Home / ಲೇಖನಗಳು / ಕುಟುಂಬಕ್ಕೆ ಕಂಟಕವಾಗುವ ಸಂಶಯ ರೋಗ

ಕುಟುಂಬಕ್ಕೆ ಕಂಟಕವಾಗುವ ಸಂಶಯ ರೋಗ

@ ಡಾ| ಉಮರ್ ಎಫ್.

ಶಿಕ್ಷಣದಲ್ಲಿ ಬಹಳ ಪ್ರಗತಿ ಸಾಧಿಸಿರುವ ಈ ಕಾಲದಲ್ಲಿ ಮೂಢನಂಬಿಕೆಗಳಿಗೆ ಬರವಿಲ್ಲ. ಆದ್ದರಿಂದಲೇ ಹಲವು ಮಾನಸಿಕ ರೋಗಗಳನ್ನೂ ಮಾನಸಿಕ ಸಮಸ್ಯೆಗಳನ್ನೂ ಪಿಶಾಚಿಯ ಬಾಧೆ ಎಂದೂ ಮಾಟದ ಫಲವೆಂದೂ ನಂಬುವವರಿದ್ದಾರೆ. ಇಂತಹ ರೋಗಗಳ ಸ್ಪೆಶಲಿಸ್ಟ್ ಗಳೆಂಬಂತೆ ಫೋಸು ಕೊಡುತ್ತಿರುವ ನಕಲಿ ಸ್ವಾಮಿ ಹಾಗೂ ಬಾಬಾಗಳ ಮೊರೆ ಹೋಗುವ ಜಾಯಮಾನವು ವ್ಯಾಪಕವಾಗುತ್ತಿದೆ. ನೂಹಾಳ ಘಟನೆಯು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ನೂಹಾಳಿಗೆ ಒಂದು ವರ್ಷದಿಂದೀಚೆಗೆ ತನ್ನ ಪತಿ ನಿಸಾರ್‌ನ ಮೇಲೆ ಸಿಕ್ಕಾಪಟ್ಟೆ ಸಂಶಯ. ಇದರಿಂದಾಗಿ ಅವನಿಗೆ ಮನೆಯಲ್ಲೂ ಕಚೇರಿಯಲ್ಲೂ ನೆಮ್ಮದಿ ಇಲ್ಲದಾಯಿತು. ಕಚೇರಿಯಿಂದ ಯಾವಾಗಲಾದರೂ ತಡವಾಗಿ ಮನೆಗೆ ಬಂದರೆ ಅಂದಿನ ಗಲಾಟೆಗೆ ಅದು ಧಾರಾಳ ಸಾಕಾಗುತ್ತಿತ್ತು. ಮಾತ್ರವಲ್ಲ, ಕಚೇರಿಗೆ ಆಗಾಗ ಫೋನಾಯಿಸಿ ಪತಿ ಅಲ್ಲೇ ಇದ್ದಾರಾ ಎಂದು ಅವಳು ತಿಳಿದುಕೊಳ್ಳುತ್ತಿದ್ದಳು. ಮನೆಗೆ ಮರಳಿ ದಾಗ ಹಲವಾರು ಪ್ರಶ್ನೆಗಳಿಗೆ ನಿಸಾರ್ ಉತ್ತರಿಸಬೇಕಾಗಿತ್ತು. ಇದರಿಂದಾಗಿ ಅವನು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿದನು. ಕೌಟುಂಬಿಕ ಸಂಬಂಧವು ಅಸ್ತವ್ಯಸ್ಥವಾಯಿತು. ಸಂಶಯವು ಹೆಮ್ಮರವಾಗಿ ದ್ವೇಷ, ಹಟಮಾರಿತನಗಳಾಗಿ ಬದಲಾಯಿತು.

ಕೌಟುಂಬಿಕ ಜೀವನವನ್ನು ಮುರಿಯಲು ಸಂಬಂಧಿಕರು ಮಾಟ ಮಾಡಿದ್ದಾರೆಂದು ಬಗೆದು ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ ಓರ್ವ ಬಾಬಾನ ಬಳಿಗೆ ಹೋದರು. ಆ ಸಂಶಯವನ್ನು ಆ ಬಾಬಾ ದೃಢಪಡಿಸಿದನು. ಅದರ ನಿವಾರಣೆಗಾಗಿ ಮಾಡಬೇಕಾದ ತಂತ್ರ- ಮಂತ್ರಗಳನ್ನು ಹೇಳಿಕೊಟ್ಟನು. ಇದನ್ನು ಆ ಬಡಪಾಯಿ ದಂಪತಿಗಳು ಅನುಸರಿಸಿದರು. ಆದರೆ ನೂಹಾಳ ಸಂಶಯ ರೋಗದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಪುನಃ ಅವರು ಅದಕ್ಕಿಂತ ದೊಡ್ಡ ಬಾಬಾನ ಮೊರೆ ಹೋದರು. ಅವನು ಇದು ಯಾರೂ ಮಾಟ ಮಾಡಿದ್ದಲ್ಲ. ಶರೀರಕ್ಕೆ ಸ್ವತಃ ಪ್ರವೇಶಿಸಿದ್ದು ಎಂಬ ತೀರ್ಪಿತ್ತನು. ಅದಕ್ಕೆ ಬೇಕಾಗಿರುವ ಪರಿಹಾರವನ್ನು ಸೂಚಿಸಿದನು. ಆ ದಂಪತಿಗಳು ಅಂತೆಯೇ ಮಾಡಿದರು. ಆದರೆ ಅವರ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲಿಲ್ಲ. ಈ ಮಧ್ಯೆ ಯಾರೋ ಹೇಳಿದ್ದರಿಂದ ಅವರು ನನ್ನ ಬಳಿ ಬಂದರು.

ಅವರ ಸಮಸ್ಯೆಯು ಸಂಶಯ ರೋಗವಾಗಿತ್ತು. ಸಂಶಯ ರೋಗಗಳು ಹಲವು ವಿಧಗಳಲ್ಲಿ ಕಂಡು ಬರುತ್ತವೆ. ಅವುಗಳ ಪೈಕಿ ಪತ್ನಿಗೆ ಪತಿಯ ಮೇಲೆ ಸಂಶಯ ಅಥವಾ ಪತಿಗೆ ಪತ್ನಿಯ ಮೇಲೆ ಸಂಶಯ ಒಂದು ವಿಧವಾಗಿದೆ. ಇದಕ್ಕೆ ಸ್ಪಷ್ಟವಾದ ಆಧಾರಗಳೇನೂ ಇಲ್ಲ. ಹಲವು ವೇಳೆ ಇದೊಂದು ಅನಿಸಿಕೆ ಮಾತ್ರವಾಗಿರಬಹುದು. ಆದರೆ ಅವರು ಅವು ಗಳನ್ನು ವಾಸ್ತವ ಎಂಬಂತೆ ತಿಳಿದುಕೊಳ್ಳುತ್ತಾರೆ. ಕಂಡದ್ದೆಲ್ಲವೂ ಅವರಿಗೆ ಪುರಾವೆಗಳಾಗಿ ಭಾಸವಾಗುತ್ತದೆ. ಇದು ಈ ರೋಗದ ವಿಶೇಷತೆ. ನೂಹಾಳಲ್ಲೂ ಕಂಡದ್ದು ಇದುವೇ. ಇದನ್ನು ಮನವರಿಕೆ ಮಾಡಿಕೊಟ್ಟಾಗ ನಿಸಾರ್‌ನಿಗೆ ವಿಷಯವು ಮನದಟ್ಟಾಯಿತು. ಹಣವನ್ನು, ಸಮಯವನ್ನು ವ್ಯರ್ಥಗೊಳಿಸಿದ್ದಕ್ಕೆ ಅವನು ಮರುಕ ಪಟ್ಟನು. ಎರಡು ಬಾರಿ ನನ್ನನ್ನು ಭೇಟಿಯಾದಾಗ ನೂಹಾಳಲ್ಲಿ ಗಮನಾರ್ಹವಾದ ಬದಲಾವಣೆ ಉಂಟಾಯಿತು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ.

ಒಂದು ದಿನ ಮನೆ ಬಾಗಿಲಿಗೆ ಶ್ವೇತ ವಸ್ತ್ರಧಾರಿಯಾದ ಓರ್ವ ಬಾಬಾ ಬಂದನು. ಅವಳು ಹತ್ತು ರೂಪಾಯಿ ನೀಡಿದಳಂತೆ. ಬಾಬ ಅದನ್ನು ಮರಳಿಸುತ್ತಾ ಹೇಳಿದನು, “ನಾನು ಬಂದದ್ದು ಬೇಡಲಿಕ್ಕಲ್ಲ. ಈ ದಾರಿಯಾಗಿ ಹೋಗುವಾಗ ಇಲ್ಲಿ ಏನೋ ಒಂದು ಶಕುನ ಕಂಡದ್ದರಿಂದ ಇಲ್ಲಿಗೆ ಬಂದೆ.” ಮೂಢನಂಬಿಕೆ ಇರುವವರಾದ ಅವರು ಇದನ್ನು ಕೇಳಿದಾಗ ಆ ಬಾಬನ ಮೇಲೆ ಪೂರ್ಣವಾಗಿ ವಿಶ್ವಾಸ ತಾಳಿದರು. ಅವಳ ಸಂಶಯಗಳನ್ನೂ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನೂ ಎಳೆ ಎಳೆಯಾಗಿ ಅವಳು ಬಾಬಾನ ಮುಂದೆ ವಿವರಿಸಿದಳು. ಇದನ್ನು ಕೇಳಿದ ಆ ಬಾಬಾ ಬೆಂಕಿಗೆ ತುಪ್ಪ ಸುರಿಯುವಂತಹ ಕೆಲಸ ಮಾಡಿದನು. ನಿಸಾರ್‌ನ ಸ್ವಭಾವವು ಸರಿ ಇಲ್ಲವೆಂದೂ ನಿಮ್ಮ ಸಂಬಂಧಿ ಮಹಿಳೆಯೊಂದಿಗೆ ಅವನಿಗೆ ಸಂಬಂಧವಿದೆಯೆಂದೂ ಆ ಮಹಿಳೆಯು ಅವನನ್ನು ಮಾಟ ಮಾಡಿ ವಶಪಡಿಸಿದ್ದಾಳೆ ಎಂದೂ ಆ ಬಾಬಾ ಹೇಳಿದನು. ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸದಿದ್ದರೆ ಬಳಿಕ ನೀನು ದುಃಖಿಸ ಬೇಕಾದೀತು ಮತ್ತು ನಿನಗೆ ಪತಿಯೇ ನಷ್ಟವಾಗಬಹುದು ಎಂಬ ಪುಕ್ಕಟೆ ಸಲಹೆಯೊಂದನ್ನೂ ನೀಡಿದನು. ಇವೆಲ್ಲವನ್ನೂ ಕೇಳಿದಾಗ ಅವಳು ಅಧೀರಳಾದಳು. ಅವಳ ಸಂಶಯ ರೋಗವು ಇಮ್ಮಡಿಯಾಯಿತು. ಬಾಬಾನನ್ನು ಒಳಗೆ ಕುಳ್ಳಿರಿಸಿ ಅವಳು ತನ್ನ ಅನಿಸಿಕೆಗಳನ್ನು ಪುರಾವೆ ಸಹಿತ ವಿವರಿಸಿದಳು. ಸಿಕ್ಕಿದ ಬಲಿಪಶುವನ್ನು ಉಪಯೋಗಿಸಿಕೊಳ್ಳಲು ಬಾಬಾ ಮುಂದಾದನು.

ಅವಳಿಗೆ ಇಷ್ಟವಾದ ಬಣ್ಣ ಯಾವುದೆಂದು ಕೇಳಿದನು. ಅವಳು ಕೆಂಪೆಂದು ಹೇಳಿದಾಗ, “ನಾನು ಗ್ರಹಿಸಿದ್ದೂ ಇದೇ ಬಣ್ಣವನ್ನು. ನಿನ್ನ ಜೀವನವು ರಕ್ತದಲ್ಲಿ ಮುಳುಗಿದೆ” ಎಂದು ಹೇಳುತ್ತಾನೆ. ನಿನ್ನ ಶರೀರವು ಕೆಂಪಾಗಿದೆ. ಇದು ಅನಾಹುತಗಳು ಸಂಭವಿಸಲಿಕ್ಕಿರುವ ಸೂಚನೆಯಾಗಿದೆ ಎಂಬ ಆತಂಕದ ಹೇಳಿಕೆ ನೀಡಿದನು. ಆದರೂ ಅವನು ಸಾಂತ್ವನದ ನುಡಿಗಳನ್ನಾಡಲು ಮರೆಯಲಿಲ್ಲ. “ನೀವು ಹೆದರಬೇಕಾಗಿಲ್ಲ. ಇದಕ್ಕೆ ಪರಿಹಾರವಿದೆ.” ಬಳಿಕ ಪುನಃ ಅವನು ಕೇಳಿದನು, “ನಿನಗೆ ಇಷ್ಟವಾದ ಅಂಕೆ ಯಾವುದು?” ಅವಳು ಏಳು ಎಂದು ಉತ್ತರಿಸಿದಾಗ “ಹುಂ. ಇದು ಕೂಡಾ ಅಶುಭ ಲಕ್ಷಣ ತೋರಿಸುತ್ತಿದೆ. ಮಾತ್ರವಲ್ಲ ಮನೆಯ ಅಂಗಳದಲ್ಲಿ ಹೋಗಿ ಬರುವುದು ಕಾಣುತ್ತಿದೆ. (ಪ್ರೇತಭೂತಗಳ ಸಂಚಾರ). ಒಟ್ಟಿನಲ್ಲಿ ನಿನಗೆ ಶನಿ ದೆಸೆ ಉಂಟಾಗಿದೆ.” ಇದಕ್ಕಿರುವ ಪರಿಹಾರಕ್ಕಾಗಿ ಸಾಕಷ್ಟು ಹಣವನ್ನು ಪಡೆದ ಬಾಬಾ ಇನ್ನೊಂದು ತಾರೀಕನ್ನು ನಿಗದಿಪಡಿಸಿ ಅಂದು ಬರುವೆನೆಂದು ಹೇಳಿ ಹೊರಟು ಹೋದನು. ಆದರೆ ಅವನು ಮರಳಿ ಬರಲೇ ಇಲ್ಲ. ಮಾತ್ರವಲ್ಲ ಅವನು ನೀಡಿದ ಫೋನ್ ನಂಬರ್ ಸ್ವಿಚ್ ಆಫ್ ಆಗಿತ್ತು.

ಹೀಗೆ ಮನೆಯ ಬಾಗಿಲಿಗೆ ಬಂದು ನೆಮ್ಮ ದಿಯ ಕೌಟುಂಬಿಕ ಜೀವನವನ್ನು ನಾಶಪಡಿಸುವ ಕಳ್ಳ ಬಾಬಾಗಳ ಕಾಪಟ್ಯಗಳ ಬಗ್ಗೆ ಜಾಗೃತವಾಗದಿದ್ದರೆ ಮುಂದೆ ಅದು ದೊಡ್ಡ ಸಾಮಾಜಿಕ ಶಿಥಿಲತೆಗೆ ಹೇತುವಾಗುವ ಕಾಲವು ಅತಿ ಶೀಘ್ರವೇ ಬರಲಿದೆ ಎಂಬ ವಿಚಾರವನ್ನು ನಾವು ಮರೆತಿದ್ದೇವೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …