ಮಿಷಲ್
ಉಮ್ರಾ ಕರ್ಮ ಪೂರ್ತಿಯಾಗಬೇಕಾದರೆ ಒಂದೋ ಕೇಶ ಮುಂಡನ ಮಾಡಬೇಕು ಅಥವಾ ಕೂದಲನ್ನು ಕತ್ತರಿಸಿಕೊಳ್ಳಬೇಕು. ಇದು ಕಡ್ಡಾಯ. ಆದ್ದರಿಂದಲೇ ಮಕ್ಕಾದ ಹೊರಗಡೆ ಇದಕ್ಕಾಗಿಯೇ ಧಾರಾಳ ಕ್ಶೌರದ ಅಂಗಡಿಗಳಿವೆ. ಅವುಗಳು ಓರ್ವ ವ್ಯಕ್ತಿಗೆ ಸುಮಾರು ಭಾರತದ 250 ರೂಪಾಯಿಯನ್ನು ನಿಗದಿಪಡಿಸಿ ಕ್ಷೌರ ಮಾಡುತ್ತವೆ ಹೆಚ್ಚಿನ ಬಾರಿ ಕ್ಷೌರ ದಂಗಡಿಯ ಎದುರು ಸರತಿ ಸಾಲು ಇರುತ್ತೆ ಹಾಗೆಯೇ ಹರಮ್ ನ ವರಾಂಡದಲ್ಲಿ ಕತ್ತರಿಯನ್ನು ಹಿಡಿದು ನಿಂತಿರುವವರೂ ಇರುತ್ತಾರೆ. ಕೂದಲಿನ ಸಣ್ಣದೊಂದು ಭಾಗವನ್ನ ಕತ್ತರಿಸಿ. ಎಸೆದರೂ ಕೂದಲು ಕತ್ತರಿಸಿದ ಕಡ್ಡಾಯ ಕರ್ಮ ಪೂರ್ತಿಯಾಗುವುದರಿಂದ ಹೀಗೂ ಮಾಡುವವರು ಇರುತ್ತಾರೆ ಮತ್ತು ಈ ಕತ್ತರಿ ನೀಡಿರುವುದಕ್ಕಾಗಿ ಹಣ ಪಡೆದುಕೊಳ್ಳುತ್ತಾರೆ. ಹೀಗೆ ಕತ್ತರಿಸಲಾದ ಕೂದಲನ್ನು ಹಾಕುವುದಕ್ಕಾಗಿ ಅಲ್ಲೇ ಡಬ್ಬಗಳೂ ಇರುತ್ತವೆ. ಇದೀಗ ಸೌದಿ ಆಡಳಿತ ಒಂದು ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ. ರಮಝಾನ್ ನ ಆರಂಭದ ದಿನದಿಂದಲೇ ಮೊಬೈಲ್ ಕ್ಷೌರದಂಗಡಿಯನ್ನ ಪ್ರಾರಂಭಿಸಿದೆ. ಮಾತ್ರವಲ್ಲ ಉಚಿತವಾಗಿಯೇ ಈ ಸೇವೆಯನ್ನು ನೀಡಲಾಗುತ್ತದೆ.
ಹರಮ್ ನ ಆವರಣದಲ್ಲಿ ಯಾತ್ರಿಕರ ಹತ್ತಿರವೇ ತೆರಳಿ ಈ ಕ್ಷೌರವನ್ನು ಮಾಡುವ ಈ ಮೊಬೈಲ್ ಬಾರ್ಬರ್ ರಮಝಾನ್ ಬಳಿಕವೂ ಇರುತ್ತದೆಯೇ ಅನ್ನುವುದು ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ಹರಮ್ ನ ಹೊರಗಡೆ ಒಂದಷ್ಟು ದೂರ ನಡೆದು ಕ್ಷೌರ ಮಾಡಿಸಿಕೊಳ್ಳುವುದು ರೂಢಿ. ಆದರೆ ಇದೀಗ ಹರಂ ಆವರಣದಲ್ಲೇ ಈ ಸೌಲಭ್ಯ ಒದಗಿರುವುದು ಯಾತ್ರಿಕರಿಗಂತೂ ಬಹಳ ಸುಲಭವಾಗಿದೆ. ಅದರಲ್ಲೂ ಉಚಿತವಾಗಿಯೇ ಈ ಸೇವೆ ನೀಡುತ್ತಿರುವುದು ಇನ್ನಷ್ಟು ಅನುಕೂಲಕರವಾಗಿದೆ.
ಆದರೆ ಹರಮ್ ನ ಹೊರಗಡೆ ಈ ಯಾತ್ರಿಕರನ್ನೇ ನಂಬಿ ಕ್ಷೌರದಂಗಡಿ ಹಾಕಿರುವವರ ಪಾಲಿಗೆ ಇದು ಬಹಳ ದುಬಾರಿಯಾಗಬಹುದು. ಅವರ ಬಳಿಗೆ ಕ್ಷೌರ ಮಾಡಿಸಿಕೊಳ್ಳಲು ಉಮ್ರಾ ಯಾತ್ರಿಕರು ಹೋಗದೆ ಇರುವ ಸಾಧ್ಯತೆಯೂ ಇದೆ. ಹೀಗಾದರೆ ಅವರ ಬದುಕಿಗೂ ತೊಂದರೆ ಆಗಬಹುದು ಎಂಬ ಅಭಿಪ್ರಾಯವೂ ಇದೆ. ಆ ಕಾರಣಕ್ಕಾಗಿ ಈ ಮೊಬೈಲ್ ಕ್ಷೌರ ದ ಅಂಗಡಿಯನ್ನು ರಮಝಾನ್ ತಿಂಗಳಿಗೆ ಮಾತ್ರ ಸೀಮಿತಗೊಳಿಸಬೇಕು ಮತ್ತು ಉಳಿದ ದಿನಗಳಲ್ಲಿ ಈ ಹಿಂದಿನದ್ದೇ ರೀತಿ ನೀತಿಯನ್ನು ಮುಂದುವರಿಸಬೇಕು ಅನ್ನುವ ಕೂಗು ಕೂಡ ಕೇಳಿ ಬಂದಿದೆ.
ರಮಝಾನ್ ನಲ್ಲಿ ಕ್ಷೌರದಂಗಡಿಗೆ ನಡೆದುಕೊಂಡು ಹೋಗುವುದರಿಂದ ಯಾತ್ರಿಕರಲ್ಲಿ ಆಯಾಸ ಮತ್ತು ಬಾಯಾರಿಕೆ ಉಂಟಾಗುವ ಸಾಧ್ಯತೆ ಇದೆ. ಈ ಬಾರಿ ಸೌದಿಯಲ್ಲಿ ತಂಪಿನ ವಾತಾವರಣ ಇದ್ದರೂ ಮುಂದಿನ ದಿನಗಳಲ್ಲಿ ಬಿರು ಬಿಸಿಲು ಬರಲಿದೆ ಹೀಗಿರುವಾಗ ಯಾತ್ರಿಕರಿಗೆ ದೈಹಿಕ ಆಯಾಸ ಆಗದೆ ಇರುವುದಕ್ಕೆ ರಮಝಾನ್ ತಿಂಗಳಲ್ಲಿ ಈ ಮೊಬೈಲ್ ಬಾರ್ಬರ್ ಅನುಕೂಲಕರ ಎಂದು ಹೇಳಲಾಗಿದೆ.
ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಉಮ್ರ ನಿರ್ವಹಿಸುವುದಕ್ಕೆ ಮಸ್ಜಿದುಲ್ ಹರಾಂಗೆ ಬರ್ತಾರೆ. ಕಾಬಾ ಕ್ಕೆ ತವಾಫ್ ಮಾಡ್ತಾರೆ ಮತ್ತು ತಲೆ ಕೂದಲನ್ನು ಕತ್ತರಿಸುತ್ತಾರೆ ಅಥವಾ ಕೇಶ ಮುಂಡನ ಮಾಡಿಸಿಕೊಳ್ಳುತ್ತಾರೆ. ಇದೀಗ ಈ ಸೇವೆಯನ್ನು ಮಕ್ಕಾದ ಆವರಣದಲ್ಲೇ ಉಚಿತವಾಗಿಯೇ ನೀಡುತ್ತಿರುವುದು ಯಾತ್ರಿಕರ ಪಾಲಿಗೆ ಖುಷಿಯ ಸಂಗತಿ. ಆದರೆ ತುಸು ದೂರದಲ್ಲಿ ಕ್ಷೌರದಂಗಡಿ ಹಾಕಿಕೊಂಡಿರುವವರ ಪಾಲಿಗೆ ದುಃಖದ ಸಂಗತಿ ಎಂದು ಹೇಳಲಾಗುತ್ತಿದೆ.
ಏನೇ ಇದ್ದರೂ ರಮಝಾನ್ ನಲ್ಲಿ ಉಚಿತ ಸೇವೆಯನ್ನು ನೀಡಲು ಹೊರಟಿರುವ ಸೌದಿ ಆಡಳಿತದ ಬಗ್ಗೆ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
IslamKannada News Portal
