ಮಂಗಳೂರು: ” ಸಮಾಜದ ಕುಟುಂಬದ ಸಮಸ್ಯೆಗಳನ್ನು ಬಹಳ ಯಥಾವತ್ತಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ. ಇಸ್ಲಾಮಿನಲ್ಲಿ ಮದುವೆಯು ಸರಳ ವಿಧಾನವಾಗಿದೆ. ಮದುವೆಯ ಪ್ರಾರಂಭದಿಂದ ಹಿಡಿದು ಹನಿಮೂನ್ ಸಹಿತ ಎಲ್ಲಾ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ. ದಾಂಪತ್ಯ ಬದುಕಿನ ಆಗು ಹೋಗುಗಳ ಬಗೆಗಿನ ಈ ವಿಮರ್ಶಾತ್ಮಕ ಕೃತಿ ಪ್ರತಿಯೊಂದು ಮನೆಗೂ ಪ್ರಯೋಜನಕಾರಿಯಾಗಲಿದೆ ಎಂದು ಫಾರ್ವರ್ಡ್ ಕೌನ್ಸಿಲಿಂಗ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ರಹ್ಮತ್ ಮನ್ಸೂರ್ ಹೇಳಿದರು.
ಅವರು ಇಲ್ಲಿನ ಫಾರ್ವರ್ಡ್ ಕೌನ್ಸಿಲಿಂಗ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ , ಫಾರ್ವರ್ಡ್ ಕೌನ್ಸಿಲಿಂಗ್ ಸದಸ್ಯ ಸಿದ್ದೀಕ್ ಜಕ್ರಿಬೆಟ್ಟು ಬರೆದ “ಸುಮಧುರ ದಾಂಪತ್ಯ ” ಕೃತಿಯನ್ನು ಶೀಘ್ರದಲ್ಲೇ ಮದುವೆಯಾಗಲಿರುವ ನವದಂಪತಿಗಳಿಗೆ ಹಸ್ತಾಂತರಿಸುತ್ತಾ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಫಾರ್ವರ್ಡ್ ಕೌನ್ಸಿಲಿಂಗ್ ಸದಸ್ಯೆಯರಾದ ಶಹನಾಝ್.ಎಂ. ಮತ್ತು ಮರ್ಯಮ್ ಶಹೀರಾ ಶುಭ ಹಾರೈಸಿದರು. ಕೃತಿಯ ಲೇಖಕ ಮುಹಮ್ಮದ್ ಸಿದ್ದೀಕ್ ಜಕ್ರಿಬೆಟ್ಟು ಮಾತನಾಡುತ್ತಾ “ಸಮಾಜದಲ್ಲಿ ನಡೆಯುತ್ತಿರುವ ಅನಿಸ್ಲಾಮಿಕ ನಡೆಯೇ ಈ ಕೃತಿಗೆ ಪ್ರೇರಣೆ ಎಂದು ಹೇಳಿದರು.
ಪ್ರಾರಂಭದಲ್ಲಿ ಮರ್ಯಮ್ ಶಹೀರಾ ಕುರ್ ಆನ್ ಪಠಿಸಿದರು. ಕನೀಝಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಫಾರ್ವರ್ಡ್ ಕೌನ್ಸಿಲಿಂಗ್ ಸದಸ್ಯರಾದ ಸಯೀದ್ ಇಸ್ಮಾಯಿಲ್, ಯೂಸುಫ್ ಪಕ್ಕಲಡ್ಕ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
IslamKannada News Portal

