೇ, ಅವರಿಗೆ ತೊಂದರೆ ಆದಾಗ ಮಾತ್ರ ವಿಶೇಷ ಗಮನ ಕೊಡುತ್ತಾರೆ ಎಂಬುದು ಮಕ್ಕಳ ಅರಿವಿಗೆ ಬಂದರೆ, ಗಮನ ಸೆಳೆಯಲು ಹುಸಿ ರೋಗವನ್ನು ತಂದುಕೊಳ್ಳುತ್ತಾರೆ. ಹಾಗಾಗಿ, ಮಕ್ಕಳಿಗೆ ಅನವಶ್ಯಕವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ತಿಳುವಳಿಕೆ ನೀಡಿರಬೇಕು. ರೋಗಗಳು ಬಂದಂತೆ ನಟಿಸುವುದರಿಂದ ಕಳೆದುಕೊಳ್ಳುವ ಸಂತೋಷದ ಬಗ್ಗೆಯೂ ಅವರಿಗೆ ಎಚ್ಚರಿಕೆ ಇರುವಂತೆ ನೋಡಿಕೊಳ್ಳಬೇಕು. ಕೆಲವು ಅಭಿನಯ ಚತುರ ಮಕ್ಕಳ ವರ್ತನೆಗಳನ್ನು ಅಷ್ಟು ಸುಲಭವಾಗಿ ಗ್ರಹಿಸಲು ಸಾಧ್ಯವಿಲ್ಲ. ಆದರೆ ಪೋಷಕರು ಮತ್ತು ಶಿಕ್ಷಕರು ಆ ಸೂಕ್ಷ್ಮತೆಯನ್ನು ಅರಿತರೆ ಮಾತ್ರವೇ ಸಮಾಲೋಚನೆ ಮಾಡಲೂ ಸಾಧ್ಯವಾಗುವುದು. ಖಂಡಿತವಾಗಿ ಹುಸಿರೋಗ ಪ್ರದರ್ಶನದ ಕಾರಣಕ್ಕೆ ಮಕ್ಕಳನ್ನು ದಂಡಿಸುವುದೋ ಅಥವಾ ನಿಂದಿಸುವುದೋ ಮಾಡಬಾರದು.

ಪ್ರವಾದಿ ಮಹಮದ್ ಒಂದು ಎಚ್ಚರಿಕೆಯನ್ನು ಕೊಡುತ್ತಾರೆ “ಮಕ್ಕಳಿಗೆ ನಾವು ನೀಡುವ ಜ್ಞಾನವು ಅವರಲ್ಲಿ ಶಿಲಾ ಶಾಸನದಂತೆ ರೂಪುಗೊಳ್ಳುತ್ತದೆ” ಎಂದು.
ಮಕ್ಕಳ ಬೆಳವಣಿಗೆಯ ಹಂತಗಳಿಗೆ ತಕ್ಕಂತೆ ಅವರಿಗೆ ನೀಡುವ ಶಿಕ್ಷಣ ಮತ್ತು ಗಮನಗಳ ಮೇಲೂ ಅಕ್ಲಾಕ್ ಕಾಳಜಿ ವಹಿಸುತ್ತದೆ.

ಅಲ್ ಇಮಾಮ್ ಜಾಫರ್ ಅಸ್ ಸಾಧಿಕ್ ಹೇಳುವಂತೆ, “ಏಳು ವರ್ಷದವರೆಗೂ ಅವರಿಷ್ಟಕ್ಕೆ ಆಡಿಕೊಳ್ಳಲಿ, ಮುಂದಿನ ಏಳು ವರ್ಷ ಗಮನಪೂರ್ಣ ಶಿಕ್ಷಣಕ್ಕೆ. ಮೂರನೆಯ ಹಂತದ ಏಳು ವರ್ಷಕ್ಕೆ ಮಗುವು ತಾನೇ ತನ್ನ ಅಧ್ಯಯನ ಮತ್ತು ಶಿಕ್ಷಣವನ್ನು ರೂಪುಗೊಳಿಸಿಕೊಳ್ಳಲು ಆಗುತ್ತದೆ. ಒಟ್ಟಾರೆ ಮಗುವು 21 ವರ್ಷಕ್ಕೆ ಬರುವ ಹೊತ್ತಿಗೆ ಓರ್ವ ಸಂಪೂರ್ಣ ವ್ಯಕ್ತಿತ್ವದಿಂದ ಸಮಾಜಕ್ಕೆ ದೊರಕುತ್ತಾನೆ” ಎಂದು ಅವರ ಅಭಿಪ್ರಾಯ.

“ಮಗುವು ಮೊದಲ ಏಳು ವರ್ಷದಲ್ಲಿ ಮನೆಗೆ ಒಡೆಯನಾಗಿರಲಿ, ನಂತರದ ಏಳು ವರ್ಷಗಳಲ್ಲಿ ಹೇಳಿದ್ದನ್ನು ಕೇಳುವಂತಹ ಸೇವಕನಾಗಿರಲಿ (ಏಕೆಂದರೆ ಅದು ಕಲಿಯುವ ಅವಧಿಯು), ನಂತರ ಮುಂದಿನ ಏಳು ವರ್ಷಗಳಲ್ಲಿ ಮನೆಗೆ ವಜೀರನಾಗಿರಲಿ” ಅಂದರೆ ಮಗುವು ತನ್ನ ಮುಂದಿನ ಮೂರನೆಯ ಹಂತಕ್ಕೆ ಪ್ರಬುದ್ಧ ವ್ಯಕ್ತಿಯಾಗಿರುವಂತೆ ಮಾಡಬೇಕಾಗಿರುವುದು ಪೋಷಕರ ಹೊಣೆ.

ಒಟ್ಟಾರೆ ನನ್ನ ದೃಷ್ಟಿಯಲ್ಲಿ ಯಾವುದೇ ಸ್ಥಾಪಕ ಧರ್ಮವು ಮಕ್ಕಳಿಗೆ ನೀಡದಂತಹ ಮಹತ್ವವನ್ನು ಇಸ್ಲಾಮ್ ಕೊಡುತ್ತದೆ. ಜೊತೆಗೆ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಮೌಲ್ಯಗಳನ್ನು ಧಾರ್ಮಿಕಗೊಳಿಸಿ ಅವುಗಳು ನೆರವೇರಲಿ ಎಂದು ಬಯಸಿದ್ದ ಪ್ರವಾದಿ ಮಹಮದರ ದೂರದೃಷ್ಟಿ ಶಾಂತಿ ಮತ್ತು ಸೌಹಾರ್ದಕ್ಕೆ ಪೂರಕವಾದದ್ದು ನನಗಿರುವ ಸ್ಪಷ್ಟತೆ.

-ಯೋಗೇಶ್ ಮಾಸ್ಟರ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …