Home / ಲೇಖನಗಳು / ಖುತ್ಬಾ ನಿರ್ವಹಿಸುತ್ತಿದ್ದ ಪ್ರವಾದಿ(ಸ) ಇಳಿದು ಬಂದು ಅವರಿಬ್ಬರನ್ನು ಎತ್ತಿಕೊಂಡರು…

ಖುತ್ಬಾ ನಿರ್ವಹಿಸುತ್ತಿದ್ದ ಪ್ರವಾದಿ(ಸ) ಇಳಿದು ಬಂದು ಅವರಿಬ್ಬರನ್ನು ಎತ್ತಿಕೊಂಡರು…

ಅಬೂ ಝೀಶಾನ್

ಪ್ರವಾದಿ(ಸ) ಶುಕ್ರವಾರವನ್ನು ವಿಶೇಷ ದಿನವಾಗಿ ಪರಿಗಣಿಸಲು ಕಲಿಸಿದ್ದಾರೆ. ಪ್ರವಾದಿ(ಸ) ಹೇಳಿದರು, “ಅಲ್ಲಾಹನು ಶುಕ್ರವಾರ  ಮುಸ್ಲಿಮರಿಗೆ ನೀಡಿದ ಈದ್‌ನ ದಿನವಾಗಿದೆ. ಹಾಗಾಗಿ ಆ ದಿನವನ್ನು ವಿಶೇಷವಾಗಿ ಪರಿಗಣಿಸಿರಿ.” ಪ್ರವಾದಿ(ಸ) ಶುಕ್ರವಾರದ ದಿನ  ಜುಮಾ ನಮಾಝಿಗಾಗಿ ಮಸೀದಿಗೆ ಬರುವಾಗ ಸ್ನಾನ ಮಾಡಿ, ವುಝೂ ಮಾಡಿ ತಮ್ಮಲ್ಲಿದ್ದ ಅತೀ ಉತ್ತಮವಾದ ಸುಗಂಧ ದ್ರವ್ಯವನ್ನು ಹಾಕಿ ಬರುತ್ತಿದ್ದರು. ಹೊಸತಾದ ಸಿವಾಕ್‌ನಿಂದ ಶುಕ್ರವಾರದ ದಿನ ಹಲ್ಲುಜ್ಜುತ್ತಿದ್ದರು. ಪ್ರವಾದಿ(ಸ) ಎರಡು ಸಂದರ್ಭಗಳಲ್ಲಿ ವಿಶೇಷವಾದ  ಬಟ್ಟೆಗಳನ್ನು ಧರಿಸುತ್ತಿದ್ದರು. ಒಂದು ಯಾವುದಾದರೂ ನಿಯೋಗವನ್ನು ಭೇಟಿಯಾಗುವಾಗ ಹಾಗೂ ಇನ್ನೊಂದು ಸಂದರ್ಭ ಶುಕ್ರವಾರದ ದಿನ ಖುತ್ಬಾ ನೀಡುವಾಗ. ಪ್ರವಾದಿ(ಸ) ಹೇಳಿದರು, “ನಿಮಗೆ ಸಾಧ್ಯವಾದರೆ ಇತರ ದಿನಗಳಿಗಿಂತಲೂ ಬೇರೆಯಾದ ಕೇವಲ ಶುಕ್ರವಾರಕ್ಕಾಗಿ ಬೇರೊಂದು ಬಟ್ಟೆಯನ್ನು ಖರೀದಿಸಿರಿ.”

ಪ್ರವಾದಿ(ಸ) ಮಸೀದಿಗೆ ಬಂದು ಖುತ್ಬಾ ನೀಡುವ ಸಮಯವಾದಾಗ ಮಿಂಬರ್‌ಗೆ ಹತ್ತಿ ಸಲಾಮ್ ಹೇಳುತ್ತಿದ್ದರು. ಆಗ ಹ. ಬಿಲಾಲ್ (ರ) ಎದ್ದು ಅದಾನ್ ಕೊಡುತ್ತಿದ್ದರು. ಪ್ರವಾದಿ(ಸ) ಖುತ್ಬಾ ನೀಡುವಾಗ ಜನರು ಆದಷ್ಟು ಮಿಂಬರ್‌ನ ಹತ್ತಿರ ಕುಳಿತುಕೊಳ್ಳಲು  ಪ್ರಯತ್ನಿಸುತ್ತಿದ್ದರು. ಒಮ್ಮೆ ಖುತ್ಬಾ ಆರಂಭವಾದಾಗ ಒಬ್ಬರು ಜನರನ್ನು ದಾಟಿಕೊಂಡು ಮುಂದೆ ಬರುತ್ತಿದ್ದಾಗ ಪ್ರವಾದಿ(ಸ) ಮಿಂಬರ್ ನಿಂದಲೇ ಅವರಿಗೆ ಹೇಳಿದರು, “ನೀನು ಜನರನ್ನು ದಾಟಿಕೊಂಡು ಬರಬೇಡ. ನೀನು ತಡವಾಗಿ ಬಂದಿದ್ದಿಯಾ. ಎಲ್ಲಿರುವೆಯೋ ಅ ಲ್ಲಿಯೇ ಕುಳಿತುಕೊ.”

ಪ್ರವಾದಿ(ಸ) ಖುತ್ಬಾ ನೀಡಲು ನಿಂತಾಗ ಮಸೀದಿಯಲ್ಲಿದ್ದ ಪ್ರತಿಯೊಬ್ಬರನ್ನು ನೋಡುತ್ತಾ ಖುತ್ಬಾ ನೀಡುತ್ತಿದ್ದರು. ಯಾರು ಮಸೀದಿಯಲ್ಲಿದ್ದಾರೆ, ಯಾರು ಬರುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಗಮನವಿರುತ್ತಿತ್ತು. ಹ. ಅಬೂ ಖೈಸ(ರ) ಹೇಳುತ್ತಾರೆ, “ಒಮ್ಮೆ ನಾನು ಶುಕ್ರವಾರ ಮಸೀದಿಗೆ ಬಂದಾಗ ಪ್ರವಾದಿ(ಸ) ಖುತ್ಬಾ ನೀಡುತ್ತಿದ್ದರು. ಹಾಗಾಗಿ ನಾನು ಬಿಸಿಲಿನಲ್ಲಿ ನಿಂತು ಖುತ್ಬಾವನ್ನು ಆಲಿಸ ತೊಡಗಿದೆ. ಆಗ ಖುತ್ಬಾ ನೀಡುತ್ತಿದ್ದಂತಲೇ ಪ್ರವಾದಿ(ಸ) ಒಂದು ಮೂಲೆಯನ್ನು ತೋರಿಸಿ ಆ ನೆರಳಿನಲ್ಲಿ ಹೋಗಿ ಕುಳಿತುಕೊಳ್ಳಲು ಕೈ  ಸನ್ನೆಯಿಂದ ನನ್ನೊಡನೆ ಹೇಳಿದರು. ಇನ್ನೊಂದು ಸಲ ಪ್ರವಾದಿ(ಸ) ಖುತ್ಬಾ ನೀಡುತ್ತಿದ್ದಾಗ ಹ. ಸುಲೈಕ್ ಅಲ್ ಗತ್‌ಫಾನಿ(ರ) ಎಂಬ ಸಹಾಬಿ ಮಸೀದಿಗೆ ಬಂದಾಗ, ಅವರೊಂದಿಗೆ ಎರಡು ರಕಅತ್ ನಮಾಝ್ ಮಾಡಲು ಹೇಳಿದರು. ಕೆಲವು ವರದಿಗಳ ಪ್ರಕಾರ ಆ ಸಹಾಬಿ ಬಹಳ ಬಡವರಾಗಿದ್ದರು. ನಮಾಝ್‌ನ ನಂತರ ಜನರು ಅವರಿಗೆ ಸಹಾಯ ಮಾಡಲಿ ಎಂಬ ಉದ್ದೇಶದಿಂದ ಹಾಗೆ 2 ರಕಅತ್ ನಮಾಝ್ ಮಾಡಲು ಆದೇಶಿಸಿದ್ದರು. ಪ್ರವಾದಿ(ಸ) ಖುತ್ಬಾ ನೀಡುತ್ತಿರುವಾಗ ಪ್ರತಿಯೊಬ್ಬರ ಮೇಲೆ ಗಮನ ಹರಿಸುತ್ತಿದ್ದರು.  ಆ ಮಸೀದಿಯಲ್ಲಿ ಪ್ರವಾದಿ(ಸ) ಸಂಪೂರ್ಣ ನಿಯಂತ್ರಣ ಇರುತ್ತಿತ್ತು.

ಒಮ್ಮೆ ಪ್ರವಾದಿ(ಸ) ಖುತ್ಬಾ ನೀಡುತ್ತಿದ್ದಾಗ ಪ್ರವಾದಿ(ಸ) ಪ್ರೀತಿಯ ಮೊಮ್ಮಕ್ಕರಾದ ಪುಟ್ಟ ಬಾಲಕರಾಗಿದ್ದ ಹ. ಹಸನ್(ರ) ಹಾಗೂ ಹ. ಹುಸೈನ್(ರ) ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಮುದ್ದು ಮುದ್ದಾಗಿ ಪ್ರವಾದಿ(ಸ) ಕಡೆಗೆ ಓಡುತ್ತಾ ಬಂದರು. ಇಡೀ ಮಸೀದಿಯಲ್ಲಿರುವವರು ಆ ದೃಶ್ಯವನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದಾಗ ಪ್ರವಾದಿ(ಸ) ನೀಡುತ್ತಿದ್ದ ಖುತ್ಬಾವನ್ನು ನಿಲ್ಲಿಸಿ ಮಿಂಬರ್‌ ನಿಂದ  ಕೆಳಗಿಳಿದು ಆ ಎರಡು ಮುದ್ದು ಮಕ್ಕಳನ್ನು ಕೈಯಲ್ಲಿ ಎತ್ತಿ ಹಿಡಿದು ಹೇಳಿದರು, “ನಿಶ್ಚಯವಾಗಿಯೂ ಸಂಪತ್ತು ಹಾಗೂ ಸಂತಾನಗಳು ಪರೀಕ್ಷೆಗಳಾಗಿವೆ. ನಾನು ಈ ಮುದ್ದು ಮಕ್ಕಳನ್ನು ನೋಡಿ ಎತ್ತದೆ ಇರಲು ಸಾಧ್ಯವಾಗದೆ ಹೋಯಿತು.” ನಂತರ ಆ ಎರಡು ಮಕ್ಕಳಿಗೆ ದುಆ ಮಾಡುತ್ತಾ ಅವರನ್ನು ಎತ್ತಿ ಹಿಡಿದು ಮಿಂಬರ್‌ಗೆ ಹತ್ತಿ ತಮ್ಮ ತೊಡೆಯ ಮೇಲೆ ಕುಳ್ಳಿರಿಸಿ ಖುತ್ಬಾವನ್ನು ಮುಂದುವರಿಸಿದರು.

ಪ್ರವಾದಿ(ಸ) ತಮ್ಮ ಖುತ್ಬಾಗಳಲ್ಲಿ ಜೀವನ ಹಾಗೂ ಮರಣದ ಬಗ್ಗೆ ನೆನಪಿಸುತ್ತಿದ್ದರು. ಉಮ್ಮು ಹಿಶಾಮ್ ಬಿಂತ್ ಹಾರಿಸ್
ಇಬ್ನು ನುಅಮಾನ್(ರ) ಹೇಳುತ್ತಾರೆ, “ನಾನು ಸೂರಃ ಕಾಫ್ ಅನ್ನು ಪ್ರವಾದಿ(ಸ)ರ ಖುತ್ಬಾವನ್ನು ಆಲಿಸಿ ಕಂಠಪಾಠ ಮಾಡಿದೆ. ಸೂರಃ ಕಾಫ್ ಜೀವನ ಹಾಗೂ ಮರಣದ ಬಗ್ಗೆ ವಿವರಿಸುವ ಸೂರಃವಾಗಿದೆ ಹಾಗೂ ಪ್ರವಾದಿ(ಸ) ಪ್ರತಿಯೊಂದು ಖುತ್ಬಾದಲ್ಲಿ ಸೂರಃ ಕಾಫ್ ಅನ್ನು ಪಠಿಸುತ್ತಿದ್ದರು. ಪ್ರವಾದಿ(ಸ) ಖುತ್ಬಾ ನೀಡುತ್ತಿದ್ದಾಗ ಬಹಳ ಸ್ಪಷ್ಟವಾಗಿ ಮಾತುಗಳನ್ನು ಆಡುತ್ತಿದ್ದರು. ಮಾತನ್ನು ಮೂರು ಸಲ ಪುನರಾವರ್ತಿಸುತ್ತಿದ್ದರು. ಅವರು ಬಾಯಿಯಲ್ಲಿ ಹೇಳುತ್ತಿದ್ದ ಮಾತುಗಳು ಅವರ ಕಣ್ಣುಗಳಲ್ಲಿಯೂ ಪ್ರತಿಬಿಂಬಿಸುತ್ತಿತ್ತು. ಯಾವುದಾದರೂ ಕೋಪದ ಮಾತುಗಳನ್ನು ಆಡುತ್ತಿರುವಾಗ ಕಣ್ಣುಗಳಲ್ಲಿಯೂ ಆ ಕೋಪವು ಕಾಣುತ್ತಿತ್ತು. ಯಾವುದಾದರೂ ಸಂತೋಷದ ಮಾತುಗಳನ್ನು ಆಡುತ್ತಿರುವಾಗ ಆ ಸಂತೋಷವು ಅವರ ಕಣ್ಣುಗಳಲ್ಲಿಯೂ ಕಾಣಬಹುದಾಗಿತ್ತು.  ಅವರು(ಸ) ಮಾತನಾ ಡುವಾಗ ತನ್ನ ಕೈಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಸತ್ಯ ವಿಶ್ವಾಸಿಗಳ ಸಂಬಂಧದ ಬಗ್ಗೆ ಮಾತನಾಡುವಾಗ ಎರಡು ಕೈಗಳ ಬೆರಳುಗಳನ್ನು ಪರಸ್ಪರ ಜೋಡಿಸುತ್ತಿದ್ದರು. ನಾಲಗೆಯ ಬಗ್ಗೆ ಎಚ್ಚರಿಸುವಾಗ ತನ್ನ ಬೆರಳನ್ನು ನಾಲಗೆಗೆ ತೋರಿಸುತ್ತಿದ್ದರು. ಸ್ವರ್ಗದ ಬಾಗಿಲನ್ನು ತೆರೆಯುವ ಬಗ್ಗೆ ಮಾತಾಡುವಾಗ ತನ್ನ ಕೈಯಿಂದ ಬಾಗಿಲು ತೆರೆದ ಹಾಗೆ ಮಾಡುತ್ತಿದ್ದರು.  ಹಾಗೆಯೇ ಹೆಚ್ಚಾಗಿ ಆಕಾಶಕ್ಕೆ ಬೆರಳನ್ನು ತೋರಿಸುತ್ತಿದ್ದರು.

ಪ್ರವಾದಿ(ಸ) ಭಾಷಣ ಹಾಗೂ ಹೇಳಿಕೆಗಳಷ್ಟು ಇತಿಹಾಸದಲ್ಲಿ ಬೇರೆ ಯಾರದ್ದೂ ರೆಕಾರ್ಡ್ ಆಗಲಿಲ್ಲ. ಹದೀಸ್‌ನ ರೂಪದಲ್ಲಿ ಪ್ರವಾ ದಿ(ಸ)ರ ಮಾತುಗಳು ಸಾವಿರಗಟ್ಟಲೆ ಸಂಖ್ಯೆಗಳಲ್ಲಿವೆ. ಆದರೆ ಪ್ರವಾದಿ(ಸ) ಖುತ್ಬಾಗಳಾಗಿರಲಿ, ಹೇಳಿಕೆಗಳಾಗಿರಲಿ, ಅವರು ಹೇಳುವುದಕ್ಕಿಂತ ಮುಂಚೆ ಯಾವುದನ್ನೂ ತಯಾರು ಮಾಡಿರಲಿಲ್ಲ. ಹೃದಯಾಂತರಾಳದಿಂದ ಅವರು ಜನರಿಗೆ ಬೋಧಿಸುತ್ತಿದ್ದರು. ಆ ಮಾತುಗಳು ನೇರವಾಗಿ ಸಹಾಬಿಗಳ ಹೃದಯಕ್ಕೆ ನಾಟುತ್ತಿದ್ದುವು. ಪ್ರವಾದಿ(ಸ) ಖುತ್ಬಾ ನೀಡುತ್ತಿದ್ದಾಗ, ಭಾಷಣ ನೀಡುತ್ತಿದ್ದಾಗ ಅವರು (ಸ) ಹೇಳುತ್ತಿದ್ದ ವಿಷಯಗಳ ಗಂಭೀರತೆಯನ್ನು ಅರಿತು, ವಿಶೇಷವಾಗಿ ಗೋರಿ ಶಿಕ್ಷೆ, ನರಕದ ಶಿಕ್ಷೆಯ ಬಗ್ಗೆ ಹೇಳುವಾಗ, ಇಡೀ  ಸಭೆಯೇ ಅಳುತ್ತಿದ್ದ ಅನೇಕ ಘಟನೆಗಳು ಸೀರತ್‌ನ್ನು ನಮಗೆ ಕಾಣ ಸಿಗುತ್ತವೆ.

ಹ. ಅಸ್ಮಾ(ರ) ಹೇಳುತ್ತಾರೆ, ಒಮ್ಮೆ ಪ್ರವಾದಿ(ಸ) ಖುತ್ಬಾ  ನೀಡುತ್ತಿದ್ದಾಗ, ನಮ್ಮ ಮುಂದಿನ ಭಾಗದಲ್ಲಿ ಕುಳಿತಿದ್ದ ಸಹಾಬಿಗಳು ಅಳುವ ಶಬ್ದದಿಂದ ನಮಗೆ ಖುತ್ಬಾ ಕೇಳುತ್ತಿರಲಿಲ್ಲ. ಅವರು ಯಾವ ಕಾರಣಕ್ಕೆ ಕೂಗುತ್ತಿದ್ದಾರೆಂದು ನಮಗೆಲ್ಲ ಕುತೂಹಲವಾಯಿತು. ಖುತ್ಬಾ ಮುಗಿದ ನಂತರ ಒಬ್ಬರೊಂದಿಗೆ, ಕೂಗುತ್ತಿದ್ದ ಕಾರಣ  ಕೇಳಿದಾಗ, ಪ್ರವಾದಿ(ಸ) ಗೋರಿಯ ವಿಚಾರಣೆಯ ಬಗ್ಗೆ ಮಾತಾಡುತ್ತಿದ್ದಾಗ ಎಲ್ಲರೂ ಅಳಲು ತೊಡಗಿದರು ಎಂದು ಅವರು ಹೇಳಿದರು.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *