✍️ ಸಮೀನಾ ಅಫ್ಶಾನ್
ಸಂಪಾದಕರು, `ಔರ’ ಇ ಮ್ಯಾಗಝೀನ್
ಮಹಿಳೆಯರ ಕುರಿತು ಕುರ್ಆನಿನ ನಿಲುವೇನು ಎಂಬುದು ಆಗಾಗ್ಗೆ ಚರ್ಚೆಗೆ ಬರುವ ವಿಷಯ. ಮಹಿಳೆಯರ ಘನತೆ, ಅವರ ಗೌರವ, ಅವರ ಸ್ಥಾನಮಾನ, ಅವರ ಸಬಲೀಕರಣ, ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ, ಲಿಂಗ ಸಮಾನತೆ ಇತ್ಯಾದಿಗಳ ಕುರಿತು ಕುರ್ಆನಿನಲ್ಲಿ ಸ್ಪಷ್ಟ ಪ್ರಸ್ತಾಪಗಳು ಬಂದಿರುವುದರಿಂದಲೇ ಆ ವಿಷಯ ವ್ಯಾಪಕವಾಗಿ ಚರ್ಚೆಗೆ ಬರುತ್ತಿರುವುದೇನೋ. ಮಹಿಳೆ ಹಕ್ಕುಗಳಿಗೆ ಅರ್ಹಳೋ ಎಂಬುದು ಅನಾದಿ ಕಾಲದಿಂದಲೇ ತೀರ್ಮಾನಕ್ಕೆ ಬಾರದ ಪ್ರಸಂಗವಾಗಿರುವಾಗ ಅವರ ಸ್ಥಿತಿಗತಿಗಳು ಅಧಪತನಕ್ಕೆ ಇಳಿದಂತಹ ಕಾಲದಲ್ಲಿ ಪವಿತ್ರ ಕುರ್ಆನ್ ಮಹಿಳಾ ಹಕ್ಕುಗಳ ಕುರಿತ ಒಂದು ಕ್ರಾಂತಿಕಾರಿ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿತು. ಅದು ಅವರ ಅಸ್ಮಿತೆ, ಸ್ವಾಯತ್ತತೆ, ಆಧ್ಯಾತ್ಮಿಕ ಸಮಾನತೆ ಹಾಗೂ ಕುಟುಂಬ ಮತ್ತು ಸಾಮಾಜದಲ್ಲಿ ಅವರ ಅಮೂಲ್ಯ ಪಾತ್ರದ ಬಗ್ಗೆ ಬಹುಮುಖಿ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದಲ್ಲದೆ ಅವರ ಹಕ್ಕುಗಳನ್ನು ಸಮೃದ್ಧವಾಗಿ ಪ್ರತಿಪಾದಿಸುತ್ತದೆ.
ಕುರ್ಆನಿನಲ್ಲಿ ಸಮಾನತೆಯ ಕಲ್ಪನೆ
ಇಂದು ಸ್ತ್ರೀ-ಪುರುಷ ಸಮಾನತೆಯ ಕುರಿತಂತೆ ಅನೇಕಾರು ನರೇಟಿವ್ಗಳು ಅಸ್ತಿತ್ವದಲ್ಲಿವೆ. ಎಲ್ಲಿ ನೋಡಿದರೂ ಸಮಾನತೆಯ ಹೋರಾಟಗಾರರು. ಯಾವುದರಲ್ಲಿ ಸಮಾನತೆ ಬೇಕು ಎಂಬ ಸ್ಪಷ್ಟತೆ ಇಲ್ಲ. ಎಲ್ಲೆಂದರಲ್ಲೂ ಸಮಾನರಾಗಬೇಕೆಂಬ ಗುಂಗಿನಲ್ಲಿ ತಮ್ಮ ಅಸ್ಮಿತೆಯನ್ನೇ ಎಲ್ಲೋ ಕಳೆದ ಮಹಿಳೆಯರು ಹೇರಳ ಸಂಖ್ಯೆಯಲ್ಲಿದ್ದಾರೆ.
ಪವಿತ್ರ ಕುರ್ಆನ್ ಎಲ್ಲರೂ ಹುಡುಕುತ್ತಿರುವ ಆ ಸಮಾನತೆಯನ್ನು ಬಹಳ ಸುಂದರವಾಗಿ ಪ್ರತಿಪಾದಿಸಿದೆ.
“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು.” (ಕುರ್ಆನ್- 4: 1) ಇಲ್ಲಿ ಸ್ತ್ರೀ-ಪುರುಷರಿಬ್ಬರೂ ಒಂದೇ ಆತ್ಮದಿಂದ ಸೃಷ್ಟಿಸಲ್ಪಟ್ಟವರು ಎಂದು ಹೇಳಿ ಅಂತರ್ಗತವಾಗಿಯೇ ಅವರ ಸಮಾನರಾಗಿರುವುದನ್ನು ತೋರಿಸುತ್ತದೆ.
ಆದಿಮಾನವ ಆದಮ್(ಅ) ಮತ್ತು ಅವರ ಪತ್ನಿಯ ಕುರಿತ ಇತಿಹಾಸವನ್ನು ವಿವರಿಸುವಾಗಲೇ ಲಿಂಗ ಸಮಾನತೆಯ ಅಪ್ರತಿಮ ಕಲ್ಪನೆಯನ್ನು ಕುರ್ಆನ್ ಬಿಂಬಿಸಿದೆ. ಇಬ್ಬರನ್ನೂ ಸೃಷ್ಟಿಸಿ, ಅವರಿಗೆ ಸ್ವರ್ಗೋದ್ಯಾನದಲ್ಲಿರಲು ಅನುವು ಮಾಡಿ ಕೊಟ್ಟು, ಒಂದು ನಿರ್ದಿಷ್ಟ ವೃಕ್ಷದ ಬಳಿಗೆ ಹೋಗಬೇಡಿ ಎಂದು ತಾಕೀತು ಮಾಡಿದರೂ ಅವರಿಬ್ಬರು ದೇವನ ಆಜ್ಞೋಲ್ಲಂಘನೆ ಮಾಡಿದಾಗ ಇಬ್ಬರನ್ನು ಒಂದೇ ರೀತಿಯಲ್ಲಿ ಗದರಿಸಿ, ಅವರಿಗೆ ಕ್ಷಮಾಪಣೆಯ ಪಾಠವನ್ನು ಕಲಿಸಿದಾಗ ಅವರೀರ್ವರೂ ಕ್ಷಮೆ ಯಾಚಿಸಿದರು, ಈರ್ವರನ್ನೂ ಕ್ಷಮಿಸಲಾಯಿತು ಮತ್ತು ಭೂಮಿಯಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಲು ಕಳುಹಿಸಲಾಯಿತು ಎಂದು ಕುರ್ಆನಿನ ಅನೇಕ ವಚನಗಳು ಹೇಳುತ್ತವೆ. ಹೀಗೆ ಲಿಂಗ ಸಮಾನತೆ ಎಂಬುದು ಮಾನವನ ಸೃಷ್ಟಿಯ ಪ್ರಾರಂಭದಿಂದಲೇ ದೇವನು ನೀಡಿರುವ ಅನುಗ್ರಹವಾಗಿದೆ.
ಮಹಿಳೆಯರು ಮತ್ತು ಪುರುಷರ ಆಧ್ಯಾತ್ಮಿಕ ಸಮಾನತೆಯನ್ನು ಕುರ್ಆನ್ ಬಹಳ ಸ್ಪಷ್ಟವಾಗಿ ವಿವರಿಸುತ್ತದೆ. 33 ನೆಯ ಅಧ್ಯಾಯದ 35ನೆಯ ವಚನದಲ್ಲಿ ಸ್ತ್ರೀ-ಪುರುಷರು ಲಿಂಗ ಬೇಧವಿಲ್ಲದೆ ತಮ್ಮ ಸದ್ಗುಣಗಳ ಪ್ರತಿಫಲಕ್ಕೆ ಅರ್ಹರು ಎಂದು ಬಹಳ ಸುದೀರ್ಘವಾಗಿ ವಿವರಿಸುತ್ತದೆ. ಅದರೊಂದಿಗೆ ದೇವನ ಬಳಿ ಅವರಿಬ್ಬರೂ ಸಮಾನವಾಗಿಯೇ ಜವಾಬ್ದಾರರು ಎಂಬ ಕಲ್ಪನೆಯನ್ನು ಕೂಡಾ ಅದು ಮುಂದಿರಿಸುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು
ಅಭಿವ್ಯಕ್ತಿ ಸ್ವಾತಂತ್ರ್ಯ ಮನುಷ್ಯನ ಮೂಲಭೂತ ಹಕ್ಕುಗಳಲ್ಲೊಂದಾಗಿದೆ. ಯಾವುದೇ ವಿಷಯದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಅಥವಾ ತನ್ನ ಅಸಮ್ಮತಿಯನ್ನು ಸೂಚಿಸುವ ಅವಕಾಶ ಎಲ್ಲರಿಗೂ ಸಿಗಬೇಕು. ಕುರ್ಆನ್ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಅನೇಕ ಉಪಮೆಗಳನ್ನು ತೋರಿಸುತ್ತದೆ.
ಫಿರ್ಔನನ ಪತ್ನಿ ತನ್ನ ಪತಿಯ ದೌರ್ಜನ್ಯಗಳ ಬಗ್ಗೆ ಅರಿತು ಕೂಡಾ ನಿರ್ಭಯವಾಗಿ ಏಕದೇವ ವಿಶ್ವಾಸದ ಘೋಷಣೆ ಮಾಡಿದ್ದನ್ನು ಕುರ್ಆನ್ ತಿಳಿಸುತ್ತದೆ. “ಅವರು (ಫಿರ್ಔನನ ಪತ್ನಿ), “ನನ್ನ ಪ್ರಭೂ, ನನಗಾಗಿ ನಿನ್ನ ಸ್ವರ್ಗದಲ್ಲೊಂದು ಭವನವನ್ನು ನಿರ್ಮಿಸಿಕೊಡು ಮತ್ತು ನನ್ನನ್ನು ಫಿರ್ಔನನಿಂದಲೂ ಅವನ ಕರ್ಮಗಳಿಂದಲೂ ರಕ್ಷಿಸು ಮತ್ತು ಅಕ್ರಮಿ ಜನಾಂಗದಿಂದ ನನ್ನನ್ನು ಪಾರುಗೊಳಿಸು” ಎಂದು ಪ್ರಾರ್ಥಿಸಿದ ಸಂದರ್ಭ- (ಕುರ್ಆನ್- 66: 11)
ಕುರ್ಆನಿನ 58ನೆಯ ಅಧ್ಯಾಯದ ಹೆಸರು ಮುಜಾದಿಲಃ- ಅರ್ಥಾತ್ ‘ವಾದ’. ಇಲ್ಲಿ ಓರ್ವ ಮಹಿಳೆ ಪ್ರವಾದಿ ಮುಹಮ್ಮದ್(ಸ)ರೊಡನೆ ವಾದ ಮಾಡುತ್ತಿರುವ ಕುರಿತು ಉಲ್ಲೇಖವಿದೆ. (ಪ್ರವಾದಿಯವರೇ(ಸ)) ನಿಮ್ಮೊಡನೆ ತನ್ನ ಪತಿಯ ವಿಷಯದಲ್ಲಿ ವಾದಿಸುತ್ತಿರುವ ಹಾಗೂ ಅಲ್ಲಾಹನೊಡನೆ ಮೊರೆಯಿಡುತ್ತಲಿರುವ ಸ್ತ್ರೀಯ ಮಾತನ್ನು ಅಲ್ಲಾಹನು ಆಲಿಸಿದನು. ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದಾನೆ. ಅವನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ. (ಕುರ್ಆನ್- 58: 1) ಖೌಲಾ ಬಿಂತ್ ಸಅ’ಲಬಾ ಎಂಬ ಆ ಸಹಾಬಿ ಮಹಿಳೆ ತನ್ನ ಪತಿಯ ಒಂದು ಘೋರ ದುರ್ನಡತೆ ಮತ್ತು ಅಗೌರವದ ನಡೆಯ ಕುರಿತು ದೂರು ನೀಡಲು ಬಂದಿದ್ದರು. ಕುರ್ಆನ್ ಈ ಅಧ್ಯಾಯದಲ್ಲಿ ಅವರ ಮೊರೆಯನ್ನು ದೇವನು ಆಲಿಸಿರುವನು ಎಂದು ಹೇಳಿ ಆ ದುರ್ನಡೆತಯನ್ನು ಖಂಡಿಸಿ ಅದಕ್ಕೆ ಪರಿಹಾರವನ್ನು ಸೂಚಿಸಿತು. ಆ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯ, ಅಸಮ್ಮತಿ ವ್ಯಕ್ತಪಡಿಸುವ ಅವಕಾಶ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಕ್ಕನ್ನು ಕುರ್ಆನ್ ಇಲ್ಲಿ ಎತ್ತಿ ಹಿಡಿಯುವುದನ್ನು ಕಾಣಬಹುದು.
ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ
ಆರ್ಥಿಕ ಆಸರೆಗಾಗಿ ಮಹಿಳೆ ಶೋಷಿತಳಾಗುವುದು, ಅದರಿಂದಾಗಿ ಆಕೆಯನ್ನು ಗುಲಾಮಳಾಗಿ ನೋಡುವುದು, ವರದಕ್ಷಿಣೆಯ ಹೆಸರಲ್ಲಿ ಆಕೆಯಿಂದ ಹಣ ದೋಚುವುದು ಮತ್ತು ಅದಕ್ಕಾಗಿ ಆಕೆಯನ್ನು ಕೊಲ್ಲಲೂ ಹಿಂಜರಿಯದೆ ಇರುವುದು, ಪಿತ್ರಾರ್ಜಿತ ಸೊತ್ತಿನಲ್ಲಿ ಆಕೆಗೆ ಪಾಲಿಲ್ಲ ಎಂದು ವಾದಿಸುವುದು, ಆರ್ಥಿಕವಾಗಿ ಆಕೆ ಅವಲಂಬಿತಳು ಎಂಬ ಕಾರಣ ಹೇಳಿ ಆಕೆಯನ್ನು ಮನೆ ಕೆಲಸದಾಳಾಗಿ ಪರಿಗಣಿಸುವುದು, ಮಹಿಳೆ ಉದ್ಯೋಗಸ್ಥೆಯಾದರೂ ಆಕೆಯ ಸಂಪಾದನೆಯನ್ನು ಕಬಳಿಸುವುದು ಇತ್ಯಾದಿಗಳು ನಮ್ಮ ಸಮಾಜದಲ್ಲಿ ಸಾಧಾರಣವಾಗಿ ಕಂಡುಬರುವಂತಹ ಕೆಡುಕುಗಳು.
ಪವಿತ್ರ ಕುರ್ಆನಿನ ಬೋಧನೆಗಳಲ್ಲಿ ಮಹಿಳೆಯ ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡುವ ಅದೆಷ್ಟೋ ಸಂದರ್ಭಗಳು ಮತ್ತು ಸೂಕ್ತಗಳಿವೆ. ಮಹಿಳೆ ಸಂಪತ್ತನ್ನು ಗಳಿಸಲು, ಅದನ್ನು ತನ್ನ ಅಧೀನದಲ್ಲಿರಿಸಲು, ಅದರಿಂದ ಖರ್ಚು ಮಾಡಲು, ಅದನ್ನು ದಾನವೀಯಲು ಮತ್ತು ಅದರ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲು ಸ್ವತಂತ್ರಳಾಗಿದ್ದಾಳೆ.
ವಿವಾಹದ ಸಂದರ್ಭದಲ್ಲಿ ವರನು ವಧುವಿಗೆ ಉಡುಗೊರೆ (ಮಹರ್) ನೀಡಬೇಕೆಂದು ಕುರ್ಆನ್ ಆದೇಶಿಸುತ್ತದೆ. ಆ ಉಡುಗೊರೆಗೆ ಕನಿಷ್ಠ ಅಥವಾ ಗರಿಷ್ಟ ಮಿತಿಯನ್ನು ಇರಿಸಲಿಲ್ಲವಾದರೂ ಧಾರಾಳವಾಗಿ ನೀಡಬೇಕೆಂದು ಕುರ್’ಆನ್ ಹೇಳುತ್ತದೆ. “ಸ್ತ್ರೀಯರಿಗೆ `ವಿವಾಹಧನ’ ವನ್ನು ಆತ್ಮ ಸಂತೋಷದಿಂದ (ಕಡ್ಡಾಯ ವೆಂದರಿತು) ಪಾವತಿ ಮಾಡಿರಿ.” (ಕುರ್ಆನ್- 4: 4) ಆ ಸೊತ್ತಿಗೆ ಅವಳೇ ಒಡತಿ. ಒಂದು ವೇಳೆ ಅದರಲ್ಲಿ ಏನಾದರೂ ಕಡಿತ ಮಾಡುವುದಿದ್ದರೆ ಅದರಲ್ಲಿ ಅವಳದೇ ಅಧಿಕಾರ. “ಅವರು (ಪತ್ನಿಯರು) ತಮ್ಮಿಷ್ಟದಿಂದ ವಿವಾಹ ಧನದ ಒಂದಂಶವನ್ನು ನಿಮಗೆ ಬಿಟ್ಟು ಕೊಟ್ಟರೆ, ನೀವು ಅದನ್ನು ಸಂತೋಷದಿಂದ ಅನುಭೋಗಿಸಿಕೊಳ್ಳಬಹುದು.” (ಕುರ್ಆನ್- 4: 4) ಅದನ್ನು ವಿವಾಹ ವಿಚ್ಛೇದನೆಯ ಸಂದರ್ಭದಲ್ಲೂ ಅವಳಿಂದ ಹಿಂಪಡೆಯುವಂತಿಲ್ಲ. “ಬಿಡುಗಡೆಗೊಳಿಸುವಾಗ ನೀವು ಅವರಿಗೆ (ಪತ್ನಿಯರಿಗೆ) ಕೊಟ್ಟಿದ್ದ ಸಾಧನಗಳ ಪೈಕಿ ಏನನ್ನೂ ಮರಳಿ ಪಡೆಯುವುದು ನಿಮಗೆ ಧರ್ಮಸಮ್ಮತ ಅಲ್ಲ.” (ಕುರ್ಆನ್- 2:229).
ವಾರೀಸು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕುರ್’ಆನ್ ಆದೇಶ ನೀಡುತ್ತದೆ ಮತ್ತು ಅದರಲ್ಲಿ ಮಹಿಳೆಯರ ಹಕ್ಕನ್ನು ಖಚಿತ ಪಡಿಸುತ್ತದೆ. “ಮಾತಾಪಿತರೂ ಆಪ್ತ ಬಂಧುಗಳೂ ಬಿಟ್ಟು ಹೋದ ಸಂಪತ್ತಿನಲ್ಲಿ ಪುರುಷರಿಗೆ ಪಾಲಿದೆ. ಮಾತಾಪಿತರೂ ಆಪ್ತ ಬಂಧುಗಳೂ ಬಿಟ್ಟು ಹೋದ ಸಂಪತ್ತಿನಲ್ಲಿ ಸ್ತ್ರೀಯರಿಗೂ ಪಾಲಿದೆ. ಕಡಿಮೆ ಇರಲಿ ಅಥವಾ ಹೆಚ್ಚಿರಲಿ ಈ ಪಾಲು (ಅಲ್ಲಾಹನ ಕಡೆಯಿಂದ) ನಿಶ್ಚಿತವಾಗಿದೆ.” (ಕುರ್ಆನ್- 4:7) ಇದರ ನಂತರದ ಸೂಕ್ತಗಳಲ್ಲಿ ಮಹಿಳೆಗೆ ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ವಾರೀಸು ಸೊತ್ತಿನ ಪಾಲಿನ ಬಗ್ಗೆ ಸವಿಸ್ತಾರವಾದ ವಿವರಣೆ ಇದೆ. ಈ ಸೂಕ್ತಗಳಲ್ಲಿ ಕಾಣಸಿಗುವ ವಿಶೇಷತೆ ಏನೆಂದರೆ ಸಾಧಾರಣವಾಗಿ ನಮ್ಮ ಭಾಷೆಯಲ್ಲಿ `ಪಿತ್ರಾರ್ಜಿತ ಸೊತ್ತು’
ಎಂದು ನಾವು ಏನನ್ನು ಕರೆಯುತ್ತೇವೆಯೋ ಅದನ್ನು ಕುರ್ಆನ್ `ಮಾತಾಪಿತರು ಬಿಟ್ಟು ಹೋದ ಸೊತ್ತು’ ಎಂದು ಕರೆದು ಮಾತೆಯೂ ಸೊತ್ತಿನ ಒಡತಿ ಎಂಬುದನ್ನು ಸೂಕ್ಷ್ಮವಾಗಿ ಸೂಚಿಸಿದೆ.
ವಿವಾಹ ಮತ್ತು ವಿಚ್ಛೇದನೆಯ ಹಕ್ಕುಗಳು
ವಿವಾಹ ಮತ್ತು ವಿವಾಹ ವಿಚ್ಛೇದನೆಯ ಕಾನೂನು ಇಷ್ಟೊಂದು ಸಮಗ್ರವಾಗಿ ಪ್ರಸ್ತುತಪಡಿಸುವ ಇನ್ನೊಂದು ಧರ್ಮಗ್ರಂಥ ಈ ಲೋಕದಲ್ಲಿಲ್ಲ. ಈ ವಿಷಯದ ಕುರಿತಿರುವ ಸೂಕ್ಷ್ಮಾತಿಸೂಕ್ಷ್ಮ ವಿಷಯವನ್ನು ಕುರ್ಆನ್ ಸ್ಪಷ್ಟಪಡಿಸಿರುವಂತೆ ಲೋಕದ ಯಾವುದೇ ಕಾನೂನು ಇವತ್ತಿಗೂ ಕೂಡಾ ಮಾಡಿಲ್ಲ ಎಂದು ಹೇಳಿದರೂ ತಪ್ಪಾಗಲಾರದು.
ವಿವಾಹ ಬಂಧನವನ್ನು ಪವಿತ್ರ ಕುರ್ಆನ್ ಒಂದು ಸುಭದ್ರ ಕರಾರು ಎಂದು ಉಲ್ಲೇಖಿಸಿದೆ. ಸುಗಮ ವೈವಾಹಿಕ ಜೀವನದ ಸೂತ್ರಗಳನ್ನೂ ಕಲಿಸಿದೆ. ಮಹಿಳೆಯರ ಹಕ್ಕಿನ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದೆ. “ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆಯೇ ಸ್ತ್ರೀಯರಿಗೂ ಪುರುಷರ ಮೇಲೆ ನ್ಯಾಯೋಚಿತ ಹಕ್ಕು ಇದೆ” (ಕುರ್ಆನ್- 2: 228)
ಯಾವುದೇ ಕಾರಣದಿಂದ ದಂಪತಿಗಳು ಜೊತೆಯಾಗಿ ಜೀವಿಸಲು ಸಾಧ್ಯವೇ ಇಲ್ಲ ಎಂದಾದಲ್ಲಿ ಅದರಿಂದ ಹೊರನಡೆಯುವ ಸರಿಯಾದ ವಿಧಾನವನ್ನೂ ಹೇಳಿಕೊಟ್ಟಿದೆ. ವಿವಾಹ ವಿಚ್ಛೇದನೆಯ ಹಕ್ಕನ್ನು ಕುರ್ಆನ್ ಪುರುಷರಂತೆ ಮಹಿಳೆಯರಿಗೂ ನೀಡಿದೆ. “ದಂಪತಿಗಳು ಅಲ್ಲಾಹನ ಮೇರೆಗಳಲ್ಲಿ ನೆಲೆನಿಲ್ಲಲಾರರೆಂದು ಶಂಕೆಯುಂಟಾದಾಗ ಸ್ತ್ರೀಯು ತನ್ನ ಪುರುಷನಿಗೆ (ಪತಿಗೆ) ಪರಿಹಾರ (ಮಹರ್) ಕೊಟ್ಟು ಬಿಡುಗಡೆ ಹೊಂದುವುದರಲ್ಲಿ ದೋಷವಿಲ್ಲ.” (ಕುರ್ಆನ್- 2:229)
ಒಬ್ಬ ಪುರುಷ ತನ್ನ ಪತ್ನಿಗೆ ವಿಚ್ಛೇದನೆ ನೀಡುವಾಗ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ನೋಡುವಾಗ ಕುರ್ಆನ್ ಮಹಿಳೆಯರ ಹಕ್ಕುಗಳನ್ನು ಅದೆಷ್ಟರ ಮಟ್ಟಿಗೆ ಎತ್ತಿ ಹಿಡಿಯುತ್ತದೆ ಎಂಬುದು ಭಾಸವಾಗುತ್ತದೆ.
ವಿವಾಹ ವಿಚ್ಛೇದನೆಯಾದಲ್ಲಿ ಮಹಿಳೆಯ ಆರ್ಥಿಕ ಸುಭದ್ರತೆಯನ್ನು ಪವಿತ್ರ ಕುರ್’ಆನ್ ಎತ್ತಿ ಹಿಡಿಯುತ್ತದೆ. “ತಲಾಕ್ ಕೊಡಲ್ಪಟ್ಟ ಸ್ತ್ರೀಯರಿಗೆ ನ್ಯಾಯೋಚಿತವಾದ ಸೊತ್ತನ್ನು ಕೊಟ್ಟು ಬೀಳ್ಕೊಡಬೇಕು. ಇದು ಧರ್ಮನಿಷ್ಠರ ಮೇಲಿನ ಬಾಧ್ಯತೆಯಾಗಿರುತ್ತದೆ.”(ಕುರ್ಆನ್- 2:241) ಆಕೆಯನ್ನು ಸತಾಯಿಸಬಾರದೆಂದು ಪದೇ ಪದೇ ಎಚ್ಚರಿಕೆಯನ್ನು ನೀಡಲಾಗಿದೆ. “ನೀವು ಸ್ತ್ರೀಯರಿಗೆ ತಲಾಕ್ ಕೊಟ್ಟು ಅವರ `ಇದ್ದತ್’ ಪೂರ್ಣಗೊಳ್ಳಲು ಸಮೀಪಿಸಿದಾಗ ಅವರನ್ನು ನ್ಯಾಯೋಚಿತ ರೀತಿಯಲ್ಲಿ ಇರಿಸಿಕೊಳ್ಳಿರಿ ಇಲ್ಲವೆ ನ್ಯಾಯೋಚಿತ ರೀತಿಯಿಂದ ಬಿಡುಗಡೆಗೊಳಿಸಿರಿ. ಕೇವಲ ಸತಾಯಿಸಲಿಕ್ಕಾಗಿ ಅವರನ್ನು ತಡೆದಿರಿಸಿಕೊಂಡರೆ ಅದು ಅತಿಕ್ರಮವಾಗುವುದು. ಹೀಗೆ ಮಾಡಿದಾತನು ವಾಸ್ತವದಲ್ಲಿ ತನ್ನ ಮೇಲೆ ತಾನೇ ಅಕ್ರಮವೆಸಗುವನು. ಅಲ್ಲಾಹನ ಸೂಕ್ತಗಳನ್ನು ಅಪಹಾಸ್ಯ ಮಾಡಬೇಡಿರಿ.” (ಕುರ್ಆನ್- 2: 231)
ಆಕೆ ಹಾಲುಣಿಸುವ ತಾಯಿಯಾಗಿದ್ದರೆ ಆಕೆಯ ಖರ್ಚಿನ ಹೊಣೆಯ ಬಗ್ಗೆ ವಿಶೇಷವಾದ ಕಾಳಜಿಯನ್ನು ಕುರ್ಆನ್ ವ್ಯಕ್ತಪಡಿಸುತ್ತದೆ. ತಮ್ಮ ಶಿಶುಗಳು ಪೂರ್ಣ ಸ್ತನಪಾನಾವಧಿಯವರೆಗೆ ಹಾಲು ಕುಡಿಯಬೇಕೆಂದು ಪಿತರು ಬಯಸಿದರೆ, ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷ ಪೂರ್ತಿಯಾಗಿ ಹಾಲುಣಿಸಬೇಕು. ಆಗ ಶಿಶುವಿನ ತಂದೆಯು ಅವರಿಗೆ ನ್ಯಾಯೋಚಿತ ರೀತಿಯಿಂದ ಅನ್ನ, ಬಟ್ಟೆ ಕೊಡಲು ಬಾಧ್ಯಸ್ಥನಾಗುವನು. (ಕುರ್ಆನ್- 2:233)
ಹೀಗೆ ಮಹಿಳಾ ಹಕ್ಕುಗಳನ್ನು ಸಂರಕ್ಷಿಸುವ ಅದೆಷ್ಟೋ ಘಟನೆಗಳು ಮತ್ತು ಬೋಧನೆಗಳು ಪವಿತ್ರ ಕುರ್ಆನಿನಲ್ಲಿ ಕಾಣಸಿಗುತ್ತವೆ.
ಬಿಲ್ಕೀಸ್ ರಾಣಿಯ ನಾಯಕತ್ವ, ಫಿರ್ಔನನ ಪತ್ನಿಯ ತ್ಯಾಗ ಬಲಿದಾನ, ಮರ್ಯಮ್(ಅ)ರ ಸಚ್ಚಾರಿತ್ರ್ಯ, ಆಯಿಷಾ(ರ)ರ ಘನತೆ, ಮೂಸಾ(ಅ)ರ ತಾಯಿಯ ನಿರ್ಧಾರ ಶಕ್ತಿ, ಮೂಸಾ(ಅ)ರ ಸಹೋದರಿಯ ಸಮಯ ಪ್ರಜ್ಞೆ ಹೀಗೆ ಅನೇಕಾರು ರೀತಿಯ ಉಲ್ಲೇಖಗಳಿಂದ ಪವಿತ್ರ ಕುರ್ಆನ್ ಮಹಿಳೆಯರ ಸ್ಥಾನಮಾನವನ್ನು ಸರ್ವಲೋಕಕ್ಕೆ ಪರಿಚಯಿಸಿದೆ.
ಅದರೊಂದಿಗೆ ಕುಟುಂಬ ಪಾಲನೆ ಮತ್ತು ಸಮಾಜ ನಿರ್ಮಾಣದಲ್ಲಿ ಅವರು ವಹಿಸಬೇಕಾದ ಪಾತ್ರ ಮತ್ತು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಕೂಡಾ ಪವಿತ್ರ ಕುರ್ಆನ್ ಬೋಧಿಸುತ್ತದೆ.
ಕುಟುಂಬದ ಸುಖ ಶಾಂತಿ ಕಾಪಾಡುವಲ್ಲಿ ಸ್ತ್ರೀ-ಪುರುಷರಿಬ್ಬರ ಪಾತ್ರವನ್ನು ಬಹಳ ಸುಂದರವಾದ ಪದಗಳಲ್ಲಿ ಅದು ವಿವರಿಸುತ್ತದೆ (30:21). ಕುಟುಂಬದ ಮಂದಿಯ ತರಬೇತಿ ಮಾಡುವ ಮತ್ತು ತನ್ನನ್ನೂ ಅವರನ್ನೂ ನರಕಾಗ್ನಿಯಿಂದ ರಕ್ಷಿಸುವ ಹೊಣೆಯನ್ನು ಕೂಡಾ ಕುರ್ಆನ್ ಸ್ತ್ರೀ-ಪುರುಷರ ಮೇಲಿರಿಸಿದೆ. (66: 6)
ಅಧ್ಯಾಯವೊಂದರಲ್ಲಿ ಕುರ್ಆನ್ ಇಬ್ಬರು ಮಹಿಳೆಯರನ್ನು ಬಹಳ ಉನ್ನತ ಸ್ಥಾನದಲ್ಲಿರಿಸುತ್ತಾ ಅವರಿಬ್ಬರೂ ಕಾಲಾತೀತವಾಗಿ ಸಮಸ್ತ ಸತ್ಯವಿಶ್ವಾಸಿಗಳಿಗೆ (ಪುರುಷರೂ ಒಳಗೊಂಡು) ಮಾದರಿ ಎಂದು ಘೋಷಿಸಿದೆ. “ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಫಿರ್ಔನನ ಪತ್ನಿಯ ಉದಾಹರಣೆಯನ್ನು ಮುಂದಿಡುತ್ತಾನೆ.” (ಕುರ್ಆನ್- 66:11)
“ಮತ್ತು ಅವನು ಇಮ್ರಾನನ ಪುತ್ರಿ ಮರ್ಯಮರ ಉದಾಹರಣೆಯನ್ನೂ (ಸತ್ಯವಿಶ್ವಾಸಿಗಳಿಗೆ) ಮುಂದಿಡುತ್ತಾನೆ.” (ಕುರ್ಆನ್- 66:12)
ಕೌಟುಂಬಿಕ ಜೀವನಕ್ಕೆ ಅತೀತವಾಗಿ ಸಾಮಾಜಿಕ ಸುಧಾರಣೆಯಲ್ಲೂ ಮಹಿಳೆಯರು ಕಡ್ಡಾಯವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಮತ್ತು ಈ ಕಾರ್ಯದಲ್ಲಿ ಸ್ತ್ರೀ-ಪುರುಷರು ಪರಸ್ಪರ ಸಹಾಕಾರದೊಂದಿಗೆ ಮುಂದುವರಿಯಬೇಕೆಂದು ಕುರ್ಆನ್ ಬಯಸುತ್ತದೆ.
“ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು; ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ. ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ಕೊಡುತ್ತಾರೆ ಮತ್ತು ಅಲ್ಲಾಹ್ ಹಾಗೂ ಅವನ ರಸೂಲರ ಅನುಸರಣೆ ಮಾಡುತ್ತಾರೆ.” (ಕುರ್ಆನ್- 9:71)
ಮಹಿಳೆಯರ ಬಗ್ಗೆ ಇರುವ ಕುರ್ಆನಿನ ನಿಲುವು ಸಮಗ್ರ ಮತ್ತು ಪ್ರಗತಿಪರವಾಗಿದ್ದು, ಜೀವನದ ಎಲ್ಲಾ ರಂಗಗಳಲ್ಲಿ ಮಹಿಳೆಯರನ್ನು ಘನತೆ, ಗೌರವ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳುವುದನ್ನು ಖಾತ್ರಿಪಡಿಸುತ್ತದೆ. ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣವನ್ನು ಅದು ಪ್ರತಿಪಾದಿಸುತ್ತದೆ. ಮಹಿಳಾ ಹಕ್ಕುಗಳ ಬಗ್ಗೆ ಇರುವ ಸೂಕ್ತಗಳನ್ನು ಅಧ್ಯಯನ ಮಾಡಿದರೆ, ಅದು ಸ್ತ್ರೀ -ಪುರುಷರಿಬ್ಬರೂ ಸಮಾನವಾಗಿ ಅಭಿವೃದ್ಧಿ ಹೊಂದಬಹುದಾದ ಸಮತೋಲಿತ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಉತ್ತೇಜನೆ ನೀಡುತ್ತದೆ ಎಂಬುದು ಬಹಳ ಸ್ಪಷ್ಟ. ಈ ಸ್ಥಾನಮಾನದೊಂದಿಗೆ ಸಮಾಜ ನಿರ್ಮಾಣದಲ್ಲಿ ಆಕೆಯ ಕೊಡುಗೆ ಎಷ್ಟು ಅತ್ಯಗತ್ಯ ಎಂಬುದನ್ನೂ ದೃಢಪಡಿಸುತ್ತದೆ. ಸಮಾನತೆಯ ಅರ್ಥವಿಲ್ಲದ ಘೋಷಣೆ ಕೂಗುವವರಿಗೆ ಸ್ತ್ರೀ-ಪುರುಷರ ನ್ಯಾಯಯುತವಾದ ಸಮಾನತೆ ಏನು ಎಂಬುದನ್ನು ನಿಚ್ಚಳವಾಗಿ ವಿವರಿಸುತ್ತದೆ.
IslamKannada News Portal
