Home / ಲೇಖನಗಳು / ನಾಯಕ ಹೇಗಿರಬೇಕು ಎಂದು ತೋರಿಸಿಕೊಟ್ಟ ಪ್ರವಾದಿ(ಸ)

ನಾಯಕ ಹೇಗಿರಬೇಕು ಎಂದು ತೋರಿಸಿಕೊಟ್ಟ ಪ್ರವಾದಿ(ಸ)

✍️ ಅಬೂ ಝೀಶಾನ್

ನಾಯಕರು ಜನರ ಸೇವಕರಾಗಿರಬೇಕಾಗಿದೆ. ಆದರೆ ಇಂದಿನ ನಾಯಕರಲ್ಲಿ ಆ ಭಾವನೆ ಇಲ್ಲವಾಗಿದೆ. ನಾಯಕರು ಹೇಗಿರಬೇಕೆಂದು ಪ್ರವಾದಿ(ಸ) ತನ್ನ ಜೀವನದಲ್ಲಿ ಮಾಡಿ ತೋರಿಸಿದ್ದಾರೆ. ಎಷ್ಟೆಂದರೆ ಸಹಾಬಿಗಳು ಪ್ರವಾದಿ(ಸ)ರೊಂದಿಗೆ ತಾವು ನಮ್ಮ ನಾಯಕರಾಗಿ ಇಷ್ಟು ಕೆಲಸಗಳನ್ನು ಮಾಡಬೇಡಿ ಎಂದು ಭಿನ್ನವಿಸುತ್ತಿದ್ದರು.

ಪ್ರವಾದಿ(ಸ) ಮದೀನಾಕ್ಕೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಮದೀನಾದ ಹೊರವಲಯವಾದ ಕುಬಾ ಎಂಬಲ್ಲಿ ಎಲ್ಲರೂ ಬಂದು ಸೇರಿದರು. ಪ್ರವಾದಿ(ಸ) ಬರುವಾಗ ಅವರನ್ನು ಭವ್ಯವಾಗಿ ಸ್ವಾಗತಿಸಲು ಅವರೆಲ್ಲ ಯೋಜನೆ ಹಾಕಿದ್ದರು. ಆದರೆ ಪ್ರವಾದಿ(ಸ) ಎಷ್ಟು ವಿನಮ್ರರಾಗಿದ್ದರೆಂದರೆ ಅವರೂ(ಸ) ಹ. ಅಬೂಬಕರ್(ರ)ರೊಂದಿಗೆ ನಡೆದು ಕೊಂಡು ಬರುವಾಗ ಅವರಿಬ್ಬರಲ್ಲಿ ಪ್ರವಾದಿ(ಸ) ಯಾರು ಎಂದು ಅವರಿಗೆ ಅರಿಯಲು ಕಷ್ಟವಾಯಿತು. ಯಾಕೆಂದರೆ ಅದಕ್ಕಿಂತ ಮುಂಚೆ ಕೆಲವೇ ಮಂದಿಯ ಹೊರತು ಹೆಚ್ಚಿನವರು ಪ್ರವಾದಿ(ಸ)ರನ್ನು ನೋಡಿರಲಿಲ್ಲ.

ಮದೀನಾಕ್ಕೆ ಬಂದ ನಂತರ ಪ್ರಥಮ ಮಸೀದಿಯನ್ನು ಕುಬಾದಲ್ಲಿ ನಿರ್ಮಿಸಲಾಯಿತು. ಎಲ್ಲ ಸಹಾಬಿಗಳು ಮಸೀದಿಯನ್ನು ಕಟ್ಟಲು ಆರಂಭಿಸಿದಾಗ ಪ್ರವಾದಿ(ಸ) ಕೂಡಾ ಅವರೊಂದಿಗೆ ಸೇರಿ ಮಸೀದಿ ಕಟ್ಟುವ ಕೆಲಸ ಮಾಡುತ್ತಿದ್ದರು. ನಂತರ ಮಸ್ಜಿದುನ್ನಬವಿ ಕಟ್ಟಲು ಆರಂಭಿಸಿದಾಗಲೂ ಪ್ರವಾದಿ(ಸ) ಇತರ ಸಹಾಬಿಗಳ ಹಾಗೆಯೇ ಕಠಿಣವಾಗಿ ಶ್ರಮಿಸುತ್ತಿದ್ದರು. ತನ್ನ ಸ್ವಂತ ಕೈಗಳಿಂದ ಇಟ್ಟಿಗೆಗಳನ್ನು ಎತ್ತಿ ತರುತ್ತಿದ್ದರು. ಹಾಗೂ ನಿರಂತರ ಪ್ರಾರ್ಥಿಸುತ್ತಿದ್ದರು, “ಓ ಅಲ್ಲಾಹ್, ಅನ್ಸಾರ್ ಹಾಗೂ ಮುಹಾಜಿರ್‌ಗಳ ಮೇಲೆ ಕರುಣೆ ತೋರು ಹಾಗೂ ಅವರಿಗೆ ಪ್ರತಿಫಲ ನೀಡು.”

ಪ್ರವಾದಿ(ಸ)ರೊಂದಿಗೆ ಮದೀನಾದಲ್ಲಿ ವಾಸಿಸುತ್ತಿದ್ದಾಗ ಯುದ್ಧ ಸಾಮಾನ್ಯವಾಗಿತ್ತು. ಮದೀನಾ ಯಾವಾಗಲೂ ಆಕ್ರಮಣದ ಭೀತಿಯಲ್ಲಿತ್ತು. ಯಾರು ಯಾವ ಸಮಯದಲ್ಲೂ ಆಕ್ರಮಣ ಮಾಡುವ ಪರಿಸ್ಥಿತಿಯಿತ್ತು. ಮದೀನಾದ ಮೇಲೆ ಅತಿದೊಡ್ಡ ಆಕ್ರಮಣದ ಅಪಾಯ ಕಂದಕ (ಅಅïಝಾಬ್) ಯುದ್ಧದ ಸಮಯದಲ್ಲಾಗಿತ್ತು. ಹತ್ತು ಸಾವಿರ ಸೇನೆಯೊಂದಿಗೆ ಮಕ್ಕಾದ ಮುಶ್ರಿಕರು ಮದೀನಾದ ಮೇಲೆ ಆಕ್ರಮಣ ಮಾಡಲು ಬಂದರು. ಇದಕ್ಕಿಂತ ಮುಂಚೆ ಅಂತಹ ದೊಡ್ಡ ಸೇನೆಯನ್ನು ಅರೇಬಿಯಾ ಕಂಡಿರಲಿಲ್ಲ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅರೇಬಿಯಾಕ್ಕೆ ಪರಿಚಯವಿಲ್ಲದ ಯುದ್ಧ ತಂತ್ರವಾದ ಕಂದಕವನ್ನು ಮದೀನಾದ ಸುತ್ತಲೂ ತೋಡಲು ಹ. ಸಲ್ಮಾನ್ ಫಾರ್ಸಿ ಸಲಹೆಯನ್ನು ನೀಡಿದಾಗ ಪ್ರವಾದಿ(ಅ) ಅದಕ್ಕೆ ಒಪ್ಪಿಗೆ ನೀಡಿದರು. ಆದರೆ ಅದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ. ಏಕೆಂದರೆ ಬಹಳ ಕಡಿಮೆ ಸಮಯದಲ್ಲಿ ಅಷ್ಟು ದೊಡ್ಡ ಕಂದಕವನ್ನು ತೋಡುವುದು ಬಹಳ ಸಾಹಸದ ಕೆಲಸವಾಗಿತ್ತು.

ಎಲ್ಲ ಸಹಾಬಿಗಳೂ ಕಂದಕವನ್ನು ತೋಡುವ ಕಠಿಣ ಪರಿಶ್ರಮಕ್ಕೆ ತೊಡಗುತ್ತಾರೆ. ಆದರೆ ಅವರ ನಾಯಕ ಪ್ರವಾದಿ(ಸ) ಸುಮ್ಮನೆ ನಿಂತು ಸಲಹೆ ನೀಡುತ್ತಿರಲಿಲ್ಲ. ಬದಲಾಗಿ ಅವರು(ಸ) ಕೂಡಾ ಇತರರ ಹಾಗೆ ಕಂದಕವನ್ನು ತೋಡುತ್ತಿದ್ದರು. ಮಾತ್ರವಲ್ಲ ಹತ್ತು ಜನರು ಮಾಡುವಷ್ಟು ಕೆಲಸವನ್ನು ಒಬ್ಬರೇ ಮಾಡುತ್ತಿದ್ದರು.

ಅಬೂ ತಲ್ಹಾ(ರ) ವರದಿ ಮಾಡುತ್ತಾರೆ, “ಕಂದಕವನ್ನು ತೋಡುತ್ತಿದ್ದಾಗ ನಾವು ಎಷ್ಟು ಹಸಿದಿದ್ದೇವೆಂದು ಪ್ರವಾದಿ(ಸ)ರಿಗೆ ತಿಳಿಸಲು, ನಾವು ಹಸಿವನ್ನು ತಾಳದೆ ಹೊಟ್ಟೆಗೆ ಕಟ್ಟಿದ ಕಲ್ಲನ್ನು ನಮ್ಮ ಬಟ್ಟೆಗಳನ್ನೆತ್ತಿ ತೋರಿಸಿದೆವು. ಆಗ ಪ್ರವಾದಿ ತನ್ನ ಬಟ್ಟೆಗಳನ್ನೆತ್ತಿ ತೋರಿಸಿದರು. ಆ ಪವಿತ್ರವಾದ ಹೊಟ್ಟೆಯಲ್ಲಿ ಎರಡು ಕಲ್ಲನ್ನು ಕಟ್ಟಲಾಗಿತ್ತು. ಪ್ರವಾದಿ(ಸ) ಅವರೆಲ್ಲರ ನಾಯಕರಾಗಿದ್ದರೂ ಇತರರಿಗಿಂತ ಕಡಿಮೆ ತಿನ್ನುತ್ತಿದ್ದರು, ಇತರರಿಗಿಂತ ಹೆಚ್ಚು ಹಸಿದಿರುತ್ತಿದ್ದರು ಹಾಗೂ ಇತರರಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರು.

ಹ. ಅಬೂ ಬರಾಹ(ರ) ಪ್ರವಾದಿ(ಸ) ಕಂದಕ ತೋಡುವಾಗ ಇದ್ದ ಸ್ಥಿತಿಯನ್ನು ವರದಿ ಮಾಡುತ್ತಾರೆ, “ಪ್ರವಾದಿ(ಸ) ಕಂದಕವನ್ನು ತೋಡಿ ಮೇಲೆ ಬಂದಾಗ ಅವರು(ಸ) ಸಂಪೂರ್ಣವಾಗಿ ಮಣ್ಣಿನಲ್ಲಿ ಮುಳುಗಿದ್ದರು. ಮಣ್ಣು ಆ ಪವಿತ್ರ ಚರ್ಮವನ್ನು ಎಲ್ಲ ಕಡೆಗಳಿಂದಲೂ ಆವರಿಸಿತ್ತು. ಅವರು(ಸ) ಎಲ್ಲರಿಗಿಂತ ಹೆಚ್ಚು ಪರಿಶ್ರಮ ಪಡುತ್ತಿದ್ದರು. ಕಂದಕವನ್ನು ತೋಡುವಾಗ ಹೇಳುತ್ತಿದ್ದರು, “ಓ ಅಲ್ಲಾಹ್, ಪರಲೋಕದ ಜೀವನವಲ್ಲದೆ ಬೇರೆ ಜೀವನವಿಲ್ಲ. ಓ ಅಲ್ಲಾಹ್, ಅನ್ಸಾರ್ ಹಾಗೂ ಮುಹಾಜಿರೀನ್‌ಗಳ ಮೇಲೆ ಕರುಣೆ ತೋರು.”

ಕಂದಕ ತೋಡುವಾಗ ಸಹಾಬಿಗಳು ಹಾಡುತ್ತಿದ್ದಾಗ ಅವರೊಂದಿಗೆ ಹಾಡುತ್ತಿದ್ದರು, ಅವರೊಂದಿಗೆ ಮಾತಾಡುತ್ತಿದ್ದರು. ಎಲ್ಲರನ್ನು ಹುರಿದುಂಬಿಸುತ್ತಿದ್ದರು ಹಾಗೂ ಎಲ್ಲರಿಗಾಗಿ ಪ್ರಾರ್ಥಿಸುತ್ತಿದ್ದರು.

ಇನ್ನು ಪ್ರವಾದಿ(ಸ) ಯುದ್ಧಕ್ಕೆ ಹೋಗುವ ರೀತಿ ಹೇಗಿರುತ್ತಿತ್ತು?
ಯುದ್ಧದ ಹಿಂದಿನ ರಾತ್ರಿ ಸಂಪೂರ್ಣ ಆರಾಧನೆಯಲ್ಲಿ ಕಳೆಯುತ್ತಿದ್ದರು. ಅಲ್ಲಾಹ್‌ನಿಂದ ಸಹಾಯ ಹಾಗೂ ವಿಜಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಬೆಳಗಾದಾಗ ಹೊರಗೆ ಬರುತ್ತಿದ್ದರು. ಕಬ್ಬಿಣದ ಯುದ್ಧ ಕವಚವನ್ನು ಧರಿಸುತ್ತಿದ್ದರು. ತಲೆಗೆ ಕೆಲವೊಮ್ಮೆ ತಾಮ್ರದ ಶಿರಸ್ತ್ರಾಣ (ಹೆಲ್ಮೆಟ್) ಅನ್ನು ಧರಿಸುತ್ತಿದ್ದರು, ಕೆಲವೊಮ್ಮೆ ಕಪ್ಪು ಬಣ್ಣದ ಪೇಟ(ಟರ್ಬನ್) ಧರಿಸುತ್ತಿದ್ದರು. ಅವರ ಖಡ್ಗದ ಕೈಯನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಪ್ರವಾದಿ(ಸ) ಯುದ್ಧಕ್ಕೆ ತಯಾರಾಗಿ ಹೊರಗೆ ಬಂದು ಪ್ರಥಮವಾಗಿ ಜನರುದ್ದೇಶಿಸಿ ಮಾತನಾಡುತ್ತಿದ್ದರು. ಅವರಿಗೆ ಅಲ್ಲಾಹನನ್ನು ನೆನಪಿಸುತ್ತಿದ್ದರು. ನಂತರ ಯುದ್ಧದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳನ್ನು ನೆನೆಪಿಸುತ್ತಿದ್ದರು. “ಮಕ್ಕಳನ್ನು, ಮಹಿಳೆಯರನ್ನು, ವೃದ್ಧರನ್ನು, ರೋಗಿಗಳನ್ನು ವಧಿಸಬಾರದು, ವಿಶ್ವಾಸಘಾತಕತನ ಮಾಡಬಾರದು, ಮೃತದೇಹವನ್ನು ವಿಕೃತಗೊಳಿಸಬಾರದು, ಮರಗಳನ್ನು ಕಡಿಯಬಾರದು, ಸನ್ಯಾಸಿಗಳನ್ನು, ಧರ್ಮ ಗುರುಗಳನ್ನು, ಆರಾಧನೆಯಲ್ಲಿ ಇರುವವರನ್ನು ತೊಂದರೆಗೆ ಒಳಪಡಿಸಬಾರದು.” ಹೀಗೆ ಯುದ್ಧ ಆರಂಭವಾಗುವುದಕ್ಕಿಂತ ಮೊದಲೇ ಸಹಾಬಿಗಳಿಗೆ ಎಲ್ಲ ನಿಯಮಗಳನ್ನು ಬೋಧಿಸುತ್ತಿದ್ದರು. ನಂತರ ಹೇಳುತ್ತಿದ್ದರು, “ಜಿಬ್ರೀಲ್(ಅ) ಹಾಗೂ ಮಲಕ್‌ಗಳು ಸಿದ್ಧರಾಗಿದ್ದಾರೆ” ಹಾಗೂ ಯುದ್ಧ ಆರಂಭವಾಗುತ್ತದೆ.

ಪ್ರವಾದಿ(ಸ) ಒಮ್ಮೆಯೂ ಯುದ್ಧ ರಂಗದಿಂದ ಪಲಾಯನ ಮಾಡಲಿಲ್ಲ. ಯುದ್ಧ ಕಣದಲ್ಲಿ ಗಾಯಾಳಾದರೂ ಅವರು ಯುದ್ಧ ರಂಗವನ್ನು ಒಮ್ಮೆಯೂ ಬಿಟ್ಟು ಹೋಗಲಿಲ್ಲ. ಹುನೈನ್ ಯುದ್ಧದ ಸಂದರ್ಭದಲ್ಲಿ ಮುಸ್ಲಿಮ್ ಸೇನೆ ಶತ್ರು ಸೇನೆಯ ಅಚಾನಕ್ಕಾದ ಬಿಲ್ಲಿನ ಆಕ್ರಮಣದಿಂದ ಚೆದರಿ ಚೆಲ್ಲಾಪಿಲ್ಲಿಯಾಗಿ ಯುದ್ಧರಂಗದಿಂದ ಹಿಂತಿರುಗಿ ಹೋಗುತ್ತಿದ್ದಾಗ ಪ್ರವಾದಿ(ಸ) ಯುದ್ಧರಂಗದಿಂದ ಸ್ವಲ್ಪವೂ ಹಿಂಜರಿಯಲಿಲ್ಲ. ಅವರು ಮುಂದೆ ಹೋಗುತ್ತಲೇ ಇದ್ದರು. ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಪ್ರವಾದಿ(ಸ)ರೊಂದಿಗಿದ್ದರು.

ಪ್ರವಾದಿ(ಸ) ಯುದ್ಧ ರಂಗದಲ್ಲಿ ಬಹಳ ಧೀರವಾಗಿ ಎಲ್ಲರಿಗಿಂತ ಹೆಚ್ಚು ಶೂರತನದಿಂದ ಯುದ್ಧ ಮಾಡುತ್ತಿದ್ದರು. ಆದರೆ ಒಬ್ಬನನ್ನು ಬಿಟ್ಟು ಎಂದೂ ಯಾರನ್ನೂ ತನ್ನ ಕೈಯಿಂದ ಕೊಲ್ಲಲಿಲ್ಲ. ಶತ್ರುವನ್ನು ಕೇವಲ ಶಸ್ತ್ರರಹಿತರಾಗಿ ಮಾಡುತ್ತಿದ್ದರು. ಅವರ ಕೈಯಿಂದ ಹತ್ಯೆಗೀಡಾದ ವ್ಯಕ್ತಿ ಇಸ್ಲಾಮಿನ ದೊಡ್ಡ ಶತ್ರು ಉಬೈ ಬಿನ್ ಖಲಫ್ ಆಗಿದ್ದ. ಅದೂ ಕೂಡಾ ಸ್ವರಕ್ಷಣೆಗಾಗಿತ್ತು. ಉಹುದ್ ಯುದ್ಧದಲ್ಲಿ ಮುಸ್ಲಿಮ್ ಸೇನೆ ಚೆಲ್ಲಾಪಿಲ್ಲಿಯಾದಾಗ ಕೇವಲ ಕೆಲವೇ ಮಂದಿ ಪ್ರವಾದಿ(ಸ)ರೊಂದಿಗಿದ್ದುದನ್ನು ನೋಡಿ ಅವರನ್ನು(ಸ) ಕೊಲ್ಲಲು ತನ್ನ ಕದುರೆಯೇರಿ ಬರುತ್ತಿದ್ದ ಉಬೈ ಬಿನ್ ಖಲಫ್‌ನನ್ನು ನೋಡಿ ಪ್ರವಾದಿ(ಸ) ಆತನೆಡೆಗೆ ಈಟಿಯನ್ನು ಎಸೆದರು. ಅದು ಆತನ ಭುಜಕ್ಕೆ ತಾಗಿ ಆತ ಅದೇ ಗಾಯದೊಂದಿಗೆ ಯುದ್ಧದಿಂದ ಹಿಂತಿರುಗಿ ಹೋಗುವಾಗ ದಾರಿಯಲ್ಲಿ ನಿಧನನಾದನು. ಇದಲ್ಲದೆ ಬೇರೆ ಯಾರನ್ನೂ ತನ್ನ ಕೈಯಿಂದ ವಧಿಸಲಿಲ್ಲ.

ಯುದ್ಧರಂಗದಲ್ಲಿಯೂ ಯಾರನ್ನೂ ವ ಧಿಸದಷ್ಟು ಕಾರುಣ್ಯವಂತರಾಗಿದ್ದರು ಪ್ರವಾದಿ(ಸ). ಯುದ್ಧ ಮುಗಿದ ನಂತರ ಪ್ರವಾದಿ(ಸ) ಪ್ರತಿಯೊಬ್ಬರ ಹತ್ತಿರ ಹೋಗಿ ಅವರ ಸ್ಥಿತಿಯನ್ನು ಅರಿಯುತ್ತಿದ್ದರು. ಯುದ್ಧ ಭೂಮಿಗೆ ಹೋಗಿ ಮರಣ ಹೊಂದಿದವರ ಹತ್ತಿರ ಹೋಗಿ ಅವರಿಗಾಗಿ ಪ್ರಾರ್ಥಿಸುತ್ತಿದ್ದರು. ಅವರ ದಫನದ ಕಾರ್ಯವನ್ನು ನೆರವೇರಿಸುತ್ತಿದ್ದರು. ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದರು.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *