Home / ಪ್ರಶ್ನೋತ್ತರ / ಸ್ವರ್ಗದಲ್ಲಿ ಪುರುಷರಿಗೆ `ಹೂರ್’ ಗಳಿರುವಂತೆ ಮಹಿಳೆಯರಿಗೇಕಿಲ್ಲ?

ಸ್ವರ್ಗದಲ್ಲಿ ಪುರುಷರಿಗೆ `ಹೂರ್’ ಗಳಿರುವಂತೆ ಮಹಿಳೆಯರಿಗೇಕಿಲ್ಲ?

✍️ ಏ.ಕೆ. ಕುಕ್ಕಿಲ

1.ಮಾಧವಿ ಕುಟ್ಟಿ
2.ಇವಾನ್ ರಿಡ್ಲಿ
3.ಲಾರೆನ್ ಬೂತ್

ಒಂದುವೇಳೆ, ಪವಿತ್ರ ಕುರ್‌ಆನ್ ಮಹಿಳಾ ವಿರೋಧಿ ಮತ್ತು ಪುರುಷ ಪಕ್ಷಪಾತಿ ಎಂಬುದು ನಿಜವೇ ಆಗಿದ್ದಿದ್ದರೆ, ಈ ಮೇಲಿನ ಮೂವರೂ ಇಸ್ಲಾಮನ್ನು ಪ್ರೀತಿಸಲು ಕಾರಣವೇನು?

ಮಲಯಾಳಂ ಭಾಷೆಯ ಪ್ರಸಿದ್ಧ ಸಾಹಿತಿ ಈ ಮಾಧವಿ ಕುಟ್ಟಿ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ನಿರರ್ಗಳವಾಗಿ ಬರೆಯುತ್ತಿದ್ದ ಈ ಮಾಧವಿ ಕುಟ್ಟಿಯ ಕವಿತೆಗಳಂತೂ ಬಹುಪ್ರಸಿದ್ಧ. ಕತೆಗಳೂ ಅಷ್ಟೇ, ಅತ್ಯಂತ ತೀಕ್ಷ್ಣ ಮತ್ತು ಹರಿತ. ಕತೆ, ಕವಿತೆ, ಕಾದಂಬರಿ, ಅಟೋಬಯಾಗ್ರಫಿಯೂ ಸೇರಿ ಸುಮಾರು ನೂರರಷ್ಟು ಪುಸ್ತಕಗಳನ್ನು ಹೊರತಂದವರು ಈ ಮಾಧವಿ ಕುಟ್ಟಿ. ಪತ್ರಿಕೆಗಳಿಗೆ ನಿರಂತರ ಕಾಲಂ ಬರೆಯುತ್ತಿದ್ದ ಇವರ ಬದುಕು ಅತ್ಯಂತ ವರ್ಣಮಯ. ಇವರ ಹಿರಿಯ ಮಗ ಮಾಧವ್ ದಾಸ್ ನಲಪಡ್ ಅವರು ಟೈಮ್ಸ್ ಆಫ್ ಇಂಡಿಯಾದಲ್ಲಿ ಸಂಪಾದಕರಾಗಿದ್ದವರು. ಮಾತ್ರವಲ್ಲ, ಮಣಿಪಾಲ್ ಯುನಿವರ್ಸಿಟಿಯಲ್ಲಿ ಜಿಯೋ ಪೊಲಿಟಿಕಲ್ ವಿಭಾಗದಲ್ಲಿ ಪ್ರೊಫೆಸರ್ ಆದವರು. ಒಂದು ರೀತಿಯಲ್ಲಿ, ಮಾಧವಿ ಕುಟ್ಟಿಯವರು ಸಾರ್ವಜನಿಕವಾಗಿ ಅತೀವ ಗೌರವ ಲಭಿಸಿದವರು. ಅತ್ಯಂತ ಪ್ರಗತಿಪರ ವಿಚಾರಧಾರೆಯನ್ನು ಹೊಂದಿದವರು. ಇಷ್ಟೆಲ್ಲಾ ಇದ್ದೂ ಇವರು 1999ರಲ್ಲಿ ಇಸ್ಲಾಮನ್ನು ಪ್ರೀತಿಸಿದರು ಮತ್ತು ತನ್ನ ಹೆಸರನ್ನು ಕಮಲಾ ಸುರಯ್ಯ ಎಂದು ಬದಲಿಸಿಕೊಂಡರು. ಹಾಗಂತ,

ಸ್ಕಾಟ್ಲೆಂಡ್‌ನ ಪತ್ರಕರ್ತೆ ಮತ್ತು ಸ್ಕಾಟಿಶ್ ನ್ಯಾಶನಲ್ ಪಾರ್ಟಿಯ ಸದಸ್ಯೆ ಇವಾನ್ ರಿಡ್ಲಿಯ ವಿಷಯವೂ ಭಿನ್ನವಲ್ಲ. 2001ರಲ್ಲಿ ಅಮೇರಿಕದ ಅವಳಿ ಕಟ್ಟಡದ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಇವರು ಅಫಘಾನ್ ಪ್ರವೇಶಿಸಿದರು. ತಾಲಿಬಾನ್ ಆಡಳಿತವನ್ನು ಕಣ್ಣಾರೆ ಕಂಡು ವರದಿ ಮಾಡುವುದು ಅವರ ಉದ್ದೇಶವಾಗಿತ್ತು. ಆಗಿನ್ನೂ ಅಫಘಾನ್ ಮೇಲೆ ಅಮೇರಿಕ ದಾಳಿ ನಡೆಸಿರಲಿಲ್ಲ. ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ಅಮೇರಿಕ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಮತ್ತು ತಾಲಿಬಾನಿಯರನ್ನು ಜಗತ್ತೇ ಮಹಾ ಕಟುಕ ಜೀವಿಗಳಾಗಿ ದುರುಗುಟ್ಟಿ ನೋಡುತ್ತಿದ್ದ ಸಮಯದಲ್ಲೇ ಇವಾನ್ ರಿಡ್ಲಿ ಅಫಘಾನ್ ಪ್ರವೇಶಿಸುವ ಸಾಹಸ ಮಾಡಿದ್ದರು. ಮಾತ್ರವಲ್ಲ, ತಾಲಿಬಾನ್‌ಗಳ ಕೈಗೂ ಸಿಕ್ಕಿಬಿದ್ದರು. ಜೈಲು ಪಾಲಾದರು. ಅಷ್ಟಕ್ಕೂ,

ಈ ರಿಡ್ಲಿ ಸಾಮಾನ್ಯ ಪತ್ರಕರ್ತೆ ಆಗಿರಲಿಲ್ಲ. ದಿ ಸಂಡೇ ಟೈಮ್ಸ್, ದಿ ಇಂಡಿಪೆಂಡೆಂಟ್ ಆನ್ ಸಂಡೇ, ದಿ ಅಬ್ಸರ್‌ವರ್, ದಿ ಡೈಲಿ ಮಿರರ್ ಮತ್ತು ನ್ಯೂಸ್ ಆಫ್ ದ ವರ್ಲ್ಡ್ ಮುಂತಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ವೇಲ್ಸ್ ಆನ್ ಸಂಡೇ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದರು. ಅವರ ಪಾಲಿಗೆ ಅಫಘಾನ್ ವರದಿಗಾರಿಕೆ ಅತ್ಯಂತ ಸವಾಲಿನದ್ದಾಗಿತ್ತು. ಅಫಘಾನ್ ಪ್ರವೇಶಕ್ಕೆ ವೀಸಾ ಸಿಗದೇ ಇದ್ದುದರಿಂದ ಬಿಬಿಸಿ ವರದಿಗಾರ ಜಾನ್ ಸಿಂಪ್ಸನ್‌ನಂತೆ ಬುರ್ಖಾ ಧರಿಸಿ 2001 ಸೆಪ್ಟೆಂಬರ್ 26ರಂದು ಗಡಿ ದಾಟಿದ್ದರು. ಎರಡು ದಿನಗಳ ಕಾಲ ಬುರ್ಖಾ ಧರಿಸಿಯೇ ವರದಿ ತಯಾರಿಸಿದ ಇವಾನ್ ರಿಡ್ಲಿ, ಮರಳುವ ವೇಳೆ ತಾಲಿಬಾನ್ ಯೋಧನ ಕಣ್ಣಿನ ಬಿದ್ದರು. ಅಚಾನಕ್ಕಾಗಿ ಕಾಣಿಸಿಕೊಂಡ ಕ್ಯಾಮರಾವು ಅವರ ಬಂಧನಕ್ಕೆ ಕಾರಣವಾಯಿತು.

ರಿಡ್ಲಿಯನ್ನು ಗೂಢಚಾರಿಣಿ ಎಂದು ತಾಲಿಬಾನ್ ಕರೆಯಿತು ಮತ್ತು ಅದಕ್ಕೆ ತಾಲಿಬಾನ್ ನ್ಯಾಯಾಲಯ ಕೊಡುವ ಶಿಕ್ಷೆ ಮರಣದಂಡನೆಯಾಗಿತ್ತು. ಈ ಬಂಧನದ ಬಳಿಕ ಕ್ಷಿಪ್ರ ಬೆಳವಣಿಗೆಗಳು ನಡೆದುವು. ಪಾಕಿಸ್ತಾನದಲ್ಲಿರುವ ತಾಲಿಬಾನ್ ರಾಯಭಾರ ಕಚೇರಿಗೆ ರಿಡ್ಲಿ ದುಡಿಯುತ್ತಿದ್ದ ಪತ್ರಿಕೆಯ ಪ್ರಮುಖರು ದೌಡಾಯಿಸಿದ್ದಲ್ಲದೇ ರಿಡ್ಲಿ ಪತ್ರಕರ್ತೆ ಎಂಬುದನ್ನು ಮನವರಿಕೆ ಮಾಡಿಸಿದರು. ಹೀಗೆ 11 ದಿನಗಳ ಬಂಧನದ ಬಳಿಕ ಅವರು ಬಿಡುಗಡೆಗೊಂಡರು. ಇದಾಗಿ ಎರಡು ವರ್ಷಗಳ ಬಳಿಕ ರಿಡ್ಲಿ ಇಸ್ಲಾಮನ್ನು ಪ್ರೀತಿಸಿದರು. ತಾನೇಕೆ ಇಸ್ಲಾಮ್‌ಗೆ ಆಕರ್ಷಿತಳಾದೆ ಎಂಬುದನ್ನು Hands of the Taliban ಎಂಬ ಪುಸ್ತಕದಲ್ಲಿ ಅವರು ವಿವರವಾಗಿ ಬರೆದಿದ್ದಾರೆ. ಇನ್ನೋರ್ವರು,

ಲಾರೆನ್ ಬೂತ್
ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್‌ವರ ಸೊಸೆಯಾಗಿರುವ ಇವರು 2010ರಲ್ಲಿ ಇಸ್ಲಾಮನ್ನು ಪ್ರೀತಿಸಿದರು. ಜರ್ನಲಿಸ್ಟ್ ಮತ್ತು ಆ್ಯಂಕರ್ ಆಗಿರುವ ಇವರು ಇರಾನ್‌ಗೆ ಭೇಟಿ ಕೊಟ್ಟ ಬಳಿಕ ಈ ನಿರ್ಧಾರವನ್ನು ಕೈಗೊಂಡರು. ನಾನು ಆಲ್ಕೋಹಾಲ್ ಮತ್ತು ಹಂದಿ ಮಾಂಸ ಸೇವನೆಯನ್ನು ಬಿಟ್ಟಿರುವುದಾಗಿಯೂ ಘೋಷಿಸಿದರು. ಅಷ್ಟಕ್ಕೂ, 40 ವರ್ಷವನ್ನು ದಾಟಿದ ಬಳಿಕವೇ ಈ ಮೂವರೂ ಈ ನಿರ್ಧಾರವನ್ನು ಕೈಗೊಂಡಿದ್ದಾರೆಂಬುದು ಗಮನಾರ್ಹ. ಅಂದಹಾಗೆ,

ಇಸ್ಲಾಮ್ ಪುರುಷ ಪಕ್ಷಪಾತಿ ಎಂದು ಹೇಳುವವರು ಮತ್ತು ಸ್ವರ್ಗ ಪ್ರವೇಶಿಸುವ ಪುರುಷರು ಸುಂದರ ತರುಣಿಯರನ್ನು (ಹೂರ್) ಪಡೆಯುತ್ತಾರೆಯೇ ಹೊರತು ಸ್ವರ್ಗ ಪ್ರವೇಶಿಸುವ ಮಹಿಳೆಯರಿಗೆ ಸುಂದರ ಪುರುಷರ ಕೊಡುಗೆಯನ್ನು ಕುರ್‌ಆನ್‌ನಲ್ಲಿ ನೀಡಲಾಗಿಲ್ಲ, ಇದು ಲಿಂಗ ತಾರತಮ್ಯ, ಇದು ನಿಷ್ಪಕ್ಷ ನ್ಯಾಯಕ್ಕೆ ವಿರುದ್ಧ… ಎಂದೆಲ್ಲಾ ವಾದಿಸುವವರು ಯಾಕೆ ಮಹಿಳೆಯರೇ ಇಸ್ಲಾಮ್‌ನಿಂದ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂಬುದಕ್ಕೆ ಉತ್ತರಿಸುವುದಿಲ್ಲ?

`ಪುರುಷರ ಪರ’ ಇರುವ ಕುರ್‌ಆನನ್ನು ಓದಿ ಆರ್ಥಿಕವಾಗಿಯೂ ಔದ್ಯೋಗಿಕವಾಗಿಯೂ ಮತ್ತು ಶೈಕ್ಷಣಿಕವಾಗಿಯೂ ಅತ್ಯಂತ ಪ್ರಬಲವಾಗಿರುವ ಮಹಿಳೆಯರು ಯಾಕೆ ಅದರತ್ತ ಆಕರ್ಷಿತರಾಗುತ್ತಿದ್ದಾರೆ? ನಿಜವಾಗಿ,

1. ಮಾನವರಾಗಲಿ, ಯಕ್ಷ ಆಗಲಿ ಎಂದೂ ಸ್ಪರ್ಶಿಸಿರದ ಲಜ್ಜಾಪೂರ್ಣ ನಯನೆಯರು ಸ್ವರ್ಗದಲ್ಲಿರುವರು.

2. ವಜ್ರ ಮತ್ತು ಮುತ್ತುಗಳಂತೆ ಸೌಂದರ್ಯವುಳ್ಳವರು.

3. ಸ್ವರ್ಗದಲ್ಲಿ ಸುಶೀಲೆಯರೂ ಸುಂದರಿಯರೂ ಆದ ಪತ್ನಿಯರಿದ್ದಾರೆ.

4. ಡೇರೆಗಳಲ್ಲಿ ತಂಗಿಸಲಾಗಿರುವ ಅಪ್ಸರೆಯರಿರುವರು (ಅಧ್ಯಾಯ 55: ವಚನಗಳು 56, 58, 70, 72)

5. ಅವರಿಗಾಗಿ ಸುಂದರ ನಯನೆಯರಾದ ಅಪ್ಸರೆಯರಿರುವರು.

6. ನಾವು ಅವರ ಪತ್ನಿಯರನ್ನು ವಿಶಿಷ್ಟ ರೀತಿಯಲ್ಲಿ ಹೊಸತಾಗಿ ಸೃಷ್ಟಿಸುವೆವು.

7. ಅವರು ತಮ್ಮ ಪತಿಯನ್ನು ಪ್ರೀತಿಸುವರು ಮತ್ತು ಸಮಾನ ವಯಸ್ಕರಾಗಿರುವರು. (ಅಧ್ಯಾಯ 56: ವಚನಗಳು 22, 23, 37)

8. ಸ್ವರ್ಗದಲ್ಲಿ ಸಮವಯಸ್ಕ ನವತರುಣಿಯರಿದ್ದಾರೆ.

9. ಮತ್ತು ತುಂಬಿ ತುಳುಕುವ ಪಾನಪಾತ್ರೆಗಳಿವೆ. (ಅಧ್ಯಾಯ 78: ವಚನಗಳು 33, 34)

10. ನಾವು ಹರಿಣಾಕ್ಷಿಗಳುಳ್ಳ ಸುಂದರಾಂಗನೆಯರೊಂದಿಗೆ ಅವರ ವಿವಾಹ ಮಾಡಿಸುವೆವು. (ಅಧ್ಯಾಯ 44, ವಚನ 55)

ಕುರ್‌ಆನಿನ 114 ಅಧ್ಯಾಯಗಳ ಮತ್ತು 6 ಸಾವಿರಕ್ಕಿಂತಲೂ ಅಧಿಕ ಸೂಕ್ತಗಳ ಪೈಕಿ ಕೇವಲ ನಾಲ್ಕೇ ನಾಲ್ಕು ಅಧ್ಯಾಯಗಳಲ್ಲಿ ಇಂಥ ಹದಿನೈದು ಸೂಕ್ತಗಳನ್ನು ಕಾಣಬಹುದು. ಅಷ್ಟಕ್ಕೂ, ಇವು ಯಾಕಿವೆ ಎಂಬ ಪ್ರಶ್ನೆ ಸಹಜವಾದದ್ದು. ಇದನ್ನು ತಿಳಿಯಬೇಕಾದರೆ, ಪ್ರವಾದಿ ಮುಹಮ್ಮದ್(ಸ)ರು 6ನೇ ಶತಮಾನದಲ್ಲಿ ಎಂಥ ಜನರನ್ನು ಅಭಿಸಂಬೋಧಿಸಿದ್ದರು ಎಂಬುದು ಮುಖ್ಯವಾಗುತ್ತದೆ. ಮೂರು ‘W’ಗಳನ್ನು ಉಸಿರಾಗಿಸಿಕೊಂಡಿದ್ದ ಒಂದು ಜನತೆಯನ್ನು ಸಂಸ್ಕರಿಸುವ ಹೊಣೆಗಾರಿಕೆ ಪ್ರವಾದಿಯ ಮೇಲಿತ್ತು. War (ಯುದ್ಧ), Wine (ಮದ್ಯ) ಮತ್ತು Women (ಮಹಿಳೆ)... ಇವೇ ಆ ಮೂರು ‘W’ಗಳು. ಪ್ರವಾದಿ ಕಾಲದ ಅರೇಬಿಕ್ ಸಾಹಿತ್ಯಗಳನ್ನು ಅದರಲ್ಲೂ ಕವಿತೆಗಳನ್ನು ಅಭ್ಯಸಿಸಿದರೆ ಆ ಜನತೆಯ ಮಹಾ ಖಯಾಲಿ ಏನಾಗಿತ್ತು ಅನ್ನುವುದು ಗೊತ್ತಾಗುತ್ತದೆ. ಯುದ್ಧಕ್ಕೆ ಹೇಸದ, ಮದ್ಯ ಮತ್ತು ಮಾನಿನಿಯರನ್ನು ದೌರ್ಬಲ್ಯವಾಗಿಸಿಕೊಂಡ ಹಾಗೂ ಗೋರಿಯ ಒಳಗೆ ದ್ರಾಕ್ಷೆಯ ಬೇರುಗಳು ಇಳಿಯುವ ರೀತಿಯಲ್ಲಿ ತನ್ನ ಗೋರಿಯ ಮೇಲೆ ದ್ರಾಕ್ಷೆ ಬಳ್ಳಿ ಸಮೃದ್ಧವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕೆಂದು ಉಯಿಲು ಬರೆದು ಮೃತ ಪಡುತ್ತಿದ್ದ ಜನತೆಯ ಮುಂದೆ ಪ್ರವಾದಿ ಮಾತಾಡಬೇಕಿತ್ತು. ಅಂದಿನ ಕವಿತೆಗಳು ಎಂಥ ಸೌಂದರ್ಯದ ವರ್ಣನೆಯಿಂದ ಕೂಡಿತ್ತೆಂದರೆ, ಹೆಣ್ಣಿಲ್ಲದ ಮತ್ತು ಮೈಮಾಟದ ವರ್ಣನೆಯಿಲ್ಲದ ಕವಿತೆಗಳೇ ಅಪರೂಪವಾಗಿತ್ತು ಎಂದು ಹೇಳಲಾಗುತ್ತಿದೆ. ಬದುಕೆಂದರೆ ಭೂಮಿಯಲ್ಲಿ ತಿಂದುಂಡು ಮಜಾ ಮಾಡಿ ಕಳೆಯುವುದೆಂದು ಭಾವಿಸಿದ್ದ ಜನತೆಗೆ ಮರಣಾನಂತರ ಜೀವನವಿದೆ ಮತ್ತು ಇಲ್ಲಿ ಸಂಸ್ಕಾರವಂತರಾಗಿ ಬದುಕಿದವರು ಮರಣಾನಂತರದ ಜೀವನದಲ್ಲಿ ಬಯಸಿದ್ದೆಲ್ಲವನ್ನೂ ಪಡಕೊಳ್ಳಬಹುದು ಎಂದು ತಿಳಿಸಬೇಕಿತ್ತು ಅಥವಾ ಪರಲೋಕದ ಶಿಕ್ಷೆ-ರಕ್ಷೆಯನ್ನು ತೋರಿಸುವ ಮೂಲಕ ಇಹಲೋಕದ ಕಡುಕೆಟ್ಟ ಬದುಕಿನಿಂದ ಅವರನ್ನು ಬಿಡಿಸಬೇಕಿತ್ತು. ಪ್ರವಾದಿ ಆಗಮಿಸಿರುವುದೇ ಜನರನ್ನು ಸಂಸ್ಕರಿಸುವುದಕ್ಕೆ.

ಇಹಲೋಕದಲ್ಲಿ ಸಂಸ್ಕಾರಯುತವಾಗಿ ಬದುಕಿದರೆ ತಮಗೇನು ಸಿಗುತ್ತದೆ ಎಂಬ ಪ್ರಶ್ನೆಯನ್ನು ಯಾರೇ ಆಗಲಿ ಎತ್ತುವುದು ಸಹಜ. ಅದಕ್ಕೆ ಉತ್ತರವೆಂಬಂತೆ ಇಂಥ ಸೂಕ್ತಗಳನ್ನು ಪರಿಗಣಿಸಬಹುದು. ಆದ್ದರಿಂದಲೇ, `ಸ್ವರ್ಗದಲ್ಲಿ ತರುಣಿಯರ ಸಾಂಗತ್ಯ ಸಿಗುತ್ತದೆ ಎಂದು ಕುರ್‌ಆನ್ ಹೇಳಿರುವುದಷ್ಟೇ ಅಲ್ಲ, ಅಲ್ಲಿ ತುಂಬಿ ತುಳುಕುವ ಪಾನ ಪಾತ್ರೆಗಳೂ ಇವೆ ಎಂದೂ ಹೇಳಿದೆ. ಇಹಲೋಕದಲ್ಲಿ ಹೆಣ್ಣು ಮತ್ತು ಮದ್ಯದ ವ್ಯಾಮೋಹಕ್ಕೆ ಬೀಳದೇ ಸಜ್ಜನ ಬದುಕು ಸಾಗಿಸಿದರೆ ಪರಲೋಕದಲ್ಲಿ ಅವೆರಡನ್ನೂ ಒದಗಿಸಲಾಗುವುದು ಎಂಬುದೇ ಇದರರ್ಥ.

ಅಷ್ಟಕ್ಕೂ, ಪವಿತ್ರ ಕುರ್‌ಆನಿನ 26ನೇ ಅಧ್ಯಾಯದ ಹೆಸರೇ ಕವಿಗಳು ಅಥವಾ ಅಶ್ಶುಅರಾ ಎಂದು. ನಾಲ್ಕನೇ ಅಧ್ಯಾಯದ ಹೆಸರು ಅನ್ನಿಸಾ ಅಥವಾ ಮಹಿಳೆ ಎಂದಾಗಿದೆ. ಯಾಕೆ ಕುರ್‌ಆನ್ ಕವಿಗಳ ಕುರಿತಂತೆ ವಿಶೇಷವಾಗಿ ಪ್ರಸ್ತಾಪಿಸಿದೆ? ಯಾಕೆ ಮಹಿಳೆ ಎಂಬ ಅಧ್ಯಾಯ ಕುರ್‌ಆನ್ ನಲ್ಲಿದೆ? ಕತೆಗಾರರು, ಕಾದಂಬರಿಕಾರರು, ನಾಟಕಗಾರರು ಎಂಬೆಲ್ಲಾ ಹೆಸರಲ್ಲಿ ಒಂದೇ ಒಂದು ಅಧ್ಯಾಯ ಇಲ್ಲವೇಕೆ? ಸ್ವರ್ಗ ಕನ್ಯೆಯರು ಅಥವಾ ಹೂರ್‌ಗಳನ್ನು ಎತ್ತಿಕೊಂಡು ಗೇಲಿ ಮಾಡುವವರು ಕ್ಷಣ ನಿಂತು ಆಲೋಚಿಸಬೇಕಾದ ಘಟ್ಟ ಇದು.

ಪವಿತ್ರ ಕುರ್‌ಆನ್ ಬೆಟ್ಟ- ಗುಡ್ಡಗಳಿಗಾಗಿ ಅವತೀರ್ಣವಾದುದಲ್ಲ. 6ನೇ ಶತಮಾನದ ಮನುಷ್ಯರೇ ಅದರ ಗುರಿಯಾಗಿತ್ತು. ಆ ಮೂಲಕ ಸಾರ್ವಕಾಲಿಕವಾದ ಜೀವನ ಪದ್ಧತಿಯೊಂದನ್ನು ಕಲಿಸಿಕೊಡುವುದು ಅದರ ಉದ್ದೇಶವಾಗಿತ್ತು. ಆ ಶತಮಾನದ ಅರಬಿಗಳು ಕಾವ್ಯ-ಕವಿತೆಯಲ್ಲಿ ನಿಷ್ಣಾತರಾಗಿದ್ದರು. ನಾನಾ ರೀತಿಯ ಕಲ್ಪನಾ ಲೋಕದಲ್ಲಿ ವಿಹರಿಸುವ ಕವಿತೆಗಳನ್ನು ರಚಿಸುತ್ತಿದ್ದರು. ಗುಂಡು ಪಾರ್ಟಿಯಲ್ಲಿ ಮಾನಿನಿಯರ ಜೊತೆ ಲೋಕದ ಪರಿವೆಯಿಲ್ಲದೇ ವಿಹರಿಸುತ್ತಿದ್ದರು. ಅಂದಹಾಗೆ,

ಹೆಣ್ಣು ಅಂದೂ ಪುರುಷ ಕೇಂದ್ರ ಬಿಂದು. ಇಂದೂ ಅಷ್ಟೇ. ಹೆಣ್ಣಿನ ವರ್ಣನೆಯಿಲ್ಲದ ಎಷ್ಟು ಸಿನಿಮಾ ಕತೆ, ಕಾದಂಬರಿ, ನಾಟಕಗಳು ಇವತ್ತು ರಚನೆಯಾಗುತ್ತಿವೆ? ಹೆಣ್ಣನ್ನು ಕುಣಿಸದೇ ಯಾವ ಸಿನಿಮಾ ಮುಕ್ತಾಯಗೊಳ್ಳುತ್ತದೆ? ಹೆಣ್ಣನ್ನು ಮಾದಕವಾಗಿ ವರ್ಣಿಸದ ಸಿನಿಮಾ ಹಾಡುಗಳು ಎಷ್ಟಿವೆ? ಎಷ್ಟು ಕತೆ, ಕವಿತೆಗಳು ಹೆಣ್ಣಿನಿಂದ ಮುಕ್ತವಾಗಿವೆ? ಹೆಣ್ಣು ದೇಹದ ಇಂಚಿಂಚನ್ನೂ ವರ್ಣಿಸುವ ಮತ್ತು ಮಾದಕವಾಗಿ ಕಟ್ಟಿಕೊಡುವ ಟನ್ನುಗಟ್ಟಲೆ ಕವಿತೆ, ಹಾಡುಗಳೇ ದಿನಾ ಪ್ರಕಟವಾಗುತ್ತಿರುವುದೇಕೆ? ಹಾಗೆಯೇ, ಪುರುಷನ ಸೌಂದರ್ಯವನ್ನು ವರ್ಣಿಸುವ, ದೇಹಾಕೃತಿಯನ್ನು ಮಾದಕವಾಗಿ ವಿವರಿಸುವ ಎಷ್ಟು ಕವಿತೆಗಳು ರಚನೆಯಾಗುತ್ತಿವೆ? ಪುರುಷನ ಕಣ್ಣು, ಕಿವಿ, ತುಟಿ, ಮೂಗು, ಕೇಶಗಳನ್ನು ಆಕರ್ಷಕವಾಗಿ ವಿವರಿಸುವ ಎಷ್ಟು ಹಾಡುಗಳು ಪ್ರಕಟವಾಗುತ್ತಿವೆ? ಹೆಣ್ಣಿಗೆ ಕನಿಷ್ಠ ಬಟ್ಟೆಯನ್ನು ತೊಡಿಸಿ ಸಿನಿಮಾಗಳಲ್ಲಿ ಕುಣಿಸುವಂತೆ ಯಾಕೆ ಗಂಡನ್ನು ಹಾಗೆಯೇ ಕುಣಿಸುವುದಿಲ್ಲ? ಅಂದಹಾಗೆ,

ಕುರ್‌ಆನ್ ಪುರುಷ ಪಕ್ಷಪಾತಿ ಎಂದು ವಾದಿಸುವವರಿಗೆ ಇವೆಲ್ಲವನ್ನೂ ಕಾಣುತ್ತಿಲ್ಲವೇ? ಯಾಕೆ ಇವರೆಲ್ಲ ಈ ಸಿನಿಮಾಗಳನ್ನು ಪುರುಷ ಪಕ್ಷಪಾತಿ ಎಂದು ಹೇಳುತ್ತಿಲ್ಲ? ಹೆಣ್ಣಿನಂತೆ ಪುರುಷನನ್ನೂ ವರ್ಣಿಸುವ ಸಿನಿಮಾ, ಕತೆ, ಕವಿತೆಗಳನ್ನು ಇವರೆಲ್ಲ ರಚಿಸಬೇಕಲ್ಲವೇ? ಯಾಕೆ ಈವರೆಗೂ ಅವರಾರೂ ಇಂಥ ಪ್ರಯತ್ನವನ್ನು ಮಾಡಿಯೇ ಇಲ್ಲ?

ನಿಜವಾಗಿ, ಸ್ವರ್ಗ ಒಂದು ರಮ್ಯ ಅನುಭೂತಿ. ಇಹಲೋಕಕ್ಕೆ ಬದುಕು ಮುಗಿಯಿತು ಎಂದುಕೊಂಡವರು ಬಯಸಿದ್ದನ್ನೆಲ್ಲ ಇಲ್ಲೇ ಅನುಭವಿಸಬೇಕು ಎಂಬ ಭಾವದಲ್ಲಿರುತ್ತಾರೆ. ಈ ಭಾವದ ಪರಿಧಿಯೊಳಗೆ ಸಾಮಾನ್ಯವಾಗಿ ಮದ್ಯ ಮತ್ತು ಮಾನಿನಿಯರು ಸದಾ ಬರುತ್ತಾರೆ. ಇದು ಲೋಕ ನಿಯಮ. ಮದ್ಯ ಮತ್ತು ಮಾನಿನಿಯರ ಮೂಲಕ ಇಹದ ಬದುಕನ್ನು ಸ್ವರ್ಗವಾಗಿಸ ಹೊರಟವರು ಅಂತಿಮವಾಗಿ ಬದುಕನ್ನೇ ನರಕವಾಗಿಸಿಕೊಂಡ ಅಸಂಖ್ಯ ಉದಾಹರಣೆಗಳಿವೆ. ಇಂಥ ಸ್ಥಿತಿಯಲ್ಲಿ ಜನರನ್ನು ತಿದ್ದಲು ಪ್ರವಾದಿ(ಸ) ಮುಂದಾಗುತ್ತಾರೆ. ಇಹದ ಬದುಕನ್ನು ಮೌಲ್ಯಯುತವಾಗಿ ಕಳೆದವರಿಗೆ ಪರದಲ್ಲಿ ಪರಮ ಸುಖವಿದೆ ಎನ್ನುತ್ತಾರೆ. ಅವನ್ನು ಬಿಂಬಿಸುವ ಸೂಕ್ತ ಗಳಷ್ಟೇ ಇವು.

ಪೂರ್ವಾಗ್ರಹಗಳಿಲ್ಲದೇ ಕುರ್‌ಆನನ್ನು ಅಧ್ಯಯನ ನಡೆಸಿದವರಿಗೆ ಇದು ಅರ್ಥವಾಗುತ್ತದೆ. ಅಲ್ಲದೇ ಇದು, ಮಾಧವಿ ಕುಟ್ಟಿ, ಇವಾನ್ ರಿಡ್ಲಿ, ಲಾರೆನ್ ಬೂತ್ ಮತ್ತು ಇಂಥ ಅಸಂಖ್ಯ ಮಂದಿಗೆ ಅರ್ಥವಾಗಿದೆ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *