Home / ಲೇಖನಗಳು / ಬನ್ನಿ ಮೊದಲು, ಪರಸ್ಪರ ಗೌರವಿಸುವುದನ್ನು ಮುಗುಳ್ನಗುವುದನ್ನು ಕಲಿಯೋಣ..

ಬನ್ನಿ ಮೊದಲು, ಪರಸ್ಪರ ಗೌರವಿಸುವುದನ್ನು ಮುಗುಳ್ನಗುವುದನ್ನು ಕಲಿಯೋಣ..

ಪ್ರಸನ್ನತೆ ಮುಖದ ಸೌಂದರ್ಯವಾಗಿದೆ. ಒಳಿತು ತುಂಬಿ ತುಳುಕುವ ಮನಸ್ಸಿನಿಂದ ಮುಗುಳ್ನಗೆಯು ಹೊರ ಚಿಮ್ಮುವುದು ಮನದ ಒಳಗೆ ತುಂಬಿದ ಬೇಗುದಿಯನ್ನು ಕಿತ್ತೆಸೆದು ಮಾನವ ಸಮಾಜದ ಬೇರುಗಳನ್ನು ಮೊಳಕೆಯೊಡೆಯುವಂತೆ ಮಾಡಿದವರಿಗೆ ಮಾತ್ರ ನಿಷ್ಕಳಂಕರಾಗಿ ಇತರರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅಂತಹವರು ಜೀವನದಲ್ಲಿ ಸಂಪೂರ್ಣವಾಗಿ ನಸುನಗುತ್ತಿರುವರು. ಪ್ರವಾದಿವರ್ಯರು(ಸ) ಮುಗುಳ್ನಗೆಯನ್ನು ಮುಸ್ಲಿಮರ ಸಂಕೇತವಾಗಿದೆ ಎಂದಿದ್ದಾರೆ. ನಿಷ್ಕಳಂಕವಾದ ಹೃದಯ (ಕಲ್ಬುನ್ ಸಲೀಮ್) ಎಂದು ಪ್ರವಾದಿ ಇಬ್ರಾಹೀಮರನ್ನು ಕುರ್‍ಆನ್ ವರ್ಣಿಸಿದೆ. ಮನಸ್ಸಿನ ಶುದ್ಧಿಯು ಪ್ರಶಾಂತತೆಯ, ಮುವಹ್ಹಿದ್‍ನ ಚಿಹ್ನೆಯಾಗಿದೆ.

ಮುಗುಳ್ನಗೆಯ ಮಹತ್ವದ ಬಗ್ಗೆ ಹೆಚ್ಚಿನವರು ಅಜ್ಞರಾಗಿದ್ದಾರೆ. ಸಣ್ಣ ಮುಗುಳ್ನಗೆಯಿಂದ ಆಗುವಂತಹ ಕ್ರಾಂತಿಯ ವೈಶಿಷ್ಟ್ಯವನ್ನು ಪ್ರವಾದಿವರ್ಯರು(ಸ) ಸ್ವತಃ ಅನುಭವಿಸಿದ್ದರು. ವ್ಯಭಿಚಾರ ಮಾಡಲು ನನಗೆ ಅನುಮತಿ ನೀಡಬೇಕೆಂದು ಕೇಳಿದ ವ್ಯಕ್ತಿಯನ್ನು ಪ್ರವಾದಿವರ್ಯರು(ಸ) ಮುಗುಳ್ನಗೆಯಿಂದಲೇ ಸ್ವಾಗತಿಸಿದ್ದರು.

ಮಾತ್ರವಲ್ಲ ಅಪ್ಪಿ ಹಿಡಿದು ತನ್ನ ಪಕ್ಕದಲ್ಲಿ ಕೂರಿಸಿದ್ದರು. ಬಳಿಕ ಬಹಳ ಶಾಂತತೆಯಿಂದ ಬೋಧಿಸಿದ್ದರು. ಪ್ರವಾದಿವರ್ಯರ(ಸ) ಬಳಿಗೆ ಬರುವಾಗ ಆ ವ್ಯಕ್ತಿಗೆ ವ್ಯಭಿಚಾರವು ಅತ್ಯಂತ ಪ್ರೀತಿಯ ವಿಷಯವಾಗಿತ್ತು. ಅಲ್ಲಿಂದ ಹಿಂದಿರುಗುವಾಗ ವ್ಯಭಿಚಾರವೆಂಬುದು ಅವರಿಗೆ ಅತ್ಯಂತ ಅಪ್ರಿಯ ವಿಷಯವಾಗಿತ್ತು ಎಂದು ಅವರು ಸ್ವತಃ ಹೇಳಿದ್ದರು. ಕೋಪದಿಂದ, ಅಧಿಕಾರವಾಣಿಯಿಂದ ಅವರಲ್ಲಿ ಪ್ರವಾದಿವರ್ಯರು(ಸ) ವರ್ತಿಸಿದ್ದಿದ್ದರೆ ಘಟನೆ ಬೇರೆಯೇ ಆಗುತ್ತಿತ್ತು. ಇಂತಹ ಎಷ್ಟೋ ಘಟನೆಗಳು ಪ್ರವಾದಿವರ್ಯರ(ಸ) ಜೀವನದಲ್ಲಿ ಘಟಿಸಿದೆ.

ಅಹಂಕಾರ ಎಂಬುದು ಅಲ್ಪರ ಚಿಹ್ನೆಯಾಗಿದೆ. ಯಾವುದೋ ಏನನ್ನೋ ಸ್ವಲ್ಪ ಗಳಿಸಿದ ಕಾರಣಕ್ಕಾಗಿ ಎಲ್ಲರಿಗಿಂತಲೂ ಮೇಲಿನ ಸ್ಥಾನದಲ್ಲಿರಬೇಕೆಂಬ ಭಾವನೆ ಅವರಲ್ಲಿರುತ್ತದೆ. ಇತರರಿಗಿಂತ ಹಣ, ಜ್ಞಾನ, ಬುದ್ಧಿಮತ್ತೆಯಲ್ಲಿ ಮುಂದಿದ್ದುಕೊಂಡು ಅವರಲ್ಲಿ ಸ್ವಚ್ಛ ಮನಸ್ಸು ಕೂಡಾ ಇದ್ದರೆ ಉನ್ನತ ಮಟ್ಟದ ಚಿಂತನೆಯಲ್ಲಿ ಭಾಗಿಯಾಗಿ ಅವರು ಹೃದಯವಂತ ಹಾಗೂ ವಿನಯವಂತರಾಗಿರುತ್ತಾರೆ. ಮರ ತುಂಬಾ ಹಣ್ಣುಗಳನ್ನು ಹೊಂದಿದ ಮರದಂತೆ ಅವರು ವಿವೇಕವಂತರಾಗಿ ಭಾಗಿಕೊಂಡಿರುವರು.

ಸಾಸಿವೆ ಕಾಳಿನಷ್ಟು ಗಾತ್ರದಷ್ಟಾದರೂ ಅಹಂಕಾರವು ಹೃದಯದಲ್ಲಿದ್ದರೆ ಅವನು ಸ್ವರ್ಗ ಪ್ರವೇಶಿಸಲಾರ ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ. `ಮಿಸ್ ಕಾಲ ದರ್ರತಿನ್’ ಎಂದು ಆ ಅಳತೆಗೆ ಮಾನದಂಡವಾಗಿ ಪ್ರವಾದಿವರ್ಯರು(ಸ) ಬಳಸಿಕೊಂಡರು. ಒಂದು ಸಣ್ಣ ಇರುವೆಯ ಕಾಲಿನ ತುಂಡು ಅಥವಾ ಬಿಸಿಲಿನಲ್ಲಿ ಹಾರುವ ಸಣ್ಣ ಧೂಳಿನ ಕಣ ಮುಂತಾದ ಅರ್ಥವದು ಹದೀಸ್‍ನ ವಿದ್ವಾಂಸರು ಮಿಸ್‍ಕಾಲದರ್ರತಿನ್ ಎಂಬ ಪದಕ್ಕೆ ನೀಡಿರುತ್ತಾರೆ. ಅಂದರೆ ಅಷ್ಟು ಸಣ್ಣ ಪ್ರಮಾಣದಷ್ಟಾದರೂ ಅಹಂಕಾರ ಓರ್ವನ ಹೃದಯಲ್ಲಿದ್ದರೆ ಆತನು ಸ್ವರ್ಗಕ್ಕೆ ಪ್ರವೇಶಿಸಲಾರ. ಸ್ವರ್ಗವೆಂಬುದು ಅಲ್ಲಾಹನ ವಿನೀತರಾದ ದಾಸರು ಇರುವ ಕೇಂದ್ರವಾಗಿದೆ. ಅಹಂಕಾರ ಅಥವಾ ಲೋಕ ಮಾನ್ಯತೆ ಸ್ವಲ್ಪವೂ ಬಂದು ಸೇರದಿರಲು ನಿರಂತರ ಅಲ್ಲಾಹನಲ್ಲಿ ಪ್ರಾರ್ಥಿಸಬೇಕು ಎಂದು ಪ್ರವಾದಿವರ್ಯರು(ಸ) ಕಲಿಸಿರುತ್ತಾರೆ. ಅಂದರೆ ಅಹಂಕಾರವೆಂಬುದು ಅಷ್ಟು ಮಹತ್ತರಾದ ಪಾಪವಾಗಿದೆ.

ಮುಖವು ಮನಸ್ಸಿನ ಪ್ರತಿಬಿಂಬವಾಗಿದೆ. ಮುಗುಳ್ನಗು ತುಂಬಿರುವ ಅದರಗಳು ಆಕರ್ಷಕ ಮತ್ತು ಸೌಂದರ್ಯವನ್ನು ವರ್ಧಿಸುತ್ತದೆ. “ಯಾವುದೇ ಒಳಿತನ್ನು ನೀನು ತಾತ್ಸಾರದಿಂದ ಕಾಣಬಾರದು. ನಿನ್ನ ಸಹೋದರನನ್ನು ಮುಖಾ ಮುಖಿಯಾಗುವಾಗ ಮುಗುಳ್ನಗುವುದನ್ನು ಕೂಡಾ ತಾತ್ಸಾರದಿಂದ ಕಾಣಬಾರದು” ಎಂಬುದು ಪ್ರವಾದಿವರ್ಯರ(ಸ) ಉಪದೇಶವಾಗಿದೆ.

ಪ್ರವಾದಿವರ್ಯರು(ಸ) (ತಿರ್ಮಿದಿಯಲ್ಲಿ ವರದಿ ಮಾಡಿದ) ಹದೀಸ್ ಒಂದರಲ್ಲಿ ಈ ರೀತಿ ಹೇಳಿದ್ದಾರೆ, “ನಿನ್ನ ಸಹೋದರನ ಮುಖ ನೋಡಿ ಮುಗುಳ್ನಗುವುದು ಕೂಡಾ ಸದಕಾ ಆಗಿದೆ.” ಲುಕ್‍ಮಾನುಲ್ ಹಕೀಮ್‍ರು ತನ್ನ ಪ್ರಮುಖವಾದ ಉಯಿಲಿನಲ್ಲಿ ಜನರೊಡನೆ ಮುಖ ತಿರುಗಿಸಿ ಮಾತನಾಡಬೇಡ, ಭೂಮಿಯ ಮೇಲೆ ದರ್ಪದಿಂದ ನಡೆಯಬೇಡ. ದುರಭಿಮಾನ ಮತ್ತು ಅಹಂಕಾರ ಪಡುವವನ ನ್ನು ಅಲ್ಲಾಹನು ಮೆಚ್ಚುವುದಿಲ್ಲ. (ಲುಕ್ಮಾನ್: 18)

ನಿನ್ನ ಸ್ವರವನ್ನು ತಗ್ಗಿಸು. ನಿನ್ನ ನಡೆಯಲ್ಲಿ ಇತಿಮಿಯನ್ನಿರಿಸು ಎಂದು ಬೋಧಿಸಲಾಗಿದೆ. ಸೂರಾ ಫುರ್ಖಾನ್‍ನಲ್ಲಿ ಅಲ್ಲಾಹನ ನಿಷ್ಠಾವಂತರ ದಾಸರನ್ನು ಉಲ್ಲೇಖಿಸುತ್ತಾ ಭೂಮಿಯಲ್ಲಿ ನಯ ವಿನಯದಿಂದ ನಡೆಯುವವರು. (63ನೇ ಸೂಕ್ತ) ಎಂದು ಹೇಳಲಾಗಿದೆ. ಇಸ್ಲಾಮೀ ವ್ಯಕ್ತಿತ್ವದ ಮೊತ್ತ ಮೊದಲ ಗುಣವೇ ವಿನಯ.

ನಯ ವಿನಯದಿಂದ ಏನೂ ನಷ್ಟವಾಗದು. ಓರ್ವ ವ್ಯಕ್ತಿ ಸ್ವತಃ ತಾನೇ ಸಣ್ಣವನಂತೆ ವರ್ತಿಸಿದರೆ ಅಲ್ಲಾಹನು ಅವನನ್ನು ಉನ್ನತ ಮಟ್ಟಕ್ಕೇರಿಸುವನು. ಸ್ವತಃ ತಾನೇ ಎಲ್ಲ ತಿಳಿದವನಂತೆ ವರ್ತಿಸಿದರೆ ಅಲ್ಲಾಹನು ಅವನನ್ನು ಸಣ್ಣವನನ್ನಾಗಿ ಮಾಡುವನು. ಇತರರೊಂದಿಗೆ ಬೆರೆತು ಬಾಳುವವರ ಮುಖದಲ್ಲಿ ಮುಗುಳ್ನಗೆಯು ಲಾಸ್ಯವಾಡುತ್ತದೆ. ತನಗೆ ಇರುವಂತೆಯೇ ಇತರರಿಗೂ ಮಹತ್ವವಿದೆ ಎಂದು ಸ್ವಯಂ ಅರಿತಾಗ ನಾವು ಅಹಂಭಾವದಿಂದ ಪಾರಾಗುತ್ತೇವೆ.

ದುಷ್ಟ ಚಿಂತನೆಗಳಿಂದ, ಅಹಂಭಾವ, ಗರ್ವದಿಂದ ಮುಕ್ತನಾಗಿ ಎಲ್ಲಿಯೇ ಆಗಲಿ ಅತ್ಯಂತ ತಾಳ್ಮೆಯಿಂದ ವಿನೀತನಾಗಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಜೀವಿಸುವಾಗ ನಾವು ನಿಜವಾದ ವಿನೀತ ವ್ಯಕ್ತಿಗಳಾಗುತ್ತೇವೆ. ಮುಖದಲ್ಲಿ ಅರಳುವ ಮುಗುಳ್ನಗೆ ಅದಕ್ಕೆ ಸುಗಮ ದಾರಿ ಮಾಡಿ ಕೊಡುತ್ತದೆ. ಯಾವುದೇ ವೆಚ್ಚವಿಲ್ಲದ ಒಂದು ಮುಗುಳ್ನಗು- ಅದಕ್ಕೆ ಎಷ್ಟು ಮಹತ್ವವಿದೆ?

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *