Home / ಲೇಖನಗಳು / ಪ್ರವಾದಿ ಪೂರ್ವ ಇತಿಹಾಸ ಮತ್ತು ವಾಸ್ತವ

ಪ್ರವಾದಿ ಪೂರ್ವ ಇತಿಹಾಸ ಮತ್ತು ವಾಸ್ತವ

@ ಅಶೀರುದ್ದೀನ್ ಆಲಿಯಾ, ಸಾರ್ತಬೈಲ್

ಪ್ರವಾದಿ ಈಸಾ(ಅ)ರ ಕಾಲದ ನಂತರ ಒಂದು ಸುದೀರ್ಘ ಅವಧಿಯವರೆಗೆ ಪ್ರವಾದಿಗಳ ಆಗಮನವಾಗಿರಲಿಲ್ಲ. ಅರೇಬ್ಯನ್ ಪ್ರಾಂತ್ಯದಲ್ಲಿ ಜನರು ಪ್ರವಾದಿ ಹ. ಇಬ್ರಾಹಿಮ್(ಅ) ಮತ್ತು ಹ. ಇಸ್ಮಾಯಿಲ್(ಅ)ರ ಮೇಲೆ ಅಪಾರ ಗೌರವವನ್ನಿಟ್ಟುಕೊಂಡಿದ್ದರು. ‘ಕಅಬ’ ಭವನದ ನಿರ್ಮಾತೃರು ಎಂಬ ವಿಶೇಷ ಪ್ರೀತಿ ಅವರ ಮೇಲೆ ಇತ್ತು. ಆದರೆ, ಅವರು ಬೋಧಿಸಿದ ಏಕ ದೇವೋಪಾಸನೆಯ ತತ್ವವನ್ನು ಜನರು ಎಳ್ಳಷ್ಟೂ ಪಾಲಿಸುತ್ತಿರಲಿಲ್ಲ. ಮೂಢನಂಬಿಕೆ ಮತ್ತು ಮೂಢಾಚಾರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಕಅಬ ಭವನದ ಬಳಿಯಿರುವ ವಿಗ್ರಹಗಳಿಗೆ ಪ್ರಾಣಿ ಬಲಿ ಮತ್ತು ನರ ಬಲಿ ನೀಡುವ ಹರಕೆ ಮಾಡುತ್ತಿದ್ದರು. ನಗ್ನ ಪ್ರದಕ್ಷಿಣೆ ಹಾಕುತ್ತಿದ್ದರು. ಪ್ರತಿಯೊಂದು ಆಲಂಕಾರಿಕ ವಸ್ತುಗಳು ದೇವರ ಅವತಾರವೆಂಬಂತೆ ಪೂಜಿಸುತ್ತಿದ್ದರು. ಇಂತಹ ಹಲವು ವಿಕೃತಿಯ ಗೊಡ್ಡು ಸಂಪ್ರದಾಯಕ್ಕೆ ಜನರು ಒಗ್ಗಿ ಹೋಗಿದ್ದರು. ಅವರಿಗೆ ಈ ಅನಾಚಾರ ತಪ್ಪು ಎಂದು ಅನ್ನಿಸಿರಲಿಲ್ಲ. ಅಷ್ಟು ತಿಳುವಳಿಕೆ ಇರುವವರೂ ಅವರಾಗಿರಲಿಲ್ಲ. ಬೆರಳೆಣಿಕೆಯಷ್ಟು ಜನರು ಮಾತ್ರ ಇದನ್ನು ವಿರೋಧಿಸಿ ಹ. ಇಬ್ರಾಹೀಂ ಕಲಿಸಿದ ಏಕ ದೇವಾರಾಧನೆಯನ್ನು ಪಾಲಿಸಿ ಬದುಕುಳಿದಿದ್ದರು ಅಥವಾ ಅಂತಹವರು ಏಕಾಂತ ವಾಸ ಅನುಭವಿಸುತ್ತಿದ್ದರು.

ಇಂಜೀಲ್ (Bible) ತೌರಾತ್ (Torah) ದಬೂರ್(Psalms of David) ಗ್ರಂಥಗಳು ಹಾಗೂ ಕೆಲವು ಪ್ರವಾದಿಗಳು ಬರೆದಿಟ್ಟ ಸುಹಫಗಳು (ಬರವಣಿಗೆ) ಪುರೋಹಿತರ ತಿದ್ದುಪಡಿಗೆ ಒಳಪಟ್ಟು ದುರ್ವ್ಯಾಖ್ಯಾನಗೊಂಡಿತ್ತು. ಇದರಿಂದ ಹೆಚ್ಚಿನ ಜನರು ಪುರೋಹಿತ ಶಾಹಿಗಳ ಅನಾಚಾರಗಳನ್ನು ಧಾರ್ಮಿಕ ವಿಧಿಗಳಂತೆ ಪಾಲನೆ ಮಾಡುತ್ತಾ ಪಥಭ್ರಷ್ಟರಾಗಿದ್ದರು.

ಅಂದಿನ ಜಾಗತಿಕ ಚಿತ್ರಣದಲ್ಲಿ ವೈಚಾರಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ವ್ಯವಸ್ಥೆ ಕಲುಷಿತಗೊಂಡಿತ್ತು. ಬಡ್ಡಿ ಜೂಜು, ವ್ಯಭಿಚಾರ, ಅನೈತಿಕ ಸಂಬಂಧಗಳು, ಕ್ಷುಲ್ಲಕ ಕಾರಣಕ್ಕಾಗಿ ಯುದ್ಧಗಳು. ವಂಚನೆ, ಅಶ್ಲೀಲತೆ ಎಲ್ಲವೂ ಸರ್ವ ಸಾಮಾನ್ಯವಾಗಿತ್ತು. ಸಣ್ಣ ವಿಚಾರಗಳಿಗೆ, ಪ್ರತಿಷ್ಠೆಯ ಹೆಸರಿನಲ್ಲಿ ಅನೇಕ ಯುದ್ಧಗಳು ವರ್ಷಗಳ ಕಾಲ ಮುಂದುವರಿಯುತ್ತಿತ್ತು. ಮಹಿಳಾ ದೌರ್ಜನ್ಯ, ದಾಸ್ಯತನ, ಆಡಂಭರತೆ, ಶೋಷಣೆ ಇತ್ಯಾದಿ ವಿಷಯಗಳು ವ್ಯಾಪಕವಾಗಿದ್ದವು. ಇದು ಕೇವಲ ಅರಬ್ ಜಗತ್ತಿನ ಚಿತ್ರಣವಲ್ಲ. ರೋಮ್, ಪರ್ಶಿಯನ್, ಸಿಂದ್, ಯುರೋಪ್, ಈಜಿಪ್ಟ್, ಗ್ರೀಸ್ ಪ್ರದೇಶಗಳು ಇದೇ ಸಮಸ್ಯೆಯನ್ನು ಎದುರಿಸುತಿತ್ತು.

ಜಗತ್ತಿನ ನಾನಾ ಕಡೆಗಳಲ್ಲಿ ಆವರಿಸಿದ್ದ ಈಸ(ಏಸು)ರಲ್ಲಿ ವಿಶ್ವಾಸವಿರಿಸಿದ್ದ ಕ್ರೈಸ್ತರೂ, ಮೂಸಾ(ಮೊಸೆಸ್)ರ ಮೇಲೆ ವಿಶ್ವಾಸವಿರಿಸಿದ್ದ ಯಹೂದಿಗಳು, ಅಗ್ನಿ ಆರಾಧನೆ ಮತ್ತು ಮೂರ್ತಿ ಪೂಜಕರಾಗಿದ್ದ ಇಬ್ರಾಹೀಮ್‌ರ ಸಂತತಿಗಳೂ ಹಾಗೂ ಅಂದಿನ ಬೆರಳಣಿಕೆಯ ಸಜ್ಜನರೂ, ಅವರಿಗೆ ಈ ಹಿಂದೆ ಅವತರಿಸಿದ್ದ ಗ್ರಂಥಗಳಲ್ಲಿ ಪ್ರಸ್ತಾಪಿಸಿದ್ದ ಕೊನೆಯ ಪ್ರವಾದಿಯ ನಿರೀಕ್ಷೆಯಲ್ಲಿದ್ದರು.

`ನಮ್ಮ ಬಳಿ ಬರುವ ಪ್ರವಾದಿ ಸಕಲ ಮಾನವ ಕೋಟಿಯ ಪ್ರವಾದಿ. ಅವರು ಈ ಜಗತ್ತನ್ನು ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಕೊಂಡು ಹೋಗುವವರು’ ಎಂಬ ವಿಶ್ವಾಸ ತಾಳಿದ್ದರು. ಆ ಪ್ರವಾದಿಯ ಹುಟ್ಟು ನಮ್ಮ ಜಾತಿಯಲ್ಲಿ, ನಮ್ಮ ಗೋತ್ರದಲ್ಲಿ, ನಮ್ಮ ಕುಟುಂಬದಲ್ಲಿ, ನಮ್ಮ ಊರಲ್ಲಿ, ನಮ್ಮ ರಾಜ್ಯದಲ್ಲಿ ಆಗಲಿ ಎಂಬ ಕನಸನ್ನೂ ಕಂಡಿದ್ದರು. ಆದ್ದರಿಂದಲೇ ಪ್ರವಾದಿಯ ಆಗಮನದ ಕುರಿತು, ಅವರ ಹೆಸರು, ಅವತರಿಸುವ ಸ್ಥಳ ಇತ್ಯಾದಿಗಳ ಬಗ್ಗೆ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಭವಿಷ್ಯ ಪುರಾಣದಲ್ಲಿ ವ್ಯಾಸಮುನಿ ಹೇಳುತ್ತಾರೆ; “ವತಸ್ಮಿನಂತರೇ ಮ್ಲೇಚ್ಛ ಆಚಾರೇಣ್ಯ ಸಮನ್ವಿತಃ ಮಹಾಮದ ಇತಿಖ್ಯಾತಃ ಶಿಷ್ಯಶಾಖಾ ಸಮನ್ವಿತಂ.”
(ಪ್ರತಿಸರ್ಗ ಸರ್ವ 111 3, 5-8)
ಅರ್ಥ: “ಆ ವೇಳೆಯಲ್ಲಿ ಮಹಾಮದ್ ಎಂಬ ಹೆಸರಿನ ಓರ್ವ ಪರಕೀಯನು ತನ್ನ ಅನುಚರರೊಂದಿಗೆ ಪ್ರತ್ಯಕ್ಷನಾಗುವನು.”

“ಸ್ಪಸುರ ಸಂಹಾರಿಣೀ ಹುಂ ಹ್ರೀಂ ಅಲ್ಲೋ ರಸೂಲ ಮಹಾಮದರ ಕಬರಸ್ಯ ಅಲ್ಲೋ ಅಲ್ಲಾ ಇಲ್ಲಲ್ಲಿ ತಿಇಲ್ಲಲ್ಲಾ.” (ಅಲ್ಲೋಪವಿಷತ್ 2-10)
ಅರ್ಥ: “ಓ ಹ್ರೀಂ ಮಂತ್ರದ ಮೂಲಕ ಅಭಿಶಪ್ತರಾದ ಅಸುರ ವರ್ಗವನ್ನು ಸಂಹರಿಸುವ ಅಲ್ಲಾಹನ ದೂತನೇ ಮುಹಮ್ಮದ್. ಸತ್ಯ ದೇವನ ವಿನಾ ಇನ್ನಾವ ದೇವನೂ ಇಲ್ಲ.”

ಏಸು ಕ್ರಿಸ್ತನು ತನ್ನ ಅನುಯಾಯಿಗಳಿಗೆ ಹೀಗೆ ಹೇಳಿರುವರು: “ನೀವು ನನ್ನನ್ನು ಪ್ರೀತಿಸುವಿರಾದರೆ ನೀವು ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ. ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು. ಆತನು ನಮಗೆ ಬೇರೊಬ್ಬ ಸಹಾಯಕನನ್ನು ಸದಾ ಕಾಲ ನಿಮ್ಮ ಸಂಗಡ ಇರುವುದಕ್ಕೆ ಕೊಡುವನು. ಆ ಸಹಾಯಕನು ಯಾರೆಂದರೆ. ಸತ್ಯದ ಆತ್ಮನೇ.” (ಯೋಹಾನ 14, 15, 17)

ಬುದ್ಧನ ಕೊನೆಯ ಘಳಿಗೆಯಲ್ಲಿ ಬುದ್ಧನ ಮಕ್ಕಳು ಬುದ್ಧನಲ್ಲಿ ಈ ರೀತಿ ಪ್ರಶ್ನಿಸಿದರು, “ನೀವು ಹೋದ ಬಳಿಕ ನಮಗೆ ಕಲಿಸುವವರು ಯಾರು?” ಆಗ ಅನುಗ್ರಹೀತನು ಎಂದು ಉತ್ತರ ನೀಡಿದನು. “ಲೋಕಕ್ಕೆ ಬಂದಿರುವ ಬುದ್ಧರಲ್ಲಿ ನಾನು ಪ್ರಥಮನೂ ಅಲ್ಲ, ಕೊನೆಯವನೂ ಅಲ್ಲ. ಸಮಯ ಬಂದಾಗ ಪರಿಶುದ್ಧ, ವಿಜ್ಞಾನ ಮತ್ತು ಬುದ್ಧಿಶಾಲಿಯಾದ ಓರ್ವ ಬುದ್ಧನು ಲೋಕಕ್ಕೆ ಆಗಮಿಸುತ್ತಾನೆ. (ದಿ ಗೊಸ್‌ಪೆತ್ ಆಫ್ ಬುದ್ಧ)

ಪುರಾಣದಲ್ಲಿ ಮತ್ತು ಉಪನಿಷತ್‌ನಲ್ಲಿ ‘ಮಹಾಮದ’ ಎಂಬ ನಾಮವನ್ನು ಉದ್ಧರಿಸಲಾಗಿದೆ. ಬೈಬಲ್‌ನಲ್ಲಿ “ಸತ್ಯದ ಆತ್ಮ” ಎಂದು ಕರೆಯಲಾಗಿದೆ ಪ್ರವಾದಿ ಮುಹಮ್ಮದ್(ಸ)ರನ್ನು ಸಾದಿಕ್ (ಸತ್ಯವಂತ) ಎಂದು ಮಕ್ಕಾದವರು ಕರೆಯುತ್ತಿದ್ದುದನ್ನು ಇಲ್ಲಿ ನೆನಪಿಸುತ್ತೇನೆ.

ಪ್ರವಾದಿಯ ಆಗಮನದ ಬಗ್ಗೆ ಕುರ್‌ಆನ್ ಹೇಳುತ್ತದೆ: ಓ ಮುಹಮ್ಮದ್(ಸ) ರೇ, ಹೇಳಿರಿ; “ಓ ಮಾನವರೇ, ಹೇಳಿರಿ ನಾನು ನಿಮ್ಮೆಲ್ಲರ ಕಡೆಗೆ ಭೂಮಿ-ಆಕಾಶಗಳ ಸಾರ್ವಭೌಮ ನಾಗಿರುವ ಅಲ್ಲಾಹನ ಸಂದೇಶವಾಹಕನಾಗಿರುತ್ತೇನೆ.” (ಅಲ್‌ಅಅï‌ರಾಫ್ :158)

ಭವಿಷ್ಯ ಪುರಾಣ, ಅಥರ್ವವೇದ, ಸಾಮುವೇದ, ಉಪನಿಷತುಗಳು, ಬೌದ್ಧ ಗ್ರಂಥದಲ್ಲಿ, ಬೈಬಲ್ ಒಡಂಬಡಿಕೆಯಲ್ಲಿ ಪ್ರವಾದಿಯ ಆಗಮನದ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ ಶ್ರೀ ಮದ್ಭಗವದ್ಗೀತೆಯಲ್ಲಿ ಕಲ್ಕಿಯ ಅವತಾರಣದ ಬಗ್ಗೆ ಅಧ್ಯಯನ ಮಾಡಿದರೆ ಪ್ರವಾದಿತ್ವಕ್ಕಿರುವ ಸಮನ್ವಯತೆಯನ್ನು ತಿಳಿಯಲು ಸಾಧ್ಯವಿದೆಯೆಂದು ಕೆಲವು ಭಾರತೀಯ ಆಧುನಿಕ ಇಸ್ಲಾಮಿ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.

ಮುಹಮ್ಮದ್(ಸ) ಜಗತ್ತಿನ ಪ್ರವಾದಿ:
ಅರಬ್ ಜನಾಂಗದಲ್ಲಿ ಹುಟ್ಟಿದವರು, ಅರೇಬಿಯನ್ ಹೆಸರು ಹೊಂದಿದವರು ಎಂಬ ಕಾರಣಕ್ಕೆ ಮುಹಮ್ಮದ್(ಸ) ಅರೇಬಿಯನ್ ಅಥವಾ ಮುಸ್ಲಿಮರ ಪ್ರವಾದಿ ಎಂಬಷ್ಟಕ್ಕೆ ಸೀಮಿತಗೊಳಿಸಿರುವುದು ಆಕ್ಷೇಪಾರ್ಹ. ಇದೊಂದು ದೊಡ್ಡ ತಪ್ಪು ಕಲ್ಪನೆ. ಜರೂಸಲೇಮ್‌ನಲ್ಲಿ ಹುಟ್ಟಿದ ಏಸು, ಈಜಿಪ್ಟ್ ನಲ್ಲಿ ಹುಟ್ಟಿದ ಮೋಸೆಸ್, ಭಾರತದಲ್ಲಿ ಹುಟ್ಟಿದ ಬುದ್ಧರಂತೆ ಮುಹಮ್ಮದ(ಸ)ರು ಅರೇಬಿಯಾದಲ್ಲಿ ಹುಟ್ಟಿದರು ಎಂಬ ವಿಶೇಷತೆ ಮಾತ್ರ ಅರಬ್‌ಗೆ ಇರುವುದು.

ಕುರ್‌ಆನಿನಲ್ಲಿ ಹೀಗೆ ಹೇಳಲಾಗಿದೆ; (ಪೈಗಂಬರರೇ) ನಾವು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ಕೊಡುವವರಾಗಿಯೂ ಮಾಡಿ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ.” (ಸಬಾ: 28)
ಆದ್ದರಿಂದ ಮುಹಮ್ಮದ್(ಸ) ಮಾನವ ಕುಲದ ಪ್ರವಾದಿಯಾಗಿದ್ದಾರೆಂಬುದು ಸ್ಪಷ್ಟವಾಗುತ್ತದೆ.

ಅರೇಬಿಯನ್ ಪ್ರವಾದಿ ಎಂಬ ಷಡ್ಯಂತ್ರ:
ಮುಹಮ್ಮದ್(ಸ)ರು ಅರೇಬಿಯನ್ ಪ್ರವಾದಿ ಎಂಬುದನ್ನು ಇತಿಹಾಸ ಸೃಷ್ಟಿಸಿದ ಅವಾಂತರ ಅಥವಾ ದೊಡ್ಡ ಷಡ್ಯಂತ್ರದ ಭಾಗ ಎಂದರೆ ತಪ್ಪಾಗಲಾರದು. ಕೊನೆಯ ಪ್ರವಾದಿಯ ಬರುವಿಕೆಯ ಬಗ್ಗೆ ಅರಬರಂತೆ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳ ವಿಶ್ವಾಸಿಗಳು ನಿರೀಕ್ಷೆಯಲ್ಲಿದ್ದರೆಂಬುದನ್ನು ತಿಳಿದಿದ್ದೇವೆ. “ಅರೇಬಿಯನ್ ಪ್ರವಾದಿ” ಎಂಬುದನ್ನು “ಅರಬಿಗಳ ಪ್ರವಾದಿ” ಎಂದು ವ್ಯಾಖ್ಯಾನಿಸಿ ಪ್ರಚಾರ ಮಾಡುವುದರ ಹಿಂದೆ ಪುರೋಹಿತ ಶಾಹಿ ವರ್ಗದ ದೊಡ್ಡ ಷಡ್ಯಂತ್ರವಿದೆ. ಏಕೆಂದರೆ ಪುರೋಹಿತ ಶಾಹಿ ವರ್ಗದ ಕಲ್ಪನೆಯೆಂತೆ ಅವರು ಪವಾಡ ಪುರುಷರಾಗಿರಲಿಲ್ಲ, ಮಾತ್ರವಲ್ಲದೆ ಅವರ ಬೋಧನೆಯಿಂದಾಗಿ ಪೌರೋಹಿತ್ಯಕ್ಕೆ ತೊಂದರೆ ಉಂಟಾಗುವುದೆಂದು ಅರಿತಿದ್ದರು. ಕುರ್ ಆನ್ ಹೇಳುತ್ತದೆ:
“ಓ ಪೈಗಂಬರರೇ, ಹೇಳಿರಿ, ನಾನು ನಿಮ್ಮಂತೆಯೇ ಇರುವ ಓರ್ವ ಮನುಷ್ಯ. ನಿಮ್ಮ ದೇವನು ಏಕಮಾತ್ರ ದೇವನೆಂದು ನನ್ನ ಕಡೆಗೆ ದಿವ್ಯವಾಣಿ ಮಾಡಲಾಗುತ್ತಿದೆ.” (ಪವಿತ್ರ ಕುರ್‌ಆನ್- 18:110)

ಅರೇಬಿಯನ್ ಅಲೆಮಾರಿ ಜನಾಂಗದಲ್ಲಿ ಅನಾಥನಾದ ಸಾಮಾನ್ಯನೊಬ್ಬ ಪ್ರವಾದಿಯಾಗಿದ್ದಾನೆ ಎಂಬ ಸತ್ಯವನ್ನು ಮುಚ್ಚುಮರೆಗೊಳಿಸಿ ಪ್ರವಾದಿ ತತ್ವವನ್ನು ವಿರೋಧಿಸಿ “ಅರಬರ ಪ್ರವಾದಿ” ಎಂದು ವಿಶ್ಲೇಷಿಸುವಲ್ಲಿ ಅಂದಿನ ಯಹೂದಿ ಮತ್ತು ಕ್ರೈಸ್ತ ಪುರೋಹಿತರ ವರ್ಗದ ದೊಡ್ಡ ಕುತಂತ್ರ ನಡೆದಿದೆ. ಕಾರಣ ಅವರ ಕುಲದಲ್ಲಿ ಅಥವಾ ಅವರ ಧರ್ಮದಲ್ಲಿ ಪ್ರವಾದಿ ಆಗಮಿಸಲಿರುವರೆಂಬ ನಿರೀಕ್ಷೆಯಲ್ಲಿದ್ದರು. ಬರಲಿರುವ ಪ್ರವಾದಿಯ ಬಗ್ಗೆ ಭಾವನಾತ್ಮಕವಾಗಿ ಪವಾಡಗಳನ್ನು ಸೃಷ್ಟಿಸುವವ ಎಂದು ಜನರಿಗೆ ವಿವರಿಸಿದ್ದರು. ಆ ನಿರೀಕ್ಷೆಯು ಸುಳ್ಳಾಗಿ ಅರಬ್ ಜಗತ್ತಿನ ಕುಲೀನ ವಂಶದಲ್ಲಿ ಅನಾಥನಾಗಿ ಹುಟ್ಟಿ ಬಂದ ಅನಕ್ಷರಸ್ಥ ಪ್ರವಾದಿಯಾಗಿದ್ದಾರೆಂಬ ಸುದ್ದಿ ಹರಡಿದಾಗ ಅವರು ಸಹಿಸಲಸಾಧ್ಯವಾದರು. ಇದು ಅವರ ಪ್ರತಿಷ್ಠೆಗೆ ಕುಂದು ತರಿಸುವ ಸಂಭವವಾಯಿತು. ಅವರ ನಿರೀಕ್ಷೆ ಹೇಗಿತ್ತೆಂದರೆ ಬರಲಿರುವ ಪ್ರವಾದಿಯೂ ಒಬ್ಬ ಪುರೋಹಿತ ಅಥವಾ ಬೈಬಲ್, ತೌರಾತ್, ಇಂಜೀಲ್ ಗ್ರಂಥಗಳ ಅಧ್ಯಯನ ಪಂಡಿತ, ಶ್ರೀಮಂತ ಮನೆತನದವ, ಹಲವಾರು ಪವಾಡಗಳನ್ನು ಸೃಷ್ಟಿಸುವವ, ದೇವತಾ ಮನುಷ್ಯ ಇತ್ಯಾದಿ ಭಾವನೆಗಳನ್ನು ಹೊಂದಿದ್ದರು. ಅವೆಲ್ಲವೂ ಹುಸಿಯಾಯಿತು. ಅನಕ್ಷರಸ್ಥ, ಬಡವ, ಅಪುರೋಹಿತ, ನಮ್ಮಂತೆ ತಿನ್ನುವ, ಕುಡಿಯುವ, ಒಂದು ಒಂಟೆಯನ್ನು ಸ್ವಂತಕ್ಕೆ ತೆಗೆದುಕೊಳ್ಳಲು ಶಕ್ತನಲ್ಲದ ಒಂದು ಅಕ್ಷರವನ್ನು ಓದಲಾಗದವನು ಎಂದರಿತರು. ಇವರು ಪ್ರವಾದಿಯ ನೈಜತೆಯನ್ನು ತಿಳಿದಿದ್ದರೂ ಸಹ ಅಹಂ ತುಂಬಿದ ಮಾನಸಿಕತೆಯಿಂದ ಪ್ರವಾದಿಯೆಂದು ಒಪ್ಪಲು ತಯಾರಿರಲಿಲ್ಲ. ಮಾತ್ರವಲ್ಲ, ಈ ಪ್ರವಾದಿಯ ಆಗಮನದ ನಿಜಾಂಶವನ್ನು ಪುರೋಹಿತ ವರ್ಗ ಜನರಿಗೆ ತಿಳಿಸಲು ನಿರಾಕರಿಸಿತು.

ಅವರು ಅರಬರಿಗೆ ಮಾತ್ರ ಬಂದ ಪ್ರವಾದಿಯೆಂದು ವದಂತಿ ಹಬ್ಬಿಸಿದರು. ಆಗಿನ ಕಾಲದಲ್ಲೂ ಸಾಂಸ್ಕೃತಿಕ, ವೈಜ್ಞಾನಿಕ ರಂಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ರೈಸ್ತ, ಯಹೂದಿಯರೇ ಮುಂಚೂಣಿಯಲ್ಲಿದ್ದರು ಮತ್ತು ಪ್ರವಾದಿಯ ಆಗಮನದ ವಾರ್ತೆಯನ್ನು ನಿಗೂಢವಾಗಿಸಿ ಅರಬ್ ಜಗತ್ತಿನಿಂದ ಹೊರ ಜಗತ್ತಿಗೆ ತಿಳಿಸುವಲ್ಲಿ ಉನ್ನತ ಕುಲದವರು, ಅಗರ್ಭ ಶ್ರೀಮಂತ ನೇತಾರರು ಮತ್ತು ಪುರೋಹಿತ ವರ್ಗಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದರು.

ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಹೆಚ್ಚಿನ ಸಂಖ್ಯೆಯ ಕ್ರೈಸ್ತ ಮತ್ತು ಯಹೂದಿ ಧಾರ್ಮಿಕ ಪಂಡಿತರು ಮುಹಮ್ಮದ್(ಸ) ಪ್ರವಾದಿಯಾಗಲಿರುವರೆಂರು ಭವಿಷ್ಯ ನುಡಿದಿದ್ದರು. ಬಸ್ರಾ ಸನ್ಯಾಸಿ ಬಹೀರಾ (Sergius) ಬಾಲಕ ಮುಹಮ್ಮದರನ್ನು(ಸ) ನೋಡಿ “ಇವರೇ ಅಂತಿಮ ಪ್ರವಾದಿ ಆಗಿರುವರು ಎಂದು ಭವಿಷ್ಯ ನುಡಿದಿದ್ದರು. ಪ್ರವಾದಿಯವರಿಗೆ ದಿವ್ಯವಾಣಿ ಅವತರಿಸಿದ ಸಂದರ್ಭದಲ್ಲಿ ಅದನ್ನು ವಿವರಿಸುತ್ತಾ ಕ್ರೈಸ್ತ ಪಂಡಿತ ವರಕ ಬಿನ್ ನೌಫಲ್ ಹೀಗೆ ಹೇಳಿದರು;” ಅದು ಮೂಸಾ(ಅ)ರ ಬಳಿ ಬಂದ ದೇವದೂತರೇ ಆಗಿದ್ದಾರೆ”

ಹಾಗೆಯೇ ಪ್ರವಾದಿ ಹಲವಾರು ರಾಜರುಗಳೊಂದಿಗೆ ಪತ್ರ ವ್ಯವಹಾರವನ್ನು ನಡೆಸಿದ ಸಂದರ್ಭದಲ್ಲಿ ಕೆಲವರು ನಕಾರಾತ್ಮಕವಾಗಿಯೂ ಕೆಲವರು ಸಕಾರಾತ್ಮಕವಾಗಿಯೂ ಉತ್ತರಿಸಿದ್ದರು. ಅವರಲ್ಲಿ ಇಥಿಯೋಪಿಯಾದ ರಾಜ ನಜ್ಜಾಶಿ “ಇದು ಈಸಾರಿಗೆ ಅವತರಿಸಿದ ಅದೇ ಪ್ರಕಾಶ” ಎಂದಿದ್ದರು. ರೋಮನ್ ಸಾಮ್ರಾಜ್ಯದ ಅಧಿಪತಿ ಹರ್ಕುಲಸ್, “ಅವರು. ಈ ಸಾಮ್ರಾಜ್ಯವನ್ನು ಅಧೀನ ಪಡಿಸುವ ಸಮಯ ದೂರವಿಲ್ಲ” ಎಂದಿದ್ದರು. ಅಲ್ಲದೆ ಅನೇಕ ಕ್ರೈಸ್ತ ಮತ್ತು ಯಹೂದಿಗಳು ಪ್ರವಾದಿತ್ವದ ಮೇಲೆ ನಂಬಿಕೆ ಇರಿಸಿ ಅವರನ್ನು ಅನುಸರಿಸಿ ಅನುಯಾಯಿಗಳಾಗಿರುವುದರ ಬಗ್ಗೆ ಇತಿಹಾಸದಲ್ಲಿ ಪುರಾವೆಗಳಿವೆ. ಮಕ್ಕಾದಿಂದ ಹಿಜಿರ ಹೋದ ಸಂದರ್ಭದಲ್ಲಿ ಮದೀನಾದ ಆಡಳಿತವನ್ನು ಯಹೂದಿಗಳು ಪ್ರವಾದಿಗೊಪ್ಪಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಅಬ್ರಹಾಂ, ಏಸು, ಮೊಸೆಸ್, ಬುದ್ಧ, ಹಾಗೂ ಇತರ ಎಲ್ಲಾ ಪ್ರವಾದಿಗಳಂತೆ ಮುಹಮ್ಮದರು(ಸ) ಕೊನೆಯ ಪ್ರವಾದಿ ಮತ್ತು ಅವರು ಈ ಹಿಂದಿನ ಪ್ರವಾದಿಗಳು ಬೋಧಿಸಿದ್ದ ಏಕ ದೇವಾರಾಧನೆಯನ್ನು ಬೋಧಿಸಿದವರು ಎಂದು ಕುರ್‌ಆನ್ ಹೇಳುತ್ತದೆ. “ಸತ್ಯ ಮಾರ್ಗದ ಬಗ್ಗೆ ಸುವಾರ್ತೆ ನೀಡುವವರೂ ಮಿಥ್ಯ ಮಾರ್ಗದ ಬಗ್ಗೆ ಎಚ್ಚರಿಕೆ ನೀಡುವವರೂ ಆದ ಪ್ರವಾದಿಗಳನ್ನು ಅಲ್ಲಾಹನು ರವಾನಿಸಿದನು.” (ಪವಿತ್ರ ಕುರ್‌ಆನ್: 2:213)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …