Home / ಪ್ರಶ್ನೋತ್ತರ / ಮೃತರಿಗೆ ಪುಣ್ಯ ತಲುಪುವುದೆ?

ಮೃತರಿಗೆ ಪುಣ್ಯ ತಲುಪುವುದೆ?

ಪ್ರಶ್ನೆ: ನನ್ನ ಈ ಪ್ರಶ್ನೆಗೆ ಕುರ್‌ಆನ್-ಹದೀಸ್‌ನ ಬೆಳಕಿನಲ್ಲಿ ಉತ್ತರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಕುರ್‌ಆನ್  ಓದಿ, ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಬಹುದೇ? ಹಾಗೆ ಪ್ರಾರ್ಥಿಸಿದರೆ ಅದರ ಪುಣ್ಯ ಅವರಿಗೆ ಸಿಗುವುದೇ? ಬಡವರಿಗೆ ಅಥವಾ ಕುಟುಂಬ ಮಿತ್ರಾದಿಗಳಿಗೆ ಊಟಕೊಟ್ಟು ಅದರ ಪುಣ್ಯ ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅದು ಅವರಿಗೆ ಸಿಗುವುದೇ? ಹಣ ಅಥವಾ ಬಟ್ಟೆ ದಾನ ನೀಡಿ ಅದರ ಪುಣ್ಯವನ್ನು ಮೃತರಿಗೆ ಸಿಗಲೆಂದು ಪ್ರಾರ್ಥಿಸಿದರೆ ಅವರಿಗೆ ಅದರ ಪುಣ್ಯ ಸಿಗುವುದೇ?

ಉತ್ತರ: ಈ ರೀತಿ ಸತ್ಕರ್ಮಗಳನ್ನು ಮಾಡಿ ಅದರ ಪುಣ್ಯವನ್ನು ಮೃತರಿಗೆ ಸಿಗಲೆಂದು ಪ್ರಾರ್ಥಿಸುವುದನ್ನು ಅಥವಾ ಪುಣ್ಯವನ್ನು ಮೃತರಿಗೆ ಹದಿಯಾ(ಬಕ್ಷಿಸ್) ಮಾಡುವುದನ್ನು ‘ಈಸಾಲೆ ಸವಾಬ್’ ಎನ್ನಲಾಗುತ್ತದೆ. ಪವಿತ್ರ ಕುರ್‌ಆನ್ ಓದಿ ಅದರ ಪುಣ್ಯವನ್ನು ಮೃತರಿಗೆ ಸಿಗುವಂತೆ ಪ್ರಾರ್ಥಿಸಿದ ಉದಾಹರಣೆಗಳು ಪ್ರವಾದಿಯವರಿಂದ, ಪ್ರವಾದಿ ವಚನ ಗಳಿಂದಾಗಲೀ, ಸಹಾಬಿಗಳ ಆದರ್ಶದಿಂದಾಗಲೀ  ಕಂಡು ಬರುವುದಿಲ್ಲ. ಆದರಿಂದ ಅದರ ಪುಣ್ಯ ಮೃತರಿಗೆ ಲಭಿಸುವುದಿಲ್ಲ. ಏಕೆಂದರೆ ಪ್ರತಿಯೊಬ್ಬನ ಕರ್ಮಫಲವನ್ನು ಇನ್ನೊಬ್ಬ ನಿಗೆ  ನೀಡಲಾಗದು ಎಂಬ ಪವಿತ್ರ ಕುರ್‌ಆನಿನ ಸ್ಪಷ್ಟ ಆದೇಶವಾಗಿದೆ. ಪವಿತ್ರ ಕುರ್‌ಆನಿನಲ್ಲಿ ಹೀಗಿದೆ- ‘ಪ್ರತಿಯೊಬ್ಬ ಮನುಷ್ಯನಿಗೂ ಅವನು ಮಾಡಿದ ಪ್ರಯತ್ನಗಳ ಫಲ ಮಾತ್ರ ಸಿಗುವುದು.’ (ಅನ್ನಮ್ಲ್ :31) ಇದರ ಪುಣ್ಯ ಮತ್ತು ಪಾಪ ಎರಡೂ ಬರುತ್ತದೆ.

“ಇಮಾಮ್ ಶಾಫಿಈ ಮತ್ತವರ ಅನುಯಾಯಿಗಳ ಪ್ರಕಾರ ಕುರ್‌ಆನ್ ಓದಿ ಅದರ ಪುಣ್ಯವನ್ನು ಮೃತರಿಗೆ ತಲಪಿಸಿದರೆ ಅದು ಅವರಿಗೆ ತಲಪುವುದಿಲ್ಲ. ಏಕೆಂದರೆ ಆ ಕರ್ಮವು ಮೃತರು ಮಾಡಿದ್ದಲ್ಲ. ಪ್ರಸ್ತುತ ಕುರ್‌ಆನ್ ಸೂಕ್ತವು ಅದನ್ನೇ ಸೂಚಿಸುತ್ತದೆ. ಆದ್ದರಿಂದ ಪ್ರವಾದಿ(ಸ) ಹಾಗೆ ಕುರ್‌ಆನ್ ಓದಿ ಪುಣ್ಯ ದಾನ ಮಾಡಿದ್ದೂ ಇಲ್ಲ, ತಮ್ಮ ಅನುಯಾ ಯಿಗಳಿಗೆ ಅದನ್ನು ಆದೇಶಿಸಿಯೂ ಇಲ್ಲ. ಅದಕ್ಕಾಗಿ ಪ್ರೇರೇಪಿಸಿಯೂ ಇಲ್ಲ. ಅದೊಂದು ವೇಳೆ ಪುಣ್ಯ ಕಾರ್ಯವಾಗಿರುತ್ತಿದ್ದರೆ ಪುಣ್ಯ ಕಾರ್ಯಗಳಲ್ಲಿ ಸ್ಪರ್ಧಿಸುತ್ತಿದ್ದ ಸಹಾಬಿಗಳು ಅದನ್ನು ಮಾಡದೆ ಇರುತ್ತಿರಲಿಲ್ಲ. ಪುಣ್ಯ ಕಾರ್ಯಗಳು ಕುರ್‌ಆನ್ ಮತ್ತು ಹದೀಸ್ ಸ್ಪಷ್ಟ ಆದೇಶಗಳಿಂದ ಮಾತ್ರ ಸಾಬೀತಾಗುತ್ತದೆ. ಯಾರದೇ ಅಭಿಪ್ರಾಯ ಅದಕ್ಕೆ ಅನ್ವಯಿಸುವುದಿಲ್ಲವೆಂಬುದು ನೆನಪಿರಬೇಕು.” (ಇದು ಅಲ್ಲಾಮಾ ಇಬ್ನು ಕಸೀರ್ ಅವರ ತಫ್ಸೀರ್ ಗ್ರಂಥದಿಂದ ಉಲ್ಲೇಖಿತ)

ಇನ್ನು ಬಡವರಿಗೆ ಊಟ ನೀಡುವುದು. ಬಟ್ಟೆ ಅಥವಾ ಹಣ ದಾನ ನೀಡುವುದು ಮತ್ತು ಅದರ ಪುಣ್ಯವನ್ನು ಮೃತರಿಗೆ ನೀಡುವಂತೆ ಪಾರ್ಥಿಸಬಹುದೆಂಬ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿದೆ. ಈ ಕುರಿತು ಅದೇ ತಫ್ಸೀರ್ ಗ್ರಂಥದಲ್ಲಿ ಹೀಗೆ ಬರೆಯಲಾಗಿದೆ. ದುಆ ಮತ್ತು ಸದಕ (ಪಾರ್ಥನೆ ಮತ್ತು ದಾನಧರ್ಮ)ದ ಪುಣ್ಯವು ಮೃತರಿಗೆ ತಲಪುತ್ತದೆಂಬ ಬಗ್ಗೆ ಒಮ್ಮತವಿದೆ. ಪ್ರವಾದಿ(ಸ)ಅವರ ಮಾತಿನಿಂದಲೂ ಇದು ಸಾಬೀತಾಗುತ್ತದೆ.

ಅಬೂ ಹುರೈರಾ(ರ)ವರದಿ ಮಾಡಿರುವಂತೆ, ಪ್ರವಾದಿ(ಸ) ಹೇಳಿದರು-ಮಾನವನು ಮರಣ ಹೊಂದಿದ ಬಳಿಕ ಅವನ ಕರ್ಮಗಳ ಸರಣಿ ನಿಂತು ಬಿಡುತ್ತದೆ. ಮೂರು ಕರ್ಮಗಳ ಹೊರತು. (1) ಅವನಿಗಾಗಿ ಪ್ರಾರ್ಥಿಸುವ ಅವನ ಸಜ್ಜನ ಸಂತಾನ.  (2) ಅವನು ಮಾಡಿದ ಶಾಶ್ವತ ದಾನ(ಸದಕಯೆ ಜಾರಿಯ) (3) ಅವನು ಬಿಟ್ಟು ಹೋದ ಪ್ರಯೋಜನ ಕಾರಿಯಾದ ವಿದ್ಯೆ ಅಥವಾ  ಜ್ಞಾನ (ಇಲ್ಮುನ್ ನಾಫಿಅ). ಈ ಮೂರು ವಸ್ತುಗಳು ಅವನದೇ ಕರ್ಮಗಳ ಮತ್ತು ಪ್ರಯತ್ನಗಳ ಫಲವಾಗಿದೆಯೇ ಹೊರತು ಇತರರದ್ದಲ್ಲ.

ಪ್ರವಾದಿ(ಸ) ಹೇಳಿದರು: “ಮಾನವ ತನ್ನ ಕೈಯಾರೆ ಸಂಪಾದಿಸಿದ ಆಹಾರವೇ ಅತ್ಯುತ್ತಮ ಆಹಾರ. ಮಾನವನ ಸಂಪಾದನೆ ಮತ್ತು ಸಂತಾನ ಅವನದೇ ಗಳಿಕೆಯಾಗಿದೆ. ಇದರಿಂದ ಮಕ್ಕಳು ಮೃತನಿಗಾಗಿ ಮಾಡುವ ಪ್ರಾರ್ಥನೆಯು ಅವನದೇ ಗಳಿಕೆಯ ಫಲವಾಗಿದೆ ಯೆಂದು ಸಾಬೀತಾಗುತ್ತದೆ. ಅದೇ ರೀತಿ ಶಾಶ್ವತ ದಾನ, ವಕ್ಫ್ ಇತ್ಯಾದಿಯೂ ಅವನದೇ ಗಳಿಕೆಯಾಗಿದ್ದು ಅವನೇ ಮಾಡಿದ ವಕ್ಫ್ ಆಗಿದೆ. ಕುರ್‌ಆನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ-ನಾವು ಮೃತರನ್ನೇ ಜೀವಂತಗೋಳಿಸುತ್ತೇವೆ ಮತ್ತು ಅವರು ಮುಂದೆ  ಕಳುಹಿಸಿದ್ದನ್ನು ಮತ್ತು ಅವರು ಬಿಟ್ಟು ಹೋದ ಗುರುತುಗಳನ್ನು ನಾನು ದಾಖಲಿಸುತ್ತೇನೆ (ಯಾಸೀನ್).

ಇದರಿಂದಲೂ ಅವನು ಬಿಟ್ಟು ಹೋದ ಪುಣ್ಯದ ಗುರುತುಗಳ ಪುಣ್ಯ ಅವರಿಗೆ ತಲಪುತ್ತದೆಂದು ಸಾಬೀತಾಗುತ್ತದೆ. ಇನ್ನು ಒಬ್ಬನು ಮಾಡಿದ ವಿದ್ಯಾದಾನ ಅಥವಾ ಜ್ಞಾನಪ್ರಸಾರ. ಅದರಿಂದ ಅವನ ಬಳಿಕ ಯಾರೆಲ್ಲ ಎಷ್ಟೆಲ್ಲ ಮತ್ತು ಎಲ್ಲಿಯವರೆಗೆ ಪ್ರಯೋಜನ ಪಡೆಯುತ್ತಾರೋ ಅವೆಲ್ಲದರ ಪುಣ್ಯ ಅವನಿಗೆ ಸಿಗುವುದು. ಅದೆಲ್ಲವೂ ಅವನದೇ ಗಳಿಕೆ ಯಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಅದೇ ರೀತಿ ಒಬ್ಬನು ಸನ್ಮಾರ್ಗದತ್ತ ಜನರು ಕರೆಯುತ್ತಿದ್ದು, ಅವನ ಕರೆಗೆ ಓಗೊಟ್ಟು ಅವನನ್ನು ಅನುಸರಿಸಿದವರೂ ಅವನ ನಂತರ ಅವನ  ಮಾರ್ಗದರ್ಶನದಿಂದ ಪ್ರಯೋಜನ ಪಡೆದವರಿಗೂ ಮಾಡಿದ ಕರ್ಮಗಳ ಫಲವೂ ಅವನಿಗೆ ದೊರಯುವುದು. ಅವನ ಕರ್ಮದಿಂದ ಯಾವುದೇ ಕಡಿತ ಮಾಡಲಾಗದು ಎಂದು ಹದೀಸ್‌ನಲ್ಲಿದೆ.

ಉಪವಾಸ ಪಾರಣೆ ಮಾಡಿಸಿದವನ ಪುಣ್ಯದ ಕುರಿತೂ ಹೀಗೆಯೇ ಹೇಳಲಾಗಿದೆ. ಒಟ್ಟಿನಲ್ಲಿ ಕುರ್‌ಆನ್ ಪಠನ ಹಾಗೂ ಇತರ ಪುಣ್ಯ ಕಾರ್ಯಗಳಾದ ದಾನಧರ್ಮ, ಊಟ ಬಟ್ಟೆ ನೀಡುವುದು ಇತ್ಯಾದಿಗಳ ಪ್ರಕಾರಗಳ ವ್ಯತ್ಯಾಸವನ್ನು ಚೆನ್ನಾಗಿ ಮನವರಿಕೆ ಮಾಡಿಕೊಳ್ಳಬೇಕು,  ಇಲ್ಲಿ ಒಂದು ವಿಷಯವನ್ನು ವಿಶೇಷವಾಗಿ ಗಮನಿಸಬೇಕು. ಮೃತರ ಪರವಾಗಿ ಬಡವರಿಗೆ ಊಟ ನೀಡುವುದು, ಕುಟುಂಬದವರನ್ನು  ಕರೆದು ಸತ್ಕಾರ ಕೂಟವೇರ್ಪಡಿಸುವುದು ಇತ್ಯಾದಿಗಳಿಗಾಗಿ ವಿಶೇಷ ದಿನಗಳನ್ನು ನಿಶ್ಚಯಿಸುವುದು ಅಪ್ಪಟ ಬಿದ್‌ಅತ್ (ಅನಾ ಚಾರ)  ಆಗಿದೆ. ಉದಾ, 3,7,40, ವಾರ್ಷಿಕ ಇತ್ಯಾದಿ ಇವುಗಳಿಗೆ ಪುಣ್ಯ ಸಿಗಲಾರದು ಮಾತ್ರವಲ್ಲ ಅದು ಶಿಕ್ಷಾರ್ಹವಾಗಿರುವುದು.

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *