Home / ಲೇಖನಗಳು / ಝಕಾತ್ ಮತ್ತು ಝಿಜಿಯಾ ಒಂದು ಜಿಜ್ಞಾಸೆ

ಝಕಾತ್ ಮತ್ತು ಝಿಜಿಯಾ ಒಂದು ಜಿಜ್ಞಾಸೆ

✍️ ಮುಷ್ತಾಕ್ ಹೆನ್ನಾಬೈಲ್

ನಿಜಕ್ಕೂ, ಝಿಜಿಯಾ ಅಪವ್ಯಾಖ್ಯಾನ ಮತ್ತು ಅಪಪ್ರಚಾರ ಮಾಡಿದಂತೆ ಇಲ್ಲ. ಇಸ್ಲಾಮಿಕ್ ಆಡಳಿತ ಇರುವಲ್ಲಿ “ಝಕಾತ್” ಮುಸ್ಲಿಮರು ಪಾವತಿಸುವ ತೆರಿಗೆಯಾದರೆ, “ಝಿಜಿಯಾ” ಮುಸ್ಲಿಮರಲ್ಲದವರ ಸರಕಾರಿ ತೆರಿಗೆ.

ಮುಸ್ಲಿಮರು ವಾರ್ಷಿಕವಾಗಿ ತಮ್ಮ ಆದಾಯದ 2.5%ರಷ್ಟನ್ನು ಪಾವತಿಸುವ ಝಕಾತ್ ಇಸ್ಲಾಮಿನ ಧಾರ್ಮಿಕ ಶ್ರದ್ಧೆ ಮತ್ತು ಕರ್ತವ್ಯದ ಅಡಿಯಲ್ಲಿ ಬರುತ್ತದೆ. ಅನುಕೂಲಸ್ಥನಾಗಿದ್ದು ಝಕಾತ್ ಪಾವತಿ ಮಾಡದಿದ್ದರೆ ಮುಸ್ಲಿಮನು ಧಾರ್ಮಿಕ ಅಪರಾಧಿಯಾಗುತ್ತಾನೆ. ಆದರೆ ಝಿಜಿಯಾ ಆಡಳಿತಗಾರನ ವಿವೇಚನೆಗೆ ಬಿಟ್ಟ ತೆರಿಗೆಯಾಗಿದೆ. ಆಡಳಿತಗಾರ ಇದನ್ನು ಪಡೆಯಬಹುದು, ಪಡೆಯದಿರಬಹುದು, ಹಿಂತಿರುಗಿ ಪಾವತಿ ಮಾಡಬಹುದು, ಇಂತಹ ಮೂರು ಆಯ್ಕೆಗಳಿವೆ. ಆದರೆ ಝಕಾತ್ ಗೆ ಈ ಆಯ್ಕೆಗಳಿಲ್ಲ. ಕಡ್ಡಾಯವಾಗಿ ಪಾವತಿ ಮಾಡಲೇಬೇಕು..

ಮುಸ್ಲಿಮರಲ್ಲದವರಿಗೆ ಬಲವಂತವಾಗಿ ಇಸ್ಲಾಮಿನ ಧಾರ್ಮಿಕ ಪ್ರಕ್ರಿಯೆಗಳಿಗೆ ಒಳಪಡಿಸಬಾರದು ಎನ್ನುವ ಕಾರಣಕ್ಕೆ ಅನ್ಯ ಧರ್ಮದವರಿಂದ ಝಜಿಯಾ ಎಂಬ ಪ್ರತ್ಯೇಕ ತೆರಿಗೆ ಪದ್ಧತಿಯಿಂದ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ. ಪ್ರಮಾಣದಲ್ಲಿ ಝಜಿಯಾ ಝಕಾತಿಗಿಂತ ಬಹಳ ಕಡಿಮೆ ಇರುತ್ತದೆ. ಝಕಾತ್ ಮತ್ತು ಝಜಿಯಾ ಎರಡೂ ಕೂಡ ಬಡ ಮುಸ್ಲಿಮರಿಗೆ ಮತ್ತು ಮುಸ್ಲಿಮೇತರರಿಗೆ ಅನ್ವಯಿಸುವುದಿಲ್ಲ. ಅವರು ಇದನ್ನು ಪಾವತಿಸಬೇಕಾಗಿಲ್ಲ..

ಒಂದೊಮ್ಮೆ ಝಜಿಯಾ ಪಾವತಿಸಿದ ನಂತರ ಇಸ್ಲಾಮಿಕ್ ಆಡಳಿತದ ಅಡಿಯಲ್ಲಿ ಮುಸ್ಲಿಂ ಆಡಳಿತಗಾರ ಅನ್ಯ ಧರ್ಮದವರ ಮಾನ- ಪ್ರಾಣ, ಹಿತಾಸಕ್ತಿ, ಧಾರ್ಮಿಕ ಹಕ್ಕುಗಳನ್ನು ರಕ್ಷಿಸಲು ವಿಫಲನಾದರೆ, ಝಜಿಯಾವನ್ನು ಪಾವತಿಸಿದವರಿಗೇ ಹಿಂತಿರುಗಿ ಕೊಡಬೇಕು ಎಂಬುದು ಇಸ್ಲಾಮಿ ಕಡ್ಡಾಯ ನಿಯಮ..

ಮುಸ್ಲಿಮರಲ್ಲದವರ ಹಿತಾಸಕ್ತಿಯನ್ನು ರಕ್ಷಿಸಲು ಸಾಧ್ಯವಾಗದ ಕಾರಣಕ್ಕೆ ಝಜಿಯಾವನ್ನು ಪಾವತಿಸಿದವರಿಗೇ ಹಿಂದಿರುಗಿಸಿದ ಪ್ರಮುಖ ವಿದ್ಯಮಾನ ಕ್ರಿಸ್ತಶಕ 635ನೇ ಇಸವಿಯಲ್ಲಿ ಬೈಝoಟೈನ್ ಎಂಪೈರ್ ನ ಭಾಗವಾಗಿದ್ದ ಸಿರಿಯಾದಲ್ಲಿ ಸಂಭವಿಸಿತ್ತು. ಆ ಕಾಲಕ್ಕೆ ಪ್ರಾಂತ್ಯದ ರಕ್ಷಣೆ ಮತ್ತು ಆಡಳಿತದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಖಾಲಿದ್ ಬಿನ್ ವಲಿದ್ (ರ)ಎಂಬ ಮುಸ್ಲಿಂ ಸೇನಾ ದಂಡನಾಯಕ ಮುಸ್ಲಿಮರಲ್ಲದವರಿಂದ ಝಜಿಯಾ ರೂಪದಲ್ಲಿ ತೆರಿಗೆಯನ್ನು ಸಂಗ್ರಹಿಸಿದ್ದರು. ಆದರೆ ರೋಮನ್ ಸಾಮ್ರಾಜ್ಯದ ಕೆಲವು ಶಕ್ತಿಗಳು ಮುಸ್ಲಿಮರ ಆಡಳಿತದಡಿಯಲ್ಲಿದ್ದ ಮುಸ್ಲಿಮೇತರರ ಮೇಲೆ ದಮನ ಶೋಷಣೆಗಳನ್ನು ಮಾಡಿದ್ದರು. ಝಜಿಯಾ ಪಾವತಿಸಿಯೂ ತಮ್ಮ ಆಡಳಿತದ ಅಡಿಯಲ್ಲಿ ರಕ್ಷಣೆ ನೀಡಲು ವಿಫಲವಾಗಿದ್ದಕ್ಕೆ ಮುಸ್ಲಿಂ ಸೇನಾ ದಂಡನಾಯಕ ಖಾಲಿದ್ ಬಿನ್ ವಲೀದ್ ಸಂಗ್ರಹಿಸಿದ ಝಜಿಯಾವನ್ನು ಪಾವತಿಸಿದವರಿಗೆ ಹಿಂದಿರುಗಿಸಿದರು..

ಆದರೆ ಇಸ್ಲಾಮಿ ನಿಯಮದ ಪ್ರಕಾರ ಯಾವುದೇ ಕಾರಣಕ್ಕೂ ಝಕಾತನ್ನು ಪಾವತಿಸಿದವರಿಗೆ ಮರುಪಾವತಿಸುವಂತಿಲ್ಲ. ಝಜಿಯಾದ ಮೊತ್ತವು ಝಕಾತಿನ ಮೊತ್ತಕ್ಕಿಂತ ಹೆಚ್ಚು ಇರುವಂತಿಲ್ಲ. ಆರ್ಥಿಕವಾಗಿ ಬಡವನಾಗಿರುವ ವ್ಯಕ್ತಿಯಿಂದ ಝಜಿಯಾವನ್ನು ಸ್ವೀಕರಿಸುವಂತಿಲ್ಲ. ಸರಕಾರಕ್ಕೆ ಝಜಿಯಾದ ಪಾವತಿಯನ್ನು ಪಾವತಿದಾರ ಮುಂದೂಡಬಹುದು. ಆದರೆ ಝಕಾತ್ ವಾರ್ಷಿಕವಾಗಿ ಕಡ್ಡಾಯವಾಗಿ ಪಾವತಿಸಬೇಕು. ಈ ಎರಡು ತೆರಿಗೆಗಳನ್ನು ವಾರ್ಷಿಕವಾದ ಹಲವು ಕಂತುಗಳಲ್ಲಿ ಕಟ್ಟಬಹುದು. ಅದೆಷ್ಟೋ ಮುಸ್ಲಿಂ ಅರಸರು ಮುಸ್ಲಿಮರಿಂದ ಝಕಾತನ್ನು ಪಡೆದರೂ, ಅನ್ಯ ಧರ್ಮದವರಿಂದ ಝಜಿಯಾವನ್ನು ಪಡೆದಿಲ್ಲ. ಸಾಮಾನ್ಯವಾಗಿ ಮುಸ್ಲಿಮೇತರರು ಸಣ್ಣ ಸಂಖ್ಯೆಯಲ್ಲಿದ್ದರೆ ಮುಸ್ಲಿಮ್ ಅರಸರು ಝಜಿಯಾ ಪಡೆಯುವುದಿಲ್ಲ. ದೊಡ್ಡ ಸಂಖ್ಯೆಯಲ್ಲಿದ್ದರೆ ಸಹಜವಾಗಿಯೇ ಬೊಕ್ಕಸದ ಮೇಲೆ ಹೊರೆಯಾಗುವುದರಿಂದ ಈ ತೆರಿಗೆಯನ್ನು ಪಡೆಯುತ್ತಾರೆ.

ಝಜಿಯಾ ಒಂದು ಸರ್ಕಾರಿ ತೆರಿಗೆಯಷ್ಟೇ. ತಲೆಗಂದಾಯವಾಗಲಿ ಅಥವ ದಂಡವಾಗಲಿ ಅಲ್ಲ. ಜಗತ್ತಿನ ಪ್ರತಿಯೊಂದು ಕಾಲದಲ್ಲಿ ಮತ್ತು ಪ್ರತಿಯೊಂದು ದೇಶದಲ್ಲಿ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ. ಸರ್ಕಾರಿ ಸೌಲಭ್ಯಗಳು ಸಿಗುವುದು ಮತ್ತು ಸರ್ಕಾರ ನಡೆಯುವುದು ಕೂಡ ಈ ತೆರಿಗೆಯ ಆಧಾರದ ಮೇಲೆಯೇ ಆಗಿದೆ.

ಇಸ್ಲಾಮಿಕ್ ಆಡಳಿತಗಳಲ್ಲಿ ಹೀಗೆ ಧರ್ಮಗಳ ಆಧಾರದ ಮೇಲೆ ಪ್ರತ್ಯೇಕ ತೆರಿಗೆ ಪದ್ಧತಿ ಇರುವುದು ಅನ್ಯ ಧರ್ಮದವರನ್ನು ಇಸ್ಲಾಮಿನ ಧಾರ್ಮಿಕತೆಗೆ ಬಲವಂತವಾಗಿ ಒಳಪಡಿಸಬಾರದು ಎನ್ನುವ ಸದುದ್ದೇಶದಿಂದ ಮಾತ್ರವೇ ಆಗಿದೆ. ಈ ಜ್ಞಾನವಿಲ್ಲದ ಕಾರಣಕ್ಕೆ ಝಜಿಯಾ ಅಪವ್ಯಾಖ್ಯಾನಗೊಂಡಿದೆ. ಇಂಥ ಅಪವ್ಯಾಖ್ಯಾನಕ್ಕೆ ಹೀಗೆ ಮಾಡುವವರಿಗಿಂತ ಹೆಚ್ಚಾಗಿ ಅದನ್ನು ಸರಿಯಾಗಿ ಮನವರಿಕೆ ಮಾಡಲು ಮನಸ್ಸು ಮಾಡದ ಮುಸ್ಲಿಮರೇ ಹೆಚ್ಚು ಹೊಣೆಗಾರರು..

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …