ಏಕೆ ಒಬ್ಬನೇ ದೇವರು ಅಥವಾ ಅಲ್ಲಾಹ್? ಒಬ್ಬನೇ ಸೃಷ್ಟಿಕರ್ತ ಇರಬೇಕೆಂದು ಇಸ್ಲಾಂ ಏಕೆ ಒತ್ತಿ ಹೇಳುತ್ತದೆ? ಇದು ಕೇವಲ ಧಾರ್ಮಿಕ ನಂಬಿಕೆಯೇ, ಅಥವಾ ತಾರ್ಕಿಕ ಮತ್ತು ವೈಚಾರಿಕ ನೆಲೆಯೂ ಇದಕ್ಕಿದೆಯೇ?
ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ಒಂದು ಸರಳ ತತ್ವವನ್ನು ಗಮನಿಸೋಣ. ಯಾವುದೇ ವ್ಯವಸ್ಥೆಯ ಏಕತೆ ಅದರ ಕೇಂದ್ರ ನಿಯಂತ್ರಣದ ಏಕತೆಯ ಮೇಲೆ ನಿಂತಿರುತ್ತದೆ. ಒಂದು ದೇಶಕ್ಕೆ ಎರಡು ಸಂವಿಧಾನಗಳಿದ್ದರೆ ಆಡಳಿತದಲ್ಲಿ ಗೊಂದಲ ಉಂಟಾಗುತ್ತದೆ. ಒಂದು ಸಂಸ್ಥೆಗೆ ಸಮಾನ ಅಧಿಕಾರ ಹೊಂದಿದ ಇಬ್ಬರು ಮುಖ್ಯಸ್ಥರಿದ್ದರೆ ನಿರ್ಧಾರಗಳಲ್ಲಿ ಸಂಘರ್ಷ ಉಂಟಾಗುತ್ತದೆ. ಒಂದು ವಾಹನಕ್ಕೆ ಇಬ್ಬರು ಚಾಲಕರು ಒಂದೇ ಸಮಯದಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಯಂತ್ರಣ ಮಾಡಿದರೆ ಅಪಘಾತ ಅನಿವಾರ್ಯವಾಗುತ್ತದೆ. ಹೀಗೆ ಉದಾಹರಣೆ ನೀಡಬಹುದು.
ಇದೇ ತತ್ವವನ್ನು ವಿಶ್ವದ ಕಡೆಗೆ ಅನ್ವಯಿಸಿದರೆ, ಈ ಬ್ರಹ್ಮಾಂಡವು ಸಾವಿರಾರು ವರ್ಷಗಳಿಂದ ಅತ್ಯಂತ ಸೂಕ್ಷ್ಮವಾದ ನಿಯಮ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಗೋಚರಿಸುತ್ತದೆ. ಪ್ರಕೃತಿಯ ನಿಯಮಗಳು ವಿಶ್ವದಾದ್ಯಂತ ಒಂದೇ ರೀತಿಯಲ್ಲಿ ಅನ್ವಯಿಸುತ್ತವೆ. ಗುರುತ್ವಾಕರ್ಷಣೆ, ಕಾಲ, ಜೀವಚಕ್ರ ಮತ್ತು ಭೌತಿಕ ನಿಯಮಗಳು ಪರಸ್ಪರ ವಿರೋಧಿಸದೇ ಒಂದೇ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸುತ್ತವೆ. ಈ ಏಕತೆಯ ಹಿಂದಿರುವ ಪರಮಾಧಿಕಾರವೂ ಒಂದೇ ಆಗಿರಬೇಕು ಎಂಬುದು ಇಸ್ಲಾಮಿನ ಮೂಲಭೂತ ತಾರ್ಕಿಕ ನಿರ್ಣಯವಾಗಿದೆ.
ಕುರ್ಆನ್ ಈ ವಿಚಾರವನ್ನು ಅತ್ಯಂತ ಸಂಕ್ಷಿಪ್ತವಾಗಿ ಹೀಗೆ ಘೋಷಿಸುತ್ತದೆ, “ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಅಲ್ಲಾಹನ(ಸೃಷ್ಟಿಕರ್ತನ) ಹೊರತು ಬೇರೆ ದೇವರುಗಳಿದ್ದರೆ, ಅವೆರಡೂ ಅಸ್ತವ್ಯಸ್ತವಾಗಿ ಬಿಡುತ್ತಿದ್ದವು.” (ಸೂರತುಲ್ ಅಂಬಿಯಾ 21:22)
ಈ ದಿವ್ಯ ವಚನವು ಕೇವಲ ನಂಬಿಕೆಯನ್ನು ಘೋಷಿಸುವುದಿಲ್ಲ. ಇದು ಒಂದು ತಾರ್ಕಿಕ ಪ್ರತಿಪಾದನೆಯನ್ನು ಮಾಡುತ್ತದೆ. ಅನೇಕ ಪರಮಾಧಿಕಾರಗಳು ಇದ್ದರೆ, ಅವುಗಳ ಸ್ವತಂತ್ರ ಇಚ್ಛೆಗಳು ಯಾವಾಗಲಾದರೂ ಪರಸ್ಪರ ಘರ್ಷಿಸಲೇಬೇಕು. ಆದರೆ ವಿಶ್ವದಲ್ಲಿ ನಾವು ನೋಡುವುದು ಘರ್ಷಣೆಯಲ್ಲ, ಬದಲಾಗಿ ಶಿಸ್ತು, ಸಮನ್ವಯವಾಗಿದೆ.
ಕುರ್ಆನ್ ಮತ್ತೊಂದು ಕಡೆ ಹೀಗೆ ಹೇಳುತ್ತದೆ, “ಅಲ್ಲಾಹನು(ದೇವರು) ಯಾವ ಮಗನನ್ನೂ ಹೊಂದಿಲ್ಲ. ಅವನೊಂದಿಗೆ ಬೇರೆ ದೇವರೂ ಇಲ್ಲ. ಒಂದು ವೇಳೆ ಹಾಗಿರುತ್ತಿದ್ದರೆ ಪ್ರತಿಯೊಬ್ಬ ದೇವರೂ ತಾನು ಸೃಷ್ಟಿಸಿದ್ದನ್ನು ತೆಗೆದುಕೊಂಡು ಹೋಗುತ್ತಿದ್ದನು ಮತ್ತು ಒಬ್ಬರ ಮೇಲೆ ಮತ್ತೊಬ್ಬರು ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದ್ದರು.” (ಸೂರತುಲ್ ಮುಅ್ಮಿನೂನ್ 23:91)
ಆದ್ದರಿಂದ ಇಸ್ಲಾಂನಲ್ಲಿ ಏಕದೇವ ಪ್ರತಿಪಾದನೆ ಎಂದರೆ ಕೇವಲ “ಒಬ್ಬ ದೇವರನ್ನು ಆರಾಧಿಸಿ” ಎಂಬ ಸಂದೇಶವಲ್ಲ. ಅದುವೇ ಸತ್ಯದ ಮೂಲ ಎಂದಾಗಿದೆ. ಒಂದೇ ದೇವ, ವಿಶ್ವದ ನಿಯಮ ಒಂದೇ, ನೈತಿಕತೆಯ ಅಂತಿಮ ಮಾನದಂಡ ಒಂದೇ ಎಂಬುದು ದೈವಿಕ ಧರ್ಮದ ವಿಶ್ವದೃಷ್ಟಿಕೋನವಾಗಿದೆ.
ಹೀಗಾಗಿ, “ಏಕೆ ಒಬ್ಬನೇ ಅಲ್ಲಾಹ್?” ಎಂಬ ಪ್ರಶ್ನೆಗೆ ಇಸ್ಲಾಂ ನೀಡುವ ಉತ್ತರವೆಂದರೆ, ಏಕೀಕೃತ ವಿಶ್ವಕ್ಕೆ ಏಕೀಕೃತ ಪರಮಾಧಿಕಾರವೇ ತಾರ್ಕಿಕ ಆಧಾರ. ಈ ಪರಿಕಲ್ಪನೆಯೇ ಮಾನವ ಏಕತೆ, ಸಮಾನತೆ ಮತ್ತು ನೈತಿಕ ಜವಾಬ್ದಾರಿಯ ಭದ್ರ ಅಡಿಪಾಯವಾಗುತ್ತದೆ.
✍️ ಅಬೂಕುತುಬ್
IslamKannada News Portal
