✍️ ರೈಹಾನ್.ವಿಕೆ.
ಅರಫಾ: ಶಬ್ದಾರ್ಥ.. ಅರಿತುಕೊಳ್ಳು.
ಈ ಹೆಸರು ಬರಲು ಕಾರಣ: ಆದಿಪಿತ, ಪ್ರಥಮ ಮಾನವ ಆದಮ್(ಅ ) ಮತ್ತು ಪತ್ನಿ ಹ. ಹವ್ವಾ(ಅ) ರನ್ನು ಸ್ವರ್ಗ ವಾಸದ ಬಳಿಕ ಭೂಮಿಗೆ ಕಳುಹಿಸಲಾಗುತ್ತದೆ. ಈ ದಂಪತಿಗಳು ಪರಸ್ಪರರನ್ನು ಅರಿತುಕೊಂಡ ಅಥವಾ ಪರಸ್ಪರರು ಸಂಧಿಸಿದ ಸ್ಥಳವನ್ನು ಅರಫಾ ಎಂದು ಕರೆಯಲಾಗುತ್ತದೆ.
ಮನುಷ್ಯ ತನ್ನನ್ನು ತಾನು ಅರಿತಾಗ ತನ್ನ ಪ್ರಭುವನ್ನು ಅವನು ಅರಿಯುವನು ಎಂಬುದಾಗಿ ಪ್ರವಾದಿ ವಚನವಿದೆ.
ಮನ್ ಅರಫ ನಫ್ಸಹು ಅರಫ ರಬ್ಬಹು.
ಆದ್ದರಿಂದ ಮನುಷ್ಯನ ಪ್ರಥಮ ತಿಳುವಳಿಕೆ ಏನಿರಬೇಕು ಎಂದರೆ ಆತನ ಬಗ್ಗೆ ಅವನಿಗೆ ಸರಿಯಾದ ಜ್ಞಾನ , ತಿಳುವಳಿಕೆ ಇರಬೇಕು.
ನಾನು ಯಾರು?
ನನ್ನ ಸೃಷ್ಟಿಯ ಉದ್ದೇಶವೇನು?
ನಾನು ಎಲ್ಲಿಂದ ಬಂದೆ?
ಎಲ್ಲಿಗೆ ಹೋಗಲಿರುವೆನು ?
ನನ್ನ ಗುರಿ ಏನು ?
ಅಂತಿಮವಾಗಿ ನಾನು ಏನಾಗಲಿರುವೆನು?.
ಇದು ಅರಫಾ ದಿನದಂದು ಪ್ರಥಮವಾಗಿ ಅರಿತರೆ… ನನ್ನನ್ನು ಸೃಷ್ಟಿಸಿದವನಾರು ಎಂಬುದು ಅವನು ತಾನಾಗಿಯೇ ಕಲಿತು ಕೊಳ್ಳುತ್ತಾನೆ.
ಎರಡನೆಯದಾಗಿ ಅರಫಾ ದಿನದಂದು ಅರಿಯಬೇಕಾಗಿರುವುದು ತನ್ನ ಜೀವನದ ಬಗ್ಗೆ ಅವಲೋಕನ.
ತನ್ನ ತಪ್ಪಿನ ಅರಿವು.
ಅರಫಾ ದಿನದ ಮಹತ್ವ
1. ಅತ್ಯಧಿಕ ನರಕ ವಿಮೋಚನೆ ಗೊಳ್ಳಲಿರುವ ದಿನ.
ಹ. ಆಯಿಷಾ ( ರ) ಹೇಳುತ್ತಾರೆ: “ಪ್ರವಾದಿ (ಸ) ಹೇಳಿದರು ಅರಫಾ ದಿನದಂದು ನರಕ ವಿಮೋಚನೆ ಲಭಿಸಿದಷ್ಟು ಬೇರಾವ ದಿನದಂದೂ ಲಭ್ಯವಲ್ಲ.
ಪ್ರವಾದಿ (ಸ) ಅರಫಾದಂದು ತಂಗಿದ ದಿವಸ ಹ. ಬಿಲಾಲ್(ರ)ರನ್ನು ಕರೆದು ಈ ರೀತಿ ಹೇಳಿದರು.
‘ಓ ಬಿಲಾಲ್! ಎಲ್ಲರನ್ನೂ ನಿಶ್ಯಬ್ದರಾಗಲು ತಿಳಿಸು.
ನಂತರ ಪ್ರವಾದಿ ಹೀಗೆ ಹೇಳಿದರು. ಜಿಬ್ರೀಲರು ನನಗೆ ಬಂದು ಅಲ್ಲಾಹನು ಸಲಾಮ್ ತಿಳಿಸಿರುವುದಾಗಿ ತಿಳಿಸಿದರು ಮತ್ತು ಈ ಅರಫಾದಲ್ಲಿ ಜಮಾಯಿಸಿದ ಎಲ್ಲರನ್ನೂ ಪಾಪ ವಿಮೋಚನೆಗೊಳಿಸಿರುವುದಾಗಿ ತಿಳಿಸು.
ಆಗ ಉಮರ (ರ) ಹೀಗೆ ಕೇಳಿದರು: ‘ಓ ಪ್ರವಾದಿವರ್ಯರೇ ಇದು ಇಂದು ಇಲ್ಲಿ ಜಮಾಯಿಸಿದ ವ್ಯಕ್ತಿಗಳಿಗೆ ಮಾತ್ರ ಸೀಮಿತವೇ?
ಆಗ ಪ್ರವಾದಿ ಖಂಡಿತಾ ಅಲ್ಲ. ಲೋಕಾವಸಾನದವರೆಗೆ ಬರುವ ಎಲ್ಲಾ ಜನರಿಗೂ.
2. ಅವರು ಏನು ಕೇಳುತ್ತಾರೋ ಅದಕ್ಕೆ ಉತ್ತರ ನೀಡಲಾಗುವ ದಿನ.
3. ಅಲ್ಲಾಹನು ಅಭಿಮಾನ ಪಡುವ ದಿನ. ತನ್ನ ನಾಡನ್ನೂ ತನ್ನ ಕುಟುಂಬದವರನ್ನೂ ಬಿಟ್ಟು ಅಲ್ಲಾಹನ ಸಂಪ್ರೀತಿಗಾಗಿ ಒಟ್ಟು ಸೇರಿದ ಜನಸಾಗರ.
ಅರಫಾ ಇದರ ಸ್ವರೂಪ
ನಾಳೆ ಪರಲೋಕದಲ್ಲಿ ಹಷರ್ ಎಂಬ ಮೈದಾನದಲ್ಲಿ ಒಟ್ಟು ಸೇರುವ ಆದಿ ಮಾನವನಿಂದ ತೊಡಗಿ ಅಂತ್ಯದ ತನಕವಿರುವ ಜನಸಾಗರದಂತೆ.
ಇಹ್ರಾಮ್ :ಬಿಳಿ ಬಟ್ಟೆಯನ್ನು ನಮ್ಮ ಅಂತ್ಯ ಸಂಸ್ಕಾರದ ಬಟ್ಟೆಗೆ ಹೋಲಿಸಲಾಗಿದೆ.
ಮಿನಾದ ತಂಗುವಿಕೆ ಖಬರ್ ಜೀವನವನ್ನು ನೆನಪಿಸುವಂತಿದೆ.
ಅಲ್ಲಿನ ಪ್ರಾರ್ಥನೆ ನಾಳೆ ಪರಲೋಕದಲ್ಲಿ ನಫ್ಸೀ ನಫ್ಸೀ ಎಂದು ಕೂಗೂವ ಸ್ವರೂಪ.
ಅಲ್ಲಿನ ಭಾಷೆ ಕೇವಲ ಹೃದಯದ ಭಾಷೆ .ಸೇರಿದ ಜನಸಾಗರವೇ ಪಾಪ ವಿಮೋಚನೆಗಾಗಿ ಹೃದಯಾಂತರಾಳದಿಂದ ಪಶ್ಚಾತ್ತಾಪ ಪಡುವ ದಿನ.
ಬಲಿದಾನ: ಮೊದಲ ಬಲಿದಾನ ಆದಮ್ (ಅ) ಪುತ್ರ ಹಾಬೀಲರದ್ದಾಗಿತ್ತು. ನಿಷ್ಕಳಂಕ ಹೃದಯದಿಂದ ಮಾಡಿದ ಹಾಬೀಲರ ಪ್ರಥಮ ಬಲಿಯನ್ನು ಅಲ್ಲಾಹನು ಸ್ವೀಕರಿಸುತ್ತಾನೆ. ಆದರೆ ತಮ್ಮ “ಕಾಬೀಲ”ನ ಬಲಿದಾನ ಸ್ವೀಕರಿಸಲ್ಪಡಲಿಲ್ಲ ಏಕೆಂದರೆ ಬಲಿದಾನದ ಉದ್ದೇಶ ನಿಷ್ಕಳಂಕವಾಗಿರಲಿಲ್ಲ.
ಹ ಇಬ್ರಾಹಿಮ್ (ಅ) ರು ತನ್ನ ಅತ್ಯಂತ ಪ್ರಿಯ ಪುತ್ರನ ಬಲಿಗೆ ತಯಾರಾಗುತ್ತಾರೆ . ಏಕೆಂದರೆ ಅಲ್ಲಾಹನ ಪ್ರೀತಿ ನಮ್ಮೆಲ್ಲಾ ಪ್ರೀತಿಯ ಮುಂದೆ ನಗಣ್ಯ.
ಹೀಗೆ ಪ್ರತಿಯೊಂದು ಕರ್ಮವೂ ಉದ್ದೇಶವನ್ನು ಅವಲಂಬಿಸಿ ಕೊಂಡಿರುತ್ತದೆ. ಹಾಗಾಗಿ ಜೀವನದಲ್ಲಿ ಬರುವ ಪ್ರತಿಯೊಂದು ಅರಫಾವು ಬದಲಾಣೆಯನ್ನು ತರಲಿ. ದೇವ ಸಂಪ್ರೀತಿಗೆ ಕಾರಣವಾಗಲಿ.
ಎಲ್ಲಾ ಇಷ್ಟಾನಿಷ್ಟಗಳು ಅಲ್ಲಾಹನಿಗಾಗಿರಲಿ. ನಮ್ಮನ್ನೂ ನಮ್ಮನ್ನಗಲಿದ ಆಪ್ತರನ್ನೂ ಅವನು ಮನ್ನಿಸಲಿ.
ಆಮೀನ್.
✍️ ರೈಹಾನ್.ವಿಕೆ.
ಸಚೇರಿಪೇಟೆ.
IslamKannada News Portal
