Home / ವಾರ್ತೆಗಳು / ಟಿ 20 ವಿಶ್ವಕಪ್ ಸಂಭ್ರಮಾಚರಣೆಯಿಂದ ಮೋಹಿನ್ ಅಲಿ ಮತ್ತು ಆದಿಲ್ ರಶೀದ್ ರನ್ನು ದೂರ ಸರಿಯುವಂತೆ ಇಂಗ್ಲೆಂಡ್ ನಾಯಕ ಬಟ್ಲರ್ ಸೂಚಿಸಿದ್ದೇಕೆ?

ಟಿ 20 ವಿಶ್ವಕಪ್ ಸಂಭ್ರಮಾಚರಣೆಯಿಂದ ಮೋಹಿನ್ ಅಲಿ ಮತ್ತು ಆದಿಲ್ ರಶೀದ್ ರನ್ನು ದೂರ ಸರಿಯುವಂತೆ ಇಂಗ್ಲೆಂಡ್ ನಾಯಕ ಬಟ್ಲರ್ ಸೂಚಿಸಿದ್ದೇಕೆ?

8ನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯದ ಮೆಲ್ಬರ್ನ್‌ನಲ್ಲಿ ಭಾನುವಾರ ತೆರೆಬಿದ್ದಿದೆ. ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್‌, 2ನೇ ಬಾರಿಗೆ ಟಿ20 ಚಾಂಪಿಯನ್‌ ಗದ್ದುಗೆ ಏರಿದೆ. ಬೌಲಿಂಗ್‌ನಲ್ಲಿ 137 ರನ್‌ಗಳಿಗೆ ಪಾಕಿಸ್ತಾನವನ್ನು ನಿಯಂತ್ರಿಸಿದ್ದ ಜಾಸ್‌ ಬಟ್ಲರ್‌ ಬಳಗ, ಆ ಬಳಿಕ ಇನ್ನೂ 1 ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು. ಈ ಗೆಲುವಿನೊಂದಿಗೆ ಏಕದಿನ ಮತ್ತು ಟಿ20 ಮಾದರಿಯಲ್ಲಿ ಏಕಕಾಲಕ್ಕೆ ಚಾಂಪಿಯನ್‌ ಆದ ಮೊದಲನೇ ತಂಡ ಎಂಬ ಹೆಗ್ಗಳಿಕೆ ಇಂಗ್ಲೆಂಡ್‌ ಪಾಲಾಗಿದೆ. 2010ರಲ್ಲಿ ಮೊದಲ ಬಾರಿಗೆ ಚುಟುಕು ಟೂರ್ನಿಯ ಚಾಂಪಿಯನ್ನರಾಗಿದ್ದ ಇಂಗ್ಲೆಂಡ್‌, ಆ ಬಳಿಕ 2016ರಲ್ಲಿ ಫೈನಲ್‌ ಪ್ರವೇಶಿಸಿತ್ತಾದರೂ, ವೆಸ್ಟ್‌ ಇಂಡೀಸ್‌ಗೆ ಶರಣಾಗಿತ್ತು. ಇದೀಗ 2022ರಲ್ಲಿ 2ನೇ ಬಾರಿಗೆ ಚಾಂಪಿಯನ್‌ ಆಗುವ ಮೂಲಕ ʻಕ್ರಿಕೆಟ್‌ ಜನಕ ಖ್ಯಾತಿʼಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.

ಆದರೆ ಇಲ್ಲಿ ಸುದ್ದಿಯಾಗಿದ್ದು ಮಾತ್ರ ಇಂಗ್ಲೆಂಡ್‌ ತಂಡದ ಇಬ್ಬರೂ ಆಟಗಾರರು. ಕಪ್‌ ಗೆದ್ದ ಇಂಗ್ಲೆಂಡ್‌ ಶಾಂಪೇನ್ ಎರಚಿ ಸಂಭ್ರಮಾಚರಣೆ ಮಾಡಿತ್ತು. ಈ ಸಮಯದಲ್ಲಿ ಇಂಗ್ಲೆಂಡ್‌ನ ಅಲ್‌ರೌಂಡರ್‌ ಮೋಹಿನ್‌ ಆಲಿ ಮತ್ತು ಆದಿಲ್‌ ರಶೀದ್‌ ಶಾಂಪೇನ್ ಸಂಭ್ರಮಾಚರಣೆಯಿಂದ ಎದ್ದು ದೂರ ಹೋಗಿರುವ ವಿಡಿಯೋ ಸಾಮಾಜಿಕ ಜಲತಾಣಗಳಲ್ಲಿ ವೈರಲ್‌ ಆಗಿದೆ.

ಐಸಿಸಿ ನಡೆಸುವ ಟೂರ್ನಿಯಲ್ಲಿ ಇಂಗ್ಲೆಂಡ್ ಗೆದ್ದಾಗ ಪ್ರತಿ ಸಲವೂ ಇದೇ ರೀತಿಯಾಗುತ್ತದೆ. ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಜಯ ಗಳಿಸಿದ ಸಂದರ್ಭದಲ್ಲಿ ಹೀಗೇ ಇಬ್ಬರು ಆಟಗಾರರನ್ನು ಎದ್ದು ಹೋಗುವಂತೆ ಸೂಚಿಸಲಾಗಿತ್ತು. ತಂಡದ ನಾಯಕನೇ “ನೀವು ಹೊರಡಿ” ಎಂದು ಆಟಗಾರರನ್ನು ಕಳುಹಿಸಿದ ಮೇಲೆ ಶಾಂಪೇನ್ ಸಂಭ್ರಮಾಚರಣೆ ಶುರುವಾಗುತ್ತದೆ. ಬಹುಸಂಸ್ಕೃತಿಗೆ ಗೌರವ ಕೊಡುವ ಬ್ರಿಟನ್‌ನಲ್ಲಿ ಇಂಗ್ಲೆಂಡ್‌ ತಂಡ ಆಟಗಾರರು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ. ಇಸ್ಲಾಂ ಧರ್ಮದಲ್ಲಿ ಮದ್ಯಪಾನ ವರ್ಜ್ಯವಾಗಿರುವುದರಿಂದ ಅವರು ಹೀಗೆ ಮಾಡುತ್ತಾರೆ. ಹೀಗಾಗಿ ಶಾಂಪೇನ್ ಸಂಭ್ರಮಕ್ಕೆ ಮೊದಲು ಕ್ಯಾಪ್ಟನ್ ಸಹ ಆಟಗಾರ ಅದಿಲ್ ರಶೀದ್‌ಗೆ ಹೊರ ಹೋಗುವಂತೆ ನೆನಪಿಸುತ್ತಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಹಲವು ಬಾರಿ ಇಂಗ್ಲೆಂಡ್ ಬಹುಸಂಸ್ಕೃತಿ ಸಾಬೀತಾಗಿದೆ. ಇದಲ್ಲದೇ ಇಂಗ್ಲೆಂಡ್ ತಂಡವನ್ನು ಎರಡು ಬಾರಿ ವಿಶ್ವ ಚಾಂಪಿಯನ್‌ ಮಾಡಿದ ಎಡಗೈ ಆಟಗಾರ ಬೆನ್‌ ಸ್ಟೋಕ್ಸ್‌ ನ್ಯೂಜಿಲೆಂಡ್‌ನಲ್ಲಿ ಹುಟ್ಟಿದವರು. ದೇಶ ಯಾವುದೇ ಇರಲಿ ಆಟಕ್ಕೆ, ಆರ್ಹತೆಗೆ, ಸಾಮರ್ಥ್ಯಕ್ಕೆ ಬೆಲೆ ನೀಡುವುದು ಬ್ರಿಟನ್‌ನ ಕ್ರೀಡಾ ಧರ್ಮ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …