Home / ಲೇಖನಗಳು / ಹಾಸ್ಯವನ್ನು ಅನುಭವಿಸುತ್ತಿದ್ದ ಪ್ರವಾದಿ(ಸ)

ಹಾಸ್ಯವನ್ನು ಅನುಭವಿಸುತ್ತಿದ್ದ ಪ್ರವಾದಿ(ಸ)

@ ಶಹೀದ್

ಪ್ರವಾದಿ ಮುಹಮ್ಮದ್(ಸ) ನಗುತ್ತಿದ್ದರು. ಈ ಜಗತ್ತಿಗೆ ಬಂದ ಎಲ್ಲಾ ಪ್ರವಾದಿಗಳೂ ನಗುತ್ತಿದ್ದರು. ಅವರ ನಗು ಮತ್ತು ಅಳುವಿನಲ್ಲಿ ಪಾಠವಿರುತಿತ್ತು. ಪ್ರವಾದಿವರ್ಯರ(ಸ) ಪಾವನ ಬದುಕಿನಲ್ಲಿ ಒಳಿತಿನ ಬೆಳದಿಂಗಳ ಹಲವಾರು ಘಟನೆಗಳನ್ನು ಕಾಣಬಹುದು. ಪ್ರವಾದಿವರ್ಯರು(ಸ) ಯಾವಾಗಲೂ ಪ್ರಸನ್ನವದನರಾಗಿರುತ್ತಿದ್ದರು. ತನ್ನನ್ನು ಸಮೀಪಿಸುವ ಎಲ್ಲರಿಗೂ ಅದನ್ನು ಪಸರಿಸುತ್ತಿದ್ದರು. ಪ್ರವಾದಿವರ್ಯರ(ಸ) ಸನ್ನಿಧಿಯಲ್ಲಿ ತಮ್ಮ ಎಲ್ಲಾ ದುಖ ದುಮ್ಮಾನಗಳನ್ನು ಮರೆತು ಉಲ್ಲಾಸಭರಿತರಾಗಿ ಆ ರಸನಿಮಿಷಗಳನ್ನು ಜನರು ಕಳೆಯುತ್ತಿದ್ದರು.

ಪ್ರವಾದಿವರ್ಯರು(ಸ) ಹಾಸ್ಯ ಮಾತನ್ನಾಡುವಾಗ ಒಮ್ಮೆ ಅಬೂ ಹುರೈರಾ ಆಶ್ಚರ್ಯಚಕಿತರಾಗಿ ಪ್ರವಾದಿವರ್ಯರೇ(ಸ), ತಾವು ನಮ್ಮೊಂದಿಗೆ ಹಾಸ್ಯ ವಿನೋದದ ಮಾತುಗಳನ್ನಾಡುವುದೇ? ಎಂದು ಪ್ರಶ್ನಿಸಿದರು. ಮೌಲ್ಯಯುತವಾದ ಮಾತುಗಳನ್ನು ಆಡಬೇಕಾದ ಅಲ್ಲಾಹನ ಸಂದೇಶವಾಹಕರು ಹಾಸ್ಯದ ಮಾತುಗಳನ್ನಾಡುವಾಗ ಸಹಜವಾಗಿಯೇ ಬೆರಗಾಗಿದ್ದರು. ಆದರೆ ಪ್ರವಾದಿವರ್ಯರಿಗೆ(ಸ) ಅದರಲ್ಲಿ ಅಸಹಜವಾದುದು ಏನೂ ಇರಲಿಲ್ಲ. ಪ್ರವಾದಿವರ್ಯರು(ಸ) ಹೇಳಿದರು, “ಆ ಬಗ್ಗೆ ಯಾಕಿಷ್ಟು ವ್ಯಾಕುಲ ಪಡುತ್ತೀರಿ? “ಇದರಲ್ಲಿ ಸತ್ಯದ ಹೊರತು ಬೇರೆ ಯಾವ ಮಾತೂ ಇಲ್ಲವಲ್ಲ.”

ಈ ಕಾರಣದಿಂದಲೇ ಓರ್ವರು ಪ್ರವಾದಿವರ್ಯರ(ಸ) ಬಳಿ ಬಂದು ನನಗೆ ಪ್ರಯಾಣಿಸಲು ಬೇಕಾದ ಯಾವುದಾದರೂ ಸೌಲಭ್ಯ ಅಥವಾ ಪ್ರಾಣಿಯನ್ನು ಒದಗಿಸಬಹುದೇ ಎಂದು ಕೇಳಿದರು. ಅವರು ಕೇಳಿದ ತಕ್ಷಣ ಪ್ರವಾದಿವರ್ಯರು(ಸ), “ನಾನು ನಿಮಗೊಂದು ಒಂಟೆಯ ಮರಿಯನ್ನು ನೀಡುತ್ತೇನೆ” ಎಂದರು. ಆ ವ್ಯಕ್ತಿ ಆಶ್ಚರ್ಯದಿಂದ, “ಏನು ಒಂಟೆಯ ಮರಿಯೇ? ಸಂಚಾರ ಹೊರಟ ನನಗೆ ಒಂಟೆಯ ಮರಿ ಯಾಕೆ? ಆ ಒಂಟೆ ಮರಿಯನ್ನು ಹಿಡಿದುಕೊಂಡು ಹೋಗಿ ನಾನು ಏನು ಮಾಡಲಿ ಪ್ರವಾದಿಗಳೇ” ಎಂದು ಕೇಳಿದರು. ಆಗ ಪ್ರವಾದಿವರ್ಯರು(ಸ) ನಗುತ್ತಾ, “ಒಂಟೆಗಳೆಲ್ಲವೂ ಜನಿಸಿದಾಗ ಮರಿಗಳಾಗಿರುತ್ತವೆಯಲ್ಲವೇ” ಎಂದರು. ಆ ಮಾತಿನಲ್ಲಿ ಸತ್ಯ ಮತ್ತು ಹಾಸ್ಯ ನಡುವಿನ ಒಡನಾಟವಿತ್ತು.

ಒಳಿತಿನ ವಾಹಕರಾದ ಪ್ರವಾದಿವರ್ಯರು(ಸ) ಓರ್ವ ವೃದ್ಧೆಯನ್ನು ಬೆರಗಾಗುವಂತೆ ಮಾಡಿದ್ದರು- “ನನಗೆ ಸ್ವರ್ಗ ಪ್ರವೇಶಿಸಲು ಪ್ರಾರ್ಥಿಸಿರಿ” ಎಂದು ವೃದ್ಧೆಯೋರ್ವರು ಪ್ರವಾದಿವರ್ಯರಲ್ಲಿ ವಿನಂತಿಸಿದ್ದರು. ಆಗ ಪ್ರವಾದಿವರ್ಯರು(ಸ) ಮುಗುಳ್ನಗುತ್ತಾ, ವೃದ್ದರಿಗೆ ಸ್ವರ್ಗದಲ್ಲಿ ಸ್ಥಾನವಿಲ್ಲ” ಎಂದರು. ಆ ವೃದ್ದೆ ತೀವ್ರ ದುಖಿತರಾದರು.. ಅಳಲು ಪ್ರಾರಂಭಿಸಿದರು. ನಂತರ ಪ್ರವಾದಿವರ್ಯರೇ(ಸ) ಅವರನ್ನು ಸಮಾಧಾನಿಸಬೇಕಾಯಿತು. “ವಾರ್ಧಕ್ಯದ ಬಳಲಿಕೆಯಿಂದ ಅಲ್ಲಾಹನು ಯಾರನ್ನೂ ಸ್ವರ್ಗ ಪ್ರವೇಶಿಸಲಾರನು.. ಸ್ವರ್ಗ ವೆಂಬುದು ನಿತ್ಯ ಯೌವನದ ಹೂದೋಟವಾಗಿದೆ ಎಂದರು. ಸ್ವಲ್ಪ ತಮಾಷೆಯ ಮಾತುಗಳ ಮೂಲಕ ಸ್ವರ್ಗವನ್ನು ವಿವರಿಸಿ ವೃದ್ಧೆಯಲ್ಲಿ ಪ್ರವಾದಿವರ್ಯರು(ಸ) ಆತಂಕ ಮೂಡಿಸಿದ್ದರು.

ಹಾಸ್ಯದ ಮಾತುಗಳನ್ನಾಡುವಾಗಲೂ ಅದರಲ್ಲಿ ಬೇಧ-ಭಾವವಿರಲಿಲ್ಲ. ಪ್ರವಾದಿವರ್ಯ ರಿಗೆ(ಸ) ಗ್ರಾಮೀಣ ಅರಬರೋರ್ವರು ಆಪ್ತರಾಗಿದ್ದರು. ಪ್ರವಾದಿವರ್ಯರು(ಸ) ಅವರನ್ನು ಸಾಮಾನ್ಯವಾಗಿ ಮಾರುಕಟ್ಟೆಗೆ ಕಳುಹಿಸುತ್ತಿದ್ದರು. ಅವರು ಮಾರುಕಟ್ಟೆಗೆ ತೆರಳಿ ಏನೋ ಒಂದು ವಸ್ತುವಿನ ಮಾರಾಟದಲ್ಲಿ ತೊಡಗಿದ್ದರು. ಪ್ರವಾದಿವರ್ಯರು(ಸ) ಮೆಲ್ಲನೆ ಅವರ ಹಿಂದೆ ಹೋಗಿ ನಿಂತರು. ಅವರ ಕಣ್ಣುಗಳ ಮೇಲೆ ಕೈಇಟ್ಟು ಮುಟ್ಟಿದರು. ಗ್ರಾಮೀಣ ಹೆದರಿ ಕಂಗಾಲಾದರು. ಪ್ರವಾದಿವರ್ಯರು(ಸ) ನನ್ನನ್ನು ಇಂತಿಂತಹ ಕೆಲಸಕ್ಕೆ ನೇಮಿಸಿದ್ದರೆಂದು ತಿಳಿದು ಪ್ರವಾದಿವರ್ಯರ ಕೈಯಿಂದ ಬಿಡಿಸಿಕೊಳ್ಳಲು ನೋಡಿದರು. ಆಗ ಪ್ರವಾದಿವರ್ಯರು ಈ ಗುಲಾಮನನ್ನು ಖರೀದಿಸಲು ಯಾರಿದ್ದಾರೆ? ಎಂದು ಕೇಳಿದರು. ಆಗ ಆ ಗ್ರಾಮೀಣ ವ್ಯಕ್ತಿಯು, “ಈ ಬೆಲೆಯಿಲ್ಲದ ಗುಲಾಮನನ್ನು ಖರೀದಿಸಿದರೆ ಖರೀದಿಸಿದವನು ನಷ್ಟ ಹೊಂದುವನು ಎಂದು ಹೇಳಿದರು. ಆಗ ಪ್ರವಾದಿವರ್ಯರು(ಸ), ದೇವನ ಮುಂದೆ ನೀವು ಮೌಲ್ಯಯುತ ವ್ಯಕ್ತಿಯಾಗಿದ್ದೀರಿ” ಎಂದರು.

ಒಮ್ಮೆ ಪ್ರವಾದಿವರ್ಯರು(ಸ) ತಮ್ಮ ಅನುಚರರ ಜೊತೆ ಖರ್ಜೂರ ತಿನ್ನುತ್ತಿದ್ದರು. ಅದರ ಮಧ್ಯೆ ಹಾಸ್ಯ ಚಟಾಕಿಯನ್ನು ಹಾರಿಸಿದರು. ಖರ್ಜೂರದ ಬೀಜಗಳನ್ನು ಅಲಿಯರ ಮುಂದಿ ರಿಸಿ ಆಶ್ಚರ್ಯಚಕಿತರಾದಂತೆ ನೋಡುತ್ತ, ಆಹಾ! ನೀವು ಸಾಕಷ್ಟು ಖರ್ಜೂರ ತಿಂದು ಬಿಟ್ಟಿದ್ದೀರಿ ಅಲ್ಲವೇ ಎಂದು ಖರ್ಜೂರದ ಬೀಜಗಳನ್ನು ನೋಡುತ್ತಾ ಹೇಳಿದರು. ಅಲಿಯವರು ಸಾಮಾನ್ಯರಲ್ಲ. ಹೌದು ನಾನು ಖರ್ಜೂರ ಮಾತ್ರ ತಿಂದದ್ದಲ್ಲವೇ? ಪ್ರವಾದಿವರ್ಯರಂತೆ ಖರ್ಜೂರದ ಬೀಜವನ್ನೂ ತಿನ್ನಲಿಲ್ಲವಲ್ಲ” ಎನ್ನುತ್ತಾ ಮಾತಿನ ಬಾಣದಿಂದ ಪ್ರವಾದಿವರ್ಯ(ಸ)ರನ್ನು ಸೋಲಿಸಿದರು. ಪ್ರವಾದಿವರ್ಯರು(ಸ) ನಗುತ್ತಾ ಅದನ್ನು ಆಸ್ವಾದಿಸಿದರು.

ಯುದ್ಧ ರಂಗದಲ್ಲಿಯೂ ಪ್ರವಾದಿವರ್ಯರು(ಸ) ನಗುತ್ತಾ ರಂಜಿಸಿದ್ದರು. ಕಂದಕ್ ಯುದ್ದದ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಸ್ಮರಿಸಿರಿ. ಆಮಿರ್‌ರ ತಂದೆ ಸಅದ್ ತನ್ನ ಬತ್ತಳಿಕೆಯಿಂದ ಶತ್ರುವಿಗೆ ಬಾಣವನ್ನೆಸೆಯುತ್ತಿದ್ದರು. ಎಲ್ಲಾ ಬಾಣಗಳನ್ನು ಶತ್ರುವು ತನ್ನ ಗುರಾಣಿಯ ಮೂಲಕ ತಡೆದರು. ಆಗ ಸಅದ್ ತನ್ನ ಬಿಲ್ಲು ಬಾಣವನ್ನು ಕೆಳಗಿಟ್ಟರು. ಶತ್ರುವು ತನ್ನ ಗುರಾಣಿಯನ್ನು ಕೆಳಗಿರಿಸಿದ ಕೂಡಲೇ ಸಅದ್ ಬಿಲ್ಲನ್ನೆತ್ತಿಕೊಂಡು ಬಾಣವನ್ನೆಸೆದರು. ಶತ್ರುವು ತಕ್ಷಣ ನೆಲಕ್ಕುರುಳುತ್ತಾನೆ. ಶತ್ರು ನೆಲಕ್ಕುರುಳಿದ ಕೂಡಲೇ ಸಅದ್ (ರ)ರ ವಿಜಯೋತ್ಸಾಹವನ್ನು ನೋಡಿ ಪ್ರವಾದಿವರ್ಯರು(ಸ) ನಕ್ಕುಬಿಟ್ಟರು.

ಪ್ರವಾದಿವರ್ಯರು(ಸ) ಆಟೋಟದಲ್ಲಿಯೂ ಆಸಕ್ತಿ ಹೊಂದಿದ್ದರು. ಪ್ರವಾದಿವರ್ಯರು(ಸ) ಸಾಮಾನ್ಯವಾಗಿ ಅನುಚರರೊಂದಿಗೆ ಬಾಣ ಬಿಡುವ ತರಬೇತಿ ಪಡೆಯುತ್ತಿದ್ದರು. ಆಗ ಓಟವೂ ನಡೆಯುತ್ತಿತ್ತು. ಇವೆಲ್ಲವೂ ಫಜ್ರ್ ನಮಾಝ್ ನಂತರದ ಸಮಯದಲ್ಲಾಗಿತ್ತು. ಬಾಣ ಹೂಡುವುದು, ಆಟೋಟ ಮುಂತಾದುವುಗಳು ಅದರಲ್ಲಿ ಸೇರಿತ್ತು. ಇಸ್ಲಾಮಿನ ಗತಕಾಲದ ಇತಿಹಾಸದ ಕತೆಯನ್ನು ಹೇಳುತ್ತಾ ಅನುಚರರ ಜೊತೆ ನಕ್ಕು ಸಂಭ್ರಮಿಸುತ್ತಿದ್ದರು.

ಏಕಾಂಗಿಯಾಗಿ ಮರ, ತೋಟಗಳ ಬಳಿ ಸಂಚರಿಸುತ್ತಿದ್ದರು. ಕೆಲವು ಬಾರಿ ಜೊತೆಯಲ್ಲಿ ಸಹಾಬಿಗಳೂ ಇರುತ್ತಿದ್ದರು. ಆಗ ಧಾರ್ಮಿಕ ವಿಚಾರಗಳ ಕುರಿತು ಚರ್ಚಿಸುತ್ತಿದ್ದರು. ಈಜಿ ನಲ್ಲೂ ಪ್ರವಾದಿವರ್ಯ(ಸ)ರಿಗೆ ಆಸಕ್ತಿಯಿತ್ತು. ಈ ಸಮಯದಲ್ಲಿ ಹ. ಅಬೂಬಕ್ಕರ್(ರ) ಪ್ರವಾದಿವರ್ಯರ(ಸ) ಸಂಗಾತಿಯಾಗಿದ್ದರು. ಪ್ರವಾದಿವರ್ಯರ(ಸ) ದೇಹದಾರ್ಢ್ಯತೆಗಾಗಿ ಬಾಲ್ಯದಲ್ಲಿನ ಈಜಾಟ ನೆರವು ನೀಡಿತ್ತು.

ಕಲೆಗೆ ಸಂಬಂಧಿಸಿದ ವಿಚಾರದಲ್ಲಿ ಪ್ರವಾದಿವರ್ಯರು(ಸ) ಆಸಕ್ತರಾಗಿದ್ದರು. ಪುಟ್ಟ ಮಕ್ಕಳ ಹಾಡನ್ನು ಆಲಿಸಿ ಸಂತೋಷಭರಿತರಾಗುತ್ತಿದ್ದ ಇತಿಹಾಸವೂ ಇದೆ. ಒಮ್ಮೆ ಈದ್ ದಿನದಂದು ಆಯಿಶಾ(ರ)ರವರ ಮನೆಯಲ್ಲಿ ಈರ್ವರು ಹೆಣ್ಮಕ್ಕಳು ಹಾಡ ತೊಡಗಿದರು. ತಂದೆ ಹ. ಅಬೂಬಕ್ಕರ್(ರ) ಅದನ್ನು ತಡೆದರು. ಆಗ ಅ ಹೆಣ್ಮಕ್ಕಳ ಪರವಾಗಿ ಪ್ರವಾದಿ(ಸ) ಮುಂದೆ ಬಂದಿದ್ದರು. ಇಂದು ಈದ್ ದಿನವಲ್ಲವೇ? ಅವರು ಹಾಡಿ ಸಂಭ್ರಮಿಸಲಿ ಎಂದು ಅವರಿಗೆ ಹಾಡಲು ಅನುವು ಮಾಡಿಕೊಟ್ಟರು.

ಒಂದು ವಿವಾಹದ ಸಮಾರಂಭದಲ್ಲಿ ಹಾಡು ಇರಬೇಕೆಂದು ಪ್ರವಾದಿವರ್ಯರು(ಸ) ಬಯಸಿದ್ದರು. ಅದು ಆಯಿಶಾರ(ರ) ಆಪ್ತೆಯಾಗಿದ್ದ ಅನ್ಸಾರೀ ಮಹಿಳೆಯ ವಿವಾಹದ ಸಂದರ್ಭ ವಾಗಿತ್ತು. ಅನ್ಸಾರಿಗಳು ಸಂಗೀತ ಪ್ರೇಮಿಗಳಾಗಿದ್ದರು. ಅದನ್ನು ತಿಳಿದ ಪ್ರವಾದಿವರ್ಯರು(ಸ), ವಧುವಿನ ಜೊತೆಗೆ ಹಾಡಲು ತಿಳಿದ ಹುಡುಗಿಯನ್ನು ಕಳುಹಿಸಿಕೊಡಲು ಹೇಳಿದರು. ವಿವಾಹದ ಸಂದರ್ಭಗಳಲ್ಲಿ ಸಂತೋಷದ ಸಂದರ್ಭದಲ್ಲಿಯೂ ಹಾಡಲು ಅನುಮತಿಸಿದ್ದರು ಎಂದು ಇದರಿಂದ ತಿಳಿಯಬಹುದು.

ಪ್ರವಾದಿವರ್ಯರು(ಸ) ಕವನ ಪ್ರಿಯರಾಗಿದ್ದರು. ಜಾಹಿಲಿಯ್ಯಾ ಕಾಲದ ಕವಿಗಳ ಕೆಡುಕುಗಳಿಂದ ಒಳಿತಿನೆಡೆಗೆ ಸೆಳೆದು ಅರಬಿ ಕವಿತೆಯನ್ನು ವಿಮೋಚಿಸಿದ್ದು ಒಂದರ್ಥದಲ್ಲಿ ಪ್ರವಾದಿವರ್ಯರಾಗಿದ್ದರು. ಅನುಚರರ ಕವನದ ಮಾಧುರ್ಯವನ್ನು ಆಸ್ವದಿಸುತ್ತಿದ್ದರು. ಯುದ್ದದ ವೇಳೆಯಲ್ಲೂ ಪ್ರವಾದಿವರ್ಯರು(ಸ) ಕಾವ್ಯಾತ್ಮಕ ಶೈಲಿಯಲ್ಲಿ ಮಾತನ್ನಾಡಿದ್ದರು. ಇಸ್ಲಾಮಿನ ಶತ್ರುಗಳ ಕರ್ಕಶ ಕಾವ್ಯಗಳಿಗೆ ಉತ್ತಮವಾದ ಕವಿತೆಯನ್ನು ರಚಿಸಲು ಕಅಬ್ ಬಿನ್ ಮಾಲಿಕ್(ರ) ಮತ್ತು ಹಸ್ಸಾನ್ ಬಿನ್ ಸಾಬಿತ್(ರ)ಗೆ ಸೂಚಿಸಿದ್ದರು. ಹಸ್ಸಾನ್ ಬಿನ್ ಸಾಬಿತ್ ಅದನ್ನು ಮನೋಹರವಾಗಿ ಹಾಡುತ್ತಿದ್ದರು. ಅದು ಶತ್ರುಗಳ ಎದೆಯನ್ನು ಖಡ್ಗಕ್ಕಿಂತ ಚೂಪಾಗಿ ಇರಿಯುವಂತಿತ್ತು. ಅದನ್ನು ನೋಡಿ ಪ್ರವಾದಿವರ್ಯರು(ಸ), “ಮುಸ್ಲಿಮರು ಖಡ್ಗದಿಂದ ಮಾತ್ರವಲ್ಲ ಮಾತಿನ ಮೂಲಕ ಸಮರ ಸಾರುತ್ತಾರೆ ಎನ್ನುತ್ತಿದ್ದರು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …