ಮೌಲಾನಾ ರದಿಯುಲ್ ಇಸ್ಲಾಮ್ ನದ್ವಿ ಉತ್ತರಿಸುತ್ತಾರೆ…
ಪ್ರಶ್ನೆ: ಇಲ್ಲೊಬ್ಬರು ಹೇಳುತ್ತಾರೆ: ಒಬ್ಬ ಮುಸಲ್ಮಾನನು ತನ್ನ ಪತ್ನಿಗೆ ಮೂರು ತಲಾಕ್ ಕೊಟ್ಟು ಬಿಟ್ಟರೆ ಆಕೆ ಅವನಿಗೆ ಹರಾಮ್ ಆಗುತ್ತಾಳೆ. ಆದರೆ ಆಕೆಯನ್ನು ಒಂದು ರಾತ್ರಿಯ ಮಟ್ಟಿಗೆ ಬೇರೊಬ್ಬ ಪುರುಷನ ಬಳಿಗೆ ಕಳಿಸಿದರೆ ಆಕೆ ಅವನಿಗೆ ಹಲಾಲ್ ಆಗುತ್ತಾಳೆ. ಈ ವಿಧಾನವನ್ನು ಹಲಾಲಃ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಹೇಯ ಮತ್ತು ಅಸಭ್ಯ ವಿಧಾನವೆಂದು ತೋರುತ್ತದೆ. ಇದು ನನ್ನ ಬುದ್ಧಿಗೆ ನಿಲುಕುತ್ತಿಲ್ಲ. ಆದ್ದರಿಂದ ಶರೀಅತ್ನ ಆಧಾರದಲ್ಲಿ ಬುದ್ಧಿಗೆ ನಿಲುಕುವಂತಹ ಉತ್ತರ ನೀಡಬೇಕಾಗಿ ವಿನಂತಿ.
ಉತ್ತರ: ಇಸ್ಲಾಮ್ ನಿಶ್ಚಯಿಸಿರುವ ತಲಾಕ್ನ ವಿಧಾನವು ಪ್ರಕೃತಿಗೆ ತೀರಾ ಅನುಗುಣವಾದುದಾಗಿದೆ. ಅದರಲ್ಲಿ ಪುರುಷರಿಗೂ ಸ್ತ್ರೀಯರಿಗೂ ಸವಲತ್ತುಗಳಿವೆ. ದಂಪತಿಗಳ ಹಕ್ಕು ಬಾಧ್ಯತೆಗಳನ್ನೂ ಅವರ ಹೊಣೆಗಾರಿಕೆಗಳನ್ನೂ ಇಸ್ಲಾಮ್ ವಿಸ್ತೃತವಾಗಿ ವಿವರಿಸಿದೆ. ಉಭಯತ್ರರೂ ಪರಸ್ಪರರನ್ನು ಅರಿತು ಬಾಳಬೇಕು ಮತ್ತು ಕುಂದುಕೊರತೆಗಳನ್ನು ಕಡೆಗಣಿಸಬೇಕೆಂದೂ ಆದೇಶಿಸಿದೆ.
ಆದರೆ ಇಬ್ಬರಲ್ಲೂ ವೈಚಾರಿಕವಾಗಿಯೂ ಸ್ವಭಾವದಲ್ಲೂ ಹೊಂದಾಣಿಕೆಯಿರಬಹುದೆಂದು ಹೇಳಲು ಸಾಧ್ಯವಿಲ್ಲ. ಈ ಅವಸ್ಥೆಯಲ್ಲಿ ಸಂಕಟದೊಂದಿಗೆ ದಾಂಪತ್ಯದಲ್ಲಿ ಮುಂದುವರಿಯುವುದಕ್ಕಿಂತ ಪರಸ್ಪರ ಬೇರೆಯಾಗಿ ವಿವಾಹವಾಗಿ ಬಾಳು ಹಸನಾಗಿಸುವುದು ಉತ್ತಮವೆಂದು ಇಸ್ಲಾಮ್ ಸಲಹೆ ನೀಡುತ್ತದೆ. ತಲಾಕ್ ಒಂದು ಪ್ರಾಕೃತಿಕ ಅಗತ್ಯವಾಗಿದೆ. ಆದ್ದರಿಂದ ತಲಾಕ್ನ ಪದ್ಧತಿ ಇಲ್ಲದ ಮತಧರ್ಮಗಳೂ ತಮ್ಮ ಕೌಟುಂಬಿಕ ಕಾನೂನಿನಲ್ಲಿ ಅದನ್ನು ಸೇರಿಸಿಕೊಳ್ಳಲು ನಿರ್ಬಂಧಿತವಾಗಿವೆ.
ಪ್ರತ್ಯೇಕವಾಗುವ ಹಕ್ಕನ್ನು ಇಸ್ಲಾಮ್ ಪುರುಷನಿಗೂ ನೀಡಿದೆ. ಸ್ತ್ರೀಗೂ ನೀಡಿದೆ. ಸ್ತ್ರೀಯನ್ನು ಬೇರ್ಪಡುವ ಹಕ್ಕನ್ನು `ಖುಲಾ’ ಎಂದೂ ಪುರುಷನು ಬೇರ್ಪಡುವ ಹಕ್ಕನ್ನು ತಲಾಕ್ ಎಂದೂ ಕರೆಯಲಾಗುತ್ತದೆ. (ಖುಲಾದ ವಿಧಿ ವಿಧಾನಗಳನ್ನು ಇಲ್ಲಿ ವಿವರಿಸುತ್ತಿಲ್ಲ.) ಪುರುಷನು ಸ್ತ್ರೀಗೆ ತಲಾಕ್ ಕೊಡುವ ತೀರ್ಮಾನ ಮಾಡಿದರೆ ಆತ ಕೇವಲ ಒಂದು ತಲಾಕ್ ಅಥವಾ ಆಕೆಯ ಶುದ್ಧಿ ಕಾಲದಲ್ಲಿ ಲೈಂಗಿಕ ಸಂಪರ್ಕವೇರ್ಪಡದ ಅವಸ್ಥೆಯಲ್ಲಿ ಕೊಡುವುದು ಉತ್ತಮವೆಂದು ಇಸ್ಲಾಮ್ ಸಾರುತ್ತದೆ. ಪುನರವಲೋಕನ ನಡೆಸಲು ಒಳ್ಳೆಯ ಅವಕಾಶ ಸಿಗುವಂತಾಗಲು ಮೂರು ತಿಂಗಳ ಕಾಲ ಪತಿಯ ಮನೆಯಲ್ಲಿರಬೇಕೆಂದು ವಿಧಿಸುತ್ತದೆ. ಅವರು ಪುನಃ ಪತಿ-ಪತ್ನಿಯರಾಗಿ ಮುಂದುವರಿಯ ಬಯಸುವುದಾದರೆ, ಮೂರು ತಿಂಗಳ ಅವಧಿ ಮುಗಿಯುವುದರೊಳಗೆ ಪತಿಯು ಆಕೆಯನ್ನು ಸಂಪರ್ಕಿಸಬಹುದು. ಅನ್ಯಥಾ ಮೂರು ತಿಂಗಳ ಕಾಲ ಮುಗಿದರೆ ಅವರಿಬ್ಬರೂ ಸ್ವತಂತ್ರರಾಗುತ್ತಾರೆ. ಕೆಲವು ಸಮಯದ ಬಳಿಕ ಇಬ್ಬರಿಗೂ ಪತಿ-ಪತ್ನಿಯರಾಗಿ ಬಾಳಬೇಕೆಂಬ ಬಯಕೆಯುಂಟಾದರೆ ಇಸ್ಲಾಮ್ ಅದಕ್ಕೆ ಅಡ್ಡಿಪಡಿಸುವುದಿಲ್ಲ. ಹೊಸ ಮಹ್ರ್ ನಿಶ್ಚಯಿಸಿಕೊಂಡು ಅವರು ವಿವಾಹವಾಗಲು ಅನುಮತಿ ನೀಡುತ್ತದೆ. ಈ ಸವಲತ್ತನ್ನು ಇಸ್ಲಾಮ್ ಎರಡು ಸಲ ನೀಡುತ್ತದೆ.
ಪವಿತ್ರ ಕುರ್ಆನ್ ಹೇಳುತ್ತದೆ: “ತಲಾಕ್(ವಿವಾಹ ವಿಚ್ಛೇದನ) ಎರಡು ಸಲ. ಅನಂತರ ನ್ಯಾಯೋಚಿತವಾಗಿ ಸ್ತ್ರೀಯನ್ನು ತಡೆದಿರಿಸಬೇಕು ಅಥವಾ ಯೋಗ್ಯ ರೀತಿಯಿಂದ ಅವಳನ್ನು ಬಿಡುಗಡೆಗೊಳಿಸಬೇಕು.” (ಅಲ್ಬಕರ: 229)
ಪುರುಷನು ತಾನು ಬಯಸಿದಾಗಲೆಲ್ಲ ತಲಾಕ್ ಕೊಟ್ಟು ಸ್ತ್ರೀಯನ್ನು ಬೇರ್ಪಡಿಸಲು, ಅನಂತರ ಬಯಸಿದಾಗ ಪುನಃ ಆಕೆಯನ್ನು ವಿವಾಹವಾಗಿ ತನ್ನ ಬಳಿಗೆ ಕರೆಯಲು ತಲಾಕ್ ಮಕ್ಕಳಾಟವಲ್ಲ. ಅದು ಬಹಳ ಗಂಭೀರ ಮತ್ತು ಬಹಳಷ್ಟು ಆಲೋಚನೆ ಮಾಡಿದ ಬಳಿಕ ಕೈಗೊಳ್ಳಲಾಗುವ ಕ್ರಮವಾಗಿದೆ. ಪುರುಷನು ಮೂರನೇ ಬಾರಿ ತಲಾಕ್ ಕೊಟ್ಟ ಬಳಿಕ ಆಕೆ ಅವನಿಂದ ಶಾಶ್ವತವಾಗಿ ಬೇರ್ಪಡುತ್ತಾಳೆ. ಅನಂತರ ಅವರಿಗೆ ಮರುವಿವಾಹವಾಗುವ ಅವಕಾಶವಿರುವುದಿಲ್ಲ. ಈ ನಿಯಮವು ವಾಸ್ತವದಲ್ಲಿ ಸ್ತ್ರೀಗೆ ಸ್ವಾತಂತ್ರ್ಯ ನೀಡುತ್ತದೆ. ತನಗೆ ಮೂರು ತಲಾಕ್ ಕೊಟ್ಟ ಪುರುಷನನ್ನು ಬಿಟ್ಟು ಆಕೆ ಬಯಸುವ ಯಾವ ಪುರುಷನನ್ನೂ ಮದುವೆಯಾಗಬಹುದು. ಇನ್ನು ಆಕೆ ಮೂರು ಬಾರಿ ತಲಾಕ್ನ ನಂತರ ಬೇರೆ ಪುರುಷನನ್ನು ಮದುವೆಯಾಗಿ ಆತ ಸ್ವಾಭಾವಿಕವಾಗಿ ಮರಣ ಹೊಂದಿದರೆ ಅಥವಾ ಅವರೊಳಗೆ ಹೊಂದಾಣಿಕೆಯಾಗದೆ ಆ ಪುರುಷನೂ ತಲಾಕ್ ಕೊಟ್ಟುಬಿಟ್ಟರೆ, ಇಸ್ಲಾಮ್ ಆಕೆಗೆ ತಾನು ಬಯಸಿದರೆ ತನ್ನ ಪುನರ್ ವಿವಾಹವನ್ನು ಮಾಡಿಕೊಳ್ಳುವ ಹಕ್ಕನ್ನು ನೀಡುತ್ತದೆ.
ಈ ಸ್ಥಿತಿಯಲ್ಲಿ ಸ್ತ್ರೀ ಯಾವನೇ ಪುರುಷನೊಂದಿಗೆ ವಿವಾಹ ಮಾಡಿಕೊಳ್ಳಬಹುದು. ಆದರೆ ತನ್ನ ಪೂರ್ವಪತಿಯ ವಿವಾಹ ಬಂಧನಕ್ಕೆ ಮರಳುವಂತಿಲ್ಲ ಎಂಬ ಕಾನೂನು ರಚಿಸಬಹುದಾಗಿತ್ತು. ಆದರೆ ಸ್ತ್ರೀಗೂ ಪೂರ್ವ ಪತಿಗೂ ತಮ್ಮ ಸ್ವಇಚ್ಛೆಯಿಂದ ಅವರು ಪುನರ್ ವಿವಾಹ ಮಾಡಿಕೊಳ್ಳಬಹುದೆಂದು ಅನುಮತಿಕೊಟ್ಟಿರುವುದು ಇಸ್ಲಾಮಿನ ಔದಾರ್ಯವಾಗಿದೆ. ಪವಿತ್ರ ಕುರ್ಆನ್ ಈ ವಿಧಿಯನ್ನು ಸ್ಪಷ್ಟವಾಗಿ ಸಾರಿದೆ. (ಪತಿಯು ಎರಡು ತಲಾಕ್ ಕೊಟ್ಟ ಬಳಿಕ ಮೂರನೇ ಬಾರಿಯೂ) ತಲಾಕ್ ಕೊಟ್ಟು ಬಿಟ್ಟರೆ ಆ ಸ್ತ್ರೀಯ ನಿಕಾಹ್ ಇನ್ನೊಬ್ಬನೊಂದಿಗೆ ಆಗಿ ಅವನು ತಲಾಕ್ ಕೊಡುವ ಹೊರತು ಅವಳು ಪುನಃ ಅವನಿಗೆ (ಮೊದಲ ಪತಿಗೆ) ಹಲಾಲ್ ಆಗಲಾರಳು. ಆಗ (ದ್ವಿತೀಯ ಪತಿ ತಲಾಕ್ ಕೊಟ್ಟಾಗ, ಮೊದಲಿನ ಪತಿಯೂ ಈ ಸ್ತ್ರೀಯೂ ಅಲ್ಲಾಹನ ಮೇರೆಯೊಳಗಿರುವೆವೆಂದು ಭಾವಿಸುವುದಾದರೆ, ಅವರು ಪರಸ್ಪರ ಒಲಿದುಕೊಳ್ಳುವುದರಲ್ಲಿ ದೋಷವಿಲ್ಲ (ಅಲ್ಬಕರ: 230).
ಮಾನವ ಪ್ರಕೃತಿಗೆ ಸಂಪೂರ್ಣ ಹೊಂದಾಣಿಕೆಯಾಗಿರುವ ಇಸ್ಲಾಮಿನ ಈ ಬೋಧನೆಯಂತೆ ನಡೆದರೆ ನಡೆಯುವವರಿಗೂ ಸುಖ ಸಿಗುವುದು ಮತ್ತು ಇತರರಿಗೂ ಇಸ್ಲಾಮೀ ಶಿಕ್ಷಣಗಳು ಸರಿಯಾದ ರೀತಿಯಲ್ಲಿ ತಲುಪುವುದು. ಆದರೆ ಮುಸಲ್ಮಾನರು ಹಾಗೆ ನಡೆಯದೆ ತಮ್ಮಿಷ್ಟದ ರೀತಿಯನ್ನು ಅನುಸರಿಸುವುದನ್ನು ನೋಡುವಾಗ ವಿಷಾದವಾಗುತ್ತದೆ. ಅದರಿಂದ ಅವರೂ ಸಂಕಷ್ಟಕ್ಕೀಡಾಗುತ್ತಾರೆ ಮತ್ತು ಇಸ್ಲಾಮಿಗೂ ಕೆಟ್ಟ ಹೆಸರು ತರಲು ಕಾರಣಕರ್ತರಾಗುತ್ತಾರೆ.
ಇಸ್ಲಾಮ್ ಅಗತ್ಯದ ಸಂದರ್ಭದಲ್ಲಿ ಕೇವಲ ಒಂದು ತಲಾಕ್ ನೀಡಲು ಆದೇಶಿಸಿದೆ. ತಲಾಕ್ ಕೊಟ್ಟು ಮರಳಿ ಪಡೆಯಲು ಎರಡು ಬಾರಿ ಅವಕಾಶಗಳನ್ನು ಒದಗಿಸಿದೆ. ಆದರೆ ತಿಳಿಗೇಡಿ ಮುಸಲ್ಮಾನರು ಕೋಪದಿಂದ ಮೈ ಮರೆತು ಒಂದೇ ಉಸಿರಿಗೆ ಮೂರು ತಲಾಕ್ ಕೊಟ್ಟು ಬಿಡುತ್ತಾರೆ. ಕೋಪ ತಣ್ಣಗಾದಾಗ ಪಶ್ಚಾತ್ತಾಪ ಪಡುತ್ತಾರೆ. ಈಗೇನು ಮಾಡುವುದು? ಈಗ ಅವರಿಗೆ ತೋಚುವುದು ಯೋಜನಾಬದ್ಧವಾಗಿ ತನ್ನ ಪತ್ನಿಯನ್ನು ಬೇರೊಬ್ಬ ಪುರುಷನಿಗೆ ವಿವಾಹ ಮಾಡಿಕೊಟ್ಟು ಒಂದು ರಾತ್ರಿಯ ಮಟ್ಟಿಗೆ ಅವನ ಜೊತೆಗೆ ಬಿಟ್ಟು ಮರುದಿನ ಬೆಳಿಗ್ಗೆ ಆತನಿಂದ ತಲಾಕ್ ಕೊಡಿಸುವುದು. ಆ ಮೂಲಕ ತನ್ನ ಪತ್ನಿಯನ್ನು ಪುನಃ ತನ್ನ ಪಾಲಿಗೆ ಹಲಾಲ್ ಗೊಳಿಸುವುದರ ಹೊರತು ಬೇರೆ ದಾರಿಯಿಲ್ಲ. ಆದರೆ ಪ್ರಸ್ತುತ ಕುರ್ಆನ್ ಸೂಕ್ತದಿಂದ ತಿಳಿದು ಬರುವಂತೆ ಎರಡನೇ ಪತಿಯ ಮರಣ ಅಥವಾ ಅವನಿಂದ ತಲಾಕ್ ಪಡೆದ ನಂತರ ತನ್ನ ಪೂರ್ವ ಪತಿಯೊಂದಿಗೆ ಮರು ವಿವಾಹವಾಗುವಂತಹ ಸಂದರ್ಭ ಅಪೂರ್ವವಾಗಿ ಎಂದಾದರೊಮ್ಮೆ ನಡೆಯಬಹುದು. ಇದರಲ್ಲಿ ತನ್ನ ವಿಚ್ಛೇದಿತ ಪತ್ನಿಯನ್ನು ಇನ್ನೊಬ್ಬನೊಂದಿಗೆ ವಿವಾಹ ಮಾಡಿಸಿ ಅನಂತರ ತಲಾಕ್ ಕೊಡಿಸುವುದರಲ್ಲಿ ಪೂರ್ವ ಪತಿಯ ಯಾವುದೇ ಪಾತ್ರವಿರುವುದಿಲ್ಲ. ಈ ವಿಧಾನವನ್ನು ಯೋಜನಾಬದ್ಧವಾಗಿ ಅಳವಡಿಸುವುದು ಇಸ್ಲಾಮೀ ಶರೀಅತ್ ನೊಂದಿಗೆ ಚೆಲ್ಲಾಟವಾಗಿದೆ. ಇಂದು ಸಂಪೂರ್ಣ ಹರಾಮ್ ಆಗಿದೆ.
ಪ್ರವಾದಿ ಮುಹಮ್ಮದ್(ಸ) ಈ ರೀತಿ ತನ್ನ ಪತ್ನಿಗೆ ಮೂರು ತಲಾಕ್ಕೊಟ್ಟ ಬಳಿಕ ಪುನಃ ಆಕೆಯ ವಿವಾಹ ಇನ್ನೊಬ್ಬನೊಂದಿಗೆ ಮಾಡಿಸುವ ವ್ಯಕ್ತಿಯನ್ನೂ ಇಂತಹ ಹೇಯ ಕೃತ್ಯದಲ್ಲಿ ಭಾಗಿಯಾಗಿ ಅವನ ಪತ್ನಿಯನ್ನು ವಿವಾಹವಾಗಿ ತಲಾಕ್ ಕೊಟ್ಟು ಪೂರ್ವ ಪತಿಗೆ ಹಲಾಲ್ ಮಾಡಿಸುವ ವ್ಯಕ್ತಿಯನ್ನೂ ಶಪಿಸಿದ್ದಾರೆ.
ಅಬ್ದುಲ್ಲಾ ಬಿನ್ ಮಸ್ವೂದ್(ರ) ಹೇಳುತ್ತಾರೆ- ಪ್ರವಾದಿ(ಸ) ಹಲಾಲಃ ಮಾಡುವವನನ್ನೂ ಮಾಡಿಸುವವನನ್ನೂ ಶಪಿಸಿದ್ದಾರೆ. (ತಿರ್ಮದಿ, ನಸಾಈ)
ಉಕ್ಬಾ ಬಿನ್ ಆಮಿರ್(ರ) ವರದಿ ಮಾಡುತ್ತಾರೆ- ಪ್ರವಾದಿ(ಸ) ಅವರು- ನಾನು ನಿಮಗೆ ಬಾಡಿಗೆಯ ಗೂಳಿಯ ಬಗ್ಗೆ ತಿಳಿಸಲೇ ಎಂದು ಕೇಳಿದಾಗ ಸಹಾಬಿಗಳು ಖಂಡಿತ ತಿಳಿಸಿರಿ ಅಲ್ಲಾಹನ ಸಂದೇಶವಾಹಕರೇ ಎಂದು ಉತ್ತರಿಸಿದರು. ಪ್ರವಾದಿ(ಸ) ಹೇಳಿದರು- ಅದು ನಿಕಾಹ್ ಆದ ನಂತರ ಪೂರ್ವ ಪತಿಗೆ ಆಕೆಯನ್ನು ಹಲಾಲ್ಗೊಳಿಸಲಿಕ್ಕಾಗಿ ತಲಾಕ್ ನೀಡುವವನು. ಅಲ್ಲಾಹನು ಹಲಾಲ ಮಾಡುವವನ ಮೇಲೂ ಮಾಡಿಸುವವನ ಮೇಲೂ ಶಾಪ ಹಾಕಿದ್ದಾರೆ. (ಇಬ್ನು ಮಾಜಃ)
ಮೇಲಿನ ಹದೀಸ್ಗಳಿಂದ ಈ ಕ್ರಮ ಸಂಪೂರ್ಣ ತಿರಸ್ಕಾರ ಯೋಗ್ಯ ಮತ್ತು ಹರಾಮ್ ಆಗಿದೆಯೆಂದು ತಿಳಿದು ಬರುತ್ತದೆ. ಒಂದು ಮುಸ್ಲಿಮ್ ಸಮುದಾಯದಲ್ಲಿ ಈ ಕ್ರಮವು ನಡೆದು ಬರುತ್ತಿದೆಯೆಂದರೆ ಅದಕ್ಕೂ ಇಸ್ಲಾಮಿಗೆ ದೂರದ ಸಂಬಂಧವೂ ಇಲ್ಲ. ಮುಸ್ಲಿಮ್ ಸಮಾಜ ಸುಧಾರಕರು ಇದನ್ನು ತಡೆಗಟ್ಟಲೇಬೇಕು. ಅದನ್ನು ಯಾವ ಸ್ಥಿತಿಯಲ್ಲೂ ಸಹಿಸಲು ಸಾಧ್ಯವಿಲ್ಲ.
IslamKannada News Portal
