✍️ ಎನ್.ಎಂ. ಪಡೀಲ್
ಅಬ್ದುಲ್ಲಾಹಿಬ್ನು ಅಬ್ಬಾಸ್(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು: “ಬೇಡುವುದಿದ್ದರೆ ಅಲ್ಲಾಹನೊಂದಿಗೆ ಪ್ರಾರ್ಥಿಸಿ. ಸಹಾಯ ಯಾಚಿಸುವುದಾದರೆ ಅಲ್ಲಾಹನೊಂದಿಗೆ ಸಹಾಯ ಯಾಚಿಸಿ.” (ತಿರ್ಮಿದಿ)
ಈ ಹದೀಸ್ನ ಕೆಲವು ವರದಿಗಳಲ್ಲಿ ಪಿತೃ ಸಹೋದರನ ಪುತ್ರನಿಗೆ ಉಪದೇಶವಾಗಿ ಇನ್ನು ಕೆಲವು ವಿಷಯಗಳನ್ನು ಸೇರಿಸುತ್ತಾರೆ: “ನಿನಗೆ ತಿಳಿದಿರಲಿ, ಇಡೀ ಮಾನವಕುಲವು ಒಟ್ಟಾಗಿ ನಿನಗೆ ಉಪಕಾರ ಮಾಡಬಯಸಿದರೂ ಅಲ್ಲಾಹನು ವಿಧಿಸಿದ್ದನ್ನು ಹೊರತುಪಡಿಸಿ ಬೇರೇನನ್ನೂ ಅವರಿಂದ ಮಾಡಲು ಸಾಧ್ಯವಿಲ್ಲ. ಮಾನವರೆಲ್ಲ ಒಟ್ಟಾಗಿ ನಿನಗೆ ಹಾನಿ ಮಾಡಬಯಸಿದರೆ, ಅಲ್ಲಾಹನು ವಿಧಿಸಿದುದರ ಹೊರತು ಅವರಿಗೇನೂ ಮಾಡಲು ಸಾಧ್ಯವಿಲ್ಲ. ಬರಹದ ಶಾಯಿಯು ಒಣಗಿದೆ.”
ಪ್ರಾರ್ಥನೆ ಎಂಬುದು ಇಬಾದತ್ನ ಹೃದಯ ಮತ್ತು ಮೂಲವಾಗಿದೆ. ಅದರಲ್ಲಿ ಯಾರನ್ನೂ ಪಾಲುದಾರರನ್ನಾಗಿ ಮಾಡುವುದನ್ನು ಅಥವಾ ತನ್ನ ಮತ್ತು ತನ್ನ ದಾಸರ ನಡುವೆ ಮಧ್ಯವರ್ತಿಗಳು, ಮಧ್ಯಸ್ಥಿಕೆದಾರರನ್ನು ನಿಶ್ಚಯಿಸುವುದನ್ನು ಅಲ್ಲಾಹನು ಖಂಡಿತವಾಗಿಯೂ ಎಂದೂ ಕ್ಷಮಿಸುವುದಿಲ್ಲ. ಪ್ರವಾದಿಗಳ ಬೋಧನೆಗಳಲ್ಲಿ ಮುಖ್ಯ ವಿಷಯ ಪ್ರಾರ್ಥನೆ ಅಲ್ಲಾಹನಿಗೆ ಮಾತ್ರ ಮೀಸಲು ಎಂಬುದಾಗಿತ್ತು.
ಅಲ್ಲಾಹನೊಂದಿಗೆ ಇತರರನ್ನು ಕರೆದು ಪ್ರಾರ್ಥಿಸುವವರು ಅಹಂಕಾರಿಗಳೆಂದು ಪವಿತ್ರ ಕುರ್ಆನ್ ಹೇಳುತ್ತದೆ: ನಿಮ್ಮ ಪ್ರಭು ಹೀಗೆ ಹೇಳುತ್ತಾನೆ: “ನನ್ನನ್ನು ಪ್ರಾರ್ಥಿಸಿರಿ. ನಾನು ನಿಮ್ಮ ಪ್ರಾರ್ಥನೆಗಳನ್ನು ಸ್ವೀಕರಿಸುವೆನು. ಅಹಂಕಾರಪಟ್ಟು ನನ್ನ ದಾಸ್ಯ ಮತ್ತು ಆರಾಧನೆಯಿಂದ ವಿಮುಖರಾಗುವವರು ಖಂಡಿತವಾಗಿಯೂ ಅಪಮಾನಿತರಾಗಿ ನರಕದಲ್ಲಿ ಪ್ರವೇಶಿಸುವರು.” (40:60)
“ಅಲ್ಲಾಹನನ್ನು ಬಿಟ್ಟು, ನಿಮಗೆ ಲಾಭವನ್ನಾಗಲಿ ನಷ್ಟವನ್ನಾಗಲಿ ಉಂಟು ಮಾಡಲು ಸಮರ್ಥರಲ್ಲದ ಯಾವುದೇ ಅಸ್ತಿತ್ವವನ್ನು ಪ್ರಾರ್ಥಿಸಬೇಡಿರಿ. ನೀವು ಹಾಗೆ ಮಾಡಿದರೆ ಖಂಡಿತವಾಗಿಯೂ ಅಕ್ರಮಿಗಳಲ್ಲಾಗುವಿರಿ..” (10: 106)
ಅವರು ದಾರಿತಪ್ಪಿದವರೂ ದಾರಿ ತಪ್ಪಿಸುವವರೂ ಆಗಿದ್ದಾರೆ!
“ಅಲ್ಲಾಹನನ್ನು ಬಿಟ್ಟು, ಪುನರುತ್ಥಾನ ದಿನದವರೆಗೂ ಅವನಿಗೆ ಉತ್ತರ ಕೊಡಲಾಗದಂತಹವರನ್ನು ಪ್ರಾರ್ಥಿಸುವವನಿಗಿಂತಲೂ ಹೆಚ್ಚು ದಾರಿಗೆಟ್ಟವನು ಇನ್ನಾರಿರಬಹುದು? ಮಾತ್ರವಲ್ಲ, ಅವರಿಗಂತೂ ಪ್ರಾರ್ಥಿಸುವವರು ತಮ್ಮನ್ನು ಪ್ರಾರ್ಥಿಸುತ್ತಿದ್ದಾರೆಂಬ ಅರಿವು ಕೂಡಾ ಇಲ್ಲ.” (46: 5)
ತಾವು ಸತ್ಯದ ವಿರೋಧಿಗಳೂ, ಸತ್ಯನಿಷೇಧಿಗಳೂ ಆಗಿದ್ದೇವೆಂದು ಇಂತಹವರು ಪರಲೋಕದಲ್ಲಿ ತಪ್ಪು ಒಪ್ಪಿಕೊಳ್ಳುತ್ತಾರೆ ಮತ್ತು ಸ್ವತಃ ತಮ್ಮ ವಿರುದ್ಧವೇ ಸಾಕ್ಷ್ಯ ನುಡಿಯುತ್ತಾರೆ: ಮಿಥ್ಯಾರೋಪಗಳನ್ನು ಸೃಷ್ಟಿಸಿ ಅಲ್ಲಾಹನ ಮೇಲೆ ಹೊರಿಸುವವನಿಗಿಂತ ಅಥವಾ ಅಲ್ಲಾಹನ ಸತ್ಯವಚನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಇನ್ನಾರು? ಇಂಥವರು ನಮ್ಮಿಂದ ಕಳುಹಿಸಲ್ಪಟ್ಟ ನಮ್ಮ ದೇವಚರರು ಅವರ ಪ್ರಾಣಹರಣ ಮಾಡಲು ತಲಪುವ ಕ್ಷಣದವರೆಗೂ ವಿಧಿಲಿಖಿತದಂತೆ ತಮ್ಮ ಪಾಲನ್ನು ಪಡೆಯುತ್ತಲೇ ಇರುವರು. ಆಗ ದೇವಚರರು ಅವರೊಡನೆ, “ನೀವು ಅಲ್ಲಾಹನ ಬದಲಿಗೆ ಕೂಗಿ ಕರೆಯುತ್ತಿದ್ದ ನಿಮ್ಮ ಆರಾಧ್ಯರು ಈಗೆಲ್ಲಿದ್ದಾರೆ?” ಎಂದು ಕೇಳುವರು. ಅವರು, “ಅವರೆಲ್ಲರೂ ಕಾಣೆಯಾಗಿದ್ದಾರೆ?” ಎನ್ನುವರು. ನಾವು ನಿಜಕ್ಕೂ ಸತ್ಯ ಧಿಕ್ಕಾರಿಗಳಾಗಿದ್ದೆವೆಂದು ಅವರು ತಮ್ಮ ವಿರುದ್ಧ ತಾವೇ ಸಾಕ್ಷಿ ಹೇಳುವರು. (7:37)
ಅಲ್ಲಾಹೇತರರೊಂದಿಗೆ ಪ್ರಾರ್ಥಿಸಿದವರೂ, ಪ್ರಾರ್ಥಿಸಲ್ಪಟ್ಟವರೂ ಒಂದೇ ರೀತಿ ಅಶಕ್ತರೂ ದುರ್ಬಲರೂ ಆಗಿದ್ದಾರೆಂದು ಪವಿತ್ರ ಕುರ್ಆನ್ ಉದಾಹರಣೆಯೊಂದಿಗೆ ಸ್ಪಷ್ಟಪಡಿಸಿದೆ: “ನೀವು ಅಲ್ಲಾಹನನ್ನು ಬಿಟ್ಟು ಯಾವ ಆರಾಧ್ಯರನ್ನು ಪ್ರಾರ್ಥಿಸುತ್ತೀರೋ ಅವರೆಲ್ಲರೂ ಒಟ್ಟಾಗಿ ಒಂದು ನೊಣವನ್ನೂ ಸೃಷ್ಟಿಸಲಾರರು. ಮಾತ್ರವಲ್ಲ ನೊಣವು ಅವರಿಂದೇನನ್ನಾದರೂ ಕಸಿದು ಕೊಂಡೊಯ್ದರೆ ಅವರಿಗೆ ಅದನ್ನು ಬಿಡಿಸಿಕೊಳ್ಳಲಿಕ್ಕೂ ಸಾಧ್ಯವಾಗದು. ಸಹಾಯಾರ್ಥಿಗಳೂ ದುರ್ಬಲರು, ಯಾರಿಂದ ಸಹಾಯ ಬೇಡಲಾಗುತ್ತದೋ ಅವರೂ ದುರ್ಬಲರು.” (22: 73)
IslamKannada News Portal
