Home / ಲೇಖನಗಳು / ಕಾಲದ ಪ್ರಶ್ನೆ ಮತ್ತು ಪ್ರವಾದಿ ಮುಹಮ್ಮದ್(ಸ) ಎಂಬ ಉತ್ತರ

ಕಾಲದ ಪ್ರಶ್ನೆ ಮತ್ತು ಪ್ರವಾದಿ ಮುಹಮ್ಮದ್(ಸ) ಎಂಬ ಉತ್ತರ

✍️ ಎ.ಕೆ.ಕುಕ್ಕಿಲ

ಸಕಾರಾತ್ಮಕ ಅಥವಾ ನಕಾರಾತ್ಮಕ- ಎರಡೂ ರೀತಿಯಲ್ಲಿ ನಮ್ಮ ನಡುವೆ ಸದಾ ಚರ್ಚೆಯಲ್ಲಿರುವ ಏಕೈಕ ವ್ಯಕ್ತಿ ಪ್ರವಾದಿ ಮುಹಮ್ಮದ್(ಸ). ಇದಕ್ಕಿರುವ ಹಲವು ಕಾರಣಗಳ ಪೈಕಿ ಒಂದು ಕಾರಣ ಏನೆಂದರೆ, ಕ್ಷಿಪ್ರಗತಿಯಲ್ಲಿ ಅವರಿಗೆ ಸಿಕ್ಕಿರುವ ಮಹಾ ಯಶಸ್ಸು. 40ನೇ ಪ್ರಾಯದಲ್ಲಿ ಅವರು ತನ್ನನ್ನು ತಾನು ಪ್ರವಾದಿ ಎಂದು ಘೋಷಿಸಿಕೊಂಡರು ಮತ್ತು ತತ್ವ ಪ್ರತಿಪಾದಕರಾದರು. ಇದಾಗಿ ಕೇವಲ 23 ವರ್ಷಗಳೊಳಗೆ ತಾನು ಪ್ರತಿಪಾದಿಸಿದ ತತ್ವದಂತೆಯೇ ಬದುಕಬಲ್ಲ ಸಮಾಜವೊಂದನ್ನು ಸಾಧಿಸಿ ತೋರಿಸಿದರು. ಕೇವಲ ಎರಡು ದಶಕಗಳೊಳಗೆ ಸಿದ್ಧಾಂತವೊಂದನ್ನು ಪ್ರತಿಪಾದಿಸಿ, ಅದನ್ನು ಪ್ರಯೋಗಕ್ಕೊಡ್ಡಿ ಅಭೂತಪೂರ್ವ ಯಶಸ್ಸನ್ನು ಕಂಡುಕೊಂಡ ಇನ್ನೊಬ್ಬರು ಈ ಜಗತ್ತಿನಲ್ಲಿಲ್ಲ. ಹಾಗಂತ,

ಪ್ರವಾದಿ ಮುಹಮ್ಮದ್(ಸ) ಪ್ರತಿಪಾದಿಸಿದ ಸಿದ್ಧಾಂತ ಆಗಿನ ಸಮಾಜದ ರೂಢಿಗೆ ತೀರಾ ವಿರುದ್ಧವಾಗಿತ್ತು. ಅವರು ಮದ್ಯಪಾನವನ್ನು ವಿರೋಧಿಸಿದರು. ಜೂಜಾಟ ತಪ್ಪು ಅಂದರು. ಬಡ್ಡಿಯನ್ನು ವಿರೋಧಿಸಿದರು. ಹೆಣ್ಣು ಮಗುವಿನ ಪರ ನಿಂತರು. ಆಸ್ತಿಯಲ್ಲಿ ಹೆಣ್ಣಿಗೆ ಪಾಲನ್ನು ಕೊಡಬೇಕೆಂದರು. ಶ್ರೀಮಂತರು ತಮ್ಮ ಸಂಪತ್ತಿನಿಂದ ಇಂತಿಷ್ಟು ಶೇಕಡಾ ಮೊತ್ತವನ್ನು ಕಡ್ಡಾಯವಾಗಿ ದಾನ ಮಾಡಬೇಕೆಂದರು. ವೃದ್ಧ ಹೆತ್ತವರ ವಿರುದ್ಧ ‘ಛೇ’ ಎಂಬ ಪದವನ್ನೂ ಬಳಸಬಾರದೆಂದರು. ಇತರರ ಆರಾಧ್ಯರನ್ನು ನಿಂದಿಸಬಾರದು ಎಂದರು. ಶಿಕ್ಷಣ ಕಡ್ಡಾಯ ಗೊಳಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮಾನವರೆಲ್ಲ ಸಮಾನರು ಎಂದರು. ಹುಟ್ಟು ಮತ್ತು ಬಣ್ಣದ ಆಧಾರದಲ್ಲಿ ಮೇಲು-ಕೀಳು ಸಲ್ಲ ಎಂದರು. ವ್ಯಾಪಾರದಲ್ಲಿ ಮೋಸ ಮಾಡುವುದನ್ನು ವಿರೋಧಿಸಿದರು. ನ್ಯಾಯದ ವಿಷಯದಲ್ಲಿ ಬಡವರು-ಶ್ರೀಮಂತರು ಎಂಬ ತಾರತಮ್ಯಕ್ಕೆ ಪ್ರಬಲ ಆಕ್ಷೇಪ ಸೂಚಿಸಿದರು. ಇಂಥ ವಿಚಾರಗಳು ಅಂದಿನ ಮಕ್ಕಾ ಜನರಿಗೆ ಹೊಸತಾಗಿತ್ತು. ಆವರೆಗಿನ ಅವರ ರೂಢಿಗೆ ವಿರುದ್ಧವಾಗಿತ್ತು.

ಆ ಕಾರಣದಿಂದಲೇ ಆರಂಭದಲ್ಲಿ ಪ್ರವಾದಿ(ಸ)ರಿಗೆ ಕಠಿಣ ವಿರೋಧ ವ್ಯಕ್ತವಾಯಿತು. ಮಕ್ಕಾವನ್ನು ತೊರೆದು ಮದೀನಾಕ್ಕೆ ವಲಸೆ ಹೋಗುವಂತೆ ಒತ್ತಡವನ್ನೂ ಹೇರಲಾಯಿತು. ಆದರೆ ಈ ವಿರೋಧ, ಒತ್ತಡ ಮತ್ತು ಕಿರುಕುಳಗಳೆಲ್ಲ ಆರಂಭಿಕ ಪ್ರತಿಕ್ರಿಯೆಯಾಗಿತ್ತೇ ಹೊರತು ಅದು ಒಟ್ಟು ಸಮಾಜದ ಘೋಷಿತ ನೀತಿಯಾಗಿರಲಿಲ್ಲ. ಇದಕ್ಕೆ ಕಾರಣ ಏನೆಂದರೆ,

ಪ್ರವಾದಿ(ಸ) ಪ್ರತಿಪಾದಿಸಿದ್ದು ಮಾತ್ರವಲ್ಲ, ಅದಕ್ಕೆ ತದ್ರೂಪವಾಗಿ ಬದುಕಿದರು. ಸುಳ್ಳು ಹೇಳದೇ, ಮೋಸ ಮಾಡದೇ, ವ್ಯಾಪಾರಿಯಾಗಿದ್ದೂ ಬಡ್ಡಿ ಪಡೆಯದೇ, ನುಡಿದಂತೆ ನಡೆದರು. ಬಡವರು ಮತ್ತು ದಮನಿತರನ್ನು ಅಪ್ಪಿಕೊಂಡರು. ಶ್ರೀಮಂತರು ಗುಲಾಮರಾಗಿ ಇಟ್ಟುಕೊಂಡಿದ್ದ ದುರ್ಬಲರ ವಿಮೋಚನೆಗೆ ಶ್ರಮಿಸಿದರು. ಅವರ ಇಂಥ ನಿರ್ಮಲ ಬದುಕು ವಿರೋಧಿಗಳನ್ನೂ ಆಕರ್ಷಿಸತೊಡಗಿತು. ದುರ್ಬಲರು ತಕ್ಷಣಕ್ಕೆ ಅವರ ಅನುಯಾಯಿಗಳಾದರು. ಹೀಗೆ ಬರೇ 23 ವರ್ಷಗಳೊಳಗೆ ತಾವು ಪ್ರತಿಪಾದಿಸಿದ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದರು. ಮದ್ಯ, ಜೂಜು, ಬಡ್ಡಿ, ಅಸಮಾನತೆ, ಅನ್ಯಾಯಗಳಿಲ್ಲದ ಕಲ್ಯಾಣ ರಾಷ್ಟ್ರ ಕಟ್ಟುವುದು ಸಾಧ್ಯ ಎಂದು ಸಾರಿದರು. ಅಂದಹಾಗೆ,

ಬಡ್ಡಿಯಿಲ್ಲದ ವ್ಯವಹಾರ, ಅಮಲು ಇಲ್ಲದ ಪಾನೀಯ, ಕಳಂಕ ಇಲ್ಲದ ಸಮಾನತೆ, ಸತ್ಯಕ್ಕೆ ನಿಷ್ಠವಾಗಿರುವ ನ್ಯಾಯವನ್ನು ಇವತ್ತಿನ ಜಗತ್ತಿನಲ್ಲಿ ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದಲೇ, ಪ್ರವಾದಿ(ಸ) ಸದಾ ಕಾಲ ಪ್ರಸ್ತುತವಾಗಿದ್ದಾರೆ. ಅಸಾಧ್ಯ ಎಂದು ಇವತ್ತಿನ ಜಗತ್ತು ಅಂದುಕೊಂಡಿರುವ ಬದಲಾವಣೆಯನ್ನು ಅವರು ಮಾಡಿ ತೋರಿಸಿದ್ದಾರೆ. ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯ ಆದವರಿಗೂ ಆಗದವರಿಗೂ ಅವರು ಸದಾ ಕಾಲ ಆಕರ್ಷಣೆಯ ವ್ಯಕ್ತಿತ್ವವೇ ಆಗಿದ್ದಾರೆ. ಬದುಕು ಹೇಗಿರಬೇಕು ಎಂಬುದಕ್ಕೂ ಅವರು ಉತ್ತರವಾಗಿದ್ದಾರೆ. ಕಾಲದ ಪ್ರಶ್ನೆಗೂ ಉತ್ತರವಾಗಿದ್ದಾರೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …