Home / ಲೇಖನಗಳು / ಕಅಬಾ: ಕಪ್ಪು ಕಲ್ಲಿಗೆ ಪೂಜೆಯೇ?

ಕಅಬಾ: ಕಪ್ಪು ಕಲ್ಲಿಗೆ ಪೂಜೆಯೇ?

✍️ ಮುಹಮ್ಮದ್ ಕುಂಞಿ
ರಾಜ್ಯ ಕಾರ್ಯದರ್ಶಿ ಜಮಾಅತೆ ಇಸ್ಲಾಮೀ ಹಿಂದ್

– ಬಕ್ರೀದ್ ಅಂದರೆ ಏನು?
– ಬಕ್ರೀದ್ ಹಬ್ಬಕ್ಕೆ ಇರುವ ಇನ್ನೊಂದು ಹೆಸರು ಈದುಲ್ ಅಝ್ಹಾ. ಇದು ಪ್ರವಾದಿ ಇಬ್ರಾಹೀಮ(ಅ)ರ ಉದಾತ್ತ ಬದುಕಿನ ತ್ಯಾಗದ ಹಿನ್ನೆಲೆಯನ್ನು ಸ್ಮರಿಸುವಂತಹ ಬಲಿದಾನದ ಹಾಗೂ ಸಮರ್ಪಣೆಯ ಹಬ್ಬವಾಗಿದೆ. ಇದರ ಜೊತೆಗೆ ಮುಸ್ಲಿಮರ ಶ್ರೇಷ್ಠ ಆರಾಧನೆಯಾದ ಹಜ್ಜ್ ನ ಹಿನ್ನೆಲೆಯಲ್ಲಿ ಕೂಡಾ ಈ ಹಬ್ಬ ಸ್ಮರಣೀಯ. ಇದು ತ್ಯಾಗ ಮತ್ತು ಬಲಿದಾನದ ಹಬ್ಬವಾಗಿದೆ.

–ಮುಸ್ಲಿಮರ ಹಬ್ಬಗಳು ಉತ್ತರ ಭಾರತದಲ್ಲೊಂದು ದಿನ ಮತ್ತು ಇತರೆಡೆ ಇನ್ನೊಂದು ದಿನ ಹೀಗೆ ವ್ಯತ್ಯಾಸ ಕಂಡು ಬರಲು ಕಾರಣವೇನು?
– ಮುಸ್ಲಿಮರ ಹಬ್ಬಗಳು ಚಂದ್ರ ದರ್ಶನದ ಬುನಾದಿಯಲ್ಲಿ ನಿರ್ಧರಿಸಲ್ಪಡುತ್ತವೆ. ಚಂದ್ರದರ್ಶನವು ಕೆಲವೊಮ್ಮೆ 30 ದಿನಗಳ ಬಳಿಕವಾದರೆ ಕೆಲವೊಮ್ಮೆ 29 ದಿನಗಳ ಬಳಿಕ ಆಗುತ್ತದೆ. ಸೂರ್ಯಾಸ್ತಮಾನವು ಎಲ್ಲಾ ಪ್ರದೇಶಗಳಲ್ಲಿ ಒಂದೇ ರೀತಿ ಇರದು. ಉದಾಹರಣೆಗೆ; ಮಂಗಳೂರು ಮತ್ತು ದೆಹಲಿಯಲ್ಲಿ ಸೂರ್ಯಾಸ್ತಮಾನದ ಸಮಯದಲ್ಲಿ ಕೆಲವು ಗಂಟೆಗಳ ವ್ಯತ್ಯಯವಿದೆ. ಯಾರಿಗಾದರೂ ಚಂದ್ರದರ್ಶನವಾದದ್ದು ಗೋಚರವಾದರೆ ಅದಕ್ಕೆ ಸಾಕ್ಷಿಗಳು ಬೇಕು. ಸಾಕ್ಷಿಗಳ ಹೇಳಿಕೆಯ ಆಧಾರಗಳನ್ನು ಪರಿಶೀಲಿಸಿ ಆಯಾ ಪ್ರದೇಶಗಳ ಖಾಝಿಗಳು ಈದ್ ಘೋಷಣೆ ಮಾಡುತ್ತಾರೆ. ಚಂದ್ರದರ್ಶನದಲ್ಲಿ ಆಗುವ ವ್ಯತ್ಯಾಸಗಳಿಂದ ಈ ಹಬ್ಬಗಳ ದಿನಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ.

– ಮಕ್ಕಾದಲ್ಲಿ ಕಲ್ಲಿಗೆ ಪೂಜೆ ಮಾಡುತ್ತಾರೆ ಎನ್ನಲಾಗುತ್ತದೆ. ಇದು ಒಂತರಾ ಮೂರ್ತಿ ಪೂಜೆಯಲ್ಲವೇ?
– ಇಸ್ಲಾಮಿನ ಪ್ರಮುಖ ನಾಲ್ಕು ಆರಾಧನೆಗಳಲ್ಲಿ ಹಜ್ಜ್ ಕೂಡಾ ಒಂದು. ಮಕ್ಕಾದಲ್ಲಿರುವ ಕಅಬಾ ಎಂದರೆ ಅದು ಮುಸ್ಲಿಮರ ಕೇಂದ್ರ ಸ್ಥಾನವಾಗಿದೆ. ಅದು ಜಗತ್ತಿನಲ್ಲಿ ನಿರ್ಮಿಸಿದ ಮೊಟ್ಟ ಮೊದಲ ಮಸೀದಿಯಾಗಿದೆ. ಅದು ಪ್ರಪ್ರಥಮ ಏಕದೇವ ಆರಾಧನಾ ಕೇಂದ್ರ. ಆ ಕಅಬಾ ಭವನದತ್ತ ಮುಖ ಮಾಡಿ ಮುಸ್ಲಿಮರು ನಮಾಝ್ ನಿರ್ವಹಿಸಬೇಕು. ಅದು ಯಾವುದೇ ಪುಣ್ಯ ಪುರುಷರ ಸ್ಮಾರಕ ಅಲ್ಲ. ಕಅಬಾಗೆ ಆರು ದ್ವಾರಗಳಿವೆ. ಅದನ್ನು ಯಾವ ಕಡೆಯಿಂದ ವೀಕ್ಷಿಸಿದರೂ ಆ ಪಾರ್ಶ್ವಗಳು ಮುಂದಿನದ್ದು ಯಾವುದು, ಹಿಂದಿನದ್ದು ಯಾವುದು ಎಂದು ತಿಳಿಯದು. ಎಲ್ಲವೂ ಒಂದೇ ರೀತಿಯಲ್ಲಿರುತ್ತದೆ. ಅದು ಆಡಂಬರಗಳಿಲ್ಲದ, ಆರ್ಟ್ ಇಲ್ಲದ ಮಸೀದಿ. ಜಗತ್ತಿನ ವಿವಿಧೆಡೆಗಳಲ್ಲಿ ಅದ್ಭುತವಾದ ಆರ್ಕಿಟೆಕ್ಚರ್ ಗಳ ಮಸೀದಿಗಳಿವೆ. ಈ ಎಲ್ಲಾ ಮಸೀದಿಗಳ ಕೇಂದ್ರ ಕಅಬಾ ಆಗಿದೆ. ಸರಳತೆಯ ಗಾಂಭೀರ್ಯ ಹೊಂದಿರುವ ಕಟ್ಟಡವಾಗಿದೆ. ಹದಿನಾಲ್ಕು ಅಡಿ ಎತ್ತರ ಹನ್ನೆರಡು ಅಡಿ ಅಗಲ ಇದೆ. ಅದು ದೇವನ ಭವನ. ಕಅಬಾದ ಒಳಗೆ ಏನೂ ಇಲ್ಲ. ಅದರೊಳಗಿನ ಪ್ರವೇಶಕ್ಕೆ ಅದರದ್ದೇ ಆದ ನಿಬಂಧನೆಗಳಿವೆ. ವರ್ಷಕ್ಕೊಮ್ಮೆ ಉನ್ನತ ಸ್ತರದ ವ್ಯಕ್ತಿಗಳು ಹೋಗಿ ಶುದ್ಧೀಕರಣ ಮಾಡುತ್ತಾರೆ. ಮುಸ್ಲಿಮರು ಕಅಬಾ ಭವನವನ್ನು ಆರಾಧಿಸುವುದಿಲ್ಲ. ದೇವನನ್ನು ಮಾತ್ರ ಆರಾಧಿಸಬೇಕೆಂದು ಮುಸ್ಲಿಮರಿಗೆ ಕಟ್ಟಾಜ್ಞೆಯಿದೆ. ಸಾಮೂಹಿಕ ನಮಾಝ್ ಮಾಡುವಾಗ ನಿರ್ದಿಷ್ಟ ದಿಕ್ಕಿನ ಅಗತ್ಯವಿರುತ್ತದೆ, ಹೀಗೆ ಶಿಸ್ತಿನ ಕಾರಣಕ್ಕಾಗಿ ಕಅಬಾದತ್ತ ಮುಖ ಮಾಡಿ ನಮಾಝ್ ಮಾಡಲಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳಿಂದಲೂ ಈ ಕಅಬಾ ಭವನ ಭೂಮಿಯ ಕೇಂದ್ರ ಸ್ಥಾನವಾಗಿದೆ. ಆದ್ದರಿಂದ ಕಅಬಾ ಎಂಬ ಕಲ್ಲಿಗೆ ಆರಾಧಿಸುತ್ತಾರೆ ಎಂಬುದು ತಪ್ಪುಕಲ್ಪನೆಯಾಗಿದೆ.

– ಮುಸ್ಲಿಮರು ಮಕ್ಕಾದಲ್ಲಿ ಬಿಳಿ ಬಟ್ಟೆ ಧರಿಸಿ ಕಲ್ಲಿಗೆ ಸುತ್ತು ಬರುತ್ತೀರಿ ಎಂದು ಕೇಳಿದ್ದೇನೆ, ಈ ಬಗ್ಗೆ ತಮ್ಮ ಅಭಿಪ್ರಾಯ?
– ಜಗತ್ತಿನ ಪ್ರಮುಖ ಧರ್ಮಗಳು ಪ್ರವಾದಿ ಇಬ್ರಾಹೀಮ(ಅ)ರನ್ನು ಮಹಾನ್ ವ್ಯಕ್ತಿ ಎಂದು ಒಪ್ಪಿಕೊಳ್ಳುತ್ತದೆ. ಕಅಬಾ ಅವರು ಮರುನಿರ್ಮಾಣ ಮಾಡಿದ ಮಸೀದಿಯಾಗಿದೆ. ಕಅಬಾ ಭವನ ನಿರ್ಮಿಸಿದ ಬಳಿಕ ದೇವನ ಆದೇಶದನುಸಾರ ಅವರು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಹಜ್ಜ್ ನಲ್ಲಿ ಅದು ಇಂದಿನ ತನಕವೂ ಕಡ್ಡಾಯ ಕರ್ಮವಾಗಿ ಅನುಷ್ಠಾನಿಸಲಾಗುತ್ತದೆ. ಈ ಏಳು ಬಾರಿ ಮಾಡುವ ಈ ಪ್ರದಕ್ಷಿಣೆಯನ್ನು ತವಾಫ್ ಎನ್ನಲಾಗುತ್ತಿದೆ. ಹಿಂದೂ ಧರ್ಮದಲ್ಲಿಯೂ ಪ್ರದಕ್ಷಿಣೆಯ ಪದ್ಧತಿಯನ್ನು ಕಾಣಬಹುದು. ವೈದಿಕ ಧರ್ಮಕ್ಕೆ ಇದರೊಂದಿಗೆ ಸಣ್ಣ ನಂಟು ಇದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದ ವಿಚಾರ. ಇದನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಕಅಬಾ ಭವನದಲ್ಲಿ ಯಾವುದೇ ಮೂರ್ತಿ ಇಲ್ಲ. ಯಾವುದೋ ಒಂದು ಮಂದಿರದಲ್ಲಿ ಮೂರ್ತಿಯನ್ನಿಟ್ಟು ದೇವನ ಪ್ರತಿನಿಧಿಗಳು ಅಥವಾ ಸಂಕೇತಗಳನ್ನಾಗಿಸುವುದನ್ನು, ಅದಕ್ಕೆ ಪ್ರದಕ್ಷಿಣೆ ಹಾಕುವುದನ್ನು ಖಂಡಿತವಾಗಿ ಇಸ್ಲಾಮ್ ಎಂದಿಗೂ ಒಪ್ಪುವುದಿಲ್ಲ. ಬಿಳಿ ಬಟ್ಟೆಯು ಶ್ರೇಷ್ಠತೆಯ ಸಂಕೇತವಾಗಿದೆ. ಅದರಲ್ಲಿ ಕೊಳೆಯಾದರೆ ಬೇಗನೇ ತಿಳಿದು ಬರುತ್ತದೆ. ಇದನ್ನು ಇಸ್ಲಾಮ್ ಗೌರವಿಸುತ್ತದೆ. ಬಿಳಿ ಬಟ್ಟೆಯನ್ನು ಧರಿಸಿಯೇ ಕಅಬಾಕ್ಕೆ ಪ್ರದಕ್ಷಿಣೆ ಬರುತ್ತಾರೆ.

– ಪ್ರಾಣಿ ಬಲಿಯ ಬಗ್ಗೆ ಏನಂತೀರಿ?
– ಬಲಿದಾನವು ಜಗತ್ತಿನ ಎಲ್ಲಾ ಧರ್ಮಗಳಲ್ಲಿ ಶ್ರೇಷ್ಠ ಕರ್ಮವಾಗಿದೆ. ಯಜ್ಞ ಯಾಗಾದಿಗಳು, ಪ್ರಾಯಶ್ಚಿತ್ತಕ್ಕಾಗಿ ನರ ಬಲಿ ನೀಡಲಾಗುತ್ತದೆ. ಆದರೆ ಇಸ್ಲಾಮಿನಲ್ಲಿ ಬಲಿದಾನವೆಂಬುದು ತ್ಯಾಗದ, ವಿಧೇಯತೆಯ ಅರ್ಪಣೆಯ ಸಂಕೇತವಾಗಿದೆ. ಇದು ಪ್ರವಾದಿ ಇಬ್ರಾಹೀಮರ(ಅ) ನಾಲ್ಕು ಸಾವಿರ ವರ್ಷಗಳ ಹಿಂದಿನ ಚರ್ಯೆಯಾಗಿದೆ. ಅವರನ್ನು ನಾಗರಿಕತೆಯ ಪಿತಾಮಹ ಎನ್ನಲಾಗುತ್ತದೆ. ಅವರಿಗೆ ಮಕ್ಕಳಿರಲಿಲ್ಲ. ದೇವನೊಂದಿಗೆ ನಿರಂತರ ಪ್ರಾರ್ಥಿಸಿದಾಗ ವೃದ್ಧಾಪ್ಯದಲ್ಲಿ ದೇವನು ಇಸ್ಮಾಈಲ್ ಎಂಬ ಮಗನನ್ನು ಅವರಿಗೆ ದಯಪಾಲಿಸುತ್ತಾನೆ. ಆ ಮಗುವಿನೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿರುವಾಗ ಮಗನನ್ನು ಬಲಿಕೊಡಬೇಕೆಂಬ ದೇವನ ಆದೇಶ ಬರುತ್ತದೆ. ಪ್ರವಾದಿ ಇಬ್ರಾಹೀಮ(ಅ)ರು ಹೀಗೆ ಹಲವು ಸತ್ವ ಪರೀಕ್ಷೆಗಳನ್ನು ಎದುರಿಸಿ ಎಲ್ಲದರಲ್ಲೂ ಯಶಸ್ಸು ಕಾಣುತ್ತಾರೆ. ತನ್ನ ಪುತ್ರನೊಂದಿಗೆ ಇಬ್ರಾಹೀಮರು ಬಲಿದಾನ ನೀಡುವ ಬಗ್ಗೆ ಚರ್ಚಿಸುತ್ತಾರೆ. ಈರ್ವರೂ ಬಲಿದಾನಕ್ಕಾಗಿ ಸಿದ್ಧರಾಗುತ್ತಾರೆ. ಮಗನನ್ನು ಮಲಗಿಸಿ ಕೊರಳಿಗೆ ಹರಿತವಾದ ಕತ್ತಿ ಹಿಡಿದು ಬಲಿದಾನಕ್ಕಾಗಿ ಸಿದ್ಧರಾದಾಗ ಅಲ್ಲಾಹನು ಅದನ್ನು ದೇವ ದೂತರ ಮೂಲಕ ತಡೆಯುತ್ತಾನೆ. “ಇಬ್ರಾಹೀಮ್ ನಿಮ್ಮನ್ನು ಪರೀಕ್ಷಿಸಲಾಗಿದೆ. ನೀವು ವಿಜಯಿಯಾಗಿದ್ದೀರಿ. ನೀವು ಅದರ ಬದಲಿಗೆ ಒಂದು ಪ್ರಾಣಿಯನ್ನು ಬಲಿ ನೀಡಿರಿ” ಎಂಬ ಆದೇಶ ಬರುತ್ತದೆ. ಅಲ್ಲಿಂದ ಬಲಿದಾನದ ಪ್ರಕ್ರಿಯೆ ಆರಂಭವಾಯಿತು.

ತನಗೆ ಅತ್ಯಂತ ಪ್ರೀತಿ ಪಾತ್ರವಾದುದನ್ನು ದೇವ ಮಾರ್ಗದಲ್ಲಿ ಬಲಿ ನೀಡುವುದಾಗಿದೆ. ಪ್ರವಾದಿ ಇಬ್ರಾಹೀಮ(ಅ)ರು ತನ್ನ ವೃದ್ಧಾಪ್ಯ ಕಾಲದಲ್ಲಿ ಆಸರೆಯಾಗಿ ದೊರೆತ ಪುತ್ರನನ್ನು ಬಲಿ ನೀಡಲು ಸಿದ್ಧರಾಗಿ ಯಶಸ್ಸು ಕಂಡರು. ಧರ್ಮಕ್ಕಾಗಿ ನೀವು ಏನು ಕೊಡುತ್ತೀರಿ ಎಂಬುದು ಧರ್ಮದ ಸಿದ್ಧಾಂತವಾದರೆ, ನನಗೆ ಏನು ಸಿಗುತ್ತದೆ ಎಂಬುದು ಲೌಕಿಕ ಸಿದ್ಧಾಂತವಾಗಿದೆ. ದೇವನು ಬಯಸುವುದು ನಿಮ್ಮ ಪ್ರಾಣಿಯ ಮಾಂಸ ಮತ್ತು ರಕ್ತವಲ್ಲ, ಬದಲಾಗಿ ನಿಮ್ಮ ತ್ಯಾಗ ಸನ್ನದ್ಧತೆ, ನಿಮ್ಮ ಸಮರ್ಪಣೆಯನ್ನು ಬಯಸುತ್ತಾನೆ. ಬರೀ ಪ್ರಾಣಿ ಬಲಿಯನ್ನು ಇಸ್ಲಾಮ್ ಬಯಸದು. ಇಸ್ಲಾಮಿನಲ್ಲಿ ಬಲಿದಾನವು ಆಂತರಿಕವಾದ ತ್ಯಾಗದ ಪ್ರತೀಕವಾಗಿದೆ.

– ಹಜ್ಜ್ ನಲ್ಲಿ ಕಲ್ಲೆಸೆಯುವ ಕರ್ಮದ ಬಗ್ಗೆ ತಿಳಿಸಿರಿ.
– ಹಜ್ಜ್ ನಲ್ಲಿ ಕಲ್ಲೆಸೆಯುವ ಕರ್ಮವಿದೆ. ಪ್ರವಾದಿ ಇಬ್ರಾಹೀಮರು ಮಗನನ್ನು ಬಲಿಯರ್ಪಿಸಲು ಸಿದ್ಧರಾದಾಗ ಅವರ ಮನದಲ್ಲಿ ಪಿಶಾಚಿಯು ಗೊಂದಲ ಹುಟ್ಟು ಹಾಕುತ್ತಾನೆ. ಈ ವೃದ್ಧಾಪ್ಯದ ಹೊತ್ತಿನಲ್ಲಿ ದೊರೆತ ಮಗನನ್ನು ಬಲಿ ಕೊಡುವುದೇ? ಎಂಬಂತಹ ಪೈಶಾಚಿಕ ಚಿಂತನೆ ಹುಟ್ಟು ಹಾಕುವುದು. ಅದಕ್ಕಾಗಿ ಅವರು ಪಿಶಾಚಿಗೆ ಕಲ್ಲು ಬಿಸಾಡುತ್ತಾರೆ. ಅದರ ಸಂಕೇತವಾಗಿ ಪಿಶಾಚಿಗೆ ಕಲ್ಲೆಸೆಯಲಾಗುತ್ತದೆ. ಇದು ಆಂತರಿಕವಾಗಿ ಬಹಳ ಪವಿತ್ರತೆಯುಳ್ಳದ್ದಾಗಿದೆ. ಹಜ್ಜ್ ಯಾತ್ರಾರ್ಥಿಯು ನಾನು ಎಲ್ಲಾ ರೀತಿಯ ಪೈಶಾಚಿಕತೆಯನ್ನು ಬದುಕಿನಿಂದ ಓಡಿಸುತ್ತಿದ್ದೇನೆ, ಬದುಕನ್ನು ಸ್ವಚ್ಛಗೊಳಿಸುತ್ತೇನೆ ಎಂಬ ಪ್ರತಿಜ್ಞೆಯ ಭಾಗವಾಗಿ ಹಜ್ಜ್ ನಲ್ಲಿ ಈ ಕಲ್ಲೆಸೆಯುವ ಕರ್ಮವಿದೆ.

– ಮಕ್ಕಾ ಭವನಕ್ಕೆ ಎಲ್ಲರಿಗೂ ಪ್ರವೇಶವಿಲ್ಲವೆಂದು ಕೇಳಿದ್ದೇನೆ?
– ಈ ಜಗತ್ತಿನಲ್ಲಿ ಪ್ರವೇಶವಿಲ್ಲದ ಹಲವು ಸ್ಥಳಗಳಿವೆ. ಉದಾಹರಣೆಗೆ ರಕ್ಷಣಾ ವಲಯಗಳಿಗೆ ಎಲ್ಲರಿಗೂ ಪ್ರವೇಶವಿರುವುದಿಲ್ಲ. ಹಾಗೆ ಪ್ರವೇಶಿಸುವುದಕ್ಕೆ ನಿಬಂಧನೆಗಳಿವೆ. ಅನೇಕ ಮಂದಿರಗಳಿಗೂ ಪ್ರವೇಶ ನಿರ್ಬಂಧವಿದೆ. ಹಾಗೆಯೇ ಮಕ್ಕಾದ ಹರಮ್‌ಗೆ ಯಾರಿಗೆಲ್ಲಾ ಅದರ ಮೇಲೆ ನಂಬಿಕೆ ವಿಶ್ವಾಸವಿದೆಯೋ ಅವರಿಗೆಲ್ಲಾ ಪ್ರವೇಶಿಸಬಹುದು ಎಂಬ ನಿಬಂಧನೆಗಳಿವೆ. ಆ ನಿಬಂಧನೆ ಪಾಲಿಸುವವರಿಗೆ ಅದರೊಳಗೆ ಪ್ರವೇಶವಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …