Home / ಲೇಖನಗಳು / ಬದ್ರ್: ವಿಜಯದ ಕಾರಣಗಳು

ಬದ್ರ್: ವಿಜಯದ ಕಾರಣಗಳು

✍️ಡಾ| ಯೂಸುಫುಲ್ ಕರ್ಝಾವಿ

ವಿಶ್ವಾಸಿ ಸಮೂಹವು ಬದ್ರ‍್ ನ ಘಟನೆಯನ್ನು ಸ್ಮರಿಸುವುದೇಕೆ? ಆ ಘಟನೆಯ ಕುರಿತು ಅವರಿಗೆ ಇಷ್ಟೊಂದು ಆಸಕ್ತಿಯೇಕೆ? ಕುರ್‌ಆನ್ ಅದರ ಬಗ್ಗೆ ತೋರಿದ ಆಸಕ್ತಿಯೇ ಅದರ ಮೊದಲ ಕಾರಣ. ಬದ್ರ್ ಯುದ್ಧವು ಪ್ರವಾದಿಯವರ(ಸ) ಜೀವನದ ಪ್ರಮುಖ ದಿಕ್ಸೂಚಿಯಾಗಿತ್ತಷ್ಟೇ. ಬದ್ರ್ ಯುದ್ಧದ ಬಳಿಕ ಕುರ್‌ಆನ್‌ನ ಅಲ್‌ಅನ್ಫಾಲ್ ಎಂಬ ಅಧ್ಯಾಯ ಅವತೀರ್ಣವಾಯಿತು. ಕುರ್‌ಆನ್‌ನಲ್ಲಿ ಬದ್ರ‍್ ನ ಪ್ರಸ್ತಾಪವಿದೆ. ಆ ಬಳಿಕ ಪ್ರವಾದಿಯವರ(ಸ) ಸೇನಾ ಕಾರ್ಯಾಚರಣೆಗಳಲ್ಲಿ ಹುನೈನ್ ಯುದ್ಧವನ್ನು ಮಾತ್ರ ಕುರ್‌ಆನ್ ಹೆಸರೆತ್ತಿ ಹೇಳಿದೆ.

ಸತ್ಯಾಸತ್ಯವನ್ನು ಬೇರ್ಪಡಿಸುವ ದಿನದಲ್ಲಿ (ಯೌಮುಲ್ ಫುರ್ಕಾನ್) ಎರಡು ತಂಡಗಳು ಮುಖಾಮುಖಿಯಾದುವೆಂದು ಕುರ್‌ಆನ್ ಹೇಳುತ್ತದೆ. ವಿಶ್ವಾಸಿಗಳ ತಂಡ ಮತ್ತು ಅವಿಶ್ವಾಸಿಗಳ ತಂಡ. ಪ್ರವಾದಿ ಮುಹಮ್ಮದ್‌ರವರು(ಸ) ವಿಶ್ವಾಸಿ ತಂಡದ ನಾಯಕ. ಅಬೂಜಹಲ್ ಅವಿಶ್ವಾಸಿ ತಂಡದ ನಾಯಕ. ಈ ವಿಧಿನಿರ್ಣಾಯಕ ಯುದ್ಧದಲ್ಲಿ ಭಾಗವಹಿಸಿದ ವಿಶ್ವಾಸಿಗಳ ಶ್ರೇಷ್ಠತೆಯು ಬಹಳ ವಿಶಿಷ್ಟವಾಗಿದೆ.

ಮಕ್ಕಾ ವಿಜಯಕ್ಕಿಂತ ಮುಂಚೆ ಹಾತಿಬ್ ಬಿನ್ ಅಬೀ ಬಲ್ತ ಎಂಬ ಸಹಾಬಿ ಮಹಾ ಮೋಸದ ಅಪರಾಧಕ್ಕಾಗಿ ಬಂಧಿತರಾದರು. ಆತನನ್ನು ವಧಿಸಬೇಕೆಂದು ಉಮರ್(ರ) ಹಾಗೂ ಇತರರ ಅಭಿಪ್ರಾಯವಾಗಿತ್ತು. ಆದರೆ ಬದ್ರ‍್ ನಲ್ಲಿ ಭಾಗವಹಿಸಿದವರೆಂಬ ಕಾರಣಕ್ಕಾಗಿ ಪ್ರವಾದಿಯವರು(ಸ) ಹಾತಿಬ್‌ರಿಗೆ ಕ್ಷಮೆ ನೀಡಿದರು. ಇದು ಬದ್ರ‍್ ನ ಶ್ರೇಷ್ಠತೆ.

ಸತ್ಯ ಮತ್ತು ಅಸತ್ಯದ ಪರಸ್ಪರ ಹೋರಾಟ. ಒಂದೆಡೆಯಲ್ಲಿ ಅಲ್ಲಾಹನ ಸೇನೆ, ಮತ್ತೊಂದೆಡೆ ಎಲ್ಲ ದುಷ್ಟ ಶಕ್ತಿಗಳ ಸೇನೆ. ಈ ಹೋರಾಟದಲ್ಲಿ ಭಾಗವಹಿಸಿದಾತನಿಗೆ (ಬದ್‌ರಿಯ್ಯಿ) ಸಹಾಬಿಗಳಲ್ಲಿ ಉನ್ನತ ಸ್ಥಾನವಿತ್ತು. ನನ್ನ ತಂದೆ ಅಥವಾ ನನ್ನ ತಾತ ಬದ್‌ರಿಯ್ಯಿ ಎಂದು ಅವರು ಅಭಿಮಾನದಿಂದ ಹೇಳುತ್ತಿದ್ದರು. ಹೀಗೆ ಮುಂದಿನ ತಲೆಮಾರುಗಳು ಅಭಿಮಾನ ಪಡುವಂಥ ಮಹಾ ಘಟನೆ.

ಲೌಕಿಕ ದೃಷ್ಟಿಯಲ್ಲಿ ಬಹಳ ನಗಣ್ಯ ಯುದ್ಧ! 300 ಮಂದಿ ವಿಶ್ವಾಸಿಗಳು, ಸುಮಾರು 1000 ಮಂದಿಯ ವೈರಿ ಸೇನೆಯನ್ನು ಎದುರಿಸುತ್ತದೆ. ಸಂಜೆಯಾದಾಗ ಯುದ್ಧ ಮುಗಿಯುತ್ತದೆ. ವೈರಿಗಳಲ್ಲಿ 70 ಮಂದಿ ಹತರಾಗುತ್ತಾರೆ, 70 ಮಂದಿ ಕೈದಿಯಾಗುತ್ತಾರೆ. ಮುಸ್ಲಿಮರಲ್ಲಿ 14 ಮಂದಿ ಹುತಾತ್ಮರಾಗುತ್ತಾರೆ. ಯುದ್ಧ ವರ್ಷಗಟ್ಟಲೆ ನಡೆದು ಲಕ್ಷಾಂತರ ಮಂದಿ ಸಾಯುವುದಿಲ್ಲ. ಹೀಗಿರುತ್ತಾ ಆ ಕುರಿತು ಇಷ್ಟೆಲ್ಲ ವಿವರಣೆಗಳೇಕೆ?

ಯಾಕೆಂದರೆ ನಾವು ಬದ್ರ‍್ ನ ಪರಿಣಾಮಗಳನ್ನು ಅವಲೋಕಿಸುತ್ತೇವೆ. ಆ ಸಣ್ಣ’ ಯುದ್ಧವು ಮಾನವೇತಿಹಾಸದ ಪ್ರಮುಖ ಕವಲುದಾರಿಯಾಗಿತ್ತು. ಇದರಲ್ಲಿ ಸೋತರೆ ಅನಂತರ ನಿನ್ನ ಆರಾಧನೆಗೆ ಭೂಮಿಯಲ್ಲಿ ಯಾರೂ ಉಳಿಯಲಾರರು’ ಎಂಬ ಪ್ರವಾದಿಯವರ(ಸ) ಮಾತಿನ ತಾತ್ಪರ್ಯವೂ ಅದೇ ಆಗಿದೆ. ಅರ್ಥಾತ್, ಇಸ್ಲಾಮಿನ ಅಳಿವು-ಉಳಿವು ಆ ಯುದ್ಧದ ಫಲಿತಾಂಶವನ್ನು ಅವಲಂಬಿಸಿತ್ತು.

ಅಲ್ಲಾಹನ ಮತ್ತು ವಿಶ್ವಾಸಿಗಳ ಇಚ್ಛೆಗಳು ಭಿನ್ನವಾಗಿದ್ದುವು. ಅಬೂಸುಫ್‌ಯಾನ್‌ರ ನಾಯಕತ್ವದಲ್ಲಿರುವ ವ್ಯಾಪಾರಿ ತಂಡ ಅಥವಾ ಅಬೂ ಜಹಲ್‌ನ ನಾಯಕತ್ವದ ವೈರಿ ಸೇನೆಯನ್ನು ಅಧೀನಗೊಳಿಸುವುದಾಗಿ ಅಲ್ಲಾಹನು ವಿಶ್ವಾಸಿಗಳಿಗೆ ಮಾತುಕೊಟ್ಟಿದ್ದನು. ಆದರೆ ಸಹಜವಾಗಿ ವಿಶ್ವಾಸಿಗಳು, ರಕ್ತಪಾತ ಮತ್ತು ಯುದ್ಧದ ನಾಶ ನಷ್ಟಗಳನ್ನು ತಪ್ಪಿಸಲಿಕ್ಕಾಗಿ ವ್ಯಾಪಾರಿ ತಂಡವನ್ನು ಆಕ್ರಮಿಸ ಬಯಸಿದರು. ವೈರಿಗಳನ್ನು ಆರ್ಥಿಕವಾಗಿ ಮಣಿಸುವುದೇ ಅವರ ತಂತ್ರವಾಗಿತ್ತು.

ಪ್ರಬಲವಲ್ಲದ (ಶಸ್ತ್ರ ಸಜ್ಜಿತವಲ್ಲದ) ತಂಡವನ್ನು ನೀವು ಬಯಸಿದಿರಿ’ ಎಂದು ಕುರ್‌ಆನ್ ಹೇಳಿದೆ. ಆದರೆ ಅಸತ್ಯದ ಬುಡಕಡಿದು, ಅನಂತರ ಅಸತ್ಯದ ಮೇಲೆ ಸತ್ಯದ ಧ್ವಜ ಹಾರಿಸುವುದೇ ಅಲ್ಲಾಹನ ಉದ್ದೇಶವಾಗಿತ್ತು. ಆದ್ದರಿಂದ ಕಡು ವೈರಿಗಳು ನೆರೆದಿದ್ದ ಸಶಸ್ತ್ರ ಸೇನೆಯನ್ನು ವಿಶ್ವಾಸಿಗಳು ಎದುರಿಸಬೇಕಾಗಿತ್ತು. ಅದೇ ವೇಳೆ ಅದಕ್ಕೆ ಬೇಕಾದ ಲೌಕಿಕ ಸೌಲಭ್ಯಗಳು ಅವರಲ್ಲಿ ಇರಲಿಲ್ಲ.

ಎಲ್ಲ ಸಂದರ್ಭದಲ್ಲಿಯೂ ಸಮಾಲೋಚನೆ ನಡೆಸಬೇಕೆಂದು ಬದ್ರ‍್ ನ ಬಹುದೊಡ್ಡ ಪಾಠ. ಯುದ್ಧಕ್ಕಿಂತ ಮುಂಚೆಯೂ ಯುದ್ಧ ವೇಳೆಯಲ್ಲಿಯೂ ಯುದ್ಧ ಮುಗಿದ ಬಳಿಕವೂ ಪ್ರವಾದಿಯವರು(ಸ) ಸಮಾಲೋಚನೆ ನಡೆಸಿದ್ದರು.

ಅಬೂಸುಫ್‌ಯಾನ್‌ರ ನಾಯಕತ್ವದ ವ್ಯಾಪಾರಿ ತಂಡವು ಪಾರಾಗಿ; ಸುಶಕ್ತ ಸೇನೆಯನ್ನು ಎದುರಿಸಬೇಕಾದ ನಿರ್ಣಾಯಕ ಸಂದರ್ಭದಲ್ಲಿ ಪ್ರವಾದಿ(ಸ) ಹೇಳಿದರು, “ಜನರೇ ನೀವು ನಿಮ್ಮ ಅಭಿಪ್ರಾಯ ಹೇಳಿರಿ.” ಆಗ ಉಮರ್, ಅಬೂಬಕರ್, ಮಿಕ್‌ದಾದ್ ಬಿನ್ ಅಸ್ವದ್ ಮುಂತಾದವರು ಎದ್ದು ನಿಂತು, ಪ್ರವಾದಿಯವರ(ಸ) ಜತೆಯಲ್ಲಿ ಮರಣದ ತನಕ ಹೋರಾಡುವುದಾಗಿ ಮಾತು ಕೊಟ್ಟರು. ವಸ್ತುತಃ ಅವರ ಅಭಿಪ್ರಾಯವು ಪ್ರವಾದಿಯವರ(ಸ) ಉದ್ದೇಶವಾಗಿರಲಿಲ್ಲ. ಅವರೆಲ್ಲರೂ ಪ್ರವಾದಿಯವರೊಂದಿಗೆ(ಸ) ಅಭ್ಯರ್ಥಿಗಳಾಗಿ ಮದೀನಕ್ಕೆ ಮೊದಲೇ ಬಂದಿದ್ದರಷ್ಟೆ. ಮದೀನದಲ್ಲಿ ಪ್ರವಾದಿಗಳಿಗೆ ನೆರವಾದ ಸ್ಥಳೀಯ ನಿವಾಸಿಗಳಿದ್ದರು- ಅನ್ಸಾರಿಗಳು. ಅವರೇ ಬಹುಸಂಖ್ಯಾತರು. ಪ್ರವಾದಿಯವರಿಗೆ(ಸ) ಆ ಮಂದಿಯ ಅಭಿಪ್ರಾಯ ಪ್ರಧಾನವಾಗಿತ್ತು. ಆಗ ಅನ್ಸಾರಿ ಗಣ್ಯರಾದ ಸಅದ್ ಬಿನ್ ಮುಆದ್ ಎದ್ದು ನಿಲ್ಲುತ್ತಾರೆ. “ನಿಮ್ಮ ಸಂಗಡ ಯಾವ ಸಮುದ್ರಕ್ಕೆ ಧುಮಕಲೂ ನಾವು ಸಿದ್ಧ” ಎಂದು ಸಾರುತ್ತಾರೆ. ಇದೇ ಪ್ರವಾದಿಯವರು(ಸ) ಆಲಿಸ ಬಯಸಿದ್ದ ಮಾತುಗಳು. ಇದು ಯುದ್ಧಾರಂಭಕ್ಕಿಂತ ಮುಂಚೆ ನಡೆಸಿದ ಸಮಾಲೋಚನೆ.

ಯುದ್ಧಕ್ಕಾಗಿ ಒಂದೆಡೆ ಶಿಬಿರ ಹೂಡಿದಾಗ ಹುಬಾಬ್ ಬಿನ್ ಮುಂದಿರ್ ಎಂಬ ಸಹಾಬಿ ಕೇಳಿದರು, “ಇದು ಅಲ್ಲಾಹನ ನಿರ್ಣಯವೋ? ಅಥವಾ ನಿಮ್ಮ ಸ್ವಂತ ಯುದ್ಧ ತಂತ್ರವೋ? ದೇವ ನಿರ್ಣಯವಾಗಿದ್ದರೆ ನಾವು ಅನುಸರಿಸಲೇಬೇಕಲ್ಲವೇ?” ಇದು ನನ್ನ ಸ್ವಂತ ಅಭಿಪ್ರಾಯವೆಂದು ಹೇಳಿದಾಗ, ಹುಬಾಬ್ ಬೇರೊಂದು ಸ್ಥಳವನ್ನು ತೋರಿಸಿದರು, “ನಾವು ಇಲ್ಲಿ ಶಿಬಿರ ಹೂಡಿದರೆ ನೀರು ಧಾರಾಳವಾಗಿ ದೊರೆಯಬಹುದು: ಹಾಗೆಯೇ ವೈರಿಗಳ ನೀರನ್ನು ತಡೆಯಬಹುದು.” ಪ್ರವಾದಿಯವರು(ಸ) ಆ ಸಲಹೆಯನ್ನು ಸ್ವೀಕರಿಸಿದರು. ಇದು ಯುದ್ಧಕ್ಕಿಂತ ಮೊದಲು ನಡೆಸಿದ ಸಮಾಲೋಚನೆ.

ಯುದ್ಧದ ಬಳಿಕ ಏನು ಮಾಡಿದರು? ಕೈದಿಗಳ ವಿಲೇವಾರಿಯ ಬಗ್ಗೆ ಚರ್ಚಿಸಿದರು. “ಅವರು ನಮ್ಮ ಸ್ವಂತ ಜನರಲ್ಲವೇ, ಅವರ ಮುಂದಿನ ತಲೆಮಾರುಗಳಲ್ಲಿ ಇಸ್ಲಾಮಿಗೆ ನೆರವಾಗುವವರಿರಬಹುದಷ್ಟೆ, ಆದ್ದರಿಂದ ಪರಿಹಾರ ಧನ ಪಡೆದು ಬಿಡುಗಡೆಗೊಳಿಸೋಣ” ಇದು ಅಬೂಬಕರ್ ಅಭಿಪ್ರಾಯ. ಆದರೆ ಇತರರಿಗೆ ಪಾಠವಾಗಲಿಕ್ಕಾಗಿ ಅವರನ್ನು ವಧಿಸಬೇಕೆಂದು ಉಮರ್ ಸೂಚಿಸಿದರು. ಪ್ರವಾದಿಯವರು(ಸ) ಅಬೂಬಕರ್‌ರ ಸಲಹೆಯನ್ನು ಅಂಗೀಕರಿಸಿದರು. ಇದು ಯುದ್ಧದ ಬಳಿಕದ ಸಮಾಲೋಚನೆ.

ಹಾಗಾದರೆ ಸಮಾಲೋಚನೆಯು ಇಸ್ಲಾಮಿನ ಮೂಲ ಸಿದ್ಧಾಂತ. ಅವರು ತಮ್ಮ ವಿಷಯಗಳನ್ನು ಸಮಾಲೋಚನೆಯಿಂದ ತೀರ್ಮಾನಿಸುತ್ತಾರೆ’ ಇದು ಮದೀನದಲ್ಲಿ ಅವತೀರ್ಣವಾದ ವಚನ. ಮದೀನದಲ್ಲಿಯೇ ಸಮಾನಾರ್ಥದ ಇನ್ನೊಂದು ವಚನ ಅವತೀರ್ಣವಾಯಿತು. “ಅವರೊಡನೆ ನೀವು ಸಮಾಲೋಚನೆ ನಡೆಸಿರಿ.”

ಲೌಕಿಕ ದೃಷ್ಟಿಯಿಂದ ನೋಡಿದರೆ ಮುಸ್ಲಿಮರು ಈ ಯುದ್ಧದಲ್ಲಿ ಸೋಲದೆ ಬೇರೆ ದಾರಿಯಿಲ್ಲ. ಅವರ ಸಂಖ್ಯೆಯು ವೈರಿಗಳ 3:1 ಅಂಶಕ್ಕಿಂತ ಕಡಿಮೆ. ಮುಸ್ಲಿಮ್ ಸೇನೆಯಲ್ಲಿ ಕೇವಲ ಝುಬೈರ್ ಮತ್ತು ಮಿಕ್ದಾದ್‌ರಲ್ಲಿ ಎರಡು ಕುದುರೆಗಳಿದ್ದುವು. ವೈರಿ ಸೇನೆಯಲ್ಲಿ ನೂರು ಅಶ್ವಾರೂಢರು. ಅದು ಆಧುನಿಕ ಕಾಲದ ಟ್ಯಾಂಕ್‌ಗಳಂತೆ. ಮುಸ್ಲಿಮ್ ಸೈನಿಕರಿಗೆ ಸೇವಿಸಲು ಕೇವಲ ಖರ್ಜೂರದಂಥ ಆಹಾರ ವಸ್ತುಗಳು. ವೈರಿ ಸೇನೆಯು ಪ್ರತೀದಿನ ಹತ್ತು ಒಂಟೆಗಳನ್ನು ಕಡಿದು ಮೃಷ್ಟಾನ್ನಭೋಜನ ಮಾಡುತ್ತಿತ್ತು. ಇನ್ನು ಸಂಚರಿಸುವ ಸವಾರಿ ವಾಹನಗಳ ಸ್ಥಿತಿಯೋ? ಮೂರ‍್ನಾಲ್ಕು ಮಂದಿಗೆ ತಲಾ ಒಂದು ಒಂಟೆ. ಒಬ್ಬರು ಒಂಟೆಯ ಮೇಲೆ ಸಂಚರಿಸುವಾಗ ಉಳಿದ ಮೂರು ಮಂದಿ ನಡೆಯುತ್ತಾರೆ. ಪ್ರವಾದಿಯವರು(ಸ) ಅಲಿ ಮತ್ತು ಅಬೂಬಕರ್‌ರ ಗುಂಪಿನಲ್ಲಿದ್ದರು. ಪ್ರವಾದಿ(ಸ) ಸರದಿಯಂತೆ ಅವರ ಜತೆಯಲ್ಲಿ ಸವಾರಿಯಲ್ಲಿ ಕುಳಿತು ನಡೆದು ಸಂಚರಿಸುತ್ತಿದ್ದರು. “ಪ್ರವಾದಿಯವರೇ(ಸ), ನಾವಾದರೋ ಯುವಕರು, ನೀವು ಒಂಟೆಯ ಮೇಲೆ ಕುಳಿತುಕೊಳ್ಳಿರಿ” ಎಂದು ಅಲಿ ಮತ್ತು ಅಬೂಬಕರ್(ರ) ವಿನಂತಿಸಿದರೂ ಪ್ರವಾದಿಯವರು(ಸ) ಒಪ್ಪಲಿಲ್ಲ. ಇನ್ನು ಯುದ್ಧವನ್ನು ಮನೋವೈಜ್ಞಾನಿಕ ದೃಷ್ಟಿಯಿಂದ ನೋಡಿರಿ. ಅನಿರೀಕ್ಷಿತವಾಗಿ ಯುದ್ಧಕ್ಕೆ ಹೊರಟ ತಂಡ. ಅವರು ಯುದ್ಧಕ್ಕಾಗಿ ಯಾವ ಸಿದ್ಧತೆಯನ್ನೂ ನಡೆಸಿರಲಿಲ್ಲ. ದಿಢೀರನೆ ಅವರು ಸರ್ವ ಸಜ್ಜಿತ ಸೇನೆಯ ಮುಂದೆ ನಿಂತರು. ಆದ್ದರಿಂದಲೇಸೋಲದೆ ಬೇರೆ ದಾರಿಯಿಲ್ಲ’ವೆಂದು ಹೇಳಲಾಗಿತ್ತು. ಅವರು ವೈರಿಗಳನ್ನು ನೆಲಕಚ್ಚಿಸಿ ಅವಿಸ್ಮರಣೀಯ ವಿಜಯ ಸಾಧಿಸಿದರು.

ಈ ವಿಜಯಕ್ಕೆ ನನ್ನ ದೃಷ್ಟಿಯಲ್ಲಿ ಮೂರು ಕಾರಣವಿದೆ.

1.ಅಲ್ಲಾಹನ ನೆರವು. ಅಲ್ಲಾಹನು ದೇವಚರರನ್ನು ಕಳುಹಿಸಿ ನೆರವಾದನೆಂದು ಅನ್ಫಾಲ್ ಅಧ್ಯಾಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

2.ಪ್ರವಾದಿಯವರ(ಸ) ನಾಯಕತ್ವ ಪ್ರವಾದಿಯವರಂಥ ಬೇರೆ ದಂಡನಾಯಕನನ್ನು ಇತಿಹಾಸದಲ್ಲಿ ಕಾಣಲಸಾಧ್ಯವೆಂದು ಶರೀಫ್ ಖಿತಾಭ್, ಜಮಾಲ್ ಮಹ್ಫೂಝ್‌ರಂಥ ಉನ್ನತ ದರ್ಜೆಯ ಸೇನಾಧಿಕಾರಿಗಳು ಹೇಳಿದ್ದಾರೆ. ಅಖಾದ್‌ರ `ಮುಹಮ್ಮದ್ ಪ್ರತಿಭೆ’ ಎಂಬ ಕೃತಿಯಲ್ಲಿ ಈ ವಿಷಯವನ್ನು ವಿವರಿಸಲಾಗಿದೆ. ನೆಪೋಲಿಯನ್‌ಗೆ ಹೋಲಿಸಿ ಅಧ್ಯಯನ ನಡೆಸಲಾಗಿತ್ತು. ಎಲ್ಲರೊಡನೆ ಸಮಾಲೋಚನೆ. ಓರ್ವ ಸಾಮಾನ್ಯ ಯೋಧನಂತೆ ವಾಹನದಲ್ಲಿ ಸವಾರರಾಗದೆ, ಕಲ್ಲು ಮುಳ್ಳುಗಳಲ್ಲಿ ಪಾದಚಾರಿಯಾಗಿ ಸಂಚರಿಸುವುದು- ಅನುಯಾಯಿಗಳ ಮನ ಸೆಳೆದ ಇಂಥ ಮಹಾಗುಣಗಳು ನೆಪೊಲಿಯನ್ ಹಾಗೂ ಇತರ ಸೇನಾ ನಾಯಕರಲ್ಲಿ ನಾಸ್ತಿಯಾಗಿದೆ.

3.ಸರ್ವ ಸನ್ನದ್ಧ ಮತ್ತು ತ್ಯಾಗಮಯ ಅನುಯಾಯಿಗಳನ್ನು ಪ್ರವಾದಿಯವರು(ಸ) ಬೆಳೆಸಿದ ವಿಶ್ವಾಸಿ ಸಮೂಹಕ್ಕೆ ಜಾಗತಿಕ ಇತಿಹಾಸದಲ್ಲಿ ಬೇರೆ ಮಾದರಿಯಿಲ್ಲ. ಅವರು ಸ್ವಂತಕ್ಕಿಂತ ಹೆಚ್ಚಾಗಿ ಸ್ವಂತ ಆದರ್ಶ ಸಹೋದರರನ್ನು ಪ್ರೀತಿಸಿದರು. ಗಮನಿಸಿರಿ. ಯುದ್ಧರಂಗದಲ್ಲಿ ಪರಸ್ಪರ ಮುಖಾಮುಖಿಯಾದವರು ಯಾರು? ಅಬೂಬಕರ್‌ರಿಗೆ(ರ) ತಮ್ಮ ಪುತ್ರ ವೈರಿ ಸೇನೆಯಲ್ಲಿ ಕಾಣಿಸುತ್ತಿದ್ದಾನೆ. ಅಬೂ ಉಬೈದಾ ಬಿನ್ ರ‍್ರಾಹ್(ರ) ತಮ್ಮ ತಂದೆಯನ್ನು ಶತ್ರು ಪಕ್ಷದಲ್ಲಿ ನೋಡುತ್ತಾರೆ. ಈ ರಕ್ತ ಸಂಬಂಧಗಳು ಸತ್ಯ ಮಾರ್ಗದ ಪ್ರಯಾಣದಲ್ಲಿ ಅವರಿಗೆ ಅಡ್ಡಿಯಾಗಲಿಲ್ಲ. ಈ ಮೂರು ಕಾರಣಗಳಿಂದ ಬದ್ರ‍್ ನಲ್ಲಿ ಮುಸ್ಲಿಮರು ವಿಜಯ ಸಾಧಿಸಿದರು.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *