Home / ಲೇಖನಗಳು / ಸಮಾನತೆಯ ಸಂಭ್ರಮವೇ ಈದ್

ಸಮಾನತೆಯ ಸಂಭ್ರಮವೇ ಈದ್

  • ಎ.ಕೆ.ಕುಕ್ಕಿಲ

ಪ್ರತಿ ಮನುಷ್ಯರೊಳಗೂ ಸ್ವಾಭಿಮಾನ ಜಾಗೃತವಾಗಿರುತ್ತದೆ. ಇತರರಿಗಿಂತ ಕೀಳಾಗಲು ಯಾರೂ ಬಯಸುವುದಿಲ್ಲ. ಧರ್ಮ-ಚರ್ಮ,  ಭಾಷೆ, ಉದ್ಯೋಗದ ಕಾರಣಕ್ಕಾಗಿ ಕೀಳಾಗಿ ಗುರುತಿಸಿಕೊಳ್ಳುವುದಕ್ಕೆ ಯಾವ ಮನುಷ್ಯರೂ ಸಿದ್ಧರಿರುವುದಿಲ್ಲ. ಆದರೆ, ಆರ್ಥಿಕವಾಗಿ ಬಲಾಢ್ಯವಾಗಿರುವ ಒಂದು ಗುಂಪು ಆರ್ಥಿಕ ದುರ್ಬಲವಾಗಿರುವ ಗುಂಪಿನ ಸ್ವಾಭಿಮಾನಕ್ಕೆ ಧಕ್ಕೆ ತರುವ ಮತ್ತು ಅವರ  ಬಣ್ಣ, ಬಡತನದ ಕಾರಣಕ್ಕಾಗಿಯೇ ಶೋಷಿಸುವ ಪ್ರಕ್ರಿಯೆಗಳು ನಿರಂತರ ನಡೆಯ ತೊಡಗಿದಾಗ ನಿಧಾನಕ್ಕೆ ಸ್ವಾಭಿಮಾನದ ಪ್ರಜ್ಞೆ ಶಕ್ತಿಯನ್ನು ಕಳಕೊಳ್ಳುತ್ತಾ ದುರ್ಬಲವಾಗ ತೊಡಗುತ್ತದೆ. ಮತ್ತು ಬರಬರುತ್ತಾ ಕೀಳರಿಮೆಯನ್ನೇ ಸ್ವಾಭಿಮಾನದಂತೆ ಸಂಭ್ರಮಿಸ ತೊಡಗುತ್ತದೆ.

ಇಂಥಹದ್ದೊಂದು ಶೋಷಣೆಗೆ ದೊಡ್ಡ ಇತಿಹಾಸವಿದೆ. ನಮ್ಮದೇ ಮಣ್ಣಿನ ಬಹುದೊಡ್ಡ ಜನಸಂಖ್ಯೆಯೊಂದು ಇಂದಿಗೂ ಈ ಕೀಳರಿಮೆಯ  ಭಾವದಲ್ಲಿ ಬೆಂದು ನೊಂದು ಬದುಕುತ್ತಿದೆ. ‘ದಲಿತ ಸಮುದಾಯ’ ಎಂಬ ಪದದೊಳಗೆ ಸೇರಿಕೊಂಡಿರುವ ಈ ಬಹುಜನ  ಸಮುದಾಯವು ಸಾರ್ವಜನಿಕವಾಗಿ ಆಗಾಗ ಅವಮಾನಕ್ಕೆ ಒಳಗಾಗುತ್ತಿರುವುದನ್ನೂ ಬಹಿಷ್ಕಾರಕ್ಕೆ ತುತ್ತಾಗುತ್ತಿರುವುದನ್ನೂ ನಾವು  ನೋಡುತ್ತಿದ್ದೇವೆ. ಈ ಸ್ಥಿತಿ ಈ ಮಣ್ಣಿಗಷ್ಟೇ ಸೀಮಿತವಲ್ಲ. ಆಫ್ರಿಕಾ ಖಂಡದಲ್ಲಿ ಇದು ಅಕ್ಷರಶಃ ದಾಂಧಲೆ ನಡೆಸಿದೆ. ಬಿಳಿಯರು ಆ  ನಾಡನ್ನು ವಶಪಡಿಸಿಕೊಂಡದ್ದಲ್ಲದೇ ವರ್ಣ ಬೇಧ ನೀತಿಯನ್ನೇ ಜಾರಿಗೆ ತಂದರು.

ಅಮೇರಿಕವೂ ಈ ಕ್ರೌರ್ಯದ ಪರಿಧಿಯಿಂದ  ಹೊರಗಿಲ್ಲ. ಮನುಷ್ಯನು ತನ್ನಂತೇ ಇರುವ ಇನ್ನೋರ್ವ ಮನುಷ್ಯನನ್ನು ಆತನ ಚರ್ಮ, ಧರ್ಮ, ಭಾಷೆ, ಆರ್ಥಿಕ ಸ್ಥಿತಿಯ ಕಾರಣಕ್ಕಾಗಿ  ‘ತನಗಿಂತ ಕೀಳು’ ಎಂದು ಸಾರಿ, ಅಂತಿಮವಾಗಿ ಕೀಳರಿಮೆಯ ಶಾಶ್ವತ ಗುಂಪನ್ನು ತಯಾರಿಸುವ ಈ ಪ್ರಕ್ರಿಯೆ ದೇಶ-ಕಾಲದ  ಬೇಧಗಳಿಲ್ಲದೇ ಪುರಾತನ ಕಾಲದಿಂದಲೇ ನಡೆದುಕೊಂಡು ಬಂದಿದೆ. ಆರ್ಥಿಕವಾಗಿ ಪ್ರಬಲವಾಗಿರುವ ಮನುಷ್ಯ ದುರ್ಬಲರನ್ನು ತನ್ನ  ಮೋಜಿಗಾಗಿಯೋ ತೆವಲಿಗಾಗಿಯೋ ದುರುಪಯೋಗಿಸುವ ಮತ್ತು ಅಸಮಾನವಾಗಿ ಕಾಣುವ ಈ ಕ್ರೌರ್ಯಕ್ಕೆ ಅತಿದೊಡ್ಡ ಮತ್ತು  ಮರ್ಮಾಘಾತವೆನ್ನಬಹುದಾದ ಏಟು ಕೊಟ್ಟದ್ದು ಇಸ್ಲಾಮ್.

‘ಎಲ್ಲರೂ ಆದಮ್ ಮತ್ತು ಹವ್ವಾ ಎಂಬ ಏಕ ತಂದೆ ಮತ್ತು ತಾಯಿಯ ಮಕ್ಕಳು, ಯಾರು ಯಾರಿಗೂ ಅಸಮಾನರಲ್ಲ, ಯಾರು  ಮೌಲ್ಯಗಳನ್ನು ಪಾಲಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಾರೋ ಅವರೇ ಶ್ರೇಷ್ಠರು’ ಎಂದು ಇಸ್ಲಾಮ್ ಘಂಟಾಘೋಷವಾಗಿ ಸಾರಿತು.  ಪ್ರವಾದಿ ಮುಹಮ್ಮದ್ ಈ ಘೋಷಣೆಯ ರೋಲ್ ಮಾಡೆಲ್ ಆದರು. ಮಕ್ಕಾ ಮತ್ತು ಮದೀನಾದಲ್ಲಿ ಸ್ವಾಭಿಮಾನ ಕಳಕೊಂಡು  ವಸ್ತುವಿನಂತೆ ಮಾರುಕಟ್ಟೆಯಲ್ಲಿ ಯಾರು ಮಾರಲ್ಪಡುತ್ತಿದ್ದರೋ ಅವರನ್ನೇ ಆಲಿಂಗಿಸಿದರು. ಮನುಷ್ಯರೆಲ್ಲರೂ ಸಮಾನರು ಎಂಬ  ಭಾವವನ್ನು ಅತ್ಯಂತ ಸಮರ್ಪಕವಾಗಿ ಮತ್ತು ಪ್ರಾಯೋಗಿಕವಾಗಿ ಸಾರುವ ನಮಾಝನ್ನು ಈ ಘೋಷಣೆಗೆ ಅನ್ವರ್ಥವಾಗಿ ಬಳಸಿಕೊಂಡರು. ಮಸೀದಿಯಲ್ಲಿ ಪ್ರತಿಯೊಬ್ಬರೂ ಭುಜಕ್ಕೆ ಭುಜ ತಾಗಿಸಿಯೇ ನಮಾಝ್ ಮಾಡಬೇಕು ಎಂಬ ಅತೀ  ಪರಿಣಾಮಕಾರಿಯಾದ ಸಮಾನತೆಯ ನಿಯಮವನ್ನು ಪ್ರಸ್ತುತ ಪಡಿಸಿದರು. ಇದು ಅಸ್ಪ್ರಶ್ಯತೆಯ ಕುಲುಮೆಯಲ್ಲಿ ಬೆಂದು ಹೋಗಿದ್ದ  ಅರಬ್ ಜನತೆಯ ಮನುಷ್ಯತ್ವದ ಪ್ರಜ್ಞೆಗೆ ಎಂಥ ಕಿಡಿಯೊಂದನ್ನು ಹಚ್ಚಿಬಿಟ್ಟಿತೆಂದರೆ, ಕೇವಲ 23 ವರ್ಷಗಳೊಳಗೆ ಮಕ್ಕಾ-ಮದೀನಾ  ಸೇರಿದಂತೆ ದೊಡ್ಡದೊಂದು ಭೂಭಾಗದಲ್ಲಿ ಸಮಾನತೆಯ ಕ್ರಾಂತಿಯೇ ನಡೆದು ಹೋಯಿತು.

ಹಜ್ಜ್ ಎಂಬುದು ಸಮಾನತೆಯ ಅತಿದೊಡ್ಡ ಅಭಿವ್ಯಕ್ತಿ. ಕಅಬಾಕ್ಕೆ ಪ್ರದಕ್ಷಿಣೆ ಬರುವವರಲ್ಲಿ ಯಾರೂ ಮೇಲಿಲ್ಲ, ಯಾರೂ ಕೀಳಿಲ್ಲ.  ಆಫ್ರಿಕನ್, ಅಮೇರಿಕನ್, ಅರೇಬಿಯನ್, ಇಂಡಿಯನ್ ಎಂಬ ವಿಭಜನೆಯಿಲ್ಲದೇ ಮತ್ತು ಪುರುಷ-ಮಹಿಳೆ ಎಂಬ ಬೇಧವಿಲ್ಲದೇ ಎಲ್ಲರೂ  ಜೊತೆಯಾಗಿಯೇ ಕಅಬಾಕ್ಕೆ ಸುತ್ತು ಬರುತ್ತಾರೆ. ನಮಾಝ್ ನಲ್ಲೂ ಅಷ್ಟೇ. ಇದೇ ಭಾವ. ಸಾವಿರಾರು ವರ್ಷಗಳ ಹಿಂದೆ ಕಅಬಾವನ್ನು  ಜೀರ್ಣೋದ್ಧಾರ ಮಾಡಿ ಪ್ರವಾದಿ ಇಬ್ರಾಹೀಮ್ ಮಾಡಿದ ಹಜ್ಜ್ ನ ಕರೆ, ಇವತ್ತಿಗೂ ಸಮಾನತೆಯ ಅತಿ ಶ್ರೇಷ್ಠ ಅಭಿವ್ಯಕ್ತಿಯಾಗಿ ಚಾಲ್ತಿಯಲ್ಲಿದೆ. ಇಸ್ಲಾಮ್ ಈ ಜಗತ್ತಿಗೆ ನೀಡಿದ ಬಹು ಅಮೂಲ್ಯ ಕೊಡುಗೆಯೆಂದರೆ, ಮಾನವ ಸಮಾನತೆ. ಕೀಳರಿಮೆಯಿಲ್ಲದೆ ಬದುಕುವ  ಸ್ವಾತಂತ್ರ‍್ಯ.

ಸಮಾನತೆಯ ಆಲಿಂಗನಕ್ಕಾಗಿ ಇವತ್ತಿಗೂ ಜಗತ್ತಿನಾದ್ಯಂತ ಕೋಟ್ಯಂತರ ಜನರು ಹಾತೊರೆಯುತ್ತಿರುವಾಗ ಇಸ್ಲಾಮ್ ಅದನ್ನು  ಪ್ರಾಯೋಗಿಕವಾಗಿ ಜಾರಿಗೊಳಿಸಿ ಯಶಸ್ವಿಯಾಗಿದೆ. ಅದರ ಸಂಭ್ರಮವೇ ಈದ್.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …