Home / ಪ್ರಶ್ನೋತ್ತರ / ಪವಿತ್ರ ಕುರ್‌ಆನ್ ಹಿಂದೂ ವಿರೋಧಿಯೇ?

ಪವಿತ್ರ ಕುರ್‌ಆನ್ ಹಿಂದೂ ವಿರೋಧಿಯೇ?

✍️ ಏ.ಕೆ.ಕುಕ್ಕಿಲ 

ಪವಿತ್ರ ಕುರ್‌ಆನನ್ನು ಕಟಕಟೆಯಲ್ಲಿ ನಿಲ್ಲಿಸುವ ಬೆಳವಣಿಗೆಗಳು ಈ ದೇಶದಲ್ಲಿ ಆಗಾಗ ನಡೆಯುತ್ತಿರುತ್ತವೆ. `ಅದು ಹಿಂದೂ ವಿರೋಧಿ,’ `ಹಿಂದೂಗಳ ಹತ್ಯೆ ನಡೆಸುವುದಕ್ಕೆ ಕರೆ ಕೊಡುವ ಗ್ರಂಥ,’ `ಮುಸ್ಲಿಮೇತರರ ಬಗ್ಗೆ ಅಸಹಿಷ್ಣುತೆಯನ್ನು ಪ್ರತಿಪಾದಿಸುವ ಚಿಂತನೆ,’ `ಇಸ್ಲಾಮ್ ಹೊರತು ಪಡಿಸಿ ಇನ್ನಾವ ಧರ್ಮವೂ ಈ ಜಗತ್ತಿನಲ್ಲಿ ಇರಬಾರದೆಂದು ಕರೆಕೊಡುವ ವಿಚಾರಧಾರೆ..’ ಎಂಬೆಲ್ಲಾ ಆರೋಪಗಳನ್ನು ಹೊರಿಸಲಾಗುತ್ತದೆ.

ಇದಕ್ಕೆ ಆಧಾರವಾಗಿ ಕೆಲವೊಂದು ವಚನಗಳನ್ನೂ ತೇಲಿಬಿಡಲಾಗುತ್ತದೆ. ಅದರಲ್ಲಿ, `ನಿಷೇಧಿತ ಮಾಸಗಳು ಕಳೆದ ಬಳಿಕ ಬಹುದೇವ ವಿಶ್ವಾಸಿಗಳನ್ನು ಸಿಕ್ಕಲ್ಲಿ ವಧಿಸಿರಿ. ಅವರನ್ನು ಸೆರೆ ಹಿಡಿಯಿರಿ. ಮುತ್ತಿಗೆ ಹಾಕಿರಿ. ಬೇಹು ನಡೆಸುವಲ್ಲೆಲ್ಲ ಅವರನ್ನು ಹೊಂಚುಹಾಕಿ ಕುಳಿತುಕೊಳ್ಳಿರಿ…’ ಎಂಬ ಅತ್ತೌಬ ಅಧ್ಯಾಯದ ಈ 5ನೇ ವಚನವೂ ಒಂದು. ಆದರೆ, ಈ ವಚನವನ್ನು ಎತ್ತಿಕೊಂಡು ಪವಿತ್ರ ಕುರ್‌ಆನನ್ನು ಕಟಕಟೆಯಲ್ಲಿ ನಿಲ್ಲಿಸಬಯಸುವ ಯಾರೂ ಈ ವಚನಕ್ಕಿಂತ ಮೊದಲಿನ ಮತ್ತು ಇದರೊಂದಿಗೆ ಸಂಬಂಧ ಹೊಂದಿರುವ ಈ 4ನೇ ವಚನವನ್ನು ಉಲ್ಲೇಖಿಸುವುದೇ ಇಲ್ಲ.

ಅದು ಹೀಗಿದೆ:
ನೀವು ಒಪ್ಪಂದ ಮಾಡಿಕೊಂಡಿದ್ದು ತಮ್ಮ ಒಪ್ಪಂದ ಪಾಲನೆಯಲ್ಲಿ ನಿಮ್ಮೊಂದಿಗೆ ಯಾವತ್ತೂ ಲೋಪವೆಸಗದಿದ್ದರೆ ಹಾಗೂ ನಿಮ್ಮ ವಿರುದ್ಧ ಯಾರಿಗೂ ಸಹಾಯ ಮಾಡದಿದ್ದರೆ ಈ ಬಹುದೇವ ವಿಶ್ವಾಸಿಗಳು ಇದಕ್ಕೆ ಹೊರತಾಗಿದ್ದಾರೆ. ಇಂಥವರೊಂದಿಗೆ ನೀವೂ ಅವಧಿಯವರೆಗೆ ಒಪ್ಪಂದವನ್ನು ಪಾಲಿಸಿರಿ. ಯಾಕೆಂದರೆ, ಅಲ್ಲಾಹನು ಧರ್ಮನಿಷ್ಠರನ್ನೇ ಮೆಚ್ಚುತ್ತಾನೆ.

ನಿಜವಾಗಿ, ಬಹುದೇವ ವಿಶ್ವಾಸಿಗಳನ್ನು ಅವರ ವಿಶ್ವಾಸದ ಕಾರಣಕ್ಕಾಗಿ ಕೊಲ್ಲುವುದು ಪವಿತ್ರ ಕುರ್‌ಆನಿನ ಉದ್ದೇಶವೇ ಅಲ್ಲ ಎಂಬುದನ್ನು ಈ ನಾಲ್ಕನೇ ವಚನ ಸ್ಪಷ್ಟಪಡಿಸುತ್ತದೆ. ಒಪ್ಪಂದವನ್ನು ಪಾಲಿಸುವ ಅಥವಾ ಇಂದಿನ ಭಾಷೆಯಲ್ಲಿ ಹೇಳುವುದಾದರೆ ಕಾನೂನನ್ನು ಪಾಲಿಸುವ ಬಹುದೇವ ವಿಶ್ವಾಸಿಗಳು ಕಾನೂನು ಕ್ರಮದಿಂದ ಹೊರತಾಗಿದ್ದಾರೆ ಎಂದು 4ನೇ ವಚನ ಹೇಳಿದರೆ, `ನಿಷೇಧಿತ ಮಾಸಗಳು ಕಳೆದ ಬಳಿಕ ಬಹುದೇವ ವಿಶ್ವಾಸಿಗಳ ಮೇಲೆ ಅಥವಾ ಕಾನೂನು ಉಲ್ಲಂಘಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು 5ನೇ ವಚನ ಹೇಳುತ್ತದೆ. ಒಂದುವೇಳೆ, ಬಹುದೇವ ವಿಶ್ವಾಸವೇ ಅವರ ಮೇಲೆ ಶಿಕ್ಷಾ ಆದೇಶಕ್ಕೆ ಕಾರಣ ಎಂದಾದರೆ `ನಿಷೇಧಿತ ಮಾಸಗಳು’ ಮತ್ತು `ಒಪ್ಪಂದಕ್ಕೆ ಬದ್ಧರಾದವರು’ ಎಂಬೆರಡು ಪದಗಳ ಅಗತ್ಯವೇ ಇರಲಿಲ್ಲ. ಏಕದೇವ ವಿಶ್ವಾಸಿಗಳಲ್ಲದವರನ್ನು ವಧಿಸಿರಿ ಎಂಬ ಏಕ ಆದೇಶವೇ ಧಾರಾಳ ಸಾಕಿತ್ತು. ಆದರೆ, ಪವಿತ್ರ ಕುರ್‌ಆನ್ ಹಾಗೆ ಹೇಳಿಲ್ಲ ಎಂದು ಮಾತ್ರ ಅಲ್ಲ,

‘ಆಶ್ರಮಗಳು, ಇಗರ್ಜಿಗಳು, ಯಹೂದಿಯರ ಸಿನಗಾಗ್‌ಗಳು ಮತ್ತು ಮಸೀದಿಗಳನ್ನು ಈ ಭೂಮಿಯ ಮೇಲೆ ಅಲ್ಲಾಹನೇ ಉಳಿಸಿದ್ದಾನೆ’ (22:41) ಎಂಬ ಅತ್ಯಂತ ಉದಾರವಾದಿ ಮತ್ತು ಸರ್ವಧರ್ಮ ಸಹಿಷ್ಣುವಾದ ಮಾತನ್ನೇ ಹೇಳಿದೆ. ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ (109:6) ಎಂದು ಹೇಳಿರುವ ಪವಿತ್ರ ಕುರ್‌ಆನ್, ಬಹುದೇವಾರಾಧಕರು ಯಾರನ್ನು ಕರೆದು ಪ್ರಾರ್ಥಿಸುತ್ತಿರುವರೋ ಆ ವಿಗ್ರಹಗಳನ್ನು ತೆಗಳಬೇಡಿರಿ (6:108) ಎಂದೂ ಮುಸ್ಲಿಮರಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ. ಒಂದುವೇಳೆ, ಬಹುದೇವ ವಿಶ್ವಾಸಿಗಳನ್ನು ವಧಿಸುವ ಮೂಲಕ ಬಹುದೇವಾರಾಧಕರನ್ನೆಲ್ಲ ನಾಶಪಡಿಸುವುದೇ ಪವಿತ್ರ ಕುರ್‌ಆನಿನ ಉದ್ದೇಶವಾಗಿರುತ್ತಿದ್ದರೆ, ಈ ಉದಾರವಾದಿ ವಚನಗಳು ಜಾಗ ಪಡಕೊಂಡದ್ದು ಹೇಗೆ? ಅಂದಹಾಗೆ,

ಸಮಸ್ಯೆ ಪವಿತ್ರ ಕುರ್‌ಆನಿನದ್ದಲ್ಲ, ಅದನ್ನು ಬಹುದೇವ ವಿಶ್ವಾಸಿಗಳ ವಿರೋಧಿ ಎಂದು ಬಿಂಬಿಸಬೇಕೆಂದೇ ಬಯಸುವವರದ್ದು. ಆ ಏಕೈಕ ಉದ್ದೇಶದಿಂದಲೇ ಪವಿತ್ರ ಕುರ್‌ಆನಿನ 6220ಕ್ಕಿಂತಲೂ ಅಧಿಕ ವಚನಗಳಿಂದ ತಮಗನುಕೂಲಕರವಾದ ಕೆಲವೊಂದು ವಚನಗಳನ್ನು ಅದರ ಹಿಂದು-ಮುಂದನ್ನು ಮರೆಮಾಚಿ ಅವರು ಉಲ್ಲೇಖಿಸುತ್ತಿದ್ದಾರೆ. ಅಷ್ಟಕ್ಕೂ,

ಪವಿತ್ರ ಕುರ್‌ಆನನ್ನೇ ಸಂವಿಧಾನವೆಂದು ಘೋಷಿಸಿಕೊಂಡಿರುವ ಅರಬ್ ರಾಷ್ಟ್ರಗಳಲ್ಲಿ ಅಸಂಖ್ಯ ಹಿಂದೂಗಳು ಇವತ್ತು ದುಡಿಯುತ್ತಿದ್ದಾರೆ. ಒಂದುವೇಳೆ, ಬಹುದೇವ ವಿಶ್ವಾಸಿಗಳನ್ನು ವಿಶ್ವಾಸದ ಕಾರಣಕ್ಕಾಗಿ ವಧಿಸುವುದೇ ಪವಿತ್ರ ಕುರ್‌ಆನಿನ ಗುರಿಯಾಗಿರುತ್ತಿದ್ದರೆ ಇವರೆಲ್ಲರ ಪರಿಸ್ಥಿತಿ ಏನಿರುತ್ತಿತ್ತು? ಕನಿಷ್ಠ ಬಹುದೇವ ವಿಶ್ವಾಸಿಗಳು ನಮ್ಮ ನೆಲಕ್ಕೆ ಕಾಲಿಡಬಾರದು ಎಂಬ ಕಾನೂನನ್ನಾದರೂ ಈ ರಾಷ್ಟ್ರಗಳು ಜಾರಿ ಮಾಡಿರಬೇಕಿತ್ತಲ್ಲವೇ?

ನಿಜವಾಗಿ, ಬಹುದೇವ ವಿಶ್ವಾಸಿಗಳನ್ನು ದ್ವೇಷಿಸುತ್ತಿರುವುದು ಪವಿತ್ರ ಕುರ್‌ಆನ್ ಅಲ್ಲ, ಸುಳ್ಳನ್ನು ಹರಡುತ್ತಿರುವ ಅವರದೇ ಅನುಯಾಯಿಗಳು. ಅಷ್ಟೇ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *