Home / ಪ್ರಶ್ನೋತ್ತರ / ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿದಾಗ ಅವರನ್ನು ದಫನ ಮಾಡುವ ವಿಚಾರದಲ್ಲಿ ತಕರಾರು ನಡೆದಿತ್ತು. ಕೆಲವರು ಅವರನ್ನು ಸುಡುಗಾಡಿನಲ್ಲಿ ಸುಡಬೇಕು ಎಂದೆಲ್ಲಾ ಹೇಳಿದರು. ಹೀಗಿರುವಾಗ ಆತ್ಮಹತ್ಯೆಯ ಬಗ್ಗೆ ಇಸ್ಲಾಮಿನ ದೃಷ್ಟಿಕೋನವೇನು?

ಉತ್ತರ: ಮನುಷ್ಯನ ಜೀವನ ಹಾಗೂ ಶರೀರವು ದೈವದತ್ತವಾದುದಾಗಿದೆ. ಅದು ಮನುಷ್ಯನು ಸ್ವತಃ ಗಳಿಸಿದ್ದಲ್ಲ. ಆದ್ದರಿಂದ ಅವೆರಡನ್ನೂ ನಾಶಪಡಿಸುವ ಹಕ್ಕು ಮನುಷ್ಯರಿಗಿಲ್ಲ ಎಂಬುದೇ ಇಸ್ಲಾಮಿನ ಧೋರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ವಂತ ಜೀವವನ್ನು ಹತ್ಯೆಗೈಯುವ ಸ್ವಾತಂತ್ರ್ಯ ಮಾತ್ರವಲ್ಲದೆ ಮರಣಕ್ಕಾಗಿ ಪ್ರಾರ್ಥಿಸಲಿಕ್ಕಿರುವ ಹಕ್ಕನ್ನೂ ಇಸ್ಲಾಮ್ ನಿರಾಕರಿಸಿದೆ. ದೇವನು ನಿಶ್ಚಯಿಸಿರುವ ಕಾಲಾವಧಿಯ ತನಕ ಯಾವುದೇ ಕಷ್ಟಗಳಿದ್ದರೂ ಅವುಗಳನ್ನು ಸಹಿಸಿ, ಸಹನೆ ವಹಿಸಿ, ಒಳಿತಿಗಾಗಿ ಪ್ರಾರ್ಥಿಸುತ್ತಾ ಬದುಕಬೇಕು ಎಂಬುದೇ ಅಲ್ಲಾಹನ ಆಜ್ಞೆಯಾಗಿದೆ.

ಪ್ರವಾದಿ(ಸ) ಹೇಳಿದ್ದಾರೆ, “ನಿಮ್ಮ ಪೈಕಿ ಯಾರು ಕೂಡಾ ಮರಣಕ್ಕಾಗಿ ಆಗ್ರಹಿಸಬಾರದು. ಗತ್ಯಂತರವಿಲ್ಲವೆಂದು ಭಾಸವಾದರೆ ಅವನು ಈ ರೀತಿ ಪ್ರಾರ್ಥಿಸಲಿ. ಓ ಅಲ್ಲಾಹ್! ಜೀವನವು ನನಗೆ ಉತ್ತಮವೆಂದಾದರೆ ನೀನು ನನ್ನ ಜೀವವನ್ನು ಉಳಿಸು. ಮರಣವು ನನಗೆ ಉತ್ತಮವೆಂದಾದರೆ ನೀನು ನನಗೆ ಮರಣವನ್ನು ನೀಡು.” (ಬುಖಾರಿ, ಮುಸ್ಲಿಮ್)

ಆತ್ಮಹತ್ಯೆಯು ಇಸ್ಲಾಮಿನಲ್ಲಿ ಮಹಾ ಪಾಪವಾಗಿದೆ. “ನೀವು ನಿಮ್ಮನ್ನು ಸ್ವತಃ ಕೊಲ್ಲದಿರಿ” ಎಂದು ಅಲ್ಲಾಹನು ಸೂರಃ ಅನ್ನಿಸಾದಲ್ಲಿ ಆಜ್ಞಾಪಿಸಿದ್ದಾನೆ. ಪ್ರವಾದಿಯವರು(ಸ) ಹೇಳಿದರು, “ಓರ್ವನು ಎತ್ತರದಿಂದ ಹಾರಿ ಆತ್ಮಹತ್ಯೆ ನಡೆಸಿದರೆ ಆತನು ನರಕದಲ್ಲಿ ಕಾಲಾನುಘಟ್ಟಲೆ ಅದೇ ರೀತಿ ಮಾಡುತ್ತಿರುವನು. ಓರ್ವನು ವಿಷ ಸೇವಿಸಿ ಆತ್ಮಹತ್ಯೆ ನಡೆಸಿದರೆ ನಕರದಲ್ಲೂ ಆತನು ಶಾಶ್ವತವಾಗಿ ವಿಷ ಸೇವಿಸುತ್ತಿರುವನು. ಓರ್ವನು ಕಬ್ಬಿಣದ ಆಯುಧದಿಂದ ಸ್ವತಃ ಚುಚ್ಚಿ ಮರಣ ಹೊಂದಿದರೆ ಆತನು ನರಕದಲ್ಲಿ ನಿರಂತರವಾಗಿ ಆಯುಧದಿಂದ ಸ್ವತಃ ಚುಚ್ಚುತ್ತಿರುವನು. (ಬುಖಾರಿ, ಮುಸ್ಲಿಮ್)

ಇನ್ನೊಂದು ಪ್ರವಾದಿ ವಚನ ಇಂತಿದೆ. “ಸ್ವತಃ ಉಸಿರು ಕಟ್ಟಿಸುವವನು ನರಕದಲ್ಲೂ ಸ್ವತಃ ಉಸಿರು ಕಟ್ಟಿಸುವನು. ಸ್ವತಃ ಹಾರಿ ಆತ್ಮಹತ್ಯೆ ಮಾಡಿದವನು ನರಕದಲ್ಲೂ. ಅದೇ ರೀತಿ ಮಾಡುವನು.” (ಬುಖಾರಿ) ಮತ್ತೊಂದು ಹದೀಸ್ ಹೀಗಿದೆ. “ನಿಮಗಿಂತ ಮುಂಚೆ ಗತಿಸಿ ಹೋದವರಲ್ಲಿ ಓರ್ವರು ಗಾಯಗೊಂಡರು. ಆತನಿಗೆ ಅದನ್ನು ಸಹಿಸಲಾಗಲಿಲ್ಲ. ಅತನು ಒಂದು ಕತ್ತಿಯಿಂದ ಕೈ ಕತ್ತರಿಸಿದನು. ರಕ್ತ ಸೋರಿಕೆಯಾಗಿ ಆತ ಮರಣ ಹೊಂದಿದನು. ಅಲ್ಲಾಹನು ಹೇಳುತ್ತಾನೆ- ನನ್ನ ದಾಸನು ತನ್ನ ಜೀವದ ವಿಚಾರದಲ್ಲಿ ನನ್ನನ್ನು ಮೀರಿದನು. ಆದ್ದರಿಂದ ನಾನು ಆತನಿಗೆ ಸ್ವರ್ಗವನ್ನು ನಿಷಿದ್ಧಗೊಳಿಸಿದೆ.” (ಬುಖಾರಿ)

ಒಟ್ಟಿನಲ್ಲಿ ಆತ್ಮಹತ್ಯೆಯು ಪಶ್ಚಾತ್ತಾಪಕ್ಕೂ ಅವಕಾಶ ನೀಡದ ಮಹಾ ಪಾತಕವಾಗಿದೆ. ಓರ್ವ ವಿಶ್ವಾಸಿಯು ಅದರ ಬಗ್ಗೆ ಚಿಂತಿಸಲೇಬಾರದು. ಇದು ಹೇಳುತ್ತಿರುವುದು ಮನಸ್ಸಿನ ಸ್ಥಿಮಿತ ಕಳಕೊಂಡವರು ಮಾಡುವ ಕೃತ್ಯದ ಬಗ್ಗೆಯಲ್ಲ. ಸ್ಥಿಮಿತ ಕಳಕೊಂಡವರಿಗೆ ವಿಧಿ ನಿಷೇಧಗಳು ಅನ್ವಯಿಸುವುದಿಲ್ಲ. ಇವರ ಹೊರತುಪಡಿಸಿ ಉಳಿದವರು ಯಾವುದೇ ಸಂಧಿಗ್ಧ ಪರಿಸ್ಥಿತಿಯನ್ನೂ ಸಹನೆಯಿಂದ ನಿಭಾಯಿಸಿ ಅಲ್ಲಾಹನು ನಿಶ್ಚಯಿಸಿರುವ ಆಯುಷ್ಯದವರೆಗೆ ಬದುಕಲು ಪ್ರಾರ್ಥಿಸಬೇಕು ಮತ್ತು ಪ್ರಯತ್ನಿಸಬೇಕು.

ಓರ್ವ ಮುಸ್ಲಿಮನು ಆತ್ಮಹತ್ಯೆ ನಡೆಸಿದರೆ ಆತನಿಗಾಗಿ ನಮಾಝ್ ನಿರ್ವಹಿಸಬೇಕು ಮತ್ತು ಇತರ ಕರ್ಮಗಳನ್ನು ನೆರವೇರಿಸಬೇಕು ಎಂಬುದು ಪೂರ್ವಿಕ ಕರ್ಮಶಾಸ್ತ್ರ ವಿದ್ವಾಂಸರ ಒಮ್ಮತಾಭಿಪ್ರಾಯವಾಗಿದೆ. ಸಾಲಗಾರನ ಮಯ್ಯತ್ ನಮಾಝನ್ನು ಪ್ರವಾದಿಯವರು(ಸ) ನಿರ್ವಹಿಸದಿದ್ದರೂ ಶಿಷ್ಯರೊಂದಿಗೆ ನಿರ್ವಹಿಸಲು ಹೇಳಿದ್ದರು. ಇದೇ ರೀತಿಯಲ್ಲಿ ಆತ್ಮಹತ್ಯೆ ಮಾಡಿದವರೂ ಮಹಾ ಪಾಪಿಗಳಾಗಿದ್ದಾರೆ ಎಂದು ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಸುಡುಗಾಡಿನಲ್ಲಿ ಸುಡುವ ಸಂಪ್ರದಾಯವು ಇಸ್ಲಾಮಿನಲ್ಲಿಲ್ಲ. ಅದು ಇಸ್ಲಾಮೀ ಸಂಪ್ರದಾಯವೂ ಅಲ್ಲ. ಆದ್ದರಿಂದ ಓರ್ವ ಮುಸ್ಲಿಮ್ ಆತ್ಮಹತ್ಯೆ ನಡೆಸಿದರೆ ಆತನನ್ನು ಇಸ್ಲಾಮೀ ರೀತಿಯಲ್ಲೇ ದಫನ ಮಾಡಬೇಕು. ಅವನು ಎಸಗಿದ ಕೃತ್ಯದ ಬಗ್ಗೆ ಇರುವ ತೀರ್ಮಾನವು ಅಲ್ಲಾಹನಿಗೆ ಬಿಟ್ಟ ವಿಚಾರವಾಗಿದೆ. ಅದರಲ್ಲಿ ಮನುಷ್ಯರಿಗೆ ಯಾವುದೇ ತೀರ್ಮಾನಗಳಿಲ್ಲ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *