4000 ವರ್ಷಗಳ ಹಿಂದೆ ಈ ಭೂಮುಖದ ಮೇಲೆ ನಡೆದ ಘಟನೆಯಿದು.
ಪ್ರವಾದಿ ಇಬ್ರಾಹೀಮ್, ಅವರ ಪತ್ನಿ ಹಾಜಿರಾ, ಮಗನಾದ ಇಸ್ಮಾಯೀಲ್ (ಅ)ರ ತುಂಬಿದ ಕುಟುಂಬ.
ಇರಾಕಿನಲ್ಲಿ ‘ರಾಜಾ ಪ್ರತ್ಯಕ್ಷ ದೇವತಾ’ (ರಾಜನೇ ಪ್ರತ್ಯಕ್ಷ ದೇವರು) ಎಂಬುದು ಸರ್ವಾಧಿಕಾರಿ ರಾಜ ನಮ್ರೂದನ ಕಾಲದ ಘೋಷಣೆಯಾಗಿತ್ತು.
ರಾಜಾ ಪ್ರತ್ಯಕ್ಷ ದೇವತಾ ಘೋಷಣೆಯ ವಿರುದ್ಧ ಎದ್ದು ನಿಂತು ಭೂಮ್ಯಾಕಾಶಗಳ ಸೃಷ್ಟಿಕರ್ತನೇ ನಮ್ಮ ಪ್ರಭು, ಜೀವನ ಮರಣ ನೀಡುವ ಅಲ್ಲಾಹನೇ ನನ್ನ ನೈಜ ಒಡೆಯ ಎಂದು ರಾಜನ ಮುಂದೆ ಘೋಷಿಸಿ ಆದಕ್ಕಾಗಿ ತನುಮನಧನ ಸರ್ವಸ್ವವನ್ನೂ ತ್ಯಾಗ ಮಾಡಿದವರೇ ಪ್ರವಾದಿ ಇಬ್ರಾಹೀಮ್(ಅ)
ಅಮಿಲೋ ಎಂಬ ಮೇಲ್ವರ್ಗದವರು ಕೆಳವರ್ಗದವರನ್ನು ಶೋಷಣೆಗೆ ಒಳಪಡಿಸುತ್ತಿದ್ದ ಕಾಲವಾಗಿತ್ತು ಇಬ್ರಾಹೀಮರ ಜನನದ ಕಾಲ. ಇಬ್ರಾಹೀಮರ ತಂದೆ ಅಮಿಲೋ ವರ್ಗದ ಪ್ರಸಿದ್ಧ ಪುರೋಹಿತರೂ ರಾಜನ ಆಸ್ಥಾನದಲ್ಲಿ ನ್ಯಾಯಾಧೀಶರೂ ಆಗಿದ್ದರು.
ತಂದೆಯಿಂದ, ರಾಜನ ಶಿಕ್ಷೆಯಿಂದ ಮುಕ್ತರಾಗಿ, ಇರಾಕಿನಿಂದ ವಲಸೆ ಹೋದ ಬಳಿಕ ಕಾಬಾ ಭವನವನ್ನು ಅವರಿಗಾಗಿ ಗೊತ್ತುಪಡಿಸಿ ಅಲ್ಲಾಹನು ನೀಡಿದ ಆದೇಶ ನೋಡಿ- “ಮತ್ತು ಜನರಿಗೆ ಹಜ್ಜ್ ಯಾತ್ರೆಗಾಗಿ ಸಾರ್ವತ್ರಿಕ ಕರೆ ನೀಡಿರಿ. ಅವರು ದೂರ ದೂರದ ಪ್ರದೇಶಗಳಿಂದೆಲ್ಲ ಕಾಲ್ನಡಿಗೆಯಲ್ಲೂ ಒಂಟೆಗಳ ಮೇಲೆ ಸವಾರಿ ಮಾಡಿಕೊಂಡೂ ನಿಮ್ಮ ಬಳಿಗೆ ಬರುವಂತಾಗಲಿ.” (ದಿವ್ಯ ಕುರ್ಆನ್)
ಇಬ್ರಾಹೀಮರ ಕರೆಗೆ ಓಗೊಟ್ಟು ಬೆಳಕಿನ ಕಡೆಗೆ ಮಳೆಹಾತೆಗಳು ಬರುವಂತೆ ಪ್ರತೀ ವರ್ಷ ಹಜ್ ಗಾಗಿ ಜನ ಬರುತ್ತಿದ್ದಾರೆ. ಮೀಡಿಯವಾಗಲೀ ಯಾವುದೇ ನೆಟ್ವರ್ಕ್ ಇಲ್ಲದ ಆ ಕಾಲದಲ್ಲಿ ನೀಡಿದ ಕರೆಯನ್ನು ಲೋಕದಾದ್ಯಂತ ಜನರಿಗೆ ತಲುಪುವ ವ್ಯವಸ್ಥೆ ಸ್ವತಃ ದೇವನೇ ಮಾಡಿದನು ಎಂಬುದರಲ್ಲಿ ಸಂದೇಹವಿದೆಯೇ?
ದೇವರ ಮುಂದೆ ನರಬಲಿ ನೀಡುತ್ತಿದ್ದ ಇರಾಕ್ನಲ್ಲಿ ನಂಬಿಕೆಯ ಹೆಸರಿನಲ್ಲಿ ಮನುಷ್ಯರನ್ನು ಬಲಿ ನೀಡುವ ಬದಲು ಪ್ರಾಣಿಬಲಿ ನೀಡುವ ಸಂಪ್ರದಾಯ ಇಬ್ರಾಹೀಮ(ಅ)ರಿಂದ ಅಸ್ತಿತ್ವಕ್ಕೆ ಬಂದಿರುವುದು ಮಾನವಕುಲಕ್ಕೆ ವರದಾನ. ಇಲ್ಲದಿದ್ದರೆ ನಂಬಿಕೆಯ ಹೆಸರಿನಲ್ಲಿ ಈಗಲೂ ನರಬಲಿ ನಡೆಯುತ್ತಿತ್ತು.
ಇರಾಕ್ ನಲ್ಲಿ ಹೆಣ್ಣು ಕೇವಲ ಭೋಗದ ವಸ್ತುವಾಗಿದ್ದಳು. ದೇವದಾಸಿ ಪದ್ಧತಿ ಅಲ್ಲಿ ಜಾರಿಯಲ್ಲಿತ್ತು. ಅದನ್ನು ಹೋಗಲಾಡಿಸಿದ ಖ್ಯಾತಿ ಇಬ್ರಾಹೀಮರ ಕುಟುಂಬಕ್ಕೆ ಸಲ್ಲುತ್ತದೆ. ಇಬ್ರಾಹೀಮರ ಪತ್ನಿ ಹಾಜಿರಾ ನೀರಿಗಾಗಿ ಓಡಾಡಿದ ಸಫಾ ಮರ್ವಾ ಬೆಟ್ಟ ಅಲ್ಲಾಹನ ಸಂಕೇತಳಾಗಿ ನಿಶ್ಚಯಿಸಲ್ಪಟ್ಟು ಹಾಜಿರಾರ ಪಾದಸ್ಷರ್ಷವಾದ ಜಾಗದಲ್ಲಿ ಓಡುವುದು ಹಜ್ ಕರ್ಮದ ಕಡ್ಡಾಯ ಭಾಗವಾಗಿ ಮಾರ್ಪಟ್ಟಿದೆ. ಪ್ರಯತ್ನಿಸದೇ ಏನೂ ಸಿಗಲಾರದು ಎಂಬುದಕ್ಕೆ ಝಮ್ ಝಮ್ ನೀರಿಗಾಗಿ ಹಾಜಿರಾರ ಓಡಾಟವೇ ಸಾಕ್ಷಿ.
ದೇವವಿಶ್ವಾಸದಿಂದ ಕೂಡಿದ ನೈತಿಕ ಮೌಲ್ಯಗಳಿರುವ ಪರಿಶುದ್ಧವಾದ ಸಮಾಜಕ್ಕೆ ಹಾಜಿರಾ ನಾಂದಿ ಹಾಡಿದರು.
ನೀರು ಸಿಕ್ಕಿದ ಬಳಿಕ ಇಬ್ರಾಹೀಮರು ಕಾಬಾ ಭವನ ಕಟ್ಟುವಾಗ ನಿಂತ ಜಾಗದಲ್ಲಿ ಅವರ ಪಾದ ಗುರುತುಗಳ ಕುರುಹು ಇದೆ.
ಝಮ್ ಝಮ್ ನೀರಿನ ಒರತೆ ದೇವನಿರುವುದು ಸತ್ಯ ಎಂಬುದಕ್ಕೆ ಪ್ರತ್ಯಕ್ಷ ಪುರಾವೆ. ಕಾರಣ ಇಬ್ರಾಹೀಮರ ಕುಟುಂಬ ಮಕ್ಕಾಗೆ ಹೋದಾಗ ಅದು ನೀರಿಲ್ಲದ ಮರುಭೂಮಿ ಪ್ರದೇಶವಾಗಿತ್ತು. ಇಸ್ಮಾಯೀಲರ ಪಾದದಡಿ ನೀರು ಬಂದಾಗ ಪಕ್ಷಿಗಳು ಆಕಾಶದಲ್ಲಿ ಹಾರಾಡಲಾರಂಭಿಸಿತು. ಇದನ್ನು ನೋಡಿದ ಮರುಭೂಮಿಯ ಅಲೆಮಾರಿ ಜುರ್ಹಮ್ ಗೋತ್ರ ಅಲ್ಲಿಗೆ ಆಗಮಿಸಿ ಆ ಪ್ರದೇಶವನ್ನು ಜನವಾಸ ಪ್ರದೇಶವಾಗಿ ಮಾರ್ಪಡಿಸಿತು. ಪ್ರಥಮವಾಗಿ ಹಜ್ ನಿರ್ವಹಿಸಿದ ಗೋತ್ರ ಕೂಡ ಜುರ್ಹಮ್ ಗೋತ್ರವಾಗಿದೆ.
ಇಬ್ರಾಹೀಮರ ಬಗ್ಗೆ ಅಲ್ಲಾಹನು ಹೇಳಿರುವುದು-
-ದೃಢಚಿತ್ತರು
-ಸದಾ ದೇವನ ಕಡೆಗೆ ಒಲಿಯುವವರಾಗಿದ್ದರು
-ಕೋಮಲ ಹೃದಯಿಯಾಗಿದ್ದರು
-ಅತಿಥಿ ಸತ್ಕಾರ ಮಾಡುವವರಾಗಿದ್ದರು
-ದೇವನ ಬಗ್ಗೆ ಏಕಾಗ್ರಚಿತ್ತರಾಗಿದ್ದರು
-ಸರ್ವಜನರ ನಾಯಕ
-ಅಲ್ಲಾಹನ ಮಿತ್ರರು
-ಇಬ್ರಾಹೀಮರು ಒಂದು ಸಮುದಾಯವಾಗಿದ್ದರು
-ಇಬ್ರಾಹೀಮರಿಗೆ ಅಲ್ಲಾಹನ ಸಲಾಮ್ (ರಕ್ಷಣೆ,ಶಾಂತಿ ) ಇದೆ.
ತಂದೆ ದೇವನ ಆಸ್ಥಾನದಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಮಗನಾದ ನನಗೂ ಅದೇ ರೀತಿಯ ಆಡಂಬರದ ಜೀವನ, ಉನ್ನತ ಸ್ಥಾನಮಾನ, ಹೆಣ್ಣು ಹೊಣ್ಣು ಎಲ್ಲವೂ ಸಿಗಬಹುದು ಎಂಬ ಆಸೆ ಕಿಂಚಿತ್ತೂ ಮೂಡದೆ ಸ್ವಂತ ಬುದ್ಧಿಯಿಂದ ಭೂಮ್ಯಾಕಾಶಗಳ ಸೃಷ್ಟಿಕರ್ತನ ಮೇಲೆ ವಿಶ್ವಾಸವಿರಿಸಿ ಉಚ್ಚನೀಚತೆಯನ್ನು ಪ್ರತಿಪಾದಿಸುವ ಜನಾಂಗೀಯತೆಯ ವಿರುದ್ಧ ಸಮರಸಾರಿ, ದೇವನ ಸಹಾಯದಿಂದ ಸಫಲರಾಗಿ, ಮಾನವ ಸಮಾನತೆಯನ್ನು ಹಜ್ ಕರ್ಮದಲ್ಲಿ ಪ್ರಾಯೋಗಿಕವಾಗಿ ತೋರಿಸಿಕೊಟ್ಟು, ವಿಶ್ವಭ್ರಾತೃತ್ವದ ಸಂದೇಶ ಸಾರಿದ ಅಲ್ಲಾಹನ ಮಿತ್ರ ಎಂಬ ಬಿರುದಿಗೆ ಅರ್ಹವಾದ, ಸಜ್ಜನ ದಾಸರಾದ ಇಬ್ರಾಹೀಮ್(ಅ) ಮತ್ತು ಅವರ ಕುಟುಂಬದ ಮೇಲೆ ಅಲ್ಲಾಹನ ಶಾಂತಿ ಇರಲಿ.
🖋️ಶಮೀರ ಜಹಾನ್
IslamKannada News Portal
