ಪ್ರವಾದಿ(ಸ) ತನ್ನ ಯೌವನದಲ್ಲಿ ಅತ್ಯುತ್ತಮ ಸತ್ಯಸಂಧ ವ್ಯಾಪಾರಿಯಾಗಿದ್ದರು. ಮಾರುಕಟ್ಟೆಯಲ್ಲಿ ಜನರು ಅವರ ಸರಕುಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಆ ಕಾಲದಲ್ಲಿ ಮಕ್ಕಾದ ಮಾರುಕಟ್ಟೆ ಸಂಪೂರ್ಣ ಬಡ್ಡಿಯನ್ನು ಆಧರಿಸಿತ್ತು. ಸಾದಾ ವರ್ತಕರು ಬಂಡವಾಳ ಶಾಹಿಗಳಿಂದ ಬಡ್ಡಿಗೆ ಹಣ ಸಾಲ ಪಡೆದು ತಮ್ಮ ಅಸಲಿ ಲಾಭಕ್ಕಿಂತಲೂ ಹೆಚ್ಚಿಗೆ ಕೆಲವೊಮ್ಮೆ ಬಡ್ಡಿ ಪಾವತಿಸುವ ಸಂಕಷ್ಟಕ್ಕೆ ಒಳಗಾಗುತ್ತಿದ್ದರು.
ಆದರೆ ಪ್ರವಾದಿಯವರಿಗೆ(ಸ) ಮಾತ್ರ ಪ್ರವಾದಿತ್ವಕ್ಕಿಂತಲೂ ಮುಂಚೆಯೂ ಬಡ್ಡಿ ಎಂದರೆ ಎಲ್ಲಿಲ್ಲದ ದ್ವೇಷ. ಅವರು ಜನರಿಂದ ಬಡ್ಡಿ ಪಡೆಯದೆ ಸಾಲ ನೀಡುತ್ತಿದ್ದರು. ಅವರಿಗೆ ಆ ಬಗ್ಗೆ ಕಿಂಚಿತ್ತ್ತೂ ಅಳುಕಿರಲಿಲ್ಲ. ಯುವ ವ್ಯಾಪಾರಿಗೆ(ಸ) ಸಂಪತ್ತು ಶೇಖರಣೆ ಜೀವನದ ಧ್ಯೇಯವಾಗಿರಲಿಲ್ಲ. ಅವರ ಚಿಕ್ಕಪ್ಪ ಬಡ್ಡಿಯ ವ್ಯಾಪಾರದಿಂದ ಲಕ್ಷಾಧೀಶರಾಗಿದ್ದರು. ಅದನ್ನು ನೋಡಿ ಅವರು ಲೆಕ್ಕಿಸುತ್ತಿರಲಿಲ್ಲ. ಆದ್ದರಿಂದಲೇ ಅವರೋರ್ವ ಯಶಸ್ವಿ ಸಾಮಾನ್ಯ ಬಡ ವರ್ತಕರಾಗಿಯೇ ಮುಂದುವರಿಯುತ್ತಿದ್ದರು.
ಮುಹಮ್ಮದ್ರವರ(ಸ) ವ್ಯಾಪಾರ ಹೀಗೆ ವರ್ಷಗಳು ಮುಂದುವರಿಯುತ್ತ ಸಾಗುತ್ತಿತ್ತು ಮತ್ತು ಮಾರುಕಟ್ಟೆಯಲ್ಲಿ ಅವರ ಸರಕು ಶೀಘ್ರ ಮಾರಾಟವಾಗುತ್ತಿತ್ತು. ಅವರು ಅದಕ್ಕೆ ಅಲ್ಪ ಲಾಭವನ್ನು ಗಳಿಸುತ್ತಿದ್ದರು. ವ್ಯಾಪಾರ ಮಾಡಿ ಅವರು ಈ ಹಣವನ್ನೆಲ್ಲ ಎಲ್ಲಿ ಶೇಖರಣೆಗೊಳಿಸುತ್ತಿದ್ದರು ಎಂದು ಜನರು ಆಶ್ಚರ್ಯ ಪಡುತ್ತಿದ್ದರು. ಯಾಕೆಂದರೆ ಈ ವ್ಯಾಪಾರಿಯು ಯಶಸ್ವಿ ವ್ಯಾಪಾರವಂತು ಮಾಡುತ್ತಿದ್ದರು. ಆದರೆ, ಸಾಮಾನ್ಯ ಜೀವನ ನಡೆಸುತ್ತಿದ್ದರು. ಇದರ ರಹಸ್ಯವೇನು ಎಂದು ಜನರು ನಿರಂತರ ಚಿಂತಿಸುತ್ತಿದ್ದರು.
ಒಮ್ಮೆ ಮಕ್ಕದ ಓರ್ವ ಶ್ರೀಮಂತ ವ್ಯಕ್ತಿಯಾದ ಉತ್ಬಾ ಮುಹಮ್ಮದ್(ಸ)ರನ್ನು ಅವರಿಗರಿವಿಲ್ಲದಂತೆಯೇ ಹಿಂಬಾಲಿಸುತ್ತಾನೆ. ಮುಹಮ್ಮದ್ ಎಂಬ ಯುವಕನ (ಪ್ರವಾದಿತ್ವಕ್ಕಿಂತ ಮುಂಚೆ) ಕೈಯಲ್ಲಿ ಧಾನ್ಯ ಮತ್ತು ನಾಣ್ಯಗಳ ಚಿಕ್ಕ ಚಿಕ್ಕ ಪೊಟ್ಟಣಗಳಿದ್ದವು ಉತ್ಬಾ ಅದನ್ನು ನೋಡಿದ್ದಾನೆ. ಮುಹಮ್ಮದ್(ಸ) ಅದನ್ನು ತನ್ನ ಕೈಯಲ್ಲಿ ಹಿಡಿದು ಒಂದು ಓಣಿಯಲ್ಲಿ ಸಾಗುತ್ತಿದ್ದಾರೆ. ಮುಹಮ್ಮದ್(ಸ) ಒಂದು ಮನೆಯ ಬಾಗಿಲನ್ನು ತಟ್ಟುತ್ತಾರೆ. ಉತ್ಬಾನ ಕಣ್ಣು ಆ ಮನೆಯೊಳಗೆ ಯಾರಿದ್ದಾರೆ ಎಂಬುದನ್ನೇ ಅಡಗಿ ವೀಕ್ಷಿಸುತ್ತಿತ್ತು. ಮನೆಯಿಂದ ಮುದುಕಿಯೊಬ್ಬಳು ಹೊರ ಬರುತ್ತಾರೆ. ಮುಹಮ್ಮದ್(ಸ) ಮುದುಕಿಯ ಕೈಗೆ ನಾಣ್ಯದ ಒಂದು ಚೀಲ ಮತ್ತು ಧಾನ್ಯವನ್ನು ಕೈಗಿಟ್ಟು ಆ ಮುದುಕಿಯ ಕೃತಜ್ಞತೆಗೂ ಕಾಯದೆ ಮುಂದುವರಿಯುತ್ತಾರೆ. ಉತ್ಬಾನ ಕಣ್ಣು ನಂಬದಾಗುತ್ತದೆ. “ಅರೆ ಇದಂತು ಫುಜ್ಜಾರ್ ಯುದ್ಧದಲ್ಲಿ ಮಡಿದ ನಮ್ಮೂರಿನ ಕೈಸ್ನ ಮನೆ. ಇಲ್ಲಿ ಅವನ ಚಿಕ್ಕ ಚಿಕ್ಕ ಮಕ್ಕಳು ಮತ್ತು ರೋಗ ಪೀಡಿತ ಮಕ್ಕಳು ಮಾತ್ರ ಇದ್ದಾರೆ. ಇಂದು ಅವರನ್ನು ನೋಡುವವರಿಲ್ಲ. ಕೇಳುವವರಿಲ್ಲ. ಗಮನಿಸುವವರಿಲ್ಲ.” ಉತ್ಬಾ ಮನದಲ್ಲೇ ನುಡಿಯುತ್ತಾನೆ ಮತ್ತು ತದೇಕಚಿತ್ತದಿಂದ ಮುಹಮ್ಮದ್(ಸ) ರನ್ನು ಪುನಃ ಹಿಂಬಾಲಿಸುತ್ತಾನೆ.
ಕೆಲವು ಹೆಜ್ಜೆ ಕ್ರಮಿಸಿದ ಬಳಿಕ ಇನ್ನೊಂದು ಬಾಗಿಲನ್ನು ತಟ್ಟುತ್ತಾರೆ. ಮನೆಯ ಬಾಗಿಲು ತೆರೆಯುತ್ತದೆ. ಓರ್ವ ಮುದುಕನ ತಲೆ ಹೊರ ಬರುತ್ತದೆ. ವೃದ್ಧನ ಕಣ್ಣುಗಳು ಗುಳಿ ಬಿದ್ದಿವೆ. ಮುಖ ಸುಕ್ಕುಗಟ್ಟಿದೆ. ಬಣ್ಣ ಹಳದಿಯೇರಿದೆ. ಕೈಗಳು ನಡುಗುತ್ತಿವೆ. ಮುಹಮ್ಮದ್(ಸ) ಅವರ ಕೈಗೆ ಒಂದು ಚೀಲವನ್ನು ನೀಡಿ ಮುಂದೆ ಸಾಗುತ್ತಾರೆ. ಉತ್ಬಾನ ಕಣ್ಣು ಮುದುಕನ ಮೇಲೆ ಬೀಳುತ್ತದೆ. ವೃದ್ಧನ ತುಟಿಗಳು ಅದುರುತ್ತಿವೆ. ಏನೋ ಪ್ರಾರ್ಥಿಸುತ್ತಿರುವಂತೆ ಭಾಸವಾಗುತ್ತಿತ್ತು. ಉತ್ಬಾ ಮುಹಮ್ಮದ್ ರನ್ನು ಹಿಂಬಾಲಿಸುತ್ತಾನೆ.
ದೂರದಲ್ಲಿ ಮಕ್ಕಳು ಆಡುತ್ತಿರುತ್ತಾರೆ. ಆ ಮಕ್ಕಳ ಕಣ್ಣು ಮುಹಮ್ಮದ್(ಸ)ರ ಮೇಲೆ ಬೀಳುತ್ತದೆ. `ನೋಡಲ್ಲಿ ಮುಹಮ್ಮದ್ ಬರುತ್ತಿದ್ದಾರೆ’ ಎನ್ನುತ್ತ ಎಲ್ಲ ಮಕ್ಕಳು ಆಟವನ್ನು ಬಿಟ್ಟು ಓಡಿ ಬರುತ್ತಾರೆ. ಎಲ್ಲರೂ ಅವರನ್ನು ಸುತ್ತುವರಿಯುತ್ತಾರೆ. ಕೆಲವರು ಅವರ ಬಟ್ಟೆಯನ್ನು ಹಿಡಿದರೆ, ಇನ್ನು ಕೆಲವು ಮಕ್ಕಳು ಅವರ ಕಾಲನ್ನು ಬಿಗಿದಪ್ಪುತ್ತಾರೆ. ಆ ನಿಷ್ಕಳಂಕ ಪ್ರೀತಿ ಆತ್ಮೀಯತೆಯನ್ನು ಮಕ್ಕಳು ಈ ಮಹಾನ್ ಮನುಷ್ಯನಲ್ಲಿ ಕಂಡಿದ್ದರು. ಇದೆಲ್ಲವೂ ಅನಾಥ ಮತ್ತು ಬಡ ಮಕ್ಕಳು. ಉತ್ಬಾನಂತಹವರಿಗೆ ಈ ಬಟ್ಟೆ ಧರಿಸಿದ ಕೊಳಕು ಮಕ್ಕಳೆಂದರೆ ಎಲ್ಲಿಲ್ಲದ ದ್ವೇಷ. ಬಡ-ನಿರ್ಗತಿಕರನ್ನು ಕಂಡರೆ ಆಗುತ್ತಿರಲಿಲ್ಲ. ಅವರ ಬಗ್ಗೆ ಸ್ವಲ್ಪವೂ ಅನುಕಂಪವಿಲ್ಲ. ಆದರೆ ಈ ಮುಹಮ್ಮದ್ ಆ ಮಕ್ಕಳನ್ನು ಮುದ್ದಿಸುವುದು, ಪ್ರೀತಿಸುವುದು, ಅವರ ತಲೆಯನ್ನು ನೇವರಿಸುವುದು ನೋಡಿ ಯಾವುದೋ ಒಂದು ಹೊಸ ಲೋಕಕ್ಕೆ ಬಂದಿದ್ದೇನೇನೋ ಎಂದು ಭಾಸವಾಗುತ್ತಿತ್ತು. ಆ ಮಕ್ಕಳು ಚಿಕ್ಕ ಚಿಕ್ಕ ಪೊಟ್ಟಣಗಳನ್ನು ಪಡೆದುಕೊಳ್ಳುತ್ತಾರೆ ಬಹುಮಾನ ಗಳಿಸಿದ ಸಂತೋಷದಿಂದ ನಗು ಮುಖಗಳೊಂದಿಗೆ ತಮ್ಮ ತಮ್ಮ ಮನೆಗಳಿಗೆ ಓಡುತ್ತಾರೆ. ಮುಹಮ್ಮದ್(ಸ) ಆ ಮಕ್ಕಳು ಕಣ್ಣಿನಿಂದ ಕಣ್ಮರೆಯಾಗುವವರೆಗೆ ಅವರನ್ನೇ ನೋಡುತ್ತಿದ್ದಾರೆ.
ಒಮ್ಮೆಲೆ ಹಿಂತಿರುಗಿ ನೋಡುವಾಗ ಉತ್ಬಾನನ್ನು ಮುಹಮ್ಮದ್(ಸ) ಕಾಣುತ್ತಾರೆ. ಮುಹಮ್ಮದ್ರ(ಸ) ಮುಖದಲ್ಲಿ ಮನಶ್ಶಾಂತಿ, ಧನ್ಯತೆ ಮತ್ತು ಕರುಣೆಯ ತರಂಗಗಳನ್ನು ನೋಡಿ ಉತ್ಬಾ ಮೂಕವಿಸ್ಮಿತನಾಗುತ್ತಾನೆ. ಏನೂ ಮಾತಾಡದೆ ಮನದಲ್ಲೇ ಹೇಳುತ್ತಾನೆ. “ಹೌದು ವಿಷಯ ಇದುವೇ! ಮುಹಮ್ಮದ್ನಿಗೆ ಸಂಪತ್ತಿನ ಬೆಲೆ ಗೊತ್ತಿಲ್ಲ. ಅದನ್ನು ನೀರಿನಂತೆ ವಿಧವೆಯರಲ್ಲಿ ಮತ್ತು ಅನಾಥರಲ್ಲಿ ಸುರಿಸುತ್ತಿದ್ದಾನೆ. ಇಲ್ಲದಿದ್ದರೆ ಅವನು ಮಕ್ಕಾದ ಶ್ರೀಮಂತ ವ್ಯಕ್ತಿಯಾಗಿರುತ್ತಿದ್ದ. ವ್ಯಾಪಾರದಲ್ಲಿ ಅವನು ಖ್ಯಾತಿ ಪಡೆದಿದ್ದಾನೆ. ಗ್ರಾಹಕರು ಅವನ ಮಳಿಗೆಯನ್ನು ಹುಡುಕಿ ಬರುತ್ತಾರೆ. ಇವನಿಗೂ ಚಿಕ್ಕಪ್ಪಂದಿರಾದ ಅಬೂಲಹಬ್, ಅಬ್ಬಾಸ್, ಹಮ್ಝರಂತೆ ಸಂಪತ್ತಿನ ಬೆಲೆ ಗೊತ್ತಿರುತ್ತಿದ್ದರೆ. ಮುಹಮ್ಮದ್ರನ್ನು(ಸ) ವಿೂರಿಸುವ ಶ್ರೀಮಂತ ಇಡೀ ಮಕ್ಕಾದಲ್ಲಿರುತ್ತಿರಲಿಲ್ಲ.”
ಪ್ರವಾದಿಯವರ(ಸ) ಈ ಸೇವೆ ಅವರ 40 ವರ್ಷಗಳ ತನಕ ನಿರಂತರ ಮುಂದುವರಿದಿತ್ತು. ಆದರೆ ಜನರು ಸಂಪತ್ತನ್ನೇ ಶೇಖರಿಸುವುದರಲ್ಲಿ ಮಗ್ನರಾಗಿದ್ದರು. ಹೌದು, ಈ ಮಾನವ ಕುಲ ಬದಲಾಯಿಸಲು ಓರ್ವ ಪ್ರವಾದಿಯ ಆಯ್ಕೆಯ ಕಾಲ ಸನ್ನಿಹಿತವಾಗಿತ್ತು ಮತ್ತು ಅಲ್ಲಾಹನು ಮುಹಮ್ಮದ್ರನ್ನು(ಸ) ಪ್ರವಾದಿಯನ್ನಾಗಿ ಆಯ್ಕೆ ಮಾಡಿದನು. ಜಗತ್ತಿನ ಎಲ್ಲ ಮಾನವರಿಗೆ ಮಾರ್ಗದರ್ಶನವನ್ನಾಗಿ ತನ್ನ ದೇವವಾಣಿಯನ್ನು ಇಳಿಸಿ ಜನರಿಗೆ ಮನವರಿಕೆ ಮಾಡಿದನು. ಅದರಲ್ಲಿ ಒಂದು ಉದಾಹರಣೆ ಹೀಗಿದೆ.
“ಬುಸುಗುಡುತ್ತ ಓಡುವವುಗಳ (ಕುದುರೆಗಳ) ಆಣೆ- ಅವು (ತಮ್ಮ ಗೊರಸುಗಳಿಂದ) ಕಿಡಿಗಳನ್ನು ಹಾರಿಸುತ್ತವೆ- ಅನಂತರ ಪ್ರಾತಃ ಕಾಲದಲ್ಲಿ ಆಕ್ರಮಣ ನಡೆಸುತ್ತವೆ- ಆಗ ಅವು ಧೂಳೆಬ್ಬಿಸುತ್ತವೆ- ತರುವಾಯ ಇದೇ ಸ್ಥಿತಿಯಲ್ಲಿ ಯಾವುದಾದರೂ ಜನ ಸಮೂಹದೊಳಕ್ಕೆ ನುಗ್ಗಿ ಬಿಡುತ್ತವೆ- ವಾಸ್ತವದಲ್ಲಿ ಮಾನವನು ತನ್ನ ಪ್ರಭುವಿಗೆ ಬಹಳ ಕೃತಫ್ನನಾಗಿದ್ದಾನೆ. ಮತ್ತು ಇದಕ್ಕೆ ಸ್ವತಃ ಅವನೇ ಸಾಕ್ಷಿಯಾಗಿದ್ದಾನೆ. ಅವನು ಧನ ಕನಕಗಳ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ. ಸಮಾಧಿಗಳೊಳಗೆ (ದಫನವಾಗಿ) ಇರುವ ಸಕಲವನ್ನೂ ಹೊರ ತೆಗೆಯಲಾಗುವ ಮತ್ತು ಹೃದಯಗಳೊಳಗೆ (ಅಡಗಿ) ಇರುವ ಎಲ್ಲವನ್ನೂ ಹೊರ ತೆಗೆದು ವಿಚಾರಣೆಗೊಳಪಡಿಸಲಾಗುವ ಆ ಸಂದರ್ಭವನ್ನು ಅವನು ಅರಿತಿಲ್ಲವೇ? ಖಂಡಿತವಾಗಿಯೂ ಅಂದು ಅವರ ಪ್ರಭು ಅವರನ್ನು ಪೂರ್ಣವಾಗಿ ತಿಳಿದವನಾಗಿರುವನು. (ಸೂರಃ ಅಲ್ ಆದಿಯಾತ್ 1-11)
ಬಾಯಿ ಬಾರದ ಮೂಕ ಪ್ರಾಣಿಯನ್ನು ಮುಂದಿಟ್ಟು ಅಲ್ಲಾಹನು ಮನುಷ್ಯನು ಪ್ರಾಣಿಗಿಂತಲೂ ಕೃತಘ್ನ ಎಂಬುದನ್ನು ವಿವರಿಸುತ್ತಾನೆ. ಕುದುರೆಯ ಮಾಲಿಕ ಕೇವಲ ಅದಕ್ಕೆ ನೀಡುವುದು ಒಂದಿಷ್ಟು ಹುಲ್ಲು ಮಾತ್ರ. ಆದರೆ ಅದು ತನ್ನ ಮಾಲಿಕನ ಆಜ್ಞೆಗೆ ಕಾಯುತ್ತಾ ಸಿಪಾಯಿಯಂತೆ ನಿಂತುಕೊಂಡೇ ಮಲಗುತ್ತದೆ. ಎಷ್ಟೇ ದೊಡ್ಡ ಸೈನ್ಯ ಇದ್ದರೂ ಧೈರ್ಯದಿಂದ ಮುನ್ನುಗುತ್ತದೆ. ತನಗೆ ಹುಲ್ಲು ನೀಡಿದ ಮಾಲಿಕನಿಗಾಗಿ ಜೀವವನ್ನೇ ಕೊಡುತ್ತದೆ. ಆದರೆ ಮನುಷ್ಯ ತನ್ನ ಧನ-ಕನಕಗಳನ್ನು ಅತಿಯಾದ ವ್ಯಾಮೋಹದಲ್ಲಿ ಮುಳುಗಿದ್ದಾನೆ. ಆ ಅರೇಬಿಯಾದ ಅಶಿಕ್ಷಿತ ಅನಾಗರಿಕ ಅರಬರೂ ನಾಚಿ ತಲೆ ತಗ್ಗಿಸುವಂತಹ ಧನ ವ್ಯಾಮೋಹ, ಧನ ಶೇಖರಣೆ ಅಲ್ಲಾಹನನ್ನು ನಂಬುವವರಲ್ಲೂ ಇವತ್ತು ಕಂಡು ಬರುತ್ತದೆ. ಇದು ಸಮಾಜದ ಅತ್ಯಂತ ದೊಡ್ಡ ದೌರ್ಭಾಗ್ಯವಾಗಿದೆ.
ಈ ನಿಟ್ಟಿನಲ್ಲಿ ಪ್ರವಾದಿ(ಸ) ಪ್ರವಾದಿತ್ವಕ್ಕಿಂತಲೂ ಮುಂಚೆ ಗಳಿಸಿದ ‘ಅವಿೂನ್, ಸಾದಿಕ್’ ಎಂಬ ಬಿರುದು ಕೇವಲ ಅಂಕಗಳಿಸುವ ಸ್ಲೋಗನ್ ಆಗಬಾರದು. ನೈಜ ವಿಶ್ವಾಸಿಗಳು ಸಂಪತ್ತನ್ನು ಪ್ರೀತಿಸುತ್ತಾರೆ ಮತ್ತು ಅದನ್ನು ಅಲ್ಲಾಹನ ಅನುಗ್ರಹ ಎಂದು ಗಳಿಸುತ್ತಾರೆ ಮತ್ತು ಅವನ ಆದೇಶದಂತೆ ನೀರಿನಂತೆ ಹರಿಸುತ್ತಾರೆ. ಅಂತಹವರೇ ಇಹ ಮತ್ತು ಪರದಲ್ಲಿ ಯಶಸ್ವಿಯಾಗುವವರು.
IslamKannada News Portal



