Home / ಲೇಖನಗಳು / ಶಿಕ್ಷಣ ಮತ್ತು ಅರಿವು: ಎರಡು ಭಿನ್ನ ಮುಖಗಳು

ಶಿಕ್ಷಣ ಮತ್ತು ಅರಿವು: ಎರಡು ಭಿನ್ನ ಮುಖಗಳು

  • ಜಿ.ಕೆ. ಎಡತ್ತನಾಟ್ಟುಕರ

ಇಂದಿನವರೆಗೆ ಮಾನವಕುಲ ಸಾಧಿಸಿದ ಪ್ರಗತಿಯಲ್ಲಿ ಜ್ಞಾನದ ಪಾತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ. ಮನುಷ್ಯನು ಭೂಮಿಯ ಮೇಲೆ ಹೀರೋ ಆಗಲು ಅವನ ಜ್ಞಾನದ ಶಕ್ತಿಯೇ ಕಾರಣ. ಆದ್ದರಿಂದ ಮನುಷ್ಯನಾಗಿ ಬಾಳಲು ಕೇವಲ ಜ್ಞಾನ ಅಥವಾ ಅರಿವು ಇದ್ದರೆ ಸಾಕು ಎಂದು ಚಿಂತಿಸುತ್ತಿದ್ದ ಕಾಲವಿತ್ತು. ಭೌತಿಕವಾದವು ಆ ರೀತಿ ಆಲೋಚಿಸಲು ಕಲಿಸುತ್ತದೆ. ಆದರೆ ಮನುಷ್ಯನನ್ನು ನೈಜ ಮನುಷ್ಯನಾಗಿ ಮಾಡುವಲ್ಲಿ ಅರಿವಿಗಿಂತ ಸ್ವಯಂ ಗುರುತಿಸಿಕೊಳ್ಳುವಿಕೆ ಎಂಬ ಪಾಠವನ್ನು ಪವಿತ್ರ ಕುರ್‌ಆನ್ ಮತ್ತು ಪ್ರವಾದಿವರ್ಯರು(ಸ) ನಮಗೆ ಕಲಿಸಿಕೊಟ್ಟಿದ್ದಾರೆ. ಸ್ವಯಂ ಅರಿವು ಎಂಬುದು ನೈಜ ದೇವನಲ್ಲಿರುವ ವಿಶ್ವಾಸವಾಗಿದೆ. ಜ್ಞಾನದಿಂದ ಅದ್ಭುತಗಳನ್ನು ಸೃಷ್ಟಿಸಬಹುದು. ಆದರೆ ನೈಜ ಮನುಷ್ಯನನ್ನು ನಿರ್ಮಿಸಲು ಸಾಧ್ಯವಿಲ್ಲ.

ಒಮ್ಮೆ ಓರ್ವ ಗುರುವಿನ ಬಳಿಗೆ ಅದ್ಭುತ ಸಾಮರ್ಥ್ಯವುಳ್ಳ ಮೂವರು ಬಂದರು. ಶಿಷ್ಯನು ಮೂವರನ್ನು ಗುರುಗಳ ಬಳಿಗೆ ಕರೆದೊಯ್ದನು. ಒಂದನೆಯವನು ಗುರುವಿನೊಡನೆ ಹೇಳಿದನು, “ಗುರುಗಳೇ, ನನಗೆ ಆಕಾಶದಲ್ಲಿ ಬಹಳ ವೇಗವಾಗಿ ಹಾರಿಕೊಂಡು ಹೋಗಲು ಸಾಧ್ಯವಿದೆ.”
ಇದನ್ನು ಕೇಳಿ ಶಿಷ್ಯನಿಗೆ ಆಶ್ಚರ್ಯವಾಯಿತು. ಆದರೆ ಗುರುವಿನ ಮುಖದಲ್ಲಿ ಯಾವುದೇ ಏರಿಳಿತವುಂಟಾಗಲಿಲ್ಲ. ಎರಡನೆಯವನು ಹೇಳಿದ,
“ಗುರುಗಳೇ, ನನಗೆ ನೀರಿನಲ್ಲಿ ಗಂಟೆಗಟ್ಟಲೆ ಈಜಲು ಸಾಧ್ಯವಿದೆ.” ಇದನ್ನು ಕೇಳಿದಾಗಲೂ ಶಿಷ್ಯನಿಗೆ ಆಶ್ಚರ್ಯವಾಯಿತು. ಆದರೆ ಗುರುಗಳ ಮುಖಭಾವದಲ್ಲಿ ಬದಲಾವಣೆಯಿರಲಿಲ್ಲ. ಮೂರನೆಯವನು ಕೇವಲ ಬಾಯಲ್ಲಿ ಹೇಳಿದ್ದಲ್ಲ. ಎದುರಿರುವ ಮರಕ್ಕೆ ಹತ್ತಿ, ಕೊಂಬೆಯಿಂದ ಕೊಂಬೆಗೆ ಹಾರಿಕೊಂಡು ತನ್ನ ಸಾಮರ್ಥ್ಯ ತೋರಿಸಿದ. ಇದನ್ನು ನೋಡಿ ಶಿಷ್ಯನಿಗೆ ಆಶ್ಚರ್ಯವೆನಿಸಿದರೂ ಗುರುಗಳ ಭಾವದಲ್ಲಿ ವ್ಯತ್ಯಾಸವಿರಲಿಲ್ಲ.

ಮೂವರನ್ನೂ ಕಳಿಸಿದ ಬಳಿಕ, ಆಶ್ಚರ್ಯಚಕಿತನಾಗಿ ನಿಂತಿದ್ದ ಶಿಷ್ಯನೊಡನೆ ಗುರುಗಳು ಹೇಳಿದರು, “ಆಕಾಶದಲ್ಲಿ ಹಾರಾಡಲು ಪಕ್ಷಿಗಳಿಗೆ ಸಾಧ್ಯವಿದೆ. ನೀರಿನಲ್ಲಿ ಈಜಲು, ತಾಸುಗಟ್ಟಲೆ ಸಂಚರಿಸಲು ಮೀನುಗಳಿಗೆ ಸಾಧ್ಯವಿದೆ. ಒಂದು ಮರದ ಗೆಲ್ಲಿನಿಂದ ಇನ್ನೊಂದು ಗೆಲ್ಲಿಗೆ ಜಿಗಿಯಲು ಮಂಗಗಳಿಗೆ ಸಾಧ್ಯವಿದೆ. ಮನುಷ್ಯನಿಗೆ ಸಂಬಂಧಿಸಿದಂತೆ ಈ ಭೂಮಿಯಲ್ಲಿ ನಿಜವಾದ ಮನುಷ್ಯನಾಗಿ ಬದುಕುವುದೇ ಅತ್ಯಂತ ಕಷ್ಟಕರ.”

ಮನುಷ್ಯನನ್ನು ಭೂಮಿಗೆ ಕಳಿಸಿದ ಉದ್ದೇಶ ಈ ಭೂಮಿಯಲ್ಲಿ ಮಾನವನಾಗಿ ಬದುಕಬೇಕು ಎಂದಾಗಿದೆ. ಅದ್ಭುತಗಳನ್ನು ಪ್ರದರ್ಶಿಸಬೇಕು ಎಂಬುದಕ್ಕಲ್ಲ. ಲೌಕಿಕ ಜ್ಞಾನದಿಂದ ಅದ್ಭುತಗಳನ್ನು ತೋರಿಸಬಹುದು. ಆದರೆ ನಿಜವಾದ ಮನುಷ್ಯನನ್ನು ನಿರ್ಮಿಸಲು ಅದು ಸಾಕಾಗುವುದಿಲ್ಲ. ಅದರ ಅರ್ಥ ಲೌಕಿಕ ಶಿಕ್ಷಣ ಬೇಡವೆಂದಲ್ಲ. ಅದು ಮಾತ್ರ ಸಾಕು ಎಂಬ ನಿಲುವು ಸರಿಯಲ್ಲ ಎಂದಾಗಿದೆ.

ವಿಶ್ವಾಸವಿಲ್ಲದ ಶಿಕ್ಷಣವು ಅಂಗವಿಕಲತೆಯದ್ದು ಎಂದು ವಿಶ್ವಪ್ರಸಿದ್ಧ ಚಿಂತಕ ಆಲ್ಬರ್ಟ್ ಐನ್‌ಸ್ಟೀನ್ ಹೇಳಿದ್ದಕ್ಕೆ ಕಾರಣವೂ ಇದುವೇ. ಓದುವುದನ್ನು ಅಲ್ಲಾಹನ ನಾಮದಿಂದ ಆರಂಭಿಸಬೇಕು ಎಂದು ಪವಿತ್ರ ಕುರ್‌ಆನ್ ಸೂಚಿಸಿರುವುದರ ಯುಕ್ತಿಯೂ ಇದುವೇ ಆಗಿದೆ.

ಮನುಷ್ಯನಿಗೆ ಕೇವಲ ಬಹಿರಂಗ ಜೀವನ ಮಾತ್ರ ಇರುವುದಲ್ಲ. ರಹಸ್ಯ ಜೀವನವೂ ಇದೆ. ರಹಸ್ಯ ಜೀವನದಲ್ಲಿ ಮನುಷ್ಯರಲ್ಲಿ ಹೆಚ್ಚಿನವರು ಮಾಡಬಾರದ್ದನ್ನು ಮಾಡುತ್ತಾರೆ. ‘ಹಗಲಿನಲ್ಲಿ ಮಾನ್ಯರು’ ಎಂಬ ಪದಬಳಕೆ ಅದೇ ಕಾರಣದಿಂದ ಆರಂಭವಾಗಿದೆ. ‘ಒಂದು ಜನತೆಯನ್ನು ಆಳಲು ಸರಕಾರಕ್ಕೆ ಸಾಧ್ಯವಿದೆ. ಆದರೆ ಓರ್ವ ವ್ಯಕ್ತಿಯನ್ನು ಆಳಲು ಯಾವುದೇ ಸರ್ಕಾರಕ್ಕೂ ಸಾಧ್ಯವಿಲ್ಲ ಎಂದು ಹೇಳಲು ಮನುಷ್ಯನ ಪ್ರಕೃತಿಯೇ ಕಾರಣ.’ ಆದ್ದರಿಂದ ಓರ್ವ ಅದೃಶ್ಯ ಮೇಲ್ವಿಚಾರಕನಿದ್ದಾನೆ ಎಂಬ ವಾಸ್ತವಿಕತೆ ಮಾತ್ರ ಮನುಷ್ಯನನ್ನು ಸಂಪೂರ್ಣ ಅರ್ಥದಲ್ಲಿ ನಿಯಂತ್ರಿಸಲು ಸಾಧ್ಯ.

‘ನನ್ನ ಹಾಲಿನವನು ಓರ್ವ ದೇವ ವಿಶ್ವಾಸಿಯಾಗಿರುವುದು ನನಗಿಷ್ಟ’ ಎಂದು ನಾಸ್ತಿಕ ಹಾಗೂ ಚಿಂತಕರಾಗಿದ್ದ ವಾಲ್ಟರ್ ಒಂದು ಸಂದರ್ಭದಲ್ಲಿ ಹೇಳುತ್ತಾರೆ. ಹಾಲಿನವ ಡಿಗ್ರಿ ಪಡೆದವ ಆಗಿರಬೇಕು ಎಂದು ವಾಲ್ಟರ್ ಬಯಸಿದ್ದಲ್ಲ. ಏಕೆಂದರೆ, ವಿದ್ಯಾಭ್ಯಾಸವು ವ್ಯಕ್ತಿಯನ್ನು ಉತ್ತಮಗೊಳಿಸುವ ಉಪಾಧಿಯಲ್ಲ. ಒಂದು ಶಾಲೆ ತೆರೆದರೆ ಎರಡು ಕಾರಾಗೃಹವನ್ನು ಮುಚ್ಚಬಹುದು ಎಂದು ಪ್ರಸಿದ್ಧ ಫ್ರೆಂಚ್ ಲೇಖಕ ವಿಕ್ಟರ್ ಹ್ಯೂಗೋ ಹೇಳಿರುವರು. ಆದರೆ ಇಂದು ಸಿಗುತ್ತಿರುವ ಅನುಭವವೇನು? ವಿದ್ಯಾರ್ಥಿಗಳ ಮಾದಕ ದ್ರವ್ಯ ಸೇವನೆಯ ವಿರುದ್ಧ ಮಂತ್ರಿಗಳೇ ರಂಗಕ್ಕಿಳಿಯಬೇಕಾಯಿತು. ಮಾದಕ ವಸ್ತುಗಳು ಮಾತ್ರವಲ್ಲ, ಮದ್ಯವೂ ಅಮಲು ಪದಾರ್ಥವೆಂದು ತಿಳಿಯಲು ಮಂತ್ರಿಗಳಿಗೂ ಸಾಧ್ಯವಾಗುತ್ತಿಲ್ಲ. ಕೆಳಗೆ ಬಿದ್ದಿರುವ ಚಿನ್ನದುಂಗುರ ನೋಡುವಾಗ ಅದು ಚಿನ್ನದುಂಗುರ ಎಂಬ ಅರಿವಾಗುತ್ತದೆ. ಆದರೆ, ಅದು ಇನ್ನೊಬ್ಬರದ್ದು, ನನಗೆ ಅದರಲ್ಲಿ ಹಕ್ಕಿಲ್ಲ ಎಂಬ ಅರಿವು ಮತ್ತು ತಾನು ತೆಗೆದಿರುವುದನ್ನು ಯಾರೂ ಕಾಣದಿದ್ದರೂ ದೇವನು ನೋಡುತ್ತಾನೆ ಎಂಬ ಪ್ರಜ್ಞೆಯು ಉದ್ಭವ ಕೇಂದ್ರ. ಈ ಅರಿವು ಇಲ್ಲದಿದ್ದರೆ ಶಿಕ್ಷಣ ಪಡೆದಿರುವವನೂ ಠಕ್ಕನಾಗುತ್ತಾನೆ.

ಸ್ವಂತ ತಾಯಿಯನ್ನು ಅಥವಾ ಸಹೋದರಿಯನ್ನು ಕಾಣುವಾಗ ಮಹಿಳೆ ಎಂಬುದು ತಿಳುವಳಿಕೆಯಾಗಿದೆ. ಆದರೆ, ಸ್ತ್ರೀ ಮಾತ್ರವಲ್ಲ, ಅದು ಅಮ್ಮ, ಸಹೋದರಿ ಎಂದು ತಿಳಿದುಕೊಳ್ಳುವುದು ಸ್ವಯಂ ಅರಿವು ಆಗಿದೆ. ಪ್ರವಾದಿಗಳ ಕಾಲದಿಂದ ಹಾದುಕೊಂಡು ಬಂದಿರುವ ಮೌಲ್ಯಗಳೇ ಈ ಚಿಂತನೆಯ ಮೂಲ. ಇಂತಹ ಅರಿವು ಗಳಿಸದಿದ್ದರೆ ನಮ್ಮ ದೃಷ್ಟಿಕೋನಗಳು ಬದಲಾಗುತ್ತದೆ. ಅಮ್ಮ, ಸಹೋದರಿಯರನ್ನು ಅರಿಯದ ಒಂದು ಸಮೂಹ ರೂಪುಗೊಳ್ಳುತ್ತಿದೆ. ಇಂದು ನಡೆಯುತ್ತಿರುವುದು ಅದುವೇ.

ಜ್ಞಾನವನ್ನು ಹಂಚುವ ಶಿಕ್ಷಣ ರಂಗದಲ್ಲೂ ಆತ್ಮಪ್ರಜ್ಞೆ ಇಲ್ಲದ ತಲೆಮಾರನ್ನು ನಿರ್ಮಿಸುವ ಶ್ರಮ ನಡೆಯುತ್ತಿದೆ. ಜೆಂಡರ್ ನ್ಯೂಟ್ರಾಲಿಟಿ ಅಥವಾ ಲಿಂಗ ನಿರಪೇಕ್ಷತೆ ಎಂಬ ಸುಂದರ ಹೆಸರಿನಲ್ಲಿ ಇದು ಅರಿವಿನ ಕೊರತೆಯಿಂದ ಉಂಟಾಗುವುದಲ್ಲ. ಸ್ವಯಂ ಅರಿವಿನ ಕೊರತೆಯ ಕಾರಣದಿಂದಾಗಿದೆ. ಇದನ್ನು ಮುಂದಿಟ್ಟುಕೊಂಡು ಪವಿತ್ರ ಕುರ್‌ಆನ್‌ನ ಕೆಲವು ಸೂಕ್ತಗಳನ್ನು ಅಧ್ಯಯನ ಮಾಡುವಾಗ ಹೆಚ್ಚು ಸ್ಪಷ್ಟವಾಗುತ್ತದೆ.

ಪವಿತ್ರ ಕುರ್‌ಆನಿನ 99ನೇ ಅಧ್ಯಾಯದ ಎಂಟನೇ ಸೂಕ್ತದಲ್ಲಿ ಮನುಷ್ಯನ ಸಹಜ ಸ್ವಭಾವದ ಮೌಲ್ಯದ ಕುರಿತು ಹೇಳಲಾಗಿದೆ. ಆದ್ದರಿಂದಲೇ ಮನುಷ್ಯರು ಸಾಮಾನ್ಯ ಸರಿ ಮತ್ತು ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ಸಮಯ ನಾವು ಕೆಲವು ವಿಷಯಗಳಲ್ಲಿ ಸರಿ ಮತ್ತು ತಪ್ಪುಗಳನ್ನು ಗುರುತಿಸಲು ಬಯಸಿದರೆ ದೈವಿಕ ಮಾರ್ಗದರ್ಶನ ಅತ್ಯಗತ್ಯ. ದೇವಗ್ರಂಥಗಳು ಅದೇ ಉದ್ದೇಶದಿಂದಾಗಿದೆ. ಪವಿತ್ರ ಕುರ್‌ಆನನ್ನು ‘ಫುರ್ಕಾನ್’ ಎಂದು ಹೇಳಿದ ಉದ್ದೇಶವೂ ಅದುವೇ. ಸತ್ಯ ಮತ್ತು ಅಸತ್ಯವನ್ನು ವಿವೇಚಿಸುವ ಒರೆಗಲ್ಲು ಎಂಬರ್ಥದಲ್ಲಿ ಫುರ್ಕಾನ್ ಎಂಬ ಪದವನ್ನು ಉಪಯೋಗಿಸಲಾಗಿದೆ.

ಎರಡನೇ ಅಧ್ಯಾಯದ 175ನೇ ಆಯತ್‌ನಲ್ಲಿ ಹೀಗೆ ಕಾಣಬಹುದು, “ರಮಝಾನ್ ಎಂಬುದು ಪವಿತ್ರ ಕುರ್‌ಆನ್ ಅವತೀರ್ಣಗೊಂಡ ತಿಂಗಳಾಗಿದೆ. ಅದು ಜನರಿಗೆ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ಕುರ್‌ಆನ್ ಅವತೀರ್ಣಗೊಂಡ ತಿಂಗಳಾಗಿದೆ.”

ಮನುಷ್ಯನ ಸಾಮಾನ್ಯ ಬುದ್ಧಿಗೆ ಹೊಳೆಯುವ ಸರಳ ವಿಷಯಗಳನ್ನೂ ಅರ್ಥೈಸಲು ಸಾಧ್ಯವಾಗದ ಸಮಾಜ ವಿದ್ಯಾವಂತರೆನಿಸಿಕೊಂಡವರು ಜೆಂಡರ್ ನ್ಯೂಟ್ರಾಲಿಟಿಯ ಚುಕ್ಕಾಣಿಯನ್ನು ಹಿಡಿದುಕೊಂಡಿದ್ದಾರೆ.

ನಿಜವಾಗಿ, ಮಾನವ ಸಮೂಹದ ಉಳಿವು ಸಾಧ್ಯವಾಗುವುದು ಗಂಡು-ಹೆಣ್ಣಿನ ನಡುವಿನ ವ್ಯತ್ಯಾಸದಿಂದಾಗಿದೆ. ಹೋಲಿಕೆ ಮತ್ತು ಸಮಾನತೆಯಿಂದ ಅಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ‘ಅಲ್ಪಬುದ್ಧಿ’ಗೆ ಕಾರಣ ಶೈಕ್ಷಣಿಕ ಕೊರತೆಯಲ್ಲ, ಅರಿವಿನ ಕೊರತೆಯಾಗಿದೆ.

ಪವಿತ್ರ ಕುರ್‌ಆನ್ ಹೇಳುತ್ತದೆ, “ಲೌಕಿಕ ಜೀವನದಲ್ಲಿ ಇವರ ಉಪಜೀವನ ಸಾಧನಗಳನ್ನು ನಾವು ಇವರ ನಡುವೆ ಹಂಚಿದ್ದೇವೆ. ನಾವು ಇವರಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ ಅನೇಕ ಮೇಲ್ಮೆ ನೀಡಿರುವೆವು. ಇವರು ಪರಸ್ಪರರಿಂದ ಸೇವೆ ಪಡೆಯುವಂತಾಗಲು.” (43: 32)

ಪರಸ್ಪರ ಸೇವೆ ಸಲ್ಲಿಸದೆ ಮಾನವ ಸಮೂಹಕ್ಕೆ ಅಸ್ತಿತ್ವವಿಲ್ಲ. ಆಹಾರ, ವಸ್ತ್ರ, ವಸತಿ ಮೊದಲಾಗಿ ಎಲ್ಲ ವಿಷಯಗಳಲ್ಲೂ ವಿಭಿನ್ನ ಸಾಮರ್ಥ್ಯವಿರುವ ಹಲವಾರು ಜನರ ಸೇವೆಯನ್ನು ಕಾಣಬಹುದು. ಮನುಷ್ಯರೆಲ್ಲರೂ ಸಮಾನರಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಎಲ್ಲರೂ ಸಮಾನರೆಂದಾದರೆ ವಿವಿಧ ಕೆಲಸಗಳನ್ನು ಮಾಡಲು ಜನರಿಲ್ಲದೇ ಹೋಗಬಹುದು. ಅದರಿಂದಾಗುವ ತೊಂದರೆಯನ್ನು ಊಹಿಸಲಸಾಧ್ಯ.

ವಿಶ್ವದಲ್ಲಿ ಎಲ್ಲಿಯೂ ಎಲ್ಲ ವಿಷಯಗಳಲ್ಲೂ ಸಮಾನರಾದ ಇಬ್ಬರು ಪುರುಷರೋ ಇಬ್ಬರು ಸ್ತ್ರೀಯರೋ ಇಲ್ಲ ಎಂಬುದು ವಾಸ್ತವ. ಮಾನವ ಸಮೂಹವು ಅಸ್ತಿತ್ವದಲ್ಲಿ ಉಳಿಯಲು ಕಾರಣ ಈ ವೈವಿಧ್ಯತೆಯೆಂಬುದು ಸ್ವಲ್ಪ ಆಲೋಚಿಸಿದರೆ ಅರ್ಥವಾಗುತ್ತದೆ. ಎಲ್ಲರೂ ವೈದ್ಯರಾದರೆ ಅಥವಾ ಇಂಜಿನಿಯರ್‌ಗಳಾದರೆ ಅಥವಾ ಕೃಷಿಕರಾದರೆ ಮಾನವ ಸಮೂಹ ಉಳಿಯುವುದೇ? ಮಾನವ ಸಮಾಜದಲ್ಲಿ ವಿವಿಧ ರಂಗಗಳಲ್ಲಿ ಹಲವು ರೀತಿಯ ಸೇವೆಗಳು ಪರಸ್ಪರ ಅಗತ್ಯವಾಗಿದೆ. ಎಲ್ಲರೂ ಎಲ್ಲ ಕಾರ್ಯಗಳಲ್ಲೂ ಸಮಾನರಾದರೆ ಅದು ಸಾಧ್ಯವಾಗುವುದಿಲ್ಲ. ಮನುಷ್ಯರು ಸಮಾನರಲ್ಲದಿರುವುದರಿಂದಲೇ ಇದು ಸಾಧ್ಯವಾಗಿದೆ.

ಅದೇರೀತಿ, ಎಲ್ಲರೂ ಪುರುಷರಾದರೆ? ಅಥವಾ ಎಲ್ಲರೂ ಸ್ತ್ರೀಯರಾದರೆ? ಮಾನವ ವಂಶ ಉಳಿಯುವುದಿಲ್ಲ. ಈ ಸೃಷ್ಟಿ ವೈವಿಧ್ಯತೆಯ ಕುರಿತು ಪವಿತ್ರ ಕುರ್‌ಆನ್ ಹೇಳುತ್ತದೆ, “ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ ಅಧಿಕವಾಗಿ ನೀಡಿದ್ದರೆ ಅದಕ್ಕಾಗಿ ಆಶೆ ಪಡಬೇಡಿರಿ. ಪುರುಷರು ಗಳಿಸಿದುದಕ್ಕನುಸಾರವಾದ ಪಾಲು ಅವರಿಗಿದೆ. ಸ್ತ್ರೀಯರು ಗಳಿಸಿದುದರ ಪಾಲು ಅವರಿಗಿದೆ.” (4: 32)

ಮಾನವ ಸಮಾಜದ ಅಸ್ತಿತ್ವದಲ್ಲಿ ಪುರುಷರು ಮತ್ತು ಮಹಿಳೆಯರ ಸಮಾನ ಪಾತ್ರವಿದೆ. ಒಂದು ಕತ್ತರಿಯ ಎರಡು ಬ್ಲೇಡ್ ಗಳಂತೆ. ಎರಡು ದಿಕ್ಕಿಗೆ ಪರಸ್ಪರ ಪೂರಕವಾಗಿ ಚಲಿಸುವ ಬ್ಲೇಡ್ ಗಳನ್ನು ಸಮಾನತೆಯ ಹೆಸರಿನಲ್ಲಿ ಒಂದೇ ದಿಕ್ಕಿಗೆ ಮಾಡಿದರೆ ಕತ್ತರಿಯೇ ಇಲ್ಲದಂತಾಗುತ್ತದೆ ಎಂಬಂತೆ ಗಂಡು ಮತ್ತು ಹೆಣ್ಣನ್ನು ಒಂದು ಮಾಡುವಾಗ ಅದು ಮಾನವ ಕುಲದ ಅಸ್ತಿತ್ವಕ್ಕೆ ಅಡ್ಡಿಯಾಗುತ್ತದೆ. ಅತ್ಯಂತ ಗಂಭೀರವಾದ ಆಘಾತಗಳನ್ನು ಉಂಟು ಮಾಡುತ್ತದೆ.

ಒಂದನೆಯದಾಗಿ, ಮಹಿಳೆ ಪುರುಷನ ಬಲಿಪಶುವಾಗುತ್ತಾಳೆ. ಕಾರಣವೇನೆಂದರೆ, ಪುರುಷನು ಮಹಿಳೆಗಿಂತ ಬಲಿಷ್ಠನಾಗಿದ್ದಾನೆ. ಸಮಾಜದಲ್ಲಿ ಮಹಿಳೆಯರನ್ನು ಪುರುಷರು ಬಲಾತ್ಕಾರ ಮಾಡುತ್ತಾರೆ. ಇದಕ್ಕೆ ವಿರುದ್ಧ ನಡೆಯುವುದಿಲ್ಲ. ಎರಡನೆಯದಾಗಿ, ಮಹಿಳೆಯ ಹಕ್ಕುಗಳು ನಷ್ಟವಾಗುತ್ತದೆ. ಕಾರಣವೇನೆಂದರೆ, ಸುರಕ್ಷತೆಯ ಭಾಗವಾಗಿರುವ ವಿಶೇಷ ಪರಿಗಣನೆ ಇಲ್ಲವಾಗುತ್ತದೆ. ಅದರೊಂದಿಗೆ ಮಹಿಳೆಯರು ಪುರುಷರಿಗೆ ಸಮಾನವಾಗುವುದಿಲ್ಲ. ಎಲ್ಲೆಂದರಲ್ಲಿ ಹೆಣ್ಣಿನ ಮೇಲೆ ಪುರುಷ ಪ್ರಾಬಲ್ಯವು ನಿಯಂತ್ರಣವಿಲ್ಲದೆ ಸ್ಥಾಪಿತವಾಗುತ್ತದೆ. ಇದು ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ಆದರೆ ಕೆಲವರಿಗೆ ಸತ್ಯ ಸಂಗತಿಯು ಅರಿವಾಗುವುದು ಅನುಭವಕ್ಕೆ ಬಂದ ಬಳಿಕ.

ಮಹಿಳಾ ಕಂಡಕ್ಟರ್‌ಗಳನ್ನು ಪುರುಷರು ಕಿರುಕುಳ ನೀಡಲು ಪ್ರಾರಂಭಿಸಿದಾಗ ಮಹಿಳಾ ಕಂಡಕ್ಟರ್‌ಗಳ ಸೀಟಿನಲ್ಲಿ ಪುರುಷರು ಕುಳಿತುಕೊಳ್ಳಬಾರದು ಎಂಬ ನಿಯಮ ಬಂತು. ಈ ಅರಿವು ಸರ್ಕಾರಕ್ಕೆ ಬಂದದ್ದು ಜೆಂಡರ್ ನ್ಯೂಟ್ರಾಲಿಟಿ ಚರ್ಚೆಯ ಸಮಯದಲ್ಲಿ. ಅನ್ಯ ಸ್ತ್ರೀ-ಪುರುಷರನ್ನು ಒಟ್ಟಿಗೆ ಕುಳ್ಳಿರಿಸಿದರೆ ಹೀಗೆಯೇ ಸಂಭವಿಸುತ್ತದೆ ಎಂಬ ಅರಿವನ್ನು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ(ಸ)ರು ಹದಿನಾಲ್ಕು ಸಾವಿರ ವರ್ಷಗಳ ಹಿಂದೆಯೇ ಹೇಳಿರುವರು. ಆದರೆ ಆಧುನಿಕ ವಿದ್ಯಾಸಂಪನ್ನರಿಗೆ ಅದು ತಿಳಿಯಲು ಅನುಭವವೇ ಅಗತ್ಯವಾಗುತ್ತದೆ. ಇಂತಹ ಸಂದರ್ಭಗಳು ಮನುಷ್ಯನಿಗೆ ದೈವಿಕ ಮಾರ್ಗದರ್ಶನವು ಎಷ್ಟು ಅಗತ್ಯ ಎಂದು ಹೇಳಿಕೊಡುತ್ತದೆ.

ಜೆಂಡರ್ ನ್ಯೂಟ್ರಾಲಿಟಿಯು ಒಡೆಯುವ ಇನ್ನೊಂದು ಕ್ಷೇತ್ರ ಕುಟುಂಬವಾಗಿದೆ. ಇದರಿಂದ ಕರುಣೆಯ ಮೀಸಲು ಕೇಂದ್ರವು ಕುಸಿಯುತ್ತವೆ. ಮಕ್ಕಳ ಮೇಲಿನ ವಾತ್ಸಲ್ಯ, ಹಿರಿಯರ ಮೇಲಿನ ಪ್ರೀತಿ, ಅಂಗವಿಕಲರಿಗೆ ಆಸರೆ ಮೊದಲಾದ ಎಲ್ಲ ಮಾನವೀಯ ಮೌಲ್ಯಗಳು ಕುಟುಂಬದಿಂದ ಉಂಟಾಗುತ್ತದೆ. ಕುಟುಂಬವು ಕುಸಿಯುವುದರೊಂದಿಗೆ ಎಲ್ಲ ಮಾನವೀಯ ಮೌಲ್ಯಗಳೂ ಕಳೆದು ಹೋಗುತ್ತದೆ. ಈ ಅರ್ಥದಲ್ಲಿ ಕೊರೋನಾ ಸಂದರ್ಭದಲ್ಲಿ ಕುಟುಂಬದ ಪ್ರಸ್ತುತತೆ ಮಾನವ ಸಮಾಜಕ್ಕೆ ಹೆಚ್ಚು ಮನವರಿಕೆಯಾಗಿತ್ತು. ಮಾತ್ರವಲ್ಲ, ಕುಟುಂಬದ ಅವನತಿಯೊಂದಿಗೆ ತಮ್ಮ ತಂದೆ ಯಾರೆಂದು ತಿಳಿಯದ ಮಕ್ಕಳು ಹುಟ್ಟುತ್ತಾರೆ. ಅದರಿಂದಾಗುವ ಸಾಮಾಜಿಕ ಸಮಸ್ಯೆಗಳು ಸಣ್ಣದಲ್ಲ. ಶೈಕ್ಷಣಿಕ ರಂಗದಲ್ಲಿ ಮುಂಪಕ್ತಿಯಲ್ಲಿರುವ ಅಮೇರಿಕ ಇದಕ್ಕೆ ಉತ್ತಮ ಉದಾಹರಣೆ. ಅಲ್ಲಿ ತಂದೆ ಯಾರೆಂದು ತಿಳಿಯದ ಮಕ್ಕಳು ಅನುಭವಿಸುವ ಅನಾಥತೆ, ಖಿನ್ನತೆ ಮತ್ತು ಅದರಿಂದುಂಟಾಗುವ ಆತ್ಮಹತ್ಯೆಗಳು ದೊಡ್ಡ ಸಮಸ್ಯೆಯಾಗಿದೆ. ಹೀಗೆ ತಂದೆಯಿಲ್ಲದ ಅಮೇರಿಕ (Fatherless America) ಸೃಷ್ಟಿಯಾದದ್ದಕ್ಕೆ ಶಿಕ್ಷಣದ ಕೊರತೆ ಕಾರಣವಲ್ಲ, ಸ್ವಯಂ ಅರಿವು ಇಲ್ಲದಿರುವುದಾಗಿದೆ. ಹೆಚ್ಚಿನವರು ಶಿಕ್ಷಣ ಪಡೆದೂ ತನ್ನನ್ನು ಅರಿತುಕೊಳ್ಳಲು ಸಾಧ್ಯವಾಗದವರೇ ಅಪರಾಧ ರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ. ಜೀವನದ ಎಲ್ಲ ರಂಗಗಳಲ್ಲೂ ಇದನ್ನು ಕಾಣಬಹುದು. ಇದಕ್ಕೆ ನಿಜವಾದ ಪರಿಹಾರವೇನೆಂದರೆ, ಜೀವನದ ಎಲ್ಲ ಅಂಶಗಳ ಒಳ ನೋಟವನ್ನು ಒಳಗ್ರಹಿಸುವಿಕೆಯನ್ನು ನೀಡುವ ಧರ್ಮಗ್ರಂಥಗಳನ್ನು ಅಳವಡಿಸಿಕೊಳ್ಳುವುದಾಗಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …