Home / ಲೇಖನಗಳು / ಹಜ್ಜ್ ನೀಡುವ ಮಾನವೀಯ ಪಾಠಗಳು

ಹಜ್ಜ್ ನೀಡುವ ಮಾನವೀಯ ಪಾಠಗಳು

ಜಿ.ಕೆ.ಎ.

ಕಅಬಾ ಭವನವು ಭೌಗೋಳಿಕವಾಗಿ ಭೂಖಂಡಗಳ ಕೇಂದ್ರವೆಂದು ವಿಶ್ಲೇಷಿಸಲ್ಪಡುವ ಮಕ್ಕದಲ್ಲಿದೆ. ಕಅಬವನ್ನು ಕೇಂದ್ರವಾಗಿಟ್ಟುಕೊಂಡು ವೃತ್ತವನ್ನು ಚಿತ್ರಿಸಿದರೆ, ಅದು ಎಲ್ಲಾ ಖಂಡಗಳನ್ನು ಸ್ಪರ್ಶಿಸುತ್ತದೆ. ಸಾಧ್ಯವಿರುವ ಎಲ್ಲ ಮುಸ್ಲಿಮರು ಜೀವನದಲ್ಲಿ ಒಂದು ಬಾರಿ ಭೇಟಿ ನೀಡಬೇಕಾದ ಒಂದು ಆರಾಧನಾ ಕರ್ಮ ಇದು. ಹಜ್ ಯಾತ್ರೆಯು ವಿಶ್ವದ ಅತಿ ದೊಡ್ಡ ಪವಿತ್ರ ಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇವ ಸಂದೇಶವಾಕರಾಗಿದ್ದ ಇಬ್ರಾಹೀಮ್(ಅ), ಅವರ ಮಗ ಇಸ್ಮಾಯಿಲ್(ಅ), ಪತ್ನಿ ಹಾಜಿರ ಎಂಬ ಮೂವರು ಮಹಾನ್ ವ್ಯಕ್ತಿತ್ವಗಳ ಜೀವನವನ್ನು ನೆನಪಿಸಿಕೊಂಡು ಹಜ್ಜ್ ಕರ್ಮವನ್ನು ನಿರ್ವಹಿಸಲಾಗುತ್ತದೆ. ಪ್ರವಾದಿ ಮುಹಮ್ಮದ್(ಸ) ಅವರ ಜೀವನಕ್ಕೆ ಸಂಬಂ ಧಿಸಿದ ಯಾವುದೇ ಕರ್ಮವೂ ಹಜ್ ಕರ್ಮಗಳಲ್ಲಿಲ್ಲ ಎಂಬುದು ಗಮನಿಸಬೇಕಾದ ವಾಸ್ತವಿಕತೆ. ಇದು ಇಸ್ಲಾಮನ್ನು ಮುಹಮ್ಮದ್(ಸ) ಸ್ಥಾಪಿಸಿಲ್ಲ ಎಂಬುದಕ್ಕೆ ಸಮರ್ಥನೆಯೂ ಆಗಿದೆ. ನಿಜವಾಗಿ ಇಸ್ಲಾಂ ಹಿಂದಿನ ಕಾಲದ ಪ್ರವಾದಿಗಳು ಕಲಿಸಿದ ಬೋಧನೆಗಳ ಮುಂದುವರಿಕೆ ಮತ್ತು ಅದರ ಸಂಪೂರ್ಣತೆಯು ಅಂತ್ಯ ಪ್ರವಾದಿಯ ಮೂಲಕ ಸಾಕ್ಷಾತ್ಕಾರಗೊಂಡಿದೆ ಎಂಬುದು ತಿಳಿದು ಬರುತ್ತದೆ.

ಪ್ರವಾದಿ ಇಬ್ರಾಹಿಂ(ಅ) ತನ್ನ ವೃದ್ಧಾಪ್ಯದಲ್ಲಿ ಜನಿಸಿದ ಪ್ರೀತಿಯ ಮಗ ಇಸ್ಮಾಯಿಲ್ ಮತ್ತು ಪತ್ನಿ ಹಾಜಿರರನ್ನು ದೇವನ ಆಜ್ಞೆಯ ಪ್ರಕಾರ, ನಿರ್ಜನ ಮರುಭೂಮಿಗೆ ಹೋಗಿ ಬಿಟ್ಟು ಬರುತ್ತಾರೆ. ಇದು ದೇವನ ಅಪ್ಪಣೆಯಂತೆ ನಡೆಯುತ್ತಿದೆ ಎಂದು ತಿಳಿದಾಗ, ಹಾಜಿರಾ
ತನ್ನ ಗಂಡನನ್ನು ವಿರೋಧಿಸುವುದಿಲ್ಲ ಅಥವಾ ದೂರುವುದಿಲ್ಲ. ದೇವನ ಮುಂದೆ ತನ್ನ ಸ್ವಂತ ಆಸೆಗಳನ್ನು ತ್ಯಜಿಸುವ ಪ್ರವಾದಿ ಇಬ್ರಾಹೀಮ್ ಮತ್ತು ದೇವನ ಇಚ್ಛೆಯ ಪ್ರಕಾರ ಯಾವುದೇ ತ್ಯಾಗಕ್ಕೂ ಸಿದ್ದರಾದ ಹಾಜಿರಾ ಅವರು ಮನುಕುಲಕ್ಕೆ ಕೆಲವು ದೊಡ್ಡ ಪಾಠಗಳನ್ನು ಕಲಿಸಿ
ಕೊಟ್ಟಿದ್ದಾರೆ.

ಗಳಿಕೆ ಮತ್ತು ಭೋಗ ಮನುಷ್ಯನ ಸಹಜ ಸ್ವಭಾವ. ವರ್ಜಿಸುವುದು ಮತ್ತು ಪರಿತ್ಯಾಗ ಇದರ ವಿರುದ್ಧದ ಹೋರಾಟಗಳು. ಗಳಿಸುವ ಸಾಮರ್ಥ್ಯಕ್ಕಿಂತ ತ್ಯಜಿಸುವ ಇಚ್ಛೆಯು ಮನುಷ್ಯನನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ. ತ್ಯಾಗವು ಮನುಷ್ಯನನ್ನು ಪ್ರಾಣಿ ಮಟ್ಟದಿಂದ ನಿಜವಾದ
ಮಾನವನ ಮಟ್ಟಕ್ಕೆ ಏರಿಸುತ್ತದೆ. ಈ ಮಹಾನ್ ಚೇತನಗಳು ತಮ್ಮ ಜೀವನದ ಮೂಲಕ ಈ ಎರಡು ಮೌಲ್ಯಗಳನ್ನು ಕಲಿಸುತ್ತಿದ್ದಾರೆ.
ಮರುಭೂಮಿಯಲ್ಲಿ ಬಾಯಾರಿಕೆಯಿಂದ ಅಳುತ್ತಿದ್ದ ಮಗುವಿಗಾಗಿ ಹಾಜರ್ ನೀರು ಹುಡುಕಲು ಸ್ವಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ಓಡಾಡಿದ ಚರಿತ್ರೆ ಇದೆ. ಆ ಓಟವನ್ನು ಎಂದೆಂದಿಗೂ ಹಜ್‌ನ ಕರ್ಮಗಳ ಭಾಗವನ್ನಾಗಿ ಮಾಡಿರುವುದರಲ್ಲಿಯೂ ಕೂಡ ಪಾಠವಿದೆ.

ಹಾಜಿರ ಮಹಿಳೆ
ಕರಿಯ ಮೈಬಣ್ಣ
ದಾಸಿ
ವಿದೇಶಿ
ಮನುಷ್ಯನು ತನ್ನ ಭೌತಿಕ ದೃಷ್ಟಿಕೋನದಿಂದ ನೋಡಿದರೆ ಯಾವುದೇ ಮಹತ್ವವಿಲ್ಲವೆಂದು ಹೇಳುವ ವ್ಯಕ್ತಿತ್ವ. ಆದರೆ ದೇವನು ತನ್ನ ಆಧ್ಯಾತ್ಮಿಕ ಶಿಸ್ತಿನ ಮೂಲಕ ಮನುಷ್ಯನ ಈ ದೃಷ್ಟಿಕೋನಗಳನ್ನು ಸರಿಪಡಿಸುತ್ತಾನೆ. ರಾಜರು, ಪ್ರಜೆಗಳು, ಯಜಮಾನರು, ಗುಲಾಮರು, ಬಿಳಿಯ, ಕರಿಯ, ಸ್ಥಳೀಯ ಅಥವಾ ವಿದೇಶಿ, ಪುರುಷ ಅಥವಾ ಹೆಣ್ಣು ಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಹಾಜಿರಾರ ಹೆಜ್ಜೆಯನ್ನು ಅನುಸರಿಸಬೇಕಾಗಿದೆ. ಓರ್ವ ವ್ಯಕ್ತಿಯ ಹಜ್ಜನ್ನು ದೇವನು ಸ್ವೀಕರಿಸಲು ಇರಬೇಕಾದ ಉಪಾಧಿಗಳಲ್ಲಿ ಇದು ಒಂದು.

ಮನುಷ್ಯನು ತನ್ನ ಭೌತಿಕ ದೃಷ್ಟಿಕೋನದ ಮೂಲಕ ಸಾಮಾಜಿಕ ಜೀವನದಲ್ಲಿ ಸೃಷ್ಟಿಸಿದ ಅಸಮಾನತೆಯ ಕಳೆಯನ್ನು ದೇವನು ತನ್ನ ಆಧ್ಯಾತ್ಮಿಕ ಶಿಸ್ತುಗಳ ಮೂಲಕ ನಾಶಪಡಿಸುವ ಈ ಆರಾಧನೆ ಎಷ್ಟು ಶ್ರೇಷ್ಠವಾಗಿದೆ! ಈ ಸಂಪ್ರದಾಯವು ಪ್ರವಾದಿ ಮುಹಮ್ಮದ್(ಸ) ರವರು ಕಅಬ ಭವನದ ಮೇಲೆ ಕಪ್ಪು ಮನುಷ್ಯನಾದ ಬಿಲಾಲ್ ಅನ್ನು ಆರೋಹಿಸುವ ಮೂಲಕ ಮಕ್ಕ ವಿಜಯವನ್ನು ಘೋಷಿಸುವುದರೊಂದಿಗೆ ಜೋಡಿಸಿ ಕೊಂಡಿದೆ.

ಅಲ್ಲಾಹನು ಪ್ರತಿಷ್ಠಿತ ಭವನವಾದ `ಕಅಬಾ’ವನ್ನು ಜನರ ಪಾಲಿಗೆ (ಸಾಮೂ ಹಿಕ ಜೀವನವನ್ನು) ನೆಲೆನಿಲ್ಲಿಸುವ ಸಾಧನವಾಗಿ ಮಾಡಿದನು. (5:97)

‘ಜನರನ್ನು ಸಾಮಾಜಿಕ ಬದುಕಿನ ಅಸ್ತಿತ್ವವನ್ನು ಉಳಿಸುವ ಸಾಧನವಾಗಿ ಮಾಡಿದನು’ ಎಂಬ ಘೋಷಣೆಯು ಹಲವು ಅರ್ಥವನ್ನು ಹೊಂದಿದೆ.
ವರ್ಣಭೇದ ನೀತಿ, ಜಾತೀಯತೆ, ಕೋಮುವಾದ, ರಾಷ್ಟ್ರೀಯತೆ ಎಲ್ಲವೂ ಸ್ವಸ್ಥ ಸಮಾಜವನ್ನು ಕೊರೆಯುವ ಗೆದ್ದಲುಗಳಾಗಿವೆ. ಇವೆಲ್ಲವನ್ನು ಕೆಡವಿ, ಒಂದೇ ಬಟ್ಟೆ ಧರಿಸಿ, ಒಂದೇ ಮಂತ್ರ ಪಠಿಸುತ್ತಾ, ಭಕ್ತರು ಕಅಬಾಲಯದ ಸುತ್ತಲೂ ಹಜ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ.

ಅದರ ಸೌಂದರ್ಯವನ್ನು, ವರ್ಣ ತಾರತಮ್ಯದ ಬಲಿಪಶುಗಳಲ್ಲಿ ಒಬ್ಬರಾದ ವಿಶ್ವಪ್ರಸಿದ್ಧ ಅಮೇರಿಕನ್ ಕಾರ್ಯಕರ್ತ ಮಾಲ್ಕಮ್ ಎಕ್ಸ್ ಅವರು ತಮ್ಮ ಹಜ್ ಅನುಭವದಲ್ಲಿ ಬರೆದಿದ್ದಾರೆ:
“ಪ್ರಪಂಚದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಯಾತ್ರಿಕರು ಇಲ್ಲಿ ತಲುಪಿದ್ದಾರೆ. ನೀಲಿ ಕಂಗಳು, ಬಂಗಾರದ ಬಣ್ಣದ ತಲೆ ಕೂದಲಿನಿಂದ ಹಿಡಿದು ಕಪ್ಪು ಚರ್ಮದ ಆಫ್ರಿಕನ್ನರವರೆಗೂ ವಿಭಿನ್ನ ಬಣ್ಣಗಳು. ಆದರೆ ನಾವೆಲ್ಲರೂ ಒಂದೇ ಆಚರಣೆಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಇದು ಏಕತೆ ಮತ್ತು ಸಹೋದರತ್ವದ ಚೈತನ್ಯವನ್ನು ತುಂಬುವ ಆರಾಧನೆಯಾಗಿದೆ. ಬಿಳಿಯರು ಮತ್ತು ಬಿಳಿಯರಲ್ಲ ದವರ ನಡುವೆ ಅಂತಹ ಐಕ್ಯತೆಯ ಭಾವನೆ ಎಂದಿಗೂ ಮೂಡಲು ಸಾಧ್ಯವಿಲ್ಲ ಎಂದು ಅಮೆರಿಕಾದ ನನ್ನ ಅನುಭವದಿಂದ ನಾನು ತಿಳಿದುಕೊಂಡಿದ್ದೇನೆ. ಅಮೆರಿಕ ಇಸ್ಲಾಮನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಏಕೆಂದರೆ ಸಮಾಜದಿಂದ ವಂಶೀಯತೆಯನ್ನು ಮುಕ್ತಗೊಳಿಸುವ ಸಾಧ್ಯತೆ ಇರುವಂತಹ ಏಕೈಕ ಧರ್ಮ ಇಸ್ಲಾಮ್ ಮಾತ್ರ ಆಗಿದೆ. ನನ್ನ ಮಾತುಗಳಿಗೆ ನೀವು ನಡುಗ ಬಹುದು ಎಂಬ ಕೃತಿಯಲ್ಲಿ (ಮಾಲ್ಕಮ್ ಎಕ್ಸ್, ಪು. 438).

ಪ್ರಪಂಚದ ವಿವಿಧ ಭಾಗಗಳಿಂದ ಯಾತ್ರಿಕರು ಒಂದೇ ಗುರಿಯೊಂದಿಗೆ ಹಜ್ ಮಾಡಲು ಒಂದುಗೂಡುತ್ತಾರೆ. ದೇಶ, ಭಾಷೆ, ಬಣ್ಣ ಮತ್ತು ಜಾತಿಯ ಭೇದಗಳನ್ನು ನಿರ್ಲಕ್ಷಿಸಿ, “ಒಬ್ಬನೇ ದೇವ, ಎಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳು” ಎಂಬ ಕುರ್‌ಆನ್‌ನ ಘೋಷಣೆಯನ್ನು ಪೂರೈಸುತ್ತದೆ. ಮಗುವಾಗಿದ್ದ ಇಸ್ಮಾಯೀಲ್ ಅಳುತ್ತಾ ಕಾಲನ್ನು ತುಳಿಯುವಾಗ ಆ ಮಕ್ಕಾದ ಬೆಚ್ಚನೆಯ ನೆಲದಲ್ಲಿ ‘ಝಂ ಝಂ ಚಿಮ್ಮಿತು. ಇದು ಪುರಾಣ ಅಥವಾ ನೀತಿಕಥೆ ಅಲ್ಲ; ಇದು ಇಂದಿಗೂ ಇರುವ ದೃಷ್ಟಾಂತ. ಮರುಭೂಮಿಯಲ್ಲಿ ಎಂದಿಗೂ ಮುಗಿಯದ ನೀರಿನ ಒರತೆ.

ವಾಸ್ತವವಾಗಿ, ಕ್ರಾಂತಿಯ ಬಿಸಿ ಮತ್ತು ಆಧ್ಯಾತ್ಮಿಕತೆಯ ತಂಪು ಇಲ್ಲಿ ಸಂಧಿಸುತ್ತದೆ. ಪ್ರವಾದಿ ಇಬ್ರಾಹೀಮ್(ಅ) ಮತ್ತು ಅವರ ಮಗ ಇಸ್ಮಾಯಿಲ್(ಅ)ರಿಗೆ ಮಾನವ ಸಾಮರ್ಥ್ಯಕ್ಕೆ ಅತೀತವಾದ ತ್ಯಾಗಕ್ಕೆ ಸಿದ್ಧರಾಗಲು ಸೂಚಿಸಲಾಗಿದೆ. ವೃದ್ಧಾಪ್ಯದಲ್ಲಿ ದೊರೆತ ಮಗನನ್ನು
ಬಲಿಕೊಡಬೇಕೆಂದು ದೇವನ ಅಪ್ಪಣೆಯಲ್ಲಿ ಅದನ್ನು ಕಾಣಬಹುದು. ತಂದೆ ಇಬ್ರಾಹೀಮ್(ಅ) ತಾಳ್ಮೆಯಿಂದ ಅದನ್ನು ಅನುಸರಿಸಲು ಸಿದ್ಧರಾದರು. ಇದು ದೇವನ ಆಜ್ಞೆಯಾಗಿದ್ದರೆ, ಹಾಗೆ ಆಗಲಿ ಎಂದು ಇಸ್ಮಾಯಿಲ್ ನಿಸ್ಸಂಕೋಚವಾಗಿ ಪ್ರತಿಕ್ರಿಯಿಸಿದರು. ದೇವನನ್ನು
ಅನುಸರಿಸಬೇಕಾದ ರೀತಿಯನ್ನು ಈ ಮಾದರಿ ವ್ಯಕ್ತಿತ್ವಗಳು ಮನುಷ್ಯನಿಗೆ ಕಲಿಸಿಕೊಡುತ್ತದೆ. ಈ ಮಾದರಿಯನ್ನು ತಮ್ಮ ಜೀವನದಲ್ಲಿ ಅನುಸರಿಸುವವರು ಹಾಜಿಗಳಾಗುತ್ತಾರೆ ಎಂದು ಸೃಷ್ಟಿಕರ್ತನ ಕರೆಗೆ ಉತ್ತರಿಸುವ ಈ ಯಾತ್ರೆಯು ಮನೋರಂಜನೆಯ
ಯಾತ್ರೆಯಲ್ಲ; ವೈಯಕ್ತಿಕ ಹಿತಾಸಕ್ತಿಗಳನ್ನು ಬಲಿ ನೀಡುವ ಪ್ರತಿಜ್ಞೆಯಾಗಿದೆ. ಭೌತಿಕ ಕಾರ್ಯ ಸಾಧನೆಯು ಅದರ ಗುರಿಯಲ್ಲ; ನಿಷ್ಕಳಂಕ ದೇವಾನುಸರಣೆ ಮತ್ತು ದೇವ ಪ್ರೀತಿಯೇ ಇದರ ಗುರಿ. ಆದ್ದರಿಂದಲೇ ‘ಕಾರ್ಯ ಸಾಧನೆಗಾಗಿ ಹರಕೆ ಡಬ್ಬಿ ಅಥವಾ ಇನ್ನಿತರ ವಸ್ತುಗಳು
ಅಲ್ಲಿ ಇಲ್ಲದಿರುವುದು. ಆರಾಧನೆಗೆ ಎಂದು ಜನ ಸೇರುವ ಕಡೆ ‘ಹಣ ಸಂಗ್ರಹಿಸಲು ಡಬ್ಬಿ ಇಲ್ಲದಿರುವುದು ಅಲ್ಲಿ ನಡೆಯುವ ಆರಾಧನೆಯ ಉದ್ದೇಶ ಶುದ್ಧತೆಯನ್ನು ಎತ್ತಿ ತೋರಿಸುತ್ತದೆ. ಸೃಷ್ಟಿಯ ಬಾಧ್ಯತೆಗಳನ್ನು ಪೂರೈಸಿದ ಬಳಿಕವೇ ಹಜ್ ನಿರ್ವಹಿಸಬೇಕು ಎಂಬ
ನಿಬಂಧನೆ ಇದೆ. ಭೌತಿಕತೆಯನ್ನು ಸುಧಾರಿಸಿದರೆ ಮಾತ್ರ ಆಧ್ಯಾತ್ಮಿಕತೆ ಸ್ವೀಕಾರಾರ್ಹವಾಗುತ್ತದೆ ಎಂದು ಅರ್ಥ. ಆಧ್ಯಾತ್ಮಿಕತೆ ಮತ್ತು ಭೌತಿಕತೆಯನ್ನು ಹೀಗೆ ಜೋಡಿಸಿದಾಗ ಧಾರ್ಮಿಕತೆಯು ಒಂದು ಸಂಸ್ಕೃತಿಯಾಗುತ್ತದೆ.

ಪ್ರವಾದಿ ಇಬ್ರಾಹೀಮ್(ಅ) ವೃದ್ಧರಾಗಿದ್ದರು. ಹಾಜಿರ ಹೆಣ್ಣು, ಗುಲಾಮ ಮತ್ತು ಕರಿಯರಾಗಿದ್ದರು. ಇಸ್ಮಾಈಲ್ ಮಗುವಾಗಿದ್ದರು. ಮಾನವ ಸಮಾಜದಲ್ಲಿ, ಈ ಗುಂಪುಗಳಿಗೆ ಯಾವಾಗಲೂ ಬೆಂಬಲ ಮತ್ತು ನೆರಳಿನ ಅಗತ್ಯವಿರುತ್ತದೆ. ಯಾವುದೇ ನಾಗರಿಕ ಸಮುದಾಯವು ಅವರಿಗೆ `ಮೀಸಲಾತಿ’ ನೀಡುತ್ತದೆ. ಆದರೆ ಇಲ್ಲಿ ದೇವನ ಕರೆಯಿಂದ ದುರ್ಬಲರು ಶಕ್ತರಾಗುತ್ತಾರೆ ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ. ಹಜ್ ಈ ಮೂವರ ತ್ಯಾಗ ಜೀವನದ ಸಾಂಕೇತಿಕ ಪರಾಕಾಷ್ಠೆ. ಇದು ದೈವಿಕ ಆರಾಧನೆಯ ಮಾನವೀಕರಣ ಅಲ್ಲದೆ ಇನ್ನೇನು?

“ಪೂರ್ವ ಪಶ್ಚಿಮಗಳೆಲ್ಲವೂ ಅಲ್ಲಾಹನವು. ನೀವೆತ್ತ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಮುಖವಿದೆ. ನಿಶ್ಚಯವಾಗಿಯೂ ಅಲ್ಲಾಹ್ ಬಹುವಿಶಾಲನೂ ಅಭಿಜ್ಞನೂ ಆಗಿರುತ್ತಾನೆ.” (2:115)

ಆದರೆ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ, ಅವರು ಕಅಬಾಲಯಕ್ಕೆ ಅಭಿಮುಖವಾಗಿ ನಮಾಝ್ ನಿರ್ವಹಿಸಬೇಕೆಂದು ಪವಿತ್ರ ಕುರ್‌ಆನ್ ಕಲಿಸಿಕೊಟ್ಟಿದೆ. ನಮಾಝ್ ಪ್ರಪಂಚದಾದ್ಯಂತ ಹರಡಿರುವ ಜನರನ್ನು ಆಧ್ಯಾತ್ಮಿಕವಾಗಿ ಐಕ್ಯಗೊಳಿಸುತ್ತದೆ. ನೀವು ಪ್ರಪಂಚದ ಎಲ್ಲಿಂದ
ಪ್ರಾರ್ಥಿಸಿದರೂ, ನೀವು ನೇರವಾಗಿ ಮುಂದೆ ಸಾಗಿದರೆ ನೀವು ಕಅಬವನ್ನು ತಲುಪುತ್ತೀರಿ. ಹಜ್ ಮಾನವ ಸಮುದಾಯವನ್ನು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದುಗೂಡಿಸುತ್ತದೆ. ಹಜ್‌ನ ಒಂದು ಭಾಗವೆಂದರೆ ಮೂರು ಸ್ತೂಪಗಳ ಮೇಲೆ ಕಲ್ಲು ಹೊಡೆಯುವುದು, ಇದು ದುಷ್ಟತನದ
`ಏಕಸ್ವಾಮ್ಯ’ ಶೈತಾನನನ್ನು ಸಂಕೇತಿಸುತ್ತದೆ. ಕಣ್ಣಿಗೆ ಕಾಣದ ದೇವನಿಗೆ ದೃಶ್ಯ ಸಂಕೇತಗಳನ್ನು ನಿಷೇಧಿಸಿದ ಇಸ್ಲಾಮ್, ಅದೃಶ್ಯನಾಗಿರುವ ಸೈತಾನನಿಗೆ ಏಕೆ ದೃಶ್ಯ ಸಂಕೇತಗಳನ್ನು ಮಾಡಿದೆ? ಸೃಷ್ಟಿಕರ್ತನಾದ ದೇವ ಮತ್ತು ಅದಕ್ಕೆ ಸಂಬಂಧಿಸಿದ ಸತ್ಯವನ್ನು ಪ್ರತಿನಿಧಿಸಲು ಯಾವುದೇ ಬಿಂಬಗಳಿಗೆ ಸಾಧ್ಯವಿಲ್ಲ ಮತ್ತು ಅದು ಮಾನವ ನಿರ್ಮಿತ ದೇವರುಗಳು ಮತ್ತು ಸಂಬಂಧಿತ ಸುಳ್ಳುಗಳನ್ನು ಪ್ರತಿನಿಧಿಸುತ್ತದೆ. ಶೈತಾನನು ಸುಳ್ಳು
ಮತ್ತು ಅನ್ಯಾಯದ ವಕ್ತಾರ. ಬಹುಶಃ ಅದಕ್ಕಾಗಿಯೇ ದೇವ ಮತ್ತು ಅದಕ್ಕೆ ಸಂಬಂಧಿಸಿದ ಸತ್ಯವನ್ನು ಪ್ರತಿನಿಧಿಸದ ಪ್ರತೀಕವನ್ನು ಪಿಶಾಚಿಗೆ ನಿಶ್ಚಯಿಸಲಾಗಿದೆ. ಇದರ ತರ್ಕವೆಂದರೆ ‘ಒಂದು ವಸ್ತುವಿನ ವಾಸ್ತವತೆ ಮತ್ತು ಶ್ರೇಷ್ಠತೆ ಅದರ ವಿರುದ್ಧದ ಮೂಲಕ ಬಹಿರಂಗಗೊಳ್ಳುತ್ತದೆ’ ಎಂಬ ತತ್ವವಾಗಿರಬಹುದು.

ಮಾತ್ರವಲ್ಲ `ಆರಾಧನೆ’ಯು ಒಬ್ಬನೊಂದಿಗಿನ ಅತ್ಯಂತ ಬಾಂಧವ್ಯ ಮತ್ತು ಇನ್ನೊಂದರೊಂದಿಗೆ ಸಂಪೂರ್ಣ ದೂರವಿರುವುದಾಗಿದೆ. ಒಂದು ಅರ್ಥದಲ್ಲಿ, ಎಸೆಯುವುದು ಆರಾಧನೆಯ ವಿರುದ್ಧ ಸೂಚಕವಾಗಿದೆ. ಮೂರ್ತಿ ಪೂಜೆಯನ್ನು ನಿಷೇಧಿಸಿರುವಾಗ ಪ್ರತಿಬಿಂಬಕ್ಕೆ
ಕಲ್ಲೆಸೆಯುವುದನ್ನು ಒಂದು ಆಚರಣೆಯನ್ನಾಗಿ ಮಾಡುವ ತರ್ಕವೂ ಇದೇ ಆಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಹಜ್ ಎಂದರೆ ದೇವನಿಗೆ ನಿಕಟನಾಗಿ ಶೈತಾನನನ್ನು ದೂರವಿಡುವುದು. ಇದರರ್ಥ ಸತ್ಯ ಮತ್ತು ಒಳಿತನ್ನು ಹೃದಯದಲ್ಲಿರಿಸಿಕೊಂಡು ಅಸತ್ಯ ಮತ್ತು ಕೆಡುಕನ್ನು ತಿರಸ್ಕರಿಸುವುದು. ಮಾನವ ಕುಲವನ್ನು ಒಂದುಗೂಡಿಸುವ ಮತ್ತುಅದನ್ನು ಶ್ರೇಷ್ಠಗೊಳಿಸಲು ಇರುವಂತಹ ಮಹತ್ತರವಾದ ಒಂದು ಆರಾಧನೆಯಾಗಿದೆ ಹಜ್ಜ್.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …