Home / ಲೇಖನಗಳು / ಬದ್ರ್ ಸಂದೇಶ ಮತ್ತು ರಮಝಾನ್ ತಿಂಗಳು

ಬದ್ರ್ ಸಂದೇಶ ಮತ್ತು ರಮಝಾನ್ ತಿಂಗಳು

ಬದ್ರ್ ಯುದ್ದ ನಡೆದದ್ದು ರಮಝಾನ್ ತಿಂಗಳಿನಲ್ಲಾಗಿತ್ತು. ಮಕ್ಕಾದಲ್ಲಿಯೂ ಅಲ್ಲ. ಮದೀನಾದಲ್ಲಿಯೂ ಅಲ್ಲ. ಮಕ್ಕಳು, ಮಹಿಳೆಯರು ಸಾರ್ವಜನಿಕ ಆಸ್ತಿಪಾಸ್ತಿ, ಪ್ರಕೃತಿ ಸಂಪನ್ಮೂಲ ಸುರಕ್ಷಿತವಾಗಿತ್ತು.

ಮಕ್ಕಾದಲ್ಲಿ ಪ್ರವಾದಿಯವರು 53 ವರ್ಷವಿದ್ದರು. ಪ್ರವಾದಿಯವರಿಂದ ಆಗಲೀ ಅನುಯಾಯಿಗಳಿಂದ ಆಗಲೀ ಯಾವುದೇ ರೀತಿಯ ರಕ್ತಪಾತವಾಗಲೀ, ಯುದ್ಧವಾಗಲೀ ಸಂಭವಿಸಿರಲಿಲ್ಲ.

ಪ್ರವಾದಿಯವರ ಸಂರಕ್ಷಕರಾಗಿದ್ದ ಬಹುದೇವಾರಾಧಕರ ಸರದಾರ ಪ್ರವಾದಿಯ ಪಿತೃ ಸಹೋದರ ಅಬೂತಾಲಿಬ್ ಮರಣ ಹೊಂದಿದಾಗ ಕುರೈಶ್ ಸರದಾರರಿಗೆ ಬಲ ಬಂದಂತಾಗುತ್ತದೆ. ಕೆಲವು ಉನ್ನತ ಸರದಾರರು ಸಮಾಲೋಚಿಸಿ ಪ್ರವಾದಿಯವನ್ನು ಸಂರಕ್ಷಿಸಲು ಇನ್ನು ಯಾರೂ ಇಲ್ಲ ಎಂದು ಭಾವಿಸಿ ಕೊಲೆ ಮಾಡುವ ಸಂಚು ರೂಪಿಸುತ್ತಾರೆ. ವಿಷಯ ತಿಳಿದ ಪ್ರವಾದಿಯವರು ಅನುಯಾಯಿಗಳನ್ನು ಸಂಘರ್ಷಕ್ಕೆ ಪ್ರೇರೇಪಿಸದೆ ಅಲ್ಲಾಹನ ಆದೇಶ ಪ್ರಕಾರ ಸಂಗಾತಿ ಅಬೂಬಕ್ಕರ್ ರೊಂದಿಗೆ ಮದೀನಾಕ್ಕೆ ವಲಸೆ ಹೋಗುತ್ತಾರೆ. ಹೋಗುವ ದಾರಿಯಲ್ಲಿ ಶತ್ರುಗಳು ಹಿಂಬಾಲಿಸಿದ್ದರೂ ಪ್ರವಾದಿಗೆ ಅಲ್ಲಾಹನ ಸಹಾಯವಿತ್ತು ಎಂಬುದನ್ನು ಕುರ್ ಆನ್ ಉಲ್ಲೇಖಿಸಿದೆ.

ಆ ಕಾಲದಲ್ಲಿ ಮದೀನಾದಲ್ಲಿ ಪ್ರಭಾವ ಬೀರಿದ್ದ ರಾಜಕೀಯ ಶಕ್ತಿಗಳು ಔಸ್ ಮತ್ತು ಖಝ್ರಜ್ ಎಂಬ ಎರಡು ಗೋತ್ರಗಳು. ಪ್ರವಾದಿವರ್ಯರ ಸಂದೇಶ ಎರಡು ಗೋತ್ರಗಳ ನಡುವೆ ಇದ್ದ ದ್ವೇಷವನ್ನು ಕೊನೆಗೊಳಿಸಿದ್ದು ಮಾತ್ರವಲ್ಲ ಆ ಎರಡು ಗೋತ್ರಗಳು ಮುಹಮ್ಮದ್ (ಸ)ರನ್ನು ಮತ್ತು ಅನುಯಾಯಿಗಳನ್ನು ತಮ್ಮ ಸ್ವಂತ ಸಹೋದರರಂತೆ ಕಂಡರು. ಮುಹಮ್ಮದ್ (ಸ) ರಿಗೆ ರಾಷ್ಟ್ರದ ನಾಯಕತ್ವ ನೀಡಿದರು.

ಸಮಾಲೋಚನಾ ಸಮಿತಿಯಿಂದ ಎಲ್ಲ ಧರ್ಮೀಯರನ್ನು ಒಳಗೊಂಡ ಸಮ್ಮಿಶ್ರ ಸರಕಾರದ ರಚನೆಯಾಯಿತು. ‘ಮದೀನಾದ ಮೇಲೆ ಯಾರೇ ಆಕ್ರಮಣ ಮಾಡಿದರೂ ಒಟ್ಟಾಗಿ ಹೋರಾಡುವೆವು’ ಎಂಬ ಒಡಂಬಡಿಕೆಗೆ ಎಲ್ಲ ಧರ್ಮೀಯರು ಒಪ್ಪಿಗೆ ಸೂಚಿಸಿದವು.

ಮದೀನಾ ನಗರದ ಪ್ರಪ್ರಥಮ ಸಂವಿಧಾನ. ಅದರ ಸಾರಾಂಶ ಹೀಗಿದೆ:

1.ಎಲ್ಲ ಜನ ವಿಭಾಗಗಳೂ ಶಾಂತಿ ಸಮಾಧಾನದಿಂದ ಜೀವನ ಸಾಗಿಸುವಂತಾಗುವುದು.

2.ಪ್ರತಿಯೊಬ್ಬ ವ್ಯಕ್ತಿಗೂ ಅವನ ವಿಶ್ವಾಸ ಆಚಾರಗಳ ಸ್ವಾತಂತ್ರ್ಯ ಇರುವುದು.

3.ಹಿಂಸೆ ಮತ್ತು ಕ್ಷೋಭೆಯ ಎಲ್ಲ ಸ್ರೋತಗಳನ್ನು ಮುಚ್ಚಿ ಬಿಡುವುದು.

4.ಬಾಹ್ಯ ಶತ್ರುಗಳ ಆಕ್ರಮಣವನ್ನು ತಡೆಯುವುದು.

ಈ ಒಡಂಬಡಿಕೆಯ ನಂತರ ನಡೆದ ಯುದ್ಧವೇ ಬದ್ರ್ ಯುದ್ದ.
ಈ ಯುದ್ಧದಲ್ಲಿ ಮಕ್ಕಾದ ಕುರೈಶರು ಶಸ್ತ್ರ ಸಜ್ಜಿತರಾಗಿ ಸಾವಿರ ಸಂಖ್ಯೆಯಲ್ಲಿ ಮದೀನಾದ ಮೇಲೆ ಆಕ್ರಮಣ ಮಾಡಲು ಬಂದರು. ಮದೀನಾದ ಕಡೆಯಿಂದ ಮುನ್ನೂರ ಹದಿಮೂರು ಮಂದಿ ಮಾತ್ರ. ಈ ಸಂಘರ್ಷದಲ್ಲಿ ಕುರೈಶರ ಸೇನೆ ಹೀನಾಯ ಸೋಲನುಭವಿಸಿತು. ದೊಡ್ಡ ದೊಡ್ಡ ಸರದಾರರ ಅಂತ್ಯವಾಯಿತು.

ಇದರ ಪ್ರತೀಕಾರವೇ ಮುಂದೆ ನಡೆದ ಮದೀನಾದ ಆಕ್ರಮಣಗಳು. ಅಂದರೆ ಎಲ್ಲ ಯುದ್ದಗಳು. ಮದೀನಾದ ನಾಯಕನೆಂಬ ನೆಲೆಯಲ್ಲಿ ಮದೀನಾದ ಮಕ್ಕಳು, ಮಹಿಳೆಯರು, ದುರ್ಬಲರ ಸಂರಕ್ಷಣೆ ಪ್ರವಾದಿಯವರ ಹೊಣೆಗಾರಿಕೆಯಾಗಿತ್ತು. ಪ್ರವಾದಿಯವರು ನಾಯಕತ್ವದ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರು ಎಂಬುದೇ ಇತಿಹಾಸದಲ್ಲಿ ಸಿಗುವ ಪಾಠ.

✍️ ಶಮೀರ ಜಹಾನ್

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *