✍️ ಸಯ್ಯದ್ ಅಝರುದ್ದೀನ್
ಅನುವಾದ: ಮುಖ್ತಾರ್ ಅಹ್ಮದ್
ಇಂದಿನ ಶಬ್ದಕೋಶದಲ್ಲಿ ಪ್ರಭಾವಿಗಳೆಂದರೆ, ಅಭಿಪ್ರಾಯಗಳನ್ನು ರೂಪಿಸುವವರು, ಸಮುದಾಯಗಳನ್ನು ಸಜ್ಜುಗೊಳಿಸುವವರು ಮತ್ತು ಬದಲಾವಣೆಯನ್ನು ಚಾಲನೆ ಮಾಡುವವರು. ಆಧುನಿಕ ಪರದೆಗಳ ಆಚೆಗೆ ನಾವು ದೃಷ್ಟಿಹಾಯಿಸಿದರೆ ಇತಿಹಾಸವು ಖಂಡಗಳು ಮತ್ತು ಶತಮಾನಗಳನ್ನು ವ್ಯಾಪಿಸಿರುವ ಮತ್ತೊಂದು ರೀತಿಯ ಪ್ರಭಾವಶಾಲಿ ವ್ಯಕ್ತಿಯನ್ನು ಪ್ರಸ್ತುತಪಡಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ಅವರನ್ನು ವಿಶ್ವ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಗುರುತಿಸಲಾಗಿದೆ.
ಮೈಕಲ್ ಹೆಚ್. ಹಾರ್ಟ್ ಅವರ ಪ್ರಸಿದ್ಧ ಕೃತಿ `ದಿ 100’ನಲ್ಲಿ, ಅವರನ್ನು ಅತ್ಯಂತ ಉನ್ನತ ಸ್ಥಾನದಲ್ಲಿ ಇರಿಸಿದ್ದಾರೆ. ಅವರ ಪ್ರಭಾವವು ಧರ್ಮವನ್ನು ಮೀರಿ ರಾಜಕೀಯ, ಕಾನೂನು, ಸಾಮಾಜಿಕ ರೂಢಿಗಳು, ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ರೂಪಿಸಿದ ಸಂಸ್ಥೆಗಳಿಗೆ ವಿಸ್ತರಿಸಿದೆ ಎಂದು ವಾದಿಸುತ್ತಾರೆ. ವೈಯಕ್ತಿಕ ಪ್ರೇರಣೆ, ವೈಯಕ್ತಿಕ ಸಾಮರ್ಥ್ಯ, ಸಾಮಾಜಿಕ ಪ್ರೇರಣೆ, ಸಾಮಾಜಿಕ ಸಾಮರ್ಥ್ಯ, ರಚನಾತ್ಮಕ ಪ್ರೇರಕ ಮತ್ತು ರಚನಾತ್ಮಕ ಸಾಮರ್ಥ್ಯ ಎಂಬ ಆರು ಪರಸ್ಪರ ಸಂಬಂಧಿತ ಅಂಶಗಳಿಂದ ಅವರ ಪ್ರಭಾವ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ ಮತ್ತು ಅವರ ಜೀವನದಿಂದ ನಿಖರ ಘಟನೆಗಳಲ್ಲಿ ಪ್ರತಿಯೊಂದನ್ನು ಆಧಾರವಾಗಿಟ್ಟುಕೊಂಡು, ಇತರ ಮಹಾನ್ ನಾಯಕರ ಗಮನಾರ್ಹ ಜೀವನಗಳಿಗೆ ಸಮಾನಾಂತರಗಳನ್ನು ನೇರ, ತುಲನಾತ್ಮಕ ವಿವರಣೆಗಾಗಿ ಚಿತ್ರಿಸುತ್ತದೆ.
1.ವೈಯಕ್ತಿಕ ಪ್ರೇರಣೆ:
ಪ್ರವಾದಿಯವರಿಗೆ(ಸ), ವೈಯಕ್ತಿಕ ಪ್ರೇರಣೆಯ ಬೀಜವು ಕುರ್ಆನ್ ಅವತೀರ್ಣದ ಕ್ಷಣದಲ್ಲಿ ಬಿತ್ತಲ್ಪಟ್ಟಿತು ಮತ್ತು ಮಕ್ಕಾದ ದಬ್ಬಾಳಿಕೆಯ ವಿಷಮ ಪರಿಸ್ಥಿತಿಯಲ್ಲಿ ಅದು ಬೆಳೆಯಿತು. ಹಿರಾ ಗುಹೆಯಲ್ಲಿ ಪ್ರಪ್ರಥಮ ಕುರ್ಆನ್ ಅವತೀರ್ಣದಲ್ಲಿ “ಓದು” (ಇಕ್ರಾ) ಎಂಬ ಆಜ್ಞೆಯನ್ನು ಪ್ರವಾದಿಯವರಿಗೆ(ಸ) ನೀಡಲಾಯಿತು. ಇದು ಜನರನ್ನು ಏಕದೇವತ್ವ, ನ್ಯಾಯ, ಕರುಣೆ ಮತ್ತು ದೇವನ ಮುಂದೆ ಹೊಣೆಗಾರಿಕೆಗೆ ಕರೆಯುವ ಧ್ಯೇಯದ ಜನನವನ್ನು ಗುರುತಿಸಿತು. ಇದು ಆಕಸ್ಮಿಕ ಸುಧಾರಣೆಯಾಗಿರಲಿಲ್ಲ. ಇದು ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದ ಸಂಪೂರ್ಣ ಮರು ಜೋಡಣೆಯಾಗಿತ್ತು. ಯಥಾಸ್ಥಿತಿಗೆ ಅಡ್ಡಿಯಾಗುತ್ತದೆ ಎಂದು ಭಯಪಟ್ಟವರಿಂದ ಮುಹಮ್ಮದ್(ಸ) ಹಲವು ವರ್ಷಗಳ ಕಾಲ ಹಗೆತನವನ್ನು ಸಹಿಸಿಕೊಂಡರು. ಆದರೂ ಅವರ ಪ್ರೇರಕ ಶಕ್ತಿ ಬಲಿಷ್ಠವಾಗಿತ್ತು. ಅವರನ್ನು ಉಪದೇಶ, ಮಾರ್ಗದರ್ಶನ ಮತ್ತು ಸುಧಾರಣೆಯಲ್ಲಿ ಮುಂದುವರಿಯುವಂತೆ ಪ್ರೇರೇಪಿಸಿತು.
ಅವರ ಪ್ರೇರಣೆಯೂ ಸಹ ಆಳವಾದ ಸಾಮಾಜಿಕ ಮತ್ತು ಸಹಾನುಭೂತಿಯುಳ್ಳದ್ದಾಗಿತ್ತು. ಅವರು ದುರ್ಬಲರು, ಅನಾಥರು, ಬಡವರು, ಗುಲಾಮರ ಬಗ್ಗೆ ಕಾಳಜಿ ವಹಿಸಿದರು ಮತ್ತು ವಿಭಿನ್ನ ಸಾಮಾಜಿಕ ಜವಾಬ್ದಾರಿಯ ಉಜ್ವಲ ಮಾದರಿಯನ್ನು ಸಾಕಾರಗೊಳಿಸಿದರು. ಮಕ್ಕಾದಲ್ಲಿ ಮುಸ್ಲಿಮರಿಗೆ ಸಂಕಷ್ಟಗಳು ವ್ಯಾಪಕವಾದಾಗ ಅವರು ಸಂದೇಶವನ್ನು ತ್ಯಜಿಸಲಿಲ್ಲ. ಅವರು ಉತ್ತಮ ಕಾರ್ಯವಿಧಾನವನ್ನು ಅಳವಡಿಸಿಕೊಂಡರು. ತಾಳ್ಮೆಯನ್ನು ಪ್ರೋತ್ಸಾಹಿಸಿದರು ಮತ್ತು ನ್ಯಾಯಯುತ ಮತ್ತು ನೀತಿವಂತ ಸಮಾಜದ ಗುರಿಯನ್ನು ಹಿಡಿದರು. ಮದೀನಾಕ್ಕೆ ವಲಸೆ ಹೋಗುವುದು ಹತಾಶೆಯಿಂದ ಹುಟ್ಟಿದ ಆಕಸ್ಮಿತ ಆವಿಷ್ಕಾರವಾಗಿರಲಿಲ್ಲ, ಆದರೆ ಸಮುದಾಯದಲ್ಲಿ ಅದರ ಪ್ರಕಾರ ಬದುಕಬಲ್ಲ ಆ ದೃಷ್ಟಿಕೋನವನ್ನು ರಕ್ಷಿಸಲು ಮತ್ತು ಸಾಕಾರಗೊಳಿಸಲು ಹೂಡಿದ ಒಂದು ಕಾರ್ಯತಂತ್ರದ ಆಯ್ಕೆಯಾಗಿತ್ತು.
ಧ್ಯೇಯೋದ್ದೇಶವನ್ನು ಕೈ ಬಿಡುವಂತೆ ಕುರೈಶಿಗಳು ಒತ್ತಡ ಹೇರಿ, ರಾಜಪಟ್ಟ, ಐಶ್ವರ್ಯ ಮತ್ತು ಎಲ್ಲ ಸೌಲಭ್ಯಗಳು ಉಡುಗೊರೆಯಾಗಿ ನೀಡಲು ಮುಂದೆ ಬಂದಾಗ, ಅವರು ದೃಢವಾಗಿ ಉತ್ತರಿಸಿದರು, “ಅಲ್ಲಾಹನಾಣೆ ನೀವು ನನ್ನ ಬಲಗೈಯಲ್ಲಿ ಸೂರ್ಯನನ್ನು ಮತ್ತು ನನ್ನ ಎಡಗೈಯಲ್ಲಿ ಚಂದ್ರನನ್ನೂ ಇಟ್ಟರೂ, ಅಲ್ಲಾಹನು ಇದನ್ನು ಯಶಸ್ಸುಗೊಳಿಸುವ ವರೆಗೆ ಅಥವಾ ನಾನು ಈ ಪ್ರಯತ್ನದಲ್ಲಿ ಸಾಯುವ ವರೆಗೂ ಈ ಧ್ಯೇಯವನ್ನು ತ್ಯಜಿಸುವುದಿಲ್ಲ.” ಪ್ರವಾದಿಯವರ(ಸ) ಈ ಅಚಲ ವೈಯಕ್ತಿಕ ಪ್ರೇರಣೆಯು ಸಾವಿರಾರು ಜನರಿಗೆ ಸ್ಫೂರ್ತಿ ನೀಡಿತು. ಅವರ ಪ್ರಭಾವವು ಆಳವಾದ ಮತ್ತು ಶಾಶ್ವತ ಛಾಪನ್ನು ಹುಟ್ಟು ಹಾಕಿತು.
2.ವೈಯಕ್ತಿಕ ಸಾಮರ್ಥ್ಯ:
ಪ್ರವಾದಿವರ್ಯರ(ಸ) ವೈಯಕ್ತಿಕ ಸಾಮರ್ಥ್ಯಗಳು ಹಲವು ಮತ್ತು ವೈವಿಧ್ಯಮಯವಾಗಿದ್ದವು. ಅವರ ಭಾಷಣ ಮತ್ತು ನೈತಿಕ ಸ್ಪಷ್ಟತೆಯು ವಿವಿಧ ಬುಡಕಟ್ಟುಗಳು, ಭಾಷೆಗಳು ಮತ್ತು ಸಾಮಾಜಿಕ ಸ್ತರಗಳಲ್ಲಿ ಪ್ರತಿಧ್ವನಿಸುವ ರೀತಿಯಲ್ಲಿ ಸಂಕೀರ್ಣವಾದ, ಪರಿವರ್ತಕ ಸಂದೇಶವನ್ನು ವ್ಯಕ್ತಪಡಿಸಲು ಅವರಿಗೆ ಅವಕಾಶ ಮಾಡಿಕೊಟ್ಟಿತು. ಅವರು ಕಠಿಣ ಸಂದರ್ಭಗಳಲ್ಲಿ ಅಸಾಧಾರಣ ತೀರ್ಪು ನೀಡಿದರು. ನಂಬಿಕೆಯನ್ನು ವಾಸ್ತವಿಕತೆಯೊಂದಿಗೆ ಸಮತೋಲನಗೊಳಿಸಿದರು. ಜನರನ್ನು ಓದುವ, ಬುದ್ಧಿವಂತಿಕೆಯಿಂದ ಮಾತುಕತೆ ನಡೆಸುವ ಮತ್ತು ವಿಭಿನ್ನ ಜನರಿಗೆ ಸಂದೇಶ ಕಳುಹಿಸುವ ಅವರ ಸಾಮರ್ಥ್ಯವು ಮಕ್ಕಾದಲ್ಲಿ ಧರ್ಮೋಪದೇಶದ ಆರಂಭಿಕ ದಿನಗಳಿಂದ ಮದೀನಾದಲ್ಲಿ ಆಡಳಿತದ ವರೆಗೂ ಸ್ಪಷ್ಟವಾಗಿತ್ತು.
ಓರ್ವ ಯುವ ಶಿಷ್ಯ ವ್ಯಭಿಚಾರಕ್ಕೆ ಅನುಮತಿ ಕೇಳಿದಾಗ ಅವನನ್ನು ಗದರಿಸುವ ಬದಲು, ಪ್ರವಾದಿ(ಸ) ಶಾಂತವಾಗಿ ಅವನೊಂದಿಗೆ ಸಂಭಾಷಣೆಯಲ್ಲಿ ತೊಡಗಿಸಿ, “ನಿನ್ನ ತಾಯಿ, ನಿನ್ನ ಸಹೋದರಿ, ನಿನ್ನ ಮಗಳಿಗೂ ಅದನ್ನೇ ಬಯಸುವಿಯಾ?” ಎಂದು ಕೇಳಿದರು. ಆ ಯುವಕನ ಹೃದಯವು ತಕ್ಷಣವೇ ಪರಿವರ್ತನೆಗೊಂಡಿತು. ಪ್ರವಾದಿಯ ಸಹಾನುಭೂತಿಯು ಪ್ರತಿರೋಧವನ್ನು ಸ್ವಯಂಪ್ರೇರಿತ ಜೋಡಣೆಯಾಗಿ ಪರಿವರ್ತಿಸಿತು. ಇದು ನಿಜವಾದ ಪ್ರಭಾವದ ಸಂಕೇತ. ಪ್ರವಾದಿ ಮುಹಮ್ಮದ್(ಸ) ಕೇವಲ ಬೋಧಿಸಲಿಲ್ಲ, ಅವರು ಮೊದಲು ಸಂಪೂರ್ಣ ಆಲಿಸಿದರು, ಸಹಾನುಭೂತಿ ತೋರಿಸಿದರು ಮತ್ತು ಬೆಸೆದುಕೊಂಡರು. ಹೀಗೆ ಅವರ ಪ್ರಭಾವವು ಜನರ ಹೃದಯಗಳು ಮತ್ತು ಸಂಘರ್ಷಗಳನ್ನು ಅರ್ಥ ಮಾಡಿಕೊಳ್ಳುವ ಅವರ ಅಪಾರ ಸಾಮರ್ಥ್ಯದಿಂದ ಬಂದಿತ್ತು.
ಅಲ್ಲದೇ, ಪ್ರವಾದಿ ಮುಹಮ್ಮದ್(ಸ)ರ ವೈಯಕ್ತಿಕ ಸಮಗ್ರತೆಯು ಅವರ ದೊಡ್ಡ ಶಕ್ತಿಯಾಗಿತ್ತು. ಪ್ರವಾದಿತ್ವಕ್ಕೆ ಬಹಳ ಮುಂಚಿತವಾಗಿಯೇ ಅವರನ್ನು ಅಲ್ ಅಮೀನ್ (ಪ್ರಾಮಾಣಿಕ) ಎಂದು ಕರೆಯಲಾಗುತ್ತಿತ್ತು. ಮಾತಿನಂತೆ ನಡೆಯುವ ಅವರ ಸಾಮರ್ಥ್ಯವು ಅವರ ಅನುಯಾಯಿಗಳಲ್ಲಿ ಅಚಲವಾದ ನಂಬಿಕೆಯನ್ನು ಬೆಳೆಸಿತು.
3.ಸಾಮಾಜಿಕ ಪ್ರೇರಕ:
ದೇವನ ಮುಂದೆ ನ್ಯಾಯ, ಸಹೋದರತ್ವ ಮತ್ತು ಹೊಣೆಗಾರಿಕೆಯ ಸಾಮಾನ್ಯ ದೃಷ್ಟಿಕೋನದ ಸುತ್ತ ಸಾವಿರಾರು ಜನರನ್ನು ಮುಹಮ್ಮದ್(ಸ) ಸಜ್ಜುಗೊಳಿಸಿದರು. ಅವರು ಸಾಮಾಜಿಕ ಜೀವನವನ್ನು ಬುಡಕಟ್ಟು ಜನಾಂಗದವರ ಗುರುತಿನ ಸುತ್ತ ಮತ್ತು ಮುಸ್ಲಿಮ್ ಸಮುದಾಯ(ಉಮ್ಮತ್)ವನ್ನು ರಕ್ತಸಂಬಂಧ ಮತ್ತು ಕುಲನಿಷ್ಠೆಯನ್ನು ಮೀರಿ ಮುನ್ನಡೆದರು. ಅವರು ದಬ್ಬಾಳಿಕೆ-ದೌರ್ಜನ್ಯದ ವಿರುದ್ಧ ದೃಢವಾಗಿ ಮಾತನಾಡಿದರು. ಮಹಿಳೆಯರು ಮತ್ತು ಅನಾಥರ ಸ್ಥಾನಮಾನವನ್ನು ಉನ್ನತೀಕರಿಸಿದರು ಮತ್ತು ಕರುಣೆ, ನ್ಯಾಯ ಮತ್ತು ಪರಸ್ಪರ ಬಾಧ್ಯತೆಯ ಮೇಲೆ ಕೇಂದ್ರೀಕೃತವಾದ ಸಾಮಾಜಿಕ ನೀತಿಯನ್ನು ಉತ್ತೇಜಿಸಿದರು. ಈ ನೈತಿಕ ಆಕರ್ಷಣೆಯು ಪ್ರಬಲವಾದ ಒಲವನ್ನು ಸೃಷ್ಟಿಸಿತು. ನೂತನ ಸಮುದಾಯಕ್ಕೆ ಸೇರಿದ ಜನರು ಹೊಸ ದೇವರನ್ನು ಗುರುತಿಸಿಕೊಂಡರು. ಮಾತ್ರವಲ್ಲ, ಸಮಾನ ನಡವಳಿಕೆ ಮತ್ತು ಪರಸ್ಪರ ರಕ್ಷಣೆಯಲ್ಲಿ ನೆಲೆಗೊಂಡಿರುವ ಹೊಸ ಸಾಮಾಜಿಕ ಪದ್ಧತಿಯಲ್ಲಿ ಬದುಕಲು ಹಾಗೆ ಮಾಡಿದರು.
ಇಲ್ಲಿ ನಾಲ್ಕು ಕುರುಹುಗಳು ಎದ್ದು ಕಾಣುತ್ತವೆ. ಮೊದಲನೆಯದಾಗಿ, ಮುಸ್ಲಿಮರು ಮತ್ತು ಮುಸ್ಲಿಮೇತರರ ನಡುವೆ ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಸ್ಥಾಪಿಸಿದ ಮದೀನಾ ಸಂವಿಧಾನವನ್ನು ರಚಿಸುವಲ್ಲಿ ಮತ್ತು ಅದನ್ನು ಜಾರಿಗೊಳಿಸುವಲ್ಲಿ ಅವರ ಪಾತ್ರವು ರಾಜಕೀಯ ಮತ್ತು ಕಾನೂನು ಕುಶಾಗ್ರಮತಿಯನ್ನು ತೋರಿಸಿತು. ಎರಡನೆಯದಾಗಿ, ಸಂಘರ್ಷಗಳನ್ನು ನಿಭಾಯಿಸುವಲ್ಲಿ- ಮುಖ್ಯವಾಗಿ ಕುರೈಶ್ಗಳೊಂದಿಗಿನ ಹುದೈಬಿಯಾ ಒಪ್ಪಂದ- ಅವರ ಕಾರ್ಯತಂತ್ರದ ತಾಳ್ಮೆ ಮತ್ತು ಮಾತುಕತೆಯ ಕೌಶಲ್ಯಗಳನ್ನು ಬಹಿರಂಗಪಡಿಸಿತು. ಅದು ಅಂತಿಮವಾಗಿ ಮುಸ್ಲಿಮ್ ಸಮುದಾಯವು ತನ್ನ ಸ್ಥಾನವನ್ನು ಬೆಳೆಸಲು ಮತ್ತು ಬಲಪಡಿಸಲು ಸ್ಥಳವನ್ನು ವಿಸ್ತರಿಸಿತು. ಮೂರನೇಯದಾಗಿ, ಸಾಮಾಜಿಕ ಪ್ರೇರಣೆಯನ್ನು ವಿವರಿಸುವ ನಿರ್ಣಾಯಕ ಮೈಲಿಗಲ್ಲು ಮುಹಾಜಿರ್ಗಳು (ಮಕ್ಕಾದಿಂದ ವಲಸೆ ಹೋದವರು) ಮತ್ತು ಅನ್ಸಾರ್ಗಳು (ಮದೀನಾದ ಸಹಾಯಕರು) ನಡುವೆ ರೂಪುಗೊಂಡ ಒಗ್ಗಟ್ಟು.
ಅವರ ಸಹಕಾರವು ತನ್ನನ್ನು ತಾನು ರಕ್ಷಿಸಿಕೊಳ್ಳಲು, ಸಂಸ್ಥೆಗಳನ್ನು ನಿರ್ಮಿಸಲು ಮತ್ತು ಒತ್ತಡದಲ್ಲಿ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳಲು ಸಮರ್ಥವಾಗಿರುವ, ದೃಢವಾದ ಸುಸಂಘಟಿತ ಸಮುದಾಯವನ್ನು ಸೃಷ್ಟಿಸಿತು. ನಾಲ್ಕನೆಯದಾಗಿ, ವಿದಾಯ ಧರ್ಮೋಪದೇಶವು ಸಾರ್ವತ್ರಿಕ ಮಾನವ ಸಮಾನತೆ ಮತ್ತು ದೇವರ ಮುಂದೆ ಎಲ್ಲ ಜನರ ಹಕ್ಕುಗಳನ್ನು ಒತ್ತಿ ಹೇಳುವ ಮೂಲಕ ಈ ಆಯಾಮವನ್ನು ಮತ್ತಷ್ಟು ಒತ್ತಿ ಹೇಳಿತು. ಇದರಿಂದಾಗಿ ಕೇವಲ ಬುಡಕಟ್ಟು ಪ್ರಯೋಜನಕ್ಕಿಂತ ಹೆಚ್ಚಾಗಿ ತತ್ವಗಳ ಮೇಲೆ ಸಾಮೂಹಿಕ ಕ್ರಿಯೆಯ ಉದ್ದೇಶವನ್ನು ಬಲಪಡಿಸಿತು.
4.ಸಾಮಾಜಿಕ ಸಾಮರ್ಥ್ಯ:
ಮುಹಮ್ಮದ್(ಸ) ಸಮಾಜ ನಿರ್ಮಾಣದಲ್ಲಿ ನಿಪುಣರಾಗಿದ್ದರು. ಚದುರಿದ ಬುಡಕಟ್ಟುಗಳು ಮತ್ತು ಬಣಗಳನ್ನು ಕಾರ್ಯನಿರ್ವಹಿಸುವ ಸಮಾಜವನ್ನಾಗಿ ಪರಿವರ್ತಿಸಿದರು. ಅವರು ಮೈತ್ರಿಗಳನ್ನು ರೂಪಿಸಿದರು. ನಿರಂತರ ಸಹಕಾರಿ ಕಾರ್ಯವಿಧಾನಗಳನ್ನು ರಚಿಸಿದರು. ಈ ವಿಷಯದಲ್ಲಿ ಮದೀನಾದ ಸಂವಿಧಾನವು ಒಂದು ಹೆಗ್ಗುರುತಿನ ಸಾಧನೆಯಾಗಿದೆ. ಇದು ಮುಸ್ಲಿಮರು, ಯಹೂದಿಗಳು ಮತ್ತು ಇತರ ಗುಂಪುಗಳಿಗೆ ನಿಯಮಗಳು, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸ್ಥಾಪಿಸಿತು ಮತ್ತು ಮಧ್ಯಸ್ಥಿಕೆ ಹಾಗೂ ಸಾಮೂಹಿಕ ಭದ್ರತೆಗಾಗಿ ನಿಯಮಗಳನ್ನು ನಿಗದಿ ಪಡಿಸಿತು. ಅವರು ಹಂಚಿಕೆಯ ಉದ್ದೇಶಗಳ ಸುತ್ತ ವೈವಿಧ್ಯಮಯ ಸಮುದಾಯವನ್ನು ಸಂಘಟಿಸಿದರು.
ಧಾರ್ಮಿಕ ಕರ್ತವ್ಯಗಳನ್ನು ನಾಗರಿಕ ಜವಾಬ್ದಾರಿಗಳೊಂದಿಗೆ ಸಮತೋಲನಗೊಳಿಸಿದರು. ಅವರ ಸಾಮಾಜಿಕ ಸಾಮರ್ಥ್ಯಗಳು ಪ್ರಾಯೋಗಿಕ ಆಡಳಿತಕ್ಕೆ ವಿಸ್ತರಿಸಿದವು. ಧಾರ್ಮಿಕ ಆಚರಣೆಗಳನ್ನು ಸಂಯೋಜಿಸುವುದು, ವಿವಾದಗಳ ಮಧ್ಯಸ್ಥಿಕೆ ವಹಿಸುವುದು ಮತ್ತು ಅಭಿಯಾನಗಳನ್ನು ಸುಬದ್ಧ ಚೌಕಟ್ಟಿನೊಳಗೆ ನಿಗದಿಪಡಿಸುವುದು. ಮದೀನಾದ ಸಾಮಾಜಿಕ ಘಟಕದಿಂದ ವಿಶಾಲ ಪ್ರದೇಶಗಳಿಗೆ ಇಸ್ಲಾಮಿನ ಪಸರಿಸುವಿಕೆಯು ಜನರು ನಾಯಕರು ಮತ್ತು ಸಮುದಾಯಗಳನ್ನು ಸಾಮಾನ್ಯ ಗುರಿಗಳ ಕಡೆಗೆ ಜೋಡಿಸುವ ಪ್ರವಾದಿಯವರ(ಸ) ಸಾಮರ್ಥ್ಯವನ್ನು ಅವಲಂಬಿಸಿತ್ತು.
ಕಾಬಾದ ಪುನರ್ನಿರ್ಮಾಣದ ಸಂದರ್ಭದಲ್ಲಿ ಕಪ್ಪು ಕಲ್ಲು (ಹಜರುಲ್ ಅಸ್ವದ್) ಅದರ ಸ್ಥಾನದಲ್ಲಿ ಯಾರು ಇಡಬೇಕೆಂಬ ವಿವಾದ ಕುರೈಶ್ ಗೋತ್ರಗಳಲ್ಲಿ ಹುಟ್ಟಿಕೊಂಡಿತು. ಸಂಘರ್ಷವನ್ನು ತಪ್ಪಿಸಲು ಪ್ರವಾದಿ ಮುಹಮ್ಮದ್(ಸ) ಕಲ್ಲನ್ನು ಬಟ್ಟೆಯ ಮೇಲೆ ಇಡಲು ಸೂಚಿಸಿದರು ಮತ್ತು ಪ್ರತಿಯೊಂದು ಕುಲದ ಪ್ರತಿನಿಧಿಗಳು ಅದನ್ನು ಒಟ್ಟಿಗೆ ಎತ್ತುವಂತೆ ಹೇಳಿದರು. ಅದು ಅದರ ಜಾಗಕ್ಕೆ ತಲುಪಿದ ನಂತರ ಅವರು(ಸ) ಅದನ್ನು ಸ್ವತಃ ಇರಿಸಿದರು. ತಮ್ಮ ಬುದ್ಧಿವಂತಿಕೆ ಮತ್ತು ಸಾಮಾಜಿಕ ಕಾಳಜಿಯಿಂದ ಶಾಂತಿಯುತವಾಗಿ ಸಮಸ್ಯೆಯನ್ನು ಪರಿಹರಿಸಿದರು.
5.ರಚನಾತ್ಮಕ ಪ್ರೇರಕ:
ಒಬ್ಬ ರಚನಾತ್ಮಕ ಪ್ರೇರಕನು ಪೀಳಿಗೆಯಿಂದ ಪೀಳಿಗೆಯ ಜನರಿಗೆ ಸ್ಫೂರ್ತಿ ಮತ್ತು ಪ್ರಯೋಜನವನ್ನು ನೀಡುವ ಶಾಶ್ವತ ವ್ಯವಸ್ಥೆಗಳನ್ನು ಸೃಷ್ಟಿಸುತ್ತಾನೆ ಮತ್ತು ಪ್ರವಾದಿ ಮುಹಮ್ಮದ್(ಸ) ನ್ಯಾಯ, ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಅವರು ಸ್ಥಾಪಿಸಿದ ಶಾಶ್ವತ ಚೌಕಟ್ಟುಗಳ ಮೂಲಕ ಇದನ್ನು ಸೃಷ್ಟಿಸಿದರು. ಯಾರೂ ಹಸಿವಿನಿಂದ ಬಳಲದಂತೆ ಸಂಪತ್ತಿನ ಪುನರ್ವಿತರಣೆಯನ್ನು ಖಾತ್ರಿ ಪಡಿಸುವ ರಚನಾತ್ಮಕ ಹಣಕಾಸು ಮಾದರಿಯಾದ ಝಕಾತ್ ವ್ಯವಸ್ಥೆಯಂತಹ ಸ್ಪಷ್ಟವಾದ ಅಭ್ಯಾಸಗಳನ್ನು ಅವರು ಪರಿಚಯಿಸಿದರು ಮತ್ತು ಆಡಳಿತ, ಕಲಿಕೆ ಮತ್ತು ಸಾಮಾಜಿಕ ಸುಧಾರಣೆಗೆ ಕೇಂದ್ರವಾಗಿ ಕಾರ್ಯ ನಿರ್ವಹಿಸಿದ ಮಸ್ಜಿದುನ್ನಬವಿಯನ್ನು ನಿರ್ಮಿಸಿದರು. ವ್ಯಾಪಾರದಲ್ಲಿ ಪ್ರಾಮಾಣಿಕತೆ, ದುರ್ಬಲರ ರಕ್ಷಣೆ ಮತ್ತು ಬುಡಕಟ್ಟು ವಿಭಾಗಗಳನ್ನು ಮೀರಿದ ಸಾರ್ವತ್ರಿಕ ನೈತಿಕ ಮಾನದಂಡಗಳನ್ನು ಅವರು ಒತ್ತಿ ಹೇಳಿದರು. ಅವರ ವಿದಾಯ ಧರ್ಮೋಪದೇಶವು ಈ ತತ್ವಗಳನ್ನು ಸಮಾನತೆ, ಮಹಿಳೆಯರಿಗೆ ಗೌರವ ಮತ್ತು ದಬ್ಬಾಳಿಕೆಯನ್ನು ತಿರಸ್ಕರಿಸುವ ಬಗ್ಗೆ ಕಾಲಾತೀತ ನಿರ್ದೇಶನಗಳಾಗಿ ರೂಪಿಸಿತು.
ಏಕದೇವೋಪಾಸನೆ, ಸಾಮಾಜಿಕ ನ್ಯಾಯ, ಕರುಣೆ ಮತ್ತು ದೇವರ ಮುಂದೆ ಹೊಣೆಗಾರಿಕೆ ಎಂಬ ಬಲವಾದ, ಶಾಶ್ವತವಾಗಿ ಪ್ರತಿಧ್ವನಿಸುವ ನಿರೂಪಣೆಯ ಮೂಲಕ ಪ್ರವಾದಿಯವರು(ಸ) ರೂಢಿಗಳ ರೂಪಾಂತರವನ್ನುಂಟು ಮಾಡಿದರು. ಈ ಪ್ರಾಮಾಣಿಕ ಚೌಕಟ್ಟು ನೈತಿಕ ನಡವಳಿಕೆಯನ್ನು ಕೇವಲ ವೈಯಕ್ತಿಕ ಆಯ್ಕೆಯಾಗಿರದೆ ಸಾಮಾಜಿಕ ಸಂಭಾವ್ಯತೆಯನ್ನಾಗಿ ಮಾಡಿತು.
6.ರಚನಾತ್ಮಕ ಸಾಮರ್ಥ್ಯ:
ಮುಹಮ್ಮದ್(ಸ) ಅವರು ತಮ್ಮ ಸಂದೇಶವನ್ನು ದೀರ್ಘಕಾಲೀನ ನಾಗರಿಕತೆಯ ಯೋಜನೆಯಾಗಿ ಪರಿವರ್ತಿಸಲು ಅನುವು ಮಾಡಿಕೊಡುವ ಬಾಳಿಕೆ ಬರುವ ಸಂಘಟಿತ ವ್ಯವಸ್ಥೆಯ ಪರಂಪರೆಯನ್ನು ಬಿಟ್ಟು ಹೋದರು. ಹಲವಾರು ಪ್ರಮುಖ ಅಂಶಗಳು ಈ ರಚನಾತ್ಮಕ ಸಾಮರ್ಥ್ಯವನ್ನು ವಿವರಿಸುತ್ತವೆ.
ಸಂಸ್ಥೆಗಳು ಮತ್ತು ಆರಾಧನಾಲಯಗಳು:
ಆರಂಭಿಕ ಮುಸ್ಲಿಮ್ ಸಮುದಾಯವು ಮಸೀದಿಗಳನ್ನು ಸ್ಥಾಪಿಸಿತು. ಅವು ನಮಾಝ್, ಕಲಿಕೆ, ಸಮಾಜ ಕಲ್ಯಾಣ, ಮಧ್ಯಸ್ಥಿಕೆ ಮತ್ತು ಸಾಮುದಾಯಿಕ ನಿರ್ಧಾರ ತೆಗೆದುಕೊಳ್ಳುವ ಸ್ಥಳಗಳಾಗಿ ಕಾರ್ಯನಿರ್ವಹಿಸಿದವು. ಈ ಕೇಂದ್ರಗಳು ಬೆಳೆಯುತ್ತಿರುವ ಧಾರ್ಮಿಕ ಮತ್ತು ನಾಗರಿಕ ಜೀವನವನ್ನು ಬಲಪಡಿಸಿದವು.
ಕಾನೂನು ಮತ್ತು ರಾಜಕೀಯ ಚೌಕಟ್ಟು:
ಮದೀನಾದ ಸಂವಿಧಾನವು ಲಿಖಿತ, ಬಹು ನಂಬಿಕೆಯ ನಾಗರಿಕ ಒಪ್ಪಂದದ ಆರಂಭಿಕ ಉದಾಹರಣೆಗಳಲ್ಲಿ ಒಂದಾಗಿದೆ. ಇದು ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಕ್ರೋಢೀಕರಿಸಿತು. ಮಧ್ಯಸ್ಥಿಕೆಗಾಗಿ ನಿಯಮಗಳನ್ನು ನಿಗದಿಪಡಿಸಿತು ಮತ್ತು ವೈವಿಧ್ಯಮಯ ಗುಂಪುಗಳ ನಡುವೆ ಸಾಮೂಹಿಕ ಭದ್ರತೆ ಮತ್ತು ಸಹಕಾರಕ್ಕಾಗಿ ಒಂದು ಚೌಕಟ್ಟನ್ನು ಒದಗಿಸಿತು.
ಆರ್ಥಿಕ ಮತ್ತು ಸಾಮಾಜಿಕ ಸಂಸ್ಥೆಗಳು:
ಝಕಾತಿನ ಪರಿಕಲ್ಪನೆ ಮತ್ತು ವಕ್ಫ್ ತರಹದ ಸಾರ್ವಜನಿಕ ಕಲ್ಯಾಣ ಮಾದರಿಗಳ ವ್ಯವಸ್ಥೆಯು ಅಗತ್ಯವಿರುವವರನ್ನು ನೋಡಿಕೊಳ್ಳಲು ಮತ್ತು ಸಮುದಾಯದಲ್ಲಿ ಸಂಪತ್ತನ್ನು ನಿಯಂತ್ರಿಸಲು ಪ್ರಯತ್ನಿಸುವ ಸಾಮಾಜಿಕ ಆರ್ಥಿಕತೆಗೆ ಅಡಿಪಾಯ ಹಾಕಿತು. ಸಾರ್ವಜನಿಕ ಸರಕುಗಳನ್ನು ಉಳಿಸಿಕೊಳ್ಳುವ ಹಂಚಿಕೆಯ ಖಜಾನೆ ಮತ್ತು ಇತರ ಕಾರ್ಯವಿಧಾನಗಳ ಕಲ್ಪನೆಯು ಪ್ರವಾದಿಯವರ(ಸ) ಸಮುದಾಯದಲ್ಲಿ ಸ್ಫಟಿಕೀಕರಣಗೊಳ್ಳಲು ಪ್ರಾರಂಭಿಸಿತು.
ಆಧ್ಯಾತ್ಮಿಕ ಮತ್ತು ಧಾರ್ಮಿಕ ನಿರಂತರತೆ:
ಪ್ರವಾದಿಯವರ(ಸ) ಮಾರ್ಗದರ್ಶನವು ಮುಸ್ಲಿಮರ ಆರಾಧನೆ ಮತ್ತು ದೈನಂದಿನ ಜೀವನವನ್ನು ತಲೆಮಾರುಗಳಾದ್ಯಂತ ವ್ಯಾಖ್ಯಾನಿಸುವ ವಿಧಿಗಳು, ಪ್ರಾರ್ಥನೆಗಳು ಮತ್ತು ಹೊಂದಾಣಿಕೆಗಳನ್ನು ಸ್ಥಾಪಿಸಿತು. ಅವರ ಯುಗವನ್ನು ಮೀರಿ ನಿರಂತರತೆಯನ್ನು ಖಚಿತಪಡಿಸಿತು. ಈ ರಚನಾತ್ಮಕ ಅಂಶಗಳು ಇಸ್ಲಾಮ್ ಧರ್ಮದ ಹರಡುವಿಕೆ ಮತ್ತು ಸಾಮಾಜಿಕ ಕ್ರಮಗಳ ಪರಿವರ್ತನೆಗೆ ಶಾಶ್ವತ ವೇದಿಕೆಯನ್ನು ಸೃಷ್ಟಿಸಿದವು. ಅವರ ನಾಯಕತ್ವದಲ್ಲಿ ಹೊರಹೊಮ್ಮಿದ ಸಂಸ್ಥೆಗಳು, ಕಾನೂನು ನಿಯಮಗಳು ಮತ್ತು ಕಲ್ಯಾಣ ಆಧಾರಿತ ಅಭ್ಯಾಸಗಳು ಶತಮಾನಗಳ ವರೆಗೆ ಮತ್ತು ಅದಕ್ಕೂ ಮೀರಿ ಮುಸ್ಲಿಮ್ ಸಮಾಜಗಳ ಮೇಲೆ ಪ್ರಭಾವ ಬೀರುತ್ತಲೇ ಇವೆ.
ಪ್ರವಾದಿ ಮುಹಮ್ಮದ್(ಸ) ಅವರ ಪ್ರಭಾವವು ಒಂದೇ ಕ್ರಿಯೆಯಿಂದ ಅಥವಾ ಒಂದು ಕ್ಷಣದಿಂದ ಹೊರ ಹೊಮ್ಮುವುದಿಲ್ಲ. ಬದಲಾಗಿ ಆರು ಪರಸ್ಪರ ಸಂಬಂಧ ಹೊಂದಿರುವ ಅಂಶಗಳ ಸಂಕೀರ್ಣ ಜೋಡಣೆಯಿಂದ ಹೊರಹೊಮ್ಮುತ್ತದೆ.
ಅವರ ಆಂತರಿಕ ಶಕ್ತಿ, ಅವರ ವೈಯಕ್ತಿಕ ಸಾಮರ್ಥ್ಯ, ಪ್ರೇರೇಪಿಸುವ ಶಕ್ತಿ, ಸಜ್ಜುಗೊಳಿಸುವ ಮತ್ತು ಸಂಘಟಿಸುವ ಸಾಮರ್ಥ್ಯ ಮತ್ತು ಸ್ಥಿರ ಸಂಸ್ಥೆಗಳನ್ನು ನಿರ್ಮಿಸುವ ಕೌಶಲ್ಯವೇ ಮೈಕಲ್ ಹಾರ್ಟ್ ಅವರ ‘ದಿ 100’ ಗ್ರಂಥದಲ್ಲಿ ಇತಿಹಾಸದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸುವುದಕ್ಕೆ ಕಾರಣವಾಗಿದೆ.
ಕೃಪೆ: ರೇಡಿಯನ್ಸ್ ವೀಕ್ಲಿ
IslamKannada News Portal
