@ ಅಬೂ ಝೀಶಾನ್
ಹ. ಹಸನ್ ಬಸರಿ(ರ) ಒಮ್ಮೆ ಒಂದು ಜನಾಝಾದೊಂದಿಗೆ ಹೋಗುತ್ತಿರುವಾಗ ತನ್ನ ಪಕ್ಕದಲ್ಲಿದ್ದ ಒಬ್ಬನೊಂದಿಗೆ ಕೇಳಿದರು, “ಈ ಮರಣ ಹೊಂದಿದವನ ಸ್ಥಳದಲ್ಲಿ ನೀನು ಮಲಗಿದ್ದಿದ್ದರೆ ಏನನ್ನು ಇಚ್ಛಿಸುತ್ತಿದ್ದೆ.”
ಆತ, “ಒಳ್ಳೆಯ ಕಾರ್ಯಗಳನ್ನು ಮಾಡಲು ಇನ್ನೂ ಸ್ವಲ್ಪ ಸಮಯ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂದು ಇಚ್ಛಿಸುತ್ತಿದ್ದೆ” ಎಂದು ಉತ್ತರಿಸುತ್ತಾನೆ.
ಆಗ ಹಸನ್ ಬಸರಿ(ರ) ಹೇಳುತ್ತಾರೆ,
“ಹಾಗಾದರೆ ನೀನು ಮರಣ ಹೊಂದಿ ಅಲ್ಲಿ ಮಲಗಿದ್ದೆ ಹಾಗೂ ಅಲ್ಲಾಹನು ನಿನಗೆ ಸ್ವಲ್ಪ ಕಾಲಾವಕಾಶ ನೀಡಿದ ಕಾರಣ ನೀನು ಈಗ ಎದ್ದು ಬಂದಿದ್ದೀಯಾ ಎಂದು ಭಾವಿಸು ಹಾಗೂ ಇನ್ನೂ ಉತ್ತಮ ಕಾರ್ಯಗಳನ್ನು ಮಾಡಲು ಪ್ರಯತ್ನಿಸು.”
ಪ್ರವಾದಿ(ಸ) ಹೀಗೆ ಹೇಳಿದ್ದಾರೆ,
“ಅಲ್ಲಾಹನ ಎರಡು ದೊಡ್ಡ ಅನುಗ್ರಹಗಳ ಬಗ್ಗೆ ಮನುಷ್ಯ ಹೆಚ್ಚು ನಿರ್ಲಕ್ಷ್ಯ ತೋರುತ್ತಾನೆ. 1. ಆರೋಗ್ಯ, 2. ಸಮಯ.”
ಓರ್ವ ವಿದ್ವಾಂಸ ಹೇಳುತ್ತಾರೆ,
“ಸಮಯ ಬಹಳ ಬೆಲೆಯುಳ್ಳದ್ದಾಗಿದೆ. ಆದರೆ ಅದು ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಸಂಗತಿಯೂ ಆಗಿದೆ.”
ಡಮಾಸ್ಕಸ್‌ನಲ್ಲಿ ಜಲಾಲುದ್ದೀನ್ ಅಲ್ ಖಾಸಿಮೀ ಎಂಬ ಶ್ರೇಷ್ಠ ವಿದ್ವಾಂಸರಾಗಿದ್ದರು. ಅವರು ಒಮ್ಮೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯುವಕರ ಒಂದು ಗುಂಪು ಚದುರಂಗ (ಚೆಸ್) ಆಡುತ್ತಿತ್ತು. ವಿದ್ವಾಂಸರು ಅವರನ್ನು ನೋಡಿ ಹೇಳುತ್ತಾರೆ, “ಒಂದು ವೇಳೆ ಸಮಯವನ್ನು ಖರೀದಿಸಲು ಆಗಿರುತ್ತಿದ್ದರೆ ನಾನು ನಿಮ್ಮಿಂದ ಖರೀದಿಸುತ್ತಿದ್ದೆ.”
ದಿನದಲ್ಲಿ ನಾವು ಎಷ್ಟು `ಸಮಯ’ವನ್ನು ಹೇಗೆ ಹಾಳು ಮಾಡುತ್ತಿದ್ದೇವೆ ಎಂಬುದನ್ನು ಆಲೋಚಿಸಬೇಕು. ವಾಟ್ಸಪ್ ಹಾಗೂ ಫೇಸ್‌ಬುಕ್‌ನಲ್ಲಂತೂ ನಮ್ಮ ಸಮಯಗಳು ಎಷ್ಟು ಹಾಳಾಗುತ್ತಿರುತ್ತವೆ. ಟೈಮ್‌ಪಾಸ್ ಮಾಡುವುದು ಎಂದು ಕೆಲವರು ಹೇಳುತ್ತಿರುತ್ತಾರೆ. ನಿಜವಾಗಿಯೂ ಸಮಯವನ್ನು ನಾವು ಗೋರಿಯ ಕಡೆಗೆ ಪಾಸ್ ಮಾಡುತ್ತಿರುವುದಾಗಿದೆ.
ಕೆಲವರು ಹೇಳುವುದಿದೆ, ಜೀವನ ಬೋರ್ ಆಗುತ್ತಿದೆ. ಇಸ್ಲಾಮಿನಲ್ಲಿ ಬೋರ್ ಎಂಬುದಿಲ್ಲ. ಅದು ಶೈತಾನನ ಕಡೆಯಿಂದಾಗಿರುತ್ತದೆ. ನಾವು ನಮ್ಮ ಪರಲೋಕ ವಿಜಯಕ್ಕಾಗಿ ಧರ್ಮದ ಸೇವೆಯಲ್ಲಿ ತೊಡಗಿದರೆ ದಿನದ 24 ಗಂಟೆಗಳೂ ಸಾಕಾಗಲಾರವು. ನಮಗೆಲ್ಲರಿಗೂ ಇನ್ನು ಎಷ್ಟು ಸಮಯವನ್ನು ಅಲ್ಲಾಹನು ನೀಡಿದ್ದಾನೆ ಎಂದು ಯಾರಿಗೂ ತಿಳಿದಿಲ್ಲ. ಹಾಗಾಗಿ ಈಗ ಸಿಗುತ್ತಿರುವ ಸಮಯವನ್ನು ಆದಷ್ಟು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಲು ಪ್ರಯತ್ನಿಸೋಣ.
IslamKannada News Portal
