Home / ಪ್ರಶ್ನೋತ್ತರ / ಪಾಪ ಮತ್ತು ತೌಬಾ?

ಪಾಪ ಮತ್ತು ತೌಬಾ?

ಪ್ರಶ್ನೆ: ನನ್ನಿಂದ ತಪ್ಪುಗಳು ಸಂಭವಿಸುತ್ತವೆ. ನಾನು ಅಲ್ಲಾಹನಲ್ಲಿ ಕ್ಷಮೆ ಯಾಚಿಸಿ ಮುಂದೆ ತಪ್ಪುಗಳಾಗಬಾರದೆಂದು ದೃಢ ನಿಶ್ಚಯ ಮಾಡುತ್ತೇನೆ. ಆದರೆ ಅದು ಕೆಲವೇ ದಿನಗಳ ಮಟ್ಟಿಗೆ ಇರುತ್ತದೆ. ಪುನಃ ಪಾಪಗಳನ್ನು ಮಾಡಿ ಬಿಡುತ್ತೇನೆ. ಪಾಪ ಮಾಡಿದ ನಂತರ ಪುನಃ ತೌಬಾ ಮಾಡುತ್ತೇನೆ. ಆದರೆ ಅನಂತರವೂ ಪದೇ ಪದೇ ಈ ರೀತಿ ಸಂಭವಿಸುತ್ತಿರುತ್ತದೆ. ಪಾಪಗಳನ್ನು ಮಾಡದೆ ತಕ್ವಾದಲ್ಲಿ ಸ್ಥಿರವಾಗಿರಲು ನಾನೇನು ಮಾಡಬೇಕು? ಒಮ್ಮೆ ತೌಬಾ ಮಾಡಿದ ನಂತರ ಪುನಃ ತಪ್ಪು ಮಾಡಿದರೆ ಹಿಂದಿನ ತೌಬಾದ ಸ್ಥಿತಿಯೇನು? ಹಿಂದೆ ಮಾಡಿದ ತಪ್ಪುಗಳನ್ನೂ ಹಿಡಿಯಲಾಗುವುದೇ? ದಯವಿಟ್ಟು ತಿಳಿಸಿ.

ಉತ್ತರ: ಪಾಪಗಳು, ತಪ್ಪು, ಪ್ರಮಾದಗಳು ಸಂಭವಿಸುವುದು ಮಾನವನಿಂದಲೇ ಹೊರತು ಪ್ರಾಣಿಗಳಿಂದಲ್ಲವೆಂಬುದನ್ನು ಮೊದಲು ತಿಳಿದಿರಬೇಕು. ಅವನಿಂದ ಯಾವಾಗಲೂ ಸಣ್ಣ ಪುಟ್ಟ ತಪ್ಪುಗಳು ಮಾತ್ರವಲ್ಲ ದೊಡ್ಡ ದೊಡ್ಡ ಪಾಪಗಳೂ ಸಂಭವಿಸುತ್ತವೆ. ಎಷ್ಟೇ ದೊಡ್ಡ ದೇವಭಕ್ತನಾದರೂ ತಾನು ಪಾಪಗಳಿಂದ ಸಂಪೂರ್ಣ ಮುಕ್ತನಾದವನು ಅಥವಾ ತನ್ನಿಂದ ಪಾಪಗಳು ಸಂಭವಿಸುವುದು ಸಾಧ್ಯವೇ ಇಲ್ಲವೆಂದು ವಾದಿಸುವಂತಿಲ್ಲ. ಆದರೆ ಓರ್ವ ವಿಶ್ವಾಸಿ (ನೈಜ ಮುಸ್ಲಿಮ್) ಮತ್ತು ಅವಿಶ್ವಾಸಿಯ ನಡುವೆ ದೊಡ್ಡ ವ್ಯತ್ಯಾಸವಿದೆ. ವಿಶ್ವಾಸಿಯಿಂದ ಪಾಪಗಳು ಸಂಭವಿಸಿದಾಗ ಕೂಡಲೇ ಅವನು ಅಲ್ಲಾಹನತ್ತ ಮರಳುತ್ತಾನೆ ಮತ್ತು ತನ್ನ ಪಾಪಗಳಿಗೆ ಪಶ್ಚಾತ್ತಾಪ ಪಟ್ಟು ಅವನಿಂದ ಕ್ಷಮೆಯಾಚಿಸುತ್ತಾನೆ.

ಅಂತವರ ಕುರಿತೇ ಕುರ್‌ಆನ್ ಹೀಗೆ ಹೇಳುತ್ತದೆ. “ಅವರಿಂದ ಎಂದಾದರೂ ಯಾವುದಾದರೂ ಅಶ್ಲೀಲ ಕಾರ್ಯಗಳು ಸಂಭವಿಸಿ ಹೋದಾಗ ಅಥವಾ ಅವರು ಯಾವುದಾದರೂ ಪಾಪ ಕಾರ್ಯ ಮಾಡಿ ತಮ್ಮ ಮೇಲೆ ತಾವೇ ಅಕ್ರಮವೆಸಗಿಕೊಂಡಾಗ ಅವರಿಗೆ ತಕ್ಷಣವೇ ಅಲ್ಲಾಹನ ಸ್ಮರಣೆಯುಂಟಾಗಿ ಬಿಡುತ್ತದೆ ಮತ್ತು ಅವರು ಅವನೊಡನೆ ತಮ್ಮ ಅಪರಾಧಗಳಿಗೆ ಕ್ಷಮೆ ಯಾಚಿಸುತ್ತಾರೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಇನ್ನಾರಿದ್ದಾರೆ? ಮತ್ತು ಅವರು ತಿಳಿದೂ ತಿಳಿದೂ ತಮ್ಮ ಅಪರಾಧದ ಬಗ್ಗೆ ಪಟ್ಟು ಹಿಡಿಯುವುದಿಲ್ಲ. (ಆಲಿ ಇಮ್ರಾನ್- 135)

ಪಾಪವನ್ನು ಉದ್ದೇಶಪೂರ್ವಕವಾಗಿ ಮಾಡಬಾರದು. ಕೆಲವೊಮ್ಮೆ ಚಿತ್ತದ ಪ್ರೇರಣೆ, ಶೈತಾನನ ಕಿರುಕುಳದಿಂದಾಗಿ ಪಾಪ ಸಂಭವಿಸಿ ಬಿಟ್ಟರೆ ಕೂಡಲೇ ಅಲ್ಲಾಹನತ್ತ ಮರಳಬೇಕು. ಸದಾ ಅಲ್ಲಾಹನನ್ನು ಸ್ಮರಿಸುತ್ತಲೂ ಸ್ತುತಿಸುತ್ತಲೂ ಇದ್ದರೆ ಪಾಪಗಳತ್ತ ಒಲವು ಕಡಿಮೆಯಾದೀತು. ಚಿತ್ತವು ಪಾಪಗಳತ್ತ ಮನುಷ್ಯನನ್ನು ಸೆಳೆಯುತ್ತದೆ. ಆ ಸಂದರ್ಭದಲ್ಲಿ ಅವನನ್ನು ಚುಚ್ಚುವ ಒಂದು ಮನಸ್ಸು ಅವನನ್ನು ಎಚ್ಚರಿಸುತ್ತದೆ. ಈ ಎಚ್ಚರಿಕೆಯನ್ನು ಕಡೆಗಣಿಸಿ ಮಾನವ ಪಾಪ ಕೂಪಕ್ಕೆ ಬೇಗನೆ ಜಾರಿ ಬೀಳಬಹುದು. ಆಗ ಅಲ್ಲಾಹನ ಸ್ಮರಣೆ, ಮರಣದ ಭಯ ಹಾಗೂ ಅಲ್ಲಾಹನ ಶಿಕ್ಷೆಯ ಬಗೆಗಿನ ಪ್ರಜ್ಞೆಯು ಅವನನ್ನು ರಕ್ಷಿಸಬಲ್ಲುದು.

ಆದ್ದರಿಂದ ಪಾಪ ಸಂಭವಿಸಿದ ಕೂಡಲೇ ಅಲ್ಲಾಹನತ್ತ ಪಶ್ಚಾತ್ತಾಪಪಟ್ಟು ಮರಳಿ ತೌಬಾ ಮಾಡಬೇಕು. ತೌಬಾದ ದ್ವಾರವು ಮರಣವು ಕಣ್ಣ ಮುಂದೆ ಬರುವ ವರೆಗೂ ತೆರೆದಿರುತ್ತದೆ. ಮರಣ ಯಾವ ಕ್ಷಣದಲ್ಲಿ ಸಂಭವಿಸಬಹುದೆಂದು ಹೇಳುವಂತಿಲ್ಲ. ಆದ್ದರಿಂದಲೇ “ವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡುವ ರೀತಿಯಲ್ಲಿ ಭಯಪಡಿರಿ. ನೀವು ವಿಶ್ವಾಸಿಗಳಾಗಿರುವ ಸ್ಥಿತಿಯಲ್ಲಲ್ಲದೆ ನಿಮಗೆ ಮರಣ ಬರಬಾರದು” ಎಂದು ಕುರ್‌ಆನಿನಲ್ಲಿ ಅಲ್ಲಾಹನು ಎಚ್ಚರಿಸಿದ್ದಾನೆ.

ಪ್ರವಾದಿ(ಸ) ಹೇಳುತ್ತಾರೆ- ಮನುಷ್ಯನ ಮರಣದ ನೋವು ಆರಂಭವಾಗುವುದಕ್ಕೆ ಮುಂಚೆ ತೌಬಾ ಮಾಡಿದರೆ ಅಲ್ಲಾಹನು ಅದನ್ನು ಸ್ವೀಕರಿಸುತ್ತಾನೆ. ಅನಂತರ, ಅಂದರೆ ಮರಣ ಎದುರಾದಾಗ ತೌಬಾದ ಬಾಗಿಲು ಮುಚ್ಚಲ್ಪಡುತ್ತದೆ. ಅವನ ತೌಬಾ ಸ್ವೀಕೃತವಾಗುವುದಿಲ್ಲ. ಆದ್ದರಿಂದ ಓರ್ವ ಮನುಷ್ಯ ಪ್ರಾಮಾಣಿಕನಾಗಿದ್ದರೆ ಅವನು ಪಾಪಗಳಿಂದ ದೂರವಿರಲು ಗರಿಷ್ಠ ಪ್ರಯತ್ನಿಸುವನು. ಇನ್ನು ಪಾಪಗಳು ಸಂಭವಿಸಿದರೆ ಕೂಡಲೇ ಪಶ್ಚಾತ್ತಾಪಪಟ್ಟು ಮರಳುವನು. ಪಾಪ ಕೂಪದಲ್ಲಿ ಬಿದ್ದಿರಲು ಅವನ ಮನಸ್ಸು ಒಪ್ಪುವುದಿಲ್ಲ.

ಇನ್ನು ಪದೇ ಪದೇ ಪಾಪ ಮಾಡುವ ವಿಷಯ. ಮನುಷ್ಯ ಮನಸ್ಸು ಈ ವಿಷಯದಲ್ಲಿ ತುಂಬಾ ದುರ್ಬಲ- ಅಲ್ಲಾಹನ ಕೃಪೆ ಜೊತೆಗಿಲ್ಲದಿದ್ದರೆ ಅವನು ಪಾಪದಲ್ಲಿ ಬೇಗನೆ ಸಿಲುಕುವ ಸಾಧ್ಯತೆಯಿದೆ. ಅಲ್ಲಾಹನ ಪ್ರವಾದಿ ಯೂಸುಫ್(ಅ) ಅತ್ಯಂತ ಚಾರಿತ್ರ್ಯವಂತ ವ್ಯಕ್ತಿಯಾಗಿದ್ದರು. ಅವರನ್ನು ಪುಸಲಾಯಿಸಿ ಬಲೆಗೆ ಬೀಳಿಸಲು ಝುಲೇಖಾ ಎಂಬ ಮಹಿಳೆ ಪ್ರಯತ್ನಿ ಸಿದ್ದರು. ಆದರೆ ಅವರು ಅದರಿಂದ ಪಾರಾಗಿ ಬಂದಿದ್ದರು. ಅವರು ಹೇಳುವ ಒಂದು ಮಾತು ಅವರು ಕೂಡಾ ಪಾಪಕ್ಕೆ ಸಿಲುಕಿ ಬಿಡಬಹುದೆಂಬ ಭೀತಿಯಲ್ಲಿದ್ದರು ಎಂದು ಸ್ಪಷ್ಟಪಡಿಸುತ್ತದೆ. ಅವರು ಹೇಳುತ್ತಾರೆ: “ನನ್ನ ಚಿತ್ತವು ನಿರ್ದೋಷಿಯೆಂದು ನಾನೇನೂ ಹೇಳಿಕೊಳ್ಳುತ್ತಿಲ್ಲ, ನನ್ನ ಪ್ರಭುವಿನ ಕೃಪೆಯಿಲ್ಲದಿದ್ದರೆ ಚಿತ್ತವಂತೂ ಕೇಡಿನ ಕಡೆಗೇ ಪ್ರೇರೇಪಿಸುತ್ತದೆ.” (ಯೂಸುಫ್: 53)

ಪವಿತ್ರ ಕುರ್‌ಆನಿನಲ್ಲಿ `ಅತ್ತಾಇ ಬೂನ್’ ಎಂಬ ಒಂದು ಪದ ಬರುತ್ತದೆ. ವಿಶ್ವಾಸಿಗಳು ತೌಬಾ ಮಾಡುವವರಾಗಿದ್ದಾರೆ ಎಂದು ಅದರ ಅರ್ಥ. ಆದರೆ ವಿದ್ವಾಂಸರು ಆ ಪದವನ್ನು ಪದೇ ಪದೇ ತೌಬಾ ಮಾಡುವವರು ಎಂದು ವ್ಯಾಖ್ಯಾನಿಸುತ್ತಾರೆ. ಅಂದರೆ ಒಮ್ಮೆ ತೌಬಾ ಮಾಡಿದ ನಂತರ ಪುನಃ ಪಾಪ ಸಂಭವಿಸಿದರೆ ಅದರಿಂದ ನಿರಾಶರಾಗಬಾರದು. ನಿರಾಶೆಯು ಶೈತಾನನ ಗುಣವಾಗಿದೆ. ಅವನು ಅಲ್ಲಾಹನ ಕರುಣೆಯಿಂದ ನಿರಾಶನಾಗಿ ಪಾಪಗಳನ್ನೇ ಮಾಡುವುದನ್ನು ನೆಚ್ಚಿಕೊಂಡನು. ಅದರಿಂದ ಕಿಯಾಮತ್‌ನವರೆಗೆ ಅವನು ಬಹಿಷ್ಕೃತನಾದನು.

ಇನ್ನು ಒಮ್ಮೆ ಪಾಪ ಮಾಡಿ ತೌಬಾ ಮಾಡಿದ ನಂತರ ಪುನಃ ಪಾಪ ಸಂಭವಿಸಿದರೆ ಹಿಂದಿನ ತೌಬಾದ ಸ್ಥಿತಿಯೇನು ಎಂಬ ಪ್ರಶ್ನೆ. ಒಮ್ಮೆ ಪಾಪ ಮಾಡಿ ತೌಬಾ ಮಾಡಿದ ನಂತರ ಪಾಪ ಮಾಡಿದರೆ ಅದಕ್ಕಾಗಿ ಹಿಂದಿನ ಪಾಪಗಳಿಗಾಗಿ ವಿಚಾರಿಸಲಾಗುವುದಿಲ್ಲ. ಆ ಪಾಪವು ಹಿಂದಿನ ತೌಬಾದೊಂದಿಗೆ ಅಳಿದು ಹೋಗುತ್ತದೆ. ಪಾಪ ಮಾಡಿದ ನಂತರ ಪಶ್ಚಾ ತ್ತಾಪ ಪಡುವುದು ಮತ್ತು ಅಲ್ಲಾಹನಲ್ಲಿ ತೌಬಾ ಮಾಡುವುದು ಹಾಗೂ ದಾನ-ಧರ್ಮಗಳನ್ನು ಮಾಡುವುದರಿಂದ ಮನುಷ್ಯನನ್ನು ಪಾಪ ಮಾಡದಂತೆ ತಡೆಯುತ್ತದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *