✍️ಶಾ ನವಾಝ್ ಕೊಡುವಳ್ಳಿ
ಮಿತ್ರನ ಆರು ವರ್ಷದ ಪುಟ್ಟ ಮಗುವೊಂದು ಇತ್ತೀಚೆಗೆ ಮರಣ ಹೊಂದಿತು. ಹುಟ್ಟಿದಾಗಲೇ ಆ ಮಗುವಿಗೆ ಹಲವಾರು ದೈಹಿಕ ತೊಂದರೆಗಳಿದ್ದುವು. ಒಂದು ಸಾಮಾನ್ಯ ಕುಟುಂಬವೊಂದಕ್ಕೆ ಯೋಚಿಸಲೂ ಸಾಧ್ಯವಿರದಷ್ಟು ಮೊತ್ತವನ್ನು ಕಳೆದ ಒಂದು ವರ್ಷದಲ್ಲಿ ಆ ಮಗುವಿನ ಚಿಕಿತ್ಸೆಗೆ ವ್ಯಯಿಸಲಾಗಿತ್ತು.
ಮಗುವಿನ ಭವಿಷ್ಯವನ್ನು ಸ್ಮರಿಸಿಕೊಂಡು ಶುಭ ನಿರೀಕ್ಷೆಯಿರಿಸಿ ಚಿಕಿತ್ಸೆ ಮಾಡುತ್ತಿರುವಾಗ ಆರೋಗ್ಯ ಸ್ಥಿತಿ ಮತ್ತಷ್ಟು ಹದೆಗೆಟ್ಟು ಆ ಮಗು ವೆಂಟಿಲೇಟರ್ನಲ್ಲಿ ಒಂದು ತಿಂಗಳ ಕಾಲ ಕಳೆದು ಕೊನೆಗೆ ಅಲ್ಲಾಹನತ್ತ ಪಯಣ ಬೆಳೆಸಿತು. ಆ ಅಸಾಮಾನ್ಯ ದುಃಖವನ್ನು ಆ ದಂಪತಿಗಳು ಬಹಳ ಪಕ್ವತೆಯಿಂದ ಸಹಿಸಿದರು.
ಮಕ್ಕಳು ತಂದೆ-ತಾಯಂದಿರ ಅತ್ಯಂತ ಮಹತ್ತರವಾದ ಆಸ್ತಿಯಾಗಿದೆ. ಅದು ಸಂಭ್ರಮವಾಗಿದೆ. ಮಕ್ಕಳು ಬದುಕಿನ ನೈಜ ಅರ್ಥವಾಗಿದ್ದಾರೆ. ಮಕ್ಕಳ ಮರಣವು ಅತ್ಯಂತ ದೊಡ್ಡ ದುಃಖವಾಗಿದೆ. ಮಕ್ಕಳ ಮರಣವು ಸತ್ಯವಿಶ್ವಾಸಿಗಳನ್ನು ನಿರಾಶರನ್ನಾಗಿಸಬಾರದು. ಮರಣವು ಅಲ್ಲಾಹನು ನಿಶ್ಚಯಿಸಿದ ಸತ್ವ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ಕುರ್ಆನ್ ಕಲಿಸುತ್ತದೆ.
ಸಹನೆಯುಳ್ಳವರಿಗೆ ಕುರ್ಆನ್ ಶುಭವಾರ್ತೆ ನೀಡುತ್ತದೆ.
“ನಾವು ನಿಮ್ಮನ್ನು ಭಯಾಶಂಕೆ ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ” (ಅಲ್ಬಕರ: 155)
ಅಂತಹಾ ಪರೀಕ್ಷೆಯ ಸಂದರ್ಭಗಳನ್ನು ಸತ್ಯವಿಶ್ವಾಸಿಗಳು ಹೇಗೆ ಎದುರಿಸಬೇಕೆಂಬುದಕ್ಕೆ ಪ್ರವಾದಿವರ್ಯ(ಸ)ರಲ್ಲಿ ಮಾದರಿಯಿದೆ. ಮೂವರು ಪುತ್ರರನ್ನು ಪ್ರವಾದಿವರ್ಯರು(ಸ) ಕಳಕೊಂಡಿದ್ದರು. ಖಾಸಿಂ, ಅಬ್ದುಲ್ಲ, ಇಬ್ರಾಹೀಮ್ ಈ ಮೂವರು ಮಕ್ಕಳ ಮರಣವು ಪ್ರವಾದಿವರ್ಯ(ಸ) ರನ್ನು ತುಂಬಾ ದುಃಖಿತರನ್ನಾಗಿಸಿತ್ತು.
ಅನಸ್ಬಿನ್ ಮಾಲಿಕ್(ರ) ಉದ್ಧರಿಸಿದ್ದಾರೆ; “ನಾವು ಅಲ್ಲಾಹನ ಪ್ರವಾದಿವರ್ಯರ(ಸ) ಜೊತೆ ಪ್ರವಾದಿವರ್ಯರ(ಸ) ಪುತ್ರ ಇಬ್ರಾಹೀಮರ ಸಾಕು ತಾಯಿಯ ಪತಿಯಾಗಿದ್ದ ಅಬೂ ಸೈಫ್(ರ)ರ ಬಳಿಗೆ ತೆರಳಿದೆವು. ಪ್ರವಾದಿವರ್ಯರು(ಸ) ಇಬ್ರಾಹೀಮರನ್ನು ಎತ್ತಿ ಚುಂಬಿಸಿದರು. ಬಳಿಕ ಅಬೂ ಸೈಫ್ನ ಮನೆಯನ್ನು ಪ್ರವೇಶಿಸಿದರು. ಆಗ ಇಬ್ರಾಹೀಮ್ ಅಂತಿಮ ಶ್ವಾಸವನ್ನು ಎಳೆಯುತ್ತಿದ್ದರು. ಪ್ರವಾದಿವರ್ಯರ(ಸ) ಕಣ್ಣಾಲಿಗಳು ತುಂಬಿತ್ತು. ನೀರು ಇಳಿಯಿತು. ಆಗ ಅಬ್ದುರ್ರಹ್ಮಾನ್ ಬಿನ್ ಔಫ್(ರ) ಹೇಳಿದರು. “ಅಲ್ಲಾಹನ ಪ್ರವಾದಿಯವರೇ(ಸ) ತಾವು ಅಳುವುದೇ? ಆಗ ಪ್ರವಾದಿವರ್ಯರು(ಸ) ಹೇಳಿದರು, “ಇಬ್ನ್ ಔಫ್ರವರೇ, ಇದು ಕರುಣೆಯಾಗಿದೆ. ಎನ್ನುತ್ತಾ ದುಃಖ ತಾಳಲಾರದೆ ಪ್ರವಾದಿವರ್ಯರು(ಸ) ಮುಂದುವರಿಯುತ್ತಾ, `ಕಣ್ಣೀರು ತುಂಬಿ ಹರಿಯುತ್ತಿದೆ. ಹೃದಯ ಮಿಡಿಯುತ್ತಿದೆ. ಆದರೆ ನಮ್ಮ ಪ್ರಭು ಅಲ್ಲಾಹನಿಗೆ ಇಷ್ಟವಿಲ್ಲದ ಮಾತುಗಳನ್ನು ಹೇಳಲಾರೆವು. ಖಂಡಿತವಾಗಿಯೂ ನಿನ್ನ ಅಗಲಿಕೆಯು ನಮ್ಮನ್ನು ತುಂಬಾ ದುಃಖಿತರನ್ನಾಗಿಸಿದೆ.”
ಕಳೆದ ಒಂದು ವರ್ಷದಲ್ಲಿ ತಮ್ಮ ಸಂತಾನವನ್ನು ಕಳಕೊಂಡ ಸಾವಿರಾರು ತಂದೆ ತಾಯಂದಿರು ಫೆಲೆಸ್ತೀನಿನಲ್ಲಿದ್ದಾರೆ. ಇಂತಹಾ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳು ಹೇಗಿರಬೇಕೆಂಬುದಕ್ಕೆ ಫೆಲೆಸ್ತೀನಿನ ಮಾತಾಪಿತರು ಮಾದರಿಯಾಗಿದ್ದಾರೆ.
ಸಹನೆಯು ಸತ್ಯವಿಶ್ವಾಸಿಯ ಪ್ರಬಲ ಆಯುಧವಾಗಿದೆ. ಸತ್ವಪರೀಕ್ಷೆಯನ್ನು ಸಹನೆಯಿಂದ ಎದುರಿಸಿದವರಿಗೆ ಅಲ್ಲಾಹನ ಬಳಿ ಮಹತ್ತರವಾದ ಪ್ರತಿಫಲವಿದೆ.
“ಅಬೂ ಮೂಸಲ್ ಅಶ್ಅರಿ(ರ) ರವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು; ಓರ್ವನ ಮಗು ಮರಣ ಹೊಂದಿದ್ದರೆ ಅಲ್ಲಾಹನು ತನ್ನ ಮಲಕ್ ಗಳೊಂದಿಗೆ ಹೀಗೆ ಕೇಳುವನು; ನೀವು ನನ್ನ ದಾಸನ ಮಗುವನ್ನು ಹಿಡಿದಿರಾ? ಆಗ ಅವರು ಹೌದೆನ್ನುವರು. ನೀವು ನನ್ನ ದಾಸನ ಕರುಳಿನ ಕುಡಿಯನ್ನು ಹಿಡಿದಿರಾ? ಆಗ ಅವರು ಹೌದೆನ್ನುವರು. ನಂತರ ಕೇಳುವನು, ಆಗ ಅವರ ಪ್ರತಿಕ್ರಿಯೆ ಹೇಗಿತ್ತು. ಆಗ ಅವರು ಹೇಳುವರು. “ಆತ ನಿನಗೆ ಸ್ತುತಿ ಸ್ತೋತ್ರ ಅರ್ಪಿಸುತ್ತಾ ನಾವೆಲ್ಲರೂ ಅಲ್ಲಾಹನೆಡೆಗೆ ಮರಳುವವರಾಗಿದ್ದೇವೆ. ಎಂದರು. ಆಗ ಅಲ್ಲಾಹನು “ನನ್ನ ದಾಸನಿಗೆ ನೀವು ಸ್ವರ್ಗದಲ್ಲಿ ಒಂದು ಭವನ ನಿರ್ಮಿಸಿ ಅದಕ್ಕೆ ಬೈತುಲ್ ಹಮ್ದ್ ಎಂದು ಹೆಸರಿಡಿರಿ” ಎಂದು ಆದೇಶಿಸುವನು. (ತಿರ್ಮಿದಿ)
ಸತ್ಯವಿಶ್ವಾಸಿ ಅನುಭವಿಸುವ ನೋವನ್ನು ಅಲ್ಲಾಹನು ವೃಥಾ ವ್ಯಯ ಮಾಡಲಾರ. ಒಂದು ಮಗುವಿನ ಅಗಲಿಕೆಯು ಸ್ವರ್ಗದಲ್ಲಿ ಭವನ ಪಡೆಯಲು ಕಾರಣವಾಗುತ್ತದೆಂಬುದನ್ನು ಹದೀಸ್ ಕಲಿಸುತ್ತದೆ. ಸ್ವರ್ಗ ಲಭಿಸುತ್ತದೆ ಎಂಬ ಗುರಿಯೊಂದಿಗೆ ಬದುಕುವ ಸತ್ಯವಿಶ್ವಾಸಿಗೆ ಅಲ್ಲಾಹನು ಸ್ವರ್ಗ ನೀಡುವ ಭರವಸೆಗಿಂತ ಮಹತ್ತರವಾದುದು ಯಾವುದಿದೆ? ಸ್ವರ್ಗವು ಕಳೆದುಕೊಂಡದ್ದು ಮಾತ್ರವಲ್ಲ ತಾನು ಇಷ್ಟಪಟ್ಟದ್ದನ್ನೆಲ್ಲಾ ನಿರಾತಂಕವಾಗಿ ಪಡೆಯಲು ಇರುವ ಸ್ಥಳವಾಗಿದೆ.
ಮಕ್ಕಳ ಅಗಲಿಕೆಯು ಪರಲೋಕದ ಬಂಡವಾಳವೆಂದು ಸತ್ಯವಿಶ್ವಾಸಿಗಳು ಭಾವಿಸುತ್ತಾರೆ, ಮಯ್ಯತ್ ನಮಾಝ್ನಲ್ಲಿ ಹೀಗೆ ಪ್ರಾರ್ಥಿಸಬೇಕೆಂದು ವಿದ್ವಾಂಸರು ಕಲಿಸಿರುವ ಉದ್ದೇಶ ಅದಾಗಿದೆ.
“ಅಲ್ಲಾಹನೇ, ಈ ಮಗುವನ್ನು ಅವನ ತಂದೆ ತಾಯಂದಿರಿಗಿರುವ ಗತಕಾಲದ ಸಂತಸದ ಚಟುವಟಿಕೆಗಳ ಬಂಡವಾಳವಾಗಿ, ಉಪದೇಶವಾಗಿ, ಶಿಫಾರಸ್ಸಾಗಿ ಪರಿಣಮಿಸುವಂತೆ ಮಾಡು. ಅವರೀರ್ವರ ಭಾರವನ್ನು ತಕ್ಕಡಿಯಲ್ಲಿ ವರ್ಧಿಸುವಂತೆ ಮಾಡು. ಅವರ ಹೃದಯದಲ್ಲಿ ಸಹನೆಯ ಶಕ್ತಿಯನ್ನು ತುಂಬಿಸು. ಅವನ ನಂತರ ಅವರನ್ನು ಸತ್ವ ಪರೀಕ್ಷೆಗೊಳಪಡಿಸಬೇಡ. ಅವರ ಪ್ರತಿಫಲವನ್ನು ಅವರಿಗೆ ತಡೆಯದಿರು.” (ಇಆನತುತ್ತಾಲಿ ಬೀನ್) ಬೇರೆ ದುಆದ ವಚನಗಳೂ ವಿವಿಧ ವಿದ್ವಾಂಸರು ಉದ್ಧರಿಸಿರುವುದನ್ನು ಕಾಣಬಹುದು.
ಕೆಲವು ಅಭಿಪ್ರಾಯ ಭಿನ್ನತೆಗಳಿದ್ದರೂ ಮಕ್ಕಳಿಗಾಗಿ ಮಯ್ಯತ್(ಜನಾಝಾ) ನಮಾಝ್ ನಿರ್ವಹಿಸಿರಿ. ಅದು ಪ್ರವಾದಿವರ್ಯರ(ಸ) ಸುನ್ನತ್ ಆಗಿದೆ ಎಂಬುದು ಪ್ರಬಲ ಅಭಿಪ್ರಾಯವಾಗಿದೆ. ಮಕ್ಕಳಿಗೆ ಮಾಡುವ ಜನಾಝಾ ನಮಾಝ್ನಲ್ಲಿ ಅವರ ಮಾತಾಪಿತರಿಗೆ ಪ್ರಾರ್ಥಿಸಬೇಕಾಗಿದೆ. ಪ್ರಾರ್ಥನೆಯಲ್ಲಿ ಇಷ್ಟವಿರುವ ವಚನಗಳನ್ನು ಬಳಸಬಹುದು. ಯಾಕೆಂದರೆ ಅದಕ್ಕೆ ನಿರ್ಣಯಿತ ವಚನಗಳ ಆಧಾರವಿಲ್ಲ. ಪ್ರಮುಖವಾಗಿ ಮಾತಾಪಿತರಿಗೆ ಪ್ರಾರ್ಥಿಸಬೇಕಾಗಿದೆ.
ಯಾಕೆಂದರೆ, ಕಳಂಕ ರಹಿತರಾದ ಮಕ್ಕಳಿಗೆ ಪಾಪ ವಿಮೋಚನೆಯ ಪ್ರಾರ್ಥನೆ ನಡೆಸಬೇಕಾದ ಅಗತ್ಯವಿಲ್ಲ ತಾನೇ. ಅಗಲಿದ ಮಕ್ಕಳೆಲ್ಲರೂ ಸ್ವರ್ಗವಾಸಿಗಳಾಗಿರುವರು. ಅವರು ತಮ್ಮ ಮಾತಾಪಿತರಿಗೆ ಶಿಫಾರಸ್ಸುದಾರರಾಗಿ ಬರುವರು. ಅವರು ಮಾತಾಪಿತರ ಕೈಹಿಡಿಯುವರು. ಅನಶ್ವರ ಸ್ವರ್ಗದಲ್ಲಿ ಶಾಶ್ವತ ಸುಖ ಅನುಭವಿಸುವರು.
IslamKannada News Portal
