✍️ ಖದೀಜ ನುಸ್ರತ್, ಅಬುಧಾಬಿ
ಅನಿವಾಸಿ ಕನ್ನಡತಿ
ವಿಶ್ವದ ಅತ್ಯಂತ ಸುಂದರವಾದ ಮಸೀದಿಗಳಲ್ಲಿ ಒಂದಾಗಿರುವ ಅಬುಧಾಬಿಯಲ್ಲಿರುವ ಶೇಖ್ ಝಾಯಿದ್ ಗ್ರ್ಯಾಂಡ್ ಮಸೀದಿಯು ಪವಿತ್ರ ರಮಝಾನ್ ತಿಂಗಳಲ್ಲಿ ಸಮುದಾಯದ ಪ್ರಮುಖ ಧಾರ್ಮಿಕ ಆರಾಧನಾ ಕೇಂದ್ರವಾಗಿ ರೂಪಾಂತರಗೊಳ್ಳುತ್ತದೆ.
ಪ್ರಪಂಚದಾದ್ಯಂತ ಆರಾಧಕರನ್ನು ಮತ್ತು ಸಂದರ್ಶಕರನ್ನು ಆಕರ್ಷಿಸುವ ಬೃಹತ್ ಆಧ್ಯಾತ್ಮಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಸೀದಿಯು ಮುಸ್ಲಿಮರಿಗೆ ಅತ್ಯುತ್ತಮವಾದ ಧಾರ್ಮಿಕ ಅನುಭವವನ್ನು ನೀಡುತ್ತದೆ ಮತ್ತು ಎಲ್ಲಾ ಧರ್ಮದವರಿಗೆ ಇಸ್ಲಾಮ್ ಧರ್ಮದ ಮತ್ತು ಪವಿತ್ರ ರಮಝಾನ್ ಸಂದೇಶವನ್ನು ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವರ್ಷವಿಡೀ ಎಲ್ಲಾ ಧರ್ಮದವರಿಗೆ ಮಸೀದಿ ಸಂದರ್ಶನದ ಮುಕ್ತ ಅವಕಾಶವನ್ನು ಕಲ್ಪಿಸಲಾಗುತ್ತದೆ.
ಶೇಖ್ ಝಾಯಿದ್ ಗ್ರ್ಯಾಂಡ್ ಮಸೀದಿಯಲ್ಲಿ ರಮಝಾನ್ ಸಮಯದ ಚಟುವಟಿಕೆಗಳಲ್ಲಿ ರಾತ್ರಿಯ ತರಾವೀಹ್ ಪ್ರಾರ್ಥನೆಗಳು, ಕೊನೆಯ ಹತ್ತು ರಾತ್ರೆಗಳಲ್ಲಿ ನಡೆಯುವ ಕಿಯಾಮುಲ್ಲೈಲ್ ಮತ್ತು ಇಫ್ತಾರ್ ಕೂಟ ಅತ್ಯಂತ ಪ್ರಮುಖವಾಗಿದೆ.
ಮಸೀದಿಯ ಪ್ರಶಾಂತವಾದ ವಾತಾವರಣದಲ್ಲಿ ನಮಾಝ್ ನಿರ್ವಹಿಸಲು ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ರಸಿದ್ಧ ಇಮಾಮ್ಗಳಿಂದ ಕುರ್ಆನ್ ಪಾರಾಯಣವು ಮಸೀದಿಯಲ್ಲಿ ಆಧ್ಯಾತ್ಮಿಕ ಮತ್ತು ಶಾಂತವಾದ ವಾತಾವರಣ ಒದಗಿಸುತ್ತದೆ. ದೇಶ ವಿದೇಶಗಳಿಂದ ದಿನಕ್ಕೊಂದರಂತೆ ಸುಶ್ರಾವ್ಯವಾಗಿ ಕುರ್ಆನ್ ಪಠಿಸುವಂತಹ ಪ್ರಸಿದ್ಧ ಖಾರಿಗಳನ್ನು (ಕುರ್ಆನ್ ಪಾರಾಯಣದಲ್ಲಿ ಪರಿಣತಿ ಹೊಂದಿದವರು) ತರಾವೀಹ್ ನಮಾಝ್ ನಿರ್ವಹಿಸಲು ಆಹ್ವಾನಿಸಲಾಗುತ್ತದೆ. ಅದರ ವೇಳಾಪಟ್ಟಿಗಳ ಮಾಹಿತಿಯನ್ನು ವೆಬ್ ಸೈಟ್ಗಳಲ್ಲಿ ಪ್ರಕಟಿಸಲಾಗುತ್ತದೆ. ತಮಗೆ ಇಷ್ಟವಿರುವ ಖಾರಿಗಳ ಕುರ್ಆನ್ ಪಾರಾಯಣ ಆಲಿಸಲು ಜನರು ಬರುತ್ತಾರೆ.
ಮಸೀದಿ ನಿರ್ವಹಣೆಯ ಭದ್ರತಾ ಸಿಬ್ಬಂದಿಗಳು, ಆಡಳಿತ ವರ್ಗ ಮತ್ತು ಪೊಲೀಸ್ ಇಲಾಖೆ ಪ್ರಾರ್ಥನೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ರಮಝಾನಿನ ಅಂತಿಮ 10 ದಿನಗಳಲ್ಲಿ ವಿಶೇಷ ತಡರಾತ್ರಿಯ ಪ್ರಾರ್ಥನೆಗಳಲ್ಲಿ ಆರಾಧಕರಿಗೆ ಅಗತ್ಯವಿರುವ ಎಲ್ಲ ಸೇವೆಗಳನ್ನು ಒದಗಿಸಲಾಗುತ್ತದೆ. ಭಕ್ತ ಜನರಿಗಾಗಿ ಸುಸಜ್ಜಿತವಾದ ಸಾವಿರಾರು ಪಾರ್ಕಿಂಗ್ ಏರ್ಪಾಡುಗಳನ್ನು ಮಾಡಲಾಗುತ್ತದೆ ಮತ್ತು ದೂರದ ಪಾರ್ಕಿಂಗ್ ಗಳಿಂದ ಜನರನ್ನು ಮಸೀದಿಯ ಅಂಗಳಕ್ಕೆ ಕರೆತರಲು ಅನೇಕ ಉಚಿತ ಬಸ್ ಸೇವೆಗಳು ಲಭ್ಯವಿರುತ್ತದೆ.
ಶೇಖ್ ಝಾಯಿದ್ ಗ್ರ್ಯಾಂಡ್ ಮಸೀದಿಯಲ್ಲಿ ಪುಣ್ಯ ಮಾಸದ ಪ್ರತಿ ಸಂಜೆ ಸಾವಿರಾರು ಜನರಿಗೆ ಉಚಿತ ಇಫ್ತಾರ್ನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಸೀದಿಯಲ್ಲಿ ಆರಾಧಕರು, ಸಂದರ್ಶಕರು, ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರು ಕುಟುಂಬ ಸಮೇತವಾಗಿ ಉಪವಾಸ ಮುರಿಯುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಬೇಸಿಗೆಯ ಕಾಲದಲ್ಲಿ ಸಾವಿರಾರು ಜನರು ಕುಳಿತುಕೊಳ್ಳಬಹುದಾದ ದೊಡ್ಡದೊಡ್ಡ ಹವಾ ನಿಯಂತ್ರಿತ ಡೇರೆಗಳನ್ನು ಸ್ಥಾಪಿಸಲಾಗುತ್ತದೆ.
ಮಸೀದಿಯಲ್ಲಿ ನೀಡಲಾಗುವ ಇಫ್ತಾರ್ ಊಟಗಳು ಕೋಳಿ, ಆಡು ಮಾಂಸ ಮತ್ತು ಸಾಂಪ್ರದಾಯಿಕ ಒಂಟೆ ಮಾಂಸವನ್ನೊಳಗೊಂಡಂತಹ ಸ್ವಾದಿಷ್ಟಕರವಾದ ಅರೇಬಿಕ್ ಭಕ್ಷ್ಯಗಳ ಮಿಶ್ರಣವಾಗಿದ್ದು, ಯುನೈಟೆಡ್ ಅರಬ್ ಸಂಸ್ಥಾನದ ಆತಿಥ್ಯದ ಮತ್ತು ರುಚಿಯ ಅನುಭವವನ್ನೂ ನೀಡುತ್ತದೆ. ಹೆಚ್ಚುವರಿಯಾಗಿ ಖರ್ಜೂರ, ಹಣ್ಣು ಹಂಪಲು, ಮೊಸರು, ಫಲಗಳ ತಂಪುಪಾನೀಯ ಮತ್ತು ನೀರಿನ ಕಿಟ್ಗಳನ್ನು ಪ್ರತಿಯೊಬ್ಬರಿಗೂ ನೀಡಲಾಗುತ್ತದೆ. ಕೆಲವೊಮ್ಮೆ ಇಫ್ತಾರ್ ಕಾರ್ಯಕ್ರಮದಲ್ಲಿ ಇಲ್ಲಿನ ರಾಷ್ಟ್ರಾಧ್ಯಕ್ಷರು ಮತ್ತು ಮಂತ್ರಿ ಮಂಡಲದಲ್ಲಿರುವ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು ಬಂದು ಜನರೊದಿಗೆ ಈ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸುವುದನ್ನು ಕಾಣಬಹುದಾಗಿದೆ.
ಅರಬ್, ಅರಬೇತರ, ಕರಿಯ, ಬಿಳಿಯ, ಬಡವ, ಶ್ರೀಮಂತ, ಜಾತಿ ಧರ್ಮವೆಂಬ ಬೇಧಭಾವವಿಲ್ಲದೆ ಎಲ್ಲ ಧರ್ಮದವರು ಹಾಗೂ ರಾಷ್ಟ್ರದವರು ಒಟ್ಟಾಗಿ ಕುಳಿತು ಉಪವಾಸ ಮುರಿಯುವ ದೃಶ್ಯವು ಧಾರ್ಮಿಕ ಸಹಿಷ್ಣುತೆ, ಐಕ್ಯತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ದಿನನಿತ್ಯ ಸುಮಾರು ಮೂವತ್ತರಿಂದ ನಲ್ವತ್ತು ಸಾವಿರ ಜನರು ಏಕಕಾಲದಲ್ಲಿ ಮಸೀದಿಯ ಅಂಗಳದಲ್ಲಿ ಕುಳಿತುಕೊಳ್ಳುವ ಸುಸಜ್ಜಿತ ಸೌಕರ್ಯಗಳನ್ನು ಮಾಡಲಾಗುತ್ತದೆ.
ಸೂರ್ಯ ಮುಳುಗುತ್ತಿದ್ದಂತೆ ಮತ್ತು ಪ್ರಾರ್ಥನೆಯ ಕರೆ ಮೊಳಗುತ್ತಿದ್ದಂತೆ ಯುನೈಟೆಡ್ ಅರಬ್ ಸಂಸ್ಥಾನದ ಸಾಂಸ್ಕೃತಿಕ ಪದ್ಧತಿಯಾದ ಫಿರಂಗಿಯಿಂದ ಸಿಡಿಮದ್ದು ಹಾರಿಸಿ ಶಬ್ದವನ್ನು ಮಾಡಲಾಗುತ್ತದೆ. ಇದು ಅಝಾನ್ ನೀಡಲು ಧ್ವನಿವರ್ಧಕಗಳು ಇಲ್ಲದಂತಹ ಕಾಲದಲ್ಲಿ ಅನುಸರಿಸಿಕೊಂಡು ಬಂದಂತಹ ಸಂಪ್ರದಾಯವಾಗಿದೆ.
ಮಸೀದಿಯ ಆಡಳಿತ ವರ್ಗ ಇಫ್ತಾರ್ ಊಟಗಳನ್ನು ತಯಾರಿಸಲು, ಆಹಾರ ಸಾಗಣೆ ಮಾಡಲು ಮತ್ತು ಆಹಾರ ಸುರಕ್ಷತೆಗೆ ವಿಶೇಷವಾದ ತಜ್ಞರ ತಂಡಗಳ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮಾತ್ರವಲ್ಲದೇ ಆಹಾರದ ವಿತರಣೆಗೆ ಸಹಾಯ ಮಾಡುವ ಸ್ವಯಂಸೇವಕರ ಸುಸಜ್ಜಿತ ಜಾಲದ ಏರ್ಪಾಡುಗಳನ್ನು ಮಾಡಲಾಗುತ್ತದೆ. ಇಫ್ತಾರ್ ಕಾರ್ಯಕ್ರಮದ ನಂತರ ಪರಿಸರದ ಶುಚಿತ್ವದ ಕಡೆಗೆ ವಿಶೇಷವಾದ ಗಮನ ನೀಡಲಾಗುತ್ತದೆ.
ಶೇಖ್ ಝಾಯಿದ್ ಗ್ರ್ಯಾಂಡ್ ಮಸೀದಿ ರಮಝಾನ್ ಸಮಯದಲ್ಲಿ ವಿವಿಧ ರೀತಿಯ ಧಾರ್ಮಿಕ ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಜನರಿಗೆ ಇಸ್ಲಾಮ್ ಧರ್ಮದಲ್ಲಿ ದಾನದ ಮಹತ್ವ, ತಾಳ್ಮೆ, ಸ್ವಯಂ-ಶಿಸ್ತಿನ ಮೌಲ್ಯಗಳ ಬಗ್ಗೆ ಮತ್ತು ರಮಝಾನ್ ತಿಂಗಳ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ತರಬೇತಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ದೇಶ ವಿದೇಶಗಳಿಂದ ಧಾರ್ಮಿಕ ವಿದ್ವಾಂಸರನ್ನು ಮತ್ತು ಆಧ್ಯಾತ್ಮಿಕ ಪಂಡಿತರನ್ನು ಇಲ್ಲಿನ ಔಖಾಫ್ ಸಚಿವಾಲಯದ ವತಿಯಿಂದ ಏರ್ಪಾಡು ಮಾಡಲಾಗುತ್ತದೆ.
ಔಖಾಫ್ ಸಚಿವಾಲಯ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ ಸಮಿತಿ ಕಡ್ಡಾಯ ದಾನ ಮತ್ತು ಐಚ್ಛಿಕ ದಾನವನ್ನು ಸಂಗ್ರಹಿಸಲು ವಿವಿಧ ರೀತಿಯ ಸುಸಜ್ಜಿತವಾದ ವ್ಯವಸ್ಥೆಯನ್ನು ಮಾಡುತ್ತದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಮತ್ತು ಪ್ರಕೃತಿ ದುರಂತದಲ್ಲಿ ಕಷ್ಟ ಮತ್ತು ನಷ್ಟ ಅನುಭವಿಸುತ್ತಿರುವ ದೇಶ ಮತ್ತು ಜನರಿಗೆ ಮಾನವೀಯ ಸೇವೆಯ ರೂಪದಲ್ಲಿ ವ್ಯವಸ್ಥಿತವಾಗಿ ವಿತರಿಸಲಾಗುತ್ತದೆ. ಅವರ ಮನೆ, ಶಾಲೆ, ವಿದ್ಯಾಭ್ಯಾಸ, ಆಸ್ಪತ್ರೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಂತಹ ಸರ್ವತೋಮುಖ ಅಭಿವೃದ್ಧಿಗಾಗಿ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಇಂತಹ ಅಧಿಕೃತ ಸಂಸ್ಥೆಗಳಿಗೆ ದಾನ ಧರ್ಮಗಳನ್ನು ನೀಡುವುದರಿಂದ ಸಹಾಯವು ಹಕ್ಕುದಾರರಿಗೆ ತಲುಪುತ್ತದೆ ಎಂದು ಖಾತ್ರಿ ಪಡಿಸಬಹುದಾಗಿದೆ. ಮಾತ್ರವಲ್ಲ ಅನಧಿಕೃತವಾಗಿ ದಾನವನ್ನು ಸಂಗ್ರಹಿಸುವುದು ಮತ್ತು ಭಿಕ್ಷೆ ಬೇಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂತವರು ಯಾರಾದರೂ ಕಂಡುಬಂದಲ್ಲಿ ಅವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
IslamKannada News Portal
